Site icon Vistara News

ಸೈಬರ್‌ ಸೇಫ್ಟಿ ಅಂಕಣ: ಸೈಬರ್ ಬೆದರಿಕೆಗೆ ಧೈರ್ಯವೇ ಔಷಧ

cyber stalking and bullying on the rise and to be reported

“ಏಯ್ ಬುಲ್ ಬುಲ್ ಮಾತಾಡಕಿಲ್ವಾ?” ಈ ಡಯಲಾಗ್ ಎಲ್ಲರಿಗೂ ಗೊತ್ತಿರಬಹುದು. ಜಲೀಲ ಪಾತ್ರಧಾರಿ ಅಂಬರೀಷ್ ಅಲಮೇಲು ಪಾತ್ರಧಾರಿ ಆರತಿಯವರನ್ನು ಕಾಲೇಜಿಗೆ ಹೋಗುವ ದಾರಿಯಲ್ಲಿ ಚುಡಾಯಿಸುತ್ತಾ ಹಿಂಬಾಲಿಸುವ ದೃಶ್ಯ. ನಾಗರ ಹಾವು ಚಿತ್ರದ್ದು. ಶಾಲಾಕಾಲೇಜುಗಳಲ್ಲಿ ಓದುವಾಗಲೂ ಈ ರೀತಿಯ ಘಟನೆಗಳು ನಿಮ್ಮ ಗಮನಕ್ಕೆ ಬಂದಿರಬಹುದು, ಅಥವಾ ಅನುಭವವಾಗಿರಬಹುದು.

ಇಂತಹದೇ ಅನುಭವ ಸೈಬರ್ ಲೋಕದಲ್ಲೂ ನಿಮಗೆ ಆಗಿರಬಹುದು. ಸಾಮಾಜಿಕ ಜಾಲತಾಣಗಳಲ್ಲಿ ಗೊತ್ತಿರದ ವ್ಯಕ್ತಿಗಳು ನಿಮ್ಮ ಪೋಸ್ಟಿಗೆ ಲೈಕ್ ಕೊಡೋದು, ಕಮೆಂಟ್ ಮಾಡೋದು, ಪೋಸ್ಟನ್ನು ಹಂಚಿಕೊಳ್ಳೋದು ಇತ್ಯಾದಿ. ನಂತರ ನಿಮಗೆ ಫ್ರೆಂಡ್ ರಿಕ್ವೆಸ್ಟ್ ಕಳಿಸೋದು. ಮೆಸೆಂಜರ್ ಅಥವಾ ಇನ್‌ಸ್ಟಾಗ್ರಾಮಲ್ಲೂ ಹಿಂಬಾಲಿಸೋದು ಮಾಡಿರಬಹುದಲ್ವಾ? ಇದನ್ನು ಸೈಬರ್ ಲೋಕದಲ್ಲಿ ಸೈಬರ್ ಸ್ಟಾಕಿಂಗ್ (cyber stalking) ಎನ್ನುತ್ತೇವೆ. ಇದರ ಬಗ್ಗೆ ವಿವರವಾದ ಮಾಹಿತಿಯನ್ನು ನನ್ನ ಸೈಬರ್ ಗುರು ಡಾ. ಅನಂತ ಪ್ರಭು ಕ್ಲಬ್ ಹೌಸ್‌ನ ಉಪನ್ಯಾಸದಲ್ಲಿ ಹೇಳಿದ್ದರು.

ಸೈಬರ್‌ಸ್ಟಾಕಿಂಗ್ ಎನ್ನುವುದು ಒಬ್ಬರ ಮೇಲಿನ ಕೋಪ, ಸೇಡು ಅಥವಾ ಅವಮಾನ ಮುಂತಾದ ಕಾರಣಗಳಿಗಾಗಿ ಆ ವ್ಯಕ್ತಿಯನ್ನು ಗುರಿಯಾಗಿಸಿ ಮಾಡುವ ತಂತ್ರಜ್ಞಾನ ಆಧಾರಿತ “ದಾಳಿ” ಆಗಿದೆ. ಸೈಬರ್ ಸ್ಟಾಕಿಂಗಿನ ಉದ್ದೇಶಗಳು ಮುಖ್ಯವಾಗಿ ಕಿರುಕುಳ, ಮುಜುಗರ ಮತ್ತು ದಾಳಿಗೆ ಒಳಗಾದ ವ್ಯಕ್ತಿಯನ್ನು ಅವರ ನೆಟ್‌ವರ್ಕಿನಲ್ಲಿ ಅವಮಾನ ಮಾಡುವುದಾಗಿದೆ.

ಸೈಬರ್ ಕ್ರಿಮಿನಲ್‌ಗಳು ಎಲ್ಲಾ ರೀತಿಯ ತಂತ್ರಗಳನ್ನು ಬಳಸಿ ನಿಮ್ಮ ವಿಶ್ವಾಸವನ್ನು ಗೆಲ್ಲುತ್ತಾರೆ. ನಿಮ್ಮ ಸೆಲ್ಫಿ ಕಳುಹಿಸಲು ಕೇಳುತ್ತಾರೆ. ಇದರಿಂದ ಅವರು ನಿಮ್ಮ ನಿಖರವಾದ ಸ್ಥಳವನ್ನು ಕಂಡುಹಿಡಿಯಲು ಸಾಧ್ಯವಾಗುತ್ತದೆ. www.pic2map.com ವೆಬ್‌ಸೈಟಿನಲ್ಲಿ ನಿಮ್ಮ ಫೋಟೋ ಅಪ್‌ಲೋಡ್ ಮಾಡಿದಾಗ ಫೋಟೋ ತೆಗೆದ ಜಾಗದ ನಿಖರ ಜಿಪಿಎಸ್ ಸ್ಥಳವನ್ನು ಕೊಡುತ್ತದೆ. ನೀವೂ ಕೂಡ ಆ ವೆಬ್‌ಸೈಟಿನಲ್ಲಿ ಯಾವುದಾದರೂ ಫೋಟೋ ಹಾಕಿ ಪರೀಕ್ಷಿಸಿಕೊಳ್ಳಬಹದು.

ನೀವು ಅಪ್‌ಲೋಡ್ ಮಾಡುವ ಫೋಟೋಗಳು ನಿಮ್ಮ ಬಗ್ಗೆ ಮುಖ್ಯವಾದ ಮಾಹಿತಿಗಳನ್ನು ಅನಾಮಧೇಯ ವ್ಯಕ್ತಿಗಳಿಗೆ ಕೊಡಬಹುದು. ಹಾಗಾಗಿ ನಿಮ್ಮ ಇರುವಿನ ಕುರುಹು ನಿಮ್ಮ ಸೆಲ್ಫಿಗಳಿಂದ ಕ್ರಿಮಿನಲ್‌ಗಳಿಗೆ ಸಿಗಬಹುದು. www.deepfakesweb.com ಎಂಬ ಇನ್ನೊಂದು ವೆಬ್‌ಸೈಟ್ ಬಳಸಿ ನಿಮ್ಮ ಫೋಟೋಗಳನ್ನು ಹಾಕಿ ಫೇಕ್ ವಿಡಿಯೊಗಳನ್ನು ಮಾಡಿ ಅಂತರ್ಜಾಲದಲ್ಲಿ ಹಂಚುವುದಾಗಿ ಹೆದರಿಸಬಹುದು.

ನೀವು ಅಪ್‌ಲೋಡ್ ಮಾಡುವ ಫೋಟೋಗಳು ಮತ್ತು ನೀವು ಅದಕ್ಕೆ ಟ್ಯಾಗ್ ಮಾಡುವ ಲೊಕೇಶನ್ ಮಾಹಿತಿ ನಿಮ್ಮನ್ನು ಸ್ಟಾಕಿಂಗ್ ಮಾಡಲು ಕಾರಣವಾಗಬಹುದು. ಹುಷಾರಾಗಿರಿ.

ಇಂಟರ್ನೆಟ್ ಬಳಸಿ ಉದ್ದೇಶಪೂರ್ವಕವಾಗಿ ಒಬ್ಬರನ್ನು ಪ್ರಚೋದಿಸಲು ಅಥವಾ ಇತರರಿಂದ ಅವರಿಗೆ ತೊಂದರೆ ಮಾಡಿಸುವುದನ್ನು ಆನ್‌ಲೈನ್ ಟ್ರೋಲ್ (online troll) ಎನ್ನುತ್ತೇವೆ. ಇದು ಸಣ್ಣ ಪ್ರಮಾಣದ ಕಿರಿಕಿರಿಯನ್ನು ಉಂಟುಮಾಡಬಹುದು ಅಥವಾ ದೊಡ್ಡ ಸಮಸ್ಯೆಯನ್ನೂ ಉಂಟುಮಾಡಬಹುದು. “ಟ್ರೋಲ್” ಎಂಬ ಪದವು ಸಾಮಾನ್ಯವಾಗಿ ಇತರರನ್ನು ದುರುದ್ದೇಶಪೂರ್ವಕವಾಗಿ ಕಿರುಕುಳ ನೀಡುವ, ದಾಳಿ ಮಾಡುವ ಅಥವಾ ಸೈಬರ್‌ಬುಲ್ಲಿ ಮಾಡುವುದನ್ನು ಸೂಚಿಸುತ್ತದೆ.

ಸೈಬರ್ ಸ್ಟಾಕಿಂಗ್‌ನ ಮುಂದಿನ ಹೆಜ್ಜೆ ಸೈಬರ್ ಬುಲ್ಲಿಯಿಂಗ್ (cyber bullying). ಅಂದರೆ ಸೈಬರ್ ಲೋಕದಲ್ಲಿ ನಿಮ್ಮನ್ನು ಅಪರಿಚಿತರು ಹೆದರಿಸುವುದು. ಬುಲ್ಲಿಯಿಂಗ್ ಮಾಡುವವರನ್ನು ಕಂಡುಹಿಡಿಯುವುದು ಕಷ್ಟ ಸಾಧ್ಯ. ಅವರು ನಿಮ್ಮನ್ನು ಮೆಸೇಜ್, ಇಮೇಲ್, ವಿಡಿಯೋ, ಆಡಿಯೋ ಮೂಲಕ, ಅಥವಾ ಯಾವುದಾದರು ವೆಬ್ ಸೈಟಿನ ಲಿಂಕ್ ಮೂಲಕ ನಿಮ್ಮನ್ನು ಸಿಕ್ಕಿಸಿಕೊಳ್ಳಬಹುದು. ಸೈಬರ್ ಬುಲ್ಲಿಯಿಂಗ್‌ನ ಮೂಲಕ ಕ್ರಿಮಿನಲ್‌ಗಳು ನಿಮ್ಮನ್ನು ಬ್ಲಾಕ್ ಮೇಲ್ ಮಾಡಿ ಹಣ ಕೇಳಬಹುದು.

ಈ ಅಪರಾಧಿಗಳು ಸಿಕ್ಕಿ ಸಾಬೀತಾದರೆ ಅವರಿಗೆ ಜುಲ್ಮಾನೆ, ಜೈಲು ಮತ್ತು ಸಂತ್ರಸ್ತರಿಗೆ ಪರಿಹಾರ ಮುಂತಾದ ಕಠಿಣ ಕ್ರಮಗಳು ಕಾನೂನಿಲ್ಲಿ ಲಭ್ಯವಿದೆ. ಹಾಗಾಗಿ ಇಂತಹ ತೊಂದರೆಗಳಿಗೆ ಸಿಕ್ಕಿಕೊಂಡಾಗ ನಿಸ್ಸಂಕೋಚವಾಗಿ ಕಾನೂನಿನ ಸಲಹೆ ಮತ್ತು ಸಹಾಯ ಪಡೆಯಬೇಕು.

ಇದನ್ನೂ ಓದಿ:ಸೈಬರ್‌ ಸೇಫ್ಟಿ ಅಂಕಣ: ಫೇಸ್‌ಬುಕ್ ‘ಫ್ರೆಂಡ್ ರಿಕ್ವೆಸ್ಟ್’ ಎಂಬ ಮೋಸದ ಜಾಲ

https://cybercrime.gov.in/ ಸೈಬರ್ ಕ್ರೈಮಿಗೆ ಒಳಗಾದವರಿಗಾಗಿ ಭಾರತ ಸರ್ಕಾರದಿಂದ ಇರುವ ವೆಬ್ ಸೈಟ್. ಇದು ಸೈಬರ್ ಅಪರಾಧದ ದೂರುಗಳನ್ನು ಆನ್‌ಲೈನ್‌ನಲ್ಲಿ ವರದಿ ಮಾಡಲು ದೂರುದಾರರಿಗೆ ಸಹಾಯಕವಾಗಿದೆ. ಈ ಪೋರ್ಟಲ್ ಮಹಿಳೆಯರು ಮತ್ತು ಮಕ್ಕಳ ವಿರುದ್ಧದ ಸೈಬರ್ ಅಪರಾಧಗಳ ಮೇಲೆ ವಿಶೇಷ ಗಮನ ಹರಿಸುತ್ತದೆ. ಈ ಪೋರ್ಟಲ್‌ನಲ್ಲಿ ವರದಿ ಮಾಡಲಾದ ದೂರುಗಳನ್ನು ದೂರುಗಳಲ್ಲಿ ಲಭ್ಯವಿರುವ ಮಾಹಿತಿಯ ಆಧಾರದ ಮೇಲೆ ಕಾನೂನು ಜಾರಿ ಸಂಸ್ಥೆಗಳು/ಪೊಲೀಸರು ಕಾರ್ಯತತ್ಪರಾಗುತ್ತಾರೆ. ತ್ವರಿತ ಕ್ರಮಕ್ಕಾಗಿ ದೂರು ಸಲ್ಲಿಸುವಾಗ ಸರಿಯಾದ ಮತ್ತು ನಿಖರವಾದ ವಿವರಗಳನ್ನು ಒದಗಿಸುವುದು ಕಡ್ಡಾಯವಾಗಿದೆ.

ತುರ್ತು ಸಂದರ್ಭದಲ್ಲಿ ಅಥವಾ ಸೈಬರ್ ಅಪರಾಧಗಳನ್ನು ಹೊರತುಪಡಿಸಿ ಇತರ ಅಪರಾಧಗಳನ್ನು ವರದಿ ಮಾಡಲು ದಯವಿಟ್ಟು ಸ್ಥಳೀಯ ಪೊಲೀಸರನ್ನು ಸಂಪರ್ಕಿಸಿ. ರಾಷ್ಟ್ರೀಯ ಪೊಲೀಸ್ ಸಹಾಯವಾಣಿ ಸಂಖ್ಯೆ 112. ರಾಷ್ಟ್ರೀಯ ಮಹಿಳಾ ಸಹಾಯವಾಣಿ ಸಂಖ್ಯೆ 181 ಮತ್ತು ಸೈಬರ್ ಅಪರಾಧ ಸಹಾಯವಾಣಿ 1930.

ಎಲ್ಲಕ್ಕಿಂತ ಮುಖ್ಯವಾಗಿ ನೀವು ಸೈಬರ್ ಸ್ಟಾಕಿಂಗ್ ಅಥವಾ ಸೈಬರ್ ಬುಲ್ಲಿಯಿಂಗಿಗೆ ಒಳಗಾದರೆ ಪ್ರತ್ಯುತ್ತರಿಸಬೇಡಿ, ಸಾಕ್ಷಿಗೆ ಸ್ಕ್ರೀನ್ ಶಾಟ್ ತೆಗೆದುಕೊಳ್ಳಿ. ಬುಲ್ಲಿಯನ್ನು ಬ್ಲಾಕ್ ಮಾಡಿ ಮತ್ತು 1930 ಕರೆ ಮಾಡಿ ದೂರು ನೀಡಿ. ನೆನಪಿಡಿ, ಮದ್ರಾಸ್ ಹೈಕೋರ್ಟ್‌ನ ತೀರ್ಪಿನ ಪ್ರಕಾರ ಯಾವುದೇ ಸಂದೇಶವನ್ನು ಫಾರ್ವರ್ಡ್ ಮಾಡುವುದು, ಸಂದೇಶವನ್ನು ಅನುಮೋದಿಸಿದ್ದಕ್ಕೆ ಸಮಾನವಾಗಿದೆ. ಅಂತರ್ಜಾಲದಲ್ಲಿ ಒಮ್ಮೆ ಪೋಸ್ಟ್ ಮಾಡಿದರೆ, ಅದು ಯಾವಾಗಲೂ ಇರುತ್ತದೆ. ನಿಮ್ಮ ಮೊಬೈಲ್ ಅಥವಾ ಕಂಪ್ಯೂಟರಿನಲ್ಲಿ ಡಿಲೀಟ್ ಆಗಿದ್ದರೂ ಕಾನೂನು ಜಾರಿ ಸಂಸ್ಥೆಗಳು ಅದನ್ನು ಕಂಡುಹಿಡಿಯಬಹುದು. ನಿಮ್ಮ ಜಾಗ್ರತೆಯಲ್ಲಿ ನೀವಿರಿ. ಹುಷಾರಾಗಿ ಅಂತರ್ಜಾಲದಲ್ಲಿ ವಿಹರಿಸಿ. ಸಾಮಾಜಿಕ ಜಾಲತಾಣಗಳಲ್ಲಿ ನಿಮ್ಮ ನಡವಳಿಕೆಯ ಬಗ್ಗೆ ಕಾಳಜಿವಹಿಸಿರಿ.

ಇದನ್ನೂ ಓದಿ: ಸೈಬರ್‌ ಸೇಫ್ಟಿ ಅಂಕಣ: ಸಾಮಾಜಿಕ ಜಾಲತಾಣಗಳ ವ್ಯಸನ! ಬಚಾವಾಗೋದು ಹೇಗೆ?

Exit mobile version