ನಮ್ಮ ಜೀವನದಲ್ಲಿ ಅಂತರ್ಜಾಲವನ್ನು (internet) ಅಂತರ್ಗತವಾಗಿಸಿದ ಫೇಸ್‌ಬುಕ್‌ಗೆ (facebook) ನಿನ್ನೆ ಇಪ್ಪತ್ತು ವರ್ಷ (twenty years) ತುಂಬಿತು. ಇದರ ಹುಟ್ಟಿನ ಬಗ್ಗೆ ನೀವು ಈಗಾಗಲೇ ತಿಳಿದಿರಬಹುದು. ಆದರೂ ಈ ಸಂದರ್ಭದಲ್ಲಿ ಅದನ್ನು ಮತ್ತೊಮ್ಮೆ ನೆನಪಿಸಿಕೊಳ್ಳೋಣ. ಜೊತೆಗೆ ಅದನ್ನು ಬಳಸುವವರು ಎದುರಿಸುತ್ತಿರುವ ಸೈಬರ್ ಸಮಸ್ಯೆಗಳು (cyber problems) ಮತ್ತು ಅದರ ನಿವಾರಣೆಗೆ ತೆಗೆದುಕೊಳ್ಳಬೇಕಾದ ಕ್ರಮಗಳನ್ನೂ ತಿಳಿಯೋಣ.
ಫೇಸ್‌ಬುಕ್ ಅನ್ನು ಮಾರ್ಕ್ ಜುಕರ್‌ಬರ್ಗ್ (Mark Zuckerberg) ತನ್ನ ಕಾಲೇಜಿನ ರೂಮ್‌ಮೇಟ್‌ಗಳಾದ ಆಂಡ್ರ್ಯೂ ಮೆಕೊಲಮ್, ಎಡ್ವರ್ಡೊ ಸವೆರಿನ್, ಕ್ರಿಸ್ ಹ್ಯೂಸ್ ಮತ್ತು ಡಸ್ಟಿನ್ ಮೊಸ್ಕೊವಿಟ್ಜ್ ಅವರೊಂದಿಗೆ ಫೆಬ್ರವರಿ 4, 2004ರಂದು ಸ್ಥಾಪಿಸಿದರು. ಆ ಸಮಯದಲ್ಲಿ ಹಾರ್ವರ್ಡ್ ವಿಶ್ವವಿದ್ಯಾಲಯದ ವಿದ್ಯಾರ್ಥಿಯಾಗಿದ್ದ ಜುಕರ್‌ಬರ್ಗ್ ತನ್ನ ಡಾರ್ಮಿಟರಿ ಕೊಠಡಿಯನ್ನೇ ʼದಿ ಫೇಸ್‌ಬುಕ್ʼನ ಆಫೀಸ್ ಆಗಿ ಪ್ರಾರಂಭಿಸಿದರು.
ಹಾರ್ವರ್ಡ್ ವಿದ್ಯಾರ್ಥಿಗಳಿಗೆ ಪ್ರತ್ಯೇಕವಾದ ಸಾಮಾಜಿಕ ನೆಟ್‌ವರ್ಕಿಂಗ್ ವೇದಿಕೆಯನ್ನು ರಚಿಸುವುದು ಇದರ ಆರಂಭಿಕ ಯೋಚನೆಯಾಗಿತ್ತು. ಅದರ ಜನಪ್ರಿಯತೆ ಮತ್ತು ಬೇಡಿಕೆಯಿಂದಾಗಿ, ಇದು ಇತರ ವಿಶ್ವವಿದ್ಯಾಲಯಗಳಿಗೆ ವಿಸ್ತರಿಸಲ್ಪಟ್ಟಿತು. ಜೂನ್ 2004ರಲ್ಲಿ, ಹೆಸರಿನಿಂದ “ದಿ” ಅನ್ನು ಕೈಬಿಟ್ಟು ಕೇವಲ “ಫೇಸ್‌ಬುಕ್” ಆಯಿತು.
ಆರಂಭದಿಂದಲೇ ಈ ವೇದಿಕೆಯು ಅಪಾರವಾದ ಜನಪ್ರಿಯತೆ ಪಡೆದುಕೊಂಡಿತು ಮತ್ತು ವೇಗವಾಗಿ ಬೆಳೆಯಿತು. 2006ರಲ್ಲಿ, ಫೇಸ್‌ಬುಕ್ ತನ್ನ ಬಾಗಿಲುಗಳನ್ನು ಸಾರ್ವಜನಿಕರಿಗೆ ತೆರೆಯಿತು ಮತ್ತು ಶೀಘ್ರವಾಗಿ ಅಂತರ್ಜಾಲದ ಅತ್ಯಂತ ಜನಪ್ರಿಯ ಸಾಮಾಜಿಕ ನೆಟ್‌ವರ್ಕಿಂಗ್ ಸೈಟ್ ಪಟ್ಟಕ್ಕೇರಿತು. ಕಳೆದ ಇಪ್ಪತ್ತು ವರ್ಷಗಳಲ್ಲಿ, ಫೇಸ್‌ಬುಕ್ ಹಲವಾರು ಬದಲಾವಣೆಗಳು, ಸೇರ್ಪಡೆಗಳು ಮತ್ತು ಸ್ವಾಧೀನಗಳಿಗೆ ಒಳಗಾಗಿದೆ. ವಿಶ್ವಾದ್ಯಂತ 3 ಶತಕೋಟಿ ಬಳಕೆದಾರರೊಂದಿಗೆ ಸಮಗ್ರ ಸಾಮಾಜಿಕ ಮಾಧ್ಯಮ ವೇದಿಕೆಯಾಗಿ ವಿಕಸನಗೊಂಡಿದೆ. ಇದು ವಿಶ್ವದ ಅತ್ಯಂತ ಪ್ರಭಾವಶಾಲಿ ಮತ್ತು ವ್ಯಾಪಕವಾಗಿ ಬಳಸಲಾಗುವ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಒಂದಾಗಿದೆ. ಹಾಗಾಗಿ ಫೇಸ್‌ಬುಕ್ ಜಗತ್ತಿನ ಪ್ರಮುಖ ಡಿಜಿಟಲ್ ಮಾರ್ಕೆಟಿಂಗ್ ಮತ್ತು ಮಾರಾಟ ವೇದಿಕೆಯಾಗಿದೆ. ಭಾರತದಲ್ಲೂ ಸುಮಾರು ಮೂರೂಕಾಲು ಕೋಟಿ ಫೇಸ್‌ಬುಕ್ ಬಳಕೆದಾರರಿದ್ದಾರೆ. ಅದು ಭಾರತದ ಒಟ್ಟು ಜನಸಂಖ್ಯೆ 143 ಕೋಟಿಯ ಶೇಕಡ 2.2ರಷ್ಟಿದೆ.
ಅಕ್ಟೋಬರ್ 2021 ರಲ್ಲಿ ಫೇಸ್‌ಬುಕ್ ತನ್ನನ್ನು ತಾನು ‘ಮೆಟಾ’ ಎಂದು ಮರುಬ್ರಾಂಡ್ ಮಾಡಿಕೊಂಡಿದೆ. ಅಂತರ್ಜಾಲದಲ್ಲಿನ ವರ್ಲ್ಡ್ ವೈಡ್ ವೆಬ್ (WWW)ನ ರೂಪಾಂತರವಾದ ‘ಮೆಟಾವರ್ಸ್’ ಅಥವಾ ವೆಬ್3.0ಗೆ ಹೊಂದಿಕೊಳ್ಳಲು ಈ ಹೊಸ ಮಾತೃ ಕಂಪೆನಿಯನ್ನು ಸ್ಥಾಪಿಸಲಾಗಿದೆ ಎನ್ನುತ್ತಾರೆ ತಂತ್ರಜ್ಞಾನ ಕ್ಷೇತ್ರದ ಪರಿಣಿತರು. ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ವಾಟ್ಸಾಪ್ ಮತ್ತು ಆಕ್ಯುಲಸ್ ಸೇರಿದಂತೆ ವಿವಿಧ ಪ್ಲಾಟ್‌ಫಾರ್ಮ್‌ಗಳು ಮತ್ತು ಉತ್ಪನ್ನಗಳ ಮೇಲ್ವಿಚಾರಣೆಯನ್ನು ಮಾತೃ ಸಂಸ್ಥೆಯಾದ ಮೆಟಾ ಕಂಪನಿ ನೋಡುತ್ತದೆ.
ಇಂತಹ ಬೃಹತ್ ಸಾಮಾಜಿಕ ವೇದಿಕೆಯನ್ನು ಬಹಳಷ್ಟು ಬಾರಿ ಸೈಬರ್ ಕ್ರಿಮಿನಲ್‌ಗಳು ದಾಳಿ ಮಾಡಿದ್ದಾರೆ. ಕಂಪೆನಿಯ ಸರ್ವರ್ ಮತ್ತು ನೆಟ್ವರ್ಕ್‌ನ ಮೇಲಿನ ದಾಳಿಯ ಜೊತೆಗೆ ಫೇಸ್‌ಬುಕ್ಕಿನ ಬಳಕೆದಾರರ ಖಾತೆಗಳಿಗೂ ಕನ್ನ ಹಾಕಿರುವ ಬಹಳಷ್ಟು ಸುದ್ಧಿಯನ್ನು ಈ ಅಂಕಣದಲ್ಲಿಯೇ ಪ್ರಸ್ಥಾಪಿಸಲಾಗಿದೆ. ಫೇಸ್‌ಬುಕ್ ‘ಫ್ರೆಂಡ್ ರಿಕ್ವೆಸ್ಟ್’ ಎಂಬ ಮೋಸದ ಜಾಲ ಎಂಬ ಲೇಖನದಲ್ಲಿ ನಕಲಿ ಸ್ನೇಹದ ವಿನಂತಿಯನ್ನು ಕಳಿಸುವವರು ಯಾರು? ಅವುಗಳನ್ನು ಗುರುತಿಸುವುದು ಹೇಗೆ ಮತ್ತು ನಿಮಗೆ ಬಂದ ನಕಲಿ ಫ್ರಂಡ್ ರಿಕ್ವಸ್ಟ್ ಖಾತೆಯನ್ನು ಹೇಗೆ ವರದಿ ಮಾಡುವುದು? ಈ ರೀತಿ ವರದಿ ಮಾಡಿದಾಗ ಏನಾಗುತ್ತದೆ? ಎಂಬುದರ ಬಗ್ಗೆ ವಿವರವಾಗಿ ತಿಳಿಸಿದ್ದೆ.
ಕಳೆದ ವಾರ, ನನ್ನದೇ ನಾಮಧೇಯವನ್ನು ಹೊಂದಿರುವ ನನಗೆ ಬಹಳ ವರ್ಷಗಳಿಂದ ಪರಿಚಿತರಾದ ವ್ಯಕ್ತಿಯೊಬ್ಬರಿಂದ ನನಗೆ ಫ್ರೆಂಡ್ ರಿಕ್ವೆಸ್ಟ್ ಬಂದಿತು. ನಾನು ಆ ಪ್ರೊಫೈಲ್ ಪರಿಶೀಲಿಸಿದಾಗ ಅದು ನಕಲಿ ಖಾತೆ ಎಂದು ಸುಲಭವಾಗಿ ತಿಳಿಯಿತು. ಹಾಗೇ ನಾನು ನನ್ನ ಸ್ನೇಹಿತರಿಗೆ ಆ ಸ್ನೇಹ ವಿನಂತಿಯ ಸ್ಕ್ರೀನ್‌ಶಾಟ್ ಕಳುಹಿಸಿ ನಿಮ್ಮ ಖಾತೆ ಹ್ಯಾಕ್ ಆಗಿದೆಯಾ ಎಂದು ಕೇಳಿದ್ದೆ. ಅವರು “ಖಾತೆ ಹ್ಯಾಕ್ ಆಗಿಲ್ಲ ಆದರೆ ಯಾರೋ ನನ್ನ ಪ್ರೊಫೈಲ್ ಚಿತ್ರ ಮತ್ತು ಹೆಸರು ಬಳಸಿ ನನ್ನ ಸ್ನೇಹಿತರಿಗೆಲ್ಲಾ ಫ್ರೆಂಡ್ ರಿಕ್ವೆಸ್ಟ್ ಕಳಿಸುತ್ತಿದ್ದಾರೆ. ನಾನು ಏನು ಮಾಡಲಿ” ಎಂದರು.
ಇದನ್ನೂ ಓದಿ: ಸೈಬರ್ ಸೇಫ್ಟಿ ಅಂಕಣ: ಕಾಪ್‌ಕನೆಕ್ಟ್- ಸೈಬರ್ ಅಪರಾಧಕ್ಕೆ ತ್ವರಿತ ಸಹಾಯ
ಆಗ ಅವರಿಗೆ “ನಿಮ್ಮ ಖಾತೆಯ ವಿವರ ಬಳಸಿಕೊಂಡು ಕುತಂತ್ರ ಮಾಡಿ ನಿಮ್ಮ ಸ್ನೇಹಿತರಿಂದ ಧನ ಸಹಾಯ ಮತ್ತು ಮಾಹಿತಿ ಕದಿಯಲು ಪ್ರಯತ್ನಿಸಬಹುದು. ಲ್ಯಾಪ್‌ಟಾಪ್ ಆಥವಾ ಡೆಸ್ಕ್‌ಟಾಪ್ ಕಂಪೂಟರ್‌ನಿಂದ ನಿಮ್ಮ ಖಾತೆಗೆ ಲಾಗಿನ್ ಮಾಡಿ. ಅಲ್ಲಿ ನಿಮ್ಮ ಪ್ರೊಫೈಲ್ ಚಿತ್ರದ ಮೇಲೆ ಕ್ಲಿಕ್ಕಿಸಿದಾಗ ಕಾಣುವ ಡ್ರಾಪ್‌ಡೌನ್‌ನಲ್ಲಿ ‘ಸಹಾಯ ಮತ್ತು ಬೆಂಬಲ’ (Help & Support) ಆಯ್ಕೆಮಾಡಿ. ಆ ಪುಟ ಹೊಸ ಟ್ಯಾಬಿನಲ್ಲಿ ತೆರೆದು ಕೊಳ್ಳುತ್ತದೆ. ಅಲ್ಲಿ ಕೊಟ್ಟಿರುವ ಸೂಚನೆಗಳನ್ನು ಗಮನಿಸಿ. ಪಾಲಿಸಿ ಮತ್ತು ರಿಪೊರ್ಟಿಂಗ್‌ನಲ್ಲಿರುವ ಹ್ಯಾಕ್‌ಡ್ ಮತ್ತು ಫೇಕ್ ಅಕೌಂಟ್ ಕ್ಲಿಕ್ ಮಾಡಿ. ಅದರ ವಿವಿಧ ರೀತಿಗಳ ಬಗ್ಗೆ ಬಲಭಾಗದಲ್ಲಿ ಹೆಚ್ಚಿನ ಮಾಹಿತಿ ದೊರೆಯುತ್ತದೆ. ಅದರಲ್ಲಿ ಸೋಗು ಹಾಕುವಿಕೆಯ ಖಾತೆಗಳು (Impersonation Accounts) ವಿಭಾಗದಲ್ಲಿ ಇರುವ ಸೂಚನೆಗಳನ್ನು ನೋಡಿ” ಎಂದು ತಿಳಿಸಿದೆ.
ಫೇಸ್ಬುಕ್‌ನಲ್ಲಿ ಪರಿಚಿತರು ಸ್ನೇಹದ ವಿನಂತಿಯನ್ನು ಕಳಿಸೋದು, ಅದನ್ನು ನೀವು ಒಪ್ಪಿಕೊಳ್ಳೋದು ಸಹಜ. ಹಾಗೆಯೇ ಅಪರಿಚಿತರೂ ನಿಮ್ಮ ಜೊತೆ ಸ್ನೇಹ ಮಾಡಲು ವಿನಂತಿ ಕಳಿಸುತ್ತಾರೆ. ನೀವು ಅದನ್ನು ಒಪ್ಪಿಕೊಳ್ಳುವ ಮೊದಲು ಅವರ ಬಗ್ಗೆ ಪರಿಶೀಲಿಸಿ ನೋಡಿ ನಿಮಗೆ ಸಮಂಜಸವೆನಿಸಿದರೆ ಸ್ನೇಹಿತರಾಗಬಹುದು. ನಿಮ್ಮ ಸ್ನೇಹಿತರಿಂದಲೇ ಎನಿಸುವ ಸ್ನೇಹ ವಿನಂತಿ ಅಥವಾ ಹಣ ಸಹಾಯದ ವಿನಂತಿಗಳು ಬಂದಾಗ ಜಾಗರೂಕರಾಗಿರಿ. ಅವರಿಗೆ ಕರೆ ಅಥವಾ ಮೆಸೇಜು ಮಾಡಿ ಸತ್ಯಾಸತ್ಯತೆಯನ್ನು ಅರಿತು ಮುಂದುವರಿಯಿರಿ. ನೆನಪಿಡಿ. ಅಂತರ್ಜಾಲದಲ್ಲಿ ನಾವು ನಮ್ಮ ಸಾಮಾಜಿಕ ವೇದಿಕೆಗಳ ಖಾತೆಯನ್ನು ಸರಿಯಾಗಿ, ಸುರಕ್ಷಿತವಾಗಿ ಮತ್ತು ಉಪಯುಕ್ತವಾಗಿ ಬಳಸಿಕೊಳ್ಳಲು ಜಾಣರಾಗಿರಬೇಕು ಮತ್ತು ಜಾಗರೂಕರಾಗಿರಬೇಕು.
ಇದನ್ನೂ ಓದಿ: ಸೈಬರ್ ಸೇಫ್ಟಿ ಅಂಕಣ: ಆನ್‌ಲೈನ್ ದಾಳಿಗೆ ಒಳಗಾದ ಭಾರತೀಯ ಸೈಬರ್ ಸೆಕ್ಯುರಿಟಿ ಸಂಸ್ಥೆ