Site icon Vistara News

ಸೈಬರ್‌ ಸೇಫ್ಟಿ ಅಂಕಣ: ಕೊಲೆ, ಅಪಹರಣವನ್ನೂ ಮೀರಿಸಿದ ಸೈಬರ್ ವಂಚನೆಗಳು

cyber criminal

ಕಳೆದ ವಾರ ಹೀಗೊಂದು ಸುದ್ದಿಯನ್ನು ನೋಡಿದೆ. ದೆಹಲಿಯ ಪೋಲಿಸ್ ಠಾಣೆಗಳಲ್ಲಿ ದಿನಕ್ಕೆ 200ಕ್ಕೂ ಹೆಚ್ಚು ದೂರುಗಳು ದಾಖಲಾಗ್ತಿವೆಯಂತೆ. ಸೆಕ್ಸ್‌ಟಾರ್ಷನ್ (Sextortion), ಒಟಿಪಿ ವಂಚನೆಗಳು, ಮನೆಯಿಂದ ಕೆಲಸದ ಆಸೆ ತೋರಿಸಿ ವಂಚನೆಗಳು ಹೀಗೆ ಹಲವು ರೀತಿಯಲ್ಲಿ ಜನರನ್ನು ಸೈಬರ್ ಕ್ರಿಮಿನಲ್‌ಗಳು (Cyber criminals) ಕಾಡುತ್ತಿದ್ದಾರೆ. ಇದು ದೆಹಲಿ ಪೊಲೀಸರಿಗೆ ಅತಿ ದೊಡ್ಡ ಸವಾಲಾಗಿದೆ.

ದೆಹಲಿಯಲ್ಲಿ ಸೈಬರ್ ಪ್ರಕರಣಗಳು ಕೊಲೆ, ಅಪಹರಣ ಮತ್ತು ಕಳ್ಳತನವನ್ನು ಮೀರಿಸಿದೆ ಎಂದು ಪೊಲೀಸರು ಹೇಳಿದ್ದಾರೆ. ದೆಹಲಿಯಲ್ಲಿ ಪ್ರತಿ ದಿನ ಸರಾಸರಿ ಎರಡು ಕೊಲೆಗಳು, 32 ಅಪಹರಣ ಪ್ರಕರಣಗಳು ಮತ್ತು 1.7 ಕಳ್ಳತನ ಪ್ರಕರಣಗಳು ವರದಿಯಾಗುತ್ತಿದೆಯಂತೆ. ದೆಹಲಿ ಪೊಲೀಸರ ಸೈಬರ್ ಸ್ಟೇಷನ್‌ಗಳು, ಸಾಮಾಜಿಕ ಮಾಧ್ಯಮ ಮತ್ತು ರಾಷ್ಟ್ರೀಯ ಅಪರಾಧ ವರದಿ ಪೋರ್ಟಲ್ (ಎನ್‌ಸಿಆರ್‌ಪಿ) ಯಿಂದ ಡೇಟಾವನ್ನು ಬಳಸಲಾಗಿದೆ.

ದೆಹಲಿ ಪೊಲೀಸ್‌ನ ಅಧಿಕಾರಿಯೊಬ್ಬರ ಪ್ರಕಾರ ಪ್ರತಿಯೊಂದು ರೀತಿಯ ಸೈಬರ್ ಅಪರಾಧಕ್ಕೂ ವಿಭಿನ್ನ ರೀತಿಯ ಗ್ಯಾಂಗ್‌ಗಳಿವೆಯಂತೆ. ಅವರ ತನಿಖೆಯ ಪ್ರಕಾರ, ಹೆಚ್ಚಿನ ಗ್ಯಾಂಗ್‌ಗಳು ಮೇವಾತ್‌ನಿಂದ ಕಾರ್ಯ ನಿರ್ವಹಿಸುತ್ತಿರುವುದಾಗಿ ಹೇಳಿದರು. ಆ ನಿಟ್ಟಿನಲ್ಲಿ ತೀವ್ರ ನಿಗಾ ವಹಿಸುತ್ತಿರುವುದರಿಂದ ಹೆಚ್ಚಿನ ಪ್ರಕರಣಗಳನ್ನು ಶೀಘ್ರದಲ್ಲಿಯೇ ಪರಿಹರಿಸುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಗ್ಯಾಂಗ್‌ಗಳು ಜನರಿಂದ ಒಟಿಪಿ ಪಡೆಯಲು ತಾಂತ್ರಿಕ ಸಿಬ್ಬಂದಿಯಂತೆ ಸೋಗು ಹಾಕುತ್ತಾರೆ. ಅಥವಾ ನಕಲಿ ಮೊಬೈಲ್ ಅಪ್ಲಿಕೇಶನ್‌ ಸ್ಥಾಪಿಸಲು ತಿಳಿಸುತ್ತಾರೆ. ಇದರಿಂದ ಅವರಿಗೆ ಜನರ ಖಾಸಗಿ ಮಾಹಿತಿ ತಿಳಿಯಲು ದಾರಿ ಸಿಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.

ವಿದ್ಯಾರ್ಥಿಗಳಿಗೆ ಕೆಲಸ ಕೊಡಿಸುವ ಆಮಿಷ ಒಡ್ಡಿ ಅವರ ಎಲ್ಲಾ ಮಾಹಿತಿಗಳನ್ನು ಕದಿಯುತ್ತವೆ. ಜೊತೆಗೆ ‘ವರ್ಕ್ ಫ್ರಂ ಹೋಮ್‌’ ಕೆಲಸ ಕೊಡಿಸುತ್ತೇವೆ ಅಥವಾ ಪಾರ್ಟ್ ಟೈಮ್ ಕೆಲಸ ಕೊಡಿಸುತ್ತೇವೆ, ಗಂಟೆಗಳ ಲೆಕ್ಕದಲ್ಲಿನ ಕೆಲಸ ಕೊಡಿಸುತ್ತೇವೆ ಎಂದೂ ಜನರನ್ನು ಮೋಸಗೊಳಿಸುವ ವಿವಿಧ ತಂತ್ರಗಳನ್ನು ಉಪಯೋಗಿಸುತ್ತಾರೆ. ಕೆಲವು ಗ್ಯಾಂಗ್‌ಗಳು ಹಲವಾರು ಲೈಂಗಿಕ ದೌರ್ಜನ್ಯ ಪ್ರಕರಣಗಳಲ್ಲಿ ಭಾಗಿಯಾಗಿವೆ. ಅವರು ನಿವೃತ್ತ ಸರ್ಕಾರಿ ಅಧಿಕಾರಿಗಳು ಅಥವಾ ವೈದ್ಯರಿಗೆ ವೀಡಿಯೊ ಕರೆ ಮಾಡಿ ಆಕರ್ಷಿಸಲು ಕೆಲವು ಮಹಿಳೆಯರನ್ನು ಬಳಸಿಕೊಳ್ಳುತ್ತಾರೆ. ಆ ಕರೆಯನ್ನು ರೆಕಾರ್ಡ್ ಮಾಡಿಕೊಂಡು ವಿಕ್ಟಿಮ್‌ನ ಸೆಕ್ಸ್‌ಟಾರ್ಷನ್‌ ಶುರು ಮಾಡುತ್ತಾರೆ ಎಂದು ಅಧಿಕಾರಿ ಹೇಳಿದರು.

ಜಮ್ತಾರಾ ಮತ್ತು ಜಾರ್ಖಂಡ್‌ನ ಇತರ ಪ್ರದೇಶಗಳಿಂದ ಕಾರ್ಯನಿರ್ವಹಿಸುವ ಗ್ಯಾಂಗ್‌ಗಳನ್ನು ಕೆವೈಸಿ ಸ್ಕ್ಯಾಮ್‌ಸ್ಟರ್‌ಗಳು ಎಂದು ಕರೆಯಲಾಗುತ್ತದೆ. ಈ ವಂಚಕರು ಹೆಚ್ಚಾಗಿ ಬ್ಯಾಂಕ್‌ಗಳು ಅಥವಾ ಇತರ ಹಣಕಾಸು ಕಂಪನಿಗಳ ಅಧಿಕಾರಿಗಳ ಸೋಗಿನಲ್ಲಿ ಜನರಿಗೆ ಕರೆ ಮಾಡಿ KYC ಫಾರ್ಮ್‌ಗಳನ್ನು ಭರ್ತಿ ಮಾಡಲಾಗಿಲ್ಲ ಮತ್ತು ಇದರಿಂದ ಅವರ ಬ್ಯಾಂಕ್ ಖಾತೆಗಳು ಯಾವುದೇ ದಿನ ಮುಚ್ಚಬಹುದು ಎಂದು ಹೆದರಿಸುತ್ತಾರೆ.

ಕರೆ ಮಾಡಿದವರು ನಿಜವಾಗಿಯೂ ಬ್ಯಾಂಕಿನ ಅಥವಾ ಇತರೆ ಹಣಕಾಸು ಸಂಸ್ಥೆಯ ಅಧಿಕಾರಿ ಎಂದು ಜನರು ತಿಳಿದು ಅವರನ್ನು ನಂಬುತ್ತಾರೆ. ಕೆಲವು ಜನರು KYC ಕುರಿತು ಸುಳ್ಳು SOSಗಳನ್ನು ಸಹ ಸ್ವೀಕರಿಸುತ್ತಾರೆ. ಅವರು ತಮ್ಮ ಖಾತೆಯನ್ನು ಉಳಿಸುವ ಧಾವಂತದಲ್ಲಿ ಕರೆ ಮಾಡಿದವರ ಮತ್ತು SOSನಲ್ಲಿ ಬಂದ ಲಿಂಕ್‌ನ ವಿವರಗಳನ್ನು ಪರಿಶೀಲಿಸುವುದಿಲ್ಲ. ಆದರೆ ಅವರ ಎಲ್ಲಾ ಹಣವನ್ನು ಕಳೆದುಕೊಳ್ಳುತ್ತಾರೆ. ಜಾರ್ಖಂಡ್ ಮತ್ತು ಬಿಹಾರದ ಗ್ಯಾಂಗ್‌ಗಳು ತಮ್ಮ ಬ್ಯಾಂಕಿಂಗ್ ಅಪ್ಲಿಕೇಶನ್ ಅಥವಾ ಫೋನ್ ಬ್ಯಾಂಕಿಂಗ್ ಅನ್ನು ಸರಿಪಡಿಸುವ ನೆಪದಲ್ಲಿ ಮೋಸಗಾರರನ್ನು ಗುರಿಯಾಗಿಸುತ್ತಾರೆ” ಎಂದು ಇನ್ನೊಬ್ಬ ಅಧಿಕಾರಿ ಹೇಳಿದರು.

online fraud

ಇತ್ತೀಚಿನ ಬಹಳ ಜನಪ್ರಿಯ ಹಗರಣಗಳಲ್ಲಿ ಒಂದಾದ ‘WFH ವಿಡಿಯೋಗಳನ್ನು ಲೈಕ್ ಮಾಡಿ, ಶ್ರೀಮಂತರಾಗಿ’ ಹಗರಣವು ಮುಖ್ಯವಾಗಿ ದೆಹಲಿ, ಯುಪಿ ಮತ್ತು ಹರಿಯಾಣದಿಂದ ಕಾರ್ಯನಿರ್ವಹಿಸುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. “ಜನರು 20 ಲಕ್ಷಕ್ಕೂ ಹೆಚ್ಚು ಹಣವನ್ನು ಕಳೆದುಕೊಂಡಿರುವ ಬಗ್ಗೆ ನಮಗೆ ದೂರು ಬಂದಿದೆ. ಆರೋಪಿಗಳು ಟೆಲಿಗ್ರಾಮ್ ಗ್ರೂಪ್ ರಚಿಸಿ ಅದರ ಮುಖಾಂತರ ನಕಲಿ ವೆಬ್‌ಸೈಟ್ ಮಾಡಿ ನಿಜವಾದ ಉದ್ಯೋಗವನ್ನು ನೀಡುತ್ತಿದ್ದಾರೆಂದು ತೋರಿಸಿತ್ತಾರೆ. ಅವರು ಕೆಲಸಕ್ಕಾಗಿ ಹತಾಶರಾಗಿರುವ ಮಹಿಳೆಯರು ಮತ್ತು ನಿರುದ್ಯೋಗಿಗಳನ್ನು ಗುರಿಯಾಗಿಸುತ್ತಾರೆ. ಅವರು ವೆಬ್‌ಸೈಟ್‌ಗೆ ಪ್ರವೇಶಿಸಲು ಮತ್ತು ಹೆಚ್ಚಿನ ಹಣವನ್ನು ಗಳಿಸಲು ಅನುವು ಮಾಡಿಕೊಡಲು ತಮ್ಮ ಕಂಪನಿಗೆ ಹಣವನ್ನು ಹಾಕಲು ವಿಕ್ಟಿಮ್‌ಗಳಿಗೆ ನಿರ್ದಿಷ್ಟ ಕೆಲಸದ ಟಾರ್ಗೆಟ್‌ ಕೊಡುತ್ತಾರೆ. ಆರಂಭದಲ್ಲಿ, ಜನರು ವೀಡಿಯೊಗಳನ್ನು ಇಷ್ಟಪಡುವ ಮೂಲಕ ಅಥವಾ ಇದೇ ರೀತಿಯ ಕಾರ್ಯಗಳನ್ನು ಮಾಡುವ ಮೂಲಕ ಸ್ವಲ್ಪ ಮೊತ್ತವನ್ನೂ ಗಳಿಸುವಂತೆ ಮಾಡುತ್ತಾರೆ” ಎಂದು ಇನ್ನೊಬ್ಬ ಅಧಿಕಾರಿ ಹೇಳಿದರು. ಅಲ್ಪಸ್ವಲ್ಪ ಹಣ ಬಂದು ನಂಬಿಕೆ ಬಂದವರಿಗೆ ಹೆಚ್ಚಿನ ಲಾಭಕ್ಕೆ ಅಧಿಕ ಹಣವನ್ನು ಹಾಕುವಂತೆ ಪ್ರೇರೇಪಿಸುತ್ತಾರೆ. ಕಡೆಗೆ ಸಂಪರ್ಕಕ್ಕೂ ಸಿಗದೆ ಕಾಣೆಯಾಗುತ್ತಾರೆ.

ಇದನ್ನೂ ಓದಿ: ಸೈಬರ್‌ ಸೇಫ್ಟಿ ಅಂಕಣ: ಸೈಬರ್ ಸುರಕ್ಷತೆಗೆ ಆದ್ಯತೆ, ನಮ್ಮೆಲ್ಲರ ಬದ್ಧತೆ

ಭಾರತೀಯ ಸೈಬರ್ ಅಪರಾಧ ಸಮನ್ವಯ ಕೇಂದ್ರ (I4c) ಏಪ್ರಿಲ್ 1, 2021ರಿಂದ ಸೈಬರ್ ಅಪರಾಧಿಗಳು ದೇಶದಿಂದ 10,300 ಕೋಟಿ ರೂಪಾಯಿಗೂ ಹೆಚ್ಚು ಹಣವನ್ನು ವಶಪಡಿಸಿಕೊಂಡಿದ್ದಾರೆ ಎಂದು ಜನವರಿ ತಿಂಗಳ ಮೊದಲ ವಾರದಲ್ಲಿ ಬಹಿರಂಗಪಡಿಸಿದೆ. ಆದಾಗ್ಯೂ, ಅಧಿಕಾರಿಗಳು ಈ ಅಕ್ರಮ ವಹಿವಾಟುಗಳಲ್ಲಿ ಸುಮಾರು 1,127 ಕೋಟಿ ರೂಪಾಯಿಗಳಷ್ಟನ್ನು ವಿಫಲಗೊಳಿಸಲು ಯಶಸ್ವಿಯಾಗಿದ್ದಾರೆ ಎಂದು ಪ್ರಕಟಿಸಿದೆ. (https://i4c.mha.gov.in/)

2021 ರಲ್ಲಿ ರಾಷ್ಟ್ರೀಯ ಸೈಬರ್ ಕ್ರೈಮ್ ರಿಪೋರ್ಟಿಂಗ್ ಪೋರ್ಟಲ್ (ಎನ್‌ಸಿಆರ್‌ಪಿ) ನಲ್ಲಿ 4.52 ಲಕ್ಷಕ್ಕೂ ಹೆಚ್ಚು ಘಟನೆಗಳು ಲಾಗ್ ಆಗುವುದರೊಂದಿಗೆ ಸೈಬರ್ ಕ್ರೈಮ್‌ನ ವರದಿಯಾದ ಪ್ರಕರಣಗಳು ಗಮನಾರ್ಹವಾಗಿ ಹೆಚ್ಚಿವೆ. ಈ ಅಂಕಿ ಅಂಶವು 2022 ರಲ್ಲಿ 113.7 ಪ್ರತಿಶತದಷ್ಟು ಹೆಚ್ಚಳವನ್ನು ಅನುಭವಿಸಿದೆ, ಇದು 9.66 ಲಕ್ಷ ಪ್ರಕರಣಗಳನ್ನು ತಲುಪಿದೆ ಎಂದು I4C ನಿರ್ದೇಶಕ ರಾಜೇಶ್ ಕುಮಾರ್ ಅವರು ಹೈಲೈಟ್ ಮಾಡಿದ್ದಾರೆ. ಮಾಧ್ಯಮ ಸಂವಾದದ ಸಂದರ್ಭದಲ್ಲಿ ವರ್ಕ್ ಫ್ರಮ್ ಹೋಮ್ (WFH) ಅಥವಾ ಅರೆಕಾಲಿಕ ಉದ್ಯೋಗ ಆಫರ್‌ಗಳಿಗೆ ಸಂಬಂಧಿಸಿದ ವಂಚನೆಗಳು 2023 ರಲ್ಲಿ ವರದಿಯಾದ ಸೈಬರ್ ಅಪರಾಧಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದು, ಅಕ್ರಮ ಸಾಲ ನೀಡುವ ಅಪ್ಲಿಕೇಶನ್‌ಗಳ ಮೂಲಕ ವಂಚನೆ ಎರಡನೆಯ ಸ್ಥಾನದಲ್ಲಿದೆ ಎಂದು ಹೇಳಿದರು.

ಸೈಬರ್ ಲೋಕದಲ್ಲಿನ ವಂಚನೆಗಳಿಗೆ ಗುರಿಯಾಗದಂತೆ ನಿಮ್ಮನ್ನು ರಕ್ಷಿಸಿಕೊಳ್ಳಲು ಇತ್ತೀಚಿನ ಸೈಬರ್ ಕ್ರೈಮ್ ಟ್ರೆಂಡ್‌ಗಳ ಕುರಿತು ಮಾಹಿತಿಯನ್ನರಿತು ಜಾಣರಾಗಿರಿ. ಜಾಗರೂಕರಾಗಿರಿ. ಆನ್‌ಲೈನ್ ವಂಚನೆಗಳಿಂದ ನಿಮ್ಮನ್ನು ರಕ್ಷಿಸಿಕೊಳ್ಳಿ. ಯಾವುದೇ ಸೈಬರ್ ಕ್ರೈಮ್ ಘಟನೆಗಳನ್ನು I4Cಗೆ (https://cybercrime.gov.in/) ವರದಿ ಮಾಡಿ ಅಥವಾ 1930ಗೆ ಕರೆ ಮಾಡಿ.

ಇದನ್ನೂ ಓದಿ: ಸೈಬರ್‌ ಸೇಫ್ಟಿ ಅಂಕಣ: ಎಚ್ಚರಿಕೆ, ನಿಮ್ಮ ಹಣ ಸುರಕ್ಷಿತವಾಗಿಲ್ಲ!

Exit mobile version