Site icon Vistara News

D ಕೋಡ್‌ ಅಂಕಣ: 2018ರಲ್ಲಿ ಎಚ್‌.ಡಿ. ಕುಮಾರಸ್ವಾಮಿ ಇದ್ದ ಸ್ಥಿತಿಯಲ್ಲಿ ಇಂದು ಸಿದ್ದರಾಮಯ್ಯ: ಹೊರಬರುವುದು ಹೇಗೆ?

d code column problems for congress in differing guarantee schemes implementation

#image_title

ಸರಿಯಾಗಿ ಐದು ವರ್ಷದ ಹಿಂದೆ ಕರ್ನಾಟಕ ಇಂಥದ್ದೇ ಘಟನೆಗೆ ಸಾಕ್ಷಿಯಾಗಿತ್ತು. 2018ರ ಮೇ 23ರಂದು ವಿಧಾನಸೌಧದ ವೈಭವಯುತ ಮೆಟ್ಟಿಲುಗಳ ಮೇಲೆ ಜೆಡಿಎಸ್‌ನ ಎಚ್‌.ಡಿ. ಕುಮಾರಸ್ವಾಮಿ ಸಿಎಂ ಆಗಿ, ಕಾಂಗ್ರೆಸ್‌ನ ಡಾ. ಜಿ. ಪರಮೇಶ್ವರ ಡಿಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದ್ದರು. ಇದೀಗ ಸಿಎಂ ಆಗಿ ಸಿದ್ದರಾಮಯ್ಯ, ಡಿಸಿಎಂ ಆಗಿ ಡಿ.ಕೆ. ಶಿವಕುಮಾರ್‌ ಅಧಿಕಾರ ಹಿಡಿದಿದ್ದಾರೆ. ಸಿಎಂ ಹಾಗೂ ಡಿಸಿಎಂ ಆಗಿ ಪ್ರಮಾಣವಚನ ಸ್ವೀಕರಿಸುತ್ತಿರುವವರಿಬ್ಬರೂ ಈ ಬಾರಿ ಬದಲಾಗಿರುವುದರಿಂದ, ಇದರಲ್ಲಿ ಹೋಲಿಕೆ ಏನಿಲ್ಲ. ಆದರೆ ಎರಡೂ ಘಟನೆಗಳಲ್ಲಿ ಸಾಮ್ಯತೆ ಇದೆ.

ಅದೆಂದರೆ ರಾಷ್ಟ್ರೀಯ ಮಟ್ಟದಲ್ಲಿ ಕಾಂಗ್ರೆಸ್‌ ಪಕ್ಷವನ್ನು ಹಾಗೂ ʼಮೋದಿ ವಿರೋಧಿʼ ಗುಂಪನ್ನು ಬಲಪಡಿಸಲು ಚಿಮ್ಮುಹಲಗೆಯಾಗಿ ಕರ್ನಾಟಕವನ್ನು ಬಳಸಿಕೊಳ್ಳಬೇಕೆಂಬ ಬಯಕೆ. 2018ರ ಎಚ್‌.ಡಿ. ಕುಮಾರಸ್ವಾಮಿ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಕಾಂಗ್ರೆಸ್‌ ನಾಯಕರಾದ ರಾಹುಲ್‌ ಗಾಂಧಿ, ಸೋನಿಯಾ ಗಾಂಧಿ ಜತೆಗೆ ಪಶ್ಚಿಮ ಬಂಗಾಳದ ಮಮತಾ ಬ್ಯಾನರ್ಜಿ, ಬಿಹಾರದ ತೇಜಸ್ವಿ ಯಾದವ್‌, ಉತ್ತರ ಪ್ರದೇಶದ ಮಾಯಾವತಿ ಹಾಗೂ ಅಖಿಲೇಶ್‌ ಯಾದವ್‌ ಸಾಕ್ಷಿಯಾಗಿದ್ದರು.

ಕೇಂದ್ರದಲ್ಲಿ ಮೋದಿ ವಿರುದ್ಧದ ರಂಗ ಸಿದ್ಧವಾಗಿದೆ, ಇನ್ನೇನಿದ್ದರೂ ತಮ್ಮದೇ ಹವಾ ಎಂದು ಎಲ್ಲ ನಾಯಕರೂ ಕೈ ಕೈ ಜೋಡಿಸಿ ಜಯಘೋಷ ಮೊಳಗಿಸಿದ್ದರು. ಬಿಜೆಪಿ 104 ಸ್ಥಾನ ಗಳಿಸಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತಾದರೂ ಕಾಂಗ್ರೆಸ್‌ ಜತೆಗೆ ಸರ್ಕಾರ ರಚನೆ ಮಾಡುವ ವಿಚಿತ್ರ ನಿರ್ಧಾರವನ್ನು ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ ತೆಗೆದುಕೊಂಡಿದ್ದರು. ಅತಿ ದೊಡ್ಡ ಪಕ್ಷದ ಜತೆಗೆ ಹೋದರೆ ಕರ್ನಾಟಕದಲ್ಲಿ ಮಾತ್ರ ಸರ್ಕಾರ ಮಾಡಬಹುದು, ಅದೇ ಕಾಂಗ್ರೆಸ್‌ ಜತೆಗೆ ಹೋದರೆ ಮುಂದೆ ಕೇಂದ್ರದಲ್ಲಿ ಕಾಂಗ್ರೆಸ್‌ ನೇತೃತ್ವದ ಸರ್ಕಾರ ರಚನೆಯಾದಾಗ ಅಲ್ಲಿ ಅವಕಾಶಗಳು ಹೆಚ್ಚು ಎಂದು ಎಚ್‌.ಡಿ. ದೇವೇಗೌಡರು ಲೆಕ್ಕ ಮಾಡಿದ್ದರು. ಯಾವುದೇ ಕಾರಣಕ್ಕೆ ನಾಯಕತ್ವವನ್ನು ಬಿಟ್ಟುಕೊಡದ, ತಮ್ಮ ಒಂದು ಕಾಲದ ಸಹಪಾಠಿ ಸಿದ್ದರಾಮಯ್ಯ ಅಲ್ಲಿದ್ದಾರೆ ಎಂಬ ʼಅಪಾಯʼ ತಿಳಿದೂ ದೇವೇಗೌಡರು ಈ ದುಸ್ಸಾಹಸಕ್ಕೆ ಕೈ ಹಾಕಿದರು.

ವಿಧಾನಸೌಧದ ಮೇಟ್ಟಿಲ ಮೇಲೆ ನಿಂತು ಘೋಷಣೆ ಕೂಗಿದ್ದೇ ಬಂತು, ಸರ್ಕಾರ ನಡೆದ ದಾರಿರೋ ದೇವರಿಗೇ ಪ್ರೀತಿ. 2018ರ ಮೇ 25ರಂದು ಅಂದರೆ ಕುಮಾರಸ್ವಾಮಿ ಪ್ರಮಾಣವಚನ ಸ್ವೀಕರಿಸಿದ ಎರಡು ದಿನದಲ್ಲಿ ಸದನದಲ್ಲಿ ಬಹುಮತ ಸಾಬೀತುಪಡಿಸಿದರು. ಈ ಸಂದರ್ಭದಲ್ಲಿ ಬಿಜೆಪಿ ಸದನ ತ್ಯಾಗ ಮಾಡಿತು. ಅದಕ್ಕೂ ಮುನ್ನ ಭಾಷಣ ಮಾಡಿದ ಬಿ.ಎಸ್‌. ಯಡಿಯೂರಪ್ಪ, ಕುಮಾರಸ್ವಾಮಿಯವರು ಈಗಾಗಲೆ ಘೋಷಣೆ ಮಾಡಿರುವ ಸಾಲ ಮನ್ನಾಗಳು, ಸ್ತ್ರೀಶಕ್ತಿ ಸಂಘಗಳಿಗೆ ಹಣ ಸೇರಿ ಎಲ್ಲವನ್ನೂ ಜಾರಿ ಮಾಡಲಿ. ಎಲ್ಲದಕ್ಕೂ ನಮ್ಮ ಬೆಂಬಲ ಇದೆ ಎಂದರು, ಹೊರನಡೆದರು. ಇದರಿಂದಾಗಿ, ಮೈತ್ರಿ ಸರ್ಕಾರದಲ್ಲೂ ಜೆಡಿಎಸ್‌ ತನ್ನ ಪ್ರಣಾಳಿಕೆಯಿಂದ ಹೊರಬರಲು ಆಗಲಿಲ್ಲ.

ಕುಮಾರಸ್ವಾಮಿ ಹೊಸ ಬಜೆಟ್‌ ಮಂಡಿಸುತ್ತೇನೆ ಎಂದು ಹೊರಟರೆ, ತಾವು ಚುನಾವಣೆಗೆ ಮುನ್ನ ಮಂಡಿಸಿದ ಬಜೆಟ್ಟನ್ನೂ ಸೇರಿಸಿ ಅನುಷ್ಠಾನ ಮಾಡಿ ಎಂದು ಸಿದ್ದರಾಮಯ್ಯ ಒತ್ತಾಯ ಮಾಡಿದರು. ತಾವು ಈ ಹಿಂದೆ ಘೋಷಣೆ ಮಾಡಿದ್ದ ಸಾಲ ಮನ್ನಾಗಳ ಜತೆಗೆ ಸಿದ್ದರಾಮಯ್ಯ ಬಜೆಟ್‌ಗಳ ಅನುಷ್ಠಾನ, ಇದೆಲ್ಲದರ ನಡುವೆ ಧರ್ಮಸ್ಥಳದ ಶಾಂತಿವನದಲ್ಲಿ ಕುಳಿತು ಸಿದ್ದರಾಮಯ್ಯ ಆಡಿದ ಮಾತುಗಳು ಕ್ಷಣಕ್ಷಣಕ್ಕೂ ಕುಮಾರಸ್ವಾಮಿ ತಾಳ್ಮೆಯ ಕಟ್ಟೆ ಒಡೆಯುವಂತೆ ಮಾಡಿದವು.

ಲೋಕಸಭೆ ಚುನಾವಣೆಯಲ್ಲಿ ಸೀಟುಗಳ ಹೊಂದಾಣಿಕೆ ವೇಳೆಯೂ ಇದೇ ಗಲಿಬಿಲಿಗಳು ಉಂಟಾಗಿ ಕೊನೆಗೆ ಮಂಡ್ಯದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸುಮಲತಾ ಗೆದ್ದು ಎಚ್‌.ಡಿ. ದೇವೇಗೌಡರ ಮೊಮ್ಮಗ ನಿಖಿಲ್‌ ಕುಮಾರ ಸ್ವಾಮಿ ಸೋತರು. ಇತ್ತ ಯಾವುದೇ ಪೂರ್ವ ಲೆಕ್ಕಾಚಾರ, ಗ್ರೌಂಡ್‌ ರಿಯಾಲಿಟಿ ಅರಿವಿಲ್ಲದೆ ತುಮಕೂರಿನಲ್ಲಿ ಸ್ಪರ್ಧಿಸಿದ ಸ್ವತಃ ಎಚ್‌.ಡಿ. ದೇವೇಗೌಡರು ಸೋಲುಂಡರು. ಅಲ್ಲಿಗೆ ಈ ಮೈತ್ರಿ ಸರ್ಕಾರ ಬೀಳುವ ದಿನಗಳು ಆರಂಭವಾಗಿ ಕೊನೆಗೂ 23 ಜುಲೈ 2019ರಂದು ಸಿಎಂ ಸ್ಥಾನಕ್ಕೆ ಕುಮಾರಸ್ವಾಮಿ ರಾಜೀನಾಮೆ ನೀಡುವ ಮೂಲಕ ಸಮಾಪ್ತಿಯಾಯಿತು.

ಲೋಕಸಭೆಯಲ್ಲಿ ಕಾಂಗ್ರೆಸ್‌ ನಾಯಕತ್ವ ಒಪ್ಪಿಕೊಳ್ಳಲು ಇತರೆ ಪಕ್ಷಗಳು ಒಪ್ಪಿಕೊಳ್ಳದೆ ಇದ್ದದ್ದು, ಎಲ್ಲರನ್ನೂ ಜೋಡಿಸುವ ಸೂತ್ರವಾಗಿ ಯಾರೂ ಇಲ್ಲದಿದ್ದು ಮುಖ್ಯವಾಗಿತ್ತು. ದೇಶದ ವಿವಿಧೆಡೆ ಸಂಚರಿಸಿ ಎಲ್ಲ ಪಕ್ಷಗಳನ್ನೂ ಒಗ್ಗೂಡಿಸುವ ಚಾಕಚಕ್ಯತೆ, ವರ್ಚಸ್ಸು, ಸೈದ್ಧಾಂತಿಕ ಹಿನ್ನೆಲೆಯನ್ನು ಹೊಂದಿದ್ದ ಬಿಹಾರ ಸಿಎಂ ನಿತೀಶ್‌ ಕುಮಾರ್‌ ಅವರನ್ನು ಆರ್‌ಜೆಡಿ ಜತೆಗಿನ ಮೈತ್ರಿಯಿಂದ ಕರೆತಂದು ಬಿಜೆಪಿ ಮೈತ್ರಿ ಸರ್ಕಾರ ರಚಿಸಿದ್ದು, ಪ್ರತಿಪಕ್ಷಗಳಿಗೆ ನಾಯಕನ ಕೊರತೆ ಉಂಟುಮಾಡಿತ್ತು. ಎಲ್ಲಕ್ಕಿಂತ ಮುಖ್ಯವಾಗಿ ಪ್ರಧಾನಿ ನರೇಂದ್ರ ಮೋದಿ ವ್ಯಕ್ತಿತ್ವದ ಕಾರಣಕ್ಕೆ ಕೂಡ ಕಾಂಗ್ರೆಸ್‌ ಜತೆಗೆ ಇತರೆ ಪಕ್ಷಗಳು ಒಟ್ಟಾಗಲಿಲ್ಲ. ದಿನಬೆಳಗಾದರೆ ಜನರು ಕೇಳುತ್ತಿದ್ದ ಸಾಲಮನ್ನಾ ವಿಚಾರ, ಅದಕ್ಕೆ ಕುಮಾರಸ್ವಾಮಿ ಸಿಡಿಮಿಡಿಗೊಂಡು ಮಾತನಾಡುತ್ತಿದ್ದದ್ದೇ ವ್ಯವಹಾರವಾಗಿತ್ತು.

ಈಗ ಮತ್ತದೇ ಸಂದರ್ಭ
ಕಾಂಗ್ರೆಸ್‌ ಕೇಂದ್ರಿತವಾಗಿ ನೋಡಿದರೆ 2018ರ ಸ್ಥಿತಿಯೇ ಕರ್ನಾಟಕದಲ್ಲಿ 2023ರಲ್ಲೂ ಮರುಕಳಿಸಿದೆ. ಕಾಂಗ್ರೆಸ್‌ ಸರ್ಕಾರದ ಪ್ರಾರಂಭೋತ್ಸವಕ್ಕೆ ದೇಶದ ವಿವಿಧೆಡೆಗಳಿಂದ ಮುಖ್ಯಮಂತ್ರಿಗಳು, ವಿವಿಧ ಪಕ್ಷಗಳ ಮುಖಂಡರು ಆಗಮಿಸಿದ್ದರು. ಬಿಹಾರದಿಂದ ನಿತೀಶ್‌ ಕುಮಾರ್‌, ತಮಿಳುನಾಡಿನಿಂದ ಎಂ.ಕೆ. ಸ್ಟಾಲಿನ್‌, ಪಶ್ಚಿಮ ಬಂಗಾಳದಿಂದ ಸೀತಾರಾಂ ಯೆಚೂರಿ, ಜಾರ್ಖಂಡ್‌ನಿಂದ ಹೇಮಂತ್‌ ಸೊರೇನ್‌ ಸೇರಿ ಅನೇಕರು ಆಗಮಿಸಿ 2018ರ ರೀತಿಯಲ್ಲೇ ಕೈಕೈ ಹಿಡಿದು ಒಗ್ಗಟ್ಟು ಸಾರಿದರು. ಇದೆಲ್ಲದರಿಂದ ಕಾಂಗ್ರೆಸ್‌, ಪ್ರತಿಪಕ್ಷದ ಒಗ್ಗಟ್ಟಿನ ನಿರೀಕ್ಷೆಯಲ್ಲಿದೆ.

ಈ ಪ್ರಮಾಣವಚನ ಕಾರ್ಯಕ್ರಮಕ್ಕೇ ಮಮತಾ ಬ್ಯಾನರ್ಜಿ, ಅರವಿಂದ ಕೇಜ್ರಿವಾಲ್‌ ಸೇರಿ ಅನೇಕರು ಆಗಮಿಸಿಲ್ಲ. ಬಿಜೆಪಿ ಮಣಿಸಬೇಕು ಎನ್ನುವುದರಲ್ಲಿ ಒಮ್ಮತ ಇದೆಯಾದರೂ ಮಣಿಸಿದ ನಂತರ ತಾನೇ ಈ ಗುಂಪಿಗೆ ನಾಯಕನಾಗಬೇಕು ಎಂಬ ಪರಮ ಸ್ವಾರ್ಥವಿದೆ. ಈ ಕಪ್ಪೆ ಸ್ವಭಾವದಿಂದಾಗಿ, ಮೋದಿ ನೇತೃತ್ವದ ಬಿಜೆಪಿಯನ್ನು ಸೋಲಿಸುವ ಹತ್ತಿರಕ್ಕೂ ಬರಲು ಆಗುತ್ತಿಲ್ಲ. ಕಾಂಗ್ರೆಸ್‌ ನೇತೃತ್ವದ ಗುಂಪಿಗೆ ಬೆಂಬಲ ನೀಡದ ಅರವಿಂದ ಕೇಜ್ರಿವಾಲ್‌, ದೆಹಲಿ ಆಡಳಿತ ಪ್ರಾಧಿಕಾರದ ಮಸೂದೆಯನ್ನು ಹಿಡಿದು ತನ್ನ ನೇತೃತ್ವದಲ್ಲಿ ಇತರೆ ಪಕ್ಷಗಳನ್ನು ಒಟ್ಟುಗೂಡಿಸುವ ಪ್ರಯತ್ನದಲ್ಲಿದ್ದಾರೆ. ದೇಶದ ಮಟ್ಟದಲ್ಲಿ ಕಾಂಗ್ರೆಸ್‌ ಈ ಸರ್ಕಸ್‌ ನಡೆಸಲಿದೆ. ಅದು ಇನ್ನು ಆರು ತಿಂಗಳಲ್ಲಿ ಯಾವ ಸ್ವರೂಪ ಪಡೆದುಕೊಳ್ಳುತ್ತದೆ ಎನ್ನುವುದು 2024ರ ಲೋಕಸಭೆ ಚುನಾವಣೆಯನ್ನು ನಿರ್ಧರಿಸುತ್ತದೆ. ಆದರೆ ಅಲ್ಲಿ ಕೇಂದ್ರದಲ್ಲಿ ಏನೋ ಮ್ಯಾಜಿಕ್‌ ಆಗುತ್ತದೆ ಎಂದು ಇಲ್ಲಿನ ಕಾಂಗ್ರೆಸ್‌ ಸರ್ಕಾರವು ಆಕಾಶ ನೋಡುತ್ತ ಕುಳಿತರ ನೆಲ ಕುಸಿಯುತ್ತದೆ. ಈಗಾಗಲೆ ಗ್ಯಾರಂಟಿ ಯೋಜನೆಗಳ ಜಾರಿಯ ಮೊದಲ ಹೆಜ್ಜೆಯಲ್ಲಿ ಸರ್ಕಾರ ಅರ್ಧ ಸೋತಿದೆ. ಮೊದಲ ಸಂಪುಟ ಸಭೆಯಿಂದಲೇ ಜಾರಿ ಮಾಡಲಾಗುತ್ತದೆ ಎಂದು ಹೇಳಿದ್ದವರು ಈಗ ಸಂಪುಟದಲ್ಲಿ ಕೇವಲ ʼತಾತ್ವಿಕ ಒಪ್ಪಿಗೆʼ ನೀಡಿದ್ದಾರೆ. ತಾತ್ವಿಕ ಒಪ್ಪಿಗೆ ನಂತರ ಅಧ್ಯಯನ, ಹಣಕಾಸು ಲೆಕ್ಕಾಚಾರ ನಡೆದು ಯೋಜನೆ ಜಾರಿ ಆಗಬೇಕು.

ಈಗಾಗಲೆ ರಾಜ್ಯದಲ್ಲಿ ವಿದ್ಯುತ್‌ ಬಿಲ್‌ ಕುರಿತು ಜನರಲ್ಲಿ ಸಂಚಲನ ಉಂಟಾಗಿದೆ. ಡಿ.ಕೆ. ಶಿವಕುಮಾರ್‌ ಅವರು ಚುನಾವಣೆಗೆ ಮುನ್ನ ಹೇಳಿದಂತೆ ಜೂನ್‌ 1ರಿಂದ ವಿದ್ಯುತ್‌ ಬಿಲ್‌ ಕಟ್ಟುವುದಿಲ್ಲ ಎನ್ನುತ್ತಿದ್ದಾರೆ. ಗೃಹಲಕ್ಷ್ಮೀ, ಮಹಿಳೆಯರಿಗೆ ಉಚಿತ ಬಸ್‌ ಪ್ರಯಾಣ ಸೇರಿ ಉಳಿದ ಗ್ಯಾರಂಟಿಗಳ ಕುರಿತೂ ಜನರೂ ನಿರೀಕ್ಷೆಯಲ್ಲಿದ್ದಾರೆ. ಚುನಾವಣೆ ಸಮಯದಲ್ಲಿ ಗ್ಯಾರಂಟಿ ಕಾರ್ಡ್‌ ಹಂಚಿದ ರೀತಿ ಯೋಜನೆ ಜಾರಿ ಆಗುವುದಿಲ್ಲ ಎಂಬ ಸಚಿವ ಸತೀಶ್‌ ಜಾರಕಿಹೊಳಿ, ಕೆ.ಎನ್‌. ರಾಜಣ್ಣ, ಡಾ. ಜಿ. ಪರಮೇಶ್ವರ್‌ ಅಂಥವರು ಮಾತು ಸರ್ಕಾರಿ ಭಾಷೆಯಲ್ಲಿ ಸರಿಯಾಗಿದ್ದರೂ ಜನರಿಗೆ ಬೇರೆಯದೇ ಸಂದೇಶ ನೀಡುತ್ತಿವೆ.

ಆರ್‌ಎಸ್‌ಎಸ್‌, ಬಜರಂಗದಳ ಬ್ಯಾನ್‌ ಮಾಡುವ ವಿಚಾರವನ್ನು ಸಚಿವ ಪ್ರಿಯಾಂಕ್‌ ಖರ್ಗೆ ಅವರು ಪ್ರಸ್ತಾಪಿಸುವುದರಿಂದಲೋ, ಮುಂದೆ ಲೋಕಸಭೆ ಚುನಾವಣೆಯತ್ತ ಜನರು ಗಮನಹರಿಸುವುದರಿಂದಲೋ ಗ್ಯಾರಂಟಿಗಳನ್ನು ಜನರು ಮರೆಯುತ್ತಾರೆ ಎಂದುಕೊಂಡರೆ ತಪ್ಪಾಗುತ್ತದೆ. ಏಕೆಂದರೆ ಇದು ಜನರ ನಿತ್ಯಜೀವನದ ಜತೆಗೆ ಹೊಂದಿಕೊಂಡಿರುವ ಘೋಷಣೆಗಳು.

ದೇಶದಲ್ಲಿ ನಾವು ಇಷ್ಟು ಲಕ್ಷ ಶೌಚಾಲಯ ನಿರ್ಮಿಸಿದ್ದೇವೆ ಎನ್ನುವ ರೀತಿ ಘೋಷಣೆ ಅಲ್ಲ ಇವು. ಇವುಗಳ ಜಾರಿ ಆಗಿದೆಯೋ ಇಲ್ಲವೋ ಎನ್ನುವುದನ್ನು ಯಾವುದೋ ಸಮೀಕ್ಷಾ ಸಂಸ್ಥೆಯೋ, ಏಜೆನ್ಸಿಯೋ, ಸಾಂಖ್ಯಿಕ ಇಲಾಖೆಯೋ, ಮಾಧ್ಯಮವೋ ನೀಡಬೇಕಾಗಿಲ್ಲ. ಈ ಯೋಜನೆ ಜಾರಿ ಆಗಿದೆಯೋ ಇಲ್ಲವೋ ಎನ್ನುವುದು ನೇರವಾಗಿ ಜನರಿಗೇ ತಿಳಿಯುತ್ತದೆ. ಕಾಂಗ್ರೆಸ್‌ ಸರ್ಕಾರ ಆರ್ಥಿಕ ತಜ್ಞರ ಮಾತು ಕೇಳಿ ಹೆಚ್ಚು ಹೆಚ್ಚು ನಿಬಂಧನೆಗಳನ್ನು ವಿಧಿಸುವ ಮೂಲಕ ಹೆಚ್ಚೆಚ್ಚು ಹಣ ಉಳಿಸುವ ಪ್ರಯತ್ನ ಮಾಡಲು ಮುಂದಾಗುವಂತೆ ಕಾಣುತ್ತಿದೆ. ತಮ್ಮ ಘೋಷಣೆಗಳನ್ನು ಜಾರಿ ಮಾಡಲು ಎಚ್‌.ಡಿ. ಕುಮಾರಸ್ವಾಮಿಯವರು ಹೆಣಗಾಡಿದಂತೆ ಈಗ ಸಿಎಂ ಸಿದ್ದರಾಮಯ್ಯ ಅವರಿದ್ದಾರೆ. ಕುಮಾರಸ್ವಾಮಿಯವರದ್ದು ಮೈತ್ರಿ ಸರ್ಕಾರವಾದ್ದರಿಂದ ಬೇಗ ಬಿದ್ದುಹೋಯಿತು. ಆದರೆ ಈಗ ಕಾಂಗ್ರೆಸ್‌ನದ್ದು ಸರಳ ಬಹುಮತದ ಸರ್ಕಾರ ಆಗಿರುವುದರಿಂದ ಒಮ್ಮೆಲೇ ಬೀಳದೇ ಇರಬಹುದು. ಆದರೆ ತಾವು ಮೋಸ ಹೋಗಿದ್ದೇವೆ ಎಂದು ಮತದಾರರ ಮನಸ್ಸಿನಲ್ಲಿ ನಾಟಿದರೆ ಮುಂದಿನ ಚುನಾವಣೆಗಳಲ್ಲಿ ಕಾಂಗ್ರೆಸ್‌ಗೆ ಹೊಡೆತ ತಪ್ಪಿದ್ದಲ್ಲ.

ಇದನ್ನೂ ಓದಿ: Karnataka Politics: ಗ್ಯಾರಂಟಿ ಯೋಜನೆಗಳ ಜಾರಿ ಸದ್ಯಕ್ಕಿಲ್ಲ?: ಸುಳಿವು ನೀಡಿದ ಸಚಿವ ಪ್ರಿಯಾಂಕ್‌ ಖರ್ಗೆ

Exit mobile version