ಭಾಗ – 2
ಅಂತರ್ಜಾಲದಲ್ಲಿ ವಿಹರಿಸುವಾಗ ಮೊದಲು ಪಾಲಿಸಬೇಕಾದ ಸುರಕ್ಷತಾ ಸಲಹೆಗಳ ಮೊದಲೆರಡು ಹಂತಗಳನ್ನು ಈ ಲೇಖನದ ಮೊದಲ ಭಾಗದಲ್ಲಿ ವಿವರಿಸಿದ್ದೇನೆ. ಅದರಂತೆ ನಿಮ್ಮ ಆನ್ಲೈನ್ ಅಕೌಂಟ್ ಗಳನ್ನು ಸುರಕ್ಷಿತಗೊಳಿಸಿದ್ದೀರಲ್ಲವೇ? ಈ ಸಲ, ಎಲ್ಲರ ಅಂತರ್ಜಾಲ ವಹಿವಾಟುಗಳಿಗೆ ಮುಖ್ಯವಾದ ಗೂಗಲ್ ಖಾತೆಯಲ್ಲಿ ಅಳವಡಿಸಬೇಕಾದ ಸುರಕ್ಷತಾ ಕ್ರಮಗಳನ್ನು ತಿಳಿಸುತ್ತೇನೆ.
ಇಂದು ಸೈಬರ್ ಲೋಕದಲ್ಲಿ ನಮ್ಮಲ್ಲಿ ಹೆಚ್ಚಿನವರು ಗೂಗಲ್, ಫೇಸ್ಬುಕ್, ವಾಟ್ಸಪ್, ಟ್ವಿಟರ್ ಇತ್ಯಾದಿಗಳಲ್ಲಿ ಒಂದು ಅಥವಾ ಹೆಚ್ಚಿನ ಖಾತೆಗಳನ್ನು ಹೊಂದಿದ್ದು ಅದು ನಮ್ಮ ಆನ್‌ಲೈನ್ ಗುರುತನ್ನು ರೂಪಿಸುತ್ತದೆ. ಬೇರೆ ಬೇರೆ ವೆಬ್‌ಸೈಟ್‌ಗಳಲ್ಲಿ ವಿವಿಧ ಖಾತೆಗಳಿಗೆ ಅವುಗಳನ್ನು ಜೋಡಿಸಲಾಗಿರುವುದರಿಂದ, ಅವುಗಳನ್ನು ಸುರಕ್ಷಿತವಾಗಿರಿಸುವುದು ಮತ್ತು ಆ ಖಾತೆಗಳು ದುರ್ಬಲವಾಗುವುದನ್ನು ತಡೆಯುವುದು ಅತ್ಯಗತ್ಯ .
ನಿಮ್ಮ ಗೂಗಲ್ ಖಾತೆಯನ್ನು ಸುಭದ್ರಗೊಳಿಸುವ ಕ್ರಮಗಳನ್ನು ನೋಡೋಣ.
ನಿಮ್ಮ ಅಂತರ್ಜಾಲದಲ್ಲಿನ ಅತಿ ಮುಖ್ಯ ಖಾತೆ ಗೂಗಲ್. ಅದು ಒಂದು ಸರ್ಚ್ ಇಂಜಿನ್. ಇಂದು ವಿಶ್ವದಲ್ಲೇ ಅತಿ ಹೆಚ್ಚು ಜನರು ದಿನನಿತ್ಯ ಉಪಯೋಗಿಸುವ ಯೂಟ್ಯೂಬ್, ಜಿ ಮೈಲ್, ಗೂಗಲ್ ಡ್ರೈವ್, ಗೂಗಲ್ ಮ್ಯಾಪ್ಸ್ ಮುಂತಾದ ವಿವಿಧ ಆಪ್‌ಗಳಿಗೆ ಮತ್ತು ನಿಮ್ಮ ಸ್ಮಾರ್ಟ್ ಫೋನುಗಳ ಜೀವಾಳ ಆಂಡ್ರಾಯಿಡ್ ಆಪರೇಟಿಂಗ್ ಸಿಸ್ಟಮ್‌ಗೆ ಅತ್ಯವಶ್ಯಕ ನಿಮ್ಮ ಗೂಗಲ್ ಖಾತೆ. ಇದೇ ಖಾತೆಯು ನಿಮ್ಮ ಆಂಡ್ರಾಯಿಡ್ ಸ್ಮಾರ್ಟ್ ಟಿವಿಗಳಲ್ಲಿ ನಿಮ್ಮ ಪ್ರೊಫೈಲ್‌ನೊಂದಿಗೆ ಲಿಂಕ್ ಆಗಿರುತ್ತದೆ.
ನಿಮ್ಮ ಗೂಗಲ್ ಖಾತೆಯನ್ನು ಸುರಕ್ಷಿತಗೊಳಿಸುವುದರಿಂದ ಮೇಲೆ ತಿಳಿಸಿದ ಸಿಸ್ಟಮ್‌ಗಳ ಮೇಲೆ ಪರಿಣಾಮ ಬೀರುವ ಅಥವಾ ಅದರಲ್ಲಿ ಸಂಗ್ರಹವಾಗಿರುವ ಮಾಹಿತಿಯನ್ನು ಬಹಿರಂಗಪಡಿಸುವ ಉಲ್ಲಂಘನೆಗಳನ್ನು ತಡೆಯಲು ಸಹಾಯ ಮಾಡುತ್ತದೆ. ನಿಮ್ಮ ಗೂಗಲ್ ಖಾತೆಯ ಭದ್ರತಾ ಪರಿಶೀಲನೆಯನ್ನು ಮಾಡುವ ಮೂಲಕ ನೀವು ನಿಮ್ಮ ಆನ್ಲೈನ್ ಅಕೌಂಟುಗಳ ಸುರಕ್ಷತಾ ಅಭಿಯಾನವನ್ನು ಪ್ರಾರಂಭಿಸಬಹುದು.
ನಿಮ್ಮ ಬ್ರೌಸರ್‌ನಲ್ಲಿ https://myaccount.google.com/security-checkup URLಗೆ ಭೇಟಿ ನೀಡಿ ಅಥವಾ ಗೂಗಲ್ ಕ್ರೋಮ್ ಬ್ರೌಸರ್‌ನಲ್ಲಿ > ಸೆಟ್ಟಿಂಗ್‌ಗಳು > ನಿಮ್ಮ ಗೂಗಲ್ ಖಾತೆಯನ್ನು ನಿರ್ವಹಿಸಿ (Manage Your Google Account) ಆಯ್ಕೆಮಾಡಿ.
ಈಗ, ಕೆಳಗಿನ ಪ್ರತಿಯೊಂದು ಆಯ್ಕೆಗಳಲ್ಲಿ ತಿಳಿಸಿರುವ ಶಿಫಾರಸುಗಳನ್ನು ಪರಿಶೀಲಿಸಿ ಮತ್ತು ಕ್ರಮ ತೆಗೆದುಕೊಳ್ಳಿ.
- ನಿಮ್ಮ ಸಾಧನಗಳು (Your Devices): ನಿಮ್ಮ ಗೂಗಲ್ ಖಾತೆಯೊಂದಿಗೆ ಸಂಯೋಜಿತವಾಗಿರುವ (ಲಿಂಕ್ ಆಗಿರುವ) ಯಾವುದೇ ಸಾಧನದ ನೋಂದಣಿ ರದ್ದುಗೊಳಿಸಬೇಕಾದರೆ ಈ ಪಟ್ಟಿಯನ್ನು ಉಪಯೋಗಿಸಿ. ಅನಗತ್ಯ ಸಾಧನಗಳು ನಿಮ್ಮ ಗೂಗಲ್ ಅಕೌಂಟಿಗೆ ಅಂಟಿಕೊಂಡಿದ್ದರೆ ಆ ನಂಟನ್ನು ತೆಗೆದು ಹಾಕಿ.
- ಇತ್ತೀಚಿನ ಭದ್ರತಾ ಘಟನೆಗಳು (Recent Security Events): ನಿಮ್ಮ ಖಾತೆಗೆ ಸಂಬಂಧಿಸಿದ ಅನುಮಾನಾಸ್ಪದ ಚಟುವಟಿಕೆಗಳನ್ನು ಗುರುತಿಸಲು ಮತ್ತು ಕ್ರಮ ತೆಗೆದುಕೊಳ್ಳಲು ನಿಮಗೆ ಸಹಾಯ ಮಾಡುತ್ತದೆ.
- 2 ಹಂತದ ಪರಿಶೀಲನೆ(2 Step Verification): ಪಾಸ್ವರ್ಡ್ ಜೊತೆಗೆ SMS ಕೋಡ್ಗಳನ್ನು ಬಳಸಿಕೊಂಡು ನಿಮ್ಮ ಪ್ರವೇಶವನ್ನು ದೃಢೀಕರಿಸಲು ಹೆಚ್ಚುವರಿ ಕ್ರಮವಾಗಿ ಎರಡನೇ ಪರಿಶೀಲನಾ ಅಂಶವನ್ನು ಸಕ್ರಿಯಗೊಳಿಸಲು ಇದನ್ನು ಬಳಸಿ. 2-ಹಂತದ ಪರಿಶೀಲನೆ ಇದ್ದರೆ, ನಿಮ್ಮ ಪಾಸ್ವರ್ಡ್ ಮತ್ತು ನಿಮ್ಮ ಬಳಿ ಇರುವ ವಸ್ತುವನ್ನು (ನಿಮ್ಮ ಫೋನ್) ಉಪಯೋಗಿಸಿಕೊಂಡು ನಿಮ್ಮ ಖಾತೆಯನ್ನು ಸುರಕ್ಷಿತಗೊಳಿಸಿಕೊಳ್ಳಬಹುದು. ಸೈಬರ್ ಕ್ರಿಮಿನಲ್ಗಳು ನಿಮ್ಮ ಪಾಸ್ವರ್ಡ್ ಅನ್ನು ಹ್ಯಾಕ್ ಮಾಡಿದರೂ, ನಿಮ್ಮ ಖಾತೆಯನ್ನು ಪ್ರವೇಶಿಸಲು ಅವರಿಗೆ ನಿಮ್ಮ ಫೋನ್ ಅಗತ್ಯವಿರುತ್ತದೆ. ಪೂರ್ವನಿಯೋಜಿತವಾಗಿ, ಪರಿಶೀಲನಾ ಕೋಡ್ ಅನ್ನು ನಿಮ್ಮ ಫೋನ್ಗೆ SMS ಕಳುಹಿಸಲಾಗುತ್ತದೆ, ಆದರೆ ಬದಲಿಗೆ ನೀವು ನಿಮ್ಮ ಫೋನಿನಲ್ಲಿ ಅಳವಡಿಸಿಕೊಂಡಿರುವ ಗೂಗಲ್ ಅಪ್ಲಿಕೇಶನ್ (ಉದಾಹರಣೆಗೆ: YouTube) ಮೂಲಕ ದೃಢೀಕರಿಸಲು ಪ್ರಾಂಪ್ಟ್ಗಳನ್ನು ಸ್ವೀಕರಿಸುವ ಆಯ್ಕೆಯನ್ನೂ ಮಾಡಬಹುದು.
- ಮೂರನೇ ವ್ಯಕ್ತಿಗೆ ಅನುಮತಿ(Third Party Access): ನಿಮ್ಮ ಖಾತೆಗೆ ಸಂಬಂಧಿಸಿದ ಡೇಟಾವನ್ನು ಬಳಸಲು ಅನುಮತಿಸಲಾದ ಅಪ್ಲಿಕೇಶನ್ಗಳನ್ನು ಪಟ್ಟಿ ಮಾಡುತ್ತದೆ.
- ಪಾಸ್ವರ್ಡ್ ಚೇಕ್-ಅಪ್ನಲ್ಲಿ ನಿಮ್ಮ ಪಾಸ್ವರ್ಡ್ಗಳು ಗೂಗಲ್ ಪಾಸ್ವರ್ಡ್ ಮ್ಯಾನೇಜರ್ನಲ್ಲಿ ಸಂಗ್ರಹವಾಗಿದ್ದರೆ, ಅಲ್ಲಿ ತೋರಿಸಿದ ಸಲಹೆಗಳನ್ನು ಅಳವಡಿಸಿಕೊಳ್ಳಿ.
- ಖಾತೆ ಮರುಪಡೆಯುವಿಕೆ (Account Recovery) ಮಾಹಿತಿಯನ್ನು ಪರಿಶೀಲಿಸಿ ಮತ್ತು ಅಗತ್ಯವಿರುವಂತೆ ನವೀಕರಿಸಿ. ಜೊತೆಗೆ ಬಲಭಾಗದಲ್ಲಿರುವ Privacy Check-upನಲ್ಲಿ Activity Control ಪರಿಶೀಲಿಸಿ. ಕೇವಲ ಅಗತ್ಯ ಇರುವಂತಹ ಸಂಯೋಜನೆಗಳನ್ನು ಮಾತ್ರ ಆಯ್ಕೆ ಮಾಡಿಕೊಳ್ಳಿ.
ಹೆಚ್ಚಿನ ಸಹಾಯಕ್ಕೆ ಗೂಗಲ್ ಆಪ್ ನಲ್ಲಿ ಅಥವಾ ಈ ಲಿಂಕ್ ಕ್ಲಿಕ್ ಮಾಡಿ. https://support.google.com/accounts
ಮೇಲೆ ವಿವರಿಸಿದ ಸೆಟ್ಟಿಂಗ್‌ಗಳನ್ನು ಕಾರ್ಯರೂಪಕ್ಕೆ ತರಲು ಈ ಕೆಳಗೆ ಕೊಟ್ಟ ಸೂಚನೆಗಳನ್ನು ಪಾಲಿಸಿ.
- ಗೂಗಲ್ ಕ್ರೋಮ್ ಬ್ರೌಸರ್ ಅಪ್ಲಿಕೇಶನ್ ತೆರೆಯಿರಿ (ಬೇರೆ ಬ್ರೌಸರ್ ಬಳಸುವವರು ನಿಮ್ಮ ಜಿಮೇಲ್ ಖಾತೆಯನ್ನು ತೆರೆಯಿರಿ), ನಿಮ್ಮ ಪ್ರೊಫೈಲ್ ಚಿತ್ರದ ಮೇಲೆ ಅಥವಾ ಹೆಸರಿನ ಐಕಾನ್ ಮೇಲೆ (ಅಡ್ರೆಸ್ ಬಾರಿನ ಕೆಳಗೆ ಬಲ ಮೂಲೆಯಲ್ಲಿರುತ್ತದೆ.) ಟ್ಯಾಪ್ ಮಾಡಿ ನಿಮ್ಮ ಗೂಗಲ್ ಖಾತೆಯನ್ನು ನಿರ್ವಹಿಸಿ ಆಯ್ಕೆಮಾಡಿ.
- ಎಡಗಡೆಯ ಮೆನುವಿನಲ್ಲಿ ಭದ್ರತೆ (Security)ಯನ್ನು ಕ್ಲಿಕ್ ಮಾಡಿ.
- ಇಲ್ಲಿ ಸೆಕ್ಯೂರಿಟಿ ಚೆಕ್ ಅಪ್ ಆಯ್ಕೆ ಮಾಡಿಕೊಂಡು ಗೂಗಲ್ ಕೊಡುವ ಸಲಹೆಗಳನ್ನು ಪಾಲಿಸಿ.
ಸುಭದ್ರವಾದ ಗೂಗಲ್ ಖಾತೆಯು ನಿಮ್ಮ ಸುರಕ್ಷಿತವಾದ ಅಂತರ್ಜಾಲ ವಿಹಾರದ ಮೊದಲ ಹೆಜ್ಜೆ. ಫೇಸ್ಬುಕ್, ವಾಟ್ಸಪ್, ಟ್ವಿಟರ್ ಖಾತೆಗಳನ್ನು ಸುರಕ್ಷಿತಗೊಳಿಸುವ ವಿಧಾನವನ್ನು ಮತ್ತು ನಿರಾತಂಕವಾಗಿ ಸರ್ಫಿಂಗ್ ಮಾಡುವುದನ್ನು ಮುಂದಿನ ಭಾಗದಲ್ಲಿ ವಿವರಿಸುತ್ತೇನೆ. ಅಷ್ಟರೊಳಗೆ ಮೊದಲ ಭಾಗದಲ್ಲಿ ಹೇಳಿದ್ದನ್ನು ಮತ್ತು ಇಂದು ವಿವರಿಸಿದಂತೆ ನಿಮ್ಮ ಗೂಗಲ್ ಖಾತೆಯನ್ನು ಭದ್ರಗೊಳಿಸಿಕೊಳ್ಳಿ. ನಿಮ್ಮ ಲ್ಯಾಪ್ ಟಾಪ್ ಅಥವಾ ಡೆಸ್ಕ್ ಟಾಪ್ ಕಂಪ್ಯೂಟರ್ ಮತ್ತು ಮೊಬೈಲ್ ಗಳಲ್ಲಿ ಉತ್ತಮವಾದ ವೈರಸ್ ಪ್ರತಿರೋಧಕವನ್ನು ಅಳವಡಿಸಿಕೊಳ್ಳಿ. ನಿಮ್ಮ ಅಭಿಪ್ರಾಯ, ಅಭಿಲಾಷೆ ಮತ್ತು ಪ್ರಶ್ನೆಗಳನ್ನು winkrish@gmail.com ಗೆ ಮಿಂಚಂಚೆ ಕಳಿಸಿ. ಹ್ಯಾಪಿ ಸರ್ಫಿಂಗ್!
ಇದನ್ನೂ ಓದಿ: ಸೈಬರ್ ಸೇಫ್ಟಿ ಅಂಕಣ: ಆಧಾರ್‌ಗೆ ಬ್ಲಾಕ್‌ಚೈನ್ ತಂತ್ರಜ್ಞಾನ ಆಧಾರ ಆಗಬಲ್ಲದೇ?