Site icon Vistara News

ಸೈಬರ್‌ ಸೇಫ್ಟಿ ಅಂಕಣ: ಸಾಮಾಜಿಕ ಜಾಲತಾಣಗಳ ವ್ಯಸನ! ಬಚಾವಾಗೋದು ಹೇಗೆ?

how to come out of social media addiction

ಅಂತರ್ಜಾಲದ (Internet) ಬಳಕೆ ನಮ್ಮ ದಿನ ನಿತ್ಯ ಜೀವನದ ಅವಿಭಾಜ್ಯ ಅಂಗವಾಗಿದೆ. ನಮ್ಮಲ್ಲಿ ಬಹಳಷ್ಟು ಜನರ ದಿನಚರಿ ಆರಂಭವಾಗೋದೇ ಮೊಬೈಲ್ ಹಿಡಿದು ನೆಟ್ ಅಥವಾ ವೈಫೈ ಚಾಲೂ ಮಾಡಿದ ಮೇಲೆ. ಸೂರ್ಯ ಮೂಡದಿದ್ದರೂ ಮೊಬೈಲಲ್ಲಿ ನೆಟ್ ಬಂದರೆ ಸಾಕು ದಿನ ಶುರುವಾಗುವುದಕ್ಕೆ. ನಮ್ಮ ಮೊಬೈಲ್ ಗೀಳು ನಮಗೇ ಗೊತ್ತಾಗದಂತೆ ನಮ್ಮನ್ನು ಆವರಿಸಿಕೊಂಡಿದೆ. ಮೊದಲಿಗೆ ಡೆಸ್ಕ್ ಟಾಪ್ ಕಂಪ್ಯೂಟರ್ ಮತ್ತೆ ಲ್ಯಾಪ್ ಟಾಪಿನಲ್ಲಿ ಮಾತ್ರ ಲಭ್ಯವಿದ್ದ ಇಂಟರ್ನೆಟ್ ಈಗ ನಮ್ಮ ಕೈಯಲ್ಲೇ ಸಿಕ್ಕಿದೆ. ಸಂಪರ್ಕ ಸಾಧನವಾಗಿ ಬಂದ ಮೊಬೈಲ್, ಅಗ್ಗವಾದ ಡೇಟಾದಿಂದ ನಮ್ಮ ಅಂಗೈಯಲ್ಲೇ ಅಂತರ್ಜಾಲವನ್ನು ತೆರೆದಿಟ್ಟಿದೆ. ಹೆಸರಿಗೆ ತಕ್ಕಂತೆ ಸ್ಮಾರ್ಟ್ ಫೋನ್ (Smartphone) ತನ್ನ ಬಳಕೆದಾರರನ್ನು ಹಿಡಿದಿಟ್ಟುಕೊಂಡಿದೆ. ಸೆಲ್ ಫೋನಿನಲ್ಲಿ ನಾವು ಸೆರೆಯಾಳುಗಳಾಗಿದ್ದೇವೆ. ಸೈಬರ್ ಲೋಕದಲ್ಲಿ ನಾವು ಅತ್ಯಂತ ಜಾಗರೂಕರಾಗಿರಬೇಕಾದದ್ದು ಬೇರೆ ಯಾರ ಬಗ್ಗೆಯೂ ಅಲ್ಲ. ಜಾಗರೂಕತೆ ಬೇಕಾಗಿದ್ದು ನಮ್ಮ ಬಗ್ಗೆ. ನಾವು ಈ ಸಾಧನವನ್ನು ಬಳಕೆ ಮಾಡುವ ರೀತಿಯ ಬಗ್ಗೆ.

ಇತ್ತೀಚೆಗೆ ವಾಟ್ಸ್ಯಾಪ್ ಮತ್ತಿತರ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದ ವಿಡಿಯೊ ನೀವೂ ನೋಡಿರಬಹುದು. ಹಿಂದಿ ಚಿತ್ರರಂಗದ ಜನಪ್ರಿಯ ನಟ ಅನುಪಮ್ ಖೇರ್ ಮೊಬೈಲು ಎಷ್ಟು ಫಿಟ್ ಆಗಿದೆ, ಹಾಗಾಗಲು ಅದು ಏನನ್ನೆಲ್ಲಾ ನುಂಗಿದೆ ಅಂತ ತಿಳಿಸಿದ್ದಾರೆ. ಒಂದು ನಿಮಿಷದ ಆ ವಿಡಿಯೊ ತಮಾಷೆಯಾಗಿದ್ದರೂ ನಮ್ಮನ್ನು ಯೋಚಿಸಲು ಪ್ರೇರೇಪಿಸುತ್ತದೆ. ಮೊಬೈಲಿನ ಫಿಟ್ನೆಸ್‌ಗೆ ಅದು ಗಡಿಯಾರ, ರಿಸ್ಟ್ ವಾಚ್ ನುಂಗಿತಂತೆ. ನಂತರ ಪತ್ರಗಳನ್ನು, ರೇಡಿಯೊ, ಟೇಪ್ ರೆಕಾರ್ಡರ್, ಕ್ಯಾಸೆಟ್, ಟಾರ್ಚ್ ಲೈಟ್, ಕ್ಯಾಮರಾಗಳನ್ನು ನುಂಗಿದೆ ಈ ಮೊಬೈಲ್. ಪುಸ್ತಕಗಳನ್ನು, ಸುದ್ದಿಪತ್ರಿಕೆಗಳನ್ನೂ ನುಂಗಿದೆ. ಸಾವಿರಾರು ಮೈಲುಗಳ ದೂರವನ್ನು ಹತ್ತಿರ ತಂದ ಮೊಬೈಲ್, ನಮ್ಮ ನಮ್ಮಲ್ಲೇ ಒಂದು ರೀತಿಯ ಅಂತರವನ್ನು ಹುಟ್ಟುಹಾಕಿದೆ. ಬಂಧುಮಿತ್ರರ ಜೊತೆಗಿನ ಮಧುರ ಕ್ಷಣಗಳನ್ನು ನುಂಗಿರುವ ಮೊಬೈಲ್, ನಿಜವಾಗಿಯೂ ನಮ್ಮ ಸಮಯವನ್ನೇ ನುಂಗಿದೆ. ಇದು ನಮ್ಮ ನಡುವಿನ ಸಂಬಂಧಗಳನ್ನು ನುಂಗುತ್ತಿದೆ, ನಮ್ಮ ಆರೋಗ್ಯವನ್ನು ನುಂಗುತ್ತಿದೆ, ನಮ್ಮನ್ನು ರೋಗಿಷ್ಟರನ್ನಾಗಿಸುತ್ತಿದೆ. ಸುಮ್ಸುಮ್ನೆ ಈ ಮೊಬೈಲ್ ಹಟ್ಟಾಕಟ್ಟಾ ಆಗಿಲ್ಲ, ನಮ್ಮ ಜೀವನದ ಅನೇಕ ವಸ್ತು, ವಿಷಯಗಳನ್ನು ನುಂಗಿ ಅದು ಫಿಟ್ ಆಗಿದೆ ಎನ್ನುತ್ತಾರೆ.

ಬೆಳಿಗ್ಗೆ ಒಂದು ಮುಖ್ಯವಾದ ಕೆಲಸಕ್ಕಾಗಿ ನೀವು ಬೇಗನೆ ಏಳಬೇಕಿದೆ. ಈಗಾಗಲೇ ರಾತ್ರಿ 10 30 ಆಗಿದ್ದರೂ ನೀವು ಸಾಮಾಜಿಕ ಮಾಧ್ಯಮದಲ್ಲಿ ಸರ್ಫಿಂಗ್ ಮಾಡುತ್ತಿದ್ದೀರಿ. ನಿಮಗೆ ಗೊತ್ತು, 11 ಗಂಟೆಯೊಳಗೆ ನೀವು ಮೊಬೈಲ್ ನೋಡೋದನ್ನು ನಿಲ್ಲಿಸಬೇಕು ಅಂತ. ಒಂದು ಕೊನೆಯ ವೀಡಿಯೊ/ರೀಲ್ಸ್ ನೋಡಿ ಮಲಗೋದು ಅಂದುಕೊಳ್ತೀರಿ. ನೀವು ಅರಿತುಕೊಳ್ಳುವ ಹೊತ್ತಿಗೆ 11:15 ಆಗಿದೆ. ಓಹ್ ನಾನು ಹೇಗೂ ಗಡುವನ್ನು ಮೀರಿದ್ದೇನೆ, 11:30ಗೆ ಮಲಗ್ತೇನೆ, ಏನೇ ಆಗಲಿ ಅಂತ ಮತ್ತೆ ಸರ್ಫಿಂಗ್ ಮಾಡಲು ಪ್ರಾರಂಭಿಸುತ್ತೀರಿ. ಆದರೆ 11:30 ಎಂದಿಗೂ 11:30 ಅಲ್ಲ. ಇದು ಸುಮಾರು 12 ಆಗುತ್ತದೆ. ಏಕೆಂದರೆ ನೋಡ್ತಿರೊ ರೀಲ್‌ಗಳು ತುಂಬಾ ಆಸಕ್ತಿದಾಯಕವಾಗಿವೆ. ಮತ್ತೆ ಸಮಯದ ಜಾಡನ್ನು ಕಳೆದುಕೊಳ್ತೀರಿ. ಹಾಗೇ ನಿದ್ರೆಗೆ ಜಾರಿ, ಬೆಳಿಗ್ಗೆ ಏಳುವಾಗ, ಎದ್ದ ಮೇಲೆ ಕಷ್ಟ ಪಡ್ತೀರಿ. ಇಂತಹ ಪರಿಸ್ಥಿತಿಗಳ ಅನುಭವವಾಗಿದೆಯಾ ನಿಮಗೆ?

shadi.comನ ಸಂಸ್ಥಾಪಕ ಮತ್ತು ಶಾರ್ಕ್ ಟ್ಯಾಂಕ್‌ನಲ್ಲಿ ಒಬ್ಬ ಹೂಡಿಕೆದಾರರಾಗಿದ್ದ ಅನುಪಮ್ ಮಿತ್ತಲ್ ಅವರ ಒಂದು ಆಸಕ್ತಿದಾಯಕ ಪೋಸ್ಟ್ ಮಾಡಿದ್ದರು. “ಪ್ರತಿ ನಿಮಿಷ ಅಥವಾ ಪ್ರತಿ ಕೆಲವು ನಿಮಿಷಗಳಿಗೊಮ್ಮೆ ಫೋನ್ ಅನ್ನು ಪರಿಶೀಲಿಸುವ ಈ ನಿರಂತರ ಪ್ರಚೋದನೆಯನ್ನು ತಡೆಯಲು ಯಾರಾದರೂ ಪರಿಹಾರವನ್ನು ಕಂಡುಕೊಳ್ಳಬಹುದೇ?” ಎಂದು ಅವರು ತುಂಬಾ ನಿರಾಶೆಯಿಂದ ಕೇಳುತ್ತಾರೆ.

ಸ್ನೇಹಿತರಾದ ನೀರಜ್ ಕುಮಾರ್ ಮತ್ತು ತಂಡದವರು ಕೆಲವು ಜನರ ಅಭಿಪ್ರಾಯವನ್ನು ಧ್ರುವೀಕರಿಸಿ, ನಾವು ನಿಜವಾಗಿಯೂ ಸಾಮಾಜಿಕ ಮಾಧ್ಯಮ ಮತ್ತು ಸೆಲ್ ಫೋನ್ ಚಟದ ಬಗ್ಗೆ ಚಿಂತಿಸಬೇಕೇ? ಎಂಬ ಬಗ್ಗೆ ವಿಡಿಯೊ ಮಾಡಿದ್ದಾರೆ. ನಾನು ಮೇಲೆ ಪ್ರಸ್ತಾಪಿಸಿದ ಕೆಲವು ವಿಷಯಗಳು ಅವರ ವಿಡಿಯೊದಿಂದಲೇ. ಸದಾ ಮೊಬೈಲ್ ಬಳಸುವಿಕೆ ಒಂದು ವ್ಯಸನವಾಗಿದೆ, ಮತ್ತು ಇದರ ಬಗ್ಗೆ ಎಲ್ಲರೂ ಯೋಚಿಸಿ ವ್ಯಸನಮುಕ್ತರಾಗುವ ಅವಶ್ಯಕತೆ ಇದೆ. ಕೆಲವರು ಸಂಪೂರ್ಣವಾಗಿ ವ್ಯಸನಿಗಳಾಗಿದ್ದಾರೆ ಮತ್ತು ಕೆಲವರು ಸಾಮಾಜಿಕ ಮಾಧ್ಯಮದಲ್ಲಿ ಇಲ್ಲದಿರುವುದರಿಂದ ಅದರಿಂದಾಗುವ ಪ್ರಯೋಜನಗಳನ್ನು ಸಂಪೂರ್ಣವಾಗಿ ಕಳೆದುಕೊಳ್ಳುತ್ತಿದ್ದಾರೆ.

ನೀರಜ್ ಕುಮಾರ್ ಹೇಳ್ತಾರೆ, ನಾವು ವ್ಯಸನಿಯಾಗುವುದಿಲ್ಲ ಅಥವಾ ಪ್ರಯೋಜನಗಳನ್ನು ಕಳೆದುಕೊಳ್ಳುವುದಿಲ್ಲ ಎಂದು ಖಚಿತಪಡಿಸಿಕೊಳ್ಳಲು ನಾವು ತಿಳುವಳಿಕೆಯಿಂದ ನಿರ್ಧಾರವನ್ನು ತೆಗೆದುಕೊಳ್ಳಬೇಕಾದ ಸಮಯ ಇದು. ಸಾಮಾಜಿಕ ಮಾಧ್ಯಮ ಮತ್ತು ಸೆಲ್ ಫೋನ್‌ನ ಪ್ರಭಾವವನ್ನು ಅರ್ಥಮಾಡಿಕೊಳ್ಳುವ ಸಮಯ ಮತ್ತು ಈ ಅದ್ಭುತ ಆವಿಷ್ಕಾರದೊಂದಿಗೆ ಲಾಭದಾಯಕ ಸಂಬಂಧವನ್ನು ಬೆಳೆಸಿಕೊಳ್ಳಿ. ಈ ವೀಡಿಯೊ ನಮ್ಮ ಮೆದುಳಿನಲ್ಲಿ ಏನಾಗುತ್ತದೆ ಮತ್ತು ಅದು ಹೇಗೆ ವ್ಯಸನಕಾರಿಯಾಗಿದೆ ಎಂಬುದರ ಕುರಿತು ತಿಳಿಸಿಕೊಡುತ್ತದೆ. ನಂತರದ ವೀಡಿಯೊಗಳಲ್ಲಿ, ಪರಿಹಾರಗಳನ್ನು ಮತ್ತು ಮುಂದಿನ ಮಾರ್ಗವನ್ನು ತಿಳಿಸಿದ್ದಾರೆ.

ಇದನ್ನೂ ಓದಿ: ಸೈಬರ್‌ ಸೇಫ್ಟಿ ಅಂಕಣ: ಹ್ಯಾಕರ್‌ಗಳು ಬ್ಯಾಂಕ್‌ಗಳಿಂದ 100 ಕೋಟಿ ಡಾಲರ್ ಕದ್ದ‌ ಕಥೆ! ಭಾಗ – 3

ನಾವು ಆಹ್ಲಾದಕರವಾದದ್ದನ್ನು ಅನುಭವಿಸಿದಾಗ ನಮ್ಮ ಮೆದುಳು ಡೋಪಮೈನ್ ಎಂಬ ರಾಸಾಯನಿಕವನ್ನು ಬಿಡುಗಡೆ ಮಾಡುತ್ತದೆ ಎಂದು ನಿಮಗೆ ತಿಳಿದಿದೆ. ಆದರೆ ಅದು ಕೇವಲ ಡೋಪಮೈನ್ ಅಲ್ಲ ಆನಂದಮೈಡ್(Anandamide) ಎಂಬ ಮತ್ತೊಂದು ರಾಸಾಯನಿಕವು ಬಿಡುಗಡೆಯಾಗುತ್ತದೆ. ಸಂಸ್ಕೃತದ “ಆನಂದ”ವನ್ನೇ ಬಳಸಿಕೊಂಡು ಇದನ್ನು ಹೆಸರಿಸಿದ್ದಾರೆ.

SOCIAL MEDIA ADDICTION. Is it a HYPE OR REAL? It's time to develop a very rewarding relationship.

ನಿಮ್ಮ ಸಾಮಾಜಿಕ ಮಾಧ್ಯಮದಲ್ಲಿ ನೋಡುವ ಪೊಸ್ಟ್, ರೀಲ್ಸ್, ಸ್ಟೇಟಸ್, ನಿಮ್ಮ ಸ್ಟೇಟಸ್ಸಿಗೆ, ಪೋಸ್ಟಿಗೆ ಸ್ಪಂದಿಸಿದವರು, ನೋಡುತ್ತಲೇ ಇರ್ತೀರಿ. ನೋಡಿದಾಗೆಲ್ಲಾ ನಿಮ್ಮ ಮೆದುಳಿನಲ್ಲಿ ಡೋಪಮೈನ್ ಬಿಡುಗಡೆ ಆಗುತ್ತಿರುತ್ತದೆ. ಆಗ ನೀವು ಖುಷಿ ಅಥವಾ ಒಂದು ತರಹದ ಕಿಕ್ ಅನುಭವಿಸುತ್ತೀರಿ. ಒಬ್ಬ ವ್ಯಕ್ತಿಯು ಡ್ರಿಂಕ್ಸ್ ಅಥವಾ ಧೂಮಪಾನ ಮಾಡುವಾಗ ಬಿಡುಗಡೆಯಾಗುವುದೂ ಇದೇ ರಾಸಾಯನಿಕವಾಗಿದೆ. ಜೂಜು, ಡ್ರ್ಯಾಗ್ ರೇಸ್‌, ಸೂಕ್ತವಲ್ಲದ ವಿಷಯವನ್ನು ವೀಕ್ಷಿಸೋದು, ಆನ್ಲೈನ್ ಗೇಮ್ಸ್ ಕೂಡ ಡೋಪಮೈನ್ ಬಿಡುಗಡೆಗೆ ಕಾರಣವಾಗುತ್ತದೆ. ಕ್ರಮೇಣ ಅದು ವ್ಯಸನಕಾರಿಯಾಗುತ್ತದೆ. ಮೆದುಳು ಹೆಚ್ಚು ಹೆಚ್ಚು ಡೋಪಮೈನ್ ಗೆ ಹಪಹಪಿಸುವಾಗ ನಿಮಗೆ ಮೊಬೈಲ್ ಬಿಟ್ಟಿರೋದು ಕಷ್ಟ ಆಗಲು ಶುರುವಾಗುತ್ತದೆ.

ಇದನ್ನೂ ಓದಿ: ಸೈಬರ್‌ ಸೇಫ್ಟಿ ಅಂಕಣ: ಹ್ಯಾಕರ್‌ಗಳು ಬ್ಯಾಂಕ್‌ಗಳಿಂದ 100 ಕೋಟಿ ಡಾಲರ್‌ ಕದ್ದದ್ದು ಹೀಗೆ! ಭಾಗ- 2

ಹೇಗೆ ಮದ್ಯಪಾನ, ಧೂಮಪಾನ ಇತ್ಯಾದಿಗಳನ್ನು ತ್ಯಜಿಸಲು ಪ್ರಯತ್ನ ಪಡುತ್ತೇವೋ ಅದೇ ರೀತಿ ಮೊಬೈಲ್ ಮತ್ತು ಸಾಮಾಜಿಕ ಜಾಲತಾಣಗಳ ವ್ಯಸನದಿಂದಲೂ ದೂರವಾಗಲು ಪ್ರಯತ್ನಿಸಬೇಕು. ತಂತ್ರಜ್ಞಾನವನ್ನು ಉಪಯುಕ್ತ ಕೆಲಸಗಳಿಗೆ ಬಳಸಬೇಕು. ಸೆಲ್ ಫೋನಿನಲ್ಲಿ ಖೈದಿಯಾಗುವ ಬದಲು, ಅದನ್ನು ನಿಯಂತ್ರಣದಲ್ಲಿಟ್ಟುಕೊಂಡು ನಿಮ್ಮ ಕಾರ್ಯಕ್ಷಮತೆಯನ್ನು ಹೆಚ್ಚಿಸಿಕೊಳ್ಳಬೇಕು. ನಿಮ್ಮ ಸಾಮಾಜಿಕ ಜಾಲತಾಣದ ವಿಹಾರ ನಿಮ್ಮ ಆಸಕ್ತಿ, ಅಭಿರುಚಿಗಳನ್ನು ಸೈಬರ್ ಜಗತ್ತಿನಲ್ಲಿರುವವರಿಗೆಲ್ಲಾ ತಿಳಿಸಿಕೊಡುವ ಡಿಜಿಟಲ್ ಫುಟ್ ಪ್ರಿಂಟ್ ಉಳಿಸಿರುತ್ತದೆ ಎಂಬುದನ್ನು ಮರೆಯಬೇಡಿ. ಜಾಣರಾಗಿರಿ, ಜಾಗರೂಕರಾಗಿರಿ.

ನೀರಜ್ ಕುಮಾರ್ ಅವರ ವಿಡಿಯೋಗಳ ಲಿಂಕ್:

ಭಾಗ-1: ಸೋಶಿಯಲ್‌ ಮೀಡಿಯಾ ಅಡಿಕ್ಷನ್‌

Exit mobile version