ನಮ್ಮ ದೈನಂದಿನ ಜೀವನದಲ್ಲಿ ತಂತ್ರಜ್ಞಾನ ಕ್ಷೇತ್ರದ ಹೊಸ ಆವಿಷ್ಕಾರಗಳು ಬಹಳಷ್ಟು ಅನುಕೂಲಗಳನ್ನು ಕೊಟ್ಟಿದೆ. ಅನುಕೂಲಗಳು ಅವಲಂಬನೆಯನ್ನು ಹೆಚ್ಚಿಸಿದೆ. ಜೊತೆಗೆ ಅದರಿಂದ ಆಗುವ ಆತಂಕಗಳು, ಅನಾಹುತಗಳು ಕೂಡಾ ಹೆಚ್ಚಾಗಿದೆ. ಅಂತರ್ಜಾಲ ನಮ್ಮ ಜೀವನದ ಅವಿಭಾಜ್ಯ ಅಂಗವಾಗಿದೆ. ಮೊಬೈಲ್ ಮುಖಾಂತರ ನಮ್ಮೆಲ್ಲರ ವ್ಯವಹಾರಗಳೂ ಡಿಜಿಟಲ್ ಆಗಿದೆ. ಜೊತೆಗೆ ವಿವಿಧ ಉಪಾಯಗಳನ್ನು ಬಳಸಿ ನಮ್ಮನ್ನು ಏಮಾರಿಸುವ ಕ್ರಿಮಿನಲ್‌ಗಳೂ ಹೆಚ್ಚಾಗಿದ್ದಾರೆ. ಮಾಧ್ಯಮಗಳಲ್ಲಿ ನೀವು ನೋಡಿರಬಹುದು, ಪತ್ರಿಕೆಗಳಲ್ಲಿ ಓದಿರಬಹುದು; ಎಂತೆಂತವರು ಮೋಸ ಹೋಗ್ತಿದ್ದಾರೆ, ಹೇಗೆಲ್ಲಾ ಬೇಸ್ತುಬೀಳ್ತಿದ್ದಾರೆ ಅಂತ. ಇತ್ತೀಚೆಗೆ NDTVಯ ಒಟಿಪಿ ಮಾಫಿಯಾ ಎಂಬ ಯೂಟ್ಯೂಬ್ ಸಾಕ್ಷ್ಯಚಿತ್ರದಲ್ಲಿ ಈ ಕ್ರಿಮಿನಲ್‌ಗಳ ಸಂದರ್ಶನ ಇದೆ. ಜೊತೆಗೆ ಪೊಲೀಸ್ ದಾಳಿ ಕಾರ್ಯಾಚರಣೆಯ ನೇರ ಪ್ರಸಾರನೂ ಇದೆ. ಮೊದಲಿಗೆ ಇತ್ತೀಚಿನ ಪತ್ರಿಕಾ ವರದಿಯನ್ನು ಉಲ್ಲೇಖಿಸಿ ಆ ವಿಡಿಯೊ ವಿಚಾರವನ್ನು ಪ್ರಸ್ತಾಪಿಸುತ್ತೇನೆ.
ಸೈಬರ್ ವಂಚನೆಯಿಂದ ಬೆಂಗಳೂರಿನ ಯುವತಿಯೊಬ್ಬಳು 96 ಸಾವಿರ ರೂಪಾಯಿ ಕಳೆದುಕೊಂಡಿರುವ ಬಗ್ಗೆ ವರದಿಯಾಗಿದೆ. ಮಾನ್ಯತಾ ಟೆಕ್ ಪಾರ್ಕಿನ ಉದ್ಯೋಗಿಯಾಗಿರುವ ಆಕೆಯ ಮೊಬೈಲಿಗೆ ಮೊದಲಿಗೆ ಒಂದು ಆಟೋಮೇಟೆಡ್ ಫೋನ್ ಕರೆ ಬಂದಿತ್ತು. ಅದರಲ್ಲಿ ಮಾತಾಡಿದ ಧ್ವನಿ ‘ನೀವು ಮುಂಬೈನಲ್ಲಿ ಒಂದು ಸಂಚಾರ ನಿಯಮ ಉಲ್ಲಂಘನೆ ಪ್ರಕರಣದಲ್ಲಿ ಭಾಗಿಯಾಗಿದ್ದೀರಿ, ಅದಕ್ಕೆ ಸಂಬಂಧಿಸಿದಂತೆ ಕೋರ್ಟಿನ ಸಮನ್ಸ್ ಬಂದಿದೆ’ ಎಂದು ಹೇಳಿತು. ಜೊತೆಗೆ ‘ನೀವು ಈ ವಿಷಯದ ಬಗ್ಗೆ ಆರ್‌ಟಿಒ ಅವರನ್ನು ಮಾತನಾಡಲು ಬಯಸಿದರೆ 1 ಒತ್ತಿʼ ಎಂದು ತಿಳಿಸಿದರು. ಯುವತಿಯು ಗಾಬರಿಯಿಂದ 1 ಒತ್ತಿದಾಗ ಕರೆಯಲ್ಲಿ ಮುಂಬಯಿಯ ಅಂಧೇರಿಯ ಆರ್‌ಟಿಒ ಅಧಿಕಾರಿ ಎಂದು ಹೇಳಲಾದ ವ್ಯಕ್ತಿ ಸಂಪರ್ಕಕ್ಕೆ ಬರುತ್ತಾರೆ. ಆ ವ್ಯಕ್ತಿಯೂ ಯುವತಿಯನ್ನು ಇನ್ನಷ್ಟು ಹೆದರಿಸಿ ಮುಂಬೈಗೆ ಬರಬೇಕು ಎನ್ನುತ್ತಾನೆ. ಜೊತೆಗೆ ಮುಂಬೈ ಪೋಲೀಸರೊಂದಿಗೂ ಮಾತನಾಡಿಸುತ್ತಾನೆ. ಇವರೆಲ್ಲರೂ ಸೇರಿ ಆ ಯುವತಿಯಿಂದ ಬಹಳ ಸಲ ಹಣ ಪಾವತಿಸಿಕೊಂಡಿದ್ದಾರೆ.
ಇನ್ನೊಂದು ಪ್ರಕರಣದಲ್ಲಿ ಸ್ಕೈಪ್ ಮೂಲಕ ಕೆಲಸದ ಜಾಯಿನಿಂಗ್ ಫಾರ್ಮಾಲಿಟಿಸ್‌ಗಳನ್ನು (joining formalities) ಮಾಡುವಾಗ ಆ ಕಡೆಯ ವ್ಯಕ್ತಿ ಆಕೆಯ ಆಧಾರ್ ಮತ್ತು ಇತರ ದಾಖಲೆಗಳನ್ನು ಪಡೆದುಕೊಳ್ಳುತ್ತಾನೆ. ಆಧಾರ್ ಕಾರ್ಡ್ ಸಿಕ್ಕಿದೊಡನೆ ‘ನೀವು ಹಲವಾರು ಅಕೌಂಟ್‌ಗಳನ್ನು ಹೊಂದಿದ್ದೀರಿ. ಇವುಗಳ ಮೂಲಕ ಟೆರರ್ ಫಂಡಿಂಗ್ ನೆಡೆಯುತ್ತಿದೆ’ ಎಂದು ಹೆದರಿಸಿದ್ದಾನೆ. ಗಾಬರಿಗೊಂಡ ಆಕೆ CEN ಪೋಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ತನಿಖೆ ನೆಡೆಯುತ್ತಿದೆ.
ಇವೆರಡೂ ಪ್ರಕರಣಗಳಲ್ಲಿಯೂ ಸೋಶಿಯಲ್ ಇಂಜಿನಿಯರಿಂಗ್ ತಂತ್ರದ ಬಳಕೆಯಾಗಿರುವುದು ನೀವು ಗಮನಿಸಬಹುದು. ಪ್ರತಿ ದಿನ ಭಾರತದಾದ್ಯಂತ ಸರಾಸರಿ 20,000ಕ್ಕೂ ಜನರು ಸೈಬರ್ ಕ್ರೈಮಿಗೆ ಬಲಿಯಾಗುತ್ತಿದ್ದಾರೆ. ಅವರಲ್ಲಿ ಅಕ್ಷರಸ್ಥರೇ ಹೆಚ್ಚು ಎಂದು ಕ್ರಿಮಿನಲ್‌ಗಳೇ ಹೇಳಿದ್ದಾರೆ. ಅವರ ಪ್ರಕಾರ, ಅನಕ್ಷರಸ್ತರಿಗಿಂತ ವಿದ್ಯಾವಂತರನ್ನು ಏಮಾರಿಸುವುದು ಸುಲಭವಂತೆ. ಭಾರತದ ಸಾಕ್ಷರತೆ ಶೇಕಡಾ 77 ದಾಟಿರುವುದೂ ಸೈಬರ್ ಕ್ರಿಮಿನಲ್‌ಗಳಿಗೆ ಅನುಕೂಲವೇ ಆಗಿದೆ ಅಲ್ವಾ?
ವಿದ್ಯಾವಂತರು ಸೈಬರ್ ಮೋಸಕ್ಕೊಳಗಾಗುವುದು ಹೆಚ್ಚಾಗಿದೆ ಅಂದರೆ ಅವರು ಸೈಬರ್ ಸುರಕ್ಷತೆಯನ್ನು ನಿರ್ಲಕ್ಷಿಸುತ್ತಿರುವುದು ಗೊತ್ತಾಗುತ್ತದೆ. ಇದಕ್ಕೆ ಕಾರಣ “ನಮಗೆಲ್ಲಾ ಏನೂ ಆಗೋದಿಲ್ಲ” ಅಥವಾ “ನಮ್ಮನ್ನು ಯಾರು ಹ್ಯಾಕ್ ಮಾಡ್ತಾರೆ” ಎನ್ನುವ ಉಡಾಫೆ ಮನೋಭಾವ. ಈ ಅತಿಯಾದ ಆತ್ಮವಿಶ್ವಾಸ ನಮ್ಮನ್ನು ಅಜಾಗರೂಕರನ್ನಾಗಿ ಮಾಡುತ್ತದೆ. ಆ ಒಂದು ಕ್ಷಣವನ್ನೇ ಕ್ರಿಮಿನಲ್‌ಗಳು ಬಳಸಿಕೊಳ್ಳುತ್ತಾರೆ. ಅರೆ ನಿಮಿಷದ ಆಲಸ್ಯದಿಂದ ನೀವು ತೊಂದರೆಯಲ್ಲಿ ಸಿಕ್ಕಿಕೊಳ್ಳಬಹುದು. ಹಾಗಾಗಿ ಸೈಬರ್ ಜಗತ್ತಿನಲ್ಲಿ ಸದಾ ಜಾಣರಾಗಿರಿ ಮತ್ತು ಜಾಗರೂಕರಾಗಿರಿ.
ಎನ್‌ಡಿಟಿವಿ ತನಿಖೆಯು ಜಮ್ತಾರಾ ರೀತಿಯ ಸೈಬರ್ ವಂಚನೆಯ ಡೆನ್‌ಗಳು ದೇಶಾದ್ಯಂತ ಹುಟ್ಟಿಕೊಂಡಿದೆ ಎಂದು ತಿಳಿಸುತ್ತದೆ. OTP ಮಾಫಿಯಾ ಸಾಕ್ಷ್ಯಚಿತ್ರದಲ್ಲಿ ಪ್ರತಿದಿನ 140ಕ್ಕೂ ಹೆಚ್ಚು ಅಮೆರಿಕನ್ನರು ವಂಚನೆಗೀಡಾಗುತ್ತಾರೆ ಎಂದು ಹೇಳಿದ್ದಾರೆ. ಇವು ಕೇವಲ ವರದಿಯಾದ ಪ್ರಕರಣಗಳಾಗಿವೆ. ಈ ಪ್ರಕರಣಗಳಲ್ಲಿ 54% ಅಂದರೆ ಅರ್ಧಕ್ಕಿಂತಲೂ ಹೆಚ್ಚು – ಕೇವಲ ನಾಲ್ಕು ಜಿಲ್ಲೆಗಳಿಂದ ವರದಿಯಾಗಿದೆ. 6,94,424 ಸೈಬರ್ ವಂಚನೆ ಪ್ರಕರಣಗಳಲ್ಲಿ FIR ದಾಖಲಾಗಿದ್ದು ಕೇವಲ 2.6% ಪ್ರಕರಣಗಳಲ್ಲಿ ಅಂದರೆ ಕೇವಲ 18,000 ಕೇಸುಗಳು ದಾಖಲಾಗಿವೆ. ಹರಿಯಾಣ ರಾಜ್ಯದ ನೂಹ್ ಕೂಡ ಜಮ್‌ತಾರ, ಮೇವಟ್‌ನಂತೆ ಸೈಬರ್ ಕ್ರೈಮಿನ ಹಾಟ್ ಸ್ಪಾಟ್ ಎಂದು ಕುಖ್ಯಾತಿಯನ್ನು ಪಡೆದಿದೆ.
ಇದನ್ನೂ ಓದಿ: ಸೈಬರ್ ಸೇಫ್ಟಿ ಅಂಕಣ: ಮೋಸ ಮಾಡುವ ಸೋಷಿಯಲ್ ಇಂಜಿನಿಯರಿಂಗ್
ವಿಡಿಯೊದಲ್ಲಿ ಕೇಳಿದ ಪ್ರಶ್ನೆಗೆ ಒಬ್ಬ ಬಹಳ ಬಿಂದಾಸಾಗಿ ಹೇಳ್ತಾನೆ ಬ್ಲಾಕ್‌ಮೇಲ್ ಅಥವಾ ಸೆಕ್ಸ್‌ಟಾರ್ಷನ್ (Sextortion) ಈಗ ಅತಿ ಹೆಚ್ಚು ಚಾಲನೆಯಲ್ಲಿರುವ ಮತ್ತು ಲಾಭದಾಯಕವಾದ ಸೈಬರ್ ವಂಚನೆಯ ತಂತ್ರ ಅಂತ. ಸಂದರ್ಶನಕಾರನೊಂದಿಗೆ ಮಾತಾಡುತ್ತಾ ಆ ವ್ಯಕ್ತಿ ಈ ವಂಚನೆಯನ್ನು ಕಾರ್ಯರೂಪಕ್ಕೆ ತರುವ ಬಗ್ಗೆಯೂ ವಿವರಿಸಿದ್ದಾನೆ. ಮೊದಲಿಗೆ ಅವರು ಫೇಸ್ಬುಕ್ಕಿನಲ್ಲಿ ಫ್ರೆಂಡ್ ರಿಕ್ವೆಸ್ಟ್, ಇನ್ಸಟಾಗ್ರಾಮ್‌ನಲ್ಲಿ ಫಾಲೋ ರಿಕ್ವೆಸ್ಟ್‌ನಿಂದ ಶುರುಮಾಡಿ ಚಾಟಿಂಗ್ ಮುಖಾಂತರ ಅವರಿಗೆ ತಕ್ಕ ಬಕರಾ ಹುಡುಕುತ್ತಾರೆ. ನಂತರ ವಿಡಿಯೊ ಕಾಲ್ ಮಾಡಲು ಪ್ರೇರೇಪಿಸುತ್ತಾರೆ. ಆಗ ರಿಕಾರ್ಡ್ ಮಾಡಿಕೊಂಡು ಬಲೆಗೆ ಬಿದ್ದ ಬಕರಾನ ಹಣಕ್ಕಾಗಿ ಬ್ಲಾಕ್‌ಮೇಲ್ ಮಾಡುತ್ತಾರೆ.
ಕಳೆದ ವಾರ ಪ್ರಸ್ತಾಪಿಸಿದ ಮಾನವ ಆಧಾರಿತ ಸೋಷಿಯಲ್ ಇಂಜಿನಿಯರಿಂಗ್ ತಂತ್ರವನ್ನು ಬಳಸಿ ಜನರನ್ನು ವಿವಿಧ ಬಗೆಗಳಲ್ಲಿ ವಂಚಿಸೋದನ್ನು ನೀವು ಈ ಸಾಕ್ಷ್ಯಚಿತ್ರದಲ್ಲಿ ನೋಡುತ್ತೀರಿ. ಸಾಮಾಜಿಕ ಜಾಲತಾಣಗಳಲ್ಲಿ ವಿವಿಧ ಆಮಿಷಗಳನ್ನು ಒಡ್ಡುವ ಮೆಸೇಜುಗಳು, ಲಿಂಕ್‌ಗಳ ಬಗ್ಗೆ ಹುಷಾರಾಗಿರಿ. ಅಪರಿಚಿತರಿಂದ ಬರುವ ಫ್ರೆಂಡ್ ರಿಕ್ವೆಸ್ಟ್‌ಗಳನ್ನು ಹುಷಾರಾಗಿ ನಿರ್ವಹಿಸಿ. ಸರಿಯಾದ ಪರಿಶೀಲನೆಯ ನಂತರವೇ ಅವರನ್ನು ನಿಮ್ಮ ಸ್ನೇಹಿತರಾಗಿ ಒಪ್ಪಿಕೊಳ್ಳಿ.
ಅನುಕೂಲತೆಗಳು ಜಾಸ್ತಿಯಾದಂತೆ ಅದರಿಂದ ಅನಿರೀಕ್ಷಿತ ಅಪಾಯದ ಆತಂಕವೂ ಜಾಸ್ತಿಯಾಗುತ್ತದೆ. ನಿಮ್ಮ ಅಂತರ್ಜಾಲದ ಅಲೆದಾಟ ಜಗತ್ತಿನಲ್ಲಿರುವವರಿಗೆಲ್ಲಾ ನಿಮ್ಮ ಬಗ್ಗೆ ತಿಳಿಸಿಕೊಡುವ ಡಿಜಿಟಲ್ ಫುಟ್ ಪ್ರಿಂಟ್ ಉಳಿಸಿರುತ್ತದೆ ಎಂಬುದನ್ನು ಮರೆಯಬೇಡಿ. ಮಾನವ ಆಧಾರಿತ ಸೋಷಿಯಲ್ ಇಂಜಿನಿಯರಿಂಗ್ ನೂರಾರು ರೀತಿಯಲ್ಲಿ ನಿಮ್ಮನ್ನು ಏಮಾರಿಸಲು ಗಾಳ ಹಾಕಬಹುದು. ಜಾಣರಾಗಿರಿ, ಜಾಗರೂಕರಾಗಿರಿ.
ಇದನ್ನೂ ಓದಿ: ಸೈಬರ್ ಸೇಫ್ಟಿ ಅಂಕಣ: ಕ್ಯೂಆರ್ ಕೋಡ್ ವಂಚನೆ ಬಗ್ಗೆ ಹುಷಾರು!