ಸುಧಾರಿತ ಕೃತಕ ಬುದ್ಧಿಮತ್ತೆ ಮತ್ತು ಡೇಟಾ ಅನಾಲಿಟಿಕ್ಸ್ ಪರಿಹಾರಗಳಿಗೆ ಹೆಸರುವಾಸಿಯಾದ ಭಾರತೀಯ ಸೈಬರ್ ಸೆಕ್ಯುರಿಟಿ ಸಂಸ್ಥೆಯಾದ ಇನ್ನೆಫು ಲ್ಯಾಬ್ಸ್ (Innefu Labs)ನ ಮೇಲೆ ಸೈಬರ್ ದಾಳಿಯಾಗಿದೆ ಎಂದು ವರದಿಯಾಗಿದೆ. ಈ ಘಟನೆಯು ಭಾರತೀಯ ಸೈಬರ್ ಸೆಕ್ಯುರಿಟಿ ಸಂಸ್ಥೆಗಳನ್ನು ಗುರಿಯಾಗಿಸಿಕೊಂಡು ಸೈಬರ್ ದಾಳಿಗಳಾಗುವ ಮುನ್ಸೂಚನೆ.
ಜನವರಿ 10, 2024 ರಂದು, ‘ಪ್ರೆಷಿಯಸ್ ಮ್ಯಾಡ್ನೆಸ್’ ಎಂದು ಗುರುತಿಸಲಾದ ಹ್ಯಾಕರ್ ಗುಂಪು RAMP (Russian Anonymous Marketplace) ಫೋರಮ್‌ನಲ್ಲಿ ಇನ್ನೆಫು ಸಿಸ್ಟಮ್‌ಗಳಿಗೆ ಅನಧಿಕೃತ ಪ್ರವೇಶವನ್ನು ಹೊಂದಿರುವುದಾಗಿ ಘೋಷಿಸಿದರು.
ಈ ಡಾಟಾ ಉಲ್ಲಂಘನೆಯು ಬರೀ ಕಂಪನಿಗೆ ಆದ ಹೊಡೆತವಲ್ಲ. ಆದರ ಕಾರ್ಪೊರೇಟ್ ಮತ್ತು ಸರ್ಕಾರಿ ವಲಯಗಳ ವಿವಿಧ ಶ್ರೇಣಿಯ ಗ್ರಾಹಕರಿಗೂ ಸಹ. ಈ ಕಂಪೆನಿಯನ್ನು 2012 ರಲ್ಲಿ ತರುಣ್ ವಿಗ್ ಮತ್ತು ಅಭಿಷೇಕ್ ಶರ್ಮಾ ಸ್ಥಾಪಿಸಿದರು. ವಿವಿಧ ಕಾರ್ಪೊರೇಟ್ ಮತ್ತು ಸರ್ಕಾರಿ ಕ್ಲೈಂಟ್‌ಗಳಿಗೆ ಗುರುತಿನ ದೃಢೀಕರಣ, ಮುನ್ಸೂಚಕ ಬುದ್ಧಿವಂತಿಕೆ (predictive intelligence) ಮತ್ತು ಡೇಟಾ ರಕ್ಷಣೆಗಾಗಿ ಉತ್ಪನ್ನಗಳನ್ನು ನೀಡುತ್ತದೆ. ಇನ್ನೆಫು ಲ್ಯಾಬ್ಸ್‌ನ ವಾರ್ಷಿಕ ಆದಾಯವು $25 ಮಿಲಿಯನ್ ಮೀರಿದೆ. ಅವರಿಗೆ ದೇಶ, ವಿದೇಶಗಳ ಗ್ರಾಹಕರಿದ್ದಾರೆ.
ಇನ್ನೆಫು ಲ್ಯಾಬ್ಸ್ ಡೇಟಾ ಉಲ್ಲಂಘನೆಯು ಸೈಬರ್ ಸೆಕ್ಯುರಿಟಿ ವಲಯದಲ್ಲಿ ಸಾಕಷ್ಟು ಕೋಲಾಹಲವನ್ನು ಉಂಟುಮಾಡಿದೆ. ಡಿಜಿಟಲ್ ಭದ್ರತೆಯಲ್ಲಿ ಪರಿಣತಿ ಹೊಂದಿರುವ ಸಂಸ್ಥೆಗಳಲ್ಲಿಯೂ ಸಹ ದೌರ್ಬಲ್ಯಗಳಿರುತ್ತವೆ ಎನ್ನುವುದು ಸಾಬೀತಾಗಿದೆ. ಹಾಗೂ ಬೇರೆಯವರಿಗೆ ಭದ್ರತೆ ಕೊಡುವ ಸಂಸ್ಥೆ ತನ್ನ ಸುರಕ್ಷತೆಗೆ ಪ್ರಾಮುಖ್ಯತೆ ಕೊಡದಿರುವುದು ನಮಗೆಲ್ಲರಿಗೂ ಒಂದು ಎಚ್ಚರಿಕೆಯ ಘಂಟೆ. ಇದು ನಾನು ಕೆಲವು ವಾರಗಳ ಮೊದಲು ತಿಳಿಸಿದ್ದ ಕಾಯುವವರೇ ಕಳ್ಳತನಕ್ಕೀಡಾದರೆ ಮಾಡುವುದೇನು ಎಂಬಂತಿದೆಯಲ್ಲವೇ? ವಿಮಾನದಲ್ಲಿ ಪ್ರಯಾಣಿಸುವಾಗ, ಆಮ್ಲಜನಕದ ಪ್ರಮಾಣ ಕಡಿಮೆಯಾದರೆ ಬರುವ ಮಾಸ್ಕನ್ನು ಮೊದಲು ಸ್ವಯಂ ಧರಿಸಿಕೊಂಡು ಬಳಿಕ ಜೊತೆಯಲ್ಲಿರುವ ಮಕ್ಕಳು ಮತ್ತು ಹಿರಿಯರಿಗೆ ತೊಡಿಸಲು ಹೇಳುತ್ತಾರೆ. ಹಾಗೆಯೇ ಮೊದಲಿಗೆ ನಿಮ್ಮ ಸೈಬರ್ ಸುರಕ್ಷತೆಯನ್ನು ಖಚಿತಪಡಿಸಿಕೊಂಡು ನಂತರ ಉಳಿದವರಿಗೆ ಸಹಾಯ ಮಾಡುವುದು ಒಳ್ಳೆಯದು.
ಸಂಕ್ರಾಂತಿ ಹಬ್ಬದ ಸಮಯದಲ್ಲಿ ಸಂಕಟವಾಗುವ ಸುದ್ಧಿಯೊಂದು ಓದಿದೆ. 45 ವರ್ಷದ ಧಾರವಾಡದ ವೈದ್ಯರೊಬ್ಬರು ಸೈಬರ್ ಕ್ರಿಮಿನಲ್‌ಗಳ ಬಲೆಗೆ ಬಿದ್ದಿದ್ದು, ಬರೋಬ್ಬರಿ 1.79 ಕೋಟಿ ರೂ. ಎರಡು ತಿಂಗಳಲ್ಲಿ ಕಳೆದುಕೊಂಡರಂತೆ. ಸೈಬರ್ ವಂಚಕ, ಹಣಕಾಸು ಸಲಹೆಗಾರನಂತೆ ನಟಿಸಿ, ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿ ಲಾಭದಾಯಕ ಆದಾಯವನ್ನು ಪಡಯುವ ಭರವಸೆ ಮೂಲಕ ವೈದ್ಯರನ್ನು ವಂಚಿಸಿದ ಎಂದು ತನಿಖೆ ನಡೆಸುತ್ತಿರುವ ಸೈಬರ್ ಕ್ರೈಂ ಪೋಲಿಸರಿಂದ ತಿಳಿದುಬಂದಿದೆ. ಗಣನೀಯ ಲಾಭದ (ದುರಾ)ಆಸೆಗೆ ಸಿಕ್ಕಿ ವೈದ್ಯರು ಅವರ ಸಲಹೆಯಂತೆ ಸ್ವಇಚ್ಛೆಯಿಂದ ಸಾಮಾಜಿಕ ಜಾಲತಾಣಕ್ಕೆ ಸೇರಿದರು. ವಂಚಕರು ವೈದ್ಯರ ಬ್ಯಾಂಕ್ ಖಾತೆಗಳಿಗೆ ಸಂಬಂಧಿಸಿದ ಸೂಕ್ಷ್ಮ ಡೇಟಾವನ್ನು ಹೇಗೆ ಪಡೆದರು ಎನ್ನುವುದು ಇನ್ನೂ ಅಸ್ಪಷ್ಟವಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಹೆಚ್ಚಿನ ತನಿಖೆಯನ್ನು ಕೈಗೊಂಡಿದ್ದಾರೆ.
ಇದನ್ನೂ ಓದಿ: ಸೈಬರ್ ಸೇಫ್ಟಿ ಅಂಕಣ: ಎಚ್ಚರಿಕೆ, ನಿಮ್ಮ ಹಣ ಸುರಕ್ಷಿತವಾಗಿಲ್ಲ!
ಹೊಸವರ್ಷದ ಪ್ರಾರಂಭದಲ್ಲಿಯೇ ನನ್ನ ಗಮನಕ್ಕೆ ಬಂದ ಎರಡು ಪ್ರಕರಣಗಳ ಬಗ್ಗೆ ಹಂಚಿಕೊಳ್ತಿದ್ದೇನೆ. ಮಂಗಳೂರಿನಿಂದ ಒಬ್ಬರು ಕರೆ ಮಾಡಿ ಟೆಲಿಗ್ರಾಂ ಆ್ಯಪ್‌ನ ಒಂದು ಗ್ರೂಪಿನಲ್ಲಿ ಟ್ರೇಡಿಂಗ್ ಮಾಡುವ ಬಗ್ಗೆ ಮಾಹಿತಿ ವಿನಿಮಯ ಆಗ್ತಿತ್ತು. ಅಲ್ಲಿಯ ಒಂದು ಸಂಪರ್ಕವು ಹೆಚ್ಚಿನ ಲಾಭಗಳಿಸಲು ಇನ್ನೊಂದು ಖಾತೆಯಲ್ಲಿ ಹೂಡಿಕೆ ಮಾಡುವಂತೆ ಸಲಹೆ ಮಾಡಿ ಒಟ್ಟು 77,000 ರೂಪಾಯಿಯನ್ನು ವರ್ಗಾಯಿಸಿಕೊಂಡಿತಂತೆ. ಅದನ್ನು ಹಿಂಪಡೆಯಲು, ದೂರು ನೀಡುವ ಕ್ರಮದ ಬಗ್ಗೆ ತಿಳಿಯಲು ನನಗೆ ಕರೆ ಮಾಡಿದ್ದರು. ಈ ರೀತಿಯ ಮೋಸ ಆದಾಗ ಮೊದಲು ನಿಮ್ಮ ಬ್ಯಾಂಕಿನವರಿಗೆ ತಿಳಿಸಿ ಖಾತೆಯನ್ನು ಬ್ಲಾಕ್ ಮಾಡಿಸಿ. ನಂತರ ಸೈಬರ್ ಕ್ರೈಮ್ ಪೋಲಿಸ್ ಠಾಣೆಯಲ್ಲಿ ದೂರು ದಾಖಲಿಸಿ, ಆ ದೂರಿನ ಪ್ರತಿಯನ್ನು ಬ್ಯಾಂಕಿನವರಿಗೂ ರವಾನಿಸಿ. ಜೊತೆಗೆ https://cybercrime.gov.in/ ಇಲ್ಲಿ ನಿಮ್ಮ ದೂರನ್ನು ಎಲ್ಲಾ ದಾಖಲೆಯೊಂದಿಗೆ ಸಲ್ಲಿಸಿ. ತ್ವರಿತವಾಗಿ ದೂರು ದಾಖಲಿಸಲು 1930ಕ್ಕೆ ಕರೆ ಮಾಡಿ.
ನಿಮ್ಮ ಸುರಕ್ಷತೆ ನಿಮ್ಮ ಕೈಯಲ್ಲಿದೆ. ಕೋವಿಡ್ ಸಮಯದಲ್ಲಿ ಹೇಗೆ ರೋಗ ಬರದಂತೆ ಮುನ್ನೆಚ್ಚರಿಕೆ ವಹಿಸಲು ಕೆಲವು ಕ್ರಮಗಳನ್ನು ಪಾಲಿಸುತ್ತಿದ್ದೆವು. ನೆನಪಿದೆಯಲ್ವಾ? ಹಾಗೆಯೇ ಸೈಬರ್ ಲೋಕದಲ್ಲಿ ಸುರಕ್ಷಿತವಾಗಿರಲು ಪಾಲಿಸಬೇಕಾದ ಕ್ರಮಗಳನ್ನು ನಿರ್ಲಕ್ಷಿಸದೆ ಪಾಲಿಸಿ. ಜಾಣರಾಗಿರಿ, ಜಾಗರೂಕರಾಗಿರಿ. ಜೊತೆಗೆ ಅತಿ ಆಸೆ ಗತಿಗೇಡು ಎನ್ನುವ ನಾಣ್ಣುಡಿಯನ್ನು ಮರೆಯದಿರಿ.
ಇದನ್ನೂ ಓದಿ: ಸೈಬರ್ ಸೇಫ್ಟಿ ಅಂಕಣ: ಕೊಲೆ, ಅಪಹರಣವನ್ನೂ ಮೀರಿಸಿದ ಸೈಬರ್ ವಂಚನೆಗಳು