Site icon Vistara News

ಸೈಬರ್‌ ಸೇಫ್ಟಿ ಅಂಕಣ: ಮೋಸ ಹೋಗುವವರು ಇರುವವರೆಗೂ ಮೋಸ ಮಾಡುವವರು ಇರುತ್ತಾರೆ

cyber safety1

ಪುಣೆಯ ಸಹಾಯಕ ಪ್ರಾಧ್ಯಾಪಕರೊಬ್ಬರು ಆನ್‌ಲೈನಿನಲ್ಲಿ ಹೆಚ್ಚಿನ ಆದಾಯ ಸಿಗಬಹುದೆಂಬ ಅತಿ ಆಸೆಯ ಬಲೆಗೆ ಬಿದ್ದ ಸುದ್ದಿ ಕೇಳಿ ಬಹಳ ಬೇಸರವಾಯಿತು. ಆಸೆಯೇ ದುಃಖಕ್ಕೆ ಕಾರಣ ಎಂಬುದು ಮತ್ತೊಮ್ಮೆ ನೆನಪಾಯಿತು. ಆದರೆ ಇಂದಿನ ಕಾಲಘಟ್ಟದಲ್ಲಿ ಅತಿಯಾದ ಆಸೆಯೇ ದುಃಖಕ್ಕೆ ಕಾರಣವಾಗುತ್ತದೆ ಎಂದು ಎಲ್ಲರೂ ಅರಿಯಬೇಕಾಗಿದೆ. ಇಂದಿನ ಡಿಜಿಟಲ್ ಟ್ರಾನ್ಸಾಕ್ಷನ್‌ನಿಂದ ಆನ್‌ಲೈನಿನ ವ್ಯವಹಾರದಲ್ಲಿ ನಾವೆಲ್ಲರೂ ಮೋಸ ಹೋಗುವ ಸಾಧ್ಯತೆ ತುಂಬಾ ಇದೆ. ಕಲಿತವರಿಗೆಲ್ಲಾ ಹೆಚ್ಚಿನ ಸಂಬಳದ ಕೆಲಸ ಸಿಗಬೇಕೆಂದು ಎಲ್ಲಾ ವಿದ್ಯಾಸಂಸ್ಥೆಗಳು ಕಾರ್ಪೊರೇಟ್‌ಗಳ ಜೊತೆ ಚೌಕಾಸಿ ಮಾಡುತ್ತಾರೆ. ಆದರೆ ವಿದ್ಯಾರ್ಥಿಗಳನ್ನು ಅದಕ್ಕೆ ಅರ್ಹರನ್ನಾಗಿಸುವ ಶಿಕ್ಷಕರಿಗೆ ತಕ್ಕುದಾದ ಸಂಬಳ ಕೊಡಲು ಹಿಂದೇಟು ಹಾಕುತ್ತಾರೆ. ಇದರಿಂದಾಗಿ ಶಿಕ್ಷಣದ ಗುಣಮಟ್ಟವೂ ಸೊರಗುವ ಸಾಧ್ಯತೆ ಇದೆ. ಜೊತೆಗೆ ವಿವಿಧ ಶೈಕ್ಷಣಿಕ ಸಂಸ್ಥೆಗಳಲ್ಲಿ ದುಡಿಯುತ್ತಿರುವ ಶಿಕ್ಷಕರೂ ಹೆಚ್ಚಿನ ಆದಾಯಕ್ಕೋಸ್ಕರ ವಿವಿಧ ರೀತಿಯ ಕೆಲಸಗಳಿಗೆ ಮತ್ತು ಅದರಿಂದ ಬರುವ ಆದಾಯಕ್ಕೆ ಸುಲಭವಾಗಿ ತೆರೆದುಕೊಳ್ಳುತ್ತಾರೆ. ಪುಣೆಯ ಈ ಪ್ರಾಧ್ಯಾಪಕರು ಕೂಡ ಹೀಗೆ ಒಂದು ಹೆಚ್ಚಿನ ಆದಾಯ ಬರುವ ಕೆಲಸದ ಬಲೆಗೆ ಬಿದ್ದು 20 ಲಕ್ಷಕ್ಕೂ ಹೆಚ್ಚಿನ ಹಣವನ್ನು ಕಳೆದುಕೊಂಡಿದ್ದಾರೆ.

ಪ್ರತಿಷ್ಠಿತ ಆನ್‌ಲೈನ್ ಪ್ಲಾಟ್‌ಫಾರ್ಮ್‌ನಲ್ಲಿ ಅರೆಕಾಲಿಕ (part-time) ಉದ್ಯೋಗ ಅವಕಾಶದ ಭರವಸೆಯೊಂದಿಗೆ ಬಲಿಪಶುವನ್ನು ಆಕರ್ಷಿಸುವುದು ಅಪರಾಧಿಗಳ ಕಾರ್ಯವಿಧಾನವಾಗಿದೆ. ಕ್ರಿಮಿನಲ್ ಮಾಸ್ಟರ್‌ಮೈಂಡ್‌ಗಳು ಸಹಾಯಕ ಪ್ರಾಧ್ಯಾಪಕರಿಗೆ ಪಠ್ಯ ಸಂದೇಶದ (text message) ಮೂಲಕ ಗಾಳ ಹಾಕಿದರು. ಅವರಿಗೆ ಪ್ರಮುಖ ಆನ್‌ಲೈನ್ ರಿಟೈಲ್ ವ್ಯಾಪಾರಿಗಳಲ್ಲಿ ಲಾಭದಾಯಕ ಕೆಲಸದ ಬಗ್ಗೆ ತಿಳಿಸುತ್ತಾರೆ. ಅವಕಾಶವನ್ನು ಅನ್ವೇಷಿಸಲು ಉತ್ಸುಕರಾದ ಪ್ರಾಧ್ಯಾಪಕರು ಫೋನ್ ಮೂಲಕ ವಂಚಕರೊಂದಿಗೆ ವ್ಯವಹರಿಸಲು ಶುರು ಮಾಡಿದರು. ಅವರಿಗೆ ವ್ಯವಹಾರಕ್ಕೆ ಖಾತೆಯನ್ನು ತೆರೆಯಲು ಮತ್ತು ಅದರ ರೀಚಾರ್ಜ್‌ಗಾಗಿ ರೂ 1,000 ಆರಂಭಿಕ ಪಾವತಿ ಮಾಡಲು ಸೂಚಿಸಲಾಯಿತು. ಅದನ್ನು ಪಾಲಿಸಿದ ನಂತರ ವಂಚಕರು ಅವರ ಬ್ಯಾಂಕ್ ಖಾತೆಗೆ ರೂ 1,300 ಅನ್ನು ವರ್ಗಾಯಿಸಿದರು. ಇದು ವಿಕ್ಟಿಮ್‌ನ ವಿಶ್ವಾಸಾರ್ಹತೆಯನ್ನು ಗಳಿಸುವ ತಂತ್ರ.

ಬಲಿಪಶುವು ಕೊಕ್ಕೆಯಲ್ಲಿ ಸಿಕ್ಕಿಕೊಂಡಾದ ಮೇಲೆ, ಅಪರಾಧಿಗಳು ಪ್ರಾಧ್ಯಾಪಕರ ಖಾತೆಗೆ ಸಣ್ಣ ಮೊತ್ತವನ್ನು ವರ್ಗಾಯಿಸುವುದನ್ನು ಮುಂದುವರಿಸಿದರು ಮತ್ತು ಹೆಚ್ಚಿನ ಆನ್‌ಲೈನ್ ಕಾರ್ಯಗಳನ್ನು ನಿಯೋಜಿಸಿದರು. ವಂಚಕರು ಪ್ರಾಧ್ಯಾಪಕರಿಗೆ ಹೆಚ್ಚಿನ ಟಾಸ್ಕ್‌ಗಳಿಗೆ ನೊಂದಣಿ ಮಾಡಲು ವಿವಿಧ ಮೊತ್ತವನ್ನು ಹೂಡಿಕೆ ಮಾಡಿಸಿದರು. ಇದರಿಂದ ಗಣನೀಯ ಆದಾಯದ ಭರವಸೆಯನ್ನೂ ನೀಡಿದರು. ದುರದೃಷ್ಟವಶಾತ್, ಕ್ರಿಮಿನಲ್‌ಗಳ ಬಲೆಗೆ ಮತ್ತಷ್ಟು ಸಿಲುಕಿದ ಪ್ರಾಧ್ಯಾಪಕರು ವಂಚಕರ ಸೂಚನೆಯಂತೆ ಅನೇಕ ವಹಿವಾಟುಗಳಲ್ಲಿ ಬೇರೆ ಬೇರೆ ಟಾಸ್ಕ್‌ಗಳಿಗೆ 20.6 ಲಕ್ಷ ರೂ ವರ್ಗಾವಣೆ ಮಾಡಿದ್ದರು. ಅವರ ಆನ್ಲೈನ್‌ ಕೆಲಸದ ಖಾತೆಯನ್ನು ಪರಿಶೀಲಿಸಿದಾಗ, ಸಹಾಯಕ ಪ್ರಾಧ್ಯಾಪಕರು 6 ಲಕ್ಷ ರೂಪಾಯಿ ಮೊತ್ತದ ಕಮಿಷನ್‌ನ ದಾಖಲೆಗಳನ್ನು ಗಮನಿಸಿದರು. ಆದರೆ, ಈ ಹಣವನ್ನು ತನ್ನ ಬ್ಯಾಂಕ್ ಖಾತೆಗೆ ವರ್ಗಾಯಿಸಲು ಸಾಧ್ಯವಾಗಲಿಲ್ಲ. ಆತಂಕಗೊಂಡ ಅವರು ವಂಚಕರನ್ನು ಸಂಪರ್ಕಿಸಿದರು, ನಿಗದಿತ ಸಮಯದಲ್ಲಿ ಪೂರ್ಣಗೊಳಿಸದ ಕಾರ್ಯಗಳಿಂದ ಖಾತೆಗೆ ಹಾನಿಯಾಗಿದೆ ಎಂದು ತಿಳಿದುಬಂತು.

ಅಪರಾಧಿಗಳು ಖಾತೆಯನ್ನು ಸರಿಪಡಿಸಲು ಹೆಚ್ಚುವರಿ ಹಣವನ್ನು ಠೇವಣಿ ಮಾಡಲು ಪ್ರಾಧ್ಯಾಪಕರ ಮನವೊಲಿಸಲು ಪ್ರಯತ್ನಿಸಿದರು. ಈ ಹಂತದಲ್ಲಿ ಅವರಿಗೆ ತಾನು ಮೋಸದ ಜಾಲದಲ್ಲಿ ಸಿಕ್ಕಿಹಾಕಿಕೊಂಡಿದ್ದಾನೆ ಎಂದು ಮನವರಿಕೆಯಾಯಿತು. ಸಹಾಯಕ ಪ್ರಾಧ್ಯಾಪಕರು ಇದೀಗ ಗಮನಾರ್ಹ ಆರ್ಥಿಕ ನಷ್ಟ ಮತ್ತು ಆನ್‌ಲೈನ್ ಟಾಸ್ಕ್ ವಂಚನೆಗೆ ಬಲಿಯಾದ ದುಃಖದಲ್ಲಿದ್ದಾರೆ. ಈ ಘಟನೆಯು ಅಂತರ್ಜಾಲದಲ್ಲಿ ಅಲೆದಾಡುವಾಗ ಜಾಗರೂಕತೆ ಮತ್ತು ಎಚ್ಚರಿಕೆಯ ಪ್ರಾಮುಖ್ಯತೆಯನ್ನು ಮತ್ತೊಮ್ಮೆ ನೆನಪಿಸುತ್ತದೆ.

ಆನ್‌ಲೈನ್ ವಂಚಕರು ಜನರನ್ನು ವಂಚಿಸಲು ಮತ್ತು ಅನಧಿಕೃತ ವಹಿವಾಟುಗಳನ್ನು ನಡೆಸಲು ಏಕೀಕೃತ ಪಾವತಿಗಳ ಇಂಟರ್ಫೇಸ್ (ಯುಪಿಐ) ವಹಿವಾಟುಗಳನ್ನು ಗುರಿಯಾಗಿಸಿಕೊಂಡು ಜನಸಾಮಾನ್ಯರ ಮೇಲೆ ವ್ಯಾಪಕವಾಗಿ ದಾಳಿ ಮಾಡುತ್ತಿದ್ದಾರೆ. 2020-2023ರ ಅವಧಿಯಲ್ಲಿ ಆನ್‌ಲೈನ್ ಹಣಕಾಸು ವಂಚನೆಯು ಅತ್ಯಂತ ಪ್ರಚಲಿತವಾಗಿದೆ ಎಂದು ಸೈಬರ್ ಕ್ರೈಮ್ ಟ್ರೆಂಡ್‌ಗಳ ಶ್ವೇತಪತ್ರದಲ್ಲಿ ತಿಳಿಸಲಾಗಿದೆ. ಭಾರತದಲ್ಲಿನ ಒಟ್ಟಾರೆ ಸೈಬರ್ ಅಪರಾಧದ ಶೇಕಡಾ 80 ರಷ್ಟು ಪಾಲನ್ನು ಕೇವಲ 10 ಜಿಲ್ಲೆಗಳು ಹೊಂದಿವೆ ಎಂದು ಅದು ಬಹಿರಂಗಪಡಿಸಿದೆ. ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾನ್ಪುರ್‌ದಲ್ಲಿ ಪ್ರಾರಂಭಿಸಿದ ಫ್ಯೂಚರ್ ಕ್ರೈಮ್ ರಿಸರ್ಚ್ ಫೌಂಡೇಶನ್, ಹಣಕಾಸಿನ ವಂಚನೆಗಳಿಗೆ ಸಂಬಂಧಿಸಿದ ಹಾಟ್‌ಸ್ಪಾಟ್‌ಗಳು ಮತ್ತು ಉದಯೋನ್ಮುಖ ಕೇಂದ್ರಗಳ ಆತಂಕಕಾರಿ ಪ್ರವೃತ್ತಿಗಳನ್ನು ಬಹಿರಂಗಪಡಿಸಿದೆ.

ಇದನ್ನೂ ಓದಿ: ಸೈಬರ್‌ ಸೇಫ್ಟಿ ಅಂಕಣ: ಕ್ರಿಪ್ಟೋ ಜಾಕಿಂಗ್; ಕ್ರಿಪ್ಟೋ ಕರೆನ್ಸಿಯ ಗಣಿಗಾರಿಕೆ

ಆ ವರದಿಯ ಪ್ರಕಾರ, ಶೇಕಡ 77.41ರಷ್ಟು ಪ್ರಕರಣಗಳು ಆನ್‌ಲೈನ್ ಹಣಕಾಸಿನ ವಂಚನೆಗೆ ಸಂಬಂಧಿಸಿದವುಗಳಾಗಿದೆ. ಶೇಕಡ 12.02ರಷ್ಟು ಪ್ರಕರಣಗಳು ಸಾಮಾಜಿಕ ಜಾಲತಾಣಕ್ಕೆ ಸಂಬಂಧಿಸಿದವುಗಳು ಮತ್ತು ಕೇವಲ ಶೇಕಡ 1.57ರಷ್ಟು ಮಾತ್ರ ಹ್ಯಾಕಿಂಗ್ ಸಂಬಂಧಿತ ಪ್ರಕರಣಗಳಾಗಿವೆ. ಉಳಿದ ಶೇಕಡ 9ರಷ್ಟು ಇತರ ಸೈಬರ್ ಕ್ರೈಮ್‌ಗಳು ದಾಖಲಾಗಿದೆ. ಭರತ್‌ಪುರ್, ಮಥುರ, ನೂಹ್, ದಿಯೋಘರ್, ಜಾಮ್‌ತಾರ, ಗುರುಗ್ರಾಮ್, ಅಲ್ವರ್, ಬೊಕಾರೊ, ಕರ್ಮಾತಾಂಡ್, ಮತ್ತು ಗಿರಿಧ್ ಈ ಪ್ರಕರಣಗಳ ಹಾಟ್‌ಸ್ಪಾಟ್‌ಗಳಾಗಿವೆ.

ಈಗ ಇನ್ನೊಂದು ಹೊಸ ಆನ್ಲೈನ್ ವಂಚನೆ ಆಗ್ತಿರೋದು ಯಾವುದೇ ಒಟಿಪಿ, ಪಿನ್ ಅಥವಾ ಪಾಸ್ವರ್ಡ್ ಕೊಡದೆ ನಿಮ್ಮ ಖಾತೆಯಿಂದ ರೂ. 10,000ದ ವರೆಗೂ ವಿತ್ ಡ್ರಾ ಆಗಿದೆಯಾ? ನಿಮ್ಮ ಖಾತೆಯ ವಹಿವಾಟನ್ನು ಪರಿಶೀಲಿಸಿದಾಗ ಅದರಲ್ಲಿ AEPS transaction ಅಂತ ನಮೂದಿಸಲಾಗಿರುತ್ತದೆ. ಇದು ಯಾವುದೇ ಬೇರೆ ಖಾತೆಗೆ ಹೋಗಿರುವುದಿಲ್ಲ. 10,000ದ ವರೆಗೆ ನಗದು ವಿತ್ ಡ್ರಾ ಆಗಿರುತ್ತದೆ. ಇದಕ್ಕೆ ಕಾರಣ ಎಇಪಿಎಸ್ – ಆಧಾರ್ ಮೂಲಕ ದೃಢೀಕರಿಸಲ್ಪಡುವ ಪಾವತಿ ವ್ಯವಸ್ಥೆ (AEPS – Aadhaar Enabled Payment System). ಇದು ಭಾರತ ಸರ್ಕಾರದಿಂದ ಬ್ಯಾಂಕಿಂಗ್ ವ್ಯವಸ್ಥೆಗೆ ಒಳಪಡದ ಹಳ್ಳಿಗಾಡಿನಲ್ಲಿರುವವರಿಗಾಗಿ ತಂದ ಸೌಲಭ್ಯ. ಇದಕ್ಕೆ ನಿಮ್ಮ ಆಧಾರ್ ಸಂಖ್ಯೆ ಮತ್ತು ಬಯೋಮೆಟ್ರಿಕ್ ವಿವರಗಳು ಸಾಕು. ಹಳ್ಳಿಗಳಲ್ಲಿರುವವರೂ ಬ್ಯಾಂಕಿಂಗ್ ಸೌಲಭ್ಯ ಪಡೆಯುವಂತಾಗಬೇಕು ಎಂದು ಸ್ಥಾಪಿಸಲಾದ ಮೈಕ್ರೋ ಎಟಿಎಮ್‌ಗಳಲ್ಲಿ AEPS ಬಳಸಲಾಗುತ್ತದೆ. ಸೈಬರ್ ಕ್ರಿಮಿನಲ್‌ಗಳು ಎಲ್ಲೆಲ್ಲಾ ನಿಮ್ಮ ಆಧಾರ್ ನಂಬರ್ ಮತ್ತು ಬಯೋಮೆಟ್ರಿಕ್ ಬಳಸಲ್ಪಟ್ಟಿದೆಯೋ ಅಲ್ಲಿಂದ ಡಾಟ ಕಳ್ಳತನ ಮಾಡಿ ನಂತರ ವಂಚನೆ ಮಾಡುತ್ತಿದ್ದಾರೆ. ಇದರಿಂದ ಪಾರಾಗಲು mAadhaar ಆ್ಯಪ್ ಅಥವಾ MyAadhaar ಪೋರ್ಟಲ್‌ಗೆ ಹೋಗಿ ಬಯೋಮೆಟ್ರಿಕ್ ಲಾಕ್ ಫೀಚರ್ ಬಳಸಿ ನಿಮ್ಮ ಬಯೋಮೆಟ್ರಿಕ್‌ ಅನ್ನು ಲಾಕ್ ಮಾಡಿಕೊಳ್ಳಿ.

ಇದನ್ನೂ ಓದಿ: ಸೈಬರ್‌ ಸೇಫ್ಟಿ ಅಂಕಣ: ಅಳಿವಿನ ಅಂಚಿನಲ್ಲಿ ಝಣ ಝಣ ಕಾಂಚಾಣ!

Exit mobile version