Site icon Vistara News

ಗ್ರಾಹಕ ಜಾಗೃತಿ | ದೂರುದಾರರ ಪರವಾಗಿ ಗ್ರಾಹಕ ಆಯೋಗದ ಸ್ವಯಂ ಊಹೆ ಕಾನೂನು ಸಮ್ಮತವಲ್ಲ

bank account

ಜಂಟಿ ಖಾತೆಗೆ ಅನಕ್ಷರಸ್ಥೆಯ ಹೆಸರು ಸೇರಿಸಿದ ಪ್ರಕರಣದಲ್ಲಿ ರಾಷ್ಟ್ರೀಯ ಆಯೋಗದ ತೀರ್ಪು

ಆಧುನಿಕ ಯುಗದಲ್ಲಿ ಬ್ಯಾಂಕು ಪ್ರತಿಯೊಬ್ಬರ ಜೀವನದಲ್ಲೂ ಹಾಸುಹೊಕ್ಕಾಗಿದೆ. ದೇಶದ ಪ್ರತಿ ಕುಟುಂಬವೂ ಒಂದು ಬ್ಯಾಂಕ್‌ ಅಕೌಂಟನ್ನು ಹೊಂದಿರುತ್ತದೆ. ಅಕೌಂಟ್‌ ಹೊಂದಿರುವ ವ್ಯಕ್ತಿ ಅಕ್ಷರಸ್ಥನೋ ಅನಕ್ಷರಸ್ಥನೋ ಎಂಬುದು ಇಲ್ಲಿ ಪರಿಗಣನೆಗೆ ಬರುವುದಿಲ್ಲ. ತಮ್ಮ ಅನಕ್ಷರತೆಯ ಕಾರಣದಿಂದಾಗಿ ಬ್ಯಾಂಕ್‌ ವ್ಯವಹಾರದಲ್ಲಿ ಮೋಸ ಹೋದರೆ ಗ್ರಾಹಕ ವೇದಿಕೆಗಳು ನೆರವಿಗೆ ಬರುತ್ತವೆಯೆ ಎಂಬುದು ಪ್ರಶ್ನೆ. ಇಲ್ಲಿ ಅಂಥ ಒಂದು ಪ್ರಕರಣ ಇದೆ.

ಮುಂಬಯಿಯ ಶಂಭುನಾಥ ಅಮೃತ್ ಚೌಹಾಣ ಎಂಬವರು ಸಿಂಗಾಪುರದ ಪಾನ್‌ ಯುನೈಟೆಡ್‌ ಶಿಪ್ಪಿಂಗ್‌ ಪ್ರೈ.ಲಿ.ನ ಪಿ.ವಿ.ಹಾರ್ಮನಿ ಎಂಬ ಹಡಗಿನಲ್ಲಿ ವೆಲ್ಡರ್‌ ಆಗಿ ಕೆಲಸ ಮಾಡುತ್ತಿದ್ದರು. ಅವರು ಕರ್ತವ್ಯದ ಮೇಲೆ ಇದ್ದಾಗ ಚೀನಾದ ಟಿಯಾನ್ಜಿನ್‌‌ ಬಂದರಿನಲ್ಲಿ ಅಪಘಾತದಲ್ಲಿ ಸಾವನ್ನಪ್ಪುತ್ತಾರೆ. ಭಾರತದ ರಾಯಭಾರ ಕಚೇರಿಯ ಮೂಲಕ ಪರಿಹಾರಕ್ಕೆ ಅರ್ಜಿ ಸಲ್ಲಿಕೆಯಾಗುತ್ತದೆ. ಪರಿಹಾರವೆಂದು 93,115.76 ಸಿಂಗಾಪುರ ಡಾಲರ್‌ ‌ಬರುತ್ತದೆ. ಕಂಪನಿಯು ಇದಕ್ಕೆ ಸಮನಾದ 55,000 ಅಮೆರಿಕದ ಡಾಲರಿನ ಚೆಕ್‌ ಅನ್ನು ಅವರ ವಾರಸುದಾರರಾದ ಪತ್ನಿ ಬುನಿಯಾದೇವಿ ಚೌಹಾಣ, ಮಕ್ಕಳಾದ ಧರ್ಮೇಂದ್ರ ಚೌಹಾಣ, ರವೀಂದ್ರ ಚೌಹಾಣ, ಸ್ನೇಹಾ ಚೌಹಾಣ ಅವರಿಗೆ ಕಂಪನಿಯ ಮುಂಬಯಿ ಕಚೇರಿಯಲ್ಲಿ 30.08.2004ರಂದು ನೀಡುತ್ತದೆ. ಈ ಸಂದರ್ಭದಲ್ಲಿ ಮೃತನ ಸಹೋದರ ಗುಲಾಬಚಂದ್ರ ಅಮೃತ ಚೌಹಾಣ ಕೂಡ ಇದ್ದರು.

ಇದಾದ ಬಳಿಕ ಚೆಕ್‌ ಹಾಕುವುದಕ್ಕಾಗಿ ಸೆಂಟ್ರಲ್‌ ಬ್ಯಾಂಕ್‌ ಆಫ್‌ ಇಂಡಿಯಾದ ಮುಂಬಯಿಯ ವಡಾಲ ಶಾಖೆಯಲ್ಲಿ ಉಳಿತಾಯ ಖಾತೆಯನ್ನು ತೆರೆಯುವುದಕ್ಕೆ ಅವರು 30.08.2004ರಂದೇ ಹೋಗುತ್ತಾರೆ. ಇವರ ಜೊತೆ ಬುನಿಯಾದೇವಿಯ ಸಹೋದರನ ಮಗ ಮನೋಜ ಚೌಹಾಣ ಎಂಬಾತ ಕೂಡ ಇರುತ್ತಾನೆ. ಅದೇ ಶಾಖೆಯಲ್ಲಿ ಖಾತೆ ತೆರೆಯುವಂತೆ ಸಲಹೆ ಮಾಡಿದ್ದೂ ಅವನೇ. ಆಕೆಯ ಮೈದುನ ಮತ್ತು ಬ್ಯಾಂಕ್ ಮ್ಯಾನೇಜರ್‌ ಆಕೆಯ ಅನಕ್ಷರತೆಯ ಲಾಭ ಪಡೆದು ಖಾಲಿ ಕಾಗದದ ಮೇಲೆ ಅವಳ ಹೆಬ್ಬೆಟ್ಟನ್ನು ಅವಳ ಸಹೋದರನ ಮನೆಯಲ್ಲಿ ಒತ್ತಿಸಿಕೊಳ್ಳುತ್ತಾರೆ. ಅದರ ಮರುದಿನ ಬ್ಯಾಂಕ್‌ ಮ್ಯಾನೇಜರ್‌ ಬುನಿಯಾದೇವಿಯ ಮೈದುನನಿಂದ ಒಂದು ಪತ್ರವನ್ನು ಪಡೆದು ಆತನು ಅದೇ ಶಾಖೆಯಲ್ಲಿ 12.12.1995ರಂದು ತೆರೆದಿದ್ದ ಖಾತೆಗೇ ಬುನಿಯಾದೇವಿಯ ಹೆಸರನ್ನೂ ಸೇರಿಸುತ್ತಾರೆ. ಹೀಗೆ ಮಾಡುವಾಗ ರಿಸರ್ವ್ ಬ್ಯಾಂಕಿನ ನಿಯಮಾವಳಿಗಳನ್ನು ಪಾಲಿಸುವುದಿಲ್ಲ. ಬುನಿಯಾದೇವಿ ತನ್ನದೇ ಉಳಿತಾಯ ಖಾತೆ ತೆರೆದಿದ್ದಾರೆ ಅಂದುಕೊಳ್ಳುತ್ತಾಳೆ. ಮತ್ತು ವಿಮೆ ಕಂಪನಿಯ ಚೆಕ್ಕನ್ನು ಅದರಲ್ಲಿ ಹಾಕುತ್ತಾಳೆ.

ನಂತರ ಅವಳು ತನ್ನ ಮೂಲ ಊರು ಉತ್ತರ ಪ್ರದೇಶದ ದಿಯೋರಿಯಾ ಜಿಲ್ಲೆ ಕರಾಹಿ ಪಾಂಡೆ ಗ್ರಾಮಕ್ಕೆ ತೆರಳುತ್ತಾಳೆ. ಅಲ್ಲಿ ಅವಳು 2004 ಸೆಪ್ಟೆಂಬರ್‌ನಿಂದ 25-08-2005ರ ಆಗಸ್ಟ್‌ವರೆಗೆ ಇರುತ್ತಾಳೆ. ಈ ನಡುವೆ ಅವಳ ವಿಮೆ ಹಣ ಜಮಾ ಆದ ಜಂಟಿ ಖಾತೆಯಿಂದ ಅವಳ ಮೈದುನ ಬಹುತೇಕ ಹಣವನ್ನು ತೆಗೆದುಕೊಂಡುಬಿಟ್ಟಿದ್ದ. ಇದು ಗೊತ್ತಾದ ಬಳಿಕ ಬುನಿಯಾದೇವಿ 01-09-2005ರಂದು ಬ್ಯಾಂಕಿನ ಅಕೌಂಟ್‌ ಆಫೀಸರ್‌ಗೆ ಒಂದು ಅರ್ಜಿ ಕೊಟ್ಟು ತಮ್ಮ ಖಾತೆಯಿಂದ ಹಣ ತೆಗೆಯುವುದನ್ನು ತಡೆಹಿಡಿಯುವಂತೆ ಕೋರುತ್ತಾಳೆ. ಆದರೆ ಏನೂ ಕ್ರಮ ಜರುಗಿಸುವುದಿಲ್ಲ. ಕೊನೆಯಲ್ಲಿ 23.08.2006ರಂದು ಅವಳು ಬ್ಯಾಂಕಿನ ವಲಯ ಕಚೇರಿ ಹಾಗೂ ಬಾಂದ್ರಾ ಕುರ್ಲಾದ ಪ್ರಾದೇಶಿಕ ಕಚೇರಿಗೆ ದೂರು ಸಲ್ಲಿಸುತ್ತಾಳೆ. ಬ್ಯಾಂಕಿನಲ್ಲಿ ಆಂತರಿಕ ತನಿಖೆ ನಡೆಯುತ್ತದೆ. ಆದರೆ ಬುನಿಯಾದೇವಿಗೆ ಯಾವುದೇ ಪ್ರತಿಕ್ರಿಯೆ ಸಿಗುವುದಿಲ್ಲ.

ಇದನ್ನೂ ಓದಿ | ಗ್ರಾಹಕ ಜಾಗೃತಿ ಅಂಕಣ | ಬ್ಯಾಂಕ್‌ಗಳು ವಿಳಂಬವಾಗಿ ಸಲ್ಲಿಸಿದರೆ ಮೇಲ್ಮನವಿ ವಜಾ

ಇಂದರಿಂದ ನೊಂದ ಬುನಿಯಾದೇವಿಯ ಪರವಾಗಿ ಆಕೆಯ ಪುತ್ರ ಧರ್ಮೇಂದ್ರ ಚೌಹಾಣ ಮಹಾರಾಷ್ಟ್ರ ರಾಜ್ಯ ಗ್ರಾಹಕ ಆಯೋಗದಲ್ಲಿ 07.03.2008ರಂದು ದೂರನ್ನು ದಾಖಲಿಸುತ್ತಾನೆ. ಬ್ಯಾಂಕಿನ ಮ್ಯಾನೇಜರ್‌ ‌ಪ್ರತ್ಯೇಕ ಖಾತೆ ತೆರೆಯದೆ ಇರುವ ಖಾತೆಯನ್ನೇ ಜಂಟಿ ಖಾತೆ ಮಾಡಿ ಅದಕ್ಕೆ ನನ್ನ ಹೆಸರನ್ನು ಸೇರಿಸಿ ಸೇವಾನ್ಯೂನತೆಯನ್ನು ತೋರಿಸಿದ್ದಾರೆ. ಈ ಸಂಬಂಧದಲ್ಲಿ ಅವರು ರಿಸರ್ವ್‌ ಬ್ಯಾಂಕಿನ ನಿಯಮಗಳನ್ನು ಪಾಲಿಸಿಲ್ಲ. ಇದರಿಂದಾಗಿ ತನ್ನ ಮೈದುನ ಎಲ್ಲ ಹಣವನ್ನು ತೆಗೆದುಕೊಂಡ. ತನಗೆ ಎಲ್ಲ ಹಣವನ್ನು ಮರಳಿಸಬೇಕು ಎಂದು ಕೋರುತ್ತಾರೆ. ಇದರಲ್ಲಿ ಸೆಂಟ್ರಲ್‌ ಬ್ಯಾಂಕ್‌ ಆಫ್‌ ಇಂಡಿಯಾದ ಜನರಲ್‌ ಮ್ಯಾನೇಜರ್‌, ಬ್ರ್ಯಾಂಚ್‌ ಮ್ಯಾನೇಜರ್‌ ಮತ್ತು ಮೈದುನ ಗುಲಾಬಚಂದ್ರ ಅಮೃತ ಚೌಹಾಣರನ್ನು ಪ್ರತಿವಾದಿಗಳನ್ನಾಗಿ ಮಾಡುತ್ತಾರೆ.

ದೂರನ್ನು ಪುರಸ್ಕರಿಸಿದ ರಾಜ್ಯ ಆಯೋಗವು 14-09-20016ರಂದು ನೀಡಿದ ತೀರ್ಪಿನಲ್ಲಿ, ಬ್ಯಾಂಕಿನಿಂದ ಸೇವಾನ್ಯೂನತೆ ಉಂಟಾಗಿದೆ. ಕಾರಣ ಪ್ರತಿವಾದಿಗಳು ಜಂಟಿಯಾಗಿ ಮತ್ತು ಪ್ರತ್ಯೇಕವಾಗಿ 25,28,,515 ರೂ.ಗಳನ್ನು ದೂರುದಾರರಿಗೆ ನೀಡಬೇಕು. ಬ್ಯಾಂಕಿನಲ್ಲಿ ಠೇವಣಿ ಮಾಡಿದ ದಿನದಿಂದ ಅದಕ್ಕೆ ಶೇ.6ರಂತೆ ಬಡ್ಡಿಯನ್ನು ನೀಡಬೇಕು. ಪರಿಹಾರವೆಂದು 2 ಲಕ್ಷ ರೂ. ಮತ್ತು ವ್ಯಾಜ್ಯದ ವೆಚ್ಚವೆಂದು 25 ಸಾವಿರ ರೂ. ನೀಡಬೇಕು ಎಂದು ತೀರ್ಪಿತ್ತಿತು.

ಇದರ ವಿರುದ್ಧ ಸೆಂಟ್ರಲ್‌ ಬ್ಯಾಂಕ್‌ ಆಫ್‌ ಇಂಡಿಯಾದ ಜನರಲ್‌ ಮ್ಯಾನೇಜರ್‌ ಮತ್ತು ಬ್ರ್ಯಾಂಚ್‌ ಮ್ಯಾನೇಜರ್‌ ರಾಷ್ಟ್ರೀಯ ಗ್ರಾಹಕ ಆಯೋಗದಲ್ಲಿ ಮೇಲ್ಮನವಿ ಸಲ್ಲಿಸುತ್ತಾರೆ. ಅವರು ತಮ್ಮ ಲಿಖಿತ ಹೇಳಿಕೆಯಲ್ಲಿ, 30-08-2004ರಂದು ಗುಲಾಬಚಂದ್ರ ಅಮೃತ ಚೌಹಾಣ ಬ್ರ್ಯಾಂಚ್‌ ಮ್ಯಾನೇಜರ್ ಬಳಿ ಬುನಿಯಾದೇವಿ ಜೊತೆ ಬಂದರು, ಆಕೆ ತನ್ನ ಮೃತ ಸಹೋದರನ ಪತ್ನಿ ಎಂದು ಪರಿಚಯಿಸಿ, 1995ರಲ್ಲಿಯೇ ಆ ಶಾಖೆಯಲ್ಲಿ ತೆರೆದಿರುವ ತಮ್ಮ ಉಳಿತಾಯ ಖಾತೆಯಲ್ಲಿ ಆಕೆಯ ಹೆಸರನ್ನು ಸೇರಿಸಿ ಅದನ್ನು ಜಂಟಿ ಖಾತೆಯನ್ನಾಗಿ ಪರಿವರ್ತಿಸುವಂತೆ ಅರ್ಜಿ ನೀಡಿ ಕೋರಿದರು. ಅದರ ಪ್ರಕಾರವೇ ಖಾತೆಯನ್ನು “Either or Survivor” ಅಂದರೆ ಇಬ್ಬರೂ ಆ ಖಾತೆಯಲ್ಲಿ ವ್ಯವಹಾರ ಮಾಡಬಹುದು. ಮತ್ತು ಒಬ್ಬರು ನಿಧನರಾದರೆ ಉಳಿದವರು ಅದರ ಪೂರ್ತಿ ಹಕ್ಕುದಾರರು ಎಂದು ಮಾಡಲಾಗಿತ್ತು. ನಿಯಮದಂತೆ ಬ್ಯಾಂಕ್‌ ಬುನಿಯಾದೇವಿಯ ಎರಡು ಪಾಸ್‌ಪೋರ್ಟ್‌ ಅಳತೆಯ ಫೋಟೋ ಪಡೆದುಕೊಂಡಿದೆ. ರೇಶನ್‌ ಕಾರ್ಡಿನ ಝೆರಾಕ್ಸ್‌ ಪ್ರತಿ ಹಾಗೂ ಗುಲಾಬಚಂದ್ರ ಅವರ ಸಹಿ ನಮೂನೆಯನ್ನು ಹೊಸದಾಗಿ ಪಡೆದುಕೊಳ್ಳಲಾಗಿದೆ. ಅಲ್ಲದೆ ಬುನಿಯಾದೇವಿಯ ಹೆಬ್ಬೆಟ್ಟಿನ ಗುರುತನ್ನೂ ಪಡೆದುಕೊಳ್ಳಲಾಗಿದೆ. ಖಾತೆ ಬದಲಾವಣೆ ಸಂಬಂಧ ರಿಸರ್ವ್‌ ಬ್ಯಾಂಕಿನ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗಿದೆ. ಪರಿಹಾರದ ಚೆಕ್‌ ಪಡೆಯಲು ಮೆ.ಪಾಂಡಿ ಕರೆಸ್ಪಾಂಡೆಂಟ್ಸ್‌ ಬಳಿಗೆ 31-08-2004ರಂದು ಬುನಿಯಾದೇವಿ ಮತ್ತು ಗುಲಾಬಚಂದ್ರ ಇಬ್ಬರೂ ಜೊತೆಯಾಗಿಯೇ ಹೋಗಿದ್ದರು. ಇದು ಅವರಿಬ್ಬರೂ ಹತ್ತಿರದ ಸಂಬಂಧಿಗಳು ಮತ್ತು ಪರಸ್ಪರ ವಿಶ್ವಾಸ ಇದ್ದವರು ಎಂಬುದನ್ನು ತೋರಿಸುತ್ತದೆ. ಅಲ್ಲದೆ ಬುನಿಯಾದೇವಿ ತನ್ನದು ಪ್ರತ್ಯೇಕ ಉಳಿತಾಯ ಖಾತೆ ತೆರೆಯುವಂತೆ ಕೋರಿಯೇ ಇರಲಿಲ್ಲ. ಜಂಟಿಖಾತೆಯ ನಾತೆಯಿಂದ ಗುಲಾಬಚಂದ್ರ ಖಾತೆಯಿಂದ ಹಣವನ್ನು ಹಿಂದಕ್ಕೆ ಪಡೆಯುವ ಹಕ್ಕನ್ನು ಹೊಂದಿದ್ದಾರೆ. ಆದ್ದರಿಂದ ಬ್ಯಾಂಕು ಬುನಿಯಾದೇವಿಗೆ ಗುಲಾಬಚಂದ್ರ ತೆಗೆದಿರುವ ಹಣವವನ್ನು ಕೊಡುವದಕ್ಕೆ ಬಾಧ್ಯಸ್ಥ ಅಲ್ಲ ಎಂದು ವಿವರಿಸಿದರು.

ಇದನ್ನೂ ಓದಿ | ಗ್ರಾಹಕ ಜಾಗೃತಿ | ವಿದ್ಯುತ್‌ ಶಾಕ್‌ನಿಂದ ಸತ್ತರೆ ವಿದ್ಯುತ್‌ ನಿಗಮ ಪರಿಹಾರ ನೀಡಬೇಕು

ಹಾಗಿದ್ದರೆ ರಾಜ್ಯ ಆಯೋಗವು ದೂರನ್ನು ಪುರಸ್ಕರಿಸಿದ್ದಕ್ಕೆ ಕಾರಣವೇನು? ಬುನಿಯಾದೇವಿ ನಿರಕ್ಷರಿಯಾದ ಕಾರಣ ಅವರಿಗೆ ಚೆಕ್‌ ಬುಕ್‌ ನೀಡಿರಲಿಲ್ಲ. ಗುಲಾಬಚಂದ್ರ ಅವರು ಒಂದು ತಿಂಗಳ ಅವಧಿಯಲ್ಲಿ ಕೇವಲ ವಿಥ್‌ಡ್ರಾವಲ್‌ ಫಾರ್ಮ್‌ ಬಳಸಿ 1.5 ಲಕ್ಷದಿಂದ 2 ಲಕ್ಷ ರೂ.ಗಳ ವರೆಗೆ ಸುಮಾರು 8 ಲಕ್ಷ ರೂ.ಗಳನ್ನು ಹಿಂಪಡೆಯುವುದಕ್ಕೆ ಅವಕಾಶ ಮಾಡಿಕೊಟ್ಟಿತು. ಅದಕ್ಕೆ ಬುನಿಯಾದೇವಿಯ ಹೆಬ್ಬೆಟ್ಟನ್ನು ಹಾಕಿಸಿಕೊಂಡಿಲ್ಲ ಅಥವಾ ಅವರು ಸ್ವತಃ ಬ್ಯಾಂಕಿನಲ್ಲೂ ಹಾಜರಿರಲಿಲ್ಲ. ಇದು ಬ್ಯಾಂಕಿನ ಸೇವಾ ನ್ಯೂನತೆ ಎಂದು ಅದು ಭಾವಿಸಿತ್ತು.

ನಿರಕ್ಷರಿಯನ್ನು ಜಂಟಿ ಖಾತೆಗೆ ಸೇರಿಸುವಾಗ ರಿಸರ್ವ್‌ ಬ್ಯಾಂಕಿನ ಬೇರೆ ಯಾವುದಾದರೂ ನಿಯಮ ಇದೆಯೇ ಎಂಬುದನ್ನು ದೂರುದಾರರು ಪಾಟೀಸವಾಲಿನ ಸಂದರ್ಭದಲ್ಲಿ ಪ್ರಸ್ತುತಪಡಿಸಿಲ್ಲ. ಈ ಜಂಟಿ ಖಾತೆಯನ್ನು ಇಬ್ಬರಲ್ಲಿ ಯಾರಾದರೂ ಒಬ್ಬರು ನಿರ್ವಹಿಸಬಹುದಾದ ಕಾರಣ ಮತ್ತೊಬ್ಬರ ಸಹಿ ಅಥವಾ ಹೆಬ್ಬೆಟ್ಟಿನ ಅಗತ್ಯವಿಲ್ಲ. ಹೀಗಿರುವಾಗ ಬ್ಯಾಂಕಿನಿಂದ ಸೇವಾನ್ಯೂನತೆ ತಲೆದೋರಿದೆ ಎಂದು ಹೇಳುವ ಹಾಗಿಲ್ಲ. ಬುನಿಯಾದೇವಿ ತನ್ನದೇ ಹೆಸರಿನಲ್ಲಿ ಉಳಿತಾಯ ಖಾತೆ ತೆರೆಯಲು ಹೇಳಿದರೂ ಅವಳ ನಿರಕ್ಷರತೆಯ ಲಾಭ ಪಡೆದು ಅವಳ ಮೈದುನ ಮತ್ತು ಬ್ಯಾಂಕ್‌ ಮ್ಯಾನೇಜರ್‌ ಜಂಟಿ ಖಾತೆಯಲ್ಲಿ ಅವಳ ಹೆಸರನ್ನು ಸೇರಿಸಿದರು ಎಂಬುದಕ್ಕೆ ಅವಳ ಜೊತೆ ಅಂದು ಇದ್ದ ಅವಳ ಸಹೋದರನ ಮಗ ಮನೋಜ ಚೌಹಾಣರಿಂದ ಅಫಿಡೆವಿಟ್‌ ಕೂಡ ಸಲ್ಲಿಸಿರಲಿಲ್ಲ. ಇದರಿಂದ ಅವಳ ಹೆಬ್ಬೆಟ್ಟನ್ನು ಖಾಲಿ ಕಾಗದದ ಮೇಲೆ ಅವಳ ಸಹೋದರನ ಮನೆಯಲ್ಲಿ ಪಡೆದುಕೊಳ್ಳಲಾಯಿತು ಎಂಬ ಆರೋಪವೂ ಸಾಬೀತಾಗುವುದಿಲ್ಲ. ಅಲ್ಲದೆ ಬುನಿಯಾದೇವಿ ಪಾಂಡಿ ಕರೆಸ್ಪಾಂಡೆಂಟ್‌ ಪ್ರೈ.ಲಿ.ನಿಂದ ಚೆಕ್‌ ಪಡೆದುಕೊಂಡಿದ್ದು 31.08.2004ರಂದು. ಅವರು ಬ್ಯಾಂಕಿನಲ್ಲಿ ಖಾತೆ ತೆರೆಯಲು ಹೋಗಿದ್ದು ಅದರ ಹಿಂದಿನ ದಿನ. ಅವರ ಕೈಯಲ್ಲಿ ಯಾವುದೇ ಚೆಕ್‌ ಇರಲಿಲ್ಲ. ಹೀಗಿರುವಾಗ ಚೆಕ್‌ ಹಾಕುವುದಕ್ಕೆ ಅವಳದೇ ಪ್ರತ್ಯೇಕ ಖಾತೆ ತೆರೆಯುವಂತೆ ಮೆನೇಜರ್‌ ಸಲಹೆ ನೀಡುವುದು ಹೇಗೆ ಸಾಧ್ಯ? ದೊಡ್ಡ ಮೊತ್ತದ ಚೆಕ್‌ ಇದ್ದಾಗ ಪ್ರತ್ಯೇಕ ಉಳಿತಾಯ ಖಾತೆ ತೆರೆಯುವಂತೆ ಸಲಹೆ ನೀಡಬೇಕಿತ್ತು ಎಂದು ರಾಜ್ಯ ಆಯೋಗ ತಾನೇ ದೂರುದಾರರ ಪರವಾಗಿ ಊಹಿಸಿಕೊಂಡಿದ್ದು ಕಾನೂನು ಸಮ್ಮತವಾಗಿಲ್ಲ ಎಂದು ರಾಷ್ಟ್ರೀಯ ಆಯೋಗ ಅಭಿಪ್ರಾಯಪಟ್ಟಿತು.

ಬುನಿಯಾದೇವಿ ನಿರಕ್ಷರಿಯಾಗಿದ್ದರೂ ಅವಳಿಗೆ ಬ್ಯಾಂಕ್ ವ್ಯವಹಾರ ಏನೂ ಗೊತ್ತೇ ಇಲ್ಲ ಎಂದು ಹೇಳುವ ಹಾಗೆ ಇಲ್ಲ. ಏಕೆಂದರೆ ಅವಳು ಉತ್ತರಪ್ರದೇಶದ ತನ್ನ ಸ್ವಂತ ಊರಿನಲ್ಲಿ ತನ್ನ ಗಂಡ ಶಂಭುನಾಥ ಚೌಹಾಣ ಅವರೊಂದಿಗೆ ಕರೆಂಟ್‌‌ ಅಕೌಂಟನ್ನು ಸೆಂಟ್ರಲ್‌ ಬ್ಯಾಂಕ್‌ ಆಫ್ ಇಂಡಿಯಾದಲ್ಲಿ ಹೊಂದಿದ್ದಳು. ಹೀಗಿರುವಾಗ ಬ್ಯಾಂಕ್‌ ಪಾಸ್‌ಬುಕ್‌ ವಿಷಯದಲ್ಲಿ ಅವಳಿಗೆ ಏನೂ ಗೊತ್ತಿಲ್ಲ ಎಂದು ಹೇಳುವ ಹಾಗೆ ಇಲ್ಲ. ಒಂದು ವೇಳೆ ಅವಳು ಪ್ರತ್ಯೇಕ ಖಾತೆ ತೆರೆಯುವಂತೆ ಕೇಳಿದ್ದರೆ ಪಾಸ್‌ಬುಕ್‌ ಬಗ್ಗೆ ವಿಚಾರಿಸಬೇಕಿತ್ತಲ್ಲವೆ? ಒಂದು ವರ್ಷದ ಅವಧಿಯಲ್ಲಿ ಅವಳು ಈ ಬಗ್ಗೆ ವಿಚಾರಿಸಿದ ದಾಖಲೆ ಇಲ್ಲ. ಇವೆಲ್ಲ ಗಮನಿಸಿದಾಗ ತಾನು ತನ್ನ ಗಂಡನ ಸಹೋದರನ ಜಂಟಿ ಖಾತೆಯನ್ನು ಸೇರುತ್ತಿದ್ದೇನೆ ಎಂಬ ಸ್ಪಷ್ಟ ಅರಿವು ಆಕೆಗಿತ್ತು.

ಇದನ್ನೂ ಓದಿ | ಗ್ರಾಹಕ ಜಾಗೃತಿ | ನೆಟ್‌ವರ್ಕ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರಷ್ಟೇ ಯಶಸ್ವಿನಿ ವಿಮೆ ಪರಿಹಾರ

ಅನಕ್ಷರಸ್ಥರು ಖಾತೆ ತೆರೆದಾಗ ಅವರು ಹಣವನ್ನು ಹಿಂದಕ್ಕೆ ಪಡೆಯುವ ಸಂದರ್ಭದಲ್ಲಿ ಅವರನ್ನು ಗುರುತಿಸುವವರು ಒಬ್ಬರು ಜೊತೆಯಲ್ಲಿ ಇರಬೇಕು ಎಂಬ ನಿಯಮವಿದೆ. ಆದರೆ ಒಬ್ಬ ಅಕ್ಷರಸ್ಥನ ಖಾತೆಯಲ್ಲಿ ಜಂಟಿಯಾಗಿ ಸೇರಿದಾಗ ಈ ನಿಯಮ ಅನ್ವಯಿಸುವುದಿಲ್ಲ. ಈ ಕಾರಣಕ್ಕಾಗಿಯೇ ಗುಲಾಬಚಂದ್ರ ಅವರು ಖಾತೆಯಿಂದ ಹಣ ತೆಗೆಯುವುದನ್ನು ಬ್ಯಾಂಕ್‌ ನಿರ್ಬಂಧಿಸಲು ಬರುವುದಿಲ್ಲ. ಆತನು ಹಣ ಹಿಂಪಡೆದ ವಿಷಯದಲ್ಲಿ ರಾಜ್ಯ ಆಯೋಗವು ತಾಳಿದ ಅಭಿಪ್ರಾಯ ಇಂಡಿಯನ್‌ ಬ್ಯಾಂಕಿಂಗ್‌ ಅಸೋಸಿಯೇಶನ್‌ ಅಥವಾ ರಿಸರ್ವ್ ಬ್ಯಾಂಕ್‌ ಆಫ್‌ ಇಂಡಿಯಾದ ನಿಯಮಗಳಿಗೆ ಅನುಗುಣವಾಗಿಲ್ಲ ಎಂದು ಅಭಿಪ್ರಾಯಪಟ್ಟಿತು. ಈ ಹಿನ್ನೆಲೆಯಲ್ಲಿ ಮೂಲ ದಾವೆಯನ್ನು ರಾಷ್ಟ್ರೀಯ ಆಯೋಗ ವಜಾಗೊಳಿಸಿ, ಮೇಲ್ಮನವಿಯನ್ನು ಎತ್ತಿಹಿಡಿಯಿತು.

ತೀರ್ಪು- 03 Jan 2022

(ಲೇಖಕರು ಹಿರಿಯ ಪತ್ರಕರ್ತರು, ಗ್ರಾಹಕ ಹಕ್ಕುಗಳ ಪ್ರತಿಪಾದಕರು. ಹಲವು ವರ್ಷಗಳಿಂದ ಗ್ರಾಹಕರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ.)

Exit mobile version