“ಮೈ ನರೇಂದ್ರ ದಾಮೋದರ ದಾಸ್ ಮೋದಿ…” ಎನ್ನುತ್ತ ನವದೆಹಲಿಯಲ್ಲಿ ಪ್ರಧಾನಿಯಾಗಿ ನರೇಂದ್ರ ಮೋದಿ ಪ್ರಮಾಣವಚನ ಸ್ವೀಕರಿಸಿದ್ದು 2014ರ ಮೇ 26ರಂದು. ಇನ್ನು ಮೂರ್ನಾಲ್ಕು ದಶಕ ಭಾರತದಲ್ಲಿ ಒಂದೇ ಪಕ್ಷ ಸರಳ ಬಹುಮತ ಪಡೆಯುವುದು ಅಸಾಧ್ಯ, ಇದೇನಿದ್ದರೂ ಮೈತ್ರಿ ಯುಗ ಎಂಬ ಚುನಾವಣಾ ತಜ್ಞರ ಲೆಕ್ಕಾಚಾರಗಳನ್ನು ತಲೆಕೆಳಕಾಗಿಸಿದ ಚುನಾವಣೆ ಅದು. ಎನ್‌ಡಿಎ ಮೈತ್ರಿಕೂಟ ಜಯಿಸಿದರೂ (336) ಬಿಜೆಪಿಯೊಂದೇ, ಸರಳ ಬಹುಮತಕ್ಕೆ ಬೇಕಿರುವ 272ನ್ನು ದಾಟಿ 282 ಸ್ಥಾನಗಳನ್ನು ಗೆದ್ದುಬಿಟ್ಟಿತು.
ಆಗಿನಿಂದಲೂ ಬಹುಶಃ ಒಂದು ದಿನವೂ ಪ್ರಧಾನಿ ಮೋದಿ ಕುರಿತು ಸುದ್ದಿ ಓದದ ದಿನವೇ ಇಲ್ಲ. ದಿನಪತ್ರಿಕೆಗಳು, ಟಿವಿ ವಾಹಿನಿಗಳು, ಸಾಮಾಜಿಕ ಜಾಲತಾಣದಲ್ಲೂ ಮೋದಿ ಆವರಿಸಿಕೊಂಡಿದ್ದಾರೆ. ಮೋದಿ ಆಡಳಿತವನ್ನು ಮೆಚ್ಚುವವರಷ್ಟೆ ಅಲ್ಲದೆ ವಿರೋಧಿಸುವವರಿಂದಲೂ ಸಾಕಷ್ಟು ಬಾರಿ ಸುದ್ದಿಯಲ್ಲಿರುತ್ತಾರೆ. ಈ ಅವಧಿಯಲ್ಲಿ ಅನೇಕ ಸಮೀಕ್ಷೆಗಳು ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲೂ ನಡೆದಿವೆ. ಬಹುತೇಕ ಎಲ್ಲ ಸೂಚ್ಯಂಕದಲ್ಲೂ ಪ್ರಧಾನಿ ಮೋದಿಯವರೇ ನಂಬರ್ ಒನ್ ನಾಯಕ ಎಂದು ಬಿತ್ತರಿಸಿವೆ. ಈ ನಡುವೆ ಮೋದಿ ಕುರಿತು ವಿದೇಶಿ ಮಾಧ್ಯಮಗಳಲ್ಲಿ ನಕಾರಾತ್ಮಕ ವರದಿಗಳೂ ಬಿತ್ತರವಾಗಿವೆ. ಒಂದೆರಡು ಬಾರಿ ಮೋದಿ ಜನಪ್ರಿಯತೆ ಕುಸಿಯಿತು ಎಂದು ತೋರಿದರೂ ಮತ್ತೆ ಪುಟಿದು ಏಳುತ್ತಿದೆ. 2019ರ ಲೋಕಸಭೆ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟ 353 ಸ್ಥಾನ ಗಳಿಸಿದರೆ ಬಿಜೆಪಿ 21 ಸ್ಥಾನ ಏರಿಕೆಯೊಂದಿಗೆ 303 ಸಂಸದರನ್ನು ಹೊಂದಿತು. ಕರ್ನಾಟಕದಲ್ಲಿಯೂ ಇದು ಪ್ರತಿಫಲಿಸಿತು. 28ರಲ್ಲಿ(ಸ್ಪರ್ಧಿಸಿದ್ದು 27) 25 ಸಂಸದರನ್ನು ಪಡೆಯಿತು. ಆದರೆ ಪ್ರಧಾನಿ ನರೇಂದ್ರ ಮೋದಿಯವರ ಈ ಜನಪ್ರಿಯತೆಯು ರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿ ಇಷ್ಟು ಸ್ಪಷ್ಟವಾಗಿ ಕಾಣುವುದಿಲ್ಲ.
2014ರಲ್ಲಿ ಮೋದಿ ಸರ್ಕಾರ ರಚನೆಯಾದ ನಂತರ ನಡೆದ ವಿಧಾನಸಭೆ ಚುನಾವಣೆಗಳು:
ಮೋದಿ ಪ್ರಧಾನಿಯಾದ ನಂತರ ದೇಶದಲ್ಲಿ ಇಲ್ಲಿವರೆಗೆ 50 ಚುನಾವಣೆಗಳು ನಡೆದಿವೆ. ಇದೀಗ ಕರ್ನಾಟಕದಲ್ಲಿ 51ನೇ ಚುನಾವಣೆ ನಡೆಯಲು ಘೋಷಣೆಯಾಗಿದೆ. ಈ 50 ಚುನಾವಣೆಗಳಲ್ಲಿ ನೇರವಾಗಿ ಬಿಜೆಪಿ ಅಥವಾ ಬಿಜೆಪಿಯೊಂದಿಗೆ ಚುನಾವಣಾ ಪೂರ್ವ ಮೈತ್ರಿ ಕೂಟ 18 ಬಾರಿ (36%) ಸರಳ ಬಹುಮತದೊಂದಿಗೆ ಗೆಲುವುದು ಸಾಧಿಸಿದೆ. 32 ಬಾರಿ (64%) ಸೋಲು ಕಂಡಿದೆ. ಗೋವಾ, ಮಹಾರಾಷ್ಟ್ರ ಮುಂತಾದ ರಾಜ್ಯಗಳಲ್ಲಿ ಚುನಾವಣೋತ್ತರ ಮೈತ್ರಿ ಸರ್ಕಾರ ರಚನೆಯಾಗಿವೆ. ಕರ್ನಾಟಕದಲ್ಲಿ ಅಸ್ತಿತ್ವದಲ್ಲಿದ್ದ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರ ಪತನವಾಗಿ ಬಿಜೆಪಿ ಸರ್ಕಾರ ಅಧಿಕಾರ ಹಿಡಿದಿದೆ. ಈ ರೀತಿ ಚುನಾವಣೆ ನಂತರ ರಚನೆಯಾದ ಮೈತ್ರಿ ಸರ್ಕಾರಗಳು ಮೇಲೆ ತಿಳಿಸಿರುವ 18ರಲ್ಲಿ ಸೇರಿಲ್ಲ. ಮೋದಿ ಅವಧಿಯಲ್ಲಿ ಸೋಲುಂಡಿರುವ 9 ರಾಜ್ಯಗಳಲ್ಲಿ ಬಿಜೆಪಿ ಇತಿಹಾಸದಲ್ಲಿಯೇ ಎಂದಿಗೂ ಸರ್ಕಾರ ರಚನೆ ಮಾಡಿಲ್ಲ. ಉದಾಹರಣೆಗೆ ಪಶ್ಚಿಮ ಬಂಗಾಳ, ತೆಲಂಗಾಣ, ಒಡಿಶಾ, ತಮಿಳುನಾಡು ಮುಂತಾದ ರಾಜ್ಯಗಳು. ಆದರೆ ಪಶ್ಚಿಮ ಬಂಗಾಳ, ಮೇಘಾಲಯ, ಜಮ್ಮು ಕಾಶ್ಮೀರ ರಾಜ್ಯಗಳಲ್ಲಿ ಗಣನೀಯವಾಗಿ ಬಿಜೆಪಿ ಶಾಸಕರ ಸಂಖ್ಯೆ ಹೆಚ್ಚಾಗಿದೆ. ಆದರೆ ಅಧಿಕಾರ ಹಿಡಿಯುವಲ್ಲಿ ಮೋದಿ ಪ್ರಭಾವ ಅಷ್ಟಾಗಿ ಕಾಣಿಸುತ್ತಿಲ್ಲ. ರಾಜ್ಯಗಳಲ್ಲಿ ಸ್ಪಷ್ಟ ಬಹುಮತ ದೊರಕುವ ಸಾಧ್ಯತೆಗಳು, ರಾಷ್ಟ್ರೀಯ ಮಟ್ಟದಲ್ಲಿ ಅವರ ಜನಪ್ರಿಯತೆಗೆ ಅನುಗುಣವಾಗಿಲ್ಲ. ಇದಕ್ಕೆ ಬಿಜೆಪಿಯ ಸಂಘಟನಾ ಶಕ್ತಿ, ಪ್ರಾದೇಶಿಕ ಪಕ್ಷಗಳ ಪ್ರಾಬಲ್ಯ ಮುಂತಾದ ಅಂಶಗಳು ಕಾರಣ.
ಸರ್ಕಾರಗಳ ಮುಂದುವರಿಕೆ ಪ್ರಮಾಣ:
ಮೇಲಿನ ಟೇಬಲ್‌ನಲ್ಲಿ ತಿಳಿಸಿರುವಂತೆ, ಈಗಾಗಲೆ ಬಿಜೆಪಿ ಅಥವಾ ಎನ್‌ಡಿಎ ಸರ್ಕಾರ ಇದ್ದ ಕಡೆ ಚುನಾವಣೆ ನಡೆದಾಗ 9 ಚುನಾವಣೆಯಲ್ಲಿ ಗೆಲುವುದು ಸಾಧಿಸಲಾಗಿದೆ. ಬಹುತೇಕ ಅಷ್ಟೇ ಎನ್ನಬಹುದಾದಷ್ಟು (8) ಸಂಖ್ಯೆಯಲ್ಲಿ ಸರ್ಕಾರಗಳು ಸೋಲು ಕಂಡಿವೆ. ಚುನಾವಣೆಗೆ ಮುನ್ನ ಬಿಜೆಪಿ ಅಥವಾ ಎನ್‌ಡಿಎ ಸರ್ಕಾರ ಇಲ್ಲದ ಕಡೆಗಳಲ್ಲಿ 9 ಚುನಾವಣೆಗಳನ್ನು ಗೆದ್ದು, ಹೊಸದಾಗಿ ಸರ್ಕಾರ ರಚನೆ ಮಾಡಲಾಗಿದೆ. ಗೆದ್ದಿರುವ ಹಾಗೂ ಸೋತಿರುವ ಚುನಾವಣೆಗಳಲ್ಲಿ ಮೋದಿ ಪ್ರಭಾವದ ಜತೆಗೆ ಸ್ಥಳೀಯ ನಾಯಕತ್ವ ಪ್ರಭಾವ ಬೀರಿದೆ. ಪಂಜಾಬ್, ರಾಜಸ್ಥಾನ, ಮಧ್ಯಪ್ರದೇಶದಲ್ಲಿ ಅದಾಗಲೇ ಆಡಳಿತ ವಿರೋಧಿ ಅಲೆ ಗಣನೀಯವಾಗಿತ್ತು. ಅದನ್ನು ಮೀರಿ ಮತಗಳಿಸಲು ಮೋದಿ ವರ್ಚಸ್ಸಿಗೆ ಸಾಧ್ಯವಾಗಲಿಲ್ಲ. ಕೇವಲ ಮೋದಿ ಪ್ರಭಾವವೇ ವಿಧಾನಸಭೆ ಚುನಾವಣೆಯಲ್ಲಿ ಕೆಲಸ ಮಾಡುವುದಗಿದ್ದರೆ ಈ ರಾಜ್ಯಗಳಲ್ಲೂ ಬಿಜೆಪಿ ಗೆಲ್ಲಬಹುದಿತ್ತು.
ಉದಾಹರಣೆಗೆ ಉತ್ತರ ಪ್ರದೇಶದಲ್ಲಿ 2017ರಲ್ಲಿ ವಿಧಾನಸಭೆ ಚುನಾವಣೆ ನಡೆದಾಗ ರಾಜ್ಯ ಮಟ್ಟದ ಸ್ಥಳೀಯ ನಾಯಕತ್ವವನ್ನು ಪ್ರೊಜೆಕ್ಟ್ ಮಾಡಿರಲಿಲ್ಲ. 2014ರಲ್ಲಷ್ಟೇ ಭರ್ಜರಿ ಸಂಖ್ಯೆಯಲ್ಲಿ ಸಂಸದರನ್ನು ಆಯ್ಕೆ ಮಾಡಿ (80ರಲ್ಲಿ 71) ಕಳಿಸಿದ್ದ ಉತ್ತರ ಪ್ರದೇಶದ ಜನರು ಅದೇ ಮೋದಿ ಅಲೆ ಮತ್ತು ಅಮಿತ್ ಶಾ ತಂತ್ರಗಾರಿಕೆಯ ಫಲವಾಗಿ ವಿಧಾನಸಭೆ ಚುನಾವಣೆಯಲ್ಲಿ ಸರಳ ಬಹುಮತ(312) ನೀಡಿದರು. ಚುನಾವಣೆ ನಂತರ ಯೋಗಿ ಆದಿತ್ಯನಾಥ ಅವರನ್ನು ಮುಖ್ಯಮಂತ್ರಿ ಎಂದು ಘೋಷಣೆ ಮಾಡಿದ ನಂತರ ಅಲ್ಲೊಂದು ಸುಸ್ಥಿರ ಸರ್ಕಾರ ರಚನೆಯಾಯಿತು. ಆದರೆ ದೇಶದ ಅತ್ಯಂತ ದೊಡ್ಡ ಹಾಗೂ ಸಂಕೀರ್ಣ ರಾಜ್ಯದಲ್ಲಿ ಒಬ್ಬ ನಾಯಕನ ನೇತೃತ್ವದಲ್ಲಿ ಮತ್ತೆ ಚುನಾವಣೆ ಗೆಲ್ಲುವ ವಾತಾವರಣ ಇರಲಿಲ್ಲ. ಒಂದೆಡೆ ನರೇಂದ್ರ ಮೋದಿ ವರ್ಚಸ್ಸಿನ ಜತೆಗೆ ಸಿಎಂ ಯೋಗಿ ಆದಿತ್ಯನಾಥರ ವರ್ಚಸ್ಸನ್ನೂ ಸೇರಿಸಿ ಚುನಾವಣೆಯಲ್ಲಿ ಸೆಣೆಸುವ ಅನಿವಾರ್ಯತೆ ಎದುರಾಯಿತು. ಸ್ವತಃ ಪ್ರಧಾನಿ ನರೇಂದ್ರ ಮೋದಿ, ಯೋಗಿ ಆದಿತ್ಯಾನಾಥ ಅವರ ಭುಜದ ಮೇಲೆ ಕೈ ಹಾಕಿ ಒಟ್ಟಿಗೆ ನಿಂತಿರುವ ಭಾವಚಿತ್ರಗಳನ್ನು ಪ್ರಸಾರ ಮಾಡಲಾಯಿತು. ಜೋಡಿ ನಾಯಕತ್ವದ ಸಂದೇಶವನ್ನು ಚುನಾವಣೆಯಲ್ಲಿ ಸಾರಲಾಯಿತು. ಇದೀಗ ಕರ್ನಾಟಕದಲ್ಲಿ ಹೇಳುತ್ತಿರುವ ಡಬಲ್ ಇಂಜಿನ್ ಸರ್ಕಾರದ ಮಾದರಿ ಅದಾಗಿತ್ತು. ಹಿಂದಿನ ಚುನಾವಣೆಗಿಂತ ಬಿಜೆಪಿ ಸಂಖ್ಯೆ ಕಡಿಮೆ ಆಯಿತಾದರೂ ಸರಳ ಬಹುಮತ ಪಡೆಯುವಲ್ಲಿ ಸಫಲವಾಯಿತು.
ಪ್ರಧಾನಿ ಮೋದಿ ತಮ್ಮ ತವರು ರಾಜ್ಯ ಗುಜರಾತ್‌ನಲ್ಲಿ ಈ ಬಾರಿಯೂ ಪಕ್ಷವನ್ನು ಗೆಲ್ಲಿಸಿಕೊಂಡು ಬಂದಿದ್ದಾರೆ. ಮೋದಿ ನಂತರ ಸ್ಥಳೀಯ ನಾಯಕತ್ವ ಪ್ರಬಲವಾಗಿ ಅಲ್ಲಿ ಬೆಳೆಯಲಿಲ್ಲ. ಜತೆಗೆ ಆಡಳಿತ ವಿರೋಧಿ ಅಲೆಯೂ ಇತ್ತು. 38 ಹಾಲಿ ಶಾಸಕರು, ಸಚಿವರಿಗೆ ಟಿಕೆಟ್ ತಪ್ಪಿಸಲಾಯಿತು. ಹೊಸಬರಿಗೆ ಟಿಕೆಟ್ ನೀಡಿ, ತಮ್ಮ ವರ್ಚಸ್ಸಿನ ಮೂಲಕವೇ ಮೋದಿ ಗೆಲುವು ಸಾಧಿಸಿದರು. ಗುಜರಾತ್ ಹೊರತುಪಡಿಸಿ, ಸ್ಥಳೀಯ ನಾಯಕತ್ವ ಇಲ್ಲದೆಯೇ ಮೋದಿ ವರ್ಚಸ್ಸನ್ನು ಮಾತ್ರ ಇರಿಸಿಕೊಂಡು ಚುನಾವಣೆ ಗೆಲ್ಲುವುದು ಕಷ್ಟ ಎನ್ನುವುದನ್ನು ತಿಳಿಯಬಹುದು. ಗುಜರಾತ್ ನಂತರ ಮೋದಿಯವರಿಗೆ ಹೆಚ್ಚು ಜನಪ್ರಿಯತೆ ಇರುವುದು ಕರ್ನಾಟಕದಲ್ಲೆ ಎನ್ನಲಾಗುತ್ತದೆ. ಪ್ರತಿ ಬಾರಿ ಮೋದಿ ಆಗಮಿಸಿದಾಗಲೂ ಜನರು ಸ್ವಯಂಪ್ರೇರಿತವಾಗಿ ಕಾರ್ಯಕ್ರಮ, ರೋಡ್ ಶೋಗಳಲ್ಲಿ ಭಾಗಿಯಾಗುವುದು ಈ ಮಾತಿಗೆ ಪುಷ್ಠಿ ನೀಡುತ್ತದೆ.
ಇಂತಹ ಜನಪಿಯತೆ ಇರುವ ಕರ್ನಾಟಕದಲ್ಲೂ 2018ರಲ್ಲಿ ಬಿ.ಎಸ್. ಯಡಿಯೂರಪ್ಪ ನಾಯಕತ್ವ ಹಾಗೂ ಮೋದಿ ನಾಯಕತ್ವ ಎರಡೂ ಸೇರಿದ್ದರಿಂದ ಹೆಚ್ಚಿನ ಸ್ಥಾನಗಳು (104) ಲಭಿಸಿದವು. ದೇಶದ ಇತರೆ ರಾಜ್ಯಗಳಂತೆಯೇ ಕರ್ನಾಟಕದ ಮತದಾರರೂ ಲೋಕಸಭೆ ಹಾಗೂ ವಿಧಾನಸಭೆ ಚುನಾವಣೆಗಳಲ್ಲಿ ಸ್ಪಷ್ಟ ಭಿನ್ನತೆಯನ್ನು ಗುರುತಿಸಿದ್ದಾರೆ. ಕೆಳಗಿನ ಟೇಬಲ್ ನೋಡಿದರೆ ಅಂದಾಜಾಗುತ್ತದೆ.
ಈ ಮೇಲಿನ ಟೇಬಲ್‌ನಲ್ಲಿ ವಿಧಾನಸಭೆ ಚನಾವಣೆಗಳಲ್ಲಿ(2008, 2013, 2018) ಶಾಸಕರು ಆಯ್ಕೆಯಾದ ಸಂಖ್ಯೆ ನೀಡಲಾಗಿದೆ. ಹಾಗೆಯೇ ಲೋಕಸಭೆ ಚುನಾವಣೆಗಳಲ್ಲಿ (2009, 2014, 2019) ವಿಧಾನಸಭೆ ಕ್ಷೇತ್ರವಾರು ಅತಿ ಹೆಚ್ಚು ಮತ ಪಡೆದ ಪಕ್ಷದ ಸಂಖ್ಯೆ ಇದೆ. ಬಿಜೆಪಿಗೆ ಮತ ನೀಡುವಾಗ ಕರ್ನಾಟಕದ ಮತದಾರರು ರಾಷ್ಟ್ರೀಯ ವಿಚಾರಗಳಿಗೆ ಆದ್ಯತೆ ನೀಡುತ್ತಿದ್ದಾರೆ. ದೇಶದ ಗಡಿ, ವಿದೇಶಾಂಗ ವಿಚಾರ, ಪಾಕಿಸ್ತಾನ ಹಾಗೂ ಚೀನಾ ಜತೆಗೆ ಕಠಿಣವಾಗಿ ವ್ಯವಹರಿಸುವುದು ಸೇರಿ ಅನೇಕ ವಿಚಾರಗಳಿಗೆ ಬಿಜೆಪಿ ಮೇಲೆ ನಂಬಿಕೆ ಹೆಚ್ಚು. 2013ರ ವಿಧಾನಸಭೆ ಚುನಾವಣೆಯಲ್ಲಿ ಕೇವಲ 40 ಸ್ಥಾನವನ್ನು ಬಿಜೆಪಿ ಗಳಿಸಿತು. ಆದರೆ 2014ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ 132 ವಿಧಾನಸಭೆ ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿತು. ಅದೇ ರೀತಿ 2018ರಲ್ಲಿ 104 ಸ್ಥಾನಗಳನ್ನು ಗೆದ್ದ ಬಿಜೆಪಿಗೆ 2019ರ ಲೋಕಸಭೆ ಚುನಾವಣೆಯಲ್ಲಿ 170 ಕ್ಷೇತ್ರಗಳಲ್ಲಿ ಮುನ್ನಡೆ ದೊರಕಿದೆ.
ಬಿಜೆಪಿಯನ್ನು ರಾಷ್ಟ್ರೀಯ ವಿಚಾರಗಳಿಗೆ ಪರಿಗಣಿಸಿದಷ್ಟು ಗಂಭೀರವಾಗಿ ಹಾಗೂ ಪೂರ್ಣವಾಗಿ ರಾಜ್ಯದ, ಸ್ಥಳೀಯ ವಿಚಾರಗಳಿಗೆ ಕರ್ನಾಟಕದ ಮತದಾರರು ಪರಿಗಣಿಸುತ್ತಿಲ್ಲ. ಬಿಜೆಪಿ ತನ್ನ ಹಿಂದುತ್ವ ಅಜೆಂಡಾವನ್ನೂ ಇಲ್ಲಿ ಪೂರ್ಣ ಅನ್ವಯ ಮಾಡಿಲ್ಲ. ಒಂದಷ್ಟು ಕಡೆ ಹಿಂದುತ್ವ, ಒಂದಷ್ಟು ಕಡೆ ಜಾತಿ ಸಮೀಕರಣ… ಹೀಗೆ ಸಾಗುತ್ತಿದೆ. ಹಾಗಾಗಿ ಮೋದಿ ಅಲೆಯ ಜತೆಗೆ ಸ್ಥಳೀಯ ನಾಯಕತ್ವವನ್ನೂ ಹೊಂದಿದರೆ ವಿಧಾನಸಭೆ ಚುನಾವಣೆಗಳಲ್ಲಿ ಬಿಜೆಪಿ ಜಯಗಳಿಸುವ ಸಾಧ್ಯತೆ ಹೆಚ್ಚಾಗುತ್ತದೆ.
ಆದರೆ ಈ ಬಾರಿ ಕರ್ನಾಟಕದ ಚುನಾವಣೆ ನೋಡಿದರೆ ಮೋದಿ ವರ್ಚಸ್ಸಿನ ಮೇಲೆಯೇ ಬಿಜೆಪಿ ಚುನಾವಣೆಯನ್ನು ಎದುರಿಸುತ್ತಿರುವುದು ಸ್ಪಷ್ಟವಾಗುತ್ತಿದೆ. ಮೋದಿಯವರ ನೇತೃತ್ವದಲ್ಲಿ ಚುನಾವಣೆ ಗೆಲ್ಲುತ್ತೇವೆ ಎಂದು ಇತ್ತೀಚೆಗೆ ರಾಷ್ಟ್ರೀಯ ಸುದ್ದಿ ವಾಹಿನಿಯಲ್ಲಿ ಮಾತನಾಡುವಾಗ ಅಮಿತ್ ಶಾ ಹೇಳಿದ್ದಾರೆ. ಸ್ವತಃ ಯಡಿಯೂರಪ್ಪ ಅವರೂ ಇದೇ ಮಾತನಾಡಿದ್ದಾರೆ. ರಾಜ್ಯದ ಅತ್ಯಂತ ಪ್ರಭಾವಿ ನಾಯಕರಲ್ಲೊಬ್ಬರಾದ ಬಿ.ಎಸ್. ಯಡಿಯೂರಪ್ಪ ಚುನಾವಣೆಯಲ್ಲಿ ಸಕ್ರಿಯವಾಗೇನೊ ಇದ್ದಾರೆ. ಆದರೆ ಅವರು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಕಾರಣಕ್ಕೆ ಅವರನ್ನು ಮುಂದಿನ ನಾಯಕ, ಮತ್ತೆ ಸಿಎಂ ಆಗುತ್ತಾರೆ ಎಂದು ಪ್ರೊಜೆಕ್ಟ್ ಮಾಡಿಕೊಂಡು ಚುನಾವಣೆ ನಡೆಸುವ ಅವಕಾಶ ಬಿಜೆಪಿಗೆ ಇಲ್ಲ. ಸಿಎಂ ಬಸವರಾಜ ಬೊಮ್ಮಾಯಿ, ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ಜತೆಗೆ ರಾಜ್ಯ ಬಿಜೆಪಿ ನಾಯಕರ ತಂಡವಿದೆ. ಕರ್ನಾಟಕದಲ್ಲಿ ಮೋದಿ ವರ್ಚಸ್ಸು ಮ್ಯಾಜಿಕ್ ಮಾಡುತ್ತದೆ ಎಂದು ಬಹುತೇಕ ಬಿಜೆಪಿ ನಾಯಕರು ನೆಚ್ಚಿಕೊಂಡಿದ್ದಾರೆ. ವಿಧಾನಸಭೆ ಚುನಾವಣೆಯಲ್ಲಿ ಮೋದಿ ವರ್ಚಸ್ಸನ್ನು ಈ ಮೂಲಕ ಪರೀಕ್ಷೆಗೆ, ಪಣಕ್ಕೆ ಇಟ್ಟಂತೆ ಕಾಣುತ್ತಿದೆ. ಈ ಸವಾಲಿನಿಂದ ಮೋದಿ ಹೇಗೆ ಹೊರಬರುತ್ತಾರೆ ಎನ್ನುವುದು ಕಾದುನೋಡಬೇಕಾದ ವಿಚಾರ. ಕೇವಲ ಮೋದಿ ವರ್ಚಸ್ಸಿನ ಆಧಾರದಲ್ಲಿ ಕರ್ನಾಟಕಲ್ಲಿ ಬಿಜೆಪಿ ಗೆದ್ದರೆ ಭವಿಷ್ಯದಲ್ಲಿ ವಿಧಾನಸಭೆ ಚುನಾವಣೆ ಎದುರಿಸಲು ಆ ಪಕ್ಷಕ್ಕೆ ಬಹುದೊಡ್ಡ ಸೂತ್ರವೊಂದು ಸಿಕ್ಕಂತಾಗುತ್ತದೆ. ಹಾಗೆ ಆಗದಿದ್ದರೂ ಒಂದು ಪಾಠ ಸಿಗುತ್ತದೆ.
ಇದನ್ನೂ ಓದಿ: D ಕೋಡ್ ಅಂಕಣ: ಜೆಡಿಎಸ್‌ಗೆ 2023ರ ವಿಧಾನಸಭೆ ಚುನಾವಣೆ ‘Final Match’ ಏಕೆಂದರೆ…