Site icon Vistara News

D ಕೋಡ್‌ ಅಂಕಣ: ರಾಹುಲ್‌ ಗಾಂಧಿ ವಿರುದ್ಧ ನರೇಂದ್ರ ಮೋದಿ ನಿರಂತರ ವಾಗ್ದಾಳಿ ನಡೆಸಲು ಏನು ಕಾರಣ?

pm narendra modi rahul gandhi

ಅಸ್ಸಾಂನಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಿ, ಬೆಳಗಾವಿಯಲ್ಲಿ ಫಲಾನುಭವಿಗಳ ಸಮಾವೇಶ ನಡೆಸಲಿ… ಪ್ರಧಾನಿ ನರೇಂದ್ರ ಮೋದಿಯವರ ಭಾಷಣದಲ್ಲಿ ಕುಟುಂಬ ರಾಜಕಾರಣದ ವಿರುದ್ಧ ಒಂದಷ್ಟು ಕಿಡಿ ಇದ್ದೇ ಇರುತ್ತದೆ. ಅದರಲ್ಲೂ ನೇರವಾಗಿ ಕಾಂಗ್ರೆಸ್‌ನ ಕುಟುಂಬ ರಾಜಕಾರಣವನ್ನು ಕೆಣಕುತ್ತಾರೆ. ಆಗಾಗ್ಗೆ ಜೆಡಿಎಸ್‌, ಆರ್‌ಜೆಡಿ ಮುಂತಾದ ಪಕ್ಷಗಳ ಕುಟುಂಬ ರಾಜಕಾರಣವನ್ನೂ ಟೀಕೆ ಮಾಡುತ್ತಾರೆ.

ಕುಟುಂಬ ರಾಜಕಾರಣಕ್ಕೆ ಭಾರತದಲ್ಲಿ ಮೂರ್ತ ರೂಪವೇ ಕಾಂಗ್ರೆಸ್‌ನ ನೆಹರೂ ಕುಟುಂಬ ಅಂದರೆ ಗಾಂಧಿ ಕುಟುಂಬ ಎಂದು ಈಗ ಬ್ರ್ಯಾಂಡ್‌ ಆಗಿಬಿಟ್ಟಿದೆ. ಕರ್ನಾಟಕದ ಮಟ್ಟಿಗೆ ಜೆಡಿಎಸ್‌ ಎಂದರೆ ಕುಟುಂಬ ರಾಜಕಾರಣದ ಪಕ್ಷ ಎಂದು ಬ್ರ್ಯಾಂಡ್‌ ಆಗಿದೆ. ಆದರೆ ಇವೆರಡೇ ಪಕ್ಷವಲ್ಲ, ಬಿಜೆಪಿಯಲ್ಲೂ ಕುಟುಂಬದ ಹಿನ್ನೆಲೆ ಸಾಕಷ್ಟು ಜನರಿದ್ದಾರೆ ಎನ್ನುವುದು ಮೇಲ್ನೋಟಕ್ಕೇ ಕಾಣುತ್ತದೆ. ಆದರೂ ಪ್ರಧಾನಿ ನರೇಂದ್ರ ಮೋದಿ ನಿರಂತರ ಕಾಂಗ್ರೆಸ್‌ ವಿರುದ್ಧ, ಅದರಲ್ಲೂ ರಾಹುಲ್‌ ಗಾಂಧಿ ವಿರುದ್ಧ ವಾಗ್ದಾಳಿ ನಡೆಸುತ್ತಿರುವುದೇತಕ್ಕೇ? ಈ ಬಗ್ಗೆ ಒಂದಷ್ಟು ಅಂಕಿ ಅಂಶಗಳ ಆಧಾರದಲ್ಲಿ ಚರ್ಚಿಸೋಣ. ಇದು ಬಹುದೊಡ್ಡ ವಿಚಾರ ಆದ್ಧರಿಂದ ಒಂದು ಲೇಖನದಲ್ಲಿ ಎಲ್ಲ ಮಗ್ಗುಲನ್ನೂ ಚರ್ಚಿಸಿ ತೀರ್ಮಾನ ಹೇಳಲು ಸಾಧ್ಯವಿಲ್ಲ ಎನ್ನುವುದು ಡಿಸ್‌ಕ್ಲೈಮರ್‌.

ಕುಟುಂಬದ ಯಾವುದೇ ಹಿನ್ನೆಲೆ ಇಲ್ಲದವರಿಗೆ ಭಾರತೀಯ ಸಂಸತ್ತಿನ ಪ್ರವೇಶ ಆಗುತ್ತಿದೆಯೇ? ಆದರೂ ಯಾವ ವಯಸ್ಸಿಗೆ ಆಗುತ್ತದೆ? ಇದೇ ಸಂಸತ್‌ ಪ್ರವೇಶವು, ಕುಟುಂಬದ ಹಿನ್ನೆಲೆ ಇರುವವರಿಗೆ ಎಷ್ಟನೇ ವಯಸ್ಸಿಗೆ ಆಗುತ್ತದೆ ಎನ್ನುವುದನ್ನು ನೋಡೋಣ. 2019ರಲ್ಲಿ ಅತ್ಯಂತ ಕಡಿಮೆ ವಯಸ್ಸಿನ ಸಂಸದರ ವಿವರ ಈ ಕೆಳಗಿನ ಟೇಬಲ್‌ನಲ್ಲಿದೆ. ಅವರ ಹೆಸರಿನ ಮುಂದೆ, ಕುಟುಂಬ ರಾಜಕಾರಣದ ಹಿನ್ನೆಲೆಯನ್ನು ನಮೂದಿಸಿದೆ.

17ನೇ ಲೋಕಸಭೆಯಲ್ಲಿ 41-55 ವಯೋಮಾನದಲ್ಲಿ ಆಯ್ಕೆಯಾದ 232, 56-70ರ ವಯೋಮಾನದಲ್ಲಿ ಆಯ್ಕೆಯಾದ 215 ಹಾಗೂ 70ಕ್ಕಿಂತ ಹೆಚ್ಚಿನ ವಯೋಮಾನದ 26 ಸಂಸದರಿದ್ದಾರೆ. 2019ರಲ್ಲಿ ಆಯ್ಕೆಯಾದಾಗ 35 ವರ್ಷದೊಳಗಿದ್ದವರು ಈ ಟೇಬಲ್‌ನಲ್ಲಿರುವ 34 ಸಂಸದರು. ಈ 34 ಯುವ ಸಂದರಲ್ಲಿ 18 ಸಂಸದರು ಕುಟುಂಬದ ಹಿನ್ನೆಲೆ ಹೊಂದಿದ್ದಾರೆ. ಇನ್ನು 5 ಸಂಸದರು ಚಲನಚಿತ್ರ, ಉದ್ಯಮದಂತಹ ವಿಭಿನ್ನ ಕ್ಷೇತ್ರಗಳಿಂದ ಆಗಮಿಸಿದ್ದಾರೆ. ಅಂದರೆ 34ರಲ್ಲಿ 23 ಸಂಸದರು ಒಂದೋ ಕುಟುಂಬದ ಹಿನ್ನೆಲೆ ಅಥವಾ ಇನ್ನಿತರೆ ಸಾಮಾಜಿಕ ಕ್ಷೇತ್ರಗಳಲ್ಲಿ ಪ್ರಸಿದ್ಧರಾಗಿ ರಾಜಕೀಯಕ್ಕೆ ಆಗಮಿಸಿದವರು. ರಾಜಕಾರಣದಲ್ಲೇ ಸಮಾಜ ಸೇವೆ ಆರಂಭಿಸಿ, ಪಕ್ಷದ ಕಾರ್ಯಕರ್ತನಾಗಿ ದುಡಿದರೆ ಇಷ್ಟು ಚಿಕ್ಕ ವಯಸ್ಸಿನಲ್ಲಿ ಸಂಸದರಾಗುವ ಅವಕಾಶ ದೊರಕುವ ಸಾಧ್ಯತೆ ಶೇ.30ರಷ್ಟಾಗುತ್ತದೆ.

ಇವರುಗಳು ಕಿರಿಯ ವಯಸ್ಸಿನ ಸಂಸದರಾದರೆ, ಮೊದಲ ಬಾರಿಗೆ ಸಂಸದರಾದವರ ಲೆಕ್ಕ ಬೇರೆಯೇ ಇದೆ. 2019ರ ಚುನಾವಣೆಯಲ್ಲಿ ಒಟ್ಟು 271 ಜನರು ಮೊದಲ ಬಾರಿ ಸಂಸದರಾದರು.ಎರಡನೇ ಬಾರಿಗೆ ಸಂಸದರಾದವರು 147 ಜನರು. ಉಳಿದ ಅಂಕಿ ಅಂಶ ಕೆಳಗಿನ ಟೇಬಲ್‌ನಲ್ಲಿದೆ.

ಇವರಲ್ಲಿ ಬಿಜೆಪಿಯಿಂದ ಅತಿ ಹೆಚ್ಚು 135 ಸಂಸದರಿದ್ದರೆ ಕಾಂಗ್ರೆಸ್‌ನಿಂದ 31, ಡಿಎಂಕೆ(18), ವೈಎಸ್‌ಆರ್‌ ಕಾಂಗ್ರೆಸ್‌(18) ಮುಂತಾದ ಪಕ್ಷಗಳಿವೆ. ಕರ್ನಾಟಕದಿಂದ ಮೊದಲ ಬಾರಿಗೆ 2019ರಲ್ಲಿ ಸಂಸದರಾದವರ ಸಂಖ್ಯೆ ಬರೊಬ್ಬರಿ 11. ಎ. ನಾರಾಯಣಸ್ವಾಮಿ, ಸುಮಲತಾ ಅಂಬರೀಶ್‌, ಬಿ.ಎನ್‌. ಬಚ್ಚೇಗೌಡ, ಮಂಗಳಾ ಅಂಗಡಿ, ಅಣ್ಣಾಸಾಹೇಬ್‌ ಜೊಲ್ಲೆ, ಎಸ್‌. ಮುನಿಸ್ವಾಮಿ, ರಾಜಾ ಅಮರೇಶ್ವರ ನಾಯಕ, ಉಮೇಶ್‌ ಜಾಧವ್‌, ಪ್ರಜ್ವಲ್‌ ರೇವಣ್ಣ, ತೇಜಸ್ವಿ ಸೂರ್ಯ ಹಾಗೂ ವೈ. ದೇವೇಂದ್ರಪ್ಪ.

ನಾರಾಯಣಸ್ವಾಮಿ, ಬಚ್ಚೇಗೌಡ ಮೊದಲೇ ಶಾಸಕರಾಗಿದ್ದವರು, ಮುನಿಸ್ವಾಮಿ ಕಾರ್ಪೊರೇಟರ್‌ ಆಗಿದ್ದರು, ಪ್ರಜ್ವಲ್‌ ರೇವಣ್ಣ-ತೇಜಸ್ವಿ ಸೂರ್ಯ-ಅಣ್ಣಾ ಸಾಹೇಬ್‌ ಜೊಲ್ಲೆ -ಮಂಗಳಾ ಅಂಗಡಿ-ಸುಮಲತಾ ಅಂಬರೀಶ್‌ ಕುಟುಂಬದ ಹಿನ್ನೆಲೆ ಹೊಂದಿರುವವರು. ಯಾವ ಕೌಟುಂಬಿಕ ಹಿನ್ನೆಲೆ ಇಲ್ಲದ ಒಬ್ಬ ಯುವಕನೂ 2019ರಲ್ಲಿ ಸಂಸದನಾಗಿಲ್ಲ. ಯುವಕರಿದ್ದಾಗಲೇ ಸಂಸದರಾಗಬೇಕೆಂದರೆ ಮೊದಲನೆಯದಾಗಿ ಕುಟುಂಬದ ಹಿನ್ನೆಲೆ ಹೊಂದಿರಬೇಕು ಎನ್ನುವುದು ಸ್ಪಷ್ಟವಾಗುತ್ತದೆ. ಅಥವಾ ವಯಸ್ಸಾಗುವವರೆಗೆ ಕಾಯಬೇಕು.

ವಿಧಾನಸಭೆಯಲ್ಲೂ ಇದೇ ಸ್ಥಿತಿ
ಕರ್ನಾಟಕ ವಿಧಾನಸಭೆಯಲ್ಲೂ ಅತಿ ಕಡಿಮೆ ವಯಸ್ಸಿನ ಶಾಸಕರಲ್ಲಿ ಬಹುತೇಕರು ಕುಟುಂಬ ಹಿನ್ನೆಲೆ ಇರುವವರು. ಕುಟುಂಬದ ಹಿನ್ನೆಲೆ ಇಲ್ಲದೇ ಇರುವವರಿಗೆ ರಾಜಕೀಯ ಪಕ್ಷಗಳು ಸಾಕಷ್ಟು ಟಿಕೆಟ್‌ ನೀಡುತ್ತವಾದರೂ ಗೆಲ್ಲುವ ಪ್ರಮಾಣ ಅತಿ ಕಡಿಮೆ. 2018ರಲ್ಲಿ ಆಯ್ಕೆಯಾದ ಶಾಸಕರಲ್ಲಿ 38 ವರ್ಷದೊಳಗಿನ, ಅಂದರೆ 1980ರ ನಂತರ ಜನಿಸಿದ ಶಾಸಕರ ಸಂಖ್ಯೆ ಕೇವಲ 11. ಇವರಲ್ಲಿ ನಾಲ್ಕು ಶಾಸಕರು ಮಾತ್ರ ಯಾವುದೇ ರಾಜಕೀಯ ಹಿನ್ನೆಲೆ ಹೊಂದಿಲ್ಲ. ಅಂದರೆ ಶೇ.65 ಶಾಸಕರು ಕುಟುಂಬದ ಹಿನ್ನೆಲೆಯಿಂದಲೇ ಬಂದವರು. ಕುಟುಂಬದ ಹಿನ್ನೆಲೆ ಇಲ್ಲದೇ ಇರುವವರು ಮೂರ್ನಾಲ್ಕು ಬಾರಿ ಸೋತು, ತಮ್ಮ ನಾಯಕತ್ವವನ್ನು ಸಾಬೀತುಮಾಡಿ ಶಾಸಕರಾಗುವ ಹೊತ್ತಿಗೆ 45-50 ವರ್ಷ ದಾಟಿರುತ್ತದೆ.

ವಯಸ್ಸು ಕಡಿಮೆಯಾಗುತ್ತಿದೆ, ಆದರೆ ಕುಟುಂಬದ ಹೊರತಾಗಲ್ಲ

ಭಾರತೀಯ ಸಂಸತ್ತಿನ ಸರಾಸರಿ ಸಂಸದರ ವಯೋಮಿತಿಯನ್ನು ಕಡಿಮೆ ಮಾಡುವಲ್ಲಿ ಈಗಿನ ಬಿಜೆಪಿ ಸರ್ಕಾರ ತನ್ನ ಪಾಲಿನ ಪ್ರಯತ್ನ ನಡೆಸುತ್ತಿದೆ ಎಂದರೆ ತಪ್ಪಲ್ಲ. ಈಗಿನ ಲೋಕಸಭೆಯಲ್ಲಿ 25-40 ವಯೋಮಾನದ ಶೇ.12 ಸಂಸದರಿದ್ದಾರೆ. ಅದೇ 41-55 ವಯೋಮಾನದ ಶೇ.41, 56-70 ವಯೋಮಾನದ ಶೇ.42 ಹಾಗೂ 70ಕ್ಕಿಂತ ಹೆಚ್ಚಿನ ವಯಸ್ಸಿನ ಶೇ.6 ಸಂಸದರಿದ್ದಾರೆ.

2014ರಲ್ಲಿ 25-40 ವಯೋಮಾನದ ಸಂಸದರ ಸಂಖ್ಯೆ ಶೇ.8 ಇದ್ದದ್ದು ಈಗ ಶೇ.12ಕ್ಕೆ ಏರಿದೆ. ಅಂದರೆ ಶೇ.4ರಷ್ಟು ಕಡಿಮೆ ವಯೋಮಾನದ ಸಂಸದರು ಆಯ್ಕೆಯಾಗಿದ್ದಾರೆ. ಈಗ ಭಾರತದ ಸಂಸತ್ತಿನ ಸರಾಸರಿ ವಯೋಮಾನ 54 ವರ್ಷವಾಗಿದೆ. 2014ರಲ್ಲಿ ಆಯ್ಕೆಯಾದ 16ನೇ ಲೋಕಸಭೆಯ ಸರಾಸರಿ ವಯಸ್ಸು 56 ವರ್ಷವಿತ್ತು. ಅಂದರೆ ಎರಡು ವರ್ಷ ಕಡಿಮೆ ವಯಸ್ಸಿನವರು ಸಂಸದರಾಗಿದ್ದಾರೆ. ಈ ನಿಟ್ಟಿನಲ್ಲಿ ಸಂಸತ್ತು ಯುವಕರಾಗುವತ್ತ ಸಾಗುತ್ತಿದೆ. ಆದರೆ ಯುವಕರಾಗಿಸುವ ಈ ಪ್ರಯತ್ನದಲ್ಲಿ, ಕುಟುಂಬ ರಾಜಕಾರಣವನ್ನು ಮೀರಲು ಸಾಧ್ಯವಾಗುತ್ತಿಲ್ಲ.

ಇದು ಒಂದು ಅವಧಿಯ ಲೋಕಸಭೆಗೆ ಮಾತ್ರ ಸೀಮಿತವಾಗಿಲ್ಲ. 2014ರಲ್ಲಿ ಆಯ್ಕೆಯಾದ 16ನೇ ಲೋಕಸಭೆಯಲ್ಲಿ ಯುವ ಸಂಸದರಾಗಿದ್ದವರಲ್ಲಿ ಪ್ರಮುಖರೆಂದರೆ ಸ್ಮೃತಿ ಇರಾನಿ, ಪೂನಮ್‌ ಮಹಾಜನ್‌ (ಕೇಂದ್ರ ಮಂತ್ರಿಯಾಗಿದ್ದ ಪ್ರಮೋದ್‌ ಮಹಾಜನ್‌ ಪುತ್ರಿ), ವರುಣ್‌ ಗಾಂಧಿ (ಮೇನಕಾ ಗಾಂಧಿ ಪುತ್ರ), ಸುಪ್ರಿಯಾ ಸುಳೆ (ಶರದ್‌ ಪವಾರ್‌ ಪುತ್ರಿ), ನವೀನ್‌ ಜಿಂದಲ್‌ (ಉದ್ಯಮಿ ಹಾಗೂ ರಾಜಕಾರಣಿ ಒ.ಪಿ. ಜಿಂದಲ್‌ ಪುತ್ರ), ಮಿಲಿಂದ್‌ ದೇವೂರ (ಕೇಂದ್ರದ ಮಾಜಿ ಸಚಿವ ಮುರಳಿ ದೇವೂರ ಪುತ್ರ), ನಿಶಿಕಾಂತ್‌ ದುಬೆ. ಬಹುತೇಕರು ಕುಟುಂಬದ ಹಿನ್ನೆಲೆ ಹೊಂದಿರುವವರು.

ಸಾಮಾಜಿಕ ವ್ಯವಸ್ಥೆಯಲ್ಲಿಯೇ ಇದೆ
ಕುಟುಂಬ ರಾಜಕಾರಣ ಎನ್ನುವುದು ಭಾರತೀಯ ಸಂಸ್ಕೃತಿಯಲ್ಲೇ ಅಡಗಿಕೊಂಡಿದೆ. ಅದಕ್ಕೆ, ವೇದ ಪುರಾಣಗಳನ್ನು ಪ್ರಜಾಪ್ರಭುತ್ವ ವ್ಯವಸ್ಥೆಗೆ, ಆ ವ್ಯವಸ್ಥೆಯಲ್ಲಿ ನಡೆಯುವ ಅನೇಕ ಪ್ರಕ್ರಿಯೆಗಳಿಗೆ ಹೊಂದಿಸಿಕೊಳ್ಳುವ ಭಾರತೀಯರ ಮನೋಗುಣವೂ ಒಂದು ಕಾರಣ. ಇದು ಸರಿಯೋ ತಪ್ಪೋ ಎನ್ನುವ ವಿಶ್ಲೇಷಣೆ ಮಾಡುವ ಪ್ರಯತ್ನ ಇಲ್ಲಿ ಮಾಡುವುದಿಲ್ಲ. ಆದರೆ ಹಾಗೆ ಅನ್ವಯಿಸಿಕೊಳ್ಳುತ್ತಿರುವುದಂತೂ ಸತ್ಯ.

ಉದಾಹರಣೆಗೆ, ಎರಡು ದಿನದ ಹಿಂದೆ ಉತ್ತರ ಪ್ರದೇಶದಲ್ಲಿ ಕುಖ್ಯಾತ ಗ್ಯಾಂಗ್‌ಸ್ಟರ್‌ ಅತೀಕ್‌ ಅಹ್ಮದ್‌ನನ್ನು ಪೊಲೀಸ್‌ ಭದ್ರತೆಯ ನಡುವೆಯೇ ಗುಂಡಿಟ್ಟು ಹತ್ಯೆ ಮಾಡಲಾಯಿತು. ಈ ವಿಚಾರವನ್ನು ಬಿಜೆಪಿಯ ಅನುಯಾಯಿಗಳು “ದುಷ್ಟ ಸಂಹಾರ” ಎಂದು ವರ್ಣಿಸುತ್ತಿದ್ದಾರೆ. ಅಂದರೆ ದುಷ್ಟರ ಉಪಟಳ ಯಾವಾಗ ಹೆಚ್ಚಾಗುತ್ತದೆಯೋ ಆಗ ತಾನೇ ಆವತರಿಸಿ ಸಂಹಾರ ಮಾಡುವ ದೇವರ ಲೀಲೆಯನ್ನು ಈ ಘಟನೆಗೆ ಅನ್ವಯಿಸಿಕೊಳ್ಳಲಾಗುತ್ತದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾವೇ ರಚಿಸಿ, ಒಪ್ಪಿ, ಅಳವಡಿಸಿಕೊಂಡಿರುವ ಸಂವಿಧಾನದ ಪ್ರಕಾರ ನ್ಯಾಯಾಲಯದ ಪ್ರಕ್ರಿಯೆ ಮೂಲಕ ಶಿಕ್ಷೆ ಆದರೆ ಮಾತ್ರವೇ ಶಿಕ್ಷೆ ಎನ್ನುವುದಕ್ಕೆ ಇನ್ನೂ ಮನಸ್ಸು ಬದಲಾವಣೆಯಾಗಿಲ್ಲ.

ಅದೇ ರೀತಿ, ಆಚಾರ್ಯ ಚಾಣಾಕ್ಯ ತನ್ನ ಅರ್ಥ ಶಾಸ್ತ್ರ ಗ್ರಂಥದಲ್ಲಿ ಒಬ್ಬ ದೇಶ ಆಳುವ ರಾಜನಿಗೆ ಇರಬೇಕಾದ ಅರ್ಹತೆಗಳನ್ನು ಈ ರೀತಿ ಪಟ್ಟಿ ಮಾಡಿದ್ದಾನೆ. ಈ ಎಲ್ಲ ಗುಣಗಳು ಯಾರಲ್ಲಿವೆಯೋ ಅವರಿಗೆ ನಿಮ್ಮ ಮತ ನೀಡಿ ಎಂಬ ಸಂದೇಶವೊಂದು ವಾಟ್ಸ್‌ಅಪ್‌ನಲ್ಲಿ ಇತ್ತೀಚೆಗೆ ಹರಿದಾಡುತ್ತಿದೆ. ಈಗಿನ ವ್ಯವಸ್ಥೆಯಲ್ಲಿ ತಾಂಡವವಾಡುತ್ತಿರುವ ಭ್ರಷ್ಟಾಚಾರದಂತಹ ಅನೇಕ ಲೋಪದೋಷಗಳೂ, ಹಿಂದಿನದೇ ಒಳ್ಳೆಯದು ಎಂಬ ಅಭಿಪ್ರಾಯಕ್ಕೆ ಒತ್ತಾಸೆ ನೀಡಿವೆ.

ವೀರ ಸಾವರ್ಕರ್‌ ಮೊಮ್ಮಗ, ನೇತಾಜಿ ಸುಭಾಷ್‌ಚಂದ್ರ ಬೋಸ್‌ ಮೊಮ್ಮಗ, ಮಹಾತ್ಮ ಗಾಂಧಿ ಮೊಮ್ಮಗ, ಡಾ. ಬಿ.ಆರ್‌. ಅಂಬೇಡ್ಕರ್‌ ಮೊಮ್ಮಗ, ಲಾಲ್‌ ಬಹದ್ದೂರ್‌ ಶಾಸ್ತ್ರಿ ಮೊಮ್ಮಗ… ಹೀಗೆ ನಮ್ಮ ಸ್ವಾತಂತ್ರ್ಯ ಹೋರಾಟಗಾರರ ಕುಟುಂಬದವರಿಗೆ ಪ್ರಾಮುಖ್ಯತೆ ನೀಡುತ್ತೇವೆ. ಈ ಪೀಳಿಗೆಯನ್ನು ನೋಡುತ್ತಲೇ, ಹಿಂದಿನ ಪೀಳಿಗೆಯನ್ನು ಕಲ್ಪಿಸಿಕೊಳ್ಳುತ್ತೇವೆ ಹಾಗೂ ಈ ಪೀಳಿಗೆಯವರಲ್ಲಿ ಹಿಂದಿನವರ ರೂಪ, ಹಾವ ಭಾವವನ್ನು ಕಾಣುತ್ತ ಪುಳಕಿತರಾಗುತ್ತೇವೆ. ಅಂಬೇಡ್ಕರ್‌ ಮೊಮ್ಮಗ ಮಾತನಾಡುತ್ತಿದ್ದರೆ ನಮಗೆ ಸಾಕ್ಷಾತ್‌ ಅಂಬೇಡ್ಕರ್‌ ವಾಣಿಯೇ ಕೇಳುವಂತೆ ಭಾಸವಾಗುತ್ತದೆ. ಈ ವಿಚಾರ ರಾಜಕೀಯಕ್ಕಷ್ಟೆ ಸೀಮಿತವಾಗಿಲ್ಲ, ಸಾಂಸ್ಕೃತಿಕ ಲೋಕದಲ್ಲೂ ಇದೆ.

ರಾಜಕಾರಣಿಯೊಬ್ಬನ ಪುತ್ರ ಅಥವಾ ಪುತ್ರಿ ಎನ್ನುವುದು ಮೂಲ ಮಟ್ಟದಲ್ಲಿ ಒಂದು ಪ್ರಭಾವಳಿಯನ್ನು ಕಲ್ಪಿಸಿಬಿಡುತ್ತದೆ. ಆತನ ಅಪ್ಪನಲ್ಲಿ ಇರುವ ಯಾವುದೇ ಗುಣ ಈತನಲ್ಲಿ ಇಲ್ಲದಿದ್ದರೂ ನೋಡಿ ಕಣ್ತುಂಬಿಕೊಳ್ಳೋಣ ಎಂಬ ಕುತೂಹಲಕ್ಕಾದರೂ ಜನರು ಸೇರಿಕೊಳ್ಳುತ್ತಾರೆ. ಇಷ್ಟರ ನಂತರ ಆತನೇನಾದರೂ ಒಂದಷ್ಟು ನಾಯಕತ್ವ ಗುಣ ಹೊಂದಿದ್ದರಂತೂ ಆತ ರಾಜಕಾರಣದಲ್ಲಿ ಸಫಲನಾದ ಎಂದೇ ಅರ್ಥ.

ಉದಾಹರಣೆಗೆ, ಮಾಜಿ ಸಿಎಂ ಬಿ.ಎಸ್‌. ಯಡಿಯೂರಪ್ಪ ಪುತ್ರ, ಮಾಜಿ ಸಿಎಂ ಸಿದ್ದರಾಮಯ್ಯ ಪುತ್ರ, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಪುತ್ರ… ಮುಂತಾದ ಹಣೆಪಟ್ಟಿಗಳು ಸಾಕಷ್ಟು ಪ್ರಾರಂಭಿಕ ಮತಗಳನ್ನು ತಂದುಕೊಟ್ಟುಬಿಡುತ್ತವೆ. ಮಾಧ್ಯಮಗಳಲ್ಲಿ ಪ್ರಾರಂಭಿಕ ಪ್ರಚಾರಕ್ಕೂ ಇದು ಅನುಕೂಲವಾಗುತ್ತದೆ. ಆದರೆ ಇದೇ ಪ್ರಾರಂಭಿಕ ಮತಗಳು, ಪ್ರಚಾರ, ಹೊಸದಾಗಿ ರಾಜಕೀಯ ಪ್ರವೇಶಿಸುವ ಸಿ.ಟಿ. ರವಿ, ಪಿ. ರಾಜೀವ್‌ ಅಂಥವರಿಗೆ ಸಿಗುವುದಿಲ್ಲ. ಆತ ತನ್ನ ಪ್ರತಿ ಹೆಜ್ಜೆಯನ್ನೂ ನಿರೂಪಿಸಬೇಕಾಗುತ್ತದೆ, ತನ್ನ ಪ್ರತಿ ನಡವಳಿಕೆಯನ್ನೂ ತಿದ್ದಿಕೊಳ್ಳಬೇಕಾಗುತ್ತದೆ. ಕಾಲಾನುಕ್ರಮದಲ್ಲಿ ಆತನನ್ನು ನಾಯಕ ಎಂದು ಸ್ವೀಕರಿಸಲಾಗುತ್ತದೆ. ಆದರೆ ಅದಕ್ಕೆ ಸಾಕಷ್ಟು ವರ್ಷ ಪರಿಶ್ರಮಪಡಬೇಕಾಗುತ್ತದೆ. ಹಾಗೆಯೇ, ಏನಾದರೂ ತಪ್ಪು ಹೆಜ್ಜೆ ಇಟ್ಟಾಗ ಕುಸಿಯುವ ಆತಂಕವೂ ಕುಟುಂಬದ ಹಿನ್ನೆಲೆ ಇಲ್ಲದವರಿಗೇ ಹೆಚ್ಚು. ಒಂದು ತಪ್ಪು ರಾಜಕೀಯ ಲೆಕ್ಕಾಚಾರದ ಕಾರಣಕ್ಕೆ ಕುಸಿದರೆ ಮತ್ತೆ ಏಳುವುದು ಮರುಜನ್ಮ ಪಡೆದಷ್ಟೇ ಕಷ್ಟ. ಕುಟುಂಬದ ಹಿನ್ನೆಲೆ ಹೊಂದಿರುವವರಿಗೆ ತಮ್ಮ ವ್ಯಕ್ತಿತ್ವವನ್ನು ಪೂರ್ಣ ನಿರೂಪಿಸುವ ಹೊಣೆ ಇರುವುದಿಲ್ಲ.

ಕುಷನ್‌ ಎಫೆಕ್ಟ್
ಇದೇ ಪ್ರಾರಂಭಿಕ ಅನುಕೂಲ (ಕುಷನ್‌ ಎಫೆಕ್ಸ್) ಕಾಂಗ್ರೆಸ್‌ನ ರಾಹುಲ್‌ ಗಾಂಧಿ ಅವರಿಗೂ ದೊರಕಿದೆ. ಜವಾಹರಲಾಲ್‌ ನೆಹರು ಅವರಿಂದ ಇಂದಿರಾ ಗಾಂಧಿ, ನಂತರ ರಾಜೀವ್ ಗಾಂಧಿ, ಆನಂತರ ಸೋನಿಯಾ ಗಾಂಧಿ, ಇದೀಗ ರಾಹುಲ್‌ ಗಾಂಧಿವರೆಗೆ ಮುಂದುವರಿದುಕೊಂಡು ಬಂದಿದೆ. ರಾಹುಲ್‌ ಗಾಂಧಿ ತಾವು ಪ್ರಧಾನಿ ನರೇಂದ್ರ ಮೋದಿಗೆ ಯಾವ ವಿಚಾರದಲ್ಲೂ ಸರಿಸಾಟಿಯಲ್ಲ ಎಂದು ಬಿಜೆಪಿಯವರು ಹೇಳುತ್ತಾರೆ.

ಹಾಗೆ ನೋಡಿದರೆ ಮೇಲ್ನೋಟಕ್ಕೆ ಹಾಗೆಯೇ ಅನ್ನಿಸುತ್ತದೆ. ಏಕೆಂದರೆ ಮೋದಿಯವರು ಸುಮಾರು ಮೂರು ದಶಕದ ಸಾರ್ವಜನಿಕ ಜೀವನದಲ್ಲಿ ನಿರಂತರ ಮುಖ್ಯಮಂತ್ರಿ, ಪ್ರಧಾನಮಂತ್ರಿಯಾಗಿದ್ದಾರೆ. ಅನೇಕ ರಾಜ್ಯಗಳ ಚುನಾವಣೆಯನ್ನು ಗೆಲ್ಲಿಸಿಕೊಂಡು ಬಂದಿದ್ದಾರೆ. ಅನೇಕ ಸಚಿವಾಲಯಗಳನ್ನು ನಿಭಾಯಿಸಿದ್ದಾರೆ. ಆದರೆ ರಾಹುಲ್‌ ಗಾಂಧಿ ಇಲ್ಲಿವರೆಗೆ ಸಂಸದರಾಗಿದ್ದು ಬಿಟ್ಟರೆ ತಮ್ಮದೇ ಯುಪಿಎ ಸರ್ಕಾರ ಎರಡು ಬಾರಿ ಅಧಿಕಾರದಲ್ಲಿದ್ದರೂ ಸಚಿವ ಸ್ಥಾನವನ್ನೂ ಪಡೆಯಲಿಲ್ಲ. ಇಷ್ಟೆಲ್ಲ ಆದರೂ ಕಾಂಗ್ರೆಸ್‌ ಪಕ್ಷದಲ್ಲಿ ರಾಹುಲ್‌ ಗಾಂಧಿಯವರಿಗೆ ಇರುವ ಗೌರವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗಿಲ್ಲ ಎನ್ನುವುದು ಮಲ್ನೋಟಕ್ಕೇ ಕಾಣುತ್ತದೆ.

ರಾಹುಲ್‌ ಗಾಂಧಿಯವರ ನೇತೃತ್ವದಲ್ಲಿ ದೇಶದ ಉದ್ದಕ್ಕೂ ಸುಮಾರು 3,500 ಕಿಲೋ ಮೀಟರ್‌ ಕ್ರಮಿಸಿದ ಭಾರತ್‌ ಜೋಡೊ ಯಾತ್ರೆ ಸಾಕಷ್ಟು ಪ್ರಚಾರ ಗಿಟ್ಟಿಸಿತು. ಇನ್ನೇನು ರಾಹುಲ್‌ ಗಾಂಧಿಯವರಳಗೆ ಹುದುಗಿ ಕುಳಿತಿರುವ ನಾಯಕತ್ವ ಹೊರಹೊಮ್ಮಿತು ಎಂಬಂತೆ ಭಾಸವಾಗುವಷ್ಟು ಆ ಪಕ್ಷದಲ್ಲಿ ಉತ್ಸಾಹ ಚಿಮ್ಮಿತ್ತು. ಆದರೆ ನಿಶ್ಚಿತ ಗುರಿಯಿಲ್ಲದೆ ರಾಹುಲ್‌ ಗಾಂಧಿಯವರು ನಡೆಸುತ್ತಿರುವ ಕಾರ್ಯಕ್ರಮಗಳು ಮತ್ತೆ ಮತ್ತೆ ಪಕ್ಷವನ್ನು ಹಿಮ್ಮೆಟ್ಟಿಸುತ್ತಿವೆ. ಇಷ್ಟೆಲ್ಲದರ ನಂತರವೂ ಪ್ರಧಾನಿ ನರೇಂದ್ರ ಮೋದಿಯವರಿಗೆ ಎದುರಾಳಿಯಾಗುವ ವ್ಯಕ್ತಿ ಇಡೀ ದೇಶದಲ್ಲಿ ಯಾರಾದರೂ ಇದ್ದರೆ ಅದು ರಾಹುಲ್‌ ಗಾಂಧಿ ಮಾತ್ರ ಎಂಬ ಅಭಿಪ್ರಾಯ ಇದ್ದೇ ಇದೆ. ಹಾಗಾಗಿಯೇ ಅಸ್ಸಾಂನಿಂದ ಕರ್ನಾಟಕದವರೆಗೆ ಎಲ್ಲೇ ಹೋದರೂ ಮುಖ್ಯವಾಗಿ ಕುಟುಂಬ ರಾಜಕಾರಣವನ್ನು, ಪರೋಕ್ಷವಾಗಿ ರಾಹುಲ್‌ ಗಾಂಧಿಯನ್ನು ಮೋದಿ ಟೀಕೆ ಮಾಡುತ್ತಾರೆ.

ಬಿಜೆಪಿಯೂ ಕುಟುಂಬ ರಾಜಕಾರಣದಿಂದ ಹೊರಬರಲು ಸಾಧ್ಯವಾಗಿಲ್ಲ. ಆದರೆ ಕಾಂಗ್ರೆಸ್‌ನ ಹೋಲಿಕೆಯಲ್ಲಿ ಮೊದಲ ಹಂತದ ನಾಯಕತ್ವದಲ್ಲಿ  ಸಾಕಷ್ಟು ಹೊಸ ಪೀಳಿಗೆಯನ್ನು ಕಾಣಬಹುದು. ಸ್ವತಃ ಪ್ರಧಾನಿ ನರೇಂದ್ರ ಮೋದಿ, ಅಮಿತ್‌ ಶಾ ಅವರಿಂದ ಆರಂಭವಾಗಿ ಸಾಕಷ್ಟು ಜನರು ಮೊದಲ ಪೀಳಿಗೆಯ ರಾಜಕಾರಣಿಗಳು. ಆದರೆ ಶಾಸಕರು, ಸಂಸದರನ್ನು ಆಯ್ಕೆ ಮಾಡುವ ಸಮಯದಲ್ಲಿ ಆ ಪಕ್ಷವೂ ತೀರಾ ಹೆಚ್ಚಿನ ಸ್ವಾತಂತ್ರ್ಯ ತೆಗೆದುಕೊಳ್ಳಲು ಆಗುತ್ತಿಲ್ಲ. ಕುಟುಂಬ ರಾಜಕಾರಣದ ಬದ್ಧ ವಿರೋಧಿಯಾಗಿ ವರ್ತಿಸಲು ಹೋದರೆ ರಾಜಕೀಯದಲ್ಲಿ ಅತ್ಯಂತ ಪ್ರಮುಖವಾಗಿ ಬೇಕಾದ ಸಂಖ್ಯೆಯನ್ನೇ ಕಳೆದುಕೊಳ್ಳುವ ಅಪಾಯ ಇರುತ್ತದೆ.

ರಾಜಮಹಾರಾಜರ ಮುಂದುವರಿಕೆಯೇ ಪ್ರಜಾಪ್ರಭುತ್ವ ವ್ಯವಸ್ಥೆ ಎಂದು ತಿಳಿದಿರುವವರೆಗೆ ಕುಟುಂಬ ರಾಜಕಾರಣ ಗಟ್ಟಿಯಾಗಿಯೇ ಇರುತ್ತದೆ. ಬಿಜೆಪಿಯು ʼಕುಟುಂಬ ರಾಜಕಾರಣ ವಿರೋಧಿʼ ನಿಲುವನ್ನು ಮುಂವರಿಸಬೇಕೆಂದರೆ ನಿರಂತರ ಕುಟುಂಬ ರಾಜಕಾರಣದ ವಿರುದ್ಧ ವಾಗ್ದಾಳಿ ಮಾಡುತ್ತಲೇ ಇರಬೇಕಾಗುತ್ತದೆ. ಒಂದು ಕ್ಷಣ ಮೈಮರೆತರೂ ಯಾವುದೇ ಕ್ಷಣದಲ್ಲಿ ಅದು ಬೃಹತ್‌ ರೂಪ ತಳೆಯುವ ಸಾಧ್ಯತೆಯಿದೆ. ಈ ಸತ್ಯವು ಪ್ರಧಾನಿ ನರೇಂದ್ರ ಮೋದಿಯವರಿಗೆ ಚೆನ್ನಾಗಿಯೇ ತಿಳಿದಿದೆ. ಅದಕ್ಕಾಗಿಯೇ ಈ ನಿರಂತರ ವಾಗ್ದಾಳಿ.

ಇದನ್ನೂ ಓದಿ: D ಕೋಡ್‌ ಅಂಕಣ: ರಾಜಕೀಯ ಹವಾಮಾನ ವರದಿ: ಕಾಂಗ್ರೆಸ್ ಕಡೆಗೆ ಬೀಸುವಂತಿದೆ ತಂಗಾಳಿ; ಪಕ್ಷಾಂತರಿಗಳಿಗೆ ತಿಳಿದಿದೆಯೇ ಒಳಸುಳಿ?

Exit mobile version