Site icon Vistara News

ಬೆಳಕಿನ ಗರಿ ಅಂಕಣ | ಪರೋಮಿತಾಳ ಒಂದು ದಿನ

paromitha ki ek din

ಮನುಷ್ಯರ ನಡುವಿನ ವಿವಿಧ ರೀತಿಯ ಸಂಬಂಧಗಳ ಸೂಕ್ಷ್ಮತೆಯನ್ನು ನವಿರಾಗಿ ಬಿಡಿಸುವಲ್ಲಿ, ಗಂಡು-ಹೆಣ್ಣಿನ ಬಂಧದೊಳಗಿನ ಜಟಿಲತೆಯನ್ನು ಮನೋಜ್ಞವಾಗಿ ತೆರೆದು ತೋರುವಲ್ಲಿ ಬಂಗಾಲಿ ಚಲನಚಿತ್ರಗಳ ಕೊಡುಗೆ ಬಲು ದೊಡ್ಡದು. ಅವರ ಬಹುತೇಕ ಚಲನಚಿತ್ರಗಳು ಆಯಾ ಕಾಲಘಟ್ಟದ ಮಿತಿಯನ್ನು ದಾಟಿ ಹೊಸ ಸಾಧ್ಯತೆಯತ್ತ ನೋಟವನ್ನು ಬೀರುವಂಥವು. ಇದೇ ಸಾಲಿಗೆ ಸೇರುವಂಥದ್ದು ೨೦೦೦ನೇ ಇಸವಿಯಲ್ಲಿ ಬಿಡುಗಡೆಗೊಂಡ ʻಪರೋಮಿತಾರ್ ಎಕ್ ದಿನ್ʼ (houses of memories) ಎನ್ನುವ ಬಂಗಾಲಿ ಚಲನಚಿತ್ರ.

ಪಾರ್ಕ್‌ ಅವೆನ್ಯೂ, ಮಿಸ್ಟರ್ ಆಂಡ್ ಮಿಸ್ಸೆಸ್ ಅಯ್ಯರ್‌ನಂತಹ ಅತ್ಯುತ್ತಮ ಚಿತ್ರಗಳನ್ನು ನಿರ್ದೇಶಿಸಿರುವ ಅಪರ್ಣಾ ಸೇನ್ ಅವರೇ ಈ ಚಲನಚಿತ್ರವನ್ನೂ ನಿರ್ದೇಶಿಸಿದ್ದಲ್ಲದೇ ತಾವೇ ಅಭಿನಯಿಸಿ, ಪ್ರಮುಖ ಪಾತ್ರವಾದ ಶನುಕಾಳ ಬದುಕನ್ನು ತೆರೆಯ ಮೇಲೆ ಮನೋಜ್ಞವಾಗಿ ತೆರೆದಿಟ್ಟಿದ್ದಾರೆ. ತನ್ನ ಮಾಜಿ ಅತ್ತೆಯ ಕ್ರಿಯಾಕರ್ಮದಲ್ಲಿ ಭಾಗಿಯಾಗಲು ಬರುವ ನಾಯಕಿ ಪರೊಮಿತಾ ಆ ಒಂದಿಡೀ ದಿವಸ ತನ್ನ ಗತ ಜೀವವನವನ್ನು ಮೆಲುಕು ಹಾಕುವುದೇ ಈ ಚಲನಚಿತ್ರದ ಮುಖ್ಯ ಕಥೆ. ಮನುಷ್ಯರ ನಡುವಿನ ವಿವಿಧ ಸಂಬಂಧಗಳನ್ನು, ಬೆಸೆದಿರುವ ಸಂಕೀರ್ಣತೆಯನ್ನು ಬಹಳ ಚಂದದ ನೇಯ್ಗೆಯಲ್ಲಿ ಕಟ್ಟಿದ ಚಲನಚಿತ್ರವಿದು.

ಆದರೆ ಇದಿಷ್ಟೇ ಕಥೆಯಾಗಿಬಿಟ್ಟಿದ್ದರೆ ಅದು ಇನ್ನಾವುದೋ ಅಂಥದ್ದೇ ಕಥೆಯುಳ್ಳ ಸಾಧಾರಣ ಚಿತ್ರವಾಗಿದ್ದುಬಿಡಬಹುದಾಗಿತ್ತು! ಆದರೆ ಈ ಚಿತ್ರವನ್ನು ಬಹು ಎತ್ತರಕ್ಕೆ ಕೊಂಡೊಯ್ಯುವುದು…
೧. ಅತ್ತೆ-ಸೊಸೆಯೆಂದಾಕ್ಷಣ ಉತ್ತರ-ದಕ್ಷಿಣದಂಥ ಅನಿಸಿಕೆಯೇ ಇರಬೇಕೆಂಬ ಸಾಂಪ್ರದಾಯಿಕ ನಿಲುವನ್ನು, ಸ್ಟೀರಿಯೋಟೈಪ್ ಅನುಭವವನ್ನು ಮೀರಿ, ಮಾನವೀಯ ನೆಲೆಗಟ್ಟಿನಲ್ಲಿ ಅರಳಿ ನಿಲ್ಲುವ ಎರಡು ನೋವುಂಡ ಜೀವಗಳ ಕಥನವನ್ನಾಗಿ ನಿರೂಪಿಸಿದ ರೀತಿ.
೨. ಅಂಗವೈಕಲ್ಯವುಳ್ಳ ಮಗುವಿಗೆ ತಾಯಿ ಮತ್ತು ತಂದೆ ತೋರುವ ವಿಭಿನ್ನ ರೀತಿಯ ಸ್ಪಂದನೆ, ಹಂಚಿಕೊಳ್ಳುವ ಜವಾಬ್ದಾರಿಯಲ್ಲಿ ಎದುರಾಗುವ ಸವಾಲುಗಳು ಇವೆಲ್ಲವುಗಳನ್ನೂ ಹಂತಹಂತವಾಗಿ ಪ್ರೇಕ್ಷಕರಿಗೆ ದಾಟಿಸುವ ನಿರ್ದೇಶಕನ ನಿಪುಣತೆ ಮತ್ತು ಆ ಕಥೆಗಳ ನೇಯ್ಗೆಯೊಳಗಿನ ಶ್ರದ್ಧೆ.

ಕ್ಲುಪ್ತವಾಗಿ ಚಿತ್ರಕಥೆಯ ಪ್ರಮುಖಾಂಶವನ್ನು ಹೇಳಬೇಕೆಂದರೆ… ೯೦ರ ದಶದದ ಬಂಗಾಲಿ ಮಧ್ಯಮವರ್ಗದ ಸಂಸಾರವೊಂದರಲ್ಲಿ ನಡೆವ ಅತಿ ಸಾಮಾನ್ಯ ಘಟನೆಗಳೊಳಗಿನ ವಿಶಿಷ್ಟತೆಯನ್ನು ತೋರುವ ಕಥನವಿದು. ಈ ಸಂಸಾರದ ಮುಖ್ಯಸ್ಥೆಯಾಗಿರುವ ಅತ್ತೆ ಶನುಕಾಳಿಗೆ ೨೫ ವರುಷದ ಕ್ರೋನಿಕ್ ಸ್ಕ್ರೀಜೋಫ್ರೇನಿಯಾದಿಂದ ಬಳಲುತ್ತಿರುವ ಮಗಳಿದ್ದಾಳೆ, ಇಬ್ಬರು ಗಂಡುಮಕ್ಕಳು. ಎರಡನೆಯ ಸೊಸೆಯೇ ಪರೊಮಿತಾ. ಹೆತ್ತವರಿಲ್ಲದೇ ಬಂಧುಗಳ ಜೊತೆ ಬದುಕಿದ ಪರೊಮಿತಾ ಒಳ್ಳೆಯ ವಿದ್ಯಾಭ್ಯಾಸ ಮಾಡಿದವಳು. ಮನೆಯವರು ಹುಡುಕಿದ ಹುಡುಗನನ್ನು ವರಿಸಿ, ಶನುಕಳ ಕಿರಿಯ ಸೊಸೆಯಾಗಿ ಬರುತ್ತಾಳೆ. ತನ್ನದೇ ಮೋಜು ಮಸ್ತಿಯಲ್ಲಿ ಮುಳುಗಿರುವ ಗಂಡನಿಗೆ ಹೊಂದಿಕೊಳ್ಳುತ್ತ, ಗಂಡು ಮಗುವಿಗೆ ತಾಯಿಯಾಗಿ ಏನೋ ನೆಮ್ಮದಿ ಕಾಣುವಾಗಲೇ ಆಕೆಗೆ ಗೊತ್ತಾಗುತ್ತದೆ ತನ್ನ ಮಗುವಿಗೆ ಸೆರೆಬ್ರಲ್ ಪಾಲ್ಸಿಯಿದೆ ಎಂದು. ತನ್ನ ಪಾಲಿಗೆ ಧುತ್ತನೆ ಎರಗಿದ ಈ ಅತೀವ ಸಂಕಟದ ಸಮಯದಲ್ಲಿ ತನ್ನ ಪತಿಯ ಬೆಂಬಲಕ್ಕೆ ಹಾತೊರೆಯುವ ಪರೊಮಿತಾ ಒಂದೆಡೆಯಾದರೆ, ಇಂಥ ಮಗುವಿನ ಅಪ್ಪ ತಾನೆಂದು ಹೇಳಿಕೊಳ್ಳಲು ನಾಚಿಕೆ, ಅವಮಾನ. ಜೊಲ್ಲು ಸುರಿಸುವ ಮಗುವಿನ ಬಳಿಯೂ ನುಸುಳದ ಕಠಿಣ ಮನೋಭಾವದ ಪತಿ ಮತ್ತೊಂದೆಡೆ. ಪತ್ನಿಯ ವಂಶಾವಳಿಯಲ್ಲೇ ಏನೋ ದೋಷವಿದ್ದು ಹಾಗಾಗಿದ್ದಿರಬಹುದು ಎಂಬ ಗುಮಾನಿ ಬೇರೆ ಆತನಿಗೆ. ಅಂತಹ ವಿಷಮ ಪರಿಸ್ಥಿತಿಯಲ್ಲೇ ಸೊಸೆಗೆ ಆಸರೆಯಾಗಿ ತನ್ನ ನೋವನ್ನು ತನ್ನ ಸೊಸೆಯ ನೋವಿನ ಜೊತೆ ಸಮೀಕರಿಸಿ ಜೊತೆಗೂಡುವವಳು ಅತ್ತೆ ಶನುಕ! ಪರಿಮಿತಾಳ ದಿಟ್ಟ ನಿರ್ಧಾರಗಳಿಂದ ಆಕೆಯ ಬದುಕು ಮುಂದೆ ಹೇಗೆ ಅರಳಿತು, ಆಕೆ ಹೇಗೆ ಈ ವಾತಾವರಣದಿಂದ ತನ್ನನ್ನು ಪಾರುಮಾಡಿಕೊಂಡಳು ಎಂಬುದೆಲ್ಲವನ್ನು ನೋಡಲು, ಆ ನೇಯ್ಗೆಯನ್ನು ಕಣ್ತುಂಬಿಕೊಳ್ಳಲು ಚಲನಚಿತ್ರವನ್ನು ನೋಡಿದರೇ ಹೆಚ್ಚು ಚೆನ್ನ.

ಇಲ್ಲಿ ಬಹುಮುಖ್ಯವಾಗಿ ಎರಡು ಅಂಶಗಳನ್ನು ನಾವು ಗಮನಿಸಬಹುದು:
ಮೊದಲನೆಯದು:
ಯಾವುದೇ ಸಂಬಂಧ ಬದುಕಲ್ಲಿ ತರಬಹುದಾದ ಆರೋಹಣ ಮತ್ತು ಅವರೋಹಣ. ಒಂದೇ ದೋಣಿಯ ಸಹಪಯಣಿಗರಂತಾದ ಅತ್ತೆ-ಸೊಸೆಯ ನಡುವೆ ಅರಳಿದ ಸಹಜ ಸ್ನೇಹ, ತಾಯಿ-ಮಗಳ ಬಾಂಧವ್ಯ ಮೆಲ್ಲನೆ ಹೊಸ ಹುಮ್ಮಸ್ಸನ್ನು ಬೆಳಕನ್ನು ನೀಡುತ್ತದೆ. ಅತ್ತೆ ಶನುಕ ತನ್ನ ಪತಿಯ ಮರಣದ ನಂತರ ಮತ್ತಷ್ಟು ಕಿರಿಯ ಸೊಸೆಗೆ ಅಂಟಿಕೊಳ್ಳುತ್ತ ಅವಳ ಸಾಂಗತ್ಯದಲ್ಲೇ ನೆಮ್ಮದಿಯನ್ನು ಕಾಣತೊಡಗುತ್ತಾಳೆ. ಅವಳ ಅಗಲಿಕೆಯ ನೋವಿಗೆ ಕುಗ್ಗಿ, ಕೊರಗಿ ಕೊರಡಾಗಿಬಿಡುತ್ತಾಳೆ. ಆದರೆ ಅತ್ತೆಯ ಆಸರೆಯಲ್ಲಿ ಸಾಂತ್ವನ ಪಡೆಯುವ ಸೊಸೆ ತನ್ನ ಮೇಲೆ ಅವಲಂಬಿತಳಾಗಿ, ಸ್ವಂತಿಕೆಯನ್ನು ಆಸರೆಯಾಗಿಸಿಕೊಳ್ಳುತ್ತಾಳೆ. ಆಗಸದೆತ್ತರಕೆ ಚಾಚಿ ಬೆಳೆಯುತ್ತಾ ಹೋಗುತ್ತಾಳೆ. ಜೀವರಸದ ಒರತೆ ಒಂದೆಡೆ ಬತ್ತಿದರೆ, ಮತ್ತೊಂದೆಡೇ ಒಸರುವಂತೆ.

ಇದನ್ನೂ ಓದಿ | ಸಾಲಭಂಜಿಕೆ ಅಂಕಣ | ಬಂಗಾರದಂಥ ಹುಡುಗಿ ನಗ ಬಯಸಿದಳೇ?

ಎರಡನೆಯದಾಗಿ:
ನಮ್ಮ ಸಮಾಜದಲ್ಲಿ ಅಂಗವಿಕಲ ಮಕ್ಕಳನ್ನು ಹೆತ್ತಾಗ ತಾಯಿಯಾದವಳ ಮನಸ್ಥಿತಿ, ಹೋರಾಟ, ಜವಾಬ್ದಾರಿ ಅದೆಂತು ತಂದೆಗಿಂತ ಭಿನ್ನವಾಗಿರುತ್ತದೆ ಎನ್ನುವುದನ್ನು ಬಹಳ ಆಪ್ತವಾಗಿ, ಮನಮಟ್ಟುವಂತೆ ತೋರಲಾಗಿದೆ. ನಾಯಕಿಯ ಸವಾಲಿನ ಬದುಕು ನನಗೆ ಹಲವು ವರುಷಗಳ ಹಿಂದೆ ನಾನು ಮಂಗಳೂರಿನ ‘ಚೇತನಾ’ ಎನ್ನುವ ಬುದ್ಧಿಮಾಂದ್ಯ ಶಾಲೆಗೆ ಭೇಟಿಯಿತ್ತಾಗಿನ ಪ್ರಸಂಗವನ್ನು ನೆನಪಿಸಿತು.

ಅಲ್ಲಿ ಮಕ್ಕಳು ಮಾತ್ರವಲ್ಲ, ಆಯಾ ಮಕ್ಕಳ ತಾಯಂದಿರೂ ತಮ್ಮ ಮಗುವಿನೊಂದಿಗೆ ಟ್ರೈನಿಂಗ್ ಪಡೆಯುತ್ತಿದ್ದರು. ಆಗ ನನಗನ್ನಿಸಿತ್ತು… ಸಾಮಾನ್ಯವಾಗಿ ತಾಯಿಯಾದವಳು ಮಗು ಶಾಲೆಗೆ ಹೋದಾಗ ತನ್ನಿಷ್ಟದ ಹವ್ಯಾಸವನ್ನೋ ಕೆಲಸಕಾರ್ಯಗಳನ್ನೋ, ಆಫೀಸಿನ ಕೆಲಸಗಳನ್ನೋ ಮಾಡಿಕೊಳ್ಳುವಳು. ಆದರೆ ವಿಶಿಷ್ಟ ಚೇತನ ಅದರಲ್ಲೂ ಕಣ್ಣು, ಕಿವಿ, ಮಾತಿನ ಸಮಸ್ಯೆಯಿರುವ ಅಥವಾ ಮಾನಸಿಕ ಅಸ್ವಸ್ಥತೆಯುಳ್ಳ ಮಕ್ಕಳ ತಾಯಂದಿರಿಗೆ ಆ ಸುಖವೂ ಇರದು! ತಮ್ಮ ಮಕ್ಕಳಿಗೆ ಅಲ್ಲಿಯ ಟೀಚರ್ಸ್‌ ಯಾವ ರೀತಿ ಕಲಿಸುತ್ತಾರೆ ಎಂಬುದನ್ನು ನೋಡಿಕೊಂಡು ಅದೇ ರೀತಿ ಮನೆಯಲ್ಲಿ ತರಬೇತಿ ನೀಡುವ ಮಹತ್ತರವಾದ ಹೊಣೆಯಿರುತ್ತದೆ. ಹೀಗಾಗಿ ಅವರು ಮೈಯೆಲ್ಲ ಕಿವಿಯಾಗಿ, ಕಣ್ಣಾಗಿ ಗಮನಿಸುತ್ತಿರುತ್ತಾರೆ! ಆ ಸಮಯದಲ್ಲೇ ತಮ್ಮ ಮಗು ಒಂದು ಅನ್ನದ ಕಾಳನ್ನು ತಾನೇ ತಿನ್ನುವುದನ್ನು ಕಂಡರೂ ಸಾಕು ಆ ತಾಯಿಯ ಮನಸ್ಸು ಅರಳುವುದು, ಸಂತೋಷ ಮೂಡುವುದನ್ನು ಹಿಡಿದಿಡಲು ಯಾವ ಅಕ್ಷರಕ್ಕೂ ಆಗದು! ಇದೇ ರೀತಿಯ ಭಾವವನ್ನು ಕೆಲವೆಡೆ ಬೀರುತ್ತದೆ ಈ ಚಲನಚಿತ್ರ.

ಎಲ್ಲವನ್ನೂ ಕಳೆದುಕೊಂಡು ಕುಸಿಯುವ ಅಸಹಾಯಕ ವೃದ್ಧ ಅತ್ತೆಯ ಪಾತ್ರದಲ್ಲಿ ಅಪರ್ಣಾ ಸೇನ್ ಮತ್ತು ಜಗ್ಗಿ ಎಳೆದಾಡುವ ಅನೇಕ ಬಂಧಗಳನ್ನು ತೊಡೆದುಕೊಂಡು ಹೊಸ ಸಾಧ್ಯತೆಗಳತ್ತ ಮೊಗಮಾಡಿ ದೃಢ ಹೆಜ್ಜೆಯನ್ನಿಟ್ಟು ಸಾಗುವ, ಆದರೂ ಅತ್ತೆಯ ಸಂಕಷ್ಟದ ಸಮಯದಲ್ಲಿ ಮುದಿ ಜೀವಕ್ಕೆ ಮಡಿಲಾಗಿ, ಮಗಳಾಗಿ ಆರೈಕೆ ಮಾಡುವ ಪಾತ್ರದಲ್ಲಿ ರಿತುಪರ್ಣಾ ಸೇನ್‌ಗುಪ್ತಾ– ಇವರಿಬ್ಬರೂ ಪರಸ್ಪರ ಸವಾಲೆಸೆದುಕೊಂಡಂತೆ ಅದ್ಭುತವಾಗಿ ನಟಿಸಿದ್ದಾರೆ.

“ಗಂಡಿಗೆ ಏನೂ ಕೊಡುವುದು ಗೊತ್ತಿಲ್ಲ.. ಎಲ್ಲ ಪಡೆಯವುದೇ.. ನೀನು ಸ್ವಾರ್ಥಿಯಾಗದಿರು… ಮುದಿ ಅತ್ತೆಯ ಬಿಟ್ಟು ಹೋಗದಿರು..” ಎನ್ನುವಾಗ ಆಕೆ ತಡವರಿಸುವ, ತೊದಲುವ.. ಕಣ್ತಪ್ಪಿಸುವ ರೀತಿ… ತಾನೂ ಹೀಗೆ ಹೇಳುವುದರ ಮೂಲಕ ಸ್ವಾರ್ಥಿಯೇ ಆಗುತ್ತಿದ್ದೇನೆಂಬುದನ್ನು ಅರಿತೂ ಹತ್ತಿಕ್ಕಿಕೊಳ್ಳುವ ಆಕೆಯ ಅಸಹಾಯಕತೆ… ಇವೆಲ್ಲವನ್ನು ಕೆಲವೇ ಕೆಲವು ಮಾತು, ಮುಖಭಾವಗಳ ಮೂಲಕ ಎದೆಗೆ ದಾಟಿಸಿಬಿಡುತ್ತಾರೆ ಅಪರ್ಣಾ.

ಇದನ್ನೂ ಓದಿ | ಸವಿಸ್ತಾರ ಅಂಕಣ | ಒಂದೇ ʼಸತ್ಯʼದೆಡೆಗೆ ಚಲಿಸಿದ ಸ್ವಾತಂತ್ರ್ಯ ಹೋರಾಟಗಾರರಲ್ಲಿ ಭಿನ್ನ ಎಣಿಸುವುದು ಅಪರಾಧವಲ್ಲವೇ?

ಇದೆಲ್ಲದರ ನಡುವೆಯೂ ಮಿಂಚಿನಂತೇ ಹೊಳೆಯುವುದು ಮತ್ತೊಂದು ಅಪರೂಪದ ಸಂಬಂಧದ ಎಳೆ! ದೈಹಿಕ ವಾಂಛೆಯನ್ನೂ ಮೀರಿ ಪರಿಶುದ್ಧ ಸ್ನೇಹವನ್ನು, ಮಾನಸಿಕ ಸಾಂಗತ್ಯವನ್ನು ಪಡೆಯಲು ಸಾಧ್ಯತೆಯಿದೆ ಎನ್ನುವುದನ್ನು ನಿರ್ದೇಶಕಿ ಅಪರ್ಣಾ ಅತ್ತೆ ಶನುಕ ಮತ್ತು ಆಕೆಗೆ ಸಾಂತ್ವನ ನೀಡಲು ಪ್ರತಿ ಸಂಜೆ ಅವಳ ಮನೆಗೆ ಬರುವ ಆಕೆಯ ಬಾಲ್ಯದ ಗೆಳೆಯನ (ವೃದ್ಧಾಪ್ಯದತ್ತ ಸಾಗುತ್ತಿರುವ) ಒಡನಾಟದ ಮೂಲಕ ತೆರೆದಿಡುತ್ತಾರೆ. ಆತನೊಂದಿಗೆ ಕ್ಲುಪ್ತವಾಗಿ ಸಂವಹಿಸುವ ಆ ಕೆಲವು ನಿಮಿಷಗಳನ್ನು ತನಗಾಗಿ ಮೀಸಲಿಟ್ಟು ಜೀವಿಸುವ ಅತ್ತೆಯ ಪಾತ್ರವು ಹೊಸ ಹೊಳಹನ್ನು ನೀಡುತ್ತದೆ, ಕಥೆಯನ್ನು ಬೇರೊಂದು ಆಯಾಮಕ್ಕೆ ಕೊಂಡೊಯ್ದುಬಿಡುತ್ತದೆ.

ಚಲನಚಿತ್ರದಲ್ಲಿ ಬರುವ ಟಾಗೋರರ (ರಬೀಂದ್ರ ಸಂಗೀತ್) ಗೀತೆಯೊಂದು ಮನಸ್ಸನ್ನು ಹೊಕ್ಕಿ ಕಾಡಲು, ಅದರ ಭಾವಾನುವಾದವನ್ನು ಮಾಡಲು ಯತ್ನಿಸಿದೆ-

ನನ್ನ ದೋಣಿ ಹಠಾತ್ತನೆ ಮುಳುಗಿತು
ಎಲ್ಲೆಂದು ಯಾರಿಗೆ ಗೊತ್ತು?
ಯಾವ ಬಂಡೆಗೆ ಬಡಿದು ಹೋಳಾಯಿತೆರಡು?

ನನ್ನ ಹೊಸ ದೋಣಿಯನೊಯ್ದು
ನೀರಿನಾಳಕ್ಕಿಳಿಪ ಸಾಹಸವ ನಾ ಮಾಡೆನಯ್ಯ
ಆಳವಿಲ್ಲದೆಡೆ ಅಲೆಗಳೊಂದಿಗೆ ನಾ ಆಡುವಂತೆ
ದೋಣಿಯ ದಡಕೊಯ್ದು ಬಿಡುವೆನೆಯ್ಯ

ನನ್ನ ದೋಣಿ ಹಠಾತ್ತನೆ ಮುಳುಗಿತು
ಎಲ್ಲೆಂದು ಯಾರಿಗೆ ಗೊತ್ತು?
ಯಾವ ಬಂಡೆಗೆ ಬಡಿದು ಹೋಳಾಯಿತೆರಡು?

ಒಂಟಿ ನಾವಿಕನಾಗಿದ್ದೆ ಏರಿಳಿತಗಳ ಜೊತೆಗೆ
ನವಿರಾದ ಗಾಳಿಯೊಂದಿಗೆ ಬೆರೆತು ನಾ ಸಾಗಿದ್ದೆ
ಅಂದು ನಾ ಮುಳುಗಿದ್ದೆ ನನ್ನೊಳಗೆ ಮುದದಿ
ಶುಭ್ರ ಆಗಸದಲಿ ತೇಲುವ ಬೆಳ್ಮೋಡದ ಕೆಳಗೆ
ಸಂತಸದ ಹೂಬನವು ಅರಳಿರುವ ದಡವ
ಭರದಿ ಸೇರೋ ಆಶಯ ತುಂಬಿತ್ತು ಮನದಿ

ನನ್ನ ದೋಣಿ ಹಠಾತ್ತನೆ ಮುಳುಗಿತು
ಎಲ್ಲೆಂದು ಯಾರಿಗೆ ಗೊತ್ತು?
ಯಾವ ಬಂಡೆಗೆ ಬಡಿದು ಹೋಳಾಯಿತೆರಡು?

(ಲೇಖಕರು ಕತೆಗಾರ್ತಿ, ಕವಿ. ಕಾಣ್ಕೆ, ಸಂಹಿತಾ, ಜೋತಯ್ಯನ ಬಿದಿರು ಬುಟ್ಟಿ ಕಥಾ ಸಂಕಲನಗಳು; ಹೊರಳುದಾರಿ, ಹಂಸಯಾನ ಕಾದಂಬರಿಗಳು; ಚಿಗುರು, ಪ್ರತಿಬಿಂಬ ಕವನ ಸಂಕಲನಗಳು; ತನ್ನ ತಾನ ಅಂಕಣ ಬರಹಗಳ ಸಂಕಲನ)

Exit mobile version