Site icon Vistara News

D ಕೋಡ್ ಅಂಕಣ: ನಿಮ್ಮ ಮತಗಳು ಕಳ್ಳತನವಾಗುತ್ತಿವೆ ಎಚ್ಚರಿಕೆ !

d code column beware of vote theft and modi speeches in election

#image_title

ನಾವು ಮತದಾನ ಮಾಡಲು ಸುಮಾರು ಅರ್ಧ-ಒಂದು ಗಂಟೆ ಸರತಿ ಸಾಲಿನಲ್ಲಿ ನಿಂತಿರುತ್ತೇವೆ. ಇನ್ನೇನು ಮತದಾನ ಮಾಡಬೇಕು ಎನ್ನುವಷ್ಟರಲ್ಲಿ ನಮ್ಮ ಹೆಸರಿನ ಮತವನ್ನು ಅದಾಗಲೇ ಬೇರೆ ಯಾರೋ ಚಲಾಯಿಸಿದ್ದರೆ ಹೇಗಾಗಬೇಡ? ಈ ಹಿಂದೆ ರೌಡಿಗಳನ್ನು ಚುನಾವಣಾ ಏಜೆಂಟ್‌ಗಳಾಗಿಸಿಕೊಂಡು ತೋಳ್ಬಲದ ಮೇಲೆ ಚುನಾವಣೆ ನಡೆಸಲಾಗುತ್ತಿತ್ತು ಎನ್ನುವುದನ್ನು ಅನೇಕರು ಕೇಳಿರಬಹುದು. ಆಗೆಲ್ಲ ಯಾರದ್ದೋ ಮತವನ್ನು ಯಾರೊ ಒತ್ತಿಬಿಡುತ್ತಿದ್ದರು. ಅನೇಕ ಸಲ ಬೂತ್‌ಗಳನ್ನೇ ಎತ್ತೊಯ್ದು, ತಮ್ಮ ಅಭ್ಯರ್ಥಿ ಪರ ಮತಗಳನ್ನು ಒತ್ತಿದ ಬೂತ್‌ಗಳನ್ನು ಬದಲಿಸುತ್ತಿದ್ದರು. ಎಲೆಕ್ಟ್ರಾನಿಕ್ ಮತಯಂತ್ರ ಬಂದ ನಂತರ ಈ ತೋಳ್ಬಲದ ಕಾರ್ಯಕರ್ತರಿಗೆ ಏನು ಮಾಡುವುದು ಗೊತ್ತಾಗುತ್ತಿಲ್ಲ. ಬೇರೆಯವರಿಗಾಗಿ ಮತಪೆಟ್ಟಿಗೆ ಬದಲಾವಣೆ ಮಾಡುವ ಬದಲು ತಾವೇ ಶಾಸಕರಾಗೋಣ ಎಂದು ಬರುತ್ತಿದ್ದಾರೆ. ಈ ಸಾರಿಯೂ ಅಂತಹ ಅನೇಕರು ಸ್ಪರ್ಧೆಯಲ್ಲಿದ್ದಾರೆ. ಆದರೆ ಇಲ್ಲಿ ಹೇಳುತ್ತಿರುವುದು ಆ ರೀತಿಯ ಮತದ ಕಳ್ಳತನವಲ್ಲ.

ಇತ್ತೀಚೆಗೆ ಬೆಂಗಳೂರಿನ ಎನ್‌ಜಿಒ ಒಂದರ ಹೆಸರಿನಲ್ಲಿ ಮತದಾರರು ಮಾಹಿತಿಯನ್ನು ಅಕ್ರಮವಾಗಿ ಸಂಗ್ರಹಿಸಿ ಅನೇಕರ ಹೆಸರನ್ನು ಡಿಲೀಟ್ ಮಾಡಿಸಲಾಗುತ್ತಿದೆ ಎಂಬ ಆರೋಪ ಕೇಳಿಬಂದಿತ್ತು. ಅದರಲ್ಲಿ ಚಿಲುಮೆ ಎನ್ನುವ ಸಂಸ್ಥೆ ಭಾಗಿಯಾಗಿದೆ ಎಂಬ ಚರ್ಚೆ ಬಿಸಿಬಿಸಿಯಾಗಿ ನಡೆಯಿತು. ಆದರೆ ಈಗ ಹೇಳುತ್ತಿರುವುದು ಆ ರೀತಿಯ ಮತ ಕಳ್ಳತನವೂ ಅಲ್ಲ.

ಮತಗಟ್ಟೆಗೆ ತೆರಳು ಬೇರೆಯವರ ಮತವನ್ನು ಚಲಾಯಿಸುವುದು ಈಗ ನಡೆಯುತ್ತಿರುವ ಕಳ್ಳತನ. ಮತಪತ್ರದಿಂದ ಇವಿಎಂಗೆ ಬಂದರೂ, ಕೇವಲ ಹೆಸರಿನ ಮತಪತ್ರದಿಂದ ಫೋಟೊ ಸಹಿತ ಮತಪತ್ರ ಬಂದರೂ ಇನ್ನೂ ನಮ್ಮ ಹೆಸರಿನ ಮತವನ್ನು ಬೇರೆಯವರು ಹಾಕುವುದು ನಿಂತಿಲ್ಲ.

ಮತದಾನ ಮಾಡಲು ಆಧಾರ್ ಕಾರ್ಡ್, ಚಾಲನಾ ಪರವಾನಗಿ, ಪಾಸ್‌ಪೋರ್ಟ್‌ ಸೇರಿ ಅನೇರಕ ದಾಖಲೆಗಳನ್ನು ಮತ ಚಲಾಯಿಸಲು ನೀಡಬಹುದು. ಇದನ್ನೇ ಬಂಡವಾಳವಾಗಿಸಿಕೊಂಡ ರಾಜಕೀಯ ಪಕ್ಷಗಳೂ ಪುಢಾರಿಗಳು ಬೇರೆಯವರ ಮತವನ್ನು ಚಲಾಯಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ನಿಜವಾದ ಮತದಾರರು ಮತ ಚಲಾಯಿಸಲು ಆಗಮಿಸದರೆ ಏನು ಮಾಡುವುದು? ಅದಕ್ಕೆ ಚುನಾವಣಾ ಆಯೋಗ ಟೆಂಡರ್ಡ್ ಮತಗಳ ಚಲಾವಣೆಗೆ ಅವಕಾಶ ನೀಡುತ್ತದೆ. ಅದಕ್ಕೂ ಮೊದಲು ಇತ್ತೀಚಿನ ಚುನಾವಣೆಗಳಲ್ಲಿ ಅತಿ ಹೆಚ್ಚು ಚಲಾವಣೆ ಆದ ಟೆಂಡರ್ಡ್ ಮತಗಳ ಸಂಖ್ಯೆ ಬಗ್ಗೆ ಒಮ್ಮೆ ಕಣ್ಣು ಹಾಯಿಸೋಣ. 2018ರ ಚುನಾವಣೆಯಲ್ಲಿ ಅತಿ ಹೆಚ್ಚು ಟೆಂಡರ್ಡ್ ಮತಗಳು ಚಲಾವಣೆ ಆದ ಟಾಪ್ 10 ಕ್ಷೇತ್ರಗಳು ಹೀಗಿವೆ.

d code column beware of vote theft and modi speeches in election

ವಿಧಾನಸಭೆ ಮಾತ್ರವಲ್ಲ. 2019ರ ಲೋಕಸಭೆ ಚುನಾವಣೆಯಲ್ಲೂ ಯರ‍್ರಾಬಿರ‍್ರಿ ಮತಗಳನ್ನು ಬೇರೆಯವರು ಚಲಾಯಿಸಿದ್ದಾರೆ.

d code column beware of vote theft and modi speeches in election

ಕರ್ನಾಟಕಕ್ಕಿಂತಲೂ ಇತರೆ ರಾಜ್ಯಗಳಲ್ಲಿ ಪರಿಸ್ಥಿತಿ ಭಯಾನಕವಾಗಿದೆ. ಟಾಪ್ 10 ಕ್ಷೇತ್ರಗಳ ಪಟ್ಟಿ ಇಲ್ಲಿದೆ.

d code column beware of vote theft and modi speeches in election

ಈ ರೀತಿ ಯಾರಾದರೂ ನಮ್ಮ ಹೆಸರಿನ ಮತವನ್ನು ಅದಾಗಲೇ ಹಾಕಿಬಿಟ್ಟಿದ್ದರೆ ಸುಮ್ಮನೆ ಹಿಂದಿರುಗಬೇಕಿಲ್ಲ. ಮತ ಚಲಾಯಿಸಲು ಅವಕಾಶವಿದೆ. ಚುನಾವಣಾಧಿಕಾರಿಗೆ ಈ ವಿಚಾರವನ್ನು ತಿಳಿಸಿ, ಸರಿಯಾದ ಐಡಿ ಕಾರ್ಡ್ ಕೊಟ್ಟರೆ ಟೆಂಡರ್ಡ್ ವೋಟ್ ಮಾಡಲು ಕೊಡುತ್ತಾರೆ. ಎಲೆಕ್ಟ್ರಾನಿಕ್‌ ಯಂತ್ರ ಬರುವುದಕ್ಕೂ ಮುಂಚೆ ಇದ್ದ ಹಳೆಯ ಪದ್ಧತಿಯಂತೆ ಮತಪತ್ರದಲ್ಲಿ ಅಭ್ಯರ್ಥಿಯ ಹೆಸರಿನ ಎದುರು ಮಾರ್ಕ್ ಮಾಡಿ ವೋಟ್ ಮಾಡಬಹುದು. 2018ರ ಚುನಾವಣೆಯಲ್ಲೆ ಕರ್ನಾಟಕದ 53 ವಿಧಾನಸಭಾ ಕ್ಷೇತ್ರಗಳಲ್ಲಿ 177 ಮತದಾರರು ಟೆಂಡರ್ಡ್ ವೋಟ್ ಮಾಡಿದ್ದಾರೆ.

ಟೆಂಡರ್ ಮತ ಚಲಾವಣೆ ಆಗಿರುವುದು ಕೇವಲ ನೂರು ಸಂಖ್ಯೆಯಲ್ಲಿರಬಹುದು. ಯಾರಿಗೆ ಟೆಂಡರ್ಡ್ ವೋಟ್ ಕುರಿತು ಮಾಹಿತಿ ಇದೆಯೋ ಅವರು ಮಾಡಿರುತ್ತಾರೆ. ಆದರೆ ಅದೆಷ್ಟು ಜನರು ತಮ್ಮ ಮತವನ್ನು ಬೇರೆ ಯಾರೊ ಹಾಕಿದ್ದಾರೆ ಎಂದು ಸುಮ್ಮನೆ ತೆರಳಿದ್ದಾರೊ? ಬೇರೆ ಊರಿಗೆ ತೆರಳಿರುವವರು, ಸತ್ತು ಹೋಗಿರುವವರು, ಅನಾರೋಗ್ಯಪೀಡಿತರಾಗಿರುವವರ ಮತವನ್ನು ಎಷ್ಟು ಚಲಾವಣೆ ಮಾಡಲಾಗಿದೆಯೋ ಗೊತ್ತಿಲ್ಲ. ಎರಡೆರಡು ಕಡೆ ಮತ ಹೊಂದಿರುವವರು, ಚುನಾವಣೆ ದಿನ ಮನೆಯಲ್ಲೇ ಇರುವವರ ಮತಗಳೂ ಹೀಗೆಯೇ ಚಲಾವಣೆ ಆಗಿರಬಹುದು.

ಎಲ್ಲಕ್ಕಿಂತ ತಮಾಷೆಯೆಂದರೆ ಟೆಂಡರ್ಡ್ ವೋಟ್‌ಗಳನ್ನು ಕೇವಲ ಮತದಾರರು ʼಸಮಾಧಾನಕ್ಕೆʼ ಮಾಡಿಸಲಾಗುತ್ತದೆ. ಬಹುತೇಕ ಸಂದರ್ಭಗಳಲ್ಲಿ ಇವುಗಳನ್ನು ಕೌಂಟ್ ಮಾಡುವುದೇ ಇಲ್ಲ. ಹಾಗೇನಾದರೂ ಚುನಾವಣೆಯಲ್ಲಿ ಗೆದ್ದ ಎಭ್ಯರ್ಥಿಯ ಗೆಲುವಿನ ಅಂತರ, ಟೆಂಡರ್ಡ್ ಮತಕ್ಕಿಂತ ಕಡಿಮೆ ಇದ್ದರೆ ಇವುಗಳನ್ನು ಓಪನ್ ಮಾಡಿ ಎಣಿಸಬಹುದು. ಇಲ್ಲದಿದ್ದರೆ ಅದೂ ಇಲ್ಲ. ಈ ವಿಚಾರವಾಗಿ ಗೋವಾದ ಡಾ. ವಿಲ್‌ಫ್ರೆಡ್ ಡಿಸೋಜಾ, ರಾಜಸ್ಥಾನದ ಕಲ್ಯಾಣ್ ಸಿಂಗ್ ಚೌಹಾಣ್ ಮುಂತಾದವರು ಕೋರ್ಟ್ ಮೆಟ್ಟಿಲನ್ನೂ ಹತ್ತಿದ್ದಾರೆ. ಕೇವಲ ಒಂದು ಹಾಗೂ ಎರಡು ಮತಗಳಿಂದ ಸೋಲುಂಡಿದ್ದ ಇವರ ಕ್ಷೇತ್ರಗಳಲ್ಲಿ 10-12 ಟೆಂಡರ್ಡ್ ಮತಗಳು ಚಲಾವಣೆಯಾಗಿದ್ದವು. ಅವನ್ನು ಎಣಿಸಿ ಫಲಿತಾಂಶ ಘೋಷಣೆ ಮಾಡಬೇಕು ಎನ್ನುವುದು ಇವರ ವಾದ. ಇಂತಹ ಪ್ರಕರಣಗಳಲ್ಲಿ ಕೆಲವೊಮ್ಮೆ ಅರ್ಜಿದಾರರ ಪರವಾಗಿ, ಕೆಲವೊಮ್ಮೆ ವಿರುದ್ಧವಾಗಿ ತೀರ್ಪು ಬಂದಿದೆ. ಆದರೆ ಅಷ್ಟರ ವೇಳೆಗೆ ಸಾಕಷ್ಟು ಕಾಲ ಮಿಂಚಿರುತ್ತದೆ.

ಆಗಲೇ ಹೇಳಿದಂತೆ, ಟೆಂಡರ್ಡ್ ಓಟ್ ಎನ್ನುವುದು ಕೇವಲ ಸ್ಯಾಂಪಲ್. ಯಾರಿಗೂ ಗೊತ್ತಾಗದಂತೆ ಎಷ್ಟು ಕಳ್ಳ ಓಟುಗಳು ಚಲಾವಣೆ ಆಗಿರುತ್ತವೆಯೋ ಗೊತ್ತಿಲ್ಲ. Every Vote Counts ಎಂದು ಚುನಾವಣಾ ಆಯೋಗ ಹೇಳುತ್ತದೆ. ಕಳ್ಳ ಮತದಾನ ತಪ್ಪಿಸಲು ಕಡ್ಡಾಯ ಗುರುತಿನ ಚೀಟಿ, ಮತದಾರರು ಪಟ್ಟಿಯಲ್ಲೂ ಗುರುತಿನ ಚೀಟಿಯನ್ನು ಕಡ್ಡಾಯ ಮಾಡಿದೆ. ಇಷ್ಟೆಲ್ಲದರ ನಂತರವೂ ನೂರಾರು ಸಂಖ್ಯೆಯಲ್ಲಿ ಬೇರೆಯವರು ಹೇಗೆ ಮತ ಚಲಾಯಿಸುತ್ತಾರೆ? ಎನ್ನುವುದೇ ಸೋಜಿಗದ ಹಾಗೂ ಬೇಸರದ ಸಂಗತಿ. ಪ್ರಜಾಪ್ರಭುತ್ವ ವ್ಯವಸ್ಥೆಯ ಅತ್ಯಂತ ಪ್ರಮುಖ ಘಟ್ಟವಾದ ಚುನಾವಣೆಯಲ್ಲಿ ಒಬ್ಬ ಮತದಾರನ ಹಕ್ಕನ್ನು ಬೇರೆಯವರು ಕಸಿಯಲು ಅವಕಾಶವಿರುವ ವ್ಯವಸ್ಥೆಯನ್ನು ಚುನಾವಣಾ ಆಯೋಗ ಸರಿಪಡಿಸಬೇಕು ಎನ್ನುವುದು ಒಂದು ಪರಿಹಾರ. ಈ ರೀತಿ ನಮ್ಮ ಮತಗಳನ್ನು ಬೇರೆಯವರು ಚಲಾಯಿಸದಂತೆ, ನಾವೇ ಮತಗಟ್ಟೆಗೆ ತೆರಳಿ ಮತ ಚಲಾಯಿಸುವುದು ನಿಜವಾದ ಹಾಗೂ ಉತ್ತಮ ಪರಿಹಾರ.

– ೦ – ೦ – ೦ – ೦ – ೦ –

2018ರಲ್ಲಿ ಕಳೆದು ಹೋಗಿದ್ದ ಮೋದಿ ನಂಜನಗೂಡಲ್ಲಿ ಸಿಕ್ಕರು !

ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಯಾವುದೇ ಮಾಸ್‌ ಲೀಡರ್‌ಗಳು ಜನರ ಜತೆಗೆ ಐ ಟು ಐ ಕಾಂಟ್ಯಾಕ್ಡ್ ಬೆಳೆಸಿಕೊಳ್ಳುತ್ತಾರೆ. ಸಮಾವೇಶದಲ್ಲಿ ಲಕ್ಷಾಂತರ ಜನರೇ ಸೇರಿದ್ದರೂ ಈ ಮಾತನ್ನು ತನಗೇ ಹೇಳುತ್ತಿದ್ದಾರೆ ಎನ್ನುವಂತೆ ಭಾಸವಾಗುತ್ತದೆ.

2018ರ ವಿಧಾನಸಭೆ ಚುನಾವಣೆಯಲ್ಲಿ ನರೇಂದ್ರ ಮೋದಿಯವರ ಅಂತಹ ಅನೇಕ ಕಾರ್ಯಕ್ರಮಗಳನ್ನು ನೋಡಲು ಸಿಕ್ಕಿದ್ದವು. ಜನರನ್ನು ಅಕ್ಷರಶಃ ಕುಣಿಸಿ ಮೋದಿಯೂ ಕುಣಿದಿದ್ದರು. ಮೋದಿ ಮಾತಿನ ವೇಗ ಹೆಚ್ಚಿದಂತೆ ಜನರ ಹೃದಯದ ಬಡಿತವೂ ಅದಕ್ಕೆ ಹೊಂದಿಕೊಳ್ಳುತ್ತ ಅದೊಂದು ರೀತಿಯ ಭಾವಾವೇಷದ ಹಂತವನ್ನು ತಲುಪಿಸಿಬಿಡುತ್ತಿದ್ದರು. ಆದರೆ ಅದ್ಯಾಕೊ ಈ ಬಾರಿ 2023ರ ವಿಧಾನಸಭೆ ಪ್ರಚಾರಗಳ ಮೋದಿ ಭಾಷಣಗಳಲ್ಲಿ ಆ ಭಾವನೆ ಕಂಡಿರಲಿಲ್ಲ. ಸುಮಾರು 30 ಕಾರ್ಯಕ್ರಮಗಳಲ್ಲಿ ಈ ಬಾರಿ ಮೋದಿ ಭಾಷಣ ಮಾಡಿದ್ದಾರೆ. ದಕ್ಷಿಣ ಕನ್ನಡದಲ್ಲಿ ನಡೆದ ಕಾರ್ಯಕ್ರಮ ಸ್ವಲ್ಪ ಮಟ್ಟಿಗೆ ಪರವಾಗಿರಲಿಲ್ಲ. ಅದು ಬಿಟ್ಟರೆ ಉಳಿದೆಡೆಯೆಲ್ಲೂ ಮೋದಿ ತೆರೆದುಕೊಳ್ಳಲೇ ಇಲ್ಲ.

ಭಾನುವಾರ ನಂಜನಗೂಡಿನಲ್ಲಿ ನಡೆದ ಕೊನೆಯ ಕಾರ್ಯಕ್ರಮದಲ್ಲಿ 2018ರ ಮೋದಿ ಮತ್ತೆ ಕಂಡರು. ಹೈ ಪಿಚ್‌ನಲ್ಲಿ ಜೋರಾಗಿ ಮಾತಾಡುತ್ತಿದ್ದವರು ಇದ್ದಕ್ಕಿದ್ದಂತೆ ಎರಡು ಸೆಕೆಂಡ್ ಫ್ರೀಜ್ ಆಗಿ ಬೇಸ್ ವಾಯ್ಸ್‌ಗೆ ಬಂದಾಗಲೇ ಅವರ ನಿಜವಾದ ಭಾಷಣ ಕಂಡಿತು. ಭಾಷಣದ ಕೊನೆಗಂತೂ ಜನರು ಹಾಗೂ ಮೋದಿ ಒಂದೇ ಆಗಿಬಿಟ್ಟರು. ಅಷ್ಟಾಗಿ ಹಿಂದಿ ಅರ್ಥ ಆಗದ ಪ್ರದೇಶದಲ್ಲೂ ಜನರ ಭಾವನೆಗಳು ಮೋದಿ ಜತೆಗೆ ಬೆರೆತವು. ಇಲ್ಲಿವರೆಗೆ ನಡೆದ 29 ಕಾರ್ಯಕ್ರಮಗಳ ತೂಕವೇ ಒಂದು, ನಂಜನಗೂಡಿನ ಕಾರ್ಯಕ್ರಮದ ತೂಕವೇ ಒಂದು.
ಚುನಾವಣೆಯಲ್ಲಿ ಯಾವುದೋ ಪಕ್ಷ ಗೆಲ್ಲುತ್ತದೆ, ಯಾವುದೋ ಸೋಲುತ್ತದೆ. ಆದರೆ ಇಂತಹ ವಿಚಾರಗಳೇ ಒಟ್ಟಾರೆ ಚುನಾವಣೆಯನ್ನು ರಂಗೇರಿಸುವುದು, ಪ್ರಜಾಪ್ರಭುತ್ವದ ಜಾತ್ರೆ ಆಗಿಸುವುದು. ಹಾಗೆಯೇ, 2018ರಲ್ಲಿ ಕಂಡ ಉರಿ ಕೆಂಡದ ಸಿದ್ದರಾಮಯ್ಯ ಸಹ ಈ ಬಾರಿ‌ ಅದ್ಯಾಕೊ ಕಾಣಲೇ ಇಲ್ಲ. ಬೆಂಗಳೂರಿನಲ್ಲಿ ಇಂದಿರಾ ಕ್ಯಾಂಟೀನ್ ಉದ್ಘಾಟನೆಗೆ ಅಂದು ರಾಹುಲ್ ಗಾಂಧಿ ಆಗಮಿಸಿದ್ದರು. ಸಾಮಾನ್ಯವಾಗಿ ರಾಜಕೀಯ ಕಾರ್ಯಕ್ರಮಗಳಲ್ಲಿ ರಝ್ಯ ನಾಯಕರೆಲ್ಲರೂ ಮಾತನಾಡಿ ಕೊನೆಗೆ ಕೇಂದ್ರ ನಾಯಕರ ಭಾಷಣ ಇರುತ್ತದೆ. ಆದರೆ ಸಿದ್ದರಾಮಯ್ಯ ಭಾಷಣಗಳು ಎಷ್ಟು ಆಕರ್ಷಿತವಾಗಿರುತ್ತಿದ್ದವು ಎಂದರೆ ಅಂದು ನ್ಯಾಷನಲ್ ಕಾಲೇಜು ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಹುಲ್ ಗಾಂಧಿ ಭಾಷಣವನ್ನು ಮೊದಲಿಗೇ ಮುಗಿಸಲಾಯಿತು. ಜನರನ್ನು ಹಿಡಿದಿಟ್ಟುಕೊಳ್ಳಬೇಕು ಎಂಬ ಕಾರಣಕ್ಕೆ ಸಿದ್ದರಾಮಯ್ಯ ಭಾಷಣವನ್ನು ಕೊನೆಗೆ ಆಯೋಜಿಸಲಾಗಿತ್ತು. ಈ ಬಾರಿ ಅದೇಕೊ ಸಿದ್ದರಾಮಯ್ಯ ಭಾಷಣಗಳು ಆ ರೀತಿ ಇರಲಿಲ್ಲ. ಇದನ್ನು ಮೆತ್ತಗಾಗಿದ್ದಾರೆ ಎನ್ನಬೇಕೊ ಆಗಿಗಿಂತ ಮೆಚ್ಯೂರ್ ಆಗಿದ್ದಾರೆ ಎನ್ನಬೇಕೊ ತಿಳಿಯದು.

ಅಚ್ಚರಿಯ ವಿಷಯ ಎಂದರೆ, ಕೆಲ ತಿಂಗಳ ಹಿಂದಷ್ಟೆ ಬಹುತೇಕ ಹಾಸಿಗೆ ಹಿಡಿದಿದ್ದ ಮಾಜಿ ಪ್ರಧಾನಿ ದೇವೇಗೌಡರು ರೋಡ್ ಶೋ ನಡೆಸಿಬಿಟ್ಟರು. ಮೈಸೂರಿನಲ್ಲಿ ನಡೆದ ಪಂಚರತ್ನ ಸಮಾರೋಪ ಕಾರ್ಯಕ್ರಮದಲ್ಲಿ ದೇವೇಗೌಡರನ್ನು ವೀಲ್ ಚೇರ್ನಲ್ಲೇ ಕರೆತಂದು ಟ್ರಾಲಿ ಮೂಲಕ ʼರ‍್ಯಾಂಪ್‌ ವಾಕ್ʼ ಮಾಡಿಸಲಾಗಿತ್ತು. ಆದರೆ ಚುನಾವಣೆ ಹತ್ತಿರವಾಗುತ್ತಿರುವಂತೆಯೇ ಅವರ ಮಾತು ಎರಡು ವರ್ಷ ಹಿಂದಿಗಿಂತಲೂ ಈಗ ಸ್ಪಷ್ಟವಾಗಿದೆ. ಈ ಮಾಸ್ ಲೀಡರ್‌ಗಳ ಪ್ರಾಣ (ಅಂದರೆ ಎನರ್ಜಿ) ಜನರ ಸ್ಪಂದನೆಯಲ್ಲಿ, ಜನರ ನಡುವೆಯೇ ಇರುತ್ತದೆ. ಜನರಿಂದ ದೂರ ಆಗಿಬಿಟ್ಟರೆ ಆರೋಗ್ಯ ಕೆಡುತ್ತದೆ. ಚುನಾವಣೆ ಬಂದ ತಕ್ಷಣ ನವಯುವಕರಾಗಿಬಿಡುತ್ತಾರೆ.

ಇದನ್ನೂ ಓದಿ: D ಕೋಡ್‌ ಅಂಕಣ: ರಾಹುಲ್‌ ಗಾಂಧಿ ವಿರುದ್ಧ ನರೇಂದ್ರ ಮೋದಿ ನಿರಂತರ ವಾಗ್ದಾಳಿ ನಡೆಸಲು ಏನು ಕಾರಣ?

Exit mobile version