Site icon Vistara News

Caste Census : ಜಾತಿ ಗಣತಿ ಎಂಬ ಚುನಾವಣಾ ಪೂರ್ವ ಬ್ರಹ್ಮಾಸ್ತ್ರ; ಯಾರ ತಂತ್ರಗಾರಿಕೆ ಏನು?

Caste Census and Politics

ಬಾಬು ಮೈಸೂರು, ರಾಜಕೀಯ ವಿಶ್ಲೇಷಕರು

ಮುಂದಿನ ಲೋಕಸಭಾ ಚುನಾವಣೆಯು (Parliament Election 2024) 2024ರ ಏಪ್ರಿಲ್‌-ಮೇ ತಿಂಗಳಿನಲ್ಲಿ ನಡೆಯುವ ಸಾಧ್ಯತೆ ಇದೆ. ಆದರೆ, ಈಗಿನ ವಿದ್ಯಮಾನಗಳನ್ನು ಗಮನಿಸಿದರೆ ನಾವು ಚುನಾವಣಾ ಪರ್ವವನ್ನು ಪ್ರವೇಶಿಸಿದ್ದೇವೆ ಎಂದು ಅನಿಸುತ್ತದೆ. ಸಾಧಾರಣವಾಗಿ ಚುನಾವಣೆ ಹಿಂದಿನ ನೂರು ದಿನಗಳಲ್ಲಿ ಈ ರೀತಿಯಾದಂತಹ ತುರುಸಿನ ವಾತಾವರಣ ಇರುತ್ತದೆ. ಆದರೆ ಈ ಬಾರಿ ಇನ್ನು 200 ದಿನಗಳು ಇರುವಂತೆಯೇ ಈ ಒಂದು ತುರುಸು ಪ್ರಾರಂಭವಾಗಿದೆ. ಹಾಗಾಗಿ ನಾವು ನಿಶ್ಚಿತವಾಗಿಯೂ ಚುನಾವಣಾ ಪರ್ವದಲ್ಲಿದ್ದೇವೆ.

ಪೊಲಿಟಿಕಲ್ ಸ್ಟ್ರಾಟಜೀ ಅಥವಾ ರಾಜಕೀಯ ತಂತ್ರಗಾರಿಕೆ ಅನ್ನುವುದು ರಾಜಕೀಯ ಪಕ್ಷಗಳ ಬೋರ್ಡ್ ರೂಮ್‌ನಲ್ಲಿ ನಡೆಯುವ ಒಂದು ಮುಖ್ಯವಾದ ಚಟುವಟಿಕೆ. ಈ ಬಾರಿ ಆಡಳಿತ ಮತ್ತು ವಿರೋಧ ಪಕ್ಷಗಳು (Hyper active) ಅಂದರೆ ತೀವ್ರ ಕ್ರಿಯಾಶೀಲತೆಯಿಂದ ಇದನ್ನು ಪ್ರಾರಂಭಿಸಿದ್ದಾರೆ. ಸೆಪ್ಟೆಂಬರ್ 28ರಂದು ರಾಷ್ಟ್ರಪತಿಗಳಿಂದ ಅಂಕಿತ ಪಡೆದ ಮಹಿಳಾ ವಂದನಾ ಮಸೂದೆ ಮತ್ತು ಅಕ್ಟೋಬರ್ ಎರಡರಂದು ಬಿಹಾರ ರಾಜ್ಯ ಸರಕಾರ ಬಿಡುಗಡೆ ಗಳಿಸಿದ ಜಾತಿ ಜನಗಣತಿ ವರದಿ (Caste Census Report) ಇದನ್ನು ಪುಷ್ಟೀಕರಿಸುತ್ತದೆ.

ಭಾರತದಲ್ಲಿ ಚುನಾವಣಾ ತಾಲೀಮನ್ನು ವಿಶ್ಲೇಷಿಸುವುದಾದರೆ ಎರಡು ಭಾಗಗಳಾಗಿ ಅಧ್ಯಯಿಸಬಹುದು. ಒಂದು 2014ರ ಪೂರ್ವ ಮತ್ತೊಂದು 2014ರ ನಂತರ. 2014ರ ಪೂರ್ವದಲ್ಲಿ ರಾಜಕೀಯ ಪಕ್ಷಗಳು ಗರಿ ಕೆದರಿಸಿದ್ದು ಚುನಾವಣಾ ಸಮೀಪಿಸಿದಾಗ ಮತ್ತು ನಾಯಕರು ಅನಿವಾರ್ಯವಾಗಿ ಫೀಲ್ಡ್ ಇಳಿಯುತ್ತಿದ್ದಿದ್ದು ಚುನಾವಣೆಯ ಹತ್ತಿರದಲ್ಲಿಯೇ. ಅಷ್ಟರಮಟ್ಟಿಗೆ ಶ್ರೀಸಾಮಾನ್ಯನಿಗೆ ಇದು ಪಂಚವಾರ್ಷಿಕ ಪ್ರಕ್ರಿಯೆ.

ಬಿಹಾರದಲ್ಲಿ ಜಾತಿ ಗಣತಿ

ಆದರೆ 2014ರ ನಂತರದ ಕಾಲಘಟ್ಟದಲ್ಲಿ ಇದು ಒಂದು ರೀತಿಯ ನಿರಂತರ ಪ್ರಕ್ರಿಯೆಯಾಗಿದೆ. ಈ ಕಾಲದಲ್ಲಿ ರಾಜಕೀಯ ಪಕ್ಷಗಳ ತಾಲೀಮು, course correction (ಪಥ ಬದಲಾವಣೆ) ಎಲ್ಲಾ ನಿರಂತರವಾಗಿ ನಡೆಯುತ್ತಿದೆ. ಹಾಗಾಗಿ Electioneering (ಚುನಾವಣಾ ರೀತಿ ರಿವಾಜು) ಒಂದು ಉದ್ಯಮವಾಗಿದೆ ಎಂದರು ಅತಿಶಯೋಕ್ತಿ ಆಗುವುದಿಲ್ಲ. ಈ ಬದಲಾವಣೆಗೆ ಮೋದಿ ಮತ್ತು ಅಮಿತ್ ಶಾ ಜೋಡಿಯ ಕೊಡುಗೆ ಅಪಾರವಾದದ್ದು. ಈ ಜೋಡಿ ಒಂದು ರೀತಿಯಲ್ಲಿ ವಿರೋಧ ಪಕ್ಷಗಳ ಹೊಂದಾಣಿಕೆಗೆ ಮತ್ತು ಅವುಗಳಿಗೆ ಚುರುಕು ಮುಟ್ಟಿಸುವಲ್ಲಿ ಯಶಸ್ವಿಯಾಗಿದೆ.

Strategy ಎನ್ನುವುದು ಮೂಲ ಗ್ರೀಕ್ ಪದ. ಇದು strategem ಎಂಬ ಪದಗೊಂಚಕ್ಕೆ ಸೇರಿದ್ದು. ಇದರ ಮೂಲ ಅರ್ಥ ಯುದ್ಧದ ತಯಾರಿಗೆ ಸಂಬಂಧಿಸಿದೆ. ಈ ಬಾರಿ I.N.D.I.A ಒಕ್ಕೂಟ ಸ್ಟ್ಯಾಟರ್ಜಿ ಬಳಕೆಯಲ್ಲಿ ಒಂದು ಹೆಜ್ಜೆ ಮುಂದಿದ್ದು ತನ್ನ ಯುದ್ಧವ್ಯೂಹದ ತಯಾರಿ ಆರಂಭಿಸಿದೆ. ಸಮಾನ ಮನಸ್ಕರು ಒಗ್ಗೂಡಿದ್ದು, ಮೋದಿ- ಶಾ ಜೋಡಿಯನ್ನು ಸೋಲಿಸಲೇಬೇಕೆಂಬ ಹುಮ್ಮಸ್ಸು, ತಮ್ಮಲ್ಲಿನ ಸ್ಥಾನ ಹಂಚಿಕೆಯ ಬಗ್ಗೆ ಉದಾರ ಧೋರಣೆ ತಾಳಿದ್ದು ಇದಕ್ಕೆ ಇಂದು ಕೊಡುತ್ತದೆ. ಈ ವ್ಯೂಹದಿಂದ ಹೊರಹೊಮ್ಮಿದ ಮೊದಲ ಸಂಘಟಿತ ಅಸ್ತ್ರ ಜಾತಿಗಣನೆ – ಮುಖ್ಯವಾಗಿ ಓಬಿಸಿ (OBC) ಗುಂಪುಗಳ ಗಣತಿ ಮತ್ತು ಅವುಗಳ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸುವುದು.

ಜಾತಿಗಣತಿಯ ಹಿನ್ನೋಟ

ಭಾರತದಲ್ಲಿ ಬ್ರಿಟಿಷರು ದಶವಾರ್ಷಿಕ ಜನಗಣತಿಯನ್ನು ಪ್ರಾರಂಭಿಸಿದ್ದು 1872ರಲ್ಲಿ. ಈ ಪ್ರಥಮ ಗಣತಿ ಮುಗಿದಿದ್ದು 1883ರಲ್ಲಿ. ಆ ಗಣತಿಯ ಮುಖ್ಯ ಉದ್ದೇಶ ಜನಸಂಖ್ಯೆಯ ಗಣತಿ ಮತ್ತು ಇತರ ಸಂಬಂಧಪಟ್ಟ ಮಾಹಿತಿಗಳ ಕಲೆ ಹಾಕುವುದರ ಬಗ್ಗೆ. ಕಾಲಾನು ನಂತರ ಮುಂದಿನ ಗಣತಿಯ ಹೊತ್ತಿಗೆ ಜನಸಂಖ್ಯೆಯ ಸಾಮಾಜಿಕ ಆರ್ಥಿಕ ಮತ್ತು ಸಾಂಸ್ಕೃತಿಕ ವಿಷಯಗಳ ಗಣತಿಯನ್ನು ಸೇರಿಸಲಾಯಿತು ಈ ಈ ಸಂದರ್ಭದಲ್ಲಿ ಜಾತಿಯ ಗಣತಿಯ ಸಹ ಪ್ರಾರಂಭವಾಯಿತು. ಹಾಗೆ ಜಾತಿಗಣತಿಯು 1931ರವರೆಗೆ ನಡೆಯಿತು ಅದಾದ ನಂತರ ನೆಹರುರವರ ಕೋರಿಕೆಯ ಮೇರೆಗೆ ಜನಸಂಖ್ಯೆ ಜನಸಂಖ್ಯಾ ಗಣತಿಯಲ್ಲಿ ಜಾತಿ ಗಣತಿಯನ್ನು ಕೈ ಬಿಡಲಾಯಿತು.

ಭಾರತದ ಮೊದಲ ಗಣತಿಯ ಚಿತ್ರಣ

ಫಲಶ್ರುತಿ ಏನಾಯಿತು?

ಗಣತಿಯ ಸಮಗ್ರ ಅಂಕಿ ಅಂಶಗಳ ಮಾಹಿತಿ ಸಂಪುಟ ಒಂದು ಹೊಸ ಹೊಸ ಶಕೆಗೆ ನಾಂದಿ ಹಾಡಿತು. 1911ರ ಗಣತಿಯ ನಂತರ ಅಂದಿನ ಮದ್ರಾಸ್ ಪ್ರೆಸಿಡೆನ್ಸಿಯಲ್ಲಿ (ಇಂದಿನ ತಮಿಳುನಾಡು) ಜಸ್ಟೀಸ್ ಪಾರ್ಟಿ ನೇತೃತ್ವದಲ್ಲಿ ಶಿಕ್ಷಣ ಮತ್ತು ಆಡಳಿತದಲ್ಲಿ ಕೋಟಾ ವ್ಯವಸ್ಥೆಗೆ ಒತ್ತಾಯ ಮಾಡಲಾಯಿತು. ಇದು ನಡೆದಿದ್ದು 1916ರಲ್ಲಿ.

ಮದ್ರಾಸ್‌ ಪ್ರೆಸಿಡೆನ್ಸಿಯ ಪ್ರಧಾನ ಕೇಂದ್ರ ಪ್ರೆಸಿಡೆನ್ಸಿ ಕಾಲೇಜು

ದೀರ್ಘ ಒತ್ತಡದ ನಂತರ ಅಂದಿನ ಸರ್ಕಾರ 1921ರಲ್ಲಿ ಈ ವಿಷಯದ ಬಗ್ಗೆ ಅಧ್ಯಯನ ಮಾಡಲು ಆದೇಶ ಹೊರಡಿಸಿತು. ಇದರ ಮುಂದುವರಿದ ಭಾಗವಾಗಿ 1927ರಲ್ಲಿ ಅಂದಿನ ಸರ್ಕಾರ ಜಾತಿ ಆಧಾರಿತ ಕೋಟ ವ್ಯವಸ್ಥೆಗೆ ಒಪ್ಪಿ ಆದೇಶ ಹೊರಡಿಸಿತು. ಈ ಮೀಸಲಾತಿ 3 ವರ್ಗಗಳಿಗೆ ನೀಡಲಾಗಿದ್ದು, ಬ್ರಾಹ್ಮಣೇತರ ಹಿಂದುಗಳು, ಬ್ರಾಹ್ಮಣರು ಮತ್ತು ಮುಸಲ್ಮಾನರು ಹಾಗೂ ಪರಿಶಿಷ್ಟ ಜಾತಿ ಮತ್ತು ವರ್ಗ.

ಈ ಮೀಸಲಾತಿಯ ಪ್ರಮಾಣ ಒಟ್ಟು 64%ರಷ್ಟು ಇತ್ತು. ಸ್ವಾತಂತ್ರ್ಯೋತ್ತರ ಅವಧಿಯಲ್ಲಿ ಅಂದರೆ 1951ರಲ್ಲಿ ಈ ವ್ಯವಸ್ಥೆ ಸುಪ್ರೀಂ ಕೋರ್ಟ್‌ನಿಂದ ಅನರ್ಜಿತಗೊಂಡಿತ್ತು. 1954ರಲ್ಲಿ ಆಯ್ಕೆಯಾದ ಕಾಂಗ್ರೆಸ್ ಸರ್ಕಾರ ಸಾಂವಿಧಾನಿಕ ಬದ್ಧವಾಗಿ ಪರಿಶಿಷ್ಟ ಜಾತಿ ಮತ್ತು ವರ್ಗಕ್ಕೆ ಮೀಸಲಾತಿ ನೀಡಿದ್ದಲ್ಲದೆ ಒಬಿಸಿಗಳಿಗೆ 25% ಅವಕಾಶ ನೀಡಿತು (ಹಿಂದಿನ ಬ್ರಾಹ್ಮಣೇತರ ಹಿಂದುಗಳು ವರ್ಗಗಳ ಒಬಿಸಿ ಗುಂಪು ಎಂದು ತಿಳಿದುಕೊಳ್ಳಬೇಕು).

ಮುಂದೆ 1972ರಲ್ಲಿ ಡಿಎಂಕೆ ಸರ್ಕಾರ ಈ ಪ್ರಮಾಣವನ್ನು 31%ಗೆ ಹೆಚ್ಚಿಸಿತು. ಹಾಗೆ 1980ರಲ್ಲಿ ಎಐಎಡಿಎಂಕೆ ಪಕ್ಷವು ಈ ಪ್ರಮಾಣವನ್ನು 50%ಗೆ ಹೆಚ್ಚಿಸಿತು. 1993ರಲ್ಲಿ ಜಯಲಲಿತಾ ನೇತೃತ್ವದ ಸರ್ಕಾರ ಒಟ್ಟು ಮೀಸಲಾತಿ ಪ್ರಮಾಣವನ್ನು 69%ಗೆ ಹೆಚ್ಚಿಸಿದ್ದಲ್ಲದೆ ಅದನ್ನು ಸಾಂವಿಧಾನಿಕ ಗೊಳಿಸಿತು. ಈ ಶಾಸನವನ್ನು ಶೆಡ್ಯೂಲ್ 9 ಕೆ ಸೇರ್ಪಡಿಸಲಾಯಿತು ಹಾಗಾಗಿ ಇದು ಕಾನೂನಿನ ಚೌಕಟ್ಟಿನ ವ್ಯಾಪ್ತಿಯಿಂದ ಹೊರಗೆ ಬಂತು.

ಮೈಸೂರಿನ ಚರಿತ್ರೆಯಲ್ಲಿ ಮೀಸಲಾತಿ

ಮೈಸೂರಿನ ರಾಜ ಸಂಸ್ಥಾನವು ಆ ಕಾಲಘಟ್ಟದಲ್ಲಿ ಈ ಪ್ರಭಾವಗಳಿಂದ ಹೊರಗೆ ಉಳಿಯಲು ಸಾಧ್ಯವಾಗಲಿಲ್ಲ. 1916ರಲ್ಲಿ ಪ್ರಜಾ ಪಕ್ಷಿ ಮಂಡಲ ಎಂಬ ರಾಜಕೀಯ ಪಕ್ಷದ ಪಕ್ಷವು ಅಂದಿನ ಮಹಾರಾಜರಾದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಿಗೆ ಭಿನ್ನವತ್ತಳೆ ಸಲ್ಲಿಸಿತು. ಪುರೋಗಾಮಿ ಆದಂತ ಮಹಾರಾಜರು ಈ ವಿಷಯದ ಬಗ್ಗೆ ಮಿಲ್ಲರ್ಸ್ ಕಮಿಟಿ (millers Committee) ಅನ್ನು ರಚಿಸಿದರು(Mr. LC Miller ಅಂದಿನ ಮೈಸೂರ್ ಹೈಕೋರ್ಟ್‌ನಲ್ಲಿ ಮುಖ್ಯ ನ್ಯಾಯಾಧೀಶರಾಗಿದ್ದರು).

ನಾಲ್ವಡಿ ಕೃಷ್ಣ ರಾಜ ಒಡೆಯರು

ಈ ಸಮಿತಿಯಲ್ಲಿ ವಿವಿಧ ಸಮಾಜದ ಇತರ ಆರು ಗಣ್ಯರಿದ್ದರು. ಈ ಸಮಿತಿಗೆ ನೀಡಿದ್ದ ಕಾರ್ಯ ಸೂಚಿಯಲ್ಲಿ ಆಡಳಿತ ಸೇವೆಯಲ್ಲಿ ಇರುವ ಬ್ರಾಹ್ಮಣ ಮತ್ತು ಬ್ರಾಹ್ಮಣೇತರ ಅನುಪಾತವನ್ನು ಅಧ್ಯಯಿಸುವುದು ಮತ್ತು ಈ ಅನುಪಾತವನ್ನು ಸಮೀಕರಿಸುವುದಕ್ಕೆ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ನಿರ್ಣಯಗಳನ್ನು ನೀಡುವುದಾಗಿತ್ತು. ಈ ಸಮಿತಿಯು 1924ರಲ್ಲಿ ತನ್ನ ವರದಿಯನ್ನು ನೀಡಿತ್ತು. ಈ ವರದಿಯನ್ನು ಆಧರಿಸಿ ರಾಜ್ಯದಲ್ಲಿ ಅಂದು ಕಡಿಮೆ ಪ್ರಮಾಣದ ಅನುಪಾತ ಹೊಂದಿದ್ದ ಜಾತಿಯ ಅಭ್ಯರ್ಥಿಗಳಿಗೆ ಕೋಟಾ ವ್ಯವಸ್ಥೆ ಜಾರಿಗೆ ಬಂತು. ಇಲ್ಲಿ ಒಂದು ವಿಷಯವನ್ನು ನೆನಪಿಸಿಕೊಳ್ಳಬೇಕೆಂದರೆ ಅಂದಿನ ದಿವಾನರಾಗಿದ್ದ ಸರ್ ಎಂ ವಿಶ್ವೇಶ್ವರಯ್ಯನವರು ಈ ಕಮಿಟಿಯ ಈ ರಚನೆಯನ್ನು ವಿರೋಧಿಸಿದ್ದಲ್ಲದೆ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿ ರಾಜೀನಾಮೆ ನೀಡಿದ್ದರು. ಭಾರತ ರತ್ನ ಡಾಕ್ಟರ್ ಬಿಆರ್ ಅಂಬೇಡ್ಕರ್ ಅವರು ಸಹ ಈ ಸಮಿತಿಯ ವರದಿಯಿಂದ ಪ್ರಭಾವಿತರಾಗಿದ್ದರು.

ಸ್ವಾತಂತ್ರ್ಯೋತ್ತರ ಭಾರತದಲ್ಲಿ ಹಿಂದುಳಿದ ವರ್ಗಗಳ ಅಧ್ಯಯನ

1953ರಲ್ಲಿ ಶ್ರೀಯುತ ಕಾಕಾ ಕಾಳೇಕರ್ ನೇತೃತ್ವದಲ್ಲಿ ಒಂದು ಆಯೋಗವನ್ನು ರಚಿಸಲಾಯಿತು ಈ ಆಯೋಗ ಹಿಂದುಳಿದ ವರ್ಗಗಳನ್ನು ಹಿಂದುಳಿದವ ಹಿಂದುಳಿದವರು ಮತ್ತು ಅತಿ ಹಿಂದುಳಿದ ಹಿಂದುಳಿದವರು ಎಂದು ಎರಡು ವಿಭಾಗಗಳನ್ನಾಗಿ ಮಾಡಿ ತನ್ನ ಅಧ್ಯಯನನ್ನು ಸಲ್ಲಿಸಿತ್ತು. 1979ರಲ್ಲಿ ಅಂದಿನ ಜನದ ಸರ್ಕಾರ ಬಿ.ಪಿ ಮಂಡಲ್ ನೇತೃತ್ವದಲ್ಲಿ ಎರಡನೇ ಆಯೋಗವನ್ನು ರಚಿಸಿತ್ತು. ಈ ಆಯೋಗವು ಹಿಂದುಳಿದ ಸಮುದಾಯಗಳ ಮತ್ತು ಜಾತಿಗಳ ಅಧ್ಯಯನ ನಡೆಸಿದ್ದಲ್ಲದೆ ಒಟ್ಟು 27% ಮೀಸಲಾತಿಯನ್ನು ಶಿಫಾರಸ್ಸು ಮಾಡಿತ್ತು. ಈ ವರದಿಯನ್ನು 1982ರಲ್ಲಿ ಸಲ್ಲಿಸಿದ್ದರೂ ಅದರ ಬಗ್ಗೆ ಹೆಚ್ಚಿನ ಬೆಳವಣಿಗೆಯನ್ನು ಕಂಡಿರಲಿಲ್ಲ.

ಮಂಡಲ್‌ ಆಯೋಗದ ವರದಿ ಜಾರಿಯ ಕಾಲ

1990ರ ದಶಕದಲ್ಲಿ ಬಂದ ವಿ.ಪಿ. ಸಿಂಗ್ ಮತ್ತು ನರಸಿಂಹ ರಾವ್ ಸರ್ಕಾರಗಳು ಈ ವರದಿಯ ಕಾರ್ಯ ಅನುಷ್ಠಾನಕ್ಕೆ ಕಾಯಕಲ್ಪ ನೀಡಿದವು. ಪ್ರಧಾನಿ ಮೋದಿ ಅವರ ಮೊದಲ ಐದನೇ ವರ್ಷದ ಅವಧಿಯಲ್ಲಿ (2017) ಈ ಮೀಸಲಾತಿಯ ಅನುಷ್ಠಾನ ಮತ್ತು ಕಾರ್ಯವೈಖರಿಯ ಬಗ್ಗೆ ಅಧ್ಯಯನ ನಡೆಸಲು ನಿವೃತ್ತ ನ್ಯಾಯಾಧೀಶೆ ರೋಹಿಣಿ ಅವರ ನೇತೃತ್ವದ ಒಂದು ಕಮಿಟಿಯನ್ನು ರಚಿಸಿತು. ಈ ಕಮಿಟಿಯ ಉದ್ದೇಶ ಈ ಮೀಸಲಾತಿಯ ಸಮಾನ ಹಂಚುವಿಕೆ ಮತ್ತು ಸಮರ್ಪಕ ನಿರ್ವಹಣೆಯಾಗಿತ್ತು.

ಈ ಸಮಿತಿಯು ಈಗಿರುವ ಹಿಂದುಳಿದ ವರ್ಗಗಳ ಉಪ ವರ್ಗಗಳ ಗುರುತಿಸುವಿಕೆಯು ಒಂದು ಕಾರ್ಯ ಸೂಚಿಯಾಗಿತ್ತು. ಈ ಸಮಿತಿಯು ಜುಲೈ 31, 2023ರಂದು ತನ್ನ ವರದಿಯನ್ನು ಸಲ್ಲಿಸಿದೆ. ಮೂಲಗಳ ಪ್ರಕಾರ ಈಗಿನ ವ್ಯವಸ್ಥೆಯಲ್ಲಿ ಇರುವ ನ್ಯೂನತೆಯಾದ ಕೆಲವೇ ಸಮುದಾಯಗಳು (40 ಜಾತಿಗಳು) ಒಟ್ಟು ಮೀಸಲಾತಿಯ 50ರಷ್ಟು ಭಾಗವನ್ನು ಪಡೆದಿವೆ. ಉಳಿದ ಹಿಂದುಳಿದ ಸಮುದಾಯ ಮತ್ತು ಜಾತಿಗಳ ಸಮರ್ಪಕ ಕೊಡುಗೆಗಾಗಿ ಈ ಸಮಿತಿಯು ಶಿಫಾರಸು ಮಾಡಿದೆ ಎಂದು ತಿಳಿದುಬಂದಿದೆ. ಈ ವರದಿ ಇನ್ನೂ ಲೋಕಸಭೆಯಲ್ಲಿ ಪ್ರಸ್ತಾಪಿಸಿಲ್ಲ.

ಇದನ್ನೂ ಓದಿ: ವಿಸ್ತಾರ ಅಂಕಣ: ಮಣ್ಣು ಬರೀ ಮಣ್ಣಲ್ಲ, ಅದು ನಮ್ಮ ಭಾವಕೋಶ, ನಾವು ಮಣ್ಣಿನ ಮಕ್ಕಳು!

ಕಾವೇರುತ್ತಿರುವ ಚುನಾವಣಾ ಪರ್ವದಲ್ಲಿ ಈ ಮೀಸಲಾತಿಯು ಇನ್ನೂ ಹೆಚ್ಚಿನ ಕಾಲವನ್ನು ಸೃಷ್ಟಿಸುವುದರಲ್ಲಿ ತನ್ನ ಕೊಡುಗೆ ನೀಡಿದೆ. ಸಾಮಾನ್ಯವಾಗಿ ಮೋದಿ ಮತ್ತು ಅಮಿತ್ ಶಾ ಜೋಡಿ ವ್ಯೂಹ ರಚಿಸಿ, ವಿರೋಧ ಪಕ್ಷಗಳಿಗೆ ಪಂಥ ಆಹ್ವಾನ ನೀಡುತ್ತಿತ್ತು. ಆದರೆ, ಈ ಬಾರಿ ವಿರೋಧ ಪಕ್ಷಗಳ ಒಕ್ಕೂಟ ತನ್ನ ದಾಳವನ್ನು ಮೊದಲೇ ಉರುಳಿಸಿದೆ. ಹಾಗಾಗಿ ಸರ್ಕಾರದ ಮುಂದಿನ ನಡೆ ಏನು ಎಂಬುದು ಕುತೂಹಲಕರವಾಗಿದೆ. ಪ್ರಸ್ತುತ ಸನ್ನಿವೇಶದಲ್ಲಿ ಅವರಿಗಿರಬಹುದಾದ ಆಯ್ಕೆಗಳೇನೆಂದರೆ, ರೋಹಿಣಿ ಕಮಿಷನ್ ವರದಿಯನ್ನು ಬಹಿರಂಗಪಡಿಸಿ ಹಿಂದುಳಿದ ವರ್ಗಗಳ ಮತ ಬ್ಯಾಂಕನ್ನು ಛಿದ್ರಗೊಳಿಸುವುದು ಮತ್ತು ಮುಂಬರುವ ಜನಗಣತಿಯಲ್ಲಿ ಜಾತಿ ಗಣತಿಯನ್ನು ಸೇರ್ಪಡಿಸುವುದು.

Exit mobile version