Site icon Vistara News

ಸೈಬರ್‌ ಸೇಫ್ಟಿ ಅಂಕಣ: ಅಳಿವಿನ ಅಂಚಿನಲ್ಲಿ ಝಣ ಝಣ ಕಾಂಚಾಣ!

cryptocurrency fraud

ಮುಂದಿನ ದಿನಗಳಲ್ಲಿ ಕ್ರಿಪ್ಟೋಕರೆನ್ಸಿನಾ ಅಥವಾ CBDCನಾ?

ಸೈಬರ್ ಸೇಫ್ಟಿ ಅಂಕಣದಲ್ಲಿ ಮನಿ ಮಾತು ಯಾಕೆ ಅಂತ ಅಚ್ಚರಿಯೇ? 1992ರಲ್ಲಿ ಬಂದ ಶಿವರಾಜ್ ಕುಮಾರ್ ನಟಿಸಿದ ಪುರುಷೋತ್ತಮ ಚಿತ್ರದ ಕಾಂಚಾಣ ಕಾಂಚಾಣ ಹಾಡು ಕೇಳಿದ್ದೀರಾ? ಹಂಸಲೇಖರ ಸಾಹಿತ್ಯ ಜಗದಲ್ಲಿನ ಹಣದ ಪ್ರಾಮುಖ್ಯತೆಯನ್ನು ಬಹಳ ಸೊಗಸಾಗಿ ತಿಳಿಸುತ್ತದೆ. “ಜನವಿರುವುದು ಜಗದೊಳಗೆ, ಜಗವಿರುವುದು ಹಣದೊಳಗೆ, ಜನ ಜಗದೊಳಗೆ, ಜಗ ಹಣದೊಳಗೆ, ಸುಖವಿರುವುದು ಇದರೊಳಗೆ” ಅದರಲ್ಲಿ ಬರುವ ಝಣ್ ಝಣ್ ಹಣ, ಟಂಣ್ ಟಂಣ್ ಹಣ ಇನ್ನು ಕೆಲವೇ ವರ್ಷಗಳಲ್ಲಿ ಸದ್ದು ಮಾಡುವುದನ್ನು ನಿಲ್ಲಿಸಲಿದೆ.

ಸೈಬರ್ ಜಗತ್ತಿನಲ್ಲೂ ದುಡ್ಡೇ ದೊಡ್ಡಪ್ಪ. ಯಾವುದೇ ಹ್ಯಾಕಿಂಗ್ ಇರಲಿ, ರಾನ್‌ಸಮ್‌ವೇರ್ ಅ್ಯಟಾಕ್‌ ಆಗಲಿ, ಡಾಟಾ ಕಳ್ಳತನವಾಗಿರಲಿ, ಸೋಷಿಯಲ್ ಇಂಜಿನಿಯರಿಂಗ್ ತಂತ್ರ ಬಳಸಿದ ದಾಳಿ ಇರಬಹುದು, ಎಲ್ಲದರ ಮುಖ್ಯ ಉದ್ದೇಶವೇ ಹಣ. ಅದು ಗರಿಗರಿ ನೋಟಿರಲಿ ಅಥವಾ ಕ್ರಿಪ್ಟೋಕರೆನ್ಸಿ ಇರಲಿ. ಅಂತರ್ಜಾಲದ ಅಂತರಂಗದ ಡೀಪ್ ಡಾರ್ಕ್ ವೆಬ್‌ನಲ್ಲಿ ಎಲ್ಲವೂ ಮಾನ್ಯ.

ತಂತ್ರಜ್ಞಾನದ ಬೆಳವಣಿಗೆ ಈಗ ನಾವು ವ್ಯವಹರಿಸುವ ಬಗೆಯನ್ನೇ ಬದಲಿಸುತ್ತಿದೆ. ಕಡಲೆಕಾಯಿ ಮಾರುವವರಿಂದ ಕಾಂಟಿನೆಂಟಲ್ ಊಟ ಬಡಿಸುವ ಹೋಟೆಲ್‌ವರೆಗೆ ನಗದಿಗಿಂತ ‘ಯುಪಿಐ’ ಪಾವತಿಯೇ ಸ್ವಾಗತಾರ್ಹ. ಪ್ರಪಂಚದಾದ್ಯಂತ ಚಲಾವಣೆಯಲ್ಲಿರುವ ಭೌತಿಕ (physical) ಹಣ ಕೇವಲ ಶೇಕಡ 8 ಮಾತ್ರ (8%). ಅಂದರೆ ಡಿಜಿಟಲ್ ರೂಪದಲ್ಲಿ ಚಲಾವಣೆ ಆಗ್ತಿರುವ ಹಣ ಶೇಕಡ 92. ಭಾರತದಲ್ಲೂ ಚಲಾವಣೆಯಲ್ಲಿರುವ ನಗದು ಹಣದ ಪ್ರಮಾಣ 2023 ಮಾರ್ಚ್ ಅಂತ್ಯಕ್ಕೆ ಶೇಕಡ 10.8ಕ್ಕೆ ತಲುಪಿದೆ. 2017ರಲ್ಲಿ ಇದರ ಪ್ರಮಾಣ ಶೇಕಡ 50% ಇತ್ತು.

ಅದರ ಜನಪ್ರಿಯತೆ ಮತ್ತು ಬಳಕೆಯ ಹೊರತಾಗಿಯೂ, ಹಣವು ಸಾಮಾಜಿಕವಾಗಿ ಸಾಕಷ್ಟು ಸಮಸ್ಯೆಗಳಿಗೂ ಕಾರಣವಾಗಿದೆ. ಹಣದ ಪರಿಕಲ್ಪನೆಯು ಅಸ್ತಿತ್ವಕ್ಕೆ ಬಂದಾಗಿನಿಂದ, ಇಬ್ಬರು (ಅಥವಾ ಹೆಚ್ಚು) ಅಪರಿಚಿತರು ಪರಿಚಯ ಮಾಡಿಕೊಳ್ಳದೆ ಅಥವಾ ಕೌಂಟರ್-ಪಾರ್ಟಿ ಅಪಾಯಗಳ ಬಗ್ಗೆ ತಲೆಕೆಡಿಸಿಕೊಳ್ಳದೆ ವಹಿವಾಟು ನಡೆಸಲು, ವಿನಿಮಯ ಮಾಡಿಕೊಳ್ಳಲು ಸಹಕಾರಿಯಾಗಿದೆ.

ಇತ್ತೀಚಿನ ದಿನಗಳಲ್ಲಿ ನೀವು ಕ್ರಿಪ್ಟೋಕರೆನ್ಸಿ, ಬಿಟ್‌ ಕಾಯಿನ್ ಅಂತ ಕೇಳಿರಬಹುದು. ಕ್ರಿಪ್ಟೋಕರೆನ್ಸಿ ಬಹುಶಃ ಹಣಕಾಸು ಮತ್ತು ತಂತ್ರಜ್ಞಾನದ ಡೊಮೇನ್‌ನಲ್ಲಿ ಅತಿದೊಡ್ಡ ಹೊಸತನ ತಂದ ಪರಿಕಲ್ಪನೆಯಾಗಿದೆ. ತುಲನಾತ್ಮಕವಾಗಿ ಬಹಳ ಕಡಿಮೆ ಅವಧಿಯಲ್ಲಿ, ಕ್ರಿಪ್ಟೋಕರೆನ್ಸಿಗಳು ವಿಶ್ವಾದ್ಯಂತ ಹಣಕಾಸು ಮೂಲಸೌಕರ್ಯಗಳನ್ನು ಪರಿವರ್ತಿಸುವ ಚರ್ಚೆಗಳಿಗೆ ದಾರಿ ಮಾಡಿಕೊಟ್ಟಿವೆ.

2008ರಲ್ಲಿ ಮೊದಲ ಬಾರಿಗೆ ಬಿಟ್‌ಕಾಯಿನ್ ಎನ್ನುವ ಕ್ರಿಪ್ಟೋಕರೆನ್ಸಿಯನ್ನು ಪರಿಚಯಿಸಿದಾಗಿನಿಂದ, ಕ್ರಿಪ್ಟೋಕರೆನ್ಸಿಗಳು ಬಹಳಷ್ಟು ಅಭಿವೃದ್ಧಿಯನ್ನು ಹೊಂದಿದೆ. ಆರಂಭದಲ್ಲಿ, ಕ್ರಿಪ್ಟೋಕರೆನ್ಸಿಗಳು ಜನಪ್ರಿಯವಾಗುವ ಮೊದಲು ಎಲ್ಲಾ ವಲಯಗಳಿಂದ ಅನಿಶ್ಚಿತತೆ ಮತ್ತು ಸಂದೇಹವನ್ನು ಎದುರಿಸಿದವು. ಈಗ, ಭ್ರಮನಿರಸನದ ಹಂತವನ್ನು ದಾಟಿ ಉಪಯುಕ್ತತೆಯ ಉತ್ತಮ ಪುರಾವೆಯೊಂದಿಗೆ ಪ್ರಬುದ್ಧವಾಗುತ್ತಿವೆ.

ಕ್ರಿಪ್ಟೋಕರೆನ್ಸಿ ಮೂಲತಃ ಡಿಜಿಟಲ್ ಕರೆನ್ಸಿಯಾಗಿದ್ದು ಅದನ್ನು ನೀವು ಆನ್‌ಲೈನ್‌ನಲ್ಲಿ ಮೌಲ್ಯವನ್ನು ವಿನಿಮಯ ಮಾಡಿಕೊಳ್ಳಲು ಬಳಸಬಹುದು. ಕ್ರಿಪ್ಟೋಕರೆನ್ಸಿಯ ಪ್ರಾಥಮಿಕ ಅಡಿಪಾಯ ಬ್ಲಾಕ್ಚೈನ್ ತಂತ್ರಜ್ಞಾನವಾಗಿದೆ. ಇದು ಕ್ರಿಪ್ಟೋಕರೆನ್ಸಿಗಳು ಇಂದು ಸಾಕಷ್ಟು ಜನಪ್ರಿಯವಾಗಿರುವ ವಿಕೇಂದ್ರೀಕರಣವನ್ನು ಒದಗಿಸುತ್ತದೆ. ವಿಕೇಂದ್ರೀಕರಣವು ಕ್ರಿಪ್ಟೋಕರೆನ್ಸಿಗಳನ್ನು ಕೇಂದ್ರೀಯ ಪ್ರಾಧಿಕಾರದ ನಿಯಂತ್ರಣದಿಂದ ಮುಕ್ತಗೊಳಿಸುತ್ತದೆ. ಪರಿಣಾಮವಾಗಿ, ಕ್ರಿಪ್ಟೋಕರೆನ್ಸಿ ಹೊಂದಿರುವವರು ತಮ್ಮ ಹಣದ ಮೇಲೆ ನಿಯಂತ್ರಣವನ್ನು ಸುಧಾರಿಸಿದ್ದಾರೆ ಮತ್ತು ಅದನ್ನು ಅವರು ಬಯಸಿದಂತೆ ಬಳಸುವ ಸ್ವಾತಂತ್ರ್ಯವನ್ನು ಹೊಂದಿದ್ದಾರೆ.

ಮೊಟ್ಟಮೊದಲ ಕ್ರಿಪ್ಟೋಕರೆನ್ಸಿ, ಬಿಟ್‌ಕಾಯಿನ್, ಬ್ಲಾಕ್‌ಚೈನ್ ತಂತ್ರಜ್ಞಾನದ ಆಧಾರದ ಮೇಲೆ ಎಲೆಕ್ಟ್ರಾನಿಕ್ ಪೀರ್-ಟು-ಪೀರ್ ನಗದು ವ್ಯವಸ್ಥೆಯಾಗಿ ಹೊರಹೊಮ್ಮಿತು. ಬಿಟ್‌ಕಾಯಿನ್‌ನ ಅನಾಮಧೇಯ ಸಂಸ್ಥಾಪಕ, ಸತೋಶಿ ನಕಾಮೊಟೊ ಅವರು 2008ರಲ್ಲಿ ಬಿಟ್‌ಕಾಯಿನ್‌ನಲ್ಲಿ ಶ್ವೇತಪತ್ರವನ್ನು ಬಿಡುಗಡೆ ಮಾಡಿದರು ಮತ್ತು ನಂತರ 2009ರಲ್ಲಿ ಕ್ರಿಪ್ಟೋಕರೆನ್ಸಿಯನ್ನು ಪ್ರಾರಂಭಿಸಿದರು.

ಕ್ರಿಪ್ಟೋಕರೆನ್ಸಿಗಳ ಮೌಲ್ಯವು ಹೆಚ್ಚಾಗಿ ಬ್ಲಾಕ್‌ಚೈನ್ ಸಂಬಂಧವನ್ನು ಅವಲಂಬಿಸಿರುತ್ತದೆ. ಬ್ಲಾಕ್‌ಚೈನ್ ಕ್ರಿಪ್ಟೋಕರೆನ್ಸಿಗಳಲ್ಲಿ ವಿಶ್ವಾಸಾರ್ಹವಲ್ಲದ (trustless), ಸುರಕ್ಷಿತ, ವಿಕೇಂದ್ರೀಕೃತ ಮತ್ತು ಕ್ರಿಪ್ಟೋಗ್ರಾಫಿಕ್ ಗುಣಲಕ್ಷಣಗಳನ್ನು ನೀಡುತ್ತದೆ. ಇದು ಎಲ್ಲಾ ವಹಿವಾಟುಗಳ ದಾಖಲೆಯೊಂದಿಗೆ ಬದಲಾಗದ ವಿತರಣಾ ಲೆಡ್ಜರ್ ಅನ್ನು ನೀಡುತ್ತದೆ, ಇದರಿಂದಾಗಿ ಎಲ್ಲಾ ವಹಿವಾಟುಗಳ ಪಾರದರ್ಶಕತೆ ಮತ್ತು ಸಮಗ್ರತೆಯನ್ನು ಖಾತ್ರಿಪಡಿಸುತ್ತದೆ.

2022ರಲ್ಲಿ, ಕ್ರಿಪ್ಟೋಕರೆನ್ಸಿಗಳ ಸಂಖ್ಯೆಯು 9,000 ಕ್ಕಿಂತ ಹೆಚ್ಚಿದೆ, ಪ್ರತಿದಿನ ಅನೇಕ ಹೊಸ ಕ್ರಿಪ್ಟೋಕರೆನ್ಸಿಗಳು ಮತ್ತು ಸ್ವತ್ತುಗಳು ಹೊರಹೊಮ್ಮುತ್ತಿವೆ. ಮಾರ್ಚ್ 2023ರ ಹೊತ್ತಿಗೆ, 22,904 ಕ್ರಿಪ್ಟೋಕರೆನ್ಸಿಗಳು ಅಸ್ತಿತ್ವದಲ್ಲಿವೆ. ಆದಾಗ್ಯೂ, ಎಲ್ಲಾ ಕ್ರಿಪ್ಟೋಕರೆನ್ಸಿಗಳು ಸಕ್ರಿಯ ಅಥವಾ ಮೌಲ್ಯಯುತವಾಗಿಲ್ಲ. ಅನೇಕ “ಡೆಡ್” ಕ್ರಿಪ್ಟೋಗಳನ್ನು ಗಣನೆಗೆ ತೆಗೆದುಕೊಳ್ಳದಿದ್ದರೂ ಸುಮಾರು 8,832 ಸಕ್ರಿಯ ಕ್ರಿಪ್ಟೋಕರೆನ್ಸಿಗಳು ಉಳಿಯುತ್ತವೆ. ಪ್ರಪಂಚದಾದ್ಯಂತ 300 ಮಿಲಿಯನ್ (30 ಕೋಟಿ) ಕ್ರಿಪ್ಟೋಕರೆನ್ಸಿ ಬಳಕೆದಾರರಿದ್ದಾರೆ.

ಕ್ರಿಪ್ಟೋಕರೆನ್ಸಿಯ ಬೆಲೆಯು ಆಗಾಗ್ಗೆ ಬದಲಾಗುತ್ತದೆ ಮತ್ತು ಹೆಚ್ಚು ಅನಿಶ್ಚಿತವಾಗಿರುತ್ತದೆ (volatile). ಬಿಟ್‌ಕಾಯಿನ್ (BTC), ಈಥೀರಿಯಮ್ ನೆಟ್‌ವರ್ಕ್‌ ಆಧಾರಿತ ಈಥರ್ (ETC), ಡಾಡ್ಚ್‌ಕಾಯಿನ್ (DODGE), ಲೈಟ್‌ಕಾಯಿನ್(LTC) ಮತ್ತು ರಿಪ್ಪಲ್ (XRP) ಅತ್ಯಂತ ಪ್ರಸಿದ್ಧ ಕ್ರಿಪ್ಟೋಕರನ್ಸಿಗಳಾಗಿವೆ. 20 ಸೆಪ್ಟೆಂಬರ್ 2023ರಂದು ಒಂದು ಬಿಟ್‌ಕಾಯಿನ್‌ ಬೆಲೆ 22,48,501 ರೂಪಾಯಿ ಮತ್ತು ಒಂದು ಈಥರ್ ಬೆಲೆ 1,35,085 ರೂಪಾಯಿ ಇದೆ. ಮುಂದಿನ ವಾರಗಳಲ್ಲಿ ಕ್ರಿಪ್ಟೋಕರನ್ಸಿಯನ್ನು ಡಿ-ಕ್ರಿಪ್ಟ್ ಮಾಡಿ ಸೈಬರ್ ಜಗತ್ತಿನಲ್ಲಿ ಇದರ ಬಳಕೆಯ ಬಗ್ಗೆಯೂ ಬೆಳಕು ಚೆಲ್ಲುವ ಪ್ರಯತ್ನ ಮಾಡ್ತೇನೆ.

ಕ್ರಿಪ್ಟೋಕರೆನ್ಸಿಗಳಿಂದ ಹೆಚ್ಚುತ್ತಿರುವ ಬೆದರಿಕೆ ಸೆಂಟ್ರಲ್ ಬ್ಯಾಂಕ್ ಡಿಜಿಟಲ್ ಕರೆನ್ಸಿ (CBDC) ಅನ್ವೇಷಿಸಲು ಬಹುಶಃ ಕೇಂದ್ರೀಯ ಬ್ಯಾಂಕ್‌ಗಳನ್ನು ಪ್ರಚೋದಿಸಿದೆ. ವಿಶ್ವಾದ್ಯಂತ ಬಹುತೇಕ ದೇಶಗಳು ತಮ್ಮದೇ ಆದ ಡಿಜಿಟಲ್ ಕರೆನ್ಸಿಯನ್ನು ಅಭಿವೃದ್ಧಿ ಪಡಿಸುತ್ತಿದ್ದಾರೆ. ಬ್ಯಾಂಕ್ ಆಫ್ ಇಂಟರ್‌ನ್ಯಾಷನಲ್ ಸೆಟಲ್‌ಮೆಂಟ್ಸ್ (BIS) 2022 ರ ಸಮೀಕ್ಷೆಯ ಪ್ರಕಾರ, 93 ಪ್ರತಿಶತ ಕೇಂದ್ರೀಯ ಬ್ಯಾಂಕ್‌ಗಳು CBDC ಗಳನ್ನು ಅನ್ವೇಷಿಸುತ್ತಿವೆ ಮತ್ತು 58 ಪ್ರತಿಶತದಷ್ಟು ಅವರು ಸಣ್ಣ ಅಥವಾ ಮಧ್ಯಮ ಅವಧಿಯಲ್ಲಿ ಚಿಲ್ಲರೆ (retail) CBDC ಯನ್ನು ನೀಡುವ ಸಾಧ್ಯತೆಯಿದೆ. ವಾಸ್ತವವಾಗಿ, ಭಾರತದಲ್ಲಿ CBDC ಇ-ರೂಪಾಯಿ ಅಥವಾ ಇ-ರುಪಿ ಎಂದು ಕರೆಯಲ್ಪಡುತ್ತದೆ.

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 2022-23ರ ಕೇಂದ್ರ ಬಜೆಟ್‌ನಲ್ಲಿ CBDC ಯನ್ನು ಪರಿಚಯಿಸುವುದಾಗಿ ಘೋಷಿಸಿದರು. ಈ ಉದ್ದೇಶಕ್ಕಾಗಿ, ಹಣಕಾಸು ಮಸೂದೆ 2022ರ ಅಂಗೀಕಾರದೊಂದಿಗೆ RBI ಕಾಯಿದೆ 1934 ರ ಸಂಬಂಧಿತ ವಿಭಾಗಗಳಿಗೆ ಅಗತ್ಯ ತಿದ್ದುಪಡಿಗಳನ್ನು ಮಾಡಲಾಗಿದೆ.

2022ರಲ್ಲಿ, RBI ಡಿಜಿಟಲ್ ರೂಪಾಯಿ, ಭಾರತದ ಸ್ವಂತ CBDC ಮತ್ತು ಸಾರ್ವಭೌಮ ಕರೆನ್ಸಿಯ ಎಲೆಕ್ಟ್ರಾನಿಕ್ ರೂಪವನ್ನು ಅನಾವರಣಗೊಳಿಸಿತು. ಆ ಸಮಯದಲ್ಲಿ, ಕೇಂದ್ರೀಯ ಬ್ಯಾಂಕ್ ಇ-ರುಪಿಯನ್ನು ಎರಡು ಆವೃತ್ತಿಗಳಲ್ಲಿ ನೀಡಲು ಪ್ರಸ್ತಾಪಿಸಿತು- CBDC-ಸಗಟು (CBDC-W) ಮತ್ತು CBDC-ರಿಟೇಲ್ (CBDC-R). CBDC-W ಆಯ್ದ ಹಣಕಾಸು ಸಂಸ್ಥೆಗಳಿಗೆ ನಿರ್ಬಂಧಿತ ಪ್ರವೇಶಕ್ಕಾಗಿ, CBDC-R ಅನ್ನು ಖಾಸಗಿ ವಲಯ, ಹಣಕಾಸು-ಅಲ್ಲದ ಗ್ರಾಹಕರು ಮತ್ತು ವಹಿವಾಟುಗಳು, ವ್ಯಾಪಾರಸ್ಥರು ಸೇರಿದಂತೆ ಎಲ್ಲರೂ ಬಳಸಬಹುದು.

ಇದನ್ನೂ ಓದಿ: ಸೈಬರ್‌ ಸೇಫ್ಟಿ ಅಂಕಣ: ಪ್ರತ್ಯಕ್ಷ ಕಂಡರೂ ಪರಾಂಬರಿಸಿ ನೋಡು

ಸಗಟು CBDCಯ ಪ್ರಾಯೋಗಿಕ ಯೋಜನೆಗಾಗಿ ರಿಸರ್ವ್ ಬ್ಯಾಂಕ್ ಒಂಬತ್ತು ಬ್ಯಾಂಕುಗಳನ್ನು ಆರಿಸಿಕೊಂಡಿದೆ. ಈ ಬ್ಯಾಂಕ್‌ಗಳಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI), ಬ್ಯಾಂಕ್ ಆಫ್ ಬರೋಡಾ, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ, HDFC ಬ್ಯಾಂಕ್, ICICI ಬ್ಯಾಂಕ್, ಕೋಟಕ್ ಮಹೀಂದ್ರಾ ಬ್ಯಾಂಕ್, YES ಬ್ಯಾಂಕ್, IDFC ಫಸ್ಟ್ ಬ್ಯಾಂಕ್ ಮತ್ತು HSBC ಸೇರಿವೆ. ರಿಟೇಲ್ ಇ-ರುಪಿಯ ಪ್ರಯೋಗ ನಾಲ್ಕು ಬ್ಯಾಂಕ್ ಮತ್ತು ಕೆಲವು ನಗರಗಳಲ್ಲಿ ಪ್ರಾರಂಭವಾಗಿ ಇತ್ತೀಚಿನ ವರದಿಯ ಪ್ರಕಾರ ಹದಿಮೂರು ಬ್ಯಾಂಕ್‌ಗಳ ಬಳಕೆದಾರರು ಈ ಬ್ಯಾಂಕ್‌ಗಳು ನೀಡುವ ಡಿಜಿಟಲ್ ವ್ಯಾಲೆಟ್ ಅನ್ನು ಬಳಸಿಕೊಂಡು ಡಿಜಿಟಲ್ ರೂಪಾಯಿಯೊಂದಿಗೆ ವಹಿವಾಟು ನಡೆಸಬಹುದಾಗಿದೆ. ಚಿಲ್ಲರೆ ಇ-ರೂಪಾಯಿಯನ್ನು 50 ಪೈಸೆ, 1, 2, 5, 10, 20, 50, 100, 200, 500 ಮತ್ತು 2000 ಮುಖಬೆಲೆಗಳಲ್ಲಿ ಲಭ್ಯವಿರುತ್ತದೆ. ಆದರೆ ಸಗಟು ಇ-ರೂಪಾಯಿಯು ಕೇಂದ್ರದ ಪ್ರಕಾರ ಯಾವುದೇ ಮುಖಬೆಲೆಯನ್ನು ಹೊಂದಿರುವುದಿಲ್ಲ.

ತಂತ್ರಜ್ಞಾನದ ಬಳಕೆ ನಮ್ಮ ಜೀವನವನ್ನು, ವ್ಯಾಪಾರವಹಿವಾಟುಗಳನ್ನು ಸುಗಮಗೊಳಿಸುವುದರೊಂದಿಗೆ ಹೊಸ ಬಗೆಯ ಅಪಾಯಗಳಿಗೂ ದಾರಿ ಮಾಡುತ್ತವೆ. ಹಣ ಯಾವುದೇ ರೂಪದಲ್ಲಿದ್ದರೂ ಅದನ್ನು ದೋಚಲು ಹೊಂಚುಹಾಕುವ ಖದೀಮರಿರುವಾಗ ನಾವು ಸದಾ ಜಾಣರಾಗಿ, ಜಾಗರೂಕರಾಗಿರಬೇಕು.

ಇದನ್ನೂ ಓದಿ: ಸೈಬರ್‌ ಸೇಫ್ಟಿ ಅಂಕಣ: ಅನುಕೂಲಗಳು ಹೆಚ್ಚಾದಂತೆ ಆತಂಕಕ್ಕೆ ನೂರು ದಾರಿಗಳು

Exit mobile version