Site icon Vistara News

ಕೇರಂ ಬೋರ್ಡ್‌ | ಗಾಂಧಿಕ್ಲಾಸಿನಲ್ಲಿ ಕುಳಿತು ಒಂದೆರಡು ನೋಟ

gandhi

ಐದು ವರುಷದ ಮಗಳು ಹತ್ತು ರೂಪಾಯಿಯ ನೋಟಿನಲ್ಲಿರುವ ಚಿತ್ರ ತೋರಿಸಿ ‘ಅಪ್ಪಾ ಇವರಾರು?’ ಎಂದು ಕೇಳುತ್ತಾಳೆ. ʻಅವರು ಮಹಾತ್ಮ ಗಾಂಧೀಜಿ ಕಣಮ್ಮಾ’ ಎಂದೆ. ಹಾಗೆಂದರೆ ಏನು ಅಥವಾ ಯಾರು ಎಂದು ಆಕೆಗೆ ಅರ್ಥವಾಗಲಿಲ್ಲ. ʻಅವರು ನಮ್ಮ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟವರು’ ಎನ್ನುತ್ತಾನೆ ಅಪ್ಪ. ಆಕೆ ಸುಮ್ಮನೆ ತಲೆಯಾಡಿಸುತ್ತಾಳೆ. ಅಪ್ಪನ ಪುಣ್ಯ- ದೇಶ ಎಂದರೇನು, ಸ್ವಾತಂತ್ರ್ಯ ಎಂದರೇನು ಎಂಬ ಪ್ರಶ್ನೆ ಹಾಕಲಿಲ್ಲ. ಅಪ್ಪನೂ ಐದಾರು ವರ್ಷವಿದ್ದಾಗ ಆತನೂ ಇದೇ ಪ್ರಶ್ನೆಯನ್ನು ಅಪ್ಪನಿಗೆ ಹಾಕಿರಬೇಕು. ಅಪ್ಪನ ಜೇಬಿನಲ್ಲಿ ಎಷ್ಟೊಂದು ಗಾಂಧಿಗಳು! ದೇಶದ ಎಲ್ಲ ಪ್ರಜೆಗಳ ಎದೆಯ ಸಮೀಪದಲ್ಲೂ ಎಷ್ಟೊಂದು ಗಾಂಧಿಗಳು! ಎಂದೂ ʻಕಾಸು ಗಂಟಿಕ್ಕದ’ ಅಸಂಗ್ರಹ ಬುದ್ಧಿ ಹೊಂದಿದ್ದ ವ್ಯಕ್ತಿಗೆ ಎಂಥ ಗೌರವ!

ಗಾಂಧೀಜಿ ನಮ್ಮ ಕಣ್ಣುಗಳನ್ನು ತಾಕಿದ್ದು, ನಮ್ಮ ಮನವನ್ನು ಹೊಕ್ಕದ್ದು ಹೀಗೆ. ಅಲ್ಲಿಂದಾಚೆಗೆ ಗಾಂಧಿ ನಾನಾ ರೂಪಗಳಲ್ಲಿ ನಮ್ಮೆದುರಲ್ಲಿ ಮೂಡಿದ, ಕಾಡಿದ. ಇಂದಿರಾ ಗಾಂಧಿ ಗುಂಡೇಟು ತಿಂದು ಸತ್ತಾಗ ನಾನು ಎರಡನೇ
ತರಗತಿ, ಆಗ ಅನಿಸಿದ್ದು, ಇಂದಿರಾ ಗಾಂಧಿಯ ತಾತನನ್ನೂ ಹೀಗೇ ಕೊಂದರಲ್ಲ ಪಾಪ! ಆಗೆಲ್ಲ ನಮಗೆ ಗಾಂಧಿಗಳೆಲ್ಲಾ ಮಹಾತ್ಮ ಗಾಂಧೀಜಿ ಫ್ಯಾಮಿಲಿಯವರೇ! ಅದು ಹಾಗಲ್ಲ ಎಂದು ಮನದಟ್ಟು ಮಾಡಿಸಲು ಆಗಿನ ಇಂಟರ್‌ಮೀಡಿಯೆಟ್ ಮಾಡಿದ ಅಜ್ಜನಿಗೂ ಸಾಧ್ಯವಾಗಿರಲಿಲ್ಲ.

ಏಳನೇ ಕ್ಲಾಸಿನಲ್ಲಿ, ಮುಂದಿನ ಬೆಂಚಿನಲ್ಲಿ ಕುಳಿತಿದ್ದ ಮೇಷ್ಟ್ರ ಪ್ರಶ್ನೆಗಳಿಗೆಲ್ಲ ಉತ್ತರ ಕೊಡುತ್ತಿದ್ದ ಹುಡುಗನಿಗೆ ʻಗಾಂಧಿ’ ಎಂದರು. ಎಸ್ಸೆಸ್ಸೆಲ್ಸಿ ಎಕ್ಸಾಮಿನಲ್ಲಿ ನಕಲು ಮಾಡಲು ಉತ್ತರ ಪತ್ರಿಕೆ ತೋರಿಸದವನಿಗೆ ʻಗಾಂಧಿ’ ಎಂದರು. ಪಿಯುಸಿಯಲ್ಲಿ ಕದ್ದು ಸಿಗರೇಟು ಸೇದಲು ಕಂಪನಿ ಕೊಡದ ಹುಡುಗನಿಗೆ ʻಗಾಂಧಿ’ ಎಂದರು. ಡಿಗ್ರಿಯಲ್ಲಿ ಓಣಿಯ ಟಾಕೀಸಿಗೆ ಎ ಫಿಲಂ ನೋಡಲು ಹೋಗಿ ಬೆಚ್ಚಿ ವಾಪಸು ಬಂದವನಿಗೆ ʻಗಾಂಧಿ’ ಎಂದರು. ಮಾತಿನಲ್ಲಾದರೂ ಒಂದೆರಡು ಹುಡುಗಿಯರನ್ನು ಕಂಪೌಂಡಿನಾಚೆಗೆ ಕರೆಯಲು ಬಾರದವನು ಇನ್ನೇನು, ಗಾಂಧಿಯೇ ಸರಿ.

ಜಾತಿ ಸರ್ಟಿಫಿಕೇಟು ಪಡೆಯಲು ತಾಲೂಕಾಫೀಸಿಗೆ ನಾಲ್ಕಾರು ಸಲ ಅಲೆದರೂ ಕೆಲಸ ಆಗದಿದ್ದಾಗ, ʻಒಂದೆರಡು ಗಾಂಧಿ ತೋರಿಸು, ಆಗುತ್ತೆ’ ಎಂದ ಪಿಯೋನು ಆಪದ್ಭಾಂಧವನೇ ಸರಿ. ಅವನು ಹೇಳಿದ ಗಾಂಧಿ ನೂರರ
ನೋಟಿನಲ್ಲಿದ್ದ. ʻಗಾಂಧಿಕ್ಲಾಸಿನಲ್ಲಿ ಕೂತು ಸಿನಿಮಾ ನೋಡುವ ಮಜಾನೇ ಬ್ಯಾರೆ’ ಎಂದು ಕರೆದ ಗೆಳೆಯ, ಅಣ್ಣಾವ್ರ ಸಿನಿಮಾದ ಮೊದಲ ಶೋದಲ್ಲಿ ಜನ ಪರದೆಗೆ ಎಸೆದ ಕಾಸು ಹೆಕ್ಕಲು ಒದ್ದಾಡಿದ್ದನ್ನು ಕಂಡು ಈತ ದಂಗಾದ.

ʻಗಾಂಧಿಕ್ಲಾಸ್’ಗಳು ನಿಧಾನವಾಗಿ ಅರ್ಥವಾಗತೊಡಗಿದವು. ಥಿಯೇಟರಿನಲ್ಲಿ ಕಮ್ಮಿ ಕ್ರಯದ ಟಿಕೆಟ್ ತಗೊಂಡು ಮುಂದಿನ ಸೀಟಿನಲ್ಲಿ ಕುಳಿತರೆ ಗಾಂಧಿಕ್ಲಾಸು. ಫರ್ಸ್ಟ್ ಕ್ಲಾಸಿನ ಟಿಕೆಟು ಸಿಗದೆ ಅಥವಾ ಕಾಸಿಲ್ಲದೆ ಸೆಕೆಂಡ್ ಕ್ಲಾಸ್ ಟಿಕೆಟ್ ತಗೊಂಡು ರೈಲಿನಲ್ಲಿ ಪ್ರಯಾಣಿಸಿದರೆ ಅದು ಗಾಂಧಿಕ್ಲಾಸು. ಜೋಕ್ ಮಾಡದ, ಹುಡುಗಿಯರನ್ನು ಗೌರವದಿಂದ ಮಾತಾಡಿಸುವ ಲೆಕ್ಚರರ್‌ನ ತರಗತಿ ಗಾಂಧಿಕ್ಲಾಸು. ಖಾಸಗಿ ಕಾಲೇಜಿನ ಹುಡುಗರೆದುರಿಗೆ ದುಡ್ಡಿಲ್ಲದೆ ಸರಕಾರಿ ಕಾಲೇಜಿಗೆ ಸೇರಿಕೊಂಡ ಹುಡುಗರು ಓಡಾಡಿದರೆ ಅವರು ಗಾಂಧಿಕ್ಲಾಸು. ಸರಕಾರಿ ಹಾಸ್ಟೆಲಿನ ಹುಡುಗಿಯರ ಊಟ ಗಾಂಧಿಕ್ಲಾಸು. ನ್ಯಾಯಬೆಲೆ ಪಡಿತರ ಅಂಗಡಿಯ ಕ್ಯೂ ಗಾಂಧಿಕ್ಲಾಸು.

ಅವರು ನಮ್ಮ ಚರಿತ್ರೆಯಲ್ಲಿ ಬದುಕಿದ್ದರೆಂದು, ಓಡಾಡಿ ಕೆಲಸ ಮುಗಿಸಿ ಚಿರನಿದ್ರೆಗೆ ಸಂದರೆಂದು ನಾವು ತಿಳಿದಿದ್ದೇವೆ. ಆದರೆ ಕೆಲವು ಸಲ, ಅವರು ನಮ್ಮ ನಡುವೆಯೇ ಇದ್ದಾರೆ ಬಹುರೂಪಗಳಲ್ಲಿ ಅನಿಸುವುದು. ಬಿಸಿಲಲ್ಲಿ ಬೀದಿ ತಿರುಗಿ ಹಣ್ಣು ಮಾರಿ, ಅದರಲ್ಲಿ ಬಂದ ಆದಾಯದಲ್ಲಿ ಊರ ಮಕ್ಕಳಿಗೆ ಶಾಲೆ ಕಟ್ಟಿಸುವವನಲ್ಲಿ ಹಿಡಿ ಉಪ್ಪಿಗಾಗಿ ಪಾದಯಾತ್ರೆ ಕೈಗೊಂಡ ಗಾಂಧಿ ಕಾಣಿಸುತ್ತಾರೆ. ಮರ ಎಂದರೆ ಅದರಲ್ಲಿ ರಾಮನನ್ನು ಕಾಣುವ ಆದಿವಾಸಿಗಳನ್ನೂ ಬುಡಕಟ್ಟು ಮಂದಿಯನ್ನೂ ಮುಳುಗಿಸುವ ಅಣೆಕಟ್ಟುಗಳನ್ನು ಕಟ್ಟಲು ಹೊರಟ ಶಸ್ತ್ರಧಾರಿ ಪ್ರಭುತ್ವದ ವಿರುದ್ಧ ಸಡ್ಡು ಹೊಡೆದು ನಿಂತ ಚಳವಳಿಗಾರರಲ್ಲಿ ʻಚಲೇಜಾವ್’ ಎಂದ ಗಾಂಧಿ ಕಾಣಿಸುತ್ತಾರೆ. ಎಲ್ಲ ಬಗೆಯ ಹಿಂಸೆಯನ್ನು ಎದುರಿಸಿ, ದೊಡ್ಡದೊಂದು ಸೈನ್ಯದ ವಿರುದ್ಧ ಏಕಾಂಗಿಯಾಗಿ ಜೀವನ್ಮರಣ ಉಪವಾಸ ಸತ್ಯಾಗ್ರಹಕ್ಕೆ ಕುಳಿತ ಉಕ್ಕಿನ ಮಹಿಳೆಯಲ್ಲಿ ಈ ಗಾಂಧಿ ಇಣುಕಿ ನಸುನಗುತ್ತಾರೆ. ಕಾಸು ಬಾಚುವುದಕ್ಕೆಂದೇ ಮಾಡಿದ ಸಿನಿಮಾದಲ್ಲೂ ಈ ಮಹಾತ್ಮ, ಈ ಕಾಲದ ಅಗತ್ಯಗಳಿಗೆ ತಕ್ಕಂತೆ ʻಗಾಂಧಿಗಿರಿ’ಯಾಗಿ ಕಾಣಿಸಿಕೊಳ್ಳುವುದಿದೆಯಲ್ಲ, ಅದು ಏಕಕಾಲಕ್ಕೆ ತಾತ್ವಿಕತೆಯೊಂದರ ಮಹಾಸಾಮರ್ಥ್ಯ ಮತ್ತು ಅದರ ಐರನಿ ಕೂಡ.

ಗಾಂಧಿ ಎಂಬುದೊಂದು ಸದಾಪರಿಚಿತ ಹೆಸರು. ಗಾಂಧಿ ಎಂಬುದೊಂದು ಆದಿ ಪ್ರತಿಮೆ, ಅನಾದಿ ಪ್ರತಿಮೆ. ಅದು ವೇದಗಳ ಹಾಗೆ, ರಾಮಾಯಣ, ಮಹಾಭಾರತದ ಹಾಗೆ. ಇವೆಲ್ಲವೂ ಹೇಗೆ ಮೊದಲಿನಿಂದಲೂ ಇತ್ತೋ, ಹೇಗೆ ಇವುಗಳಿಗೆಲ್ಲ ಆದಿ- ಅಂತ್ಯ ಇಲ್ಲವೋ ಹಾಗೇ ಗಾಂಧಿಗೂ ಇಲ್ಲ. ಯಾರೋ ಹೇಳಿದ್ದು ನೆನಪಾಗುತ್ತದೆ. ಭಾರತೀಯರು ರಾಮಾಯಣ ಮಹಾಭಾರತಗಳನ್ನು ಓದಿಕೊಳ್ಳುವುದಿಲ್ಲ. ಅದು ಅವರಿಗೆ ಮೊದಲೇ ಗೊತ್ತಿರುತ್ತದೆ. ಹಾಗೇ ಗಾಂಧಿಯ ಬಗೆಗೂ ಯಾರೂ ಹೇಳಬೇಕಾಗಿಲ್ಲ. ಅದು ತಾನಾಗಿಯೇ ಗೊತ್ತಾಗುವ ಗಾಳಿಯಂಥ, ಬೆಂಕಿಯಂಥ ಒಂದು ಅನಾದಿ ಸಂಗತಿ.

ಮಹಾಭಾರತದ ಒಂದು ಕತೆಯಿಂದ ನೀವು ನೂರು ಕತೆಗಳನ್ನು ಹೆಕ್ಕಬಹುದು. ಬೇರೆ ಬಗೆಯಲ್ಲಿ ಬರೆಯಬಹುದು. ವೇದದ ಒಂದು ಸೂಕ್ತಕ್ಕೆ ಹತ್ತು ಅರ್ಥ ಹಚ್ಚಬಹುದು. ರಾಮಾಯಣದ ರಾಮನ ವ್ಯಕ್ತಿತ್ವವನ್ನು ಮೇರುಗಿರಿಯೆತ್ತರಕ್ಕೆ ಏರಿಸಬಹುದು. ಆತನ ನಡೆಗಳನ್ನು ಖಂಡಿಸಬಹುದು. ಹಾಗೇ ಗಾಂಧಿ ಕೂಡ. ಗಾಂಧೀಜಿಯ ʻಸತ್ಯದೊಡನೆ ಪ್ರಯೋಗ’ ಆತ್ಮಕತೆಯಿಂದ ಹತ್ತು ಕತೆಗಳನ್ನು ಹೆಕ್ಕಬಹುದು. ಅಥವಾ ಅಲ್ಲಿಂದಲೇ ಹೆಕ್ಕಿದ
ಸಂಗತಿಯನ್ನು ಕಲ್ಲಿನಂತೆ ಅವರ ಮೇಲೆ ಎಸೆಯಬಹುದು.

ಇದನ್ನೂ ಓದಿ | ಕೇರಂ ಬೋರ್ಡ್‌ ಅಂಕಣ | ಉಸಿರು ಹಿಡಿದು ಹಾಡುವೆ, ಕೇಳಡಿ ಕಣ್ಮಣಿ!

ಅವರ ದೇಗುಲ ಪ್ರವೇಶ ಮುಂತಾದ ಚಳವಳಿ, ಹರಿಜನ ಪತ್ರಿಕೆ ಇವನ್ನೆಲ್ಲ ಇಟ್ಟುಕೊಂಡು ಅವರು ದಲಿತೋದ್ಧಾರಕ ಎಂದು ಬಿಂಬಿಸಬಹುದು. ಅಥವಾ ಅಂಬೇಡ್ಕರ್‌ ಮಾತುಗಳನ್ನು ಮುಂದಿಟ್ಟುಕೊಂಡು, ಗಾಂಧಿ ದಲಿತರ ವಿರೋಧಿ ಎಂದು ವ್ಯಾಖ್ಯಾನಿಸಬಹುದು. ಅವರು ರಾಷ್ಟ್ರಪಿತ ಎಂದರೆ ನಂಬಬಹುದು. ದೇಶವಿಭಜನೆಗೂ ಅವರೇ ಕಾರಣ ಎಂದು ಸಾಕ್ಷ್ಯಗಳನ್ನು ಹೊಂದಿಸಬಹುದು. ಅವರು ಸಾಗರದಂತೆ. ಅದಕ್ಕೂ ತುದಿ ಮೊದಲು ಹುಡುಕುವುದು ಕಷ್ಟ. ದಡಕ್ಕೆ ಬಂದಪ್ಪಳಿಸುವ ಅಲೆಗಳನ್ನು ಎಣಿಸಿ ಸುಸ್ತಾಗಬಹುದು. ಅಲೆಗಳ ವೈವಿಧ್ಯವನ್ನು ನೋಡಬಹುದು. ಹುಟ್ಟುವುದನ್ನು ಮುಗಿಯುವುದನ್ನು ಕಲ್ಪಿಸಲಾಗದು. ಹೀಗಾಗಿ ಅವರು ನಮ್ಮ ಚಿಂತಕರಿಗೆ ಅಗೆದು ಮುಗಿಯದ ಗಣಿ.

ಆದರೆ ಅಪಾಯ ಅನೂಹ್ಯ ರೀತಿಯಲ್ಲಿ ಕಾದಿದೆ. ʻಮುಂದೊಂದು ದಿನ, ಇಂಥವನೊಬ್ಬ ವ್ಯಕ್ತಿ ಈ ಭೂಮಿಯ ಮೇಲಿದ್ದ ಎಂದು ಹೇಳಿದರೆ ಜನ ನಂಬದಿರಬಹುದು’ ಎಂದು ಆಲ್ಬರ್ಟ್ ಐನ್‌ಸ್ಟೈನ್ ಹೇಳಿದ. ಅವನೆಂಥ ದಾರ್ಶನಿಕನಾಗಿದ್ದ ಎಂದು ಈ ನುಡಿಯಿಂದಲೇ ಗೊತ್ತಾಗುತ್ತದೆ. ಇಂದು ಬುದ್ಧನೆಂಬವನೊಬ್ಬ ಈ ನಾಡಿನಲ್ಲಿ ನಡೆದಾಡಿದ್ದ ಎಂದರೆ ನಂಬಬಹುದೋ ಬೇಡವೋ ಎಂಬ ಸ್ಥಿತಿಯಲ್ಲಿ ನಾವಿದ್ದೇವೆ. ಅವನನ್ನೊಂದು ಮನೋಹರ
ಕತೆಯಾಗಿ ನಂಬಲು ನಾವು ಸಿದ್ಧ. ಆದರೆ ನಿಜವಾಗಿಯೂ ಅಂಥವನೊಬ್ಬನಿದ್ದ ಎಂದು ಈಗಿನವರನ್ನು ಒಪ್ಪಿಸುವುದು ಕಷ್ಟ. ಶಂಕರ, ಮಧ್ವ, ರಾಮಾನುಜರಿಗೂ ಇದೇ ಸ್ಥಿತಿ. ತಲೆಮಾರುಗಳು ಸರಿದಂತೆ ಸ್ಮೃತಿಗಳು ನಶಿಸುವುದು ಸಹಜ. ವ್ಯಕ್ತಿಗಳಿಗೆ ಆದಂತೆ ಸಮುದಾಯಗಳಿಗೂ ಡಿಮೆನ್ಷಿಯಾ ಆವರಿಸುತ್ತದೆ.

ಗಾಂಧಿಯನ್ನು ವ್ಯಕ್ತಿಯಾಗಿ ನೆನಪಿನಲ್ಲಿ ಉಳಿಸುವ ಸಾಕ್ಷಿಗಳನ್ನು ಹೇಗೋ ಉಳಿಸಿಕೊಳ್ಳಬಹುದು. ಆದರೆ ಗಾಂಧಿ ಎಂಬ ತಾತ್ವಿಕತೆಯನ್ನು ಸಮುದಾಯದ ಸ್ಮೃತಿಯಲ್ಲಿ ಉಳಿಸಿಕೊಳ್ಳುವ, ಇಂದಿನ ಮುಂದಿನ ಮಕ್ಕಳ ಚಿಂತನೆಯಲ್ಲೂ ಉಳಿಸಿ ಬೆಳೆಸುವ ಬಗೆಯೇ ಸವಾಲು. ಅದಕ್ಕಿರುವ ಮಾರ್ಗಗಳ ಅನ್ವೇಷಣೆ ಈಗಿನ ತುರ್ತು.

ಇದನ್ನೂ ಓದಿ | ಕೇರಂ ಬೋರ್ಡ್‌ ಅಂಕಣ | ಅಂಡರ್‌ಪಾಸ್‌ಗಳಲ್ಲಿ ಪಿಸುಗುಡುವ ಕಡಲು

Exit mobile version