ಹೊಸ ಅಪ್ಲಿಕೇಶನ್‌ಗಳನ್ನು ಡೌನ್‌ಲೋಡ್ ಮಾಡುವ ಮುನ್ನ ಇದು ತಿಳಿದಿರಲಿ…!
ಅಂತರ್ಜಾಲ ನಮ್ಮ ಜೀವನದ ಅವಿಭಾಜ್ಯ ಅಂಗವಾಗಿದೆ. ವೈಯಕ್ತಿಕವಾಗಿ ಮತ್ತು ವೃತ್ತಿಪರವಾಗಿ ಇಂಟರ್ನೆಟ್ ಬಳಸದೆ ನಮ್ಮ ದಿನ ನಿತ್ಯದ ಕೆಲಸಗಳು ಅಸಾಧ್ಯ ಎನ್ನುವ ಮಟ್ಟಕ್ಕೆ ಮುಟ್ಟಿದ್ದೇವೆ. ಭಾರತವು 120 ಕೋಟಿ ಮೊಬೈಲ್ ಫೋನ್ ಬಳಕೆದಾರರನ್ನು ಮತ್ತು ಅದರ ಅರ್ಧಕ್ಕೂ ಹೆಚ್ಚಿನ ಸ್ಮಾರ್ಟ್ ಫೋನ್ ಬಳಕೆದಾರರನ್ನು ಹೊಂದಿದೆ ಎಂದು ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಕಾರ್ಯದರ್ಶಿ ಅಪೂರ್ವ ಚಂದ್ರ ಕಳೆದ ವರ್ಷ ಹೇಳಿದ್ದರು. ಮೊಬೈಲ್ ತಂತ್ರಜ್ಞಾನ ಅಭಿವೃದ್ಧಿಯಾಗಿ ಸ್ಮಾರ್ಟ್ ಫೋನುಗಳ ಬಳಕೆ ಎಲ್ಲಡೆಯಲ್ಲೂ ವ್ಯಾಪಕವಾಗ್ತಿದೆ. ಯುವ ಪೀಳಿಗೆಗಂತೂ ಕಲಿಯಲು, ಸಂವಹನ ಮಾಡಲು ಮತ್ತು ಅವರ ಜೊತೆಯವರ ಗುಂಪುಗಳಲ್ಲಿ ವೈಯಕ್ತಿಕ ಗುರುತನ್ನು ರೂಪಿಸಿಕೊಳ್ಳಲು ಸಹಾಯ ಮಾಡುವ ಅತ್ಯಗತ್ಯ ಸಾಧನವಾಗಿದೆ. ಅದರೆ ಸ್ಪಷ್ಟ ಶೈಕ್ಷಣಿಕ ಪ್ರಯೋಜನಗಳ ಹೊರತಾಗಿಯೂ, ಮಕ್ಕಳು ವಯಸ್ಕರ ಮಾರ್ಗದರ್ಶನವಿಲ್ಲದೆ ಇಂಟರ್ನೆಟ್ ಅನ್ನು ಬಳಸುವಲ್ಲಿ ಸಮಸ್ಯೆಗಳು ಉದ್ಭವಿಸುತ್ತವೆ.
ಡೇಟಾ ದರಗಳು ಕಡಿಮೆಯಾದ ಕಾರಣ, ನಾವೆಲ್ಲರೂ ಸ್ಮಾರ್ಟ್ ಫೋನ್‌ಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಮಾಹಿತಿ ಮತ್ತು ಮನರಂಜನೆಗೆ ಬಳಸುತ್ತಿದ್ದೇವೆ. ಮೊಬೈಲ್ ಮೂಲಕ ಸಾಮಾಜಿಕ ಮಾಧ್ಯಮವು ಭಾರತದಲ್ಲಿ ಬಹಳ ವೇಗವಾಗಿ ಜನರನ್ನು ಮಾಹಿತಿಯ ಮುಖ್ಯವಾಹಿನಿಗೆ ಸೆಳೆದಿದೆ. ಎಲ್ಲಾ ವಯೋಮಾನದವರು ಸ್ಮಾರ್ಟ್‌ಫೋನ್‌ಗಳಿಂದ, ಬೆರಳಿನ ಸ್ವೈಪ್‌ನಲ್ಲಿ ಇಂಟರ್ನೆಟ್‌ಗೆ ತ್ವರಿತ ಮತ್ತು ಸುಲಭ ಪ್ರವೇಶ ಪಡೆದುಕೊಳ್ಳುತ್ತಾರೆ. ಆದರೆ ಅಂಗೈಯಲ್ಲಿ ಲಭ್ಯವಿರುವ ಅಂತರ್ಜಾಲದಿಂದ ಆಗುವ ಅಪಾಯಗಳು ಬಹಳಷ್ಟು ಜನರಿಗೆ ತಿಳಿದಿಲ್ಲ. ಇದರ ಬಗ್ಗೆ ಅರಿವೊಂದೇ ಆಪದ್ರಕ್ಷಕ.
ವಿವಿಧ ರೀತಿಯ ಡಿಜಿಟಲ್ ವಂಚನೆಗಳಲ್ಲಿ ಶೇಕಡಾ ಅರವತ್ತಕ್ಕಿಂತ ಹೆಚ್ಚು ಮೊಬೈಲ್ ಸಾಧನಗಳಲ್ಲಿ ಆಗಿದೆ. ಬ್ಯಾಂಕಿಂಗ್‌ನಂತಹ ಸೂಕ್ಷ್ಮ ವ್ಯವಹಾರಕ್ಕಾಗಿ ನಮ್ಮ ಫೋನ್‌ಗಳನ್ನು ಬಳಸುವುದು ಭದ್ರತೆಯ ಬಗ್ಗೆ ತಿಳಿದು ಸುರಕ್ಷತೆಗಳನ್ನು ಅಳವಡಿಸಿ ಕೊಳ್ಳುವುದು ಬಹಳ ಅಗತ್ಯವಾದೆ.
ದಿನನಿತ್ಯ ನಾವೆಲ್ಲಾ ನಮ್ಮ ಫೋನ್ ಅನ್ನು ಹೆಚ್ಚು ಅವಲಂಬಿಸಿದ್ದೇವೆ. ನೀವು ನಿಮ್ಮ ಮೊಬೈಲಿನ ಸುರಕ್ಷತೆಯಲ್ಲಿ ರಾಜಿ ಮಾಡಿಕೊಂಡರೆ ಅದು ನಿಮ್ಮ ಜೀವನದ ಮೇಲೂ ಪರಿಣಾಮ ಬೀರುತ್ತದೆ. ನಿಮ್ಮ ಅಂತರ್ಜಾಲದ ಮುಖ್ಯವಾದ ಖಾತೆ ಮತ್ತು ಅತಿ ಹೆಚ್ಚು ಬಳಸುವ ಆಪ್ ಗಳ ಭದ್ರತೆ ಕುರಿತು ಕಳೆದ ಮೂರು ವಾರಗಳಲ್ಲಿ ತಿಳಿಸಿದ್ದೇನೆ. ಇವತ್ತು ನಿಮ್ಮ ಸ್ಮಾರ್ಟ್ ಫೋನ್ ಭದ್ರತೆಗೆ ಉಂಟಾಗುವ ಕೆಲವು ದೊಡ್ಡ ಆಪತ್ತುಗಳನ್ನು ಅರಿತುಕೊಳ್ಳೋಣ.
ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಹೊಸ ಅಪ್ಲಿಕೇಶನ್ ಅನ್ನು ಸ್ಥಾಪಿಸುವ ಮೊದಲು, ಅದರ ಬಗ್ಗೆ ಸರಿಯಾಗಿ ತಿಳಿದುಕೊಳ್ಳುವುದು ಒಳ್ಳೆಯದು. ಪ್ರತಿಯೊಂದು ಸ್ಮಾರ್ಟ್‌ಫೋನ್ ಅಪ್ಲಿಕೇಶನ್ ನಿಮ್ಮ ಫೋನ್‌ನಿಂದ ಡೇಟಾವನ್ನು ಸಂಗ್ರಹಿಸುತ್ತದೆ. ಆ ಮಾಹಿತಿಯು ನಿಮ್ಮ ಹೆಸರು, ಜನ್ಮ ದಿನಾಂಕ, ಕ್ರೆಡಿಟ್ ಕಾರ್ಡ್ ಮತ್ತು ಬ್ಯಾಂಕ್ ಖಾತೆ ಮಾಹಿತಿ, ಸ್ಥಳ ಇತಿಹಾಸ, ಸಂಪರ್ಕ ಪಟ್ಟಿ, ಫೋಟೋಗಳು ಮತ್ತು ಹೆಚ್ಚಿನದನ್ನು ಒಳಗೊಂಡಿರಬಹುದು. “ಅಪ್ಲಿಕೇಶನ್ ಡೆವಲಪರ್‌ಗಳು ನಿರ್ವಹಿಸುವ ಸರ್ವರ್‌ಗಳಲ್ಲಿ ನಿಮ್ಮ ಚಟುವಟಿಕೆಯನ್ನು ಎಷ್ಟು ಸಂಗ್ರಹಿಸಲಾಗಿದೆ ಎಂಬುದನ್ನು ನೀವು ತಿಳಿದರೆ ಇದರ ಅಪಾಯದ ಅರಿವಾಗುತ್ತದೆ. ಆ ಸರ್ವರ್‌ಗಳು ಹ್ಯಾಕ್ ಆಗಿದ್ದರೆ ಅಥವಾ ತಾಂತ್ರಿಕ ದೋಷವು ಅವುಗಳನ್ನು ದುರ್ಬಲಗೊಳಿಸಿದರೆ, ಆ ಎಲ್ಲಾ ಡೇಟಾವನ್ನು ಕದಿಯಬಹುದು ಮತ್ತು ಅಪರಾಧಿಗಳು ವಂಚನೆಗಾಗಿ ಬಳಸಬಹುದು. ಪ್ರತಿ ಅಪ್ಲಿಕೇಶನ್‌ನಿಂದ ಸಂಗ್ರಹಿಸಲಾದ ಡೇಟಾವನ್ನು ಮಿತಿಗೊಳಿಸಲು ನಿಮ್ಮ ಸಾಧನದಲ್ಲಿ ಭದ್ರತಾ ನಿಯಂತ್ರಣಗಳನ್ನು ಸರಿಹೊಂದಿಸಲು ಮತ್ತು ಹೆಚ್ಚಿನ ಅನುಮತಿಗಳನ್ನು ವಿನಂತಿಸುವ ಯಾವುದೇ ಹೊಸ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡುವ ಮೊದಲು ಎರಡು ಬಾರಿ ಯೋಚಿಸುವುದು ಒಳಿತು. ನೀವು ಇಷ್ಟಪಡುವ ಮತ್ತು ಅವಲಂಬಿತವಾಗಿರುವ ಕೆಲವು ಜನಪ್ರಿಯ ಆ್ಯಪ್‌ಗಳು ನಿಮಗೆ ಉಪಕಾರಕ್ಕಿಂತಲೂ ಹೆಚ್ಚಿನ ಅಪಾಯವನ್ನು ಉಂಟುಮಾಡಬಹುದು.
ಇದನ್ನೂ ಓದಿ: ಸೈಬರ್ ಸೇಫ್ಟಿ ಅಂಕಣ: ಅಂತರ್ಜಾಲದಲ್ಲಿ ಸುರಕ್ಷತೆ: ಭಾಗ- 3: ಫೇಸ್‌ಬುಕ್, ಟ್ವಿಟರ್, ವಾಟ್ಸ್ಯಾಪ್ ಭದ್ರವಾಗಿರಿಸುವುದು ಹೀಗೆ!
ಪಾಸ್‌ವರ್ಡ್ ಅಗತ್ಯವಿಲ್ಲದ ವೈಫೈ ನೆಟ್‌ವರ್ಕ್‌ಗಳನ್ನು ಬಳಸುವುದು ಅನುಕೂಲಕರ. ಆದರೆ ಹಾಗೆ ಮಾಡುವುದರಿಂದ ನಿಮ್ಮ ಎಲ್ಲಾ ಆನ್‌ಲೈನ್ ಚಟುವಟಿಕೆಗಳ ಮೇಲೆ ಸುಲಭವಾಗಿ ಕಣ್ಣಿಡಲು ಯಾರಿಗಾದರೂ ಅವಕಾಶ ಸಿಗಬಹುದು. ಸೈಬರ್ ಕ್ರಿಮಿನಲ್‌ಗಳು ನಿಮ್ಮನ್ನು ಮೋಸಗೊಳಿಸಲು ಮತ್ತು ನಿಮ್ಮ ಡೇಟಾವನ್ನು ಕದಿಯಲು ಮೋಸಗೊಳಿಸುವ ವೈಫೈ ಹಾಟ್‌ಸ್ಪಾಟ್ ಅನ್ನು ಸೃಷ್ಟಿಸಬಹುದು. ಉದಾಹರಣೆಗೆ, ನಿಮ್ಮ ಬ್ಯಾಂಕ್‌ನ ವೆಬ್‌ಸೈಟ್‌ಗೆ ಹೋಗುವ ಬದಲು, ವೈಫೈ ನೆಟ್‌ವರ್ಕ್ ನಿಮ್ಮನ್ನು ಅದರಂತೆಯೇ ಕಾಣುವ ಪುಟಕ್ಕೆ ನಿರ್ದೇಶಿಸಬಹುದು ಮತ್ತು ನೀವು ಲಾಗ್ ಇನ್ ಮಾಡಲು ಪ್ರಯತ್ನಿಸಿದಾಗ ನಿಮ್ಮ ಪಾಸ್‌ವರ್ಡ್ ಅನ್ನು ಕದಿಯಬಹುದು. ನಿಮಗೆ ತಿಳಿದಿರುವ ಮತ್ತು ನಂಬುವ ವೈಫೈಯನ್ನು ಮಾತ್ರ ಸಂಪರ್ಕಿಸುವುದು ಎಲ್ಲಾ ಕಾಲದಲ್ಲೂ ಸುರಕ್ಷಿತ. ನೀವು ಉಚಿತವಾಗಿ ಸಿಗುವ ಯಾವುದೇ ವೈಫೈ ನೆಟ್‌ವರ್ಕನ್ನೂ ಸಂಪರ್ಕಿಸಬೇಡಿ.
ಸೈಬರ್ ಕ್ರಿಮಿನಲ್ಸ್ ಸಾಮಾನ್ಯವಾಗಿ ಇಮೇಲ್, ಪಠ್ಯ ಸಂದೇಶಗಳು ಮತ್ತು ಧ್ವನಿ ಕರೆಗಳನ್ನು ಬಳಸುತ್ತಾರೆ. ಪಾಸ್‌ವರ್ಡ್ ಬಿಟ್ಟುಕೊಡಲು, ಮಾಲ್‌ವೇರ್ ಅನ್ನು ಡೌನ್‌ಲೋಡ್ ಮಾಡಲು ಲಿಂಕ್ ಅನ್ನು ಕ್ಲಿಕ್ ಮಾಡಿ ಅಥವಾ ವಹಿವಾಟನ್ನು ದೃಢೀಕರಿಸಲು ಓಟಿಪಿಯನ್ನು ಕೇಳುತ್ತಾರೆ. ಈ ರೀತಿಯಲ್ಲಿ ನಿಮ್ಮ ಖಾತೆಗಳಿಗೆ ಪ್ರವೇಶ ಮಾಡುವ ಕಾರ್ಯತಂತ್ರವನ್ನು ಫಿಶಿಂಗ್ ಎಂದು ಕರೆಯುತ್ತಾರೆ. ಇದು ಸೈಬರ್ ಕ್ರಿಮಿನಲ್ಸ್ ಅತ್ಯಂತ ಹೆಚ್ಚಾಗಿ ಬಳಸುವ ಮತ್ತು ಯಶಸ್ವಿ ತಂತ್ರವಾಗಿದೆ. ಫಿಶಿಂಗಿಗೆ ಸಿಕ್ಕಿಹಾಕಿಕೊಳ್ಳುವುದನ್ನು ತಪ್ಪಿಸಲು ಎಚ್ಚರವಹಿಸಿರಿ. ನಿಮ್ಮ ವೈಯಕ್ತಿಕ ಮಾಹಿತಿಗಾಗಿ ನಿಮ್ಮನ್ನು ಯಾರು ಸಂಪರ್ಕಿಸುತ್ತಿದ್ದಾರೆ ಎಂಬುದನ್ನು ಯಾವಾಗಲೂ ಪರಿಶೀಲಿಸಿ. ಉದಾಹರಣೆಗೆ, ನಿಮ್ಮ ಬ್ಯಾಂಕ್ ಎಂದು ಹೇಳಿಕೊಂಡು ಕರೆ ಮಾಡುವವರಿಗೆ, ಬ್ಯಾಂಕ್‌ನ ಅಧಿಕೃತ ಫೋನ್ ಸಂಖ್ಯೆಯನ್ನು ಬಳಸಿಕೊಂಡು ನೀವು ಮರಳಿ ಕರೆ ಮಾಡುತ್ತೀರಿ ಎಂದು ಹೇಳಿ.
ಇದನ್ನೂ ಓದಿ: ಸೈಬರ್ ಸೇಫ್ಟಿ ಅಂಕಣ: ಅಂತರ್ಜಾಲದಲ್ಲಿ ನಿಮ್ಮ ಖಾತೆಗಳನ್ನು ಸುರಕ್ಷಿತಗೊಳಿಸಲು ಹೀಗೆ ಮಾಡಿ!
ನಿಮ್ಮ ಪ್ರೀತಿಪಾತ್ರರ ಅಥವಾ ಮಕ್ಕಳ ಚಟುವಟಿಕೆಯನ್ನು ಟ್ರಾಕ್ ಮಾಡುವಂತಹ ಅಪ್ಲಿಕೇಶನ್‌ಗಳ ಬಗ್ಗೆ ಎಚ್ಚರದಿಂದಿರಿ. ವಾಸ್ತವದಲ್ಲಿ, ಅವುಗಳಲ್ಲಿ ಬಹಳಷ್ಟು ಆಪ್‌ಗಳು ಸ್ಪೈವೇರ್ ಆಗಿದ್ದು, ಸ್ಮಾರ್ಟ್‌ಫೋನ್ ಮೂಲಕ ಡಿಜಿಟಲ್ ಕಣ್ಗಾವಲು ನಡೆಸಲು ವಿನ್ಯಾಸಗೊಳಿಸಲಾಗಿರುತ್ತದೆ. ಇದರಿಂದ ನಿಮ್ಮ ಮೆಸೇಜುಗಳು ಮತ್ತು ಇಮೇಲ್‌ಗಳನ್ನು ಓದಲು, ಫೋನ್‌ನ ಸ್ಥಳವನ್ನು ಟ್ರ್ಯಾಕ್ ಮಾಡಲು, ಹತ್ತಿರದ ಸಂಭಾಷಣೆಗಳನ್ನು ರಹಸ್ಯವಾಗಿ ಆಲಿಸಲು ಮತ್ತು ಇತರ ಚಟುವಟಿಕೆಗಳ ಜೊತೆಗೆ ಚಿತ್ರಗಳನ್ನು ತೆಗೆದುಕೊಳ್ಳಲು ಸಾಧ್ಯವಾಗುತ್ತದೆ. ಕೆಲವು ಅಪ್ಲಿಕೇಶನ್‌ಗಳು ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ನೀವು ಏನು ಮಾಡುತ್ತೀರಿ ಎಂಬುದರ ಕುರಿತು ಎಲ್ಲಾ ಡೇಟಾವನ್ನು ಸಂಗ್ರಹಿಸಬಹುದು.
ದುರ್ಬಲ ಭದ್ರತೆ ಹೊಂದಿರುವ ಅಪ್ಲಿಕೇಶನ್‌ಗಳು, ಕಳಪೆ ಪಾಸ್‌ವರ್ಡ್ ಭದ್ರತೆ ಮತ್ತು ಅಪ್‌ಡೇಟ್ ಆಗದ ಸಾಧನಗಳು ಸುಲಭವಾಗಿ ಸೈಬರ್ ದಾಳಿಗೆ ಒಳಗಾಗಬಹದು. ಹಿಂದಿನ ಲೇಖನಗಳಲ್ಲಿ ವಿವರಿಸಿದ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಿ. ಜೊತೆಗೆ ನಿಮ್ಮ ಸ್ಮಾರ್ಟ್‌ಫೋನಿನಲ್ಲಿ ಉತ್ತಮವಾದ ಆಂಟಿ-ವೈರಸ್ ಪ್ರೋಗ್ರಾಂಗಳನ್ನು ಅಳವಡಿಸಿಕೊಳ್ಳಿ. Norton Security ಮತ್ತು Antivirus, McAfee Mobile Security, ಮತ್ತು Kaspersky Antivirusನಂತಹ ಅಪ್ಲಿಕೇಶನ್‌ಗಳು ದುರುದ್ದೇಶಪೂರಿತ ಅಪ್ಲಿಕೇಶನ್‌ಗಳು ನಿಮ್ಮ ಫೋನಿನಲ್ಲಿದ್ದರೆ ಅವುಗಳನ್ನು ಗುರುತಿಸಲು ಸಹಾಯ ಮಾಡಬಹುದು. ನಿಮ್ಮ ಸ್ಮಾರ್ಟ್‌ಫೋನ್‌ನ ಆಪರೇಟಿಂಗ್ ಸಿಸ್ಟಂ ಅನ್ನು (ಆಂಡ್ರಾಯ್ಡ್ ಅಥವಾ ಐಒಎಸ್) ಎಲ್ಲಾ ಸಮಯದಲ್ಲೂ ನವೀಕೃತವಾಗಿರಿಸಿಕೊಳ್ಳಿ. ನಿಮ್ಮ ಜಾಣತನ ಮತ್ತು ಜಾಗರೂಕತೆ ನಿಮ್ಮನ್ನು ಅಂಗೈಯಲ್ಲಿರುವ ಅಂತರ್ಜಾಲದಲ್ಲಿ ಸುರಕ್ಷಿತವಾಗಿರಿಸುತ್ತದೆ.
ಇದನ್ನೂ ಓದಿ: ಸೈಬರ್ ಸೇಫ್ಟಿ ಅಂಕಣ: ಅಂತರ್ಜಾಲದಲ್ಲಿ ಸುರಕ್ಷತೆ; ನಿಮ್ಮ ಖಾತೆಗಳನ್ನು ಸುರಕ್ಷಿತಗೊಳಿಸುವುದು ಹೇಗೆ?