ಸೈಬರ್ ಕ್ರೈಮ್ ನಮ್ಮ ದೈನಂದಿನ ಜೀವನದ ಪ್ರತಿಯೊಂದು ವಿಷಯಕ್ಕೂ ತನ್ನ ವ್ಯಾಪ್ತಿಯನ್ನು ವಿಸ್ತರಿಸುತ್ತಿದೆ. ಇಮೇಲ್, ಎಸ್‌ಎಂಎಸ್, ಬ್ಯಾಂಕ್ ಖಾತೆ ಲಾಗಿನ್‌ಗಳು ಅಥವಾ ಸಾಮಾಜಿಕ ಮಾಧ್ಯಮದ ಖಾತೆಗಳು ಎಲ್ಲವೂ ಸೈಬರ್ ದಾಳಿಗೆ ಗುರಿಯಾಗಿದೆ. ಈಗ ನಾವು ಹೆಚ್ಚಾಗಿ ಬಳಸುವ ವಾಟ್ಸ್ಯಾಪ್ ಕೂಡ ಹ್ಯಾಕರ್‌ಗಳ ತಂತ್ರಕ್ಕೆ ಸಿಲುಕಿದೆ. ಭಾರತದಾದ್ಯಂತ ಜನರು +254, +84, +63, +1(218) ಅಥವಾ ಇತರ ಅಂತಾರಾಷ್ಟ್ರೀಯ ಸಂಖ್ಯೆಗಳಿಂದ ವಾಟ್ಸ್ಯಾಪ್‌ನಲ್ಲಿ ಕರೆಗಳು ಮತ್ತು ಮಿಸ್ಡ್ ಕಾಲ್‌ಗಳನ್ನು ಸ್ವೀಕರಿಸುತ್ತಿದ್ದಾರೆ. ಅವರಲ್ಲಿ ಕೆಲವರು ಸೈಬರ್ ವಂಚನೆಗೆ ಸಿಲುಕಿದ್ದಾರೆ. ಸೈಬರ್ ಕ್ರಿಮಿನಲ್‌ಗಳು ಇದನ್ನು ಬಳಸಿ ನಿಮ್ಮ ಖಾತೆಯನ್ನು ಪ್ರವೇಶಿಸಬಹುದು. ಇದು ಸೈಬರ್ ಕ್ರೈಮ್‌ನ ಹೊಸ ಟ್ರೆಂಡ್.
ಕ್ಲೌಡ್ ಎಸ್‌ಇಕೆ ಕಂಪೆನಿ ಸಂಭಾವ್ಯ ಸೈಬರ್ ಅಪಾಯಗಳು ಅಥವಾ ವಂಚನೆಗಳ ಬಗ್ಗೆ ಎಚ್ಚರಿಕೆ ನೀಡುವ ಒಂದು ನವೋದ್ಯಮ. ಇದರ ಸಿಇಓ ರಾಹುಲ್ ಸಸಿ, ಈ ಹೊಸ ವಾಟ್ಸ್ಯಾಪ್ ಸ್ಕ್ಯಾಮ್ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಹ್ಯಾಕರ್‌ಗಳಿಂದ ಕರೆಯನ್ನು ಸ್ವೀಕರಿಸಿದ ವಿಕ್ಟಿಮ್‌ಗಳಿಗೆ ಅವರು ’67’ ಅಥವಾ ‘405’ನಿಂದ ಪ್ರಾರಂಭವಾಗುವ ಸಂಖ್ಯೆಗಳನ್ನು ಡಯಲ್ ಮಾಡಲು ಸೂಚಿಸುತ್ತಾರೆ. ಹಾಗೆ ಮಾಡಿದಾಗ ತಮ್ಮ ಖಾತೆಯಿಂದ ಲಾಗ್ ಔಟ್ ಆಗಿರುವುದು ವಿಕ್ಟಿಮ್‌ಗಳಿಗೆ ಗೊತ್ತಾಗುತ್ತದೆ. ಹ್ಯಾಕರ್‌ಗಳು ಅವರ ವಾಟ್ಸ್ಯಾಪ್ ಖಾತೆಯ ಸಂಪೂರ್ಣ ನಿಯಂತ್ರಣವನ್ನು ಹೊಂದಿರುತ್ತಾರೆ. ಹೆಚ್ಚಾಗಿ ವಿಕ್ಟಿಮ್ಸ್ ಡಯಲ್ ಮಾಡೋದು ಫೋನ್ ಲೈನ್ ಕಾರ್ಯನಿರತವಾಗಿರುವಾಗ ಅಥವಾ ತೊಡಗಿಸಿಕೊಂಡಾಗ ಉಪಯೋಗಿಸಲ್ಪಡುವ ‘ಕಾಲ್ ಫಾರ್ವರ್ಡ್’ಗಾಗಿ ಇರುವ ಸೇವಾವಿನಂತಿಯ ನಂಬರ್‌ನಂತೆ ಇರುತ್ತದೆ. ನಂತರ ಹ್ಯಾಕರ್‌ಗಳು ವಿಕ್ಟಿಮ್‌ಗೆ ಬರುವ ಕರೆಗಳನ್ನು, ಮೆಸೇಜುಗಳನ್ನು ಅವರಿಗೆ ಸೇರಿದ ಫೋನ್ ಸಂಖ್ಯೆಗೆ ಫಾರ್ವರ್ಡ್ ಮಾಡಿಕೊಳ್ತಾರೆ. ಈ ಮಧ್ಯೆ, ಆಕ್ರಮಣಕಾರರು “ಫೋನ್ ಕರೆ ಮೂಲಕ OTP ಕಳುಹಿಸಿ” ಆಯ್ಕೆಯನ್ನು ಆಯ್ಕೆ ಮಾಡಿಕೊಂಡು ವಾಟ್ಸ್ಯಾಪ್ ಸೈನ್ ಅಪ್ ಪ್ರಕ್ರಿಯೆಯನ್ನು ಪ್ರಾರಂಭಿಸುತ್ತಾರೆ. ಈಗ ಬರುವ OTP ಹ್ಯಾಕರ್‌ನ ಫೋನ್ ತಲುಪುತ್ತದೆ.
ಇದು ಎಲ್ಲಾ ದೇಶದಲ್ಲೂ ನಡೆಯಬಹುದು. ಯಾಕೆಂದರೆ, ಪ್ರತಿಯೊಂದು ದೇಶ ಮತ್ತು ಸೇವಾ ಪೂರೈಕೆದಾರರು ಒಂದೇ ರೀತಿಯ ಸೇವಾ ವಿನಂತಿ ಸಂಖ್ಯೆಯನ್ನು ಹೊಂದಿದ್ದಾರೆ. ಹ್ಯಾಕರ್‌ಗಳಿಗೆ ಗ್ರಾಹಕರನ್ನು ಏಮಾರಿಸೋದು ಸುಲಭವಾಗಿದೆ. ಇದು ಒಂದು ರೀತಿಯದ್ದಾದರೆ, ವಂಚನೆಗೊಳಗಾಗಲು ಅಥವಾ ನಿಮ್ಮ ಡೇಟಾ ಸೋರಿಕೆಯಾಗಲು ನೀವು ಕರೆಗೆ ಉತ್ತರಿಸಬೇಕಾಗಿಲ್ಲ. ಅದು ಮಿಸ್ಡ್ ಕಾಲ್ ಆಗಿದ್ದರೂ ಸಾಕು! ಹೌದು. ಒಮ್ಮೆ ಮಿಸ್ಡ್ ಕಾಲ್ ಮೂಲಕ ಸ್ಪೈವೇರ್ ಡೌನ್‌ಲೋಡ್ ಆದರೆ, ಅದು ನಿಮ್ಮ ಮೊಬೈಲ್ ಒಳಗೆ ಆಳವಾಗಿ ಎಂಬೆಡ್ ಆಗಿ ಹಿನ್ನೆಲೆಯಲ್ಲಿ ಸದಾ ಕಾರ್ಯ ನಿರ್ವಹಿಸುತ್ತಾ ನಿಮ್ಮ ಮಾಹಿತಿಯನ್ನು ಗುಪ್ತವಾಗಿ ಹ್ಯಾಕರ್‌ಗಳಿಗೆ ಕಳಿಸಬಹುದು.
ಮಿಸ್ಡ್ ಕಾಲ್ ಮೂಲಕ ನಿಮ್ಮ ಮಾಹಿತಿಯ ಕಳ್ಳತನದಲ್ಲಿ ಜೀರೋ-ಕ್ಲಿಕ್ ಹ್ಯಾಕ್ ಎಂದು ಕರೆಯಲ್ಪಡುವ ತಂತ್ರವನ್ನು ಬಳಸುತ್ತಾರೆ. ವಂಚನೆಗೆ ನಿಮ್ಮನ್ನು ಗುರಿಯಾಗಿಸಲು ಎನ್‌ಕ್ರಿಪ್ಟ್ ಮಾಡಿದ ಲಿಂಕ್ ಅನ್ನು ಕ್ಲಿಕ್ ಮಾಡಿಸುವ ಅಗತ್ಯವಿಲ್ಲ. ವಿಕ್ಟಿಮ್‌ನಿಂದ ಯಾವುದೇ ಕ್ರಿಯೆಯೂ ಇಲ್ಲದೆಯೇ ಹ್ಯಾಕ್ ಮಾಡಲಾಗ್ತಿದೆ. ಶೂನ್ಯ-ಕ್ಲಿಕ್ ಹ್ಯಾಕ್ ನಿಮ್ಮ ಸಾಧನದಲ್ಲಿನ ನ್ಯೂನತೆಗಳ ಲಾಭವನ್ನು ಪಡೆಯುತ್ತದೆ.
“ವಂಚನೆಗೆ ಟಾರ್ಗೆಟ್ ಆಗಿರುವವರು ತಮ್ಮ ಫೋನ್‌ನಲ್ಲಿ ಅನುಮಾನಾಸ್ಪದ ಸಂಗತಿಗಳೇನನ್ನೂ ಗಮನಿಸುವುದಿಲ್ಲ” ಎಂದು ದಿ ಸಿಟಿಜನ್ ಲ್ಯಾಬ್‌ನ ಭದ್ರತಾ ಸಂಶೋಧಕ ಬಿಲ್ ಮಾರ್ಕ್‌ಜಾಕ್ ಹೇಳುತ್ತಾರೆ. “ಅವರು ‘ವಿಲಕ್ಷಣ’ ಕರೆ ನಡವಳಿಕೆಯನ್ನು ಗಮನಿಸಿದರೂ ಸಹ, ಅದು ಕ್ಷಣಿಕವಾಗಿರಬಹುದು. ಮೊಬೈಲ್ ಸಾಧನದಲ್ಲಿ ಯಾವುದೇ ಕುರುಹುಗಳು ಉಳಿದಿರುದಿಲ್ಲ.”
ಇಲ್ಲಿಯವರೆಗಿನ ನೋ-ಕ್ಲಿಕ್ ಹ್ಯಾಕ್‌ಗಳಲ್ಲಿ ಅತ್ಯಂತ ಕುಖ್ಯಾತವಾದದ್ದು 2019ರಲ್ಲಿ ಮಿಸ್ಡ್‌ಕಾಲ್ ಮೂಲಕ ವಾಟ್ಸ್ಯಾಪ್‌ನ ಭದ್ರತೆಯ ಉಲ್ಲಂಘನೆಯಾಗಿದ್ದು ಅದು ಅದರ ಮಿಸ್ಡ್‌ಕಾಲ್ ಸಿಸ್ಟಮ್‌ನಲ್ಲಿನ ದೋಷದ ಲಾಭವನ್ನು ಪಡೆದುಕೊಂಡಿತ್ತು. ಹ್ಯಾಕರ್‌ಗಳು ಮಿಸ್ಡ್ ಕಾಲ್ ಅನ್ನು ಬಳಸಿ ವಾಟ್ಸ್ಯಾಪ್‌ನಲ್ಲಿನ ಮೂಲ ಕೋಡ್ ಅನ್ನು ಬಳಸಿಕೊಳ್ಳಲು ಸ್ಪೈವೇರ್ ಅನ್ನು ಲೋಡ್ ಮಾಡಿದ್ದರು.
ನಮಗೆಲ್ಲಾ ಈ ಮಿಸ್ಡ್ ಕಾಲ್ ಸ್ಕ್ಯಾಮ್ ತಡೆಯಲು ಏನನ್ನೂ ಮಾಡಲು ಸಾಧ್ಯವಿಲ್ಲ. ಆದಷ್ಟೂ ಜಾಗ್ರತರಾಗಿ ಗೊತ್ತಿಲ್ಲದ ನಂಬರ್‌ನಿಂದ ಅಥವಾ ಪರಿಚಯವಿಲ್ಲದ ದೇಶಗಳಿಂದ ಕರೆ ಬಂದರೆ, ಸ್ವೀಕರಿಸದೆ, ಬ್ಲಾಕ್ ಮಾಡಿ ರಿಪೋರ್ಟ್ ಮಾಡಬಹುದು.
ಇದನ್ನೂ ಓದಿ: ಸೈಬರ್ ಸೇಫ್ಟಿ ಅಂಕಣ: ಇಂಟಲಿಜೆನ್ಸ್ ಬಳಸಿ ಇಂಟಲಿಜೆಂಟ್ ಆಗೋಣ
ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ಮೆಸೇಜಿಂಗ್ ಆಪ್‌ಗಳಲ್ಲಿ ಒಂದು ಕ್ಲಿಪ್ಪಿಂಗ್ ಓಡಾಡ್ತಿತ್ತು. ನೀವೂ ಗಮನಿಸಿರಬಹುದು. ಸೈಬರ್ ವಂಚಕರು ಫೇಸ್‌ಬುಕ್‌ನಲ್ಲಿನ ನಿಮ್ಮ ಪಬ್ಲಿಕ್ ಪ್ರೋಫೈಲ್ ಮಾಹಿತಿಯಿಂದ ನಿಮ್ಮ ಖಾತೆಯನ್ನು ಹೋಲುವ ನಕಲಿ ಖಾತೆ ಸೃಷ್ಠಿಸಿ ನಿಮ್ಮ ಸ್ನೇಹಿತರ ಮಾಹಿತಿ ಪಡೆಯುತ್ತಾರೆ ಮತ್ತು ಅವರಿಗೆ ಹಣದ ಬೇಡಿಕೆಯನ್ನೂ ಮಾಡಬಹುದು, ಅಥವಾ ಅನುಚಿತವಾಗಿ ವರ್ತಿಸಲೂಬಹುದು. ಇದು ಹ್ಯಾಕಿಂಗ್ ಅಲ್ಲ. ನಿಮ್ಮ ಖಾತೆಯನ್ನು ಬೇರೆಯವರು ನಿಯಂತ್ರಿಸಿದರೆ ಅದು ಹ್ಯಾಕಿಂಗ್. ನಿಮ್ಮ ನಕಲಿ ಖಾತೆ ಸೃಷ್ಠಿಸೋದು ಫೇಸ್‌ಬುಕ್ ಕ್ಲೋನಿಂಗ್. ನಿಮ್ಮ ಹೆಸರಿನಲ್ಲಿ ಇನ್ನೊಂದು ಖಾತೆ ಇರೋದು ಗೊತ್ತಾದ ಕೂಡಲೇ ಆ ಖಾತೆಯ ಬಗ್ಗೆ ರಿಪೋರ್ಟ್ ಮಾಡಿ ಅಥವಾ ಸೈಬರ್ ಕ್ರೈಂ ವಿಭಾಗಕ್ಕೆ ದೂರು ದಾಖಲಿಸಿ. ಹಾಗೇ ಈಗಾಗಲೇ ನಿಮ್ಮ ಸ್ನೇಹಿತರಾದವರು ಹೊಸ ಖಾತೆ ರಚಿಸಿ ಫ್ರಂಡ್ ರಿಕ್ವೆಸ್ಟ್ ಕಳುಹಿಸಿದ್ದರೆ, ಅಥವಾ ಹಣದ ಬೇಡಿಕೆ ಇಟ್ಟರೆ ಅದನ್ನು ಫೇಸ್‌ಬುಕ್ ಕ್ಲೋನಿಂಗ್ ಪ್ರಕರಣ ಎಂದು ಎಚ್ಚರ ವಹಿಸಿ. ಅವರನ್ನು ಬೇರೆ ರೀತಿಯಲ್ಲಿ ಸಂಪರ್ಕಿಸಿ ಇದರ ಬಗ್ಗೆ ತಿಳಿಸಿ ಸ್ಪಷ್ಟಪಡಿಸಿಕೊಳ್ಳಿ.
ಪಾಲೊ ಆಲ್ಟೊ ವರದಿಯ ಪ್ರಕಾರ, ಸೈಬರ್ ದಾಳಿಗಳು ಮತ್ತು ಡೇಟಾ ಉಲ್ಲಂಘನೆಗಳ ವಿಷಯದಲ್ಲಿ ಭಾರತವು ಏಷ್ಯಾ ಫೆಸಿಫಿಕ್ ಪ್ರದೇಶದಲ್ಲಿ ಎರಡನೇ ಅತ್ಯಂತ ದುರ್ಬಲ ರಾಷ್ಟ್ರವಾಗಿದೆ. ಹೆಚ್ಚುತ್ತಿರುವ ಸೈಬರ್ ಕ್ರೈಮ್‌ಗಳು ಮತ್ತು ಡೇಟಾ ಉಲ್ಲಂಘನೆಗಳ ಸಂದರ್ಭದಲ್ಲಿ, ಡೇಟಾ ಸಂರಕ್ಷಣಾ ಕಾನೂನು ಅತ್ಯವಶ್ಯಕವಾಗಿದೆ.
ದತ್ತಾಂಶ ಸಂರಕ್ಷಣಾ ಮಸೂದೆಯನ್ನು ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಮಂಡಿಸಲು ಸಂಪುಟ ಸಜ್ಜಾಗಿದೆ. ಇದು ಡೇಟಾವನ್ನು ರಕ್ಷಿಸುತ್ತದೆ ಮತ್ತು ವೈಯಕ್ತಿಕ ಮಾಹಿತಿಯ ಸುರಕ್ಷತೆಗೆ ಪ್ರಾಮುಖ್ಯತೆ ನೀಡುತ್ತದೆ. ಆದಾಗ್ಯೂ, ದೇಶವು ಸುಭದ್ರವಾದ ಡೇಟಾ ಸಂರಕ್ಷಣಾ ಕಾನೂನುಗಳನ್ನು ಪಡೆಯುವವರೆಗೆ, ಡೇಟಾದ ಸುರಕ್ಷತೆಯ ಜವಾಬ್ದಾರಿಯು ಬಳಕೆದಾರರ ಮೇಲೆ ಇರುತ್ತದೆ. ಅಂದರೆ ನಮ್ಮ ಸುರಕ್ಷತೆಗೆ ನಾವೇ ಜವಾಬ್ದಾರರು. ಹಾಗಾಗಿ ನೀವು ಸೈಬರ್ ಲೋಕದ ಬಗ್ಗೆ ಆದಷ್ಟೂ ಜಾಣರಾಗಿರಿ, ಜಾಗರೂಕರಾಗಿರಿ.
ಇದನ್ನೂ ಓದಿ: ಸೈಬರ್ ಸೇಫ್ಟಿ ಅಂಕಣ: ಸೈಬರ್ ಲೋಕದ ಇಂಟಲಿಜನ್ಸ್: ನಿಮ್ಮ ಯಾವ ಮಾಹಿತಿಯೂ ಇಲ್ಲಿ ರಹಸ್ಯವಲ್ಲ!