Site icon Vistara News

D ಕೋಡ್ ಅಂಕಣ: ಬಿಜೆಪಿಗೆ ಲಿಂಗಾಯತ ಮತಗಳು ನಷ್ಟವಾಗಿಲ್ಲ ಎನ್ನುವುದು ಎಷ್ಟು ಸುಳ್ಳು? ಮೀಸಲು ಜೇನು ಕಚ್ಚಿದ್ದೆಷ್ಟು?

d Code Column How much lingayath votes bjp lossed

#image_title

ವಿಧಾನಸಭೆ ಚುನಾವಣೆ ಮುಗಿದಿದೆ, ಜನರು ಅತಂತ್ರ ಸರ್ಕಾರಕ್ಕೆ ಆಸ್ಪದವಿಲ್ಲದೆ ಸಂಪೂರ್ಣ ಬಹುಮತವನ್ನು ಕಾಂಗ್ರೆಸ್‌ಗೆ ನೀಡಿದ್ದಾರೆ. ಯಾವುದೇ ಪಕ್ಷವಾದರೂ ಸರಿ ಸಂಪೂರ್ಣ ಬಹುಮತ ಬರಬೇಕು ಎಂಬ ನಾಡಿನ ಜನರ ಆಶಯಕ್ಕೆ ಅನುಗುಣವಾಗಿ ಫಲಿತಾಂಶ ಬಂದಿದೆ. ಆಪರೇಷನ್ನುಗಳು, ರೆಸಾರ್ಟ್‌ಗಳ ಅಸಹ್ಯವಿಲ್ಲದಂತೆ ಮಾಡಿರುವ ನಮಗೆ (ಮತದಾರರಿಗೆ) ಒಂದು ಅಭಿನಂದನೆಯನ್ನು ಹೇಳಿಕೊಳ್ಳಬಹುದು.
ಈ ನಡುವೆ ಬಿಜೆಪಿಯ ಅನಿರೀಕ್ಷಿತ, ಹೀನಾಯ ಸೋಲಿಗೆ ಸಾಮಾಜಿಕ ಜಾಲತಾಣಗಳಲ್ಲಿ ಯಥೇಚ್ಚ ವಿಶ್ಲೇಷಣೆಗಳು ಆಗಿಹೋಗಿವೆ. ಅವುಗಳಲ್ಲಿ ಇಲ್ಲದ ಯಾವುದೇ ಕಾರಣ ಬಹುಶಃ ಇರಲಾರದು. ಬಿಜೆಪಿ ಸೋಲಲು ಸಾಮಾಜಿಕ ಜಾಲತಾಣಗಳಲ್ಲಿ ಬಿಜೆಪಿ ಬೆಂಬಲಿಗರು ಹಾಗೂ ಕಾರ್ಯಕರ್ತರು ನೀಡಿರುವ ಕಾರಣಗಳನ್ನು ಪಟ್ಟಿ ಮಾಡಿದರೂ ಸಾಕು ಬಿಜೆಪಿಯ ಆತ್ಮಾವಲೋಕನ ವರದಿ ಸಿದ್ಧವಾಗಿಬಿಡುತ್ತದೆ. ಹಾಗಾಗಿ ನಾನು ಮತ್ತೆ ಅದನ್ನು ವಿಶ್ಲೇಷಿಸುವ ಧೈರ್ಯ ತೋರುವುದಿಲ್ಲ. ಆದರೆ ಒಂದು ವಾದ ಹೆಚ್ಚು ಚರ್ಚೆ ಆಗುತ್ತಿದೆ, ಅದರ ಬಗ್ಗೆ ಗಮನ ಹರಿಸಬಹುದು.

ಅದೆಂದರೆ, ಬಿಜೆಪಿ ಈ ಬಾರಿ ಅತಿ ಹೆಚ್ಚು ಸ್ಥಾನಗಳನ್ನು ಕಳೆದುಕೊಂಡಿದೆಯಾದರೂ ಅದು ತನ್ನ ಮತವನ್ನು ಹಾಗೆಯೇ ಉಳಿಸಿಕೊಂಡಿದೆ. 2018ರ ಹೋಲಿಕೆಯಲ್ಲಿ ಅತಿ ನಗಣ್ಯ ಎನ್ನಬಹುದಾದ ಶೇ.0.22 ಮತ ನಷ್ಟವಾಗಿದೆ. ಜೆಡಿಎಸ್‌ನಿಂದ ಕಾಂಗ್ರೆಸ್ ಮತಗಳನ್ನು ಕಸಿದುಕೊಂಡಿದೆ, ಹಾಗಾಗಿ ಕಾಂಗ್ರೆಸ್ ಶೇ.4.84 ಮತ ಹೆಚ್ಚಿಸಿಕೊಂಡಿದೆ. ಹಾಗಾಗಿ ಬಿಜೆಪಿಗೆ ಹಿನ್ನಡೆಯಾಗಿಲ್ಲ. ಹಾಗೂ ಬಿಜೆಪಿ ಬಳಿ ಇದ್ದ ವೀರಶೈವ ಲಿಂಗಾಯತ ಮತಗಳು ಎಲ್ಲೂ ಹೋಗಿಲ್ಲ, ಮುಸ್ಲಿಂ ಮತಗಳ ಕ್ರೋಢೀಕರಣದಿಂದ ಮಾತ್ರವೇ ಕಾಂಗ್ರೆಸ್ ಗೆದ್ದಿದೆ ಎಂಬ ವಾದವನ್ನು ಅನೇಕರು ಮುಂದಿಡುತ್ತಿದ್ದಾರೆ. ಒಟ್ಟಾರೆ ಅಂಕಿ ಅಂಶಗಳನ್ನು ಮೇಲ್ನೋಟಕ್ಕೆ ನೋಡಿದರೆ ಇದು ಹೌದು ಎನ್ನಿಸುತ್ತದೆ. ಬಿಜೆಪಿ ಬೆಂಬಲಿಗರು ಸಮಾಧಾನಪಟ್ಟುಕೊಳ್ಳಲು ಈ ಅಂಶಗಳು ಸಹಾಯ ಮಾಡುತ್ತವೆ. ಆದರೆ ಸ್ವಲ್ಪ ಕೆಳಗಿಳಿದು ನೋಡಿದರೆ ಸ್ಥಿತಿ ಬೇರೆಯೇ ಇದೆ.

224 ಕ್ಷೇತ್ರಗಳಲ್ಲಿ ಎಸ್‌ಸಿಎಸ್‌ಟಿ ಹೊರತಾಗಿ ಇತರೆ ಜಾತಿಗಳ ಅಧಿಕೃತ ಲೆಕ್ಕಗಳು ಸಿಗುವುದಿಲ್ಲ. ರಾಜಕೀಯ ಪಕ್ಷಗಳು ಹಾಗೂ ಸಾಮಾಜಿಕ ಸಂಘಟನೆಗಳು ತಮ್ಮ ಅನುಕೂಲಕ್ಕೆ ಜಾತಿಗಳ ಸಂಖ್ಯೆಯನ್ನು ಹೊಂದಿರುತ್ತವೆ. ಈ ಸಂಖ್ಯೆಗಳು ಒಬ್ಬರಿಂದ ಒಬ್ಬರಿಗೆ ವ್ಯತ್ಯಾಸವಾಗುತ್ತವೆ. ಆದರೆ ಆ ಕ್ಷೇತ್ರದಲ್ಲಿ ಯಾವ ಸಮುದಾಯ ಹೆಚ್ಚಿದೆ, ಯಾವುದು ಕಡಿಮೆ ಇದೆ ಎನ್ನುವ ಬ್ರೇಕಪ್ ಅಂತೂ ಸಿಗುತ್ತದೆ. ಜಾತಿ ಪ್ರಾಬಲ್ಯದ ಆಧಾರದಲ್ಲಿ ಬಿಜೆಪಿ, ಕಾಂಗ್ರೆಸ್‌ ಎಷ್ಟು ಸೀಟು ಪಡೆದಿವೆ ಎಂದು ನೋಡುವ ಪ್ರಯತ್ನ ಮಾಡಲಾಗಿದೆ. ಎಲ್ಲ ಕ್ಷೇತ್ರಗಳ ಅಂಕಿ ಅಂಶ ದಾಖಲಿಸುವ ಕೆಲಸ ಇನ್ನೂ ಮುಗಿದಿಲ್ಲವಾದ್ಧರಿಂದ, ರ‍್ಯಾಂಡಮ್‌ ಆಗಿ 76 (ಮೂರನೇ ಒಂದು ಭಾಗ) ಕ್ಷೇತ್ರಗಳ ಜಾತಿ ಲೆಕ್ಕಾಚಾರವನ್ನು ಸಣ್ಣ ‘ಸಂಶೋಧನೆ’ ಮಾಡಲಾಗಿದೆ. ಇದರ ಆಧಾರದಲ್ಲಿ ಫಲಿತಾಂಶ ನೀಡಲಾಗಿದೆ. ಎಲ್ಲ 224ಕ್ಷೇತ್ರಗಳ ಲೆಕ್ಕ ಮಾಡಿದರೆ ಇನ್ನಷ್ಟು ಸ್ಪಷ್ಟ ಚಿತ್ರಣ ಸಿಗಬಹುದು.

ನಾನು ಆಯ್ಕೆ ಮಾಡಿಕೊಂಡಿರುವ 76 ಕ್ಷೇತ್ರಗಳಲ್ಲಿ 33 ವೀರಶೈವ ಲಿಂಗಾಯತ ಸಮುದಾಯದ ಪ್ರಾಬಲ್ಯ ಹೊಂದಿವೆ. 2018ರ ಚುನಾವಣೆಯಲ್ಲಿ ಈ ಕ್ಷೇತ್ರಗಳಲ್ಲಿ ಬಿಜೆಪಿ 20 ಶಾಸಕರನ್ನು ಹೊಂದಿತ್ತು. ಆದರೆ 2023ರ ಚುನಾವಣೆಯಲ್ಲಿ 9 ಸ್ಥಾನ ಕಳೆದುಕೊಂಡು 11ಕ್ಕೆ ಇಳಿದಿದೆ. ಅದೇ ಕಾಂಗ್ರೆಸ್‌ ಈ 33 ಕ್ಷೇತ್ರಗಳಲ್ಲಿ 2018ರಲ್ಲಿ 11 ಸ್ಥಾನಗಳನ್ನು ಹೊಂದಿತ್ತು, ಈಗ 21 ಸ್ಥಾನ ಗಳಿಸಿದೆ. ಒಟ್ಟಾರೆ 33ರಲ್ಲಿ ಈ ಬಾರಿ ಕಾಂಗ್ರೆಸ್‌ 21 ಹಾಗೂ ಬಿಜೆಪಿ 11 ಸ್ಥಾನ ಗಳಿಸಿದೆ. ಅಂದರೆ ಲಿಂಗಾಯತ ಮತದಾರರು ಬಿಜೆಪಿಯಿಂದ ನೇರವಾಗಿ ಕಾಂಗ್ರೆಸ್‌ಗೆ ವರ್ಗಾವಣೆ ಆಗಿದ್ದಾರೆ.

ಕಾಂಗ್ರೆಸ್‌ 2004ರಿಂದಲೂ ಮತಗಳಿಕೆಯಲ್ಲಿ ಸ್ಥಿರತೆ ಕಾಯ್ದುಕೊಂಡಿದೆ. ಪಡೆಯುವ ಸ್ಥಾನಗಳಲ್ಲಿ ಹೆಚ್ಚು ಕಡಿಮೆ ಆದರೂ ಮತ ಪ್ರಮಾಣ ಮಾತ್ರ ಶೇ.35ರ ಆಸುಪಾಸಿನಲ್ಲೇ ಹೊಯ್ದಾಡುತ್ತಾ ಇತ್ತು. ಆದರೆ ಈ ಬಾರಿ ಶೇ.5 ಹೆಚ್ಚಳ ದಾಖಲಿಸಲು ಮಹತ್ವದ ಬದಲಾವಣೆ ಆಗಿರಲೇಬೇಕು. ಕಾಂಗ್ರೆಸ್‌ ಕಡೆಗೆ ಜನಸಾಮಾನ್ಯರು ಈ ಪ್ರಮಾಣದಲ್ಲಿ ವಲಸೆ ಹೋಗಲು ಮೇಲ್ನೋಟಕ್ಕೆ ಯಾವುದೇ ಅಲೆಗಳು ಈ ಚುನಾವಣೆಯಲ್ಲಿ ಇರಲಿಲ್ಲ. ಬಿಜೆಪಿ ಮಾಡಿಕೊಂಡ ಸಾಲು ಸಾಲು ಯಡವಟ್ಟುಗಳಿಂದಾಗಿ ಸಿಟ್ಟಾದ ಸಂಘಟಿತ ವೀರಶೈವ ಲಿಂಗಾಯತ ಸಮುದಾಯದ ಒಂದಷ್ಟು ಭಾಗ ನೇರವಾಗಿ ಕಾಂಗ್ರೆಸ್‌ ಕಡೆಗೆ ವಾಲಿದೆ. ಯಾವುದೇ ಅಂಕಿ ಅಂಶ ಇಲ್ಲದೆಯೂ, ಸಿ.ಟಿ. ರವಿ, ವಿ. ಸೋಮಣ್ಣ, ಎಂ.ಪಿ. ರೇಣುಕಾಚಾರ್ಯ ಸೋತಿರುವುದನ್ನು ನೋಡಿದರೂ ಲಿಂಗಾಯತ ಮತಗಳ ಪ್ರಭಾವ ನೀಟಾಗಿ ಕಾಣುತ್ತದೆ.

ಈ ಹಿಂದೆ ಜನತಾ ಪಕ್ಷದಿಂದ ರಾಮಕೃಷ್ಣ ಹೆಗಡೆ ಮೂಲಕ ಬಿಜೆಪಿಗೆ ಆಗಮಿಸಿದ್ದ ಈ ಸಮುದಾಯ ಇದೀಗ ಒಂದು ಹೆಜ್ಜೆ ಹೊರಗೆ ಇಟ್ಟಿರುವುದು ಸ್ಪಷ್ಟ. ಹಾಗೇನಾದರೂ ಈ ವಿದ್ಯಮಾನಕ್ಕೆ ಬ್ರೇಕ್‌ ಹಾಕಲು ಬಿಜೆಪಿ ಯಾವುದೇ ಕ್ರಮ ಕೈಗೊಳ್ಳದೆ, ನಮಗೆ ಮತ ನಷ್ಟವೇ ಆಗಿಲ್ಲ ಎಂಬ ಆಲೋಚನೆಯಲ್ಲೇ ಇದ್ದರೆ ಮನಸ್ಸಿಗೆ ಸಮಾಧಾನ ಸಿಗಬಹುದು ಅಷ್ಟೆ. ಭವಿಷ್ಯದಲ್ಲಿ ಮತ್ತಷ್ಟು ಕಷ್ಟವಾಗಲಿದೆ.

ಇನ್ನು, ಒಕ್ಕಲಿಗ ಮತ ಗಳಿಕೆಯಲ್ಲೂ ಕಾಂಗ್ರೆಸ್‌ ಸ್ಪಷ್ಟ ಮುನ್ನಡೆ ಸಾಧಿಸಿದೆ. ನಾನಿಲ್ಲಿ ಲೆಕ್ಕ ಮಾಡಲು ಆಯ್ದುಕೊಂಡಿರುವ 76 ಕ್ಷೇತ್ರಗಳಲ್ಲಿ 17 ಕ್ಷೇತ್ರಗಳು ಒಕ್ಕಲಿಗ ಪ್ರಾಬಲ್ಯ ಹೊಂದಿವೆ. ಈ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ 2018ರಲ್ಲಿ 3ಸ್ಥಾನ ಗಳಿಸಿದ್ದು ಈಗ 7 ಪಡೆದಿದೆ. ಜೆಡಿಎಸ್‌ 12 ಇದ್ದದ್ದು 6, ಬಿಜೆಪಿ 2 ಇದ್ದದ್ದು 3 ಆಗಿದೆ. ಲಿಂಗಾಯತ ಪ್ರಾಬಲ್ಯದ ಪ್ರದೇಶಗಳಲ್ಲಿ ನೇರವಾಗಿ ಬಿಜೆಪಿಯಿಂದ, ಒಕ್ಕಲಿಗ ಪ್ರದೇಶಗಳಲ್ಲಿ ನೇರವಾಗಿ ಜೆಡಿಎಸ್‌ನಿಂದ ಮತಗಳನ್ನು ಕಾಂಗ್ರೆಸ್‌ ಪಡೆದಿರುವುದು ಸ್ಪಷ್ಟವಾಗಿ ಕಾಣುತ್ತದೆ.

ಎಸ್‌ಸಿಎಸ್‌ಟಿ ಕ್ಷೇತ್ರಗಳಲ್ಲಿ ಏಕೆ ಹಿನ್ನಡೆ?
ಎಸ್‌ಸಿಎಸ್‌ಟಿ ಸಮುದಾಯ ಚುನಾವಣೆಯಲ್ಲಿ ಸಗಟಾಗಿ ಬಿಜೆಪಿ ಬೆನ್ನಿಗೆ ನಿಲ್ಲುವುದಿಲ್ಲ. ಎಸ್‌ಸಿ ಸಮುದಾಯದ ಎಡಗೈ, ಬಂಜಾರ ಹಾಗೂ ಎಸ್‌ಟಿ ಸಮುದಾಯದ ಸಾಕಷ್ಟು ಪ್ರಮಾಣ ಅಲ್ಲಲ್ಲಿ ಬಿಜೆಪಿ ಬೆಂಬಲಕ್ಕೆ ಇದ್ದವು. ಈ ಬಾರಿ ಎಸ್‌ಸಿಎಸ್‌ಟಿ ಸಮುದಾಯದ ಮತವನ್ನು ಹೆಚ್ಚು ಪಡೆಯುವ ಉದ್ದೇಶದಿಂದ (ಬಿಜೆಪಿ ಪ್ರಕಾರ, ಸಾಮಾಜಿಕ ಸಮಾನತೆಯನ್ನು ನೀಡುವ ಕಾಳಜಿಯಿಂದ) ಮೀಸಲಾತಿ ಪ್ರಮಾಣವನ್ನು 2011ರ ಜನಗಣತಿಗೆ ಅನುಗುಣವಾಗಿ ಹೆಚ್ಚಳ ಮಾಡಲಾಯಿತು. ಇದರ ಜತೆಗೆ ಎಸ್‌ಸಿ ಒಳ ಮೀಸಲಾತಿ ನೀಡುವ ಪ್ರಯತ್ನವನ್ನೂ ಮಾಡಿತು. ಇದರಿಂದ ದಲಿತ ಸಮುದಾಯಕ್ಕೆ ನ್ಯಾಯ ನೀಡಲಾಗಿದೆ. ಜೇನುಗೂಡಿಗೆ ಕೈ ಹಾಕಿ ಜೇನಿನ ಸವಿಯನ್ನು ಸಮುದಾಯಗಳಿಗೆ ನೀಡಿದ್ದೇವೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಭಾಷಣಗಳಲ್ಲಿ ಹೇಳುತ್ತಿದ್ದರು. ಜೇನನ್ನು ಸಮುದಾಯಕ್ಕೆ ನೀಡುವಾಗ, ಕೈಗೆ ಅಂಟಿರುವ ಸಣ್ಣ ಪ್ರಮಾಣದ ಜೇನುತುಪ್ಪವಾದರೂ ಚುನಾವಣೆಯಲ್ಲಿ ತನಗೆ ಸಿಗುತ್ತದೆ ಎಂದು ಬಿಜೆಪಿ ಭಾವಿಸಿತ್ತು. ಆದರೆ ಈಗ ನೋಡಿದರೆ ಜೇನು ನೊಣಗಳಿಂದ ಕಚ್ಚಿಸಿಕೊಂಡಿರುವುದೇ ಕಾಣುತ್ತಿದೆ.‌

ಎಸ್‌ಸಿಎಸ್‌ಟಿ ಸಮುದಾಯಕ್ಕೆ ವಿಧಾನಸಭಾ ಕ್ಷೇತ್ರಗಳಲ್ಲಿ ಮೀಸಲಾತಿ ನೀಡಲಾಗಿದೆ. ಇದರಲ್ಲಿ ಎಸ್‌ಸಿ ಸಮುದಾಯಕ್ಕೆ 36 ಹಾಗೂ ಎಸ್‌ಟಿ ಸಮುದಾಯಕ್ಕೆ 15 ಕ್ಷೇತ್ರಗಳಿವೆ. ಅವುಗಳಲ್ಲಿ 2018ರಲ್ಲಿ ಹಾಗೂ 2023ರಲ್ಲಿ ಫಲಿತಾಂಶ ನೋಡಿದರೆ ಸ್ಪಷ್ಟವಾಗಿ ಬಿಜೆಪಿ ಕಳೆದುಕೊಂಡಿರುವುದು ಕಾಣುತ್ತದೆ.

ಕೇವಲ ಎಸ್‌ಸಿಎಸ್‌ಟಿ ಮೀಸಲು ಕ್ಷೇತ್ರಗಳನ್ನು ನೋಡಿದರೆ ಇಡೀ ಸಮುದಾಯದ ಭಾವನೆಯನ್ನು ಅದು ಹೇಳುವುದಿಲ್ಲ. ಏಕೆಂದರೆ ಅನೇಕ ಮೀಸಲು ಕ್ಷೇತ್ರಗಳಲ್ಲಿ ಇತರೆ ಸಮುದಾಯವೇ ಹೆಚ್ಚು ಜನಸಂಖ್ಯೆ ಹೊಂದಿರುತ್ತದೆ. ಎಸ್‌ಸಿಎಸ್‌ಟಿ ಸಮುದಾಯ ಹೆಚ್ಚಿನ ಸಂಖ್ಯೆಯಲ್ಲಿರುವ ಅನೇಕ ಕ್ಷೇತ್ರಗಳು ಸಾಮಾನ್ಯ ಕ್ಷೇತ್ರವಾಗಿವೆ. ಜನಸಂಖ್ಯೆಯಲ್ಲಿ ಎಸ್‌ಸಿಎಸ್‌ಟಿ ಸಮುದಾಯವೇ ಮುಂದಿರುವ ಕ್ಷೇತ್ರಗಳನ್ನು ನೋಡಿದರೆ ಸ್ಪಷ್ಟ ಚಿತ್ರಣ ಸಿಗಲಿದೆ.
ನಾನು ಸದ್ಯಕ್ಕೆ ಪರಿಶೀಲನೆ ನಡೆಸಿರುವ 76 ಕ್ಷೇತ್ರಗಳಲ್ಲಿ ಎಸ್‌ಸಿಎಸ್‌ಟಿ ಜನಸಂಖ್ಯೆ ಮೊದಲ ಸ್ಥಾನದಲ್ಲಿರುವ 19 ಕ್ಷೇತ್ರಗಳಿವೆ. ಅವುಗಳಲ್ಲಿ 2018ರಲ್ಲಿ ಬಿಜೆಪಿ 8, ಕಾಂಗ್ರೆಸ್ 7 , ಜೆಡಿಎಸ್ 3 ಸ್ಥಾನಗಳನ್ನು ಹೊಂದಿದ್ದವು. ಆದರೆ ಇದೀಗ 2023ರಲ್ಲಿ ಬಿಜೆಪಿ 3 , ಕಾಂಗ್ರೆಸ್ 14, ಜೆಡಿಎಸ್ 2 ಸ್ಥಾನಗಳನ್ನು ಹೊಂದಿವೆ. ಅಂದರೆ ಎಸ್‌ಸಿಎಸ್‌ಟಿ ಸಮುದಾಯವನ್ನು ಪ್ರಬಲವಾಗಿ ತನ್ನತ್ತ ಸೆಳೆಯಲು ಕಾಂಗ್ರೆಸ್‌ ಸಫಲವಾಗಿದೆ.

ಈ ಸಮುದಾಯವನ್ನು ತನ್ನತ್ತ ಸೆಳೆಯಲು ಈ ಹಿಂದೆ ಹಿಂದುತ್ವದ ಅಸ್ತ್ರವನ್ನೇ ಬಿಜೆಪಿ ಬಳಸುತ್ತಿತ್ತು. ಜಾತಿ ಭೇದ ಇಲ್ಲದೆ ಎಲ್ಲರೂ ಹಿಂದುಗಳು ಎನ್ನುವ ಭಾವನೆಯನ್ನು ಮೂಡಿಸುವ ಕಾರ್ಯ ಹೆಚ್ಚು ಸಾಗುತ್ತಿತ್ತು. ಜತೆಗೆ ದಲಿತರ ಮತಾಂತರದಂತಹ ಅನೇಕ ವಿಚಾರಗಳು, ಹಿಂದುತ್ವವನ್ನೂ ಮುನ್ನೆಲೆಗೆ ತರುವ ಪ್ರಯತ್ನ ನಡೆದಿತ್ತು. ಇದು ಬಿಜೆಪಿಗೆ ಚೆನ್ನಾಗಿ ಒಗ್ಗಿಕೊಂಡಿರುವ ಭಾಷೆ. ಆದರೆ ಈ ಬಾರಿ ಮೀಸಲಾತಿ, ಒಳ ಮೀಸಲಾತಿಯಂತಹ ಪ್ರಯತ್ನಗಳಿಗೆ ಕೈಹಾಕಿತು. ಇದು ಆ ಪಕ್ಷದ ನಾಯಕರು ಹೇಳುವಂತೆ ಸಾಮಾಜಿಕ ನ್ಯಾಯವನ್ನು ನೀಡುವ ಪ್ರಯತ್ನವೇ ಆಗಿರಬಹುದು. ಆದರೆ ಎಲ್ಲ ದಲಿತ ಸಮುದಾಯಕ್ಕೂ ಈ ಪ್ರಯತ್ನ ಹಿಡಿಸಿಲ್ಲ ಅಥವಾ ಈ ಪ್ರಯತ್ನದಿಂದ ಆಗುವ ಲಾಭಗಳನ್ನು ಸಮುದಾಯಗಳಿಗೆ ತಲುಪಿಸುವಲ್ಲಿ ಬಿಜೆಪಿ ವಿಫಲವಾಗಿರುವುದು ಕಾಣುತ್ತದೆ. ಮೀಸಲಾತಿ ನೀಡಿದ ತಕ್ಷಣಕ್ಕೆ ಮತಗಳು ತಾವಾಗಿಯೇ ಹರಿದು ಬರುತ್ತವೆ ಎಂದು ಭಾವಿಸುವುದು ರಾಜಕೀಯ ಪ್ರಬುದ್ಧತೆಯನ್ನು ತೋರುತ್ತದೆಯೇ? ಈ ಯೋಜನೆಗಳ ಕುರಿತು ಸಮುದಾಯಗಳಿಗೆ ಮನವರಿಕೆ ಮಾಡಿಕೊಡಲು ಬಿಜೆಪಿಯಲ್ಲಿ ಎಸ್‌ಸಿ ಸಮುದಾಯದ ನಾಯಕರು ಇಲ್ಲ. ಅಮಿತ್‌ ಶಾ ಪ್ರವಾಸದುದ್ದಕ್ಕೂ ಎಂಎಲ್‌ಸಿ ಛಲವಾದಿ ನಾರಾಯಣಸ್ವಾಮಿ ಅವರನ್ನು ಕರೆದೊಯ್ಯುತ್ತಿದ್ದರು. ಅವರನ್ನು ನೋಡಿ ಇಷ್ಟು ದೊಡ್ಡ ಸಮುದಾಯ ಬಿಜೆಪಿ ಕಡೆಗೆ ವಾಲಬಹುದು ಎಂದು ಬಿಜೆಪಿ ಭಾವಿಸಿದ್ದಿರಬಹುದು.

ಬಿಜೆಪಿ ಈ ಚುನಾವಣೆಯಲ್ಲಿ ಮಾಡಿದ ತಪ್ಪುಗಳು ಕಳೆದ ಏಳೆಂಟು ತಿಂಗಳಿಂದಲೂ ಢಾಳಾಗಿ ಕಾಣಿಸುತ್ತಿವೆ. ಇದೆಲ್ಲದಕ್ಕೆ ಪರ್ಯಾಯವಾಗಿ ಕಾಂಗ್ರೆಸ್‌ ವ್ಯವಸ್ಥಿತವಾದ, ಒಗ್ಗಟ್ಟಿನ ಚುನಾವಣಾ ತಂತ್ರವನ್ನು ರೂಪಿಸಿತು. ಆ ಪಕ್ಷದಲ್ಲಿ ಒಡಕು ಮೂಡಿ ತಾನಾಗಿ ಕುಸಿಯುತ್ತದೆ, ಅದು ತಮಗೆ ಲಾಭವಾಗುತ್ತದೆ ಎಂದು ಕಾದು ಕುಳಿತಿದ್ದ ಬಿಜೆಪಿಗೆ ನಷ್ಟವಾಯಿತು ಎನ್ನುವುದು ಸ್ಪಷ್ಟ.

ಇದನ್ನೂ ಓದಿ: D ಕೋಡ್ ಅಂಕಣ: ನಿಮ್ಮ ಮತಗಳು ಕಳ್ಳತನವಾಗುತ್ತಿವೆ ಎಚ್ಚರಿಕೆ !

Exit mobile version