Site icon Vistara News

ಸೈಬರ್‌ ಸೇಫ್ಟಿ ಅಂಕಣ: ಅಂತರ್ಜಾಲದ ಆತಂಕ: ಸೆಕ್ಸ್‌ಟಾರ್ಷನ್‌

Sextortion

Cyber Safety Column: Beware of Online Sextortion

ತಂತ್ರಜ್ಞಾನವು ಅಭಿವೃದ್ಧಿಯ ದಾಪುಗಾಲಿನ ಜೊತೆಯಲ್ಲಿ ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳುತ್ತಿದೆ. ಭಾರತದಲ್ಲಿ ಮೊಬೈಲ್‌ ಅದರಲ್ಲೂ 5ಜಿ ತಂತ್ರಜ್ಞಾನ ಆಧಾರಿತ ಸ್ಮಾರ್ಟ್‌ ಫೋನುಗಳು ಮತ್ತು ಕಡಿಮೆ ಬೆಲೆಯಲ್ಲಿ ದೊರಕುವ ಅಪರಿಮಿತ ಡೇಟಾ ಪ್ಲಾನುಗಳು ಎಲ್ಲರಿಗೂ ಎಲ್ಲಾ ಕಡೆ ಮತ್ತು ಯಾವಾಗ ಬೇಕಾದರೂ ಇಂಟರ್ನೆಟ್‌ ಬಳಸುವ ಸೌಲಭ್ಯ ಕೊಟ್ಟಿದೆ. ಇದರಿಂದ ಮಾಮೂಲಿ ಕರೆ ಮಾಡಿ ಮಾತಾಡುವುದು ಇತ್ತೀಚೆಗೆ ಹಳೆಯದಾಗಿದೆ. ಅದರ ಬದಲಿಗೆ ಅಂತರ್ಜಾಲದ ಮೂಲಕ ಧ್ವನಿ ಕರೆ ಅಥವಾ ವಿಡಿಯೋ ಕರೆ ಮಾಡಿ ಮಾತಾಡುವುದು ಹೊಸ ಟ್ರೆಂಡ್‌ ಆಗಿದೆ. ಇದು ಹೆಚ್ಚಾಗಿ ಯುವ ಜನರಲ್ಲಿ ನೋಡಬಹುದಾಗಿದೆ. ಅಂಗೈಯಲ್ಲಿ ಅಂತರ್ಜಾಲ, ಅರಿವಿದೆಯೇ ಅಪಾಯ ಎನ್ನುವ ಅಂಕಣದಲ್ಲಿ ಸ್ಥೂಲವಾಗಿ ಕೆಲವು ಆತಂಕಗಳ ಬಗ್ಗೆ ತಿಳಿಸಿದ್ದೆ. ಆದರೆ ಇಂದಿನ ವಿಷಯ ಬಹಳ ಗಂಭೀರವಾಗಿದೆ. ಕಳೆದ ವರ್ಷ ಪಾಶ್ಚಾತ್ಯ ದೇಶಗಳಲ್ಲಿ ಹದಿಹರೆಯದವರನ್ನು(14ರಿಂದ 17 ವಯಸ್ಸಿನವರು) ಮತ್ತು ಯುವ ವಯಸ್ಕರನ್ನು ಕಾಡಿದ ಸೈಬರ್‌ ಅಪರಾಧಗಳಲ್ಲಿ ಅತಿ ಹೆಚ್ಚು ದಾಖಲಾಗಿರುವುದೇ ಸೆಕ್ಸ್‌ಟಾರ್ಷನ್‌.

ಭಾರತೀಯ ಸೈಬರ್ ಕ್ರೈಮ್ ಕೋಆರ್ಡಿನೇಶನ್ ಸೆಂಟರ್ (I4C) ಕೇಂದ್ರ ಗೃಹ ಸಚಿವಾಲಯದ ಅಧೀನದಲ್ಲಿ ಕಾರ್ಯನಿರ್ವಹಿಸುತ್ತದೆ. ಜನವರಿ 2024 ರಂದು ಅವರು ಪ್ರಸ್ತುತಪಡಿಸಿದ ಮಾಹಿತಿಯ ಪ್ರಕಾರ, KYC ಮುಕ್ತಾಯ ವಂಚನೆಯು 2023 ರಲ್ಲಿ ಅತಿ ಹೆಚ್ಚು ದೂರು ದಾಖಲಿಸಿದ ಸೈಬರ್‌ ವಂಚನೆಯಾಗಿದೆ. ನಂತರದ ಸ್ಥಾನದಲ್ಲಿರುವುದೇ ಸೆಕ್ಸ್‌ಟಾರ್ಷನ್‌ ಮತ್ತು QR ಕೋಡ್ ಹಗರಣಗಳು. ವಯೋಸಹಜವಾದ ಕುತೂಹಲ ಮತ್ತು ಹಾರ್ಮೋನ್‌ಗಳ ಸ್ರವಿಸುವಿಕೆಯಿಂದ ನಮ್ಮ ಯುವ ಪೀಳಿಗೆಯು ಸಿಲುಕಿಕೊಳ್ಳುತ್ತಿರುವ ಜಾಲವೇ ಸೆಕ್ಸ್‌ಟಾರ್ಷನ್‌.

ಜನರು ಹೆಚ್ಚಾಗಿ ಆನ್‌ಲೈನ್‌ನಲ್ಲಿ ಹುಡುಕುವ ಐದು ಸಾಮಾನ್ಯವಾದ ಲೈಂಗಿಕ ಗೀಳು ಅಥವಾ ಉನ್ಮಾದ ಶಮನ ಕ್ರಿಯೆಗಳು ಈ ರೀತಿಯಲ್ಲಿ ವಿಂಗಡಿಸಿದ್ದಾರೆ.

  1. BDSM(Bondage/discipline, dominance/submission, and sadism/masochism): ಬಾಂಡೇಜ್/ಡಿಸಿಪ್ಲಿನ್, ಪ್ರಾಬಲ್ಯ/ಸಲ್ಲಿಕೆ, ಮತ್ತು ಸ್ಯಾಡಿಸಂ/ಮಸೋಕಿಸಂ (ಹಿಂಸಾರಸಿಕ) ಕಿಂಕ್ (ಮಾನವ ಲೈಂಗಿಕತೆಯಲ್ಲಿ , ಕಿಂಕಿನೆಸ್ ಎಂಬುದು ಅಸಾಂಪ್ರದಾಯಿಕ ಲೈಂಗಿಕ ಅಭ್ಯಾಸಗಳು, ಪರಿಕಲ್ಪನೆಗಳು ಅಥವಾ ಕಲ್ಪನೆಗಳು). 93% ಪುರುಷರು ಮತ್ತು 96% ಮಹಿಳೆಯರು BDSM ನ ಕೆಲವು ಅಂಶಗಳ ಬಗ್ಗೆ ಕಲ್ಪಿಸಿದ್ದರು ಎಂದು ತಿಳಿದುಬಂದಿದೆ.
  2. ಫೆಟಿಶಸ್(fetish – ಒಂದು ರೀತಿಯ ಲೈಂಗಿಕ ಬಯಕೆ):
    ಫೆಟಿಶ್ ಫ್ಯಾಂಟಸಿಗಳು ನಿರ್ದಿಷ್ಟ ವಸ್ತುಗಳ (ಬೂಟುಗಳು ಅಥವಾ ಸ್ಟಾಕಿಂಗ್ಸ್) ಬಗ್ಗೆ ಅಥವಾ ಜನನಾಂಗವಲ್ಲದ ದೇಹದ ಭಾಗಗಳ (ಪಾದಗಳು ಅಥವಾ ಕಂಕುಳ) ಬಗ್ಗೆ ಕೇಂದ್ರೀಕೃತವಾಗಿರುತ್ತದೆ.
  3. ದೇಹದ ದ್ರವಗಳು: ದೇಹದ ನಿರ್ದಿಷ್ಟ ದ್ರವಗಳ ಕಲ್ಪನೆಗಳನ್ನು ಅನೇಕ ಜನರು ವರದಿ ಮಾಡಿದ್ದಾರೆ. ಬಹುಪಾಲು ಪುರುಷರು ಮತ್ತು ಮಹಿಳೆಯರು ಸ್ಖಲನವನ್ನು ಕಲ್ಪಿಸಿಕೊಂಡಿರುವುದು ಅತ್ಯಂತ ಸಾಮಾನ್ಯವಾದ ಸಂಗತಿ ಎಂದು ತಿಳಿದು ಬಂದಿದೆ.
  4. ವಾಯೂರಿಸಂ (Voyeurism): ಬೇರೊಬ್ಬರು ವಿವಸ್ತ್ರಗೊಳ್ಳುವುದನ್ನು ಅಥವಾ ಲೈಂಗಿಕತೆಯನ್ನು ನೋಡುವ ಕಲ್ಪನೆಗಳು ತುಂಬಾ ಸಾಮಾನ್ಯವಾಗಿದೆ. ವಾಸ್ತವವಾಗಿ, ಮಹಿಳೆಯರಿಗಿಂತ ಹೆಚ್ಚು ಪುರುಷರು ವಾಯೂರಿಸಂ ಕಲ್ಪನೆಗಳನ್ನು ಹೊಂದಿದ್ದಾರೆ ಎಂದು ತಿಳಿದುಬಂದಿದೆ.
  5. ಪ್ರದರ್ಶನ ಪ್ರಿಯರು: ತಮ್ಮ ದೇಹದ ಪ್ರದರ್ಶಿಸುವ ಅಥವಾ ಸಾರ್ವಜನಿಕವಾಗಿ ಲೈಂಗಿಕತೆಯನ್ನು ಹೊಂದುವ ಬಗ್ಗೆ ಬಹಳಷ್ಟು (ಶೇಕಡ 42) ಜನರು ಯೋಚಿಸುತ್ತಾರೆ ಎಂದು ವರದಿಯಾಗಿದೆ.

ಇಂತಹ ಮಾಹಿತಿಗಳು ನಿಜಕ್ಕೂ ಗಾಬರಿಯನ್ನುಂಟು ಮಾಡುತ್ತದೆ. ಅಂತರ್ಜಾಲದ ಮೂಲಕ ವೀಡಿಯೊ ಕರೆಗಳನ್ನು ಮಾಡಿಕೊಂಡು ಯುವ ಪೀಳಿಗೆಯವರು ಏನಾದರೂ ಅನರ್ಥ ಮಾಡಿಕೊಳ್ಳಬಹುದೆಂಬ ಆತಂಕ ಎಲ್ಲಾ ತಂದೆತಾಯಿಯರಲ್ಲೂ ಇರುತ್ತದೆ. ಹೆಚ್ಚಿನ ಕರೆ ಮಾಡುವ ಆ್ಯಪ್‌ಗಳಲ್ಲಿ ಎನ್ಕ್ರಿಪ್ಶನ್‌ಗಳಿದ್ದರೂ, ಕೆಲವು ಬಾರಿ ಆ ರೀತಿಯ ಖಾಸಗಿ ಫೋಟೊ ಅಥವಾ ವೀಡಿಯೊ ಸೈಬರ್ ಕ್ರಿಮಿನಲ್‌ಗಳಿಗೆ ಸಿಕ್ಕಿದರೆ ಸಂಬಂಧ ಪಟ್ಟವರ ನೆಮ್ಮದಿ ನಾಶ ಖಚಿತ.

ನಿಮ್ಮ ಖಾಸಗಿ ಚಿತ್ರಗಳನ್ನು ಅಥವಾ ವೀಡಿಯೊಗಳನ್ನು ಅಂತರ್ಜಾಲದಲ್ಲಿ ಹಂಚುವುದಾಗಿ ಬೆದರಿಸಿ ಹಣ ಅಥವಾ ಇನ್ಯಾವುದೋ ಕೆಲಸ ಮಾಡಿಸಿಕೊಳ್ಳೊದನ್ನು ಸೆಕ್ಸ್‌ಟಾರ್ಶನ್‌ ಎನ್ನುತ್ತಾರೆ. ಸೆಕ್ಸ್‌ಟಾರ್ಶನ್ ಒಂದು ಗಂಭೀರ ಅಪರಾಧವಾಗಿದೆ. ಇದು ಬ್ಲ್ಯಾಕ್‌ಮೇಲ್‌ನ ಇನ್ನೊಂದು ವಿಧಾನ. ಇದರಲ್ಲಿ ಸಿಲುಕಿದವರ ಲೈಂಗಿಕ ಮಾಹಿತಿ ಅಥವಾ ಚಿತ್ರಗಳನ್ನು ಹಣ ಅಥವಾ ಇತರ ಲಾಭಕ್ಕಾಗಿ ಬಳಸಲಾಗುತ್ತದೆ. ಸಾಮಾಜಿಕ ಮಾಧ್ಯಮ ಮತ್ತು ಪಠ್ಯ ಸಂದೇಶಗಳು ಹೆಚ್ಚಾಗಿ ಲೈಂಗಿಕ ವಸ್ತುಗಳ ಮೂಲವಾಗಿದೆ ಮತ್ತು ಅದನ್ನು ಇತರರೊಂದಿಗೆ ಹಂಚಿಕೊಳ್ಳುವ ಬೆದರಿಕೆಯ ವಿಧಾನವಾಗಿದೆ.

ಜನರು ಸೆಕ್ಸ್‌ಟಿಂಗ್ ಮೂಲಕ ತಮ್ಮ ನಗ್ನ ಚಿತ್ರ ಇಂಟರ್ನೆಟ್‌ನಲ್ಲಿ ಹಂಚಿಕೊಳ್ಳುತ್ತಾರೆ. ಅದನ್ನು ಪಡೆದವರು ಅದರ ದುರ್ಬಳಕೆ ಮಾಡಿಕೊಳ್ಳುತ್ತಾರೆ. ಅವರನ್ನು ಬಲವಂತವಾಗಿ ಹಣ ನೀಡುವಂತೆ ಅಥವಾ ಅವರು ಸೂಚಿಸುವ ವ್ಯಕ್ತಿಯೊಂದಿಗೆ ಲೈಂಗಿಕ ಕ್ರಿಯೆಗಳನ್ನು ನಡೆಸುವಂತೆ ಒತ್ತಾಯ ಮಾಡುತ್ತಾರೆ.

ಭಾರತದ ಹದಿಹರೆಯದವರು (ಪುರುಷರು / ಮಹಿಳೆಯರು) ಖಾಸಗಿ ಚಿತ್ರಗಳನ್ನು ಅಪ್‌ಲೋಡ್ ಮಾಡಿ ಆನ್‌ಲೈನ್‌ನಲ್ಲಿ ಹಂಚಿಕೊಳ್ಳುವ ಐದು ಮುಖ್ಯವಾದ ಜಾಲತಾಣಗಳು:

  1. ಇನ್ಸ್‌ಟಾಗ್ರಾಮ್‌
  2. ಸ್ನಾಪ್‌ಚಾಟ್‌
  3. ಟಿಂಡರ್
  4. ಕಿಕ್ ಮೆಸೆಂಜರ್
  5. ಯಿಕ್ ಯಾಕ್

ವೀಡಿಯೊ ಕರೆಯ ಮೂಲಕ ಬಲೆಗೆ ಬೀಳಿಸುವ ಪ್ರಮುಖ ಆ್ಯಪ್‌ಗಳು:
ವಾಟ್ಸಪ್
ಮೆಸೆಂಜರ್‌
ಟೆಲಿಗ್ರಾಮ್‌

ಭಾರತದಲ್ಲಿ ಸೆಕ್ಸ್‌ಟಾರ್ಷನ್‌ಗೆ ದೂರು ಸಲ್ಲಿಸುವುದು ಹೇಗೆ?
ಈ ವಿಷಯದಲ್ಲಿ ನೀವು ಪೊಲೀಸ್ ಠಾಣೆಗೆ ಹೋಗಲು ಬಯಸದಿದ್ದರೆ ಭಾರತದ ಗೃಹ ವ್ಯವಹಾರಗಳ ಸಚಿವಾಲಯದ ಜಾಲತಾಣ https://cybercrime.gov.in/ ದಲ್ಲಿ ಆನ್‌ಲೈನ್‌ ದೂರು ನೀಡಬಹುದು.

‘ಫೈಲ್ ಎ ಕಂಪ್ಲೇಂಟ್’ ಟ್ಯಾಬ್ ಮೇಲೆ ಕ್ಲಿಕ್ ಮಾಡಿ. ನಂತರ ನಿಯಮಗಳು ಮತ್ತು ಷರತ್ತುಗಳನ್ನು ಒಪ್ಪಿಕೊಳ್ಳಲು ‘ಸಮ್ಮತಿಸಿ’ ಆಯ್ಕೆಯನ್ನು ಕ್ಲಿಕ್ ಮಾಡಿ. ಇದು ನಿಮ್ಮನ್ನು ಬೇರೆ ಪುಟಕ್ಕೆ ಕೊಂಡೊಯ್ಯುತ್ತದೆ. ಹೊಸ ಪುಟದಲ್ಲಿ ನಿಮಗೆ ಎರಡು ಪರ್ಯಾಯಗಳನ್ನು ನೀಡಲಾಗುವುದು. ನಿಮ್ಮ ದೂರು ಮಹಿಳೆ ಅಥವಾ ಮಗುವನ್ನು ಒಳಗೊಂಡಿರುವ ಸೈಬರ್ ಅಪರಾಧದ ಬಗ್ಗೆ ಇದ್ದರೆ, “ಮಹಿಳೆಯರು/ಮಕ್ಕಳನ್ನು ಒಳಗೊಂಡ ಸೈಬರ್ ಅಪರಾಧವನ್ನು ವರದಿ ಮಾಡಿ” ಆಯ್ಕೆಯನ್ನು ಆರಿಸಿ ಮತ್ತು “ವರದಿ” ಕ್ಲಿಕ್ ಮಾಡಿ. ಈ ಸಂದರ್ಭಗಳಲ್ಲಿ ನೀವು ಅನಾಮಧೇಯವಾಗಿ ವರದಿ ಮಾಡಬಹುದು.

ಯಾರಾದರೂ ನಿಮಗೆ ವಾಟ್ಸಪ್‌ನಲ್ಲಿ ಖಾಸಗಿ ವಿಷಯದೊಂದಿಗೆ ಕಿರುಕುಳ ನೀಡುತ್ತಿದ್ದರೆ ಮಾಹಿತಿ ತಂತ್ರಜ್ಞಾನ ಕಾಯಿದೆ, 2000, (IT ಕಾಯಿದೆ) ಅಡಿಯಲ್ಲಿ ಬೆದರಿಕೆ ಅಥವಾ ದುರುದ್ದೇಶಪೂರಿತವಾಗಿ ಇಂಟರ್ನೆಟ್ ಬಳಕೆಯನ್ನು ಆನ್‌ಲೈನ್ ಕಿರುಕುಳವೆಂದು ಪರಿಗಣಿಸಿ ಕ್ರಮ ತೆಗೆದುಕೊಳ್ಳಬಹುದು. ಇದು ಮೌಖಿಕ, ಲೈಂಗಿಕ, ಭಾವನಾತ್ಮಕ ಅಥವಾ ಸಾಮಾಜಿಕ ನಿಂದನೆಯ ರೂಪದಲ್ಲಿರಬಹುದು ಮತ್ತು ಒಬ್ಬ ವ್ಯಕ್ತಿ, ವ್ಯಕ್ತಿಗಳ ಗುಂಪು ಅಥವಾ ಸಂಸ್ಥೆಯನ್ನು ಗುರಿಯಾಗಿರಿಸಿಕೊಳ್ಳಬಹುದು.

ಭಾರತೀಯ ದಂಡ ಸಂಹಿತೆಯ (IPC) ಸೆಕ್ಷನ್ 345A ಅಡಿಯಲ್ಲಿ, ಸಾಮಾಜಿಕ ಮಾಧ್ಯಮದಲ್ಲಿ ಅಶ್ಲೀಲ ಕಾಮೆಂಟ್‌ಗಳನ್ನು ಪೋಸ್ಟ್ ಮಾಡುವವರಿಗೆ ಒಂದು ವರ್ಷ ಜೈಲು ಶಿಕ್ಷೆ ವಿಧಿಸಬಹುದು ಮತ್ತು ದಂಡವನ್ನು ಸಹ ಪಾವತಿಸಲು ಕೇಳಬಹುದು. ಮಹಿಳೆಯ ಒಪ್ಪಿಗೆಯಿಲ್ಲದೆ ಅಶ್ಲೀಲ ವಿಷಯವನ್ನು ಪೋಸ್ಟ್ ಮಾಡುವ ಅಥವಾ ಸಂದೇಶ ಕಳುಹಿಸುವ ಅಥವಾ ಲೈಂಗಿಕತೆಯನ್ನು ವಿನಂತಿಸುವವರಿಗೆ ಅದೇ ಸೆಕ್ಷನ್ ಅಡಿಯಲ್ಲಿ ಮೂರು ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಬಹುದು.

ಇದನ್ನೂ ಓದಿ: ಸೈಬರ್‌ ಸೇಫ್ಟಿ ಅಂಕಣ: ಇ-ಸಿಮ್ ಮೇಲಿನ ದಾಳಿಯಲ್ಲಿ ಫೋನ್ ಸಂಖ್ಯೆಗಳ ಹೈಜಾಕ್

ಯುವ ಪೀಳಿಗೆಯವರು ಸದಾ ಮೊಬೈಲ್‌ನೊಂದಿಗೆ ಇರುತ್ತಾರೆ. ಅವರ ಅಂತರ್ಜಾಲದ ಅಲೆದಾಟಗಳ ಬಗ್ಗೆ ತಂದೆತಾಯಿ, ಮತ್ತು ಶಿಕ್ಷಕರು ಒಂದು ಕಣ್ಣಿಟ್ಟಿರುವುದು ಮುಂದೆ ಯಾವ ಗಂಡಾಂತರವೂ ಬರದಂತೆ ಕಾಯಬಹುದು. ಮಕ್ಕಳ ವೈಯಕ್ತಿಕ ಗೌಪ್ಯತೆಯನ್ನು ಉಲ್ಲಂಘಿಸದೆ ಕಣ್ಗಾವಲ್ಲಲ್ಲಿಟ್ಟುಕೊಳ್ಳುವುದು ಪಾಲಕರ ಜಾಣತನ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version