Site icon Vistara News

ಸೈಬರ್‌ ಸೇಫ್ಟಿ ಅಂಕಣ: ಬೆಳಕಿನ ಹಬ್ಬದ ಕರಾಳ ಮುಖ

cyber following

ಈ ವರ್ಷದ ದಸರಾ ದೀಪಾವಳಿ ಹಬ್ಬಗಳು (Deepavali 2023) ಕಳೆದವು. ಜೊತೆಗೆ ಅಮೆಜಾನ್‌ನ ಗ್ರೇಟ್ ಇಂಡಿಯನ್‌ ಫೆಸ್ಟಿವಲ್ (Amazon Great Indian festival) ಮತ್ತು ಫ್ಲಿಪ್‌ಕಾರ್ಟ್‌ನ ಬಿಗ್ ದಿವಾಲಿ ಸೇಲ್‌ (Flipkart Big diwali sale) ಕೂಡಾ ಮುಗಿಯಿತು. ವರ್ಷದ ಈ ಸಮಯದಲ್ಲಿ ಶಾಪಿಂಗ್ ವಹಿವಾಟುಗಳು ಹೆಚ್ಚಾಗುವುದನ್ನು ಗಮನಿಸಿ ಎಲ್ಲಾ ಸೇವಾದಾತರು ತಮ್ಮ ವೆಬ್‌ಸೈಟ್‌ ಅಥವಾ ಆ್ಯಪ್‌ಗಳ ಮೂಲಕ ವಿಶೇಷ ರಿಯಾಯಿತಿ, ಬಹುಮಾನ, ಲಕ್ಕಿ ಕೂಪನ್ ಮುಂತಾದ ತರಾವರಿ ಕೊಡುಗೆಗಳನ್ನು ಕೊಟ್ಟು ಗ್ರಾಹಕರನ್ನು ಆಕರ್ಷಿಸುತ್ತಾರೆ. ಇದೇ ಸಂದರ್ಭದಲ್ಲಿ ಸೈಬರ್ ಕ್ರಿಮಿನಲ್‌ಗಳೂ ಹೊಸ ರೀತಿಯ ಜಾಲಗಳಿಂದ ಜನರನ್ನು ವಂಚಿಸುತ್ತಾರೆ. ಇಕಾಮರ್ಸ್ ಸೇವೆ ಒದಗಿಸುವವರು ಆ್ಯಪ್‌ಗಳ ಮೂಲಕ ನಿಮ್ಮ ಅಂಗೈ ಮೇಲೆ ಅಂಗಡಿ ತೆರೆದಿರೋದು ಸೈಬರ್ ಕಳ್ಳರಿಗೆ ಹೊಸ ತರಹದ ಬಲೆ ಹೆಣೆಯಲು ಅವಕಾಶ ಕೊಡ್ತಿದೆ. ಅವರು ಕೊಡುಗೆಗಳ ಬಗ್ಗೆ, ಕೂಪನ್‌ಗಳ ಬಗ್ಗೆ ಫಿಶಿಂಗ್ ಇಮೇಲ್‌ಗಳು ಮತ್ತು ಸಂದೇಶಗಳನ್ನು ಕಳುಹಿಸುತ್ತಾರೆ. ನಮ್ಮಲ್ಲಿನ ಆಸೆಬುರುಕತನವನ್ನು ಪ್ರಚೋದಿಸುತ್ತಾರೆ. ನಕಲಿ ವೆಬ್‌ಸೈಟ್‌ಗಳನ್ನು ರಚಿಸುತ್ತಾರೆ. ಅಲ್ಲಿ ಬಂದಾಗ ನಿಮ್ಮ ವೈಯಕ್ತಿಕ ವಿವರಗಳನ್ನು ತಿಳಿದು ನಿಮ್ಮ ಖಾತೆಯಿಂದ ಹಣವನ್ನು ಖಾಲಿ ಮಾಡುತ್ತಾರೆ. ಶೇಕಡಾ ಐವತ್ತು ರಿಯಾಯಿತಿಯ ಆಸೆಯಲ್ಲಿ 50,000 ರೂಪಾಯಿ ಕಳೆದುಕೊಳ್ಳುವ ಅವಸ್ಥೆ ಬರಬಹುದು. ಜಾಗರೂಕರಾಗಿಲ್ಲದಿದ್ದರೆ ಅನಿರೀಕ್ಷಿತ ಆಘಾತಕ್ಕೊಳಗಾಗಬೇಕಾಗುತ್ತದೆ.

ಇದರ ಬಗ್ಗೆ ಜಾಗ್ರತಿ ಮೂಡಿಸುವಂತಹ ಒಂದು ವಿಡಿಯೊ ವಾಟ್ಸ್ಯಾಪಿನಲ್ಲಿ ಹರಿದಾಡುತ್ತಿತ್ತು. ಅಜಯ್ ಆಫೀಸಿನಿಂದ ಸುಸ್ತಾಗಿ ಮನೆಗೆ ಬಂದು ಕೂರ್ತಾನೆ. ಅವನ ಪತ್ನಿ ಕುಡಿಯಲು ನೀರು ತರುವಷ್ಟರಲ್ಲಿ ಅಜಯ್‌ನ ಮೊಬೈಲ್ ಮೆಸೇಜ್ ಬಂದ ನೋಟಿಫಿಕೇಶನ್ ತೊರಿಸುತ್ತದೆ. ನೋಡಿ ಗಾಬರಿಯಿಂದ “ನೀನು ಖಾತೆಯಿಂದ 80,000 ತೆಗೆದಿದ್ದೀಯಾ?” ಅಂತ ಹೆಂಡತಿಯನ್ನು ಕೇಳ್ತಾನೆ. ಅವಳೂ ಗಾಬರಿಯಾಗಿ “ಅಷ್ಟು ಕ್ಯಾಶ್ ನಾನ್ಯಾಕೆ ತೆಗೆಯಲಿ, ನಮಗೆ ಅಷ್ಟು ನಗದು ಹಣದ ಅಗತ್ಯವೆಲ್ಲಿದೆ? ಅಂತ ಮರುಪ್ರಶ್ನಿಸುತ್ತಾಳೆ. “ನನ್ನ ಖಾತೆಯಿಂದ ಯಾರೋ 80,000 ತೆಗೆದಿದ್ದಾರೆ” ಅಂತ ಶಾಕ್ ಆಗ್ತಾನೆ ಅಜಯ್. ದಂಪತಿಗಳು ಹತಾಶರಾಗಿ ಪೋಲೀಸರಿಗೆ ದೂರು ನೀಡುತ್ತಾರೆ. ಅಲ್ಲಿಗೆ ಬಂದ ಪೊಲೀಸ್ ಅಧಿಕಾರಿಯು ಗಲಿಬಿಲಿಗೊಂಡಿದ್ದ ದಂಪತಿಗಳಿಗೆ ಸಾಂತ್ವನ ನೀಡಿ ಅವರ ಅಂದಿನ ದಿನಚರಿಯ ಬಗ್ಗೆ ವಿಚಾರಿಸುತ್ತಾರೆ.

ಮನೆಗೆ ಬರುವಾಗ ಅಪರಿಚಿತ ವ್ಯಕ್ತಿಯೊಬ್ಬ ಬಂದು ತನ್ನ ಮೊಬೈಲ್ ಮತ್ತು ಬ್ಯಾಗ್ ಕಳೆದುಕೊಂಡಿರುವುದಾಗಿ ಹೇಳಿ ಒಂದು ಕರೆ ಮಾಡಲು ಮೊಬೈಲ್ ಕೇಳಿದ್ದನ್ನು ಅಜಯ್ ನೆನಪು ಮಾಡಿಕೊಳ್ತಾನೆ. ಆ ವ್ಯಕ್ತಿಯು ಹೇಳಿದ ಸಂಖ್ಯೆಗೆ ತಾನೇ ಡಯಲ್ ಮಾಡಿ ಕೊಟ್ಟಿರುವುದಾಗಿ ಅಜಯ್ ಹೇಳ್ತಾನೆ. ಜೊತೆಗೆ ಅಪರಿಚಿತನ ಸಂಭಾಷಣೆಯನ್ನೂ ನೆನಪಿಸಿಕೊಳ್ತಾನೆ. ಆಗ ಅವನಿಗೆ ಅಪರಿಚಿತ ವ್ಯಕ್ತಿ ತನ್ನ ಮೊಬೈಲಿನಿಂದ ಒಂದು ಸಂಖ್ಯೆಯನ್ನು ಫೋನಿನ ಇನ್ನೊಂದು ಕಡೆಯಲ್ಲಿದ್ದ ವ್ಯಕ್ತಿಗೆ ಚಾಲಾಕಿತನದಿಂದ ತಿಳಿಸಿದ್ದು ಅರಿವಾಗುತ್ತದೆ. ಪೋಲೀಸ್ ಅಧಿಕಾರಿಯೂ ಈ ರೀತಿಯ ಮೋಸದ ಜಾಲವನ್ನು ದೃಢೀಕರಿಸುತ್ತಾರೆ. ಅಷ್ಟರಲ್ಲಿ ಅಜಯನ ಪತ್ನಿ ಬೆಳಿಗ್ಗೆಯಷ್ಟೇ ಒಂದು ಪಾರ್ಸಲ್‌ ಬಾಕ್ಸ್‌ನ್ನು ಹೊರಗೆ ಎಸೆದಿದ್ದನ್ನು ತಿಳಿಸುತ್ತಾಳೆ. ಆಗ ಅಧಿಕಾರಿ ʼನಿಮ್ಮ ವಿಳಾಸ, ದೂರವಾಣಿ ಸಂಖ್ಯೆ ಎಲ್ಲಾ ಅದರಲ್ಲಿ ನಮೂದಿಸಿರುತ್ತಾರೆ. ಕ್ರಿಮಿನಲ್‌ಗಳು ಅಷ್ಟು ಮಾಹಿತಿಯಿಂದ ಒಬ್ಬರ ಬಗ್ಗೆ ಬಹಳಷ್ಟು ವಿಷಯ ತಿಳಿದುಕೊಂಡು ಲೂಟಿ ಮಾಡಲು ತಕ್ಕದಾದ ಬಲೆ ಹೆಣೆಯುತ್ತಾರೆ. ಅವರನ್ನು ಹಿಡಿಯುವುದೂ ಬಹಳ ಕಷ್ಟʼ ಎನ್ನುತ್ತಾರೆ. ಅಜಯ್ ದಂಪತಿಗಳು ತಮ್ಮ ದುರಾದೃಷ್ಟವನ್ನು ಹಳಿದುಕೊಳ್ಳುತ್ತಾ ಕಳೆದುಕೊಂಡ ಹಣವನ್ನು ಪಡೆಯಲು ಏನು ಮಾಡೋದು ಅಂತ ಯೋಚಿಸಲು ಶುರುಮಾಡಿದರು. ಅವರು ಜಾಗ್ರತೆ ವಹಿಸಿ ತಮ್ಮ ವಿಳಾಸದ ಚೀಟಿಯನ್ನು ಪಾರ್ಸಲ್‌ ಡಬ್ಬದಿಂದ ತೆಗೆದಿದ್ದರೆ ಅವರ ದೀಪಾವಳಿ ಸಂಭ್ರಮವಾಗಿರುತ್ತಿತ್ತು ಅಂತ ಮರುಗುತ್ತಿದ್ದರು.

ನಮ್ಮ ದೈನಂದಿನ ಕೆಲಸಕಾರ್ಯಗಳಲ್ಲಿ ಸ್ವಲ್ಪ ಜಾಗರೂಕತೆ ವಹಿಸಿದರೆ ಇಂತಹ ಮೋಸಗಳಿಂದ ಬಚಾವ್‌ ಆಗಬಹುದು ಅಂತ ನಿಮಗೂ ಅನಿಸಿರಬಹುದಲ್ವಾ?

ನಮಗೆಲ್ಲಾ ವಾಟ್ಸ್ಯಾಪ್‌ ಮತ್ತು ಎಸ್‌ಎಮ್‌ಎಸ್‌ಗಳಲ್ಲಿ ಕೆಲವು ಲಿಂಕ್‌ಗಳೊಂದಿಗೆ ಸಂದೇಶಗಳು ಬಂದಿರತ್ತೆ ಅಲ್ವಾ? ಈ ಸಂದೇಶಗಳು ಉಡುಗೊರೆ ಕಾರ್ಡ್ ಅನ್ನು ಕ್ಲೈಮ್ ಮಾಡಲು ಲಿಂಕ್ ಅನ್ನು ಕ್ಲಿಕ್ ಮಾಡಲು ಪ್ರೇರೇಪಿಸುತ್ತದೆ. ವಾಸ್ತವದಲ್ಲಿ, ಲಿಂಕ್ ನಿಮ್ಮ ಚಟುವಟಿಕೆಗಳನ್ನು ಟ್ರ್ಯಾಕ್ ಮಾಡಬಹುದಾದ ಮಾಲ್‌ವೇರ್ ಅನ್ನು ಸ್ಥಾಪಿಸುತ್ತದೆ. ಈ ರೀತಿಯ ವಂಚನೆಗಳನ್ನು ತಪ್ಪಿಸಲು ಉತ್ತಮ ಮಾರ್ಗವೆಂದರೆ ಅಪರಿಚಿತ ಸಂಖ್ಯೆಯಿಂದ ಬಂದ ಲಿಂಕ್ ಕ್ಲಿಕ್ ಮಾಡದಿರುವುದು. ಅಂತಹ ಸಂದರ್ಭದಲ್ಲಿ ನಿಮ್ಮನ್ನು ನೀವೇ ಪ್ರಶ್ನಿಸಿಕೊಳ್ಳಿ “ಯಾರಾದರೂ ನನಗೆ ಗುರುತಿರದ ಸಂಖ್ಯೆಯಿಂದ ಉಡುಗೊರೆ ಕಾರ್ಡ್ ಅನ್ನು ಏಕೆ ಕಳುಹಿಸುತ್ತಾರೆ?” ಮತ್ತು ಯಾವುದೂ ʼಉಚಿತ’ವಾಗಿರುವುದಿಲ್ಲ. ಕೊನೆಯದಾಗಿ, ಯಾವುದೇ ಗೊತ್ತಿರದ ವೆಬ್‌ಸೈಟ್‌ಗಳಲ್ಲಿ ವೈಯಕ್ತಿಕ ವಿವರಗಳನ್ನು ನಮೂದಿಸಬೇಡಿ ಅಥವಾ OTPಗಳನ್ನು ಹಂಚಿಕೊಳ್ಳಬೇಡಿ.

ಇದನ್ನೂ ಓದಿ: ಸೈಬರ್‌ ಸೇಫ್ಟಿ ಅಂಕಣ: ಇಂಟರ್ನೆಟ್ ಬ್ಯಾಂಕಿಂಗ್ ವಂಚನೆ‌ ತಡೆಯಲು ಕೆಲವು ಟಿಪ್ಸ್

‘ಉಚಿತ ಕೊರಿಯರ್’ ಎಂಬ ಇನ್ನೊಂದು ಹಗರಣ ಕೆಲವು ಸಮಯದಿಂದ ಚಾಲ್ತಿಯಲ್ಲಿವೆ. ನಿಮಗೆ ತಿಳಿದಿರುವ ಯಾರೊಬ್ಬರಿಂದ ದುಬಾರಿ ಉಡುಗೊರೆ ಬಂದಿದೆ. ಅದನ್ನು ನಿಮಗೆ ತಲುಪಿಸಲು, ನೀವು ಶುಲ್ಕವನ್ನು ಪಾವತಿಸಬೇಕು ಎಂದು ನಿಮ್ಮನ್ನು ಸಂಪರ್ಕಿಸುತ್ತಾರೆ. ಕೊರಿಯರ್ ಕಾರ್ಯನಿರ್ವಾಹಕರು ಸಂಭಾವ್ಯ ವಿಕ್ಟಿಮ್‌ಗಳಿಗೆ ತಮ್ಮ ಹೆಸರಿನಲ್ಲಿ ಕೊರಿಯರ್ ಬಂದಿದೆ ಎಂದು ಮನವರಿಕೆ ಮಾಡಲು ಪ್ರಯತ್ನಿಸುತ್ತಾರೆ. ಆದರೆ ಪಾರ್ಸೆಲ್‌ನಲ್ಲಿ ಮಾದಕವಸ್ತುಗಳಂತಹ ಅಕ್ರಮ ವಸ್ತುಗಳಿವೆ. ಅದನ್ನು ವಿಮಾನ ನಿಲ್ದಾಣದಲ್ಲಿ ವಶಪಡಿಸಿಕೊಳ್ಳಲಾಗಿದೆ. ಇದರಿಂದ ಆಗುವ ಪರಿಣಾಮಗಳ ಬೆದರಿಕೆ ಹಾಕಲಾಗುತ್ತದೆ. ಇದು ಸಾಮಾನ್ಯವಾಗಿ ಜೈಲು ಶಿಕ್ಷೆ ಮತ್ತು ಭಾರಿ ದಂಡವನ್ನು ಒಳಗೊಂಡಿರುತ್ತದೆ ಎಂದು ಹೆದರಿಸುತ್ತಾರೆ. ಇಂತಹ ಸಂದರ್ಭದಲ್ಲಿ ಬ್ಯಾಂಕ್ ಮಾಹಿತಿಯಂತಹ ನಿಮ್ಮ ವಿವರಗಳನ್ನು ಹಂಚಿಕೊಳ್ಳಬೇಡಿ. ಅವರು ತುರ್ತು ತೋರಿಸಿದರೂ ಅಥವಾ ನಿಮಗೆ ಬೆದರಿಕೆ ಹಾಕಿದರೂ ಅವರಿಗೆ ಎಂದಿಗೂ ಪಾವತಿಸಬೇಡಿ. ಇಂತಹ ಕರೆಗಳು ಬಂದಾಗ ಪೋಲೀಸರ ಸಹಾಯ ಪಡೆಯಿರಿ.

ಇಮೇಲ್‌ಗಳ ಮೂಲಕ ಫಿಶಿಂಗ್ ದಾಳಿಗಳು ಈ ಸಂದರ್ಭದಲ್ಲಿ ಹೆಚ್ಚಿರುತ್ತವೆ. ಬಹಳಷ್ಟು ವ್ಯಾಪಾರಿಗಳು ಸಾಮಾನ್ಯವಾಗಿ ಹಬ್ಬದ ಋತುವಿನಲ್ಲಿ ತಮ್ಮ ಗ್ರಾಹಕರಿಗೆ ಶುಭಾಶಯಗಳನ್ನು ಕಳುಹಿಸಲು ಇಮೇಲ್‌ಗಳನ್ನು ಬಳಸುತ್ತಾರೆ. ಹ್ಯಾಕರ್‌ಗಳು ಸಾಮಾನ್ಯವಾಗಿ ಅಂತಹ ಅವಕಾಶಗಳಿಗೆ ಕಾಯುತ್ತಿರುತ್ತಾರೆ. ಇಮೇಲ್‌ಗಳಲ್ಲಿನ ತಪ್ಪಾದ ಇಂಗ್ಲಿಷ್ ವ್ಯಾಕರಣ ಮತ್ತು ಕಾಗುಣಿತಗಳ ಬಗ್ಗೆ ಗಮನ ಹರಿಸಿ. ಕಳುಹಿಸುವವರ ಇಮೇಲ್ ವಿಳಾಸದ ಮೇಲೆಯೂ ಗಮನವಿರಲಿ. ಜಾಗರೂಕತೆಯಿಂದ ಜಾಣರಾಗಿದ್ದರೆ ಹಬ್ಬದ ಸಮಯದಲ್ಲಿ ಮಾತ್ರವಲ್ಲ, ಯಾವಾಗಲೂ ನಿಮ್ಮ ಬಾಳಲ್ಲಿ ದೀಪವು ಬೆಳಗುತ್ತಲೇ ಇರುತ್ತದೆ.

ಇದನ್ನೂ ಓದಿ: ಸೈಬರ್‌ ಸೇಫ್ಟಿ ಅಂಕಣ: ಡಾರ್ಕ್ ವೆಬ್‌ನಲ್ಲಿ ಡಂಪ್ ಆದ 81.5 ಕೋಟಿ ಭಾರತೀಯರ ಡೇಟಾ

Exit mobile version