ತೈವಾನ್ 2016
ಸ್ಥಳೀಯ ತೈವಾನ್ ನಿವಾಸಿಯೊಬ್ಬರು ಸ್ವಲ್ಪ ಹಣವನ್ನು ಪಡೆಯಲು ಬ್ಯಾಂಕ್ ಎಟಿಎಂಗೆ ಬಂದರು. ಆ ಎಟಿಎಂ ಹ್ಯಾಕ್ ಆಗಿತ್ತು. ಅಲ್ಲಿದ್ದ ಇಬ್ಬರು ಅನನುಭವಿಗಳಾಗಿದ್ದ ಮನಿ ಮ್ಯೂಲ್ಸ್ ಅಥವಾ ‘ಹಣ ವರ್ಗಾವಣೆ ಏಜೆಂಟ್’ಗಳು ಗಾಬರಿಯಲ್ಲಿ ಎಟಿಎಂನಿಂದ ಪಡೆದ ಹಣವನ್ನು ಅಲ್ಲೇ ಬಿಟ್ಟು ಜಾರಿಕೊಂಡರು. ಅವರು ಸುಮಾರು 60,000 ನ್ಯೂ ತೈವಾನಿ ಡಾಲರ್ (NT ಡಾಲರ್) ಅಂದರೆ ಸುಮಾರು 1,60,000 ರೂಪಾಯಿ, ಬಿಟ್ಟು ಹೋಗಿದ್ದು ಆ ನಿವಾಸಿಗೆ ಸಂಶಯ ಬಂತು. ಅವರು ಪೊಲೀಸರಿಗೆ ಸುದ್ದಿ ಮುಟ್ಟಿಸಿದರು. ಸ್ಠಳಕ್ಕೆ ಬಂದ ಪೊಲೀಸರು ಸಿಸಿಟಿವಿ ರೆಕಾರ್ಡಿಂಗ್ ಪರಿಶೀಲಿಸಿ ಕಾರ್ಯನಿರತರಾದರು. ಅಷ್ಟರಲ್ಲಿ ಈ ಸುದ್ದಿ ಎಲ್ಲಾ ನ್ಯೂಸ್ ಚಾನಲ್‌ಗಳಲ್ಲೂ ಬಿತ್ತರವಾಗತೊಡಗಿತು. ಬ್ಯಾಂಕ್ ತನ್ನ ತೈಪೆಯ 34 ಎಟಿಎಂ ಮತ್ತು ತೈ ಜಾಂಗ್‌ನ 20 ಎಟಿಎಂಗಳಲ್ಲೂ 70 ಮಿಲಿಯನ್ NT ಡಾಲರ್‌ಗಳನ್ನು (ಹತ್ತೊಂಬತ್ತು ಕೋಟಿ ರುಪಾಯಿಗಳು) ಅಕ್ರಮವಾಗಿ ಹಿಂಪಡೆಯಲಾಗಿದೆ ಎಂದು ತಿಳಿಸಿತು. ತೈವಾನಿ ಪೊಲೀಸ್ ಆಫೀಸರುಗಳು ಎಲ್ಲಾ ಕಡೆಯ ಸಿಸಿಟಿವಿ ದೃಶ್ಯಾವಳಿಗಳನ್ನು ನೋಡಿ ಸುಮಾರು 22 ಸಂಶಯಾಸ್ಪದ ವ್ಯಕ್ತಿಗಳನ್ನು ಗುರುತಿಸಿದರು. ಅವರಲ್ಲಿ ಬಹುತೇಕರು ರಷ್ಯನ್ನರಾಗಿದ್ದರು ಮತ್ತು ಉಳಿದವರು ಪೂರ್ವ ಯುರೋಪಿನವರಾಗಿದ್ದರು. ಮಾಧ್ಯಮಗಳಲ್ಲಿ ಬಿತ್ತರವಾಗುತ್ತಿದ್ದ ಸುದ್ದಿಯಿಂದ ಎಚ್ಚೆತ್ತು 22 ಶಂಕಿತರಲ್ಲಿ 19 ಮಂದಿ ತಕ್ಷಣವೇ ತೈವಾನ್‌ನಿಂದ ಪರಾರಿಯಾಗಿದ್ದರು. ಉಳಿದ ಮೂವರು ಮಿಲಿಯಗಟ್ಟಲೆ ಹಣದೊಂದಿಗೆ ಇನ್ನೂ ತೈವಾನಿನಲ್ಲೇ ಇದ್ದರು. ಇದು ಕಾರ್ಬೊನಿಕ್ (Carbanak) ಗ್ಯಾಂಗಿಗೆ ಭಾರಿ ಸಮಸ್ಯೆ ಉಂಟುಮಾಡಿತು.
ಉಳಿದ ಶಂಕಿತರಲ್ಲಿ ಒಬ್ಬ ಆಂಡ್ರಿಯಾಸ್ ಪೆರ್ಗೊಡೋವ್ಸ್ ಎಂದು ಕರೆಯಲ್ಪಡುವ ಲಾಟ್ವಿಯನ್ ವ್ಯಕ್ತಿ. ಟಿವಿಯಲ್ಲಿ ಅವನ ಮುಖವನ್ನು ನೋಡಿದ ನಂತರ ಹಣದೊಂದಿಗೆ ತನ್ನ ಸಂಬಂಧವನ್ನು ಕಡಿತಗೊಳಿಸಲು ನಿರ್ಧರಿಸಿದ. ಅವನೇ ತೈವಾನಿನ ಕಾರ್ಯಾಚರಣೆಯ ನಾಯಕ. ತೈಪೆಯ ಡೊಂಗು ಪಾರ್ಕ್ ಬಳಿಯ ಪರ್ವತ ಪ್ರದೇಶಕ್ಕೆ ಹೋಗಿ, ಹಣವನ್ನು ಎರಡು ಚೀಲಗಳಲ್ಲಿ ತುಂಬಿಸಿ ಅಡಗಿಸಿಟ್ಟು ಯಿಲಾನ್ ಪ್ರಾಂತ್ಯಕ್ಕೆ ಪ್ರಯಾಣ ಬೆಳೆಸಿದ.
ಗ್ಯಾಂಗ್‌ನ ಉಳಿದ ಇಬ್ಬರು ಸದಸ್ಯರು ಇನ್ನೂ ತೈಪೆಯಲ್ಲಿದ್ದರು ಮತ್ತು ಕದ್ದ ಹಣದ ತಮ್ಮ ಭಾಗವನ್ನು ತೈಪೆ ರೈಲು ನಿಲ್ದಾಣದ ಲಗೇಜ್ ಲಾಕರ್‌ಗಳಲ್ಲಿ ಸಂಗ್ರಹಿಸಲು ನಿರ್ಧರಿಸಿದರು. ಕೆಲವೇ ಗಂಟೆಗಳ ನಂತರ ಪೂರ್ವ ಯುರೋಪ್‌ನಿಂದ ಬಂದ ಇಬ್ಬರು ಪುರುಷರು ಸಾಮಾನುಗಳನ್ನು ತೆಗೆದುಕೊಂಡು ಶಾಂತವಾಗಿ ತಮ್ಮ ಹೋಟೆಲ್‌ಗೆ ಹಿಂತಿರುಗಿದರು. ಸಿಸಿಟಿವಿ ಕ್ಯಾಮೆರಾ ನೆಟ್‌ವರ್ಕ್ ಮೂಲಕ ನೂರಾರು ಪೊಲೀಸ್ ಅಧಿಕಾರಿಗಳು ಅವರನ್ನು ವೀಕ್ಷಿಸುತ್ತಿದ್ದಾರೆ ಎಂಬುದು ಅವರಿಗೆ ತಿಳಿದಿರಲಿಲ್ಲ. ಅವರು ಲಗೇಜನ್ನು ತಮ್ಮ ಕೋಣೆಯಲ್ಲಿಟ್ಟು ರೆಸ್ಟೋರೆಂಟ್‌ಗೆ ಹೊಟ್ಟೆ ತುಂಬಿಸಿಕೊಳ್ಳಲು ಹೋದರು. ಆಗ ಪೊಲೀಸರು ಅಂತಿಮವಾಗಿ ಕ್ರಮ ಕೈಗೊಂಡರು. ಸಂಪೂರ್ಣವಾಗಿ ಸಂಘಟಿತ ಕಾರ್ಯಾಚರಣೆಯಲ್ಲಿ ಆ ಇಬ್ಬರು ವ್ಯಕ್ತಿಗಳನ್ನು ಬಂಧಿಸಿದರು. ಅದೇ ದಿನ ಆಂಡ್ರಿಯಾಸ್ ಪರ್ಗೊಡೋವ್ಸ್ ನನ್ನು ಹಿಡಿದರು. ತೈವಾನೀಸ್ ಪೋಲೀಸರು ಬೇರೆ ಯಾರೂ ಮಾಡಲಾಗದ ಕೆಲಸವನ್ನು ಮಾಡಿದ್ದರು. ಬಂಧಿತರು ಕಾರ್ಬೊನಿಕ್ ಗುಂಪಿನ ನಾಯಕರ ಬಗ್ಗೆ ಹೆಚ್ಚು ತಿಳಿದಿರದ ಕೆಳಹಂತದ ಸಹಾಯಕರಾಗಿದ್ದರು. ಆದರೂ, ತೈವಾನೀಸ್ ಅಧಿಕಾರಿಗಳು ಕಾರ್ಬೊನಿಕ್ ಪ್ರಕರಣದಲ್ಲಿ ಮೊದಲ ಬಂಧನವನ್ನು ಮಾಡಲು ಯಶಸ್ವಿಯಾದರು. ಇಲ್ಲಿಂದ ಗುಂಪಿನ ನಾಯಕರ ಹುಡುಕಾಟ ಪ್ರಾರಂಭವಾಯಿತು.
ಸ್ಪೇನ್ 2018
ಎರಡು ವರ್ಷಗಳ ನಿರಂತರ ಹುಡುಕಾಟಕ್ಕೆ ಕಾಕತಾಳೀಯವಾಗಿ ಬೇರೊಂದು ತನಿಖೆಯು ಸಹಾಯವಾಯಿತು. ಸ್ಪೇನ್‌ನಲ್ಲಿ ಹಣವನ್ನು ಲಾಂಡರಿಂಗ್ ಮಾಡುತ್ತಿದ್ದ ಕ್ರಿಮಿನಲ್ ಸಂಘಟನೆಯ ಬಗ್ಗೆ ಸ್ಪ್ಯಾನಿಷ್ ಅಧಿಕಾರಿಗಳು ತನಿಖೆ ನಡೆಸುತ್ತಿದ್ದರು. ಲಾಂಡರಿಂಗ್ ಆಗಿರುವ ಹಣವನ್ನು ಯಾರು ತಲುಪಿಸುತ್ತಿದ್ದಾರೆ ಮತ್ತು ಅವರ ಗ್ರಾಹಕರು ಯಾರು ಎಂಬುದನ್ನು ಇಂಟರ್‌ಪೋಲ್‌ನ ಸಹಾಯದಿಂದ ಕಂಡುಹಿಡಿದರು. ಅವರಿಗೆ ಮನಿ ಲಾಂಡರಿಂಗ್ ಅಪರಾಧಿಗಳ ಗ್ರಾಹಕರಲ್ಲಿ ಒಬ್ಬರು ಡೆನ್ನಿಸ್ ಕೆ ಎಂದು ಕರೆಯಲ್ಪಡುವ ಉಕ್ರೇನಿಯನ್ ಕಂಪ್ಯೂಟರ್ ತಜ್ಞ ಎಂದು ತಿಳಿಯಿತು. ಈ ವ್ಯಕ್ತಿಯನ್ನು ಕೂಲಂಕಷವಾಗಿ ತನಿಖೆ ಮಾಡಿದಾಗ ಅವನು ರಷ್ಯನ್ ಮತ್ತು ಮೊಲ್ಡೋವನ್ ಮಾಫಿಯಾದೊಂದಿಗೆ ಸಂಪರ್ಕ ಹೊಂದಿದ್ದ ಎಂದೂ, 2013ರಿಂದ ಅವರಿಗಾಗಿ ಹಲವಾರು ಸೈಬರ್ ದಾಳಿಗಳನ್ನು ಸಂಘಟಿಸಿದ್ದ ಎಂದು ತಿಳಿಯಿತು.
ಇದನ್ನೂ ಓದಿ: ಸೈಬರ್ ಸೇಫ್ಟಿ ಅಂಕಣ: ಹ್ಯಾಕರ್‌ಗಳು ಬ್ಯಾಂಕ್‌ಗಳಿಂದ 100 ಕೋಟಿ ಡಾಲರ್ ಕದ್ದದ್ದು ಹೀಗೆ! ಭಾಗ- 2
ಡೆನ್ನಿಸ್ ಕೆ ಮತ್ತು ಗುಂಪಿನ ಇತರ ಮೂವರು ಸದಸ್ಯರನ್ನು ಅಂತಿಮವಾಗಿ 2018ರಲ್ಲಿ ಬಂದರು ನಗರವಾದ ಅಲಿಕಾಂಟೆಯಲ್ಲಿ ಬಂಧಿಸಲಾಯಿತು. ಅವರ ಆಸ್ತಿಯ ಮೇಲೆ ದಾಳಿ ನಡೆಸಿದ ಪೊಲೀಸರು ಎರಡು ಬಿಎಂಡಬ್ಲ್ಯುಗಳು ಮತ್ತು ಆಭರಣಗಳಿಂದ ತುಂಬಿದ ಪೆಟ್ಟಿಗೆಗಳನ್ನು ವಶಪಡಿಸಿಕೊಂಡರು. ಜೊತೆಗೆ 15000 ಬಿಟ್‌ಕಾಯಿನ್‌ಗಳ ವಾಲೆಟ್ ಕೂಡ ಪತ್ತೆಯಾಯಿತು. ಅದು ಆ ಸಮಯದಲ್ಲಿ ಸುಮಾರು 150 ಮಿಲಿಯನ್ ಯುಎಸ್ ಡಾಲರ್ ಮೌಲ್ಯದ್ದಾಗಿತ್ತು.
ಉಳಿದ 1 ಬಿಲಿಯನ್ ಯುಎಸ್ ಡಾಲರ್‌ಗಳು ಎಂದಿಗೂ ಪತ್ತೆಯಾಗಿಲ್ಲ. ಡೆನ್ನಿಸ್ ಕೆ ಕಾರ್ಬೊನಿಕ್ ಗ್ಯಾಂಗಿನ ನಾಯಕನಾಗಿದ್ದರೂ ಸಹ ಕ್ಯಾಸ್ಪರ್ಸ್ಕಿ ಲ್ಯಾಬ್ ಪ್ರಕಾರ ಇನ್ನೂ ಅನೇಕ ಜನರು ಇದರಲ್ಲಿ ಭಾಗಿಯಾಗಿದ್ದಾರೆ ಮತ್ತು ಗುಂಪು ಇಂದಿಗೂ ಸಕ್ರಿಯವಾಗಿದೆ. ಫಿನ್ 7, ಜೋಕರ್ ಸ್ಟಾಶ್, ಕೋಬಾಲ್ಟ್ ಸ್ಪೈಡರ್ ಮತ್ತು ಇನ್ನೂ ಅನೇಕ ವಿಭಿನ್ನ ಹೆಸರುಗಳ ಅಡಿಯಲ್ಲಿ ಪ್ರತಿ ವರ್ಷವೂ ಲಕ್ಷಾಂತರ ಮೊತ್ತದ ಹಣ ಕದಿಯುತ್ತಿದ್ದಾರೆ ಎಂದು ಹೇಳಲಾಗಿದೆ.
ಅಂತರ್ಜಾಲದಲ್ಲಿ ಹೇಗೆಲ್ಲಾ ಅಪರಾಧಗಳು ನೆಡೆಯುತ್ತದೆ ಎನ್ನುವುದಕ್ಕೆ ಕಾರ್ಬೊನಾಕ್ ಗ್ಯಾಂಗ್ ಕಾರ್ಯಾಚರಣೆ ಒಂದು ಉದಾಹರಣೆ ಅಷ್ಟೇ. ಘಟನೆಯ ವಿವರಗಳ ಬಗ್ಗೆ ನಿಮ್ಮ ಅನಿಸಿಕೆಗಳನ್ನು ತಿಳಿಸಿ. ಮುಂದಿನ ವಾರ ನಮ್ಮ ಜೀವನದಲ್ಲಿ ಉಪಯೋಗಿಸುತ್ತಿದ್ದ ಬಹುತೇಕ ವಸ್ತುಗಳನ್ನು ನುಂಗಿ, ಈಗ ನಮ್ಮೆಲ್ಲರ ಸಮಯವನ್ನೂ ನುಂಗುತ್ತಿರುವ ಸಂಪರ್ಕ ಸಾಧನ ಮತ್ತು ಅದರಿಂದ ಹೆಚ್ಚುತ್ತಿರುವ ವ್ಯಸನದಿಂದ (Smartphone addiction) ಬಚಾವಾಗೋದು ಹೇಗೆ ಅಂತ ಅರಿತುಕೊಳ್ಳೋಣ.
ಇದನ್ನೂ ಓದಿ: ಸೈಬರ್ ಸೇಫ್ಟಿ ಅಂಕಣ: ಹ್ಯಾಕರ್‌ಗಳು ಬ್ಯಾಂಕ್‌ಗಳಿಂದ 100 ಕೋಟಿ ಡಾಲರ್ ಕದ್ದ ಕಥೆ! ಭಾಗ – 1