Site icon Vistara News

D ಕೋಡ್‌ ಅಂಕಣ: ಸಂವಿಧಾನದಲ್ಲಿ ಇಲ್ಲದ ಹುದ್ದೆಗೆ ಮೂವತ್ತೂವರೆ ವರ್ಷದ ಸಂಭ್ರಮ!

Polititicians AI Image

…… ಎಂಬ ಹೆಸರಿನವನಾದ ನಾನು, ಕಾನೂನಿನ ಮೂಲಕ ಸ್ಥಾಪಿತವಾದ ಭಾರತದ ಸಂವಿಧಾನದ ವಿಷಯದಲ್ಲಿ ನಿಜವಾದ ಶ್ರದ್ಧೆ ಮತ್ತು ನಿಷ್ಠೆಯನ್ನು ಹೊಂದಿರುತ್ತೇನೆಂದೂ, ನಾನು ಭಾರತದ ಸಾರ್ವಭೌಮತ್ವವನ್ನು ಮತ್ತು ಅಖಂಡತೆಯನ್ನು ಎತ್ತಿ ಹಿಡಿಯುತ್ತೇನೆಂದೂ, ಮತ್ತು ಕರ್ನಾಟಕ ರಾಜ್ಯದ ಮಂತ್ರಿಯಾಗಿ ನನ್ನ ಕರ್ತವ್ಯಗಳನ್ನು ಶ್ರದ್ಧಾಪೂರ್ವಕವಾಗಿ ಮತ್ತು ಅಂತಃಕರಣ ಪೂರ್ವಕವಾಗಿ ನಿರ್ವಹಿಸುತ್ತೇನೆಂದೂ, ಭಯ ಅಥವಾ ಪಕ್ಷಪಾತವಿಲ್ಲದೆ, ರಾಗ ಧ್ವೇಷವಿಲ್ಲದೆ ಎಲ್ಲ ಬಗೆಯ ಜನರಿಗೆ. ಸಂವಿಧಾನಕ್ಕೆ ಮತ್ತು ಕಾನೂನಿಗೆ ಅನುಸಾರವಾಗಿ ನ್ಯಾಯವಾದುದ್ದನ್ನೇ ಮಾಡುತ್ತೇನೆಂದೂ ದೇವರ ಹೆಸರಿನಲ್ಲಿ ಪ್ರಮಾಣ ಮಾಡುತ್ತೇನೆ/ಶ್ರದ್ಧಾಪೂರ್ವಕವಾಗಿ ಪ್ರತಿಜ್ಞೆ ಮಾಡುತ್ತೇನೆ”.

ಈ ಮಾತನ್ನು ಸಾಮಾನ್ಯವಾಗಿ ಎಲ್ಲರೂ ಕೇಳಿರುತ್ತಾರೆ. ರಾಜ್ಯದ ಮುಖ್ಯಮಂತ್ರಿ, ಮಂತ್ರಿಗಳ ಪ್ರಮಾಣವಚನ ಕಾರ್ಯಕ್ರಮದಲ್ಲಿ ರಾಜ್ಯಪಾಲರು ಪ್ರಮಾಣವಚನ ಬೋಧಿಸುತ್ತಾರೆ. ರಾಜ್ಯಪಾಲರು ʼನಾನುʼ ಎಂದು ಹೇಳಿದ ಕೂಡಲೆ ಉಳಿದದ್ದನ್ನು ಸಚಿವರು ತಾವೇ ಹೇಳಿ ಮುಗಿಸುತ್ತಾರೆ. ಭಾರತದ ಸಂವಿಧಾನ ರಚನೆಯಾದಾಗಿನಿಂದಲೇ ಈ ವಾಕ್ಯಗಳನ್ನು ಪ್ರಧಾನಿ, ಮುಖ್ಯಮಂತ್ರಿಗಳು, ಸಚಿವರು ಪ್ರಮಾಣವಚನ ಕಾರ್ಯಕ್ರಮದಲ್ಲಿ ಹೇಳುತ್ತಲೇ ಬರುತ್ತಿದ್ದಾರೆ. ಆದರೆ ಯಾವ ಸಂವಿಧಾನಕ್ಕೆ ಅನುಗುಣವಾಗಿ ನಡೆಯುತ್ತೇವೆ ಎಂದು ಪ್ರಮಾಣವಚನ ಸ್ವೀಕರಿಸುತ್ತಾರೆಯೋ, ಆ ಸಂವಿಧಾನಕ್ಕೆ ಅನುಗುಣವಾಗಿ ನಡೆಯುತ್ತಾರೆಯೇ ಎನ್ನುವುದು ಪ್ರಶ್ನೆ. ಅದರಲ್ಲೂ ಅನೇಕರು ತಮ್ಮ ಮನೆ ದೇವರ ಮೇಲೆ, ತಂದೆ ತಾಯಿಯ ಮೇಲೆ ಪ್ರಮಾಣ ಮಾಡುತ್ತಾರೆ. ಬದುಕಿರುವವರ ಹೆಸರಿನಲ್ಲಿ ಸುಳ್ಳು ಪ್ರಮಾಣ ಮಾಡಿದರೆ ಅವರಿಗೆ ಕೇಡು ಉಂಟಾಗುತ್ತದೆ ಎನ್ನುವುದನ್ನು ದೇವರು ಗಂಭೀರವಾಗಿ ಪರಿಗಣಿಸಿದರೆ ಏನಾಗಬೇಡ? ಅದರಲ್ಲೂ ಕೆಲವು ʼಅಪಾಯಕಾರಿʼ ಸಚಿವರು ಕ್ಷೇತ್ರದ ಜನರ ಮೇಲೆ ಪ್ರಮಾಣ ಮಾಡುತ್ತಾರೆ. ಅಧಿಕಾರ ಸಿಕ್ಕಮೇಲೆ ಅಸಾಂವಿಧಾನಿಕ ಕೆಲಸಗಳನ್ನು ಮಾಡಿದರೆ ಮತದಾರರಿಗೆ ದೇವರೇ ಗತಿ ! ಅದಕ್ಕೇ ಈ ದೇವರು, ಪೋಷಕರು, ಮತದಾರರು ಉಸಾಬರಿಯೇ ಬೇಡ ಎಂದು ದಿನೇಶ್‌ ಗುಂಡೂರಾವ್‌ ಅಂಥವರು ಯಾವ ಉಲ್ಲೇಖವನ್ನೂ ಮಾಡದೆ ಪ್ಲೈನ್‌ ಆಗಿ ಪ್ರಮಾಣವಚನ ಸ್ವೀಕರಿಸಿಬಿಡುತ್ತಾರೆ. ಇದೆಲ್ಲ ಒಂದು ರೀತಿ ಮಜವಾಗಿ ಕಾಣುತ್ತದೆ. ಇರಲಿ, ಇದು ಇಂದಿನ ಲೇಖನದ ವಿಷಯವಲ್ಲ. ಸಂವಿಧಾನದಲ್ಲಿ ಉಲ್ಲೇಖವೇ ಇಲ್ಲದ ಹುದ್ದೆಯೊಂದನ್ನು ದೇಶದಲ್ಲಿ ಹಾಗೂ ರಾಜ್ಯದಲ್ಲಿ ಅನೂಚಾನವಾಗಿ ನಡೆಸಿಕೊಂಡುಬರಲಾಗುತ್ತಿದೆ. ಅದೆಂದರೆ ಉಪ ಪ್ರಧಾನಮಂತ್ರಿ ಅಥವಾ ಉಪ ಮುಖ್ಯಮಂತ್ರಿ.

ಇತ್ತೀಚೆಗೆ ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆಗಳು ಮುಗಿದು ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದಿತು. ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿಯಾಗಿ ಕೆಪಿಸಿಸಿ ಅಧ್ಯಕ್ಷರೂ ಆದ ಡಿ.ಕೆ. ಶಿವಕುಮಾರ್‌ ಮೇ 20ರಂದು ಪ್ರಮಾಣವಚನ ಸ್ವೀಕರಿಸಿದರು. ಈ ಸಮಯದಲ್ಲಿ ಅನುಮಾನವೊಂದು ಮತ್ತೆ ಬಂದಿತು. ಈ ಉಪಮುಖ್ಯಮಂತ್ರಿ ಎನ್ನುವ ಹುದ್ದೆ ಸಾಂವಿಧಾನಿಕವೇ? ಎನ್ನುವುದು ಆ ಅನುಮಾನ.

ತಿಳಿದುಕೊಳ್ಳುವ ಕುತೂಹಲದಲ್ಲಿ ಮಾಹಿತಿ ಹಕ್ಕು ಕಾಯ್ದೆಯ ಅಡಿಯಲ್ಲಿ ಸರ್ಕಾರಕ್ಕೆ ಒಂದು ಅರ್ಜಿ ಸಲ್ಲಿಸಲಾಯಿತು. “ಭಾರತದ ಸಂವಿಧಾನದ ಪ್ರಕಾರ ಉಪ ಮುಖ್ಯಮಂತ್ರಿ ಎಂಬ ಹುದ್ದೆ ಇದೆ ಎಂಬುದನ್ನು ಸಾಬೀತುಪಡಿಸುವ ದಾಖಲೆ/ಆದೇಶದ ಪ್ರತಿಗಳನ್ನು ನೀಡಿ”. “ರಾಜ್ಯದ ಉಪಮುಖ್ಯಮಂತ್ರಿ ಎಂದು ಪ್ರಮಾಣವಚನ ಹಾಗೂ ಗೌಪ್ಯತಾ ವಿಧಿ ಸ್ವೀಕರಿಸಲು ಸಂವಿಧಾನದಲ್ಲಿ ಅವಕಾಶ ಇದೆ ಎಂಬುದರ ಕುರಿತು ದಾಖಲೆ ಒದಗಿಸಿ” ಎಂಬ ಪ್ರಶ್ನೆಗಳಿಗೆ ಬಂದ ಸಮಾನ ಉತ್ತರ ಎಂದರೆ; “ಸದರಿ ವಿಷಯಕ್ಕೆ ಸಂಬಂಧಿಸಿದಂತೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯಲ್ಲಿ (ರಾಜ್ಯ ಶಿಷ್ಟಾಚಾರ) ಮಾಹಿತಿಯು ಲಭ್ಯವಿರುವುದಿಲ್ಲ. ರಾಜ್ಯಪಾಲರು ಹೊರಡಿಸುವ ಆಜ್ಞೆಯ ಮೇರೆಗೆ ಹಾಗೂ ಸರ್ಕಾರದ ಮುಖ್ಯ ಕಾರ್ಯದರ್ಶಿ ಅಥವಾ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಕಾರ್ಯದರ್ಶಿ ಸೂಚನೆಯ ಮೇರೆಗೆ ಪ್ರಮಾಣವಚನ ಕಾರ್ಯಕ್ರಮವನ್ನು ನಿರ್ವಹಿಸಲಾಗುತ್ತಿದ್ದು, ಯಾವುದೇ ದಾಖಲೆ ಇರುವುದಿಲ್ಲ…”

ಅಲ್ಲಿಗೆ ಈ ಉಪಮುಖ್ಯಮಂತ್ರಿ ಎಂಬ ಸ್ಥಾನವೇ ಇಲ್ಲ ಎನ್ನುವುದು ಖಾತ್ರಿಯಾಯಿತು. ಸಂವಿಧಾನದ ಮೂರನೇ ಅನುಸೂಚಿಯಲ್ಲಿ ವಿವಿಧ ಪ್ರಮಾಣವಚನಗಳ ಅಥವಾ ಪ್ರತಿಜ್ಞಾ ವಚನಗಳ ನಮೂನೆಗಳನ್ನು ನೀಡಲಾಗಿದೆ. ಕೇಂದ್ರದ ಮಂತ್ರಿ, ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಯ ಪ್ರಮಾಣವಚನ, ಸಂಸತ್‌ ಸದಸ್ಯ, ಸುಪ್ರೀಂಕೋರ್ಟ್‌ ನ್ಯಾಯಾಧೀಶರು, ಸಿಎಜಿ, ರಾಜ್ಯದ ಮಂತ್ರಿಗಳು ಸ್ವೀಕರಿಸಬೇಕಾದ ಪ್ರಮಾಣವಚನಗಳ ನಮೂನೆ ನೀಡಲಾಗಿದೆ. ಈ ನಮೂನೆಗಳಲ್ಲಿ ಎಲ್ಲಿಯೂ ʼಉಪಮುಖ್ಯಮಂತ್ರಿಯಾಗಿ ಅಥವಾ ಉಪ ಪ್ರಧಾನಮಂತ್ರಿಯಾಗಿ” ಪ್ರಮಾಣ ಮಾಡುತ್ತೇನೆ ಎಂಬ ಯಾವುದೇ ನಮೂನೆ ಇಲ್ಲ. ಅಚ್ಚರಿಯೆಂದರೆ ʼಮುಖ್ಯಮಂತ್ರಿಯಾಗಿ ಅಥವಾ ಪ್ರಧಾನ ಮಂತ್ರಿಯಾಗಿ” ಎಂಬ ಉಲ್ಲೇಖವೂ ಇಲ್ಲ. ರಾಜ್ಯದ ಮಂತ್ರಿಯಾಗಿ ಎನ್ನುವ ನಮೂನೆಯನ್ನೇ ಮುಖ್ಯಮಂತ್ರಿ ಹಾಗೂ ಸಚಿವರೂ ಸ್ವೀಕರಿಸುತ್ತಾರೆ. ಆದರೆ ಸಂವಿಧಾನದ ಅನುಚ್ಛೇದ 75ರಲ್ಲಿ ಪ್ರಧಾನಮಂತ್ರಿಯ ಸ್ಥಾನವನ್ನು ಉಲ್ಲೇಖಿಸಲಾಗಿದೆ. ಹಾಗೆಯೇ ಅನುಚ್ಛೇದ 163ರಲ್ಲಿ ಮುಖ್ಯಮಂತ್ರಿಯ ಸ್ಥಾನವನ್ನು ಉಲ್ಲೇಖಿಸಲಾಗಿದೆ. ಹಾಗಾಗಿ ಮುಖ್ಯಮಂತ್ರಿ ಹಾಗೂ ಪ್ರಧಾನಮಂತ್ರಿ ಎನ್ನುವುದು ಸಾಂವಿಧಾನಿಕ ಹುದ್ದೆಗಳು. ಆದರೆ ಸಂವಿಧಾನದ ಯಾವ ಮೂಲೆಯಲ್ಲೂ ಉಪ ಪ್ರಧಾನಮಂತ್ರಿಯಾಗಲಿ, ಉಪ ಮುಖ್ಯಮಂತ್ರಿಯಾಗಲಿ ಉಲ್ಲೇಖವೇ ಇಲ್ಲ.

ಹಾಗಾದರೆ ಅಸಾಂವಿಧಾನಿಕವೇ?
ಸಂವಿಧಾನದ ಯಾವ ಮೂಲೆಯಲ್ಲೂ ಉಲ್ಲೇಖವೇ ಇಲ್ಲದ ಉಪಮುಖ್ಯಮಂತ್ರಿ ಹುದ್ದೆಯನ್ನು ಅಸಾಂವಿಧಾನಿಕ ಎನ್ನಬಹುದೇ? ಹೀಗೊಂದು ಪ್ರಶ್ನೆ ಯಾರಿಗಾದರೂ ಬರುತ್ತದೆ. ಇದೇ ಪ್ರಶ್ನೆಯನ್ನಿಟ್ಟುಕೊಂಡು 2018ರಲ್ಲಿ ಪುತ್ತೂರಿನ ವಿವೇಕಾನಂದ ಕಾಲೇಜಿನ ನಿವೃತ್ತ ನಿರ್ದೇಶಕ ಶೇಖರ್‌ ಎಸ್‌. ಅಯ್ಯರ್‌ ಅವರು ಕರ್ನಾಟಕ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದರು.

ಅಂದಿನ ಜೆಡಿಎಸ್‌-ಕಾಂಗ್ರೆಸ್‌ ಮೈತ್ರಿ ಸರ್ಕಾರದಲ್ಲಿ ಉಪಮುಖ್ಯಮಂತ್ರಿಯಾಗಿ ಡಾ. ಜಿ. ಪರಮೇಶ್ವರ ಅವರು ಅಧಿಕಾರ ಸ್ವೀಕರಿಸಿದ್ದರು. ಸಂವಿಧಾನದಲ್ಲಿ ಎಲ್ಲಿಯೂ ಇಲ್ಲದ ಹುದ್ದೆಯನ್ನು ಪರಮೇಶ್ವರ ಅವರು ಸ್ವೀಕರಿಸಿದ್ದಾರೆ. ಇದು ಅಸಾಂವಿಧಾನಿಕ. ಉಪಮುಖ್ಯಮಂತ್ರಿ ಹುದ್ದೆಯು ಜನರಲ್ಲಿ ಹಾಗೂ ಅಧಿಕಾರಿಗಳಲ್ಲಿ ಅನಗತ್ಯ ಗೊಂದಲವನ್ನು ಉಂಟುಮಾಡುತ್ತದೆ, ಇದು ಕೇವಲ ರಾಜಕೀಯ ಉದ್ದೇಶವನ್ನು ಈಡೇರಿಸುತ್ತದೆ. ಉಪಮುಖ್ಯಮಂತ್ರಿಯಾಗಿ ನೇಮಿಸಿ ರಾಜ್ಯಪಾಲರು ಹೊರಡಿಸಿರುವ ಆದೇಶವನ್ನು ರದ್ದುಪಡಿಸಬೇಕು ಎಂದು ಅರ್ಜಿಯಲ್ಲಿ ಕೋರಿದ್ದರು.

ಈ ಪ್ರಕರಣದ ತೀರ್ಪಿನಲ್ಲಿ, ಸುಪ್ರೀಂಕೋರ್ಟ್‌ನಲ್ಲಿ ನಡೆದಿದ್ದ ಪ್ರಕರಣವೊಂದನ್ನು ಹೈಕೋರ್ಟ್‌ ಉಲ್ಲೇಖಿಸಿತು. ಚಂದ್ರಶೇಖರ್‌ ಪ್ರಧಾನಿಯಾಗಿದ್ದ ಸಮಯದಲ್ಲಿ, ಭಾರತೀಯ ರಾಷ್ಟ್ರೀಯ ಲೋಕದಳ ಸಂಸ್ಥಾಪಕ ಚೌಧರಿ ದೇವಿ ಲಾಲ್‌ ಅವರನ್ನು ಉಪ ಪ್ರಧಾನಿಯಾಗಿ ನೇಮಿಸಿದ್ದನ್ನು ಕೆ.ಎಂ. ಶರ್ಮ ಎಂಬುವವರು 1990ರಲ್ಲಿ ಪ್ರಶ್ನಿಸಿದ್ದರು. ಉಪಮುಖ್ಯಮಂತ್ರಿ ಎನ್ನುವುದು ಇತರೆ ಸಚಿವರಂತೆಯೇ ಒಂದು ಸಚಿವ ಸ್ಥಾನವಷ್ಟೆ. ಉಪ ಪ್ರಧಾನಿ ಎಂದು ಹೇಳಿದ ತಕ್ಷಣ ಪ್ರಧಾನಿಯವರ ಯಾವುದೇ ಅಧಿಕಾರಗಳು ದೊರಕುವುದಿಲ್ಲ. ಪ್ರಧಾನಿಯ ಹುದ್ದೆಯ ಅಧಿಕಾರವನ್ನು ಹಂಚಿಕೊಳ್ಳದೆ, ಸಾಮಾನ್ಯ ಸಚಿವರ ಅಧಿಕಾರವೇ ಆಗಿರುವುದರಿಂದ ಸಂವಿಧಾನಕ್ಕೆ ವಿರುದ್ಧವಾಗಿಲ್ಲ ಎಂದು ನ್ಯಾಯಾಲಯ ಆದೇಶಿಸಿತ್ತು.

ಕರ್ನಾಟಕ ಪ್ರಕರಣದಲ್ಲಿ ಹಳೆಯ ಪ್ರಕರಣವನ್ನು ಉಲ್ಲೇಖಿಸಿದ ನ್ಯಾಯಾಧೀಶರು, ಯಾವುದೇ ಸಚಿವನನ್ನು ಉಪಮುಖ್ಯಮಂತ್ರಿ ಎಂದು ನೇಮಿಸುವುದು ಮುಖ್ಯಮಂತ್ರಿಯ ಅಧಿಕಾರವನ್ನು ಪಡೆಯಲು ಸಾಧ್ಯವಿಲ್ಲವಾದ್ಧರಿಂದ ಇದು ಅಸಾಂವಿಧಾನಿಕವಲ್ಲ ಎಂದು ತಿಳಿಸಿದರು. ಅಷ್ಟೆ ಅಲ್ಲದೆ, ಈಗಾಗಲೆ ತೀರ್ಪು ಪ್ರಕಟವಾಗಿರುವ ಪ್ರಕರಣದಲ್ಲಿ ಮತ್ತೆ ಪಿಐಎಲ್‌ ಸಲ್ಲಿಸಿ ನ್ಯಾಯಾಲಯದ ಸಮಯ ಹಾಳು ಮಾಡಿದ್ದಕ್ಕೆ ಅರ್ಜಿದಾರರಿಗೆ 10 ಸಾವಿರ ರೂ. ದಂಡವನ್ನೂ ವಿಧಿಸಿದ್ದರು. ಹಾಗಾಗಿ ಉಪಮುಖ್ಯಮಂತ್ರಿಯಾಗಿ ಇದೀಗ ಡಿ.ಕೆ. ಶಿವಕುಮಾರ್‌ ಅವರನ್ನು, ಈ ಹಿಂದೆ ಅನೇಕರನ್ನು ನೇಮಿಸಿರುವುದನ್ನು ಪ್ರಶ್ನಿಸಿ ಯಾರೂ ಪಿಐಎಲ್‌ ಹಾಕಲು ಹೋಗುವುದು ಬುದ್ಧಿವಂತಿಕೆಯ ನಡೆಯಲ್ಲ ಎನ್ನುವುದನ್ನು ಇಲ್ಲಿ ಸೂಕ್ಷ್ಮವಾಗಿ ಹೇಳಬಹುದು. ಆದರೆ, ಅಸಾಂವಿಧಾನಿಕವಲ್ಲ ಎಂದ ತಕ್ಷಣ ನೈತಿಕವಾಗಿಯೂ ಸರಿ ಎನ್ನಲಾಗುತ್ತದೆಯೇ?

ಮೊದಲ ದಿನದಿಂದಲೇ ಉಪಪ್ರಧಾನಿ
ದೇಶಕ್ಕೆ 1947ರ ಆಗಸ್ಟ್‌ 15ರಂದು ಸ್ವಾತಂತ್ರ್ಯ ಲಭಿಸಿದಾಗಿನಿಂದಲೇ ಪ್ರಧಾನಿಯಾಗಿ ಜವಾಹರಲಾಲ್‌ ನೆಹರೂ ಅಧಿಕಾರ ವಹಿಸಿಕೊಂಡರು. ಅದೇ ದಿನದಿಂದಲೇ, ಸರ್ದಾರ್‌ ವಲ್ಲಭಭಾಯಿ ಪಟೇಲರೂ ಉಪಪ್ರಧಾನಿಯಾದರು. ನಂತರ ಸಂವಿಧಾನ ರಚನಾ ಸಮಿತಿಯ ಚರ್ಚೆಗಳು ನಡೆದವು, 1949ರಲ್ಲಿ ಸಂವಿಧಾನವನ್ನು ಅಂಗೀಕರಿಸಲಾಯಿತು, 1950ರಿಂದ ಜಾರಿಯನ್ನೂ ಮಾಡಲಾಯಿತು. ಆದರೆ ಸಂವಿಧಾನ ರಚನಾ ಸಭೆಗಳಲ್ಲಿ ಎಲ್ಲಿಯೂ ಉಪ ಪ್ರಧಾನಮಂತ್ರಿ ಹಾಗೂ ಉಪ ಮುಖ್ಯಮಂತ್ರಿ ಹುದ್ದೆಯ ಉಲ್ಲೇಖ ಆಗಿರುವುದು ಕಂಡುಬಂದಿಲ್ಲ. ಆದರೆ ಸರ್ದಾರ್‌ ಪಟೇಲರು 1950ರ ಡಿಸೆಂಬರ್‌ 15ರಂದು ನಿಧನರಾದ ನಂತರ 6 ಉಪ ಪ್ರಧಾನಮಂತ್ರಿಗಳು ನೇಮಕವಾಗಿದ್ದಾರೆ. (ಮೊರಾರ್ಜಿ ದೇಸಾಯಿ, ಚೌಧರಿ ಚರಣ್‌ ಸಿಂಗ್‌, ಜಗಜೀವನ್‌ ರಾಮ್‌, ವೈ.ಬಿ. ಚವ್ಹಾಣ್‌, ಚೌಧರಿ ದೇವಿಲಾಲ್‌ ಹಾಗೂ ಕೊನೆಯದಾಗಿ 2002ರಲ್ಲಿ ಲಾಲ್‌ ಕೃಷ್ಣ ಆಡ್ವಾಣಿ).

ಕರ್ನಾಟಕ ರಾಜ್ಯದಲ್ಲಿ ಇಲ್ಲಿವರೆಗೆ 11 ಡಿಸಿಎಂಗಳು ಆಗಿದ್ದಾರೆ. 1993ರಲ್ಲಿ ಎಸ್‌.ಎಂ. ಕೃಷ್ಣ, ರಾಜ್ಯದ ಮೊದಲ ಉಪಮುಖ್ಯಮಂತ್ರಿಯಾಗಿದ್ದರು. ಅಲ್ಲಿಗೆ ರಾಜ್ಯದಲ್ಲಿ ಉಪಮುಖ್ಯಮಂತ್ರಿ ಹುದ್ದೆಯ ಸಂಪ್ರದಾಯ ಆರಂಭವಾಗಿ ಮೂವತ್ತು ವರ್ಷ ಆರು ತಿಂಗಳು ಅಂದರೆ ಮೂವತ್ತೂವರೆ ವರ್ಷವಾಗಿದೆ. ಅತಿ ಹೆಚ್ಚು ಅವಧಿಗೆ ಡಿಸಿಎಂ ಆದವರು ಈಗಿನ ಸಿಎಂ ಸಿದ್ದರಾಮಯ್ಯ.  ಎರಡು ಅವಧಿಗೆ ಒಟ್ಟು 4 ವರ್ಷ 121 ದಿನ ಡಿಸಿಎಂ ಆಗಿದ್ದರು. ಅಲ್ಲಿವರೆಗೆ ಸಿಂಗಲ್‌ ಡಿಸಿಎಂ ಇದ್ದ ವ್ಯವಸ್ಥೆಯನ್ನು ಬದಲಾಯಿಸಿ ಡಬಲ್‌ ಡಿಸಿಎಂ ಸಂಪ್ರದಾಯ ಆರಂಭಿಸಿದ್ದು ಬಿಜೆಪಿ, 2012ರಲ್ಲಿ. ಈ ಸಮಯದಲ್ಲಿ ಆರ್‌. ಅಶೋಕ್‌, ಕೆ.ಎಸ್‌. ಈಶ್ವರಪ್ಪ ಒಟ್ಟಿಗೆ ಡಿಸಿಎಂ ಆಗಿದ್ದರು. ತನ್ನ ದಾಖಲೆಯನ್ನು ತಾನೇ ಮುರಿದ ಬಿಜೆಪಿ, ಒಟ್ಟಿಗೆ ಟ್ರಿಪಲ್‌ ಡಿಸಿಎಂ ಮಾಡಿತು. 2019ರಲ್ಲಿ ಡಾ. ಸಿ.ಎನ್‌. ಅಶ್ವತ್ಥನಾರಾಯಣ, ಗೋವಿಂದ ಕಾರಜೋಳ, ಲಕ್ಷ್ಮಣ ಸವದಿ ಡಿಸಿಎಂ ಆಗಿದ್ದರು. ಆ ಚುನಾವಣೆಯಲ್ಲಿ ಸೋಲುಂಡಿದ್ದ ಲಕ್ಷ್ಮಣ ಸವದಿ ಅವರನ್ನು ವಿಧಾನ ಪರಿಷತ್‌ ಸದಸ್ಯರನ್ನಾಗಿಸಿ ಡಿಸಿಎಂ ಮಾಡಿದ್ದು ಮತ್ತೂ ವಿಶೇಷವಾದದ್ದು.

ದೇಶದ ಅನೇಕ ರಾಜ್ಯಗಳಲ್ಲಿ ಉಪಮುಖ್ಯಮಂತ್ರಿ ಸ್ಥಾನವನ್ನು ಅಧಿಕಾರ ಸಮತೋಲನಕ್ಕೆ ಬಳಕೆ ಮಾಡಿಕೊಳ್ಳಲಾಗುತ್ತಿದೆ. ಪ್ರಮುಖವಾಗಿ ಮೈತ್ರಿ ಸರ್ಕಾರಗಳಲ್ಲಿ, ಒಂದು ಪಕ್ಷಕ್ಕೆ ಸಿಎಂ ಸ್ಥಾನ ನೀಡಿದರೆ ಮತ್ತೊಂದು ಪಕ್ಷಕ್ಕೆ ಹಾಗೂ ಅದರ ಕಾರ್ಯಕರ್ತರಿಗೆ “ಮಾನಸಿಕ ಸಮಾಧಾನ” ನೀಡುವ ಸಲುವಾಗಿ ಡಿಸಿಎಂ ಹುದ್ದೆ ಸೃಷ್ಟಿ ಮಾಡಲಾಗುತ್ತಿದೆ. ಕರ್ನಾಟಕದಲ್ಲಿ ಒಂದೇ ಪಕ್ಷದ ಸರ್ಕಾರವಿದ್ದರೂ ಪವರ್‌ ಬ್ಯಾಲೆನ್ಸ್‌ಗಾಗಿ ಪವರ್‌ ಮಿನಿಸ್ಟರ್‌ ಡಿ.ಕೆ. ಶಿವಕುಮಾರ್‌ ಅವರನ್ನು ಡಿಸಿಎಂ ಮಾಡಲಾಗಿದೆ.

ಡಿಸಿಎಂ ಹುದ್ದೆ ಅಸಾಂವಿಧಾನಿಕವಲ್ಲ ಎಂದು ನ್ಯಾಯಾಲಯಗಳೇ ಹೇಳಿವೆ. ಅಸಾಂವಿಧಾನಿಕವಲ್ಲ ಎಂದ ಕೂಡಲೆ ರಾಜ್ಯದ, ದೇಶದ ಆಡಳಿತ ಚುಕ್ಕಾಣಿ ಹಿಡಿದವರೇ ತಮ್ಮ ಮನಸ್ಸಿಗೆ ಬಂದಂತೆ ಹುದ್ದೆಗಳನ್ನು ಸೃಷ್ಟಿಸಿಕೊಳ್ಳಬಹುದೇ? ಸಂವಿಧಾನದ ಇನ್ನೆರಡು ಅಂಗಗಳಾದ ನ್ಯಾಯಾಂಗ ಹಾಗೂ ಕಾರ್ಯಾಂಗದಲ್ಲಿ ಹೀಗೆ ಯಾವುದೇ ಪ್ರಕ್ರಿಯೆ, ಆದೇಶ, ಕಾಯ್ದೆಯ ಬಲ ಇಲ್ಲದೆಯೇ ಚಿಟಿಕೆ ಹೊಡೆಯುವಷ್ಟರಲ್ಲಿ ಒಂದು ಹುದ್ದೆ ಸೃಷ್ಟಿ ಸಾಧ್ಯವಿಲ್ಲ. ಹಾಗಾದರೆ ಶಾಸಕಾಂಗಕ್ಕೆ ಮಾತ್ರ ಈ ಅಧಿಕಾರ ಹೇಗೆ? ಈ ಹುದ್ದೆಗೆ, ಸಚಿವ ಸ್ಥಾನವನ್ನು ಹೊರತುಪಡಿಸಿ ಯಾವುದೇ ವಿಶೇಷ ಅಧಿಕಾರ ಇಲ್ಲ ಎಂದು ನ್ಯಾಯಾಲಯಗಳು ಸಾರಿ ಸಾರಿ ಹೇಳಿದರೂ “ತಾನೂ ಮುಖ್ಯಮಂತ್ರಿಯ ಥರ” ಎಂದು ಹೇಳಿಕೊಳ್ಳುವ ಹುದ್ದೆಗೆ ರಾಜಕಾರಣಿಗಳು ಯಾಕಾದರೂ ಜೋತುಬೀಳಬೇಕು? “ಭಾರತದ ಸಂವಿಧಾನದ ವಿಷಯದಲ್ಲಿ ನಿಜವಾದ ಶ್ರದ್ಧೆ ಮತ್ತು ನಿಷ್ಠೆಯನ್ನು ಹೊಂದಿರುತ್ತೇನೆ” ಎಂದು ಪ್ರಮಾಣವಚನದ ಅರ್ಥವೇನು? ಕೇವಲ ಅಕ್ಷರದಲ್ಲಿರುವ ಸಂವಿಧಾನವಲ್ಲ, ಸಂವಿಧಾನದ ಭಾವಕ್ಕೂ ಅನುಗುಣವಾಗಿರುತ್ತೇನೆ ಎಂದು ಅಲ್ಲವೇ. ಇದರ ಬಗ್ಗೆ ಎಲ್ಲ ರಾಜಕೀಯ ಪಕ್ಷಗಳು, ಜನರೂ ಆಲೋಚಿಸುವುದು ಒಳ್ಳೆಯದು.

ಕರ್ನಾಟಕದಲ್ಲಿ ಉಪಮುಖ್ಯಮಂತ್ರಿಗಳು

  1. ಎಸ್‌.ಎಂ. ಕೃಷ್ಣ– 1993ರ ಜ.21ರಿಂದ 1994ರ ಡಿ.9- 1 ವರ್ಷ 322 ದಿನ
  2. ಜೆ.ಎಚ್‌. ಪಟೇಲ್‌‌‌‌– 1994 ಡಿ.11ರಿಂದ 1996ರ ಮೇ 31- 1 ವರ್ಷ 172 ದಿನ
  3. ಸಿದ್ದರಾಮಯ್ಯ– 1996ರ ಮೇ 31ರಿಂದ 1999ರ ಮೇ 22- 3 ವರ್ಷ 52 ದಿನ
  4. ಸಿದ್ದರಾಮಯ್ಯ– 2004ರ ಮೇ 28ರಿಂದ 2005ರ ಆ.5- 1 ವರ್ಷ 69 ದಿನ
  5. ಎಂ.ಪಿ. ಪ್ರಕಾಶ್‌‌– 2005ರ ಆ.8ರಿಂದ 2006ರ ಜ.28- 173 ದಿನ
  6. ಬಿ.ಎಸ್‌. ಯಡಿಯೂರಪ್ಪ– 2006ರ ಫೆ.3ರಿಂದ 2007ರ ಅ.8- 1 ವರ್ಷ 253 ದಿನ
  7. ಆರ್‌. ಅಶೊಕ್‌‌‌, ಕೆ.ಎಸ್‌. ಈಶ್ವರಪ್ಪ– 2012ರ ಜು.12ರಿಂದ 2013ರ ಮೇ 12- 304 ದಿನ
  8. ಡಾ. ಜಿ. ಪರಮೇಶ್ವರ– 2018ರ ಮೇ 23ರಿಂದ 2019ರ ಮೇ 23- 1 ವರ್ಷ 61 ದಿನ
  9. ಡಾ. ಸಿ.ಎನ್‌. ಅಶ್ವತ್ಥನಾರಾಯಣ, ಗೋವಿಂದ ಕಾರಜೋಳ, ಲಕ್ಷ್ಮಣ ಸವದಿ– 2019ರ ಆ.26ರಿಂದ 2021ರ ಜು.26- 1 ವರ್ಷ 340 ದಿನ
  10. ಡಿ.ಕೆ. ಶಿವಕುಮಾರ್‌‌– 2023ರ ಮೇ 20ರಿಂದ ಈವರೆಗೆ (63 ದಿನ)
Exit mobile version