Site icon Vistara News

ಸಕಾಲಿಕ: ಗುತ್ತಿಗೆ ಕಾರ್ಮಿಕರೆಂಬ ಬಾವಲಿಗಳ ಬವಣೆ ನೀಗುವುದು ಹೇಗೆ?

Asha workers and other contract labors

:: ಮೋಹನದಾಸ ಕಿಣಿ, ಕಾಪು

ರಾಜ್ಯದ ಸರ್ಕಾರ (Karnataka government) ಬದಲಾವಣೆಯಾದ ಕೂಡಲೇ ಸಂಭವಿಸಿದ ಘಟನೆಗಳಲ್ಲಿ ಒಂದು, ಅನುಕಂಪದ ಆಧಾರದಲ್ಲಿ ನೇಮಕವಾದ ಕೆಲವು ನೌಕರರನ್ನು ವಜಾ ಮಾಡಿದ್ದು. ಅದರಲ್ಲಿ ಕಳೆದ ವರ್ಷ ದುಷ್ಕರ್ಮಿಗಳಿಂದ ಹತ್ಯೆಗೀಡಾದ ಪ್ರವೀಣ್ ನೆಟ್ಟಾರ್ ಅವರ ಪತ್ನಿ ನೂತನ ಕುಮಾರಿ ಕೂಡಾ ಒಬ್ಬರು. ಹಾಗೆ ವಜಾ ಮಾಡಿದ ಸುದ್ದಿಗೆ ತೀವ್ರ ಪ್ರತಿಭಟನೆ ವ್ಯಕ್ತವಾಗುತ್ತಿದ್ದಂತೆ ಮುಖ್ಯಮಂತ್ರಿಯವರು ಟ್ವೀಟ್ ಮಾಡಿ ಹೊಸ ಸರಕಾರ ಬರುತ್ತಿದ್ದಂತೆ ಹಳೆ ನೇಮಕಾತಿಗಳು ರದ್ದಾಗುವುದು ಸಹಜ ಪ್ರಕ್ರಿಯೆ. ಅದರಂತೆ 150ಕ್ಕೂ ಹೆಚ್ಚಿನ ನೇಮಕಾತಿಗಳನ್ನು ರದ್ದುಪಡಿಸಲಾಗಿದೆ. ಇದರಲ್ಲಿ ಸರ್ಕಾರದ ಹಸ್ತಕ್ಷೇಪವಿಲ್ಲ. ಆಕೆಯ ಪ್ರಕರಣವನ್ನು ವಿಶೇಷವಾಗಿ ಪರಿಗಣಿಸಿ ಮರು ನೇಮಕಾತಿ ಮಾಡುವುದಾಗಿ ಹೇಳಿದರು. ಇದರಲ್ಲಿ ನೆಟ್ಟಾರ್ ಪತ್ನಿಯ ಪ್ರಕರಣವನ್ನು ಮಾತ್ರ ಮರು ಪರಿಶೀಲನೆ ಮಾಡುವುದೋ ಅಥವಾ ಹಾಗೆ ವಜಾ ಮಾಡಲಾಗಿದ್ದ ಎಲ್ಲವನ್ನೂ ಮಾಡಲಾಗುವುದೋ ಎಂಬುದು ಸ್ಪಷ್ಟವಿಲ್ಲ. ಮುಖ್ಯ ವಿಚಾರವೆಂದರೆ ಹೊಸ ಸರಕಾರ ಬಂದೊಡನೆ ರದ್ದಾಗಲು ಇದು ನಿಗಮ ಮಂಡಳಿಯಂತೆ ರಾಜಕೀಯ ನೇಮಕಾತಿಯೇ? ನಿಗಮ ಮಂಡಳಿ ನೇಮಕಾತಿಗಳು ಸಂಪೂರ್ಣ ರಾಜಕೀಯ ಮತ್ತು ಅವರ್ಯಾರಿಗೂ ಅಂತಹ ನೇಮಕಾತಿ ಪೂರ್ಣಕಾಲಿಕ ಉದ್ಯೋಗವಲ್ಲ. ಆದರೆ ನೆಟ್ಟಾರ್ ಅವರ ಪತ್ನಿಯಂತವರ ನೇಮಕಾತಿ ರದ್ದಾದರೆ ಅವರ ಜೀವನೋಪಾಯ ಸಂಪೂರ್ಣವಾಗಿ ಸ್ಥಗಿತಗೊಳ್ಳುತ್ತದೆ. ಈ ನೇಮಕಾತಿಗಳನ್ನು ರಾಜಕೀಯ ಸ್ಥಿತ್ಯಂತರಕ್ಕೆ ತಳಕು ಹಾಕುವ ಅಗತ್ಯವಿದೆಯೇ? ಇದೂ ಸೇರಿ ಬಹಳಷ್ಟು ಅಸ್ಥಿರ ನೇಮಕಾತಿಗಳಿದ್ದು ಅದೆಲ್ಲದಕ್ಕೂ ಖಾಯಂ ಪರಿಹಾರ ಮಾಡಲಾಗದೇ?

ಒಂದೆಡೆ ರಾಜ್ಯ ಸರಕಾರಿ ನೌಕರರು ಹಳೆಯ ಪಿಂಚಣಿಗಾಗಿ ಮಾಡುತ್ತಿರುವ ಹೋರಾಟ, ಇನ್ನೊಂದೆಡೆ ಆಶಾ ಕಾರ್ಯಕರ್ತೆಯರಿಗೆ, ಅಂಗನವಾಡಿ ಕಾರ್ಯಕರ್ತೆಯರಿಗೆ (anganavadi workers), ಗೌರವಧನ ಬಾಕಿ, ರಾಷ್ಟ್ರೀಯ ಆರೋಗ್ಯ ಅಭಿಯಾನ ಸೇರಿದಂತೆ ವಿವಿಧೆಡೆ ಕಾರ್ಯನಿರ್ವಹಿಸುತ್ತಿರುವ ಗುತ್ತಿಗೆ ನೌಕರರ ಬೇಡಿಕೆಗಳು.

ಮೇಲ್ನೋಟಕ್ಕೆ ಎಲ್ಲರೂ ಸರಕಾರಿ ಉದ್ಯೋಗಿಗಳು. ಆದರೆ ವಿವಿಧ ವರ್ಗದ ಉದ್ಯೋಗಿಗಳಿದ್ದು ಅವರ ನೇಮಕಾತಿ, ಉದ್ಯೋಗದ ಷರತ್ತುಗಳು, ವೇತನ ಮತ್ತಿತರ ಸೌಲಭ್ಯಗಳು, ವೇತನ ಪಾವತಿ ವಿಧಾನ, ವೇತನ ಬಡ್ತಿ, ಉದ್ಯೋಗ ಸ್ಥಿರತೆ, ಅಂತಿಮವಾಗಿ ನಿವೃತ್ತಿ ನಂತರ ಯಾರಿಗೆ ಏನು ಸಿಗುತ್ತದೆ, “ಏನೂ ಸಿಗದವರು” ಯಾರು? ಇತ್ಯಾದಿ ವಿವರಗಳು ಎಷ್ಟು ಜನರಿಗೆ ಗೊತ್ತು?

ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ನೇಮಕಗೊಳ್ಳುವವರದ್ದು ಒಂದು ವರ್ಗವಾದರೆ, ಗುತ್ತಿಗೆ ಆಧಾರದಲ್ಲಿ ನೇಮಕಗೊಡು ಕ್ರಮೇಣ ಖಾಯಂ ಆಗುವವರು, ಗುತ್ತಿಗೆ ಆಧಾರದಲ್ಲಿ ನೇಮಕಗೊಡು ನಿವೃತ್ತಿಯಾಗುವ ತನಕವೂ ಗುತ್ತಿಗೆ ಆಧಾರದಲ್ಲಿಯೇ ಮುಂದುವರಿಯುವವರು ಇನ್ನು ಕೆಲವರು. ಶೋಚನೀಯವೆಂದರೆ, ಇದೆಲ್ಲದಕ್ಕೂ ಮಿಗಿಲಾಗಿ ಹೊರಗುತ್ತಿಗೆ ನೆಲೆಯಲ್ಲಿ ಮಾಡುವ ನೇಮಕಾತಿಗಳು. ಪ್ರತಿಯೊಂದು ವರ್ಗದವರ ಸಮಸ್ಯೆಗಳನ್ನು ವಿಶ್ಲೇಷಣೆ ಮಾಡುವುದಾದರೆ;

1-4-2006ರಿಂದೀಚೆಗೆ ನೇಮಕಗೊಂಡ ಖಾಯಂ ನೌಕರರಿಗೆ ಅದಕ್ಕೂ ಹಿಂದೆ ನೇಮಕಗೊಂಡವರಿಗೆ ಸಿಗುತ್ತಿದ್ದ ರೀತಿಯ ಪಿಂಚಣಿ ಸಿಗುವುದಿಲ್ಲ. ಅವರ ವೇತನದಿಂದ 10% ಕಡಿತಗೊಳಿಸಿ ಸರ್ಕಾರದ 10% ಸೇರಿಸಿ ಮೊತ್ತವನ್ನು ಮ್ಯೂಚುವಲ್‌ ಫಂಡ್ ಮೂಲಕ ಷೇರುಗಳಲ್ಲಿ ತೊಡಗಿಸಲಾಗುತ್ತದೆ. ಉದ್ಯೋಗಿ ನಿವೃತ್ತಿ ಹೊಂದುವಾಗ ಆತನ/ಆಕೆಯ ಅದೃಷ್ಟ ಚೆನ್ನಾಗಿದ್ದರೆ ಒಳ್ಳೆಯ ಮೊತ್ತ ಸಿಗಬಹುದು. ಇಲ್ಲದಿದ್ದರೆ ಇಲ್ಲ. ಇಂತಹ ಅನಿಶ್ಚಿತತೆಯ ಕಾರಣಕ್ಕಾಗಿಯೇ ಹಳೆಯ ಪಿಂಚಣಿ ಸೌಲಭ್ಯಕ್ಕೆ ಒತ್ತಾಯಿಸುತ್ತಿರುವುದು. ಆದರೆ ಇವರಿಗೆ ಪಿಂಚಣಿ ಅನಿಶ್ಚಿತ ಎಂಬುದನ್ನು ಹೊರತುಪಡಿಸಿ ಉದ್ಯೋಗ ಮತ್ತು ವೇತನ, ವೇತನ ಬಡ್ತಿ ಇನ್ನಿತರ ಸೌಲಭ್ಯಗಳಿವೆ.

ರಾಷ್ಟ್ರೀಯ ಆರೋಗ್ಯ ಅಭಿಯಾನ, ಜಲ ಜೀವನ ಅಭಿಯಾನ, ಆಯುಷ್, ಸ್ವಚ್ಛ ಭಾರತ್, ಸ್ಮಾರ್ಟ್ ಸಿಟಿ- ಹೀಗೆ ವಿವಿಧ ಅಭಿಯಾನಗಳಡಿಯಲ್ಲಿ ಗುತ್ತಿಗೆ ಆಧಾರದಲ್ಲಿ ನೇಮಕಾತಿ ಆಗಿ, ವರ್ಷಾನುಗಟ್ಟಲೆ ಕೆಲಸ ಮಾಡುವವರಿಗೆ ಉದ್ಯೋಗ ಖಾತರಿಯಾಗಲೀ, ಪದೋನ್ನತಿ, ವೇತನ ಬಡ್ತಿ ಯಾವುದೂ ಇರುವುದಿಲ್ಲ. ಮಾತ್ರವಲ್ಲ ಪ್ರತೀ ಮಾರ್ಚ್ 31ರಂದು ಅವರನ್ನು ಸೇವೆಯಿಂದ ಬಿಡುಗಡೆ ಮಾಡಿ ಎಪ್ರಿಲ್ 2ರಂದು ಮರು ನೇಮಕಾತಿ ಮಾಡಲಾಗುತ್ತದೆ. ಅವರು ನಿರಂತರ ಸೇವೆಯಲ್ಲಿರಲಿಲ್ಲ ಎಂದು ತೋರಿಸುವುದಕ್ಕಾಗಿ ಹೀಗೆ ಮಾಡಲಾಗುತ್ತದೆ. ಸರ್ವೋಚ್ಚ ನ್ಯಾಯಾಲಯ ಆದೇಶದಂತೆ ನಿರಂತರವಾಗಿ ಸೇವೆಯಲ್ಲಿರುವವರನ್ನು ಖಾಯಂಗೊಳಿಸಬೇಕಾಗುತ್ತದೆ. ಆದ್ದರಿಂದ ಈ “ರಂಗೋಲಿ ಕೆಳಗೆ ತೂರುವ” ಬುದ್ಧಿವಂತಿಕೆ!

ಸರ್ವೋಚ್ಚ ನ್ಯಾಯಾಲಯ ಹೇಳುವಂತೆ ಸಮಾನ ಕರ್ತವ್ಯ ನಿರ್ವಹಿಸುವವರಿಗೆ ಸಮಾನ ವೇತನ ನೀಡಬೇಕು. ವಾಸ್ತವದಲ್ಲಿ ಆಗುತ್ತಿರುವುದೇನು? ಒಂದು ಉದಾಹರಣೆ ನೋಡಿ. ಸರ್ಕಾರಿ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುವ ಎಂಬಿಬಿಎಸ್ ವೈದ್ಯರಲ್ಲಿ ಖಾಯಂ ನೆಲೆಯಲ್ಲಿರುವವರಿಗೆ ಆರಂಭಿಕ ವೇತನ ಭತ್ಯೆಗಳು ಸೇರಿದಂತೆ ಒಂದು ಲಕ್ಷಕ್ಕಿಂತ ಹೆಚ್ಚು. ಅದೇ ಗುತ್ತಿಗೆ ಆಧಾರದಲ್ಲಿರುವವರಿಗೆ ಕೇವಲ 45000/- ಯಾವುದೇ ಭತ್ಯೆ ಇಲ್ಲ. ಕೆಲಸ ಇಬ್ಬರಿಗೂ ಸಮಾನ! ಇದು ಕೇವಲ ಉದಾಹರಣೆ ಮಾತ್ರ. ಎಲ್ಲಾ ಇಲಾಖೆಗಳ ಎಲ್ಲಾ ವರ್ಗದ ಉದ್ಯೋಗಿಗಳಿಗೂ ಇದಕ್ಕಿಂತಲೂ ಕನಿಷ್ಟ ವೇತನ, ಯಾವುದೇ ಉದ್ಯೋಗ ಭದ್ರತೆಯಿಲ್ಲದ ಅತಂತ್ರ ಸ್ಥಿತಿಯಿದೆ.

ಇದನ್ನೂ ಓದಿ: Good News | 11,133 ಪೌರ ಕಾರ್ಮಿಕರ ಕಾಯಂಗೆ ರಾಜ್ಯ ಸಚಿವ ಸಂಪುಟ ಅನುಮೋದನೆ

ಇನ್ನೂಂದು ಸರ್ಕಾರಿ ಪ್ರಾಯೋಜಿತ ಜೀತ ಪದ್ಧತಿಯಿದೆ. ಅದೇ ಹೊರಗುತ್ತಿಗೆ. ಸರ್ಕಾರದ ಇಲಾಖೆಗಳಿಗೆ ಬೇಕಾಗುವ ಸಿಬಂಧಿ ಒದಗಿಸುವ ಟೆಂಡರ್ ಕರೆಯಲಾಗುತ್ತದೆ. ಕಡಿಮೆ ದರ ನಮೂದಿಸಿದ ಸಂಸ್ಥೆಗೆ ಟೆಂಡರ್ ನೀಡಲಾಗುತ್ತದೆ. ಪ್ರತೀ ಬಾರಿ ಈ ಗುತ್ತಿಗೆ ಪಡೆಯುವ ಸಂಸ್ಥೆ ಬದಲಾಗಬಹುದು. ಅಂತಹ ಸಂಸ್ಥೆಗಳಿಗೂ, ನೌಕರರಿಗೆ ಪಾವತಿಸಬೇಕಾದ ಕನಿಷ್ಠ ವೇತನ, ಕಾರ್ಮಿಕ ಭವಿಷ್ಯ ನಿಧಿ ಮುಂತಾದ ಶರತ್ತುಗಳೇನೋ ಇವೆ. ಆದರೆ ಇದನ್ನು ಎಷ್ಟರಮಟ್ಟಿಗೆ ಪಾಲಿಸಲಾಗುತ್ತದೆ?

ಬೇರೆ ವರ್ಗಗಳ ಸಿಬ್ಬಂದಿಗೆ ನೇರವಾಗಿ ಸರ್ಕಾರವೇ ವೇತನ ಪಾವತಿ ಮಾಡುವುದರಿಂದ ಭವಿಷ್ಯ ನಿಧಿಗೆ ದೇಣಿಗೆ ಪಾವತಿ ಮಾಡಲ್ಪಡುತ್ತದೆ. ಅಷ್ಟರಮಟ್ಟಿಗೆ ಅವರ ಹೆಸರಿನಲ್ಲಿ ಒಂದಷ್ಟು ಉಳಿತಾಯ ಆಗುತ್ತದೆ. ಹೊರಗುತ್ತಿಗೆ ಸಿಬ್ಬಂದಿಗೆ ಗುತ್ತಿಗೆ ಪಡೆದ ಸಂಸ್ಥೆ ಪಾವತಿಸಿದರೆ ಉಂಟು. ಒಂದೆರಡು ವರ್ಷ ಗುತ್ತಿಗೆ ಪಡೆದು ನಂತರ ಸಂಸ್ಥೆಯು ಬಾಗಿಲು ಮುಚ್ಚಿಕೊಂಡು ಹೋದರೆ ಸಿಬ್ಬಂದಿಗೆ ಮೂರು ನಾಮ! ಎಲ್ಲಾ ವರ್ಗದವರು ತಮಗೊಂದು ಉದ್ಯೋಗ ಸಿಕ್ಕಿತೆಂಬ ಧೈರ್ಯದಿಂದ ಮದುವೆ, ಮಕ್ಕಳು, ವಸತಿ ಅದಕ್ಕೊಂದಿಷ್ಟು ಸಾಲ ಮಾಡಿದರೆ, ಏಕಾಏಕಿ ಕೆಲಸದಿಂದ ಕಿತ್ತು ಹಾಕಿದರೆ ಏನಾದೀತು ಪರಿಸ್ಥಿತಿ?

ಇದನ್ನೂ ಓದಿ: ವಿಸ್ತಾರ ಅಂಕಣ: ವಿದೇಶದಲ್ಲಿ ಕಾಲಿಟ್ಟ ತಕ್ಷಣ ರಾಹುಲ್ ಗಾಂಧಿ ಭಾರತ ವಿರೋಧಿ ಆಗುವುದೇಕೆ?

ಮೇಲೆ ಹೇಳಲಾದ, ವಿವಿಧ ವರ್ಗದ ಗುತ್ತಿಗೆ ಸಿಬ್ಬಂದಿ (contract labour), ಆಶಾ ಕಾರ್ಯಕರ್ತೆಯರು (Asha workers) ಬಿಸಿಯೂಟ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಒಂದು ರೀತಿಯಲ್ಲಿ ಸಂಘಟಿತರಾಗಿರುವುದರಿಂದ ತಮಗಾಗುವ ಅನ್ಯಾಯದ ವಿರುದ್ದ ಧ್ವನಿ ಎತ್ತುವಷ್ಟರ ಮಟ್ಟಿಗೆ ಇದ್ದಾರೆ. ಹೊರಗುತ್ತಿಗೆ ವ್ಯವಸ್ಥೆಯಲ್ಲಿರುವವರಿಗೆ ಅದೂ ಇಲ್ಲ. ಹಾಗೇನಾದರೂ ಧ್ವನಿ ಎತ್ತಿದರೆ, ನಾಳೆ ಗೇಟ್ ಪಾಸ್ ಪಡೆಯುವ ಭಯದಿಂದ ತೆಪ್ಪಗೆ ಇರುವವರೇ ಹೆಚ್ಚು. ಮೇಲ್ನೋಟಕ್ಕೆ ಸರ್ಕಾರಿ ನೌಕರಿಯೆಂಬ ಹಣೆಪಟ್ಟಿಯಿರುವವರ ಬದುಕು ಅದೆಷ್ಟು ಅಸ್ಥಿರವೆಂಬುದರತ್ತ ಬೆಳಕು ಚೆಲ್ಲುವುದಷ್ಟೇ ಈ ಲೇಖನದ ಉದ್ದೇಶ.

ಒಟ್ಟಿನಲ್ಲಿ ಅತ್ತ ಹಗಲಲ್ಲಿ ಯಾರೂ ಹೇಳಲಾಗದ ನಿದ್ರಾ ಸ್ಥಿತಿ, ಇತ್ತ ರಾತ್ರಿ ವೇಳೆ ಕೇಳುವವರು ಯಾರೂ ಇಲ್ಲದ ಬದುಕು ಸಾಗಿಸುತ್ತಿರುವ ಪ್ರಾಣಿಯೂ ಅಲ್ಲದೆ, ಪಕ್ಷಿಯೂ ಅಲ್ಲದ ಬಾವಲಿಗಳಂತೆ ತ್ರಿಶಂಕು ಬದುಕು ಸಾಗಿಸುತ್ತಿರುವ ಇಂತಹ ವರ್ಗಕ್ಕೆ ಸೇರಿದ ಅಸಂಖ್ಯಾತ ಕಾರ್ಮಿಕರಿದ್ದಾರೆ. ಇವರಿಗೊಂದು ಶಾಶ್ವತವಾದ, ಸ್ಥಿರವಾದ ಬದುಕನ್ನು ರೂಪಿಸುವ ಬದ್ಧತೆ ಆಳುವವರಿಗೆ ಬರಲಿ.

(ಲೇಖಕರು ಹವ್ಯಾಸಿ ಬರಹಗಾರ, ಆರೋಗ್ಯ ಇಲಾಖೆಯ ನಿವೃತ್ತ ಕಚೇರಿ ಅಧೀಕ್ಷಕ)

Exit mobile version