ಅಂತರ್ಜಾಲ (Internet) ನಮ್ಮ ಅಂಗೈಯಲ್ಲಿ ಇರುವ ಮಾಧ್ಯಮದ ಯುಗದಲ್ಲಿ, ನಮ್ಮ ಆನ್‌ಲೈನ್ ಗುರುತುಗಳು (Online Identity) ಸಾಮಾನ್ಯವಾಗಿ ನಮ್ಮ ಭೌತಿಕ ಸ್ವಯಂಗಳ ವಿಸ್ತರಣೆಯಾಗಿದೆ. ಆದರೆ ಯಾರಾದರೂ ಆ ಗುರುತನ್ನು ನಿಯಂತ್ರಣಕ್ಕೆ ತೆಗೆದುಕೊಂಡಾಗ ಮತ್ತು ಗುರುತಿಸಲಾಗದಷ್ಟು ವಿರೂಪಗೊಳಿಸಿದಾಗ ಏನಾಗುತ್ತದೆ? ಸಂತಸದ ಕ್ಷಣಗಳನ್ನು ಹಂಚಿಕೊಳ್ಳಲು ಅಪ್‌ಲೋಡ್ ಮಾಡಿದ ಫೊಟೋ ನಿಮ್ಮ ಭವಿಷ್ಯಕ್ಕೆ ಮಸಿ ಬಳಿಯಬಹುದೇ? ಓದಿ ನೀವೆ ನಿರ್ಧರಿಸಿ.
ದೆಹಲಿಯಲ್ಲಿ ಮಹಿಳೆಯೊಬ್ಬರ ಹಲವಾರು ಇನ್‌ಸ್ಟಾಗ್ರಾಮ್ ಖಾತೆಗಳನ್ನು (instagram account) ರಚಿಸಿ ಅವರ ಮಾರ್ಫ್ ಮಾಡಿದ ಫೋಟೋಗಳನ್ನು ಅಪ್‌ಲೋಡ್ ಮಾಡಲಾಗಿತ್ತು. ಇದಕ್ಕೆ ಕಾರಣಕರ್ತ ಎಂದು ರೋಷನ್ ಶರ್ಮಾ ಎಂದು ಗುರುತಿಸಲಾದ ಆರೋಪಿಯನ್ನು ದೆಹಲಿ ಪೊಲೀಸ್ ಸೈಬರ್ ಸೆಲ್ ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿ ಬಂಧಿಸಿದೆ. ಹೆಚ್ಚಿನ ತನಿಖೆಯ ನಂತರ, ದೂರುದಾರರ ಅಶ್ಲೀಲ ಫೋಟೋಗಳು ಮತ್ತು ಮಾರ್ಫ್ ಮಾಡಿದ ಚಿತ್ರಗಳೊಂದಿಗೆ ಮೂರು ಇನ್ಸಟಾಗ್ರಾಮ್ ಪ್ರೊಫೈಲ್‌ಗಳು ಪತ್ತೆಯಾಗಿವೆ.
ಇತ್ತೀಚೆಗೆ ಒರಿಸ್ಸಾ ರಾಜ್ಯ ಪೋಲಿಸರು ನಕಲಿ ಇನ್‌ಸ್ಟಾಗ್ರಾಮ್ ಖಾತೆಯನ್ನು ರಚಿಸಿ ಅಪ್ರಾಪ್ತ ಬಾಲಕಿಯ ಮಾರ್ಫ್ ಮಾಡಿದ ಫೋಟೋಗಳನ್ನು (Morphed images) ಪ್ರಸಾರ ಮಾಡಿದ್ದಕ್ಕಾಗಿ 24 ವರ್ಷದ ವ್ಯಕ್ತಿಯನ್ನು ಬಂಧಿಸಿದ್ದಾರೆ. ದುಷ್ಕರ್ಮಿಯನ್ನು ದಿನೇಶ್ ಕುಮಾರ್ ಸೇಥಿ ಅಲಿಯಾಸ್ ಬಾಬು, ಕೇಂದ್ರಪಾರದ ಪಟ್ಟಮುಂಡೈ ಮೂಲದವನು ಎಂದು ಗುರುತಿಸಿದ್ದಾರೆ.
ತುಳಸಿಪುರದ ಯುವಕನೊಬ್ಬ ತನ್ನ 17 ವರ್ಷದ ಸಹೋದರಿಯ ಹೆಸರಿನಲ್ಲಿ ನಕಲಿ ಇನ್‌ಸ್ಟಾಗ್ರಾಮ್ ಖಾತೆ ಇರುವುದನ್ನು ವರದಿ ಮಾಡಿದಾಗ ಪ್ರಕರಣ ಬಯಲಾಗಿದೆ. ಈ ಖಾತೆಯಲ್ಲಿ ಆಕೆಯ ಮಾರ್ಫ್ ಮಾಡಿದ ಚಿತ್ರಗಳನ್ನು ಅಪ್‌ಲೋಡ್ ಮಾಡಿರುವುದು ಮಾತ್ರವಲ್ಲದೆ, ಇತರ ಯುವತಿಯರ ಫೋಟೋಗಳನ್ನೂ ಮಾರ್ಫ್ ಮಾಡಿ ಹಾಕಿರುವುದನ್ನು ಸಹ ದೂರುದಾರರು ಕಂಡಿದ್ದಾರೆ. ಇದರಿಂದ ಸೈಬರ್ ಮತ್ತು ಆರ್ಥಿಕ ಅಪರಾಧಗಳ ಪೊಲೀಸರು ತನಿಖೆಯನ್ನು ತ್ವರಿತವಾಗಿ ಪ್ರಾರಂಭಿಸಿದರು.
ಇನ್‌ಸ್ಟಾಗ್ರಾಮ್‌ನಿಂದ ಪಡೆದ ತಾಂತ್ರಿಕ ಡೇಟಾವನ್ನು ಬಳಸಿಕೊಂಡು, ಅಧಿಕಾರಿಗಳು ಆರೋಪಿಯನ್ನು ಪಟ್ಟಮುಂಡೈಯಲ್ಲಿ ಪತ್ತೆಹಚ್ಚಿ ಕಸ್ಟಡಿಗೆ ತೆಗೆದುಕೊಳ್ಳಲು ಸಾಧ್ಯವಾಯಿತು. ಕೂಲಿ ಕೆಲಸ ಮಾಡುತ್ತಿದ್ದ ದುಷ್ಕರ್ಮಿಯು ದೆಹಲಿ, ಬೆಂಗಳೂರು ಮತ್ತು ಮಹಾರಾಷ್ಟ್ರದಂತಹ ಮೆಟ್ರೋಪಾಲಿಟನ್ ನಗರಗಳಲ್ಲಿ ಉದ್ಯೋಗದ ಇತಿಹಾಸವನ್ನು ಹೊಂದಿದ್ದಾನೆ ಎಂದು ಹೆಚ್ಚಿನ ಪರಿಶೀಲನೆಯಿಂದ ತಿಳಿದುಬಂದಿದೆ. ಅವನು ಈ ಪ್ರದೇಶಗಳಲ್ಲಿ ಇದ್ದ ಸಾರ್ವಜನಿಕ ಫ್ರೊಫೈಲ್‌ಗಳನ್ನು ಹೊಂದಿರುವ ಹುಡುಗಿಯರ ಇನ್‌ಸ್ಟಾಗ್ರಾಂ ಪ್ರೊಫೈಲ್‌ಗಳನ್ನು ಹಿಂಬಾಲಿಸುತ್ತಿದ್ದ. ಅವರಿಂದ ವೈಯಕ್ತಿಕ ಮಾಹಿತಿಯನ್ನು ಪಡೆಯುವ ಸಲುವಾಗಿ ಅವರೊಂದಿಗೆ ಸಂದೇಶ ಸಂಪರ್ಕ ಇಟ್ಟುಕೊಂಡಿದ್ದ.
ಅವನ ಸಂದೇಶಗಳಿಂದ ಪ್ರೇರಿತರಾಗಿ ಅಪ್‌ಲೋಡ್ ಮಾಡಿದ್ದ ಫೋಟೋಗಳನ್ನು ಬಳಸಿಕೊಂಡು ಹುಡುಗಿಯರ ಹೆಸರಿನಲ್ಲಿ ನಕಲಿ ಖಾತೆಗಳನ್ನು ರಚಿಸಿ ಪೋಸ್ಟ್ ಮಾಡ್ತಿದ್ದ. ಅದರ ಮೊದಲು ಅವುಗಳನ್ನು ಮಾರ್ಫ್ ಮಾಡಿ, ಅಶ್ಲೀಲಗೊಳಿಸುತ್ತಿದ್ದ. ಇವುಗಳನ್ನು ಅಳಿಸುವುದಕ್ಕೆ ಬದಲಾಗಿ ಅವನು ವಿಕ್ಟಿಮ್‌ಗಳಿಂದ ಹಣ ಕೇಳುತ್ತಿದ್ದ. ಆಘಾತಕಾರಿ ಸಂಗತಿಯೆಂದರೆ, ಆರೋಪಿಯು ಕಿರುಕುಳ ಮತ್ತು ಬ್ಲ್ಯಾಕ್‌ಮೇಲ್ ಮಾಡುವ ಸ್ಪಷ್ಟ ಉದ್ದೇಶದಿಂದ 100ಕ್ಕೂ ಹೆಚ್ಚು ಯುವತಿಯರ ಪೊಟೋಗಳನ್ನು ಅಶ್ಲೀಲಗೊಳಿಸಿ ಅಪ್‌ಲೋಡ್ ಮಾಡಿದ್ದಾನೆ ಎಂದು ಅಂದಾಜಿಸಲಾಗಿದೆ.
ನಮ್ಮ ಬೆಂಗಳೂರಿನಲ್ಲೂ ದಾಖಲಾದ ಒಂದು ಪ್ರಕರಣದಲ್ಲಿ ಹದಿಹರೆಯದ ಹುಡುಗಿಯ ಚಿತ್ರವನ್ನು ಅವಳ ತಂದೆಯ ಫೇಸ್ಬುಕ್ ಪೋಸ್ಟಿನಿಂದ ಪಡೆದು ಬೆಂಗಾವಲು ಸೇವೆ (escort service) ಒದಗಿಸುವ ಸೈಟ್‌ನಲ್ಲಿ ಅಪ್‌ಲೋಡ್ ಮಾಡಿದ್ದರು. ಅದನ್ನು ತೆಗೆಯಲು ಅವಳ ತಂದೆಯನ್ನು ಹಣಕ್ಕಾಗಿ ಪೀಡಿಸಿದ್ದರು.
ಈ ಘಟನೆಗಳು ಸಾಮಾಜಿಕ ಮಾಧ್ಯಮ (Social media) ಪ್ಲಾಟ್‌ಫಾರ್ಮ್‌ಗಳನ್ನು ಕೆಟ್ಟ ಉದ್ದೇಶಗಳಿಗಾಗಿ ಬಳಸಿಕೊಳ್ಳುವ ಸೈಬರ್ ಅಪರಾಧಗಳು ಹೆಚ್ಚುತ್ತಿರುವ ಬಗ್ಗೆ ಬೆಳಕು ಚೆಲ್ಲುತ್ತದೆ. ಸಮಾಜವು ಸಾಮಾಜಿಕ ಮಾಧ್ಯಮದ ಮೇಲೆ ಹೆಚ್ಚು ಅವಲಂಬಿತವಾಗುತ್ತಿದ್ದಂತೆ, ಇಂತಹ ಘಟನೆಗಳು ಸೈಬರ್ ಸುರಕ್ಷತಾ ಕ್ರಮಗಳು ಮತ್ತು ಆನ್‌ಲೈನ್ ಸುರಕ್ಷತೆಯ ಅರಿವಿನ ತುರ್ತು ಅಗತ್ಯವನ್ನು ಒತ್ತಿಹೇಳುತ್ತವೆ.
ಅಂತರ್ಜಾಲದ ಆಂತರ್ಯದಲ್ಲಿರುವ ಅಪಾಯಗಳ ಬಗ್ಗೆ ಯುವಪೀಳಿಗೆಗೆ ಅರಿವು ನೀಡುವಲ್ಲಿ ಪೋಷಕರು, ಮತ್ತು ಶಿಕ್ಷಕರು ಜಾಗರೂಕರಾಗಿರಬೇಕು. ಅರಿವೊಂದೇ ಅಪಾಯದಿಂದ ರಕ್ಷಿಸುತ್ತದೆ. ಜೊತೆಗೆ ಸಾಮಾಜಿಕ ಜಾಲತಾಣಗಳಾದ ಫೇಸ್ಬುಕ್, ಇನ್‌ಸ್ಟಾಗ್ರಾಂ, ಟ್ವಿಟ್ಟರ್, ಥ್ರೆಡ್ಸ್ ಇತ್ಯಾದಿಗಳಲ್ಲಿ ನಮ್ಮ ಸೆಲ್ಫಿ, ಮತ್ತಿತರ ಫೊಟೋಗಳನ್ನು ಅಪ್‌ಲೋಡ್ ಮಾಡುವ ಮುನ್ನ ಜಾಗರೂಕರಾಗಿದ್ದರೆ ಮತ್ತು ಸ್ನೇಹದ ವಿನಂತಿಗಳನ್ನು ಒಪ್ಪಿಕೊಳ್ಳುವ ಮುನ್ನ ವಿವೇಚನೆಯಿಂದ ನಿರ್ಧರಿಸಿದರೆ ಬಹಳಷ್ಟು ಸಂಕಷ್ಟಗಳಿಂದ ಪಾರಾಗಬಹುದು. ಕಣ್ಣಾರೆ ಕಂಡರೂ ಪರಾಂಬರಿಸಿ ನೋಡು ಎನ್ನುವುದು ಇಲ್ಲಿಗೆ ಅಕ್ಷರಶಃ ಅನ್ವಯಿಸುತ್ತದೆ. ಜಾಗರೂಕರಾಗಿದ್ದರೆ ನಾವು ಈ ಹೊಸ ಅಲೆಯ ಸೈಬರ್ ಅಪರಾಧಗಳನ್ನು ಎದುರಿಸಬಹುದು ಮತ್ತು ನಮ್ಮ ಯುವಜನರ ಮುಗ್ಧತೆ ಮತ್ತು ಯೋಗಕ್ಷೇಮವನ್ನು ರಕ್ಷಿಸಬಹುದು.
ಈಗ ಇಂತಹ ಕ್ರೈಮ್‌ಗಳಿಂದ ಬಚಾವಾಗಲು ಕೈಗೊಳ್ಳಬೇಕಾದ ಸುರಕ್ಷತಾ ಕ್ರಮಗಳ ಬಗ್ಗೆ ತಿಳಿದುಕೊಳ್ಳೋಣ. ಅದರಲ್ಲೂ ಮುಖ್ಯವಾಗಿ ನೀವು ಅಪ್‌ಲೋಡ್ ಮಾಡಿದ ಫೊಟೋಗಳ ಸುರಕ್ಷತೆ.
1) ಆಂಡ್ರಾಯ್ಡ್ ಫೇಸ್ಬುಕ್ ಆ್ಯಪ್
ನಿಮ್ಮ ಪ್ರಸ್ತುತ ಪ್ರೊಫೈಲ್ ಫೋಟೋ ಮತ್ತು ಕವರ್ ಫೋಟೋದಂತಹ ಕೆಲವು ಫೋಟೋಗಳು ಯಾವಾಗಲೂ ಸಾರ್ವಜನಿಕವಾಗಿರುತ್ತವೆ ಎಂಬುದನ್ನು ನೆನಪಿನಲ್ಲಿಡಿ.
ನಿಮ್ಮ ಫೋಟೋಗಳ ಗೌಪ್ಯತೆ ಸೆಟ್ಟಿಂಗ್‌ಗಳನ್ನು ಎಡಿಟ್ ಮಾಡಲು:
• ಫೇಸ್‌ಬುಕ್‌ನ ಮೇಲಿನ ಬಲಭಾಗದಲ್ಲಿರುವ ನಿಮ್ಮ ಪ್ರೊಫೈಲ್ ಚಿತ್ರವನ್ನು ಕ್ಲಿಕ್ ಮಾಡಿ.
• ಫೋಟೋಗಳನ್ನು ಕ್ಲಿಕ್ ಮಾಡಿ, ನಂತರ ನಿಮ್ಮ ಫೋಟೋಗಳನ್ನು ಕ್ಲಿಕ್ ಮಾಡಿ.
• ನೀವು ಗೌಪ್ಯತೆ ಸೆಟ್ಟಿಂಗ್‌ಗಳನ್ನು ಬದಲಾಯಿಸಲು ಬಯಸುವ ಫೋಟೋವನ್ನು ಕ್ಲಿಕ್ ಮಾಡಿ.
• ಮೇಲಿನ ಬಲಭಾಗದಲ್ಲಿ ಕ್ಲಿಕ್ ಮಾಡಿ.
• ಪೋಸ್ಟ್ ಪ್ರೇಕ್ಷಕರನ್ನು ಸಂಪಾದಿಸು ಕ್ಲಿಕ್ ಮಾಡಿ.
• ನೀವು ಫೋಟೋವನ್ನು ಹಂಚಿಕೊಳ್ಳಲು ಬಯಸುವ ಪ್ರೇಕ್ಷಕರನ್ನು ಆಯ್ಕೆಮಾಡಿ.
• ಇದನ್ನು ಸೇವ್ ಮಾಡಿ.
ಹೆಚ್ಚಿನ ಸಂದರ್ಭಗಳಲ್ಲಿ, ಫೋಟೋವನ್ನು ಆಲ್ಬಮ್‌ನ ಭಾಗವಾಗಿ ಹಂಚಿಕೊಂಡಿದ್ದರೆ, ನೀವು ಸಂಪೂರ್ಣ ಆಲ್ಬಮ್‌ಗಾಗಿ ಗೌಪ್ಯತೆ ಸೆಟ್ಟಿಂಗ್‌ಗಳನ್ನು ಬದಲಾಯಿಸಬೇಕಾಗುತ್ತದೆ.
ಪ್ರೊಫೈಲ್ ಚಿತ್ರಗಳು ಮತ್ತು ಕವರ್ ಫೋಟೋಗಳು ಸೇರಿದಂತೆ ಕೆಲವು ಆಲ್ಬಮ್‌ಗಳಲ್ಲಿ ವೈಯಕ್ತಿಕ ಫೋಟೋಗಳಿಗಾಗಿ ನೀವು ಗೌಪ್ಯತೆ ಸೆಟ್ಟಿಂಗ್‌ಗಳನ್ನು ಮಾತ್ರ ಎಡಿಟ್ ಮಾಡಬಹುದು. ಹೆಚ್ಚಿನ ಸುರಕ್ಷತೆಗೆ ಈ ಲಿಂಕ್ ಮೂಲಕ ಫೇಸ್ಬುಕ್ಕಿನ ಸಹಾಯ ಪುಟಗಳನ್ನು ಗಮನಿಸಿ.
ಇದನ್ನೂ ಓದಿ: ಸೈಬರ್ ಸೇಫ್ಟಿ ಅಂಕಣ: ಬೆಳಕಿನ ಹಬ್ಬದ ಕರಾಳ ಮುಖ
2) ಇನ್‌ಸ್ಟಾಗ್ರಾಂ
ನಿಮ್ಮ ಪೋಸ್ಟ್‌ಗಳನ್ನು ಯಾರು ನೋಡಬಹುದು, ನಿಮ್ಮ ಪೋಸ್ಟ್‌ಗಳಲ್ಲಿ ಯಾರು ಕಾಮೆಂಟ್ ಮಾಡಬಹುದು ಮತ್ತು ನಿಮ್ಮನ್ನು ಯಾರು ಅನುಸರಿಸುತ್ತಾರೆ ಎಂಬುದರ ಮೇಲೆ ನಿಮಗೆ ನಿಯಂತ್ರಣವಿದೆ. ನಿಮ್ಮಂದಿಗೆ ಇತರರು ಹೇಗೆ ಸಂವಹನ ನಡೆಸುತ್ತಾರೆ ಎಂಬುದನ್ನು ಸಹ ನೀವು ಮಿತಿಗೊಳಿಸಬಹುದು.
ಇಲ್ಲಿ ನಿಮ್ಮ ಗೌಪ್ಯತೆಯನ್ನು ಲಾಕ್ ಮಾಡುವುದು ನಿಮ್ಮ ಪ್ರೊಫೈಲ್ ಅನ್ನು “ಖಾಸಗಿ” ಎಂದು ಆಯ್ಕೆ ಮಾಡಿದಷ್ಟು ಸರಳವಾಗಿದೆ. ಆದರೆ ನೀವು ಅದಕ್ಕಿಂತ ಹೆಚ್ಚಿನ ಸುರಕ್ಷತೆಯನ್ನು ಪಡೆಯಬಹುದು. ನೀವು ಸೆಟ್ ಮಾಡಬಹುದಾದ ಅನೇಕ ಸುರಕ್ಷತಾ ಕ್ರಮಗಳಿವೆ. ನಿಮ್ಮ ಖಾತೆಯನ್ನು ನೀವು ಸಾರ್ವಜನಿಕವಾಗಿ ಇರಿಸಬಹುದು. ಆದರೆ ಅದನ್ನು ಸ್ವಲ್ಪ ಹೆಚ್ಚು ಭದ್ರಗೊಳಿಸಬಹದು. ಸುಲಭವಾಗಿ ನಿಮ್ಮ ಸುರಕ್ಷತೆಯನ್ನು ರೂಪಿಸಿಕೊಳ್ಳುವ ಬಗ್ಗೆ ಮುಂದಿನ ವಾರ ತಿಳಿಸುತ್ತೇನೆ.
ಇದನ್ನೂ ಓದಿ: ಸೈಬರ್ ಸೇಫ್ಟಿ ಅಂಕಣ: ಇಂಟರ್ನೆಟ್ ಬ್ಯಾಂಕಿಂಗ್ ವಂಚನೆ ತಡೆಯಲು ಕೆಲವು ಟಿಪ್ಸ್