Site icon Vistara News

ಸೈಬರ್‌ ಸೇಫ್ಟಿ ಅಂಕಣ: ಪ್ರತ್ಯಕ್ಷ ಕಂಡರೂ ಪರಾಂಬರಿಸಿ ನೋಡು

fake trading sites

ನನ್ನ ಸ್ನೇಹಿತರು ಇತ್ತೀಚೆಗೆ ಒಂದು ವರದಿಯ ಲಿಂಕ್ ಕಳಿಸಿ ಅದರ ಸತ್ಯಾಸತ್ಯತೆಯನ್ನು ಕೇಳಿದ್ದರು. ನಾನೂ ಕುತೂಹಲದಿಂದ ಆ ಮೆಸೇಜಿನ ಲಿಂಕ್ ಕ್ಲಿಕ್ಕಿಸಿ ಅದರಲ್ಲಿದ್ದ ವರದಿಯನ್ನು ಆಸಕ್ತಿಯಿಂದ ಓದಿದೆ. ಅದರ ಸಂಕ್ಷಿಪ್ತರೂಪವನ್ನು ಕನ್ನಡೀಕರಿಸಿ ನಿಮಗೆ ತಲುಪಿಸುತ್ತಿದ್ದೇನೆ.

ಇದೀಗ ಬಂದ ಸುದ್ದಿ: ನಾರಾಯಣ ಮೂರ್ತಿ ಸಾಮಾನ್ಯ ಭಾರತೀಯರನ್ನು ಶ್ರೀಮಂತಗೊಳಿಸಲು ತಮ್ಮ ರಹಸ್ಯವನ್ನು ಅನಾವರಣಗೊಳಿಸಿದ್ದಾರೆ ಎಂಬರ್ಥದ ಶೀರ್ಷಿಕೆಯೊಂದಿಗಿನ ಆ ಇಂಗ್ಲೀಷ್ ಲೇಖನ ಬಹಳ ನೈಜವಾಗಿತ್ತು.

“ಭಾರತೀಯರು ಶ್ರೀಮಂತರಾಗಿರಬೇಕು ಮತ್ತು ಉತ್ತಮ ಗುಣಮಟ್ಟದ ಜೀವನವನ್ನು ಪಡೆಯಬೇಕು, ಇದು ನನ್ನ ಇಂದಿನ ಉದ್ದೇಶವಾಗಿದೆ! ಭಾರತದಲ್ಲಿನ ಜನರು ತಮಗೆ ಬೇಕಾದುದನ್ನು ನಿಭಾಯಿಸುತ್ತಾರೆ. ನನ್ನ ಯೋಜನೆಯು ಅವರಿಗೆ ಸಹಾಯ ಮಾಡುತ್ತದೆ ಎಂದು ನನಗೆ ಖಾತ್ರಿಯಿದೆ ಮತ್ತು ಈಗ ನಾನು ಅದರ ಬಗ್ಗೆ ಮಾಹಿತಿಯನ್ನು ಹರಡಲು ನನ್ನ ಕೈಲಾದಷ್ಟು ಮಾಡುತ್ತೇನೆ” ಎಂದ ನಾರಾಯಣ ಮೂರ್ತಿಯವರು “ಇತ್ತೀಚಿನ ದಿನಗಳಲ್ಲಿ ಜನರು ಆರ್ಥಿಕವಾಗಿ ಹೆಣಗಾಡುತ್ತಿದ್ದಾರೆ ಮತ್ತು ಅವರ ಮನೆಗಳಿಂದ ದೂರದಿಂದಲೇ ಒಂದು ವರ್ಷದ ಸಂಬಳವನ್ನು ಗಳಿಸುವ ಅವಕಾಶವನ್ನು ಅವರಿಗೆ ಒದಗಿಸುವುದು ನನಗೆ ನಂಬಲಸಾಧ್ಯವಾಗಿದೆ!” ಎಂದು ತಿಳಿಸಿದರು ಅಂತ ಉಲ್ಲೇಖವಾಗಿದೆ. ಇನ್ಫೋಸಿಸ್ ಕಂಪೆನಿಯ ಸ್ಥಾಪಕರಾದ ನಾರಾಯಣ ಮೂರ್ತಿಯವರು ಈ ಕಂಪೆನಿಯಲ್ಲಿ ಮೂರು ಮಿಲಿಯನ್‌ಗೂ ($3,000,000) ಅಧಿಕ ಹೂಡಿಕೆ ಮಾಡಿದ್ದಾರೆ ಎನ್ನಲಾಗಿದೆ. “ಕಳೆದೆರಡು ವರ್ಷಗಳಿಂದ ಅಭಿವೃದ್ಧಿಗೊಳ್ಳುತ್ತಿರುವ ತಂತ್ರಾಂಶ ಈಗ ಎಲ್ಲರಿಗೂ ಲಭ್ಯವಾಗಲಿದೆ. ನಾವು ದಿನನಿತ್ಯ ಮಾಡುವ ಟ್ರೇಡ್‌ಗಳ ಆಧಾರದ ಮೇಲೆ ಯಶಸ್ಸಿನ ಪ್ರಮಾಣವನ್ನು ಹೆಚ್ಚಿಸಲು ಪ್ಲಾಟ್‌ಫಾರಂ ಸುಧಾರಿಸುತ್ತಿದ್ದೇವೆ ಮತ್ತು ಅಂತಿಮವಾಗಿ ಅದನ್ನು ಸಾಮಾನ್ಯ ಜನರಿಗೆ ಕೈಗೆಟುಕುವಂತೆ ಮಾಡಿದ್ದೇವೆ. ಇಷ್ಟೆಲ್ಲಾ ಮಾಧ್ಯಮ ಮಿತ್ರರ ಸಮ್ಮುಖದಲ್ಲಿ BTC iPlex Ai ಪ್ಲಾಟ್‌ಫಾರಂ ಅನಾವರಣಗೊಳಿಸಲು ಕಾಲ ಕೂಡಿಬಂದಿದೆ” ಎಂದರು.

“ಪ್ಲಾಟ್‌ಫಾರ್ಮ್‌ನಲ್ಲಿನ ಸುಧಾರಣೆಗಳಿಂದಾಗಿ, ಒಬ್ಬ ವ್ಯಕ್ತಿಯ ಕನಿಷ್ಠ ಪ್ರವೇಶ ಮಿತಿಯನ್ನು ₹ 36,000 ರಿಂದ 18,499ಕ್ಕೆ ಕಡಿಮೆ ಮಾಡಲಾಗಿದೆ ಮತ್ತು ಅನೇಕ ಬಳಕೆದಾರರಿಗೆ ಇದು ತುಂಬಾ ಆರಾಮದಾಯಕವಾಗಿದೆ. ಈ ವ್ಯವಸ್ಥೆಯು ಯಂತ್ರಕಲಿಕೆಯ (Machine Learning) ಮೇಲೆ ಆಧಾರಿತವಾಗಿದೆ ಮತ್ತು ಇದು ಭಾರತದಲ್ಲಿ ಮಾತ್ರವಲ್ಲದೆ ಇತರ ಹಲವು ವೇದಿಕೆಗಳಿಗೆ ಹೋಲಿಸಿದರೆ ಬಹುದೊಡ್ಡ ಸುಧಾರಣೆಯಾಗಿದೆ. ಕಳೆದ 20 ವರ್ಷಗಳಿಂದ ವೃತ್ತಿಪರ ಟ್ರೇಡರ್‌ಗಳ ಸಾವಿರಾರು ಡೀಲ್‌ಗಳನ್ನು ವಿಶ್ಲೇಷಿಸಿದ ನಂತರ, 10 ಮಿಲಿಯನ್‌ಗಿಂತಲೂ ಹೆಚ್ಚು ವಿಶಿಷ್ಟ ಪ್ರಕರಣಗಳನ್ನು ಉಪಯೋಗಿಸಿ ತಯಾರಾದ ಅಲ್ಗಾರಿದಮ್ ಹಣಕಾಸಿನ ಮಾರುಕಟ್ಟೆಗಳ ಏರುಪೇರುಗಳನ್ನು ಈಗಾಗಲೇ ಅನುಭವಿಸಿದೆ ಮತ್ತು ಇಂದು ಹಣವನ್ನು ಹೇಗೆ ಮಾಡಬೇಕೆಂದು ಸುಲಭವಾಗಿ ಅರ್ಥಮಾಡಿಕೊಳ್ಳುತ್ತದೆ. ಎಲ್ಲಾ ಮಾರುಕಟ್ಟೆಗಳು ಆವರ್ತಕವಾಗಿವೆ; ಪ್ರತಿ 4 ವರ್ಷಗಳಿಗೊಮ್ಮೆ ಪುನರಾವರ್ತಿಸುತ್ತದೆ. ಯಾವಾಗ ವ್ಯಾಪಾರ ಮಾಡಬೇಕು ಮತ್ತು ಏನನ್ನು ವ್ಯಾಪಾರ ಮಾಡಬೇಕು ಎಂದು ನಮಗೆ ನಿಖರವಾಗಿ ತಿಳಿದಿದೆ. ತೈಲ, ಚಿನ್ನ, ಬಿಟ್‌ಕಾಯಿನ್ ಅಥವಾ ಯಾವುದಾದರೂ. ಬಳಕೆದಾರರಿಗೆ ಯಾವುದೇ ಮಿತಿಯಿಲ್ಲ. ಅವರು ತಮ್ಮ ಹೂಡಿಕೆಯನ್ನು ಬಹಳ ವೇಗವಾಗಿ ಹೆಚ್ಚಿಸಿಕೊಳ್ಳಬಹುದು. ಬಿಡುಗಡೆಯ ದಿನಾಂಕದ ಮೊದಲು ಎಲ್ಲವೂ ಕಾರ್ಯನಿರ್ವಹಿಸುತ್ತದೆ ಎಂದು ಖಚಿತಪಡಿಸಿಕೊಳ್ಳಲು ಪರೀಕ್ಷೆಯಾಗಿ ನಾನು ವೈಯಕ್ತಿಕವಾಗಿ ಒಂದೇ ವಾರದಲ್ಲಿ ₹55,747 ಮಾಡಿದೆ. ಇತ್ತೀಚಿಗೆ ಚಿನ್ನ ಬೆಳೆಯುತ್ತಿದೆ, ವೇದಿಕೆಯು ಅಂತಹ ಬೆಳವಣಿಗೆಯನ್ನು ಊಹಿಸಿ ಹಣ ಗಳಿಸಿದೆ” ಎಂದು ತಮ್ಮ ಅನುಭವವನ್ನು ಹಂಚಿಕೊಂಡರು ನಾರಾಯಣಮೂರ್ತಿ.

ನಂತರದಲ್ಲಿ ಸುದ್ದಿಗಾರರು ಕೂಡ ಇದನ್ನು ದಿನನಿತ್ಯ ಪರೀಕ್ಷಿಸಿದ್ದನ್ನು ವಿವರಿಸಿದ್ದಾರೆ. ಮೊದಲ ದಿನ ಅವರ ವಿಡಿಯೊ ಆಪರೇಟರ್ ರಾಹುಲ್ ಕುಮಾರ್ ಎನ್ನುವವರ ಹೆಸರಿನೊಂದಿಗೆ ಮೊಬೈಲ್ ಮತ್ತು ಇಮೇಲ್ ಐಡಿ ನಮೂದಿಸಿ ಖಾತೆ ತೆಗೆದರಂತೆ. ಅದಕ್ಕೆ ಮೇಲೆ ತಿಳಿಸಿದಂತೆ ₹18,449 ಖಾತೆಗೆ ಜಮಾ ಮಾಡಿದರು ರಾಹುಲ್. ತಕ್ಷಣ ಕಂಪೆನಿಯಿಂದ ಒಬ್ಬ ವೈಯಕ್ತಿಕ ವ್ಯವಸ್ಥಾಪಕರಿಂದ ಕರೆಯೂ ಬಂದು ಸುದ್ದಿಗಾರರಿಗೆ ಬಹಳ ಖುಷಿ ಆಯಿತು. ಎರಡನೆಯ ದಿನ ಖಾತೆಗೆ ಲಾಗಿನ್ ಮಾಡಿದಾಗ ಅದರ ಬ್ಯಾಲೆನ್ಸ್ ₹23788 ಆಗಿದ್ದು ಕಂಡು ಎಲ್ಲರೂ ಚಕಿತರಾದರು. ವ್ಯವಸ್ಥಾಪರಿಗೆ ಕರೆ ಮಾಡಿದಾಗ ಅವರು ಅದರ ಕಾರಣ ವಿವರಿಸಿದರು. ನಂತರ ಅವರು ಖಾತೆಯಿಂದ ಹಣವನ್ನು ಹಿಂಪಡೆಯುವುದಕ್ಕೆ ಪ್ರಯತ್ನಿಸಿದರು. ಕೇವಲ 5 ನಿಮಿಷದಲ್ಲಿ ಹಿಂಪಡೆದ ಹಣ ರಾಹುಲ್‌ರ ಬ್ಯಾಂಕ್ ಖಾತೆಗೆ ಜಮಾ ಆಗಿತ್ತು. ಮೂರನೆಯ ದಿನವಂತೂ ಬ್ಯಾಲೆನ್ಸ್ ₹27,431ಕ್ಕೆ ತಲುಪಿತ್ತು.

ಇದರ ಬಗ್ಗೆ ಆ ಲೇಖನದಲ್ಲಿನ ತೀರ್ಮಾನ ಮತ್ತು ಶಿಫಾರಸ್ಸುಗಳನ್ನು ನೋಡಿ.

“ಇದು ನಕಲಿ ಅಲ್ಲ. ಪ್ಲಾಟ್‌ಫಾರ್ಮ್ ನಿಜವಾಗಿದೆ, ಸೈಟ್‌ನಲ್ಲಿ ಯಾವುದೇ ಸಮಸ್ಯೆಗಳಿಲ್ಲದೆ ಡೀಲ್‌ಗಳನ್ನು ಅತ್ಯಂತ ವೇಗವಾಗಿ ತೆರೆಯಲಾಗುತ್ತದೆ. ನಾವು ಸಂಪೂರ್ಣವಾಗಿ ಏನನ್ನೂ ಮಾಡಲಿಲ್ಲ ಮತ್ತು ನಿರ್ದಿಷ್ಟ ಜ್ಞಾನವನ್ನು ಹೊಂದಿರಲಿಲ್ಲ. ಗ್ರಾಹಕ ನಿರ್ವಹಣೆಯು ಅತ್ಯಂತ ನಿಷ್ಠಾವಂತ ಮತ್ತು ಸಹಾಯಕವಾಗಿತ್ತು, ಅವರು ನಮ್ಮ ಪ್ರಶ್ನೆಗಳನ್ನು ಉತ್ತರಿಸಿದರು ಮತ್ತು ಯಾವುದೇ ಹೆಚ್ಚುವರಿ ಠೇವಣಿಗಳನ್ನು ಮಾಡಲು ನಮ್ಮನ್ನು ಬಲವಂತಪಡಿಸಲಿಲ್ಲ. ನಾವು ಹಣವನ್ನು ಗಳಿಸುತ್ತಿದ್ದೇವೆ ಎಂದು ಅವರು ತೃಪ್ತರಾಗಿದ್ದರು, ಏಕೆಂದರೆ ನಾವು ಗಳಿಸಿದರೆ, ಅವರು ಗಳಿಸುತ್ತಾರೆ, ಟ್ರೇಡಿಂಗ್ ಪ್ರಮಾಣದ 2% ನಷ್ಟು ಕಮಿಷನ್ ತೆಗೆದುಕೊಳ್ಳುತ್ತಾರೆ. ಇದು ಗೆಲುವು-ಗೆಲುವಿನ ಸಹಕಾರವಾಗಿದೆ. ಕೇವಲ 3 ದಿನಗಳ ನಮ್ಮ ಪ್ರಯೋಗಕ್ಕೆ ರಾಹುಲ್ ₹ 8932 ಗಳಿಸಿದರು.”

cyber safety social sites

ಜೊತೆಗೆ ನಮ್ಮ ಒಳಿತಿಗಾಗಿ ನಾವು ಗಮನಿಸಬೇಕಾದ ಕೆಲವು ಅಂಶಗಳನ್ನೂ ತಿಳಿಸುತ್ತಾ ನಮ್ಮನ್ನು ಸೆಳೆಯಲು ಬೇಕಾದ ಎಲ್ಲಾ ತಂತ್ರಗಳನ್ನೂ ನಂಬಲಾರ್ಹವಾಗಿಯೇ ಮಾಡಿದ್ದಾರೆ. ಲೇಖನ ಓದಿ ನನ್ನ ಮೊದಲ ಪ್ರತಿಕ್ರಿಯೆ ‘ಇದು ನಿಜವಿರಬಹುದು, ನನಗೂ ಹಣ ಹೂಡಿಕೆ ಮಾಡುವ ಇಚ್ಛೆ ಆಗುತ್ತಿದೆ’ ಅಂತ ಗೆಳೆಯರಿಗೆ ತಿಳಿಸಿದೆ. ಆಮೇಲೆ ಅದರ ಬಗ್ಗೆ ಹೆಚ್ಚಿನ ಮಾಹಿತಿಗೋಸ್ಕರ ಬಹಳ ವರ್ಷಗಳಿಂದ ಸ್ಟಾಕ್ ಟ್ರೇಡಿಂಗ್ ಕ್ಷೇತ್ರದಲ್ಲಿರುವ ಹರಿನಾಥ್‌ಗೆ ಆ ಲಿಂಕ್ ಕಳಿಸಿದೆ. ಇದು ಫ್ರಾಡ್ ಅಂದರು. ಕ್ರಿಪ್ಟೊ ಕರೆನ್ಸಿ ಬಗ್ಗೆ ಐಐಎಮ್‌ನಲ್ಲಿ ನನಗೆ ಪಾಠ ಹೇಳಿದ್ದ ಡಾ.ದೇವಿಪ್ರಸಾದ್‌ರಿಗೂ ಲಿಂಕ್ ಕಳಿಸಿ ಕೇಳಿದೆ. ಅವರೂ ಇದನ್ನು ಸ್ಕ್ಯಾಮ್ ಎಂದರು. ನಂತರ ಮಿತ್ರ ಕೇಶವಪ್ರಸಾದರಿಗೆ ಕರೆ ಮಾಡಿ ನನ್ನ ಅವಲೋಕನಗಳನ್ನು ತಿಳಿಸಿದೆ.

ಪ್ರಾಯೋಗಿಕವಾಗಿ ನನ್ನ ನಂಬರ್ ಮತ್ತು ಇಮೇಲ್ ಐಡಿಯನ್ನು ಕೊಟ್ಟಾಗ ಹೊಸ ಬ್ರೌಸರ್ ಟ್ಯಾಬ್ ಓಪನ್ ಆಗಿ ಕ್ರಿಪ್ಟೋಕರೆನ್ಸಿ ಮತ್ತು ಇತರ ಕರೆನ್ಸಿ ಪೇರ್‌ಗಳ ಟ್ರೆಡಿಂಗ್ ಸ್ಕ್ರೀನ್ ಜೊತೆಯಲ್ಲಿ ಕ್ಯಾಂಡಲ್ ಚಾರ್ಟ್ ಇರುವ ಸೈಟ್ ಓಪನ್ ಆಯಿತು. ನನ್ನ ಹೆಸರು ಮತ್ತು ಫೋನ್ ನಂಬರ್ ನಮೂದಿಸಿದ್ದ ವೆಬ್‌ಸೈಟ್ https:// ಇತ್ತು ಆದರೆ ಅದರ ಉಳಿದ ಅಡ್ರೆಸ್ ಸರಿ ಇರಲಿಲ್ಲ. ಹಾಗೂ ಓಪನ್ ಆದ ವೆಬ್ ಸೈಟ್ https://trade.mind-vise.com/en ಅಷ್ಟರಲ್ಲಿ ನನಗೂ ವ್ಯವಸ್ಥಾಪಕರಿಂದ ಕರೆ ಬಂತು. ನಾನು ಕನ್ನಡ ಮಾತ್ರ ಬರುವುದೆಂದಾಗ ಹಿಂದಿ ಮತ್ತು ಇಂಗ್ಲಿಷಿನಲ್ಲಿ ಸಂಭಾಷಿಸುತ್ತಿದ್ದ ವ್ಯಕ್ತಿ ಕರೆಯನ್ನು ಕನ್ನಡ ಬರುವಂತ ವ್ಯವಸ್ಥಾಪಕರಿಗೆ ವರ್ಗಾಯಿಸಿದ. ನಾನು ಕೆಲವು ಪ್ರಶ್ನೆಗಳನ್ನು ಕೇಳಿದಾಗ ನನ್ನ ಇಮೇಲ್‌ಗೆ ಬಂದ ಮೇಲ್ ನೋಡಲು ಹೇಳಿದ. ಅದರಲ್ಲಿ ಕೇವಲ ಒಂದು ಸಾಲು ಮಾತ್ರ ಇತ್ತು. ಅದರಲ್ಲಿದ್ದ ಒಂದು ಸಂಖ್ಯಯನ್ನು ಕ್ಲಿಕ್ಕಿಸಲು ತೆಲಗು ಮಿಶ್ರಿತ ಕನ್ನಡದಲ್ಲಿ ಹೇಳಿದ. ಆಗ ಇನ್ನೊಂದು ವೆಬ್ ಸೈಟ್ (d-and-update.company-information.service.gov.uk/company/05488515) ತೆರೆದು ಕೊಂಡು REGULATORY FINANCE SOLUTIONS LIMITED ಎಂಬ ಕಂಪೆನಿ, ಮತ್ತು ಅದರ ಇಂಗ್ಲೆಂಡ್ ವಿಳಾಸ ತೋರಿಸ್ತಿತ್ತು. ಮತ್ತೆರಡು ಪ್ರಶ್ನೆ ಮಾಡುವಾಗ ವ್ಯವಸ್ಥಾಪಕ ಕರೆ ಕತ್ತರಿಸಿ ಮಾಯವಾದ. ನಂತರ ಪರಾಂಬರಿಸಿ ನೋಡಿದರೆ ಕೇಶವಪ್ರಸಾದರು ಕಳಿಸಿದ್ದ ವರದಿಯ ಲಿಂಕ್ ಕೂಡ ತಪ್ಪು ಜಾಲತಾಣದ್ದು (https://exspress-indian.com/) ಓದುಗರ ಸುರಕ್ಷತೆಗಾಗಿ ಪೂರ್ತಿ ಲಿಂಕ್ ಕೊಡ್ತಿಲ್ಲ. https:// ನಂತರದ ಅಡ್ರೆಸ್‌ನ ಸ್ಪೆಲ್ಲಿಂಗ್ ಗಮನಿಸಿ.

ಇದನ್ನೂ ಓದಿ: ಸೈಬರ್‌ ಸೇಫ್ಟಿ ಅಂಕಣ: ಅನುಕೂಲಗಳು ಹೆಚ್ಚಾದಂತೆ ಆತಂಕಕ್ಕೆ ನೂರು ದಾರಿಗಳು

ತಪ್ಪು ವರದಿಯನ್ನು ಫೇಕ್ ಜಾಲತಾಣದಲ್ಲಿಟ್ಟು ಅದರಲ್ಲಿಯೂ ನಾರಾಯಣಮೂರ್ತಿಯವರನ್ನು ಬಳಸಿ ಅವರೇ ಹೇಳಿದ್ದಾರೆ ಎನ್ನುವ ಹಾಗೆ ಸುಳ್ಳನ್ನು ಪ್ರಕಟಿಸಿ (AI ಬಳಕೆಯೂ ಆಗಿರಬಹುದು), ಜೊತೆಯಲ್ಲಿ ನಮ್ಮ ಹೆಸರು, ಇಮೇಲ್ ಮತ್ತು ಮೊಬೈಲ್ ಪಡೆಯಲು ಒಂದು ಲಿಂಕ್, ಅಲ್ಲಿಂದ ಮತ್ತೊಂದು ಫೇಕ್ ಟ್ರೇಡಿಂಗ್ ಸೈಟ್ ಮೂಲಕ ಜನರನ್ನು ನಂಬಿಸಿ ಆಕರ್ಷಿಸಿ ಏಮಾರಿಸುವ ಹೊಸ ಸೋಷಿಯಲ್ ಇಂಜಿನಿಯರಿಂಗ್ ತಂತ್ರದ ಅನಾವರಣ ನಿಮ್ಮ ಮುಂದಿದೆ. ಇಷ್ಟೆಲ್ಲಾ ಆಗುವ ಹೊತ್ತಿಗೆ ಫೇಸ್ಬುಕ್ಕಿನಲ್ಲೂ Data Vic A4 ಎನ್ನುವ ಪ್ರಾಯೋಜಿತ ಪೋಸ್ಟಿನಲ್ಲೂ ಈ ಹೊಸ ಸ್ಕ್ಯಾಮ್ ಪ್ರತ್ಯಕ್ಷವಾಗಿತ್ತು.

“ಪ್ರತ್ಯಕ್ಷ ಕಂಡರೂ ಪರಾಂಬರಿಸಿ ನೋಡು”. ಈ ಗಾದೆ ಮಾತನ್ನು ಸದಾ ನೆನಪಿನಲ್ಲಿಟ್ಟುಕೊಂಡಿದ್ದರೆ ಅಂತರ್ಜಾಲದಲ್ಲಿ ಎದುರಾಗುವ ವಿವಿಧ ಆಮಿಷಗಳಿಗೆ ಬಲಿಯಾಗುವುದು ತಪ್ಪುತ್ತದೆ. ಕಳೆದ ಕೆಲವು ವಾರಗಳಲ್ಲಿ ಸೋಷಿಯಲ್ ಇಂಜಿನಿಯರಿಂಗ್ ತಂತ್ರ ಮತ್ತು ಅದನ್ನು ಬಳಸಿ ಆನ್ಲೈನ್ ಕಳ್ಳರ ಕರಾಮತ್ತಿನ ಬಗ್ಗೆ ತಿಳಿಸಿದ್ದೆ. ಈ ವಾರ ಸೋಷಿಯಲ್ ಇಂಜಿನಿಯರಿಂಗ್ ತಂತ್ರದ ಮತ್ತೊಂದು ಆಯಾಮವನ್ನು ಪ್ರಾಯೋಗಿಕವಾಗಿ ತಿಳಿದುಕೊಂಡ ಬಗ್ಗೆ ತಿಳಿಸಿದ್ದೇನೆ. ಗಾದೆ ಮಾತು ಮರೆಯಬೇಡಿ. ಜೊತೆಗೆ ಜಾಣರಾಗಿ, ಜಾಗರೂಕರಾಗಿರಿ.

ಇದನ್ನೂ ಓದಿ: ಸೈಬರ್‌ ಸೇಫ್ಟಿ ಅಂಕಣ: ಮೋಸ ಮಾಡುವ ಸೋಷಿಯಲ್ ಇಂಜಿನಿಯರಿಂಗ್

Exit mobile version