Site icon Vistara News

Chandra Shekhar Azad: ಸ್ಮರಣೆ: ಅಪ್ರತಿಮ ಬಲಿದಾನಿ ಚಂದ್ರಶೇಖರ್‌ ಆಜಾದ್

Chandra Shekhar Azad

: ಮಯೂರಲಕ್ಷ್ಮೀ

1906ರ ಜುಲೈ 23ರಂದು ಮಧ್ಯಪ್ರದೇಶದ ಜಬುವಾ ಜಿಲ್ಲೆಯ ಭವ್ರಾ ಗ್ರಾಮದಲ್ಲಿ ಪಂಡಿತ್ ಸೀತಾರಾಂ ತಿವಾರೀ ಮತ್ತು ಜಾಗ್ರಣೀ ದೇವಿಯವರ ಪುತ್ರರಾಗಿ ಜನಿಸಿದ ಚಂದ್ರಶೇಖರ ಸೀತಾರಾಂ ತಿವಾರಿ ಬಾಲ್ಯದಿಂದಲೂ ಸ್ವಾಭಿಮಾನಿ ರಾಷ್ಟ್ರವಾದಿ. ಬಾಲಕ ಚಂದ್ರಶೇಖರ ಬ್ರಿಟಿಷರ ವಿರುದ್ಧ ಅನೇಕ ಕ್ರಾಂತಿಕಾರಿ ಹೋರಾಟಗಳಲ್ಲಿ ತೊಡಗಿದ್ದರಿಂದ ಬಂಧನಕ್ಕೊಳಗಾಗಬೇಕಾಯಿತು. ನ್ಯಾಯಾಲಯದ ವಿಚಾರಣೆಯಲ್ಲಿ ಅವನ ಹೆಸರೇನೆಂದು ಕೇಳಿದರು. ಭಾರತವನ್ನು ಬ್ರಿಟಿಷರ ದಾಸ್ಯದಿಂದ ಮುಕ್ತಗೊಳಿಸುವುದು ತನ್ನ ಗುರಿಯಾದ್ದರಿಂದ ಹೆಸರು “ಆಜಾದ್” ಎಂದು ಹೇಳಿದ.

ನ್ಯಾಯಾಲಯದಿಂದ ಆಜ್ಞೆಯಾಗಿ 12 ಛಡಿಯೇಟುಗಳ ಶಿಕ್ಷೆಯಾದಾಗ ಒಂದೊಂದು ಏಟಿಗೂ “ಭಾರತ್ ಮಾತಾ ಕೀ ಜೈ” ಎಂದು ಜೈಕಾರ ಹಾಕುತ್ತಾ ತನ್ನ ಚರ್ಮವನ್ನು ಸುಲಿಯುತ್ತಿದ್ದ ಏಟುಗಳಿಗೆ ಅವನು ವಿಚಲಿತನಾಗಲಿಲ್ಲ. ಬದಲಿಗೆ ಬ್ರಿಟಿಷರ ವಿರುದ್ಧ ಹೋರಾಡುವ ಸಂಕಲ್ಪ ಇನ್ನಷ್ಟು ಗಟ್ಟಿಯಾಯಿತು. ಅಂದಿನಿಂದ ಚಂದ್ರಶೇಖರನ ಹೆಸರು ಆಜಾದ್ ಆಯಿತು.

ಬಾಲಕ ಆಜಾದ್ ಗಾಂಧೀಜಿಯವರ ಅಸಹಕಾರ ಚಳುವಳಿಯಲ್ಲಿ ಭಾಗವಹಿಸಿ ಎಲ್ಲರ ಮೆಚ್ಚುಗೆ ಪಡೆದ. ಹಾಗೇ ಮುಂದುವರೆದ ಆಜಾದ್ ಕ್ರಾಂತಿ ವಿಚಾರಗಳಿಂದ ಜನಪ್ರಿಯ ಯುವನಾಯಕರಾದರು. ಅವರ ವಾಕ್ಚಾತುರ್ಯ, ಕಾರ್ಯವೈಖರಿ, ಸಾಹಸ ಪ್ರವೃತ್ತಿ ಮತ್ತು ಛಲವನ್ನು ಕಂಡು ರಾಮ್ ಪ್ರಸಾದ್ ಬಿಸ್ಮಿಲ್ ಆಜಾದರನ್ನು ತಮ್ಮ ಕ್ರಾಂತಿಕಾರಿ ಸಂಘಟನೆ ಸೇರುವಂತೆ ಆಹ್ವಾನ ನೀಡಿದರು. ಭಗತ್ ಸಿಂಗ್, ರಾಜಗುರು ಮತ್ತು ಸುಖದೇವ್ ಜೊತೆಗೂಡಿ ಹಿಂದೂಸ್ಥಾನ ಸೋಷಿಯಲಿಸ್ಟ್ ರಿಪಬ್ಲಿಕನ್ ಅಸೋಸಿಯೇಷನ್ ಸಂಘಟನೆಯಲ್ಲಿ ಆಜಾದ್ ಸಕ್ರಿಯರಾದರು. ಬ್ರಿಟಿಷರ ಕಣ್ಗಾವಲಿನಲ್ಲಿ ಕ್ರಾಂತಿಕಾರಿಗಳ ಚಟುವಟಿಕೆಗಳು ರಹಸ್ಯವಾಗಿ ನಡೆಯುತ್ತಿತ್ತು.

ಕಾಕೋರಿ ರೈಲಿನಲ್ಲಿದ್ದ ಸರಕಾರೀ ಖಜಾನೆಯನ್ನು ವಶಪಡಿಸಿಕೊಂಡ ನಂತರ ಕ್ರಾಂತಿಕಾರಿಗಳು ಪೋಲೀಸ್ ಅಧಿಕಾರಿ ಸ್ಯಾಂಡರ್ಸ್‍ನನ್ನು ಕೊಂದು ಬ್ರಿಟಿಷರಿಗೆ ಸವಾಲೆಸೆದಿದ್ದರು. ಅವರೆಲ್ಲರನ್ನೂ ಬಂಧಿಸಬೇಕೆಂದು ಬ್ರಿಟಿಷರು ಎಡಬಿಡದೆ ಕಾರ್ಯಾಚರಣೆ ನಡೆಸಿದ್ದರು. ದೆಹಲಿಯ ಅಸೆಂಬ್ಲಿಯಲ್ಲಿ ಬಾಂಬ್ ದಾಳಿ ನಂತರ ಭಗತ್ ಸಿಂಗ್ ಮತ್ತು ಬ್ರತುಕೇಶ್ವರ ದತ್ ಬಂಧನವಾಗಿತ್ತು. ಮುಂದೆ ಸುಖದೇವ್ ರಾಜಗುರು ಮುಂತಾದವರನ್ನೂ ಬಂಧಿಸಿ ಲಾಹೋರ್ ಜೈಲಿನಲ್ಲಿರಿಸಿದ್ದರು. ಆದರೆ ಇನ್ನೂ ಸೆರೆ ಸಿಕ್ಕದೆ ಸಂಘಟನೆಯನ್ನು ಚುರುಕುಗೊಳಿಸಿದ್ದ ಆಜಾದರನ್ನು ಜೀವಂತವಾಗಿ ಸೆರೆಹಿಡಿಯಬೇಕು ಅಥವಾ ಕೊಲ್ಲಬೇಕೆಂದು ಪೋಲೀಸರು ಕಾಯುತ್ತಿದ್ದರು.

ಝಾನ್ಸಿಯಲ್ಲಿ ಆಜಾದ್ ಬಂದೂಕಿನ ತರಬೇತಿ ನೀಡಿ ಎಲ್ಲರನ್ನೂ ಸಜ್ಜುಗೊಳಿಸಿದ್ದರು. ಕ್ರಾಂತಿ ಮುಂದುವರೆದಿತ್ತು. ಆಜಾದರ ತರ್ಕಶಕ್ತಿ ಮತ್ತು ಯೋಜನೆಗಳು ಎಷ್ಟು ಆಕರ್ಷಣೀಯವಾಗಿತ್ತೆಂದರೆ ಪ್ರಭಾವಿ ನೇತಾರರಾಗಿದ್ದ ಆಚಾರ್ಯ ಕೃಪಲಾನಿ, ಪಂಡಿತ್ ಮೋತೀಲಾಲ್ ಮತ್ತು ಜವಹರ್‍ಲಾಲ್ ನೆಹರೂರವರಿಂದ ಅವರು ಮೆಚ್ಚುಗೆ ಪಡೆದಿದ್ದರು. ಮುಂದೆ ಲಂಡನ್ನಿನಲ್ಲಿ ನಡೆಯಲಿದ್ದ ದುಂಡು ಮೇಜಿನ ಸಭೆಗೆ ರಾಯಭಾರಿಯನ್ನಾಗಿ ಅಜಾದರನ್ನು ಕಳುಹಿಸುವ ಆಲೋಚನೆ ಕಾಂಗ್ರೆಸ್ ಅಧಿವೇಶನ ಕೈಗೊಂಡಿತ್ತು. ಆಂಗ್ಲರಿಗೆ ಭಾರತವನ್ನು ಸ್ವತಂತ್ರಗೊಳಿಸುವ ತನ್ನ ನಿಲುವುಗಳನ್ನು ತಿಳಿಸುವುದು. ಅದು ಸಫಲವಾಗದಿದ್ದಲ್ಲಿ ಭಾರತಕ್ಕೆ ಮರಳಿ ನಂತರ ರಷ್ಯಾ ದೇಶಕ್ಕೆ ತೆರಳುವ ಉದ್ದೇಶ ಆಜಾದರಿಗಿತ್ತು.

ಆದರೆ ವಿಧಿಲಿಖಿತ ಬೇರೆಯೇ ಆಗಿತ್ತು. 1931, ಫೆಬ್ರವರಿ 27ರಂದು ಅಲಹಾಬಾದಿನ ಆಲ್ಫ್ರೆಡ್ ಪಾರ್ಕಿನಲ್ಲಿ ತನ್ನ ಸಹಚರರಾದ ಯಶಪಾಲ್ ಮತ್ತು ಸುರೇಂದ್ರ ಪಾಂಡೇ ಅವರೊಂದಿಗೆ ಆಜಾದ್ ರಹಸ್ಯವಾಗಿ ಸಮಾಲೋಚನೆ ನಡೆಸಿದ್ದರು. ಸಮಾಲೋಚನೆ ಮುಗಿದ ನಂತರ ಸ್ನೇಹಿತ ಸುಖದೇವ ರಾಜ್ ಮತ್ತು ಆಜಾದ್ ಅಲ್ಲಿಂದ ಹೊರಡಲನುವಾಗಿದ್ದರು. ದುರದೃಷ್ಟವಶಾತ್ ವೀರಭದ್ರ ತಿವಾರಿ ಎನ್ನುವ ಮಿತ್ರದ್ರೋಹಿ ಕಾರ್ಯಕರ್ತ ಬ್ರಿಟಿಷರಿಗೆ ಆಜಾದ್ ಕುರಿತು ಸುಳಿವು ನೀಡಿದ್ದರಿಂದ ಅಲ್ಲಿಗೆ ಪೋಲಿಸರು ಆಗಮಿಸಿದರು.

ಇದನ್ನೂ ಓದಿ: ಸ್ಮರಣೆ: ಧೀಮಂತ ನೇತಾರ ಲಾಲಾ ಲಜಪತ್ ರಾಯ್

ಪೋಲೀಸ್ ಮುಖ್ಯಸ್ಥ ಹಾಲಿನ್ಸ್ ಎಲ್ಲಿಯೂ ತಪ್ಪಿಸಿಕೊಳ್ಳದಂತೆ ಪಾರ್ಕನ್ನು ಸುತ್ತುವರೆಯಲು ಆದೇಶ ನೀಡಿದ. ಜಾಲದ ಸುಳಿವು ಸಿಕ್ಕ ಕೂಡಲೇ ತನ್ನ ಸ್ನೇಹಿತ ಸುಖದೇವನನ್ನು ಅಲ್ಲಿಂದ ತಪ್ಪಿಸಿಕೊಳ್ಳಲು ಆಜಾದ್ ಸೂಚಿಸಿದರು. ತನ್ನ ಬಳಿಯಿದ್ದ ಎರಡೂ ರಿವಾಲ್ವರ್‌ಗಳನ್ನು ಎರಡೂ ಕೈಯಲ್ಲಿ ಹಿಡಿದು ಒಂದೇ ಸಮನೆ ಪೋಲೀಸರ ಮೇಲೆ ಗುಂಡಿನ ಮಳೆಗೆರೆದರು. ಅವರ ನಿಶ್ಚಿತ ಗುರಿ ಮತ್ತು ರಿವಾಲ್ವರನ್ನು ಬಳಸಿದ ಚಾಕಚಕ್ಯತೆಯನ್ನು ಕಂಡು ಬ್ರಿಟಿಷ್ ಅಧಿಕಾರಿ ಹಾಲಿನ್ಸ್ ದಂಗುಬಡಿದಂತಾದ. ಸಮೀಪಕ್ಕೆ ಪೋಲಿಸರು ಬರಲಾರಂಭಿಸಿದರು. ಆಜಾದ್ ಮೇಲೆ ಗುಂಡು ಹಾರಿಸಲು ಮುಂದಾದರು.

ಆದರೆ ಅಪ್ರತಿಮ ಸಾಹಸಿ ಆಜಾದ್ ತನ್ನ ರಿವಾಲ್ವರಿನಲ್ಲಿದ್ದ ಕೊನೆಯ ಗುಂಡನ್ನು ಸರಿಯಾಗಿ ತನ್ನ ಹಣೆಯ ಮೇಲೆ ಗುರಿಯಿಟ್ಟುಕೊಂಡರು. ಸಮಾಧಾನದ ಉಸಿರೆಳೆದು ತಾನು ಕುಳಿತಿದ್ದ ಭೂಮಿಗೆ ನಮಸ್ಕರಿಸಿದರು. ನಿಧಾನವಾಗಿ ಟ್ರಿಗ್ಗರನ್ನು ಒತ್ತಿದರು. ರಕ್ತದೋಕುಳಿಯಲ್ಲಿ ಮಲಗಿದ್ದ ಆಜಾದ್ ಮುಖದಲ್ಲಿ ಸಾರ್ಥಕತೆಯ ಮಂದಹಾಸವಿತ್ತು. “ಆಜಾದ್ ಹೀ ರಹೇ ಹೈ, ಆಜಾದ್ ಹೀ ರಹೇಂಗೇ – ನಾವು ಸ್ವತಂತ್ರರು… ಸ್ವತಂತ್ರರಾಗಿಯೇ ಬದುಕುತ್ತೇವೆ!” ಎಂದ ಆಜಾದ್ ನುಡಿದಂತೆ ನಡೆದರು.

ಮರುದಿನ ಮುಂಜಾನೆ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಪಾರ್ಕಿನ ಬಳಿ ಜನ ಸೇರಿದರು. ಆದರೆ ಬ್ರಿಟಿಷ್ ಪೋಲೀಸರ ಅಜ್ಞೆಯಿಂದ ಯಾರಿಗೂ ಅಂತಿಮ ದರ್ಶನವಾಗಲಿಲ್ಲ. ಗಂಗೆಯ ದಡದಲ್ಲಿ ಆಜಾದ್ ಅಂತ್ಯಕ್ರಿಯೆ ರಹಸ್ಯವಾಗಿ ನಡೆಯಿತು. ದೂರದಲ್ಲೆಲ್ಲೋ ಜನರು ಅಶ್ರುತರ್ಪಣ ನೀಡಿದರು. ಆಜಾದರ ತ್ಯಾಗ ಬಲಿದಾನ ಅವಿಸ್ಮರಣೀಯ. ಆಜಾದರ ಬಲಿದಾನವಾದ ಆಲ್ಫ್ರೆಡ್ ಪಾರ್ಕ್ ಮುಂದೆ “ಆಜಾದ್” ಉದ್ಯಾನವನವೆಂದು ನಾಮಾಂಕಿತವಾಯಿತು.

ಇದನ್ನೂ ಓದಿ: ಸ್ಮರಣೆ | ಕನ್ನಡದ ಕಣ್ವ ಬಿ.ಎಂ ಶ್ರೀಕಂಠಯ್ಯ

Exit mobile version