Site icon Vistara News

D ಕೋಡ್‌ ಅಂಕಣ: ʼಪುರಾತನʼ ಪಕ್ಷಕ್ಕೆ 15 ವರ್ಷದಿಂದ ʼವಲಸಿಗʼನೇ ನಾಯಕ: ಮತ್ತೊಂದು ದಾಖಲೆ ಬರೆದ ಸಿದ್ದರಾಮಯ್ಯ

Siddaramaiah

ಇಷ್ಟು ವರ್ಷ ಕಾಂಗ್ರೆಸ್‌ ಪಕ್ಷದಲ್ಲಿದ್ದರೂ ಸಿದ್ದರಾಮಯ್ಯ ಎಂದಿಗೂ ಪಕ್ಷದ ಸಂಘಟನೆಯ ಹೊಣೆ ಹೊತ್ತಿಲ್ಲ, ಕೇವಲ ಫಲವನ್ನು ಅನುಭವಿಸುತ್ತಿದ್ದಾರೆ ಎಂಬ ಹಳಹಳಿಕೆ, ಅನಿಸಿಕೆ, ನೋವು ʼಮೂಲ ಕಾಂಗ್ರೆಸಿಗರಲ್ಲಿʼ ಇದ್ದೇ ಇದೆ. ಇತ್ತೀಚೆಗೆ ಸಿಎಂ ಆಗಿ ಆಯ್ಕೆಯಾಗುವ ಮುನ್ನವೂ ಈ ಮಾತು ಚಾಲ್ತಿಗೆ ಬಂದಿತ್ತು. ಚುನಾವಣೆಯಲ್ಲಿ ಎಲ್ಲ ತಂತ್ರಗಾರಿಕೆ ಮಾಡಿ ಪಕ್ಷವನ್ನು ಅಧಿಕಾರಕ್ಕೆ ತಂದವರು ಡಿ.ಕೆ. ಶಿವಕುಮಾರ್‌, ಅವರೇ ಸಿಎಂ ಆಗಬೇಕು. ಸಿದ್ದರಾಮಯ್ಯ ಬೇಕಿದ್ದರೆ ಕೆಪಿಸಿಸಿ ಅಧ್ಯಕ್ಷರಾಗಿ ಪಕ್ಷವನ್ನು ಗೆಲ್ಲಿಸಿ ಅಧಿಕಾರ ಹಿಡಿಯಲಿ ಎಂದು ಅನೇಕರು ಮಾತನಾಡಿಕೊಳ್ಳುತ್ತಿದ್ದರು.

ಜೆಡಿಎಸ್‌ ಪಕ್ಷದಿಂದ ಎರಡು ಬಾರಿ ಡಿಸಿಎಂ ಆಗಿದ್ದ ಸಿದ್ದರಾಮಯ್ಯ ಅಹಿಂದದ ಮೂಲಕ ಕಾಂಗ್ರೆಸ್‌ಗೆ ಆಗಮಿಸಿದವರು. ಮೂಲ ಕಾಂಗ್ರೆಸಿಗರು ಹಾಗೂ ವಲಸಿಗ ಕಾಂಗ್ರೆಸಿಗರು ಎಂಬ ಚರ್ಚೆ ಆ ಪಕ್ಷದಲ್ಲಿ ಯಾವಾಗಲೂ ಇದ್ದೇ ಇದೆ. ಹಾಗೆ ನೋಡಿದರೆ ಈಗಿನ ಕಾಂಗ್ರೆಸ್‌ನಲ್ಲಿರುವ ಅನೇಕ ನಾಯಕರೂ ಹೊರಗಿನಿಂದ ಬಂದವರೆ.

ಇಂತಹ ಸಿದ್ದರಾಮಯ್ಯ 2008ರಲ್ಲಿ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆಯಾದರು. ಆನಂತರ 2013ರಲ್ಲಿ ಮುಖ್ಯಮಂತ್ರಿಯಾದರು. ಆನಂತರ 2018ರಲ್ಲಿ ಚುನಾವಣೆಯಲ್ಲಿ ಕಾಂಗ್ರೆಸ್‌ ಸೋತರೂ ಮತ್ತೆ ಶಾಸಕಾಂಗ ಪಕ್ಷದ ನಾಯಕನಾಗುವುದರ ಮೂಲಕ ಪ್ರತಿಪಕ್ಷ ನಾಯಕರಾದರು. ಇದೀಗ ಮತ್ತೆ 2023ರಲ್ಲಿ ಶಾಸಕಾಂಗ ಪಕ್ಷದ ನಾಯಕರಾಗುವ ಮೂಲಕ ಸಿಎಂ ಹುದ್ದೆ ಅಲಂಕರಿಸಿದ್ದಾರೆ. ಮೈಸೂರು ರಾಜ್ಯದಿಂದ ಆರಂಭಗೊಂಡು ಕರ್ನಾಟಕ ರಾಜ್ಯವಾದ ನಂತರವೂ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕರ ಅವಧಿಯನ್ನು ಲೆಕ್ಕ ಮಾಡಿದರೆ ಸಿದ್ದರಾಮಯ್ಯ ಅವರೇ ಹೆಚ್ಚು ಅವಧಿಗೆ ನಾಯಕರಾಗಿದ್ದಾರೆ.

ಈ ಹಿಂದೆ ಎಸ್‌.ಎಂ. ಕೃಷ್ಣ ಅವರು 9 ವರ್ಷ ಶಾಸಕಾಂಗ ಪಕ್ಷದ ನಾಯಕರಾಗಿದ್ದ ದಾಖಲೆ ಹೊಂದಿದ್ದರು. ಈಗಾಗಲೆ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕರಾಗಿ ಸಿದ್ದರಾಮಯ್ಯ 15 ವರ್ಷ ಪೂರ್ಣಗೊಳಿಸಿದ್ದು, ಮುಂದುವರಿದಿದ್ದಾರೆ. ಮುಖ್ಯಮಂತ್ರಿಯಾಗಿ ಎರಡನೇ ಅವಧಿಗೂ ಐದು ವರ್ಷ (2028ರವರೆಗೆ) ಪೂರ್ಣಗೊಳಿಸಿದರೆ ಒಟ್ಟು 20 ವರ್ಷ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕರಾಗುವ ದಾಖಲೆ ಬರೆಯಲಿದ್ದಾರೆ. ಶತಮಾನದ ಇತಿಹಾಸ ಹೊಂದಿರುವ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕನಾಗಿ ಇಷ್ಟು ವರ್ಷ ನಿರಂತರವಾಗಿ ಮುಂದುವರಿಯುವುದು ಒಂದು ಸಾಧನೆಯೇ ಸರಿ.

ಇತ್ತೀಚೆಗೆ ವಿಧಾನಸೌಧದಲ್ಲಿ ಕೆಂಪೇಗೌಡ ಜಯಂತಿಯಲ್ಲಿ ಮಾತನಾಡಿದ್ದ ಡಿ.ಕೆ. ಶಿವಕುಮಾರ್‌, ವಿಧಾನಸೌಧವನ್ನು ಕಾರ್ಮಿಕರು ಕಟ್ಟಿದರು, ಆದರೆ ಅವರು ಇಲ್ಲಿ ಉಳಿಯಲಿಲ್ಲ. ಯಾರೋ ಪಟ್ಟ ಶ್ರಮಕ್ಕೆ ಇನ್ಯಾರೋ ಫಲ ಉಣ್ಣುತ್ತಾರೆ. ಹೀಗೆಯೇ ನಡೆದುಕೊಂಡು ಬಂದಿದೆ ಎಂದು ಮಾರ್ಮಿಕವಾಗಿ ನುಡಿದಿದ್ದರು. ಇದೆಲ್ಲ ಮಾತುಗಳು ಏನೇ ಇದ್ದರೂ, ಜನರ ಜತೆಗೆ ಹಾಗೂ ಮುಖ್ಯವಾಗಿ ಸಮುದಾಯಗಳನ್ನು, ಅದರ ನಾಯಕರುಗಳನ್ನು ಜತೆಗೆ ಇರಿಸಿಕೊಳ್ಳುವಲ್ಲಿ ಸಿದ್ದರಾಮಯ್ಯ ಸಫಲರಾಗಿದ್ದಾರೆ. ಕರ್ನಾಟಕದ ಪೂರಾ ಹರಡಿಕೊಂಡಿರುವ ಹಾಗೂ ಚುನಾವಣೆಯಲ್ಲಿ ಪ್ರಮುಖ ಪಾತ್ರ ವಹಿಸುವ ಅಹಿಂದ ಸಮುದಾಯವನ್ನು ಜತೆಗೆ ಇರಿಸಿಕೊಂಡಿದ್ದಾರೆ. ಇದರ ಜತೆಗೆ ಕಾಂಗ್ರೆಸ್‌ ಹೈಕಮಾಂಡ್‌ನ ʼಅಪೇಕ್ಷೆಗಳುʼ, ʼನಿರೀಕ್ಷೆʼಗಳನ್ನು ಪೂರೈಸುತ್ತ ತಮ್ಮ ನಾಯಕತ್ವವನ್ನು ಅಬಾಧಿತವಾಗಿ ಮುಂದುವರಿಸಿಕೊಂಡು ಬಂದಿದ್ದಾರೆ.

ಬಜೆಟ್‌ ಮಂಡನೆಯಲ್ಲಿ ದಾಖಲೆ
ರಾಜ್ಯದಲ್ಲಿ ಅತಿ ಹೆಚ್ಚು ಬಾರಿ ಬಜೆಟ್‌ ಮಂಡನೆ ಮಾಡಿದವರು ಎಂಬ ಹೆಗ್ಗಳಿಕೆಗೂ ಈಗಾಗಲೆ ಸಿದ್ದರಾಮಯ್ಯ ಪಾತ್ರವಾಗಿದ್ದಾರೆ. 1996-2000ನೇ ಇಸವಿಯವರೆಗೆ ಜೆ.ಎಚ್‌. ಪಟೇಲ್‌ ಸಂಪುಟದಲ್ಲಿ ಉಪಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಮೊದಲ ಬಾರಿಗೆ ಬಜೆಟ್‌ ಮಂಡನೆ ಮಾಡಿದರು. ಜೆ.ಎಚ್‌. ಪಟೇಲ್‌ ಅವಧಿಯಲ್ಲಿ ಒಟ್ಟು ಐದು ಬಜೆಟ್‌ ಮಂಡಿಸಿದರು. ನಂತರ 2004 ಹಾಗೂ 2005ರಲ್ಲಿ ಎನ್‌. ಧರ್ಮಸಿಂಗ್‌ ಮುಖ್ಯಮಂತ್ರಿಯಾಗಿದ್ದಾಗ ಉಪಮುಖ್ಯಮಂತ್ರಿಯಾಗಿ ಎರಡು ಬಾರಿ ಬಜೆಟ್‌ ಮಂಡನೆ ಮಾಡಿದರು. ಅಲ್ಲಿಗೆ ಉಪಮುಖ್ಯಮಂತ್ರಿಯಾಗಿ ಒಟ್ಟು ಏಳು ಬಾರಿ ಬಜೆಟ್‌ ಮಂಡಿಸಿದ್ದ ಸಿದ್ದರಾಮಯ್ಯ, 2013ರಿಂದ 2018ರವರೆಗೆ ಮುಖ್ಯಮಂತ್ರಿಯಾಗಿ ಆರು ಬಜೆಟ್‌ ಮಂಡನೆ ಮಾಡಿದ್ದರು. ಅಲ್ಲಿಗೆ ಒಟ್ಟು 13 ಬಾರಿ ಬಜೆಟ್‌ ಮಂಡನೆ ಮಾಡಿದ್ದರು. ಇದೀಗ 2023ರ ಜುಲೈ 7ರಂದು ಮುಖ್ಯಮಂತ್ರಿಯಾಗಿ ಏಳನೇ ಹಾಗೂ ಒಟ್ಟಾರೆ 14ನೇ ಬಜೆಟ್‌ ಮಂಡನೆ ಮಾಡಲಿದ್ದಾರೆ.

ಬಜೆಟ್‌ ಅನುದಾನದಲ್ಲಿ ಹೆಚ್ಚೇನೂ ವ್ಯತ್ಯಾಸವಿಲ್ಲ
ಎಲ್ಲ ರಾಜ್ಯಗಳಂತೆ ಕರ್ನಾಟಕವೂ ಪ್ರತಿ ವರ್ಷ ಬಜೆಟ್‌ ಮಂಡನೆ ಮಾಡುತ್ತದೆ. ಬಜೆಟ್‌ ಸಮೀಪಿಸಿದಂತೆ ಜನರಲ್ಲಿ ಅದೇನೋ ಆತಂಕ, ನಿರೀಕ್ಷೆ. ಈ ಬಾರಿ ಏನು ಕೊಡುಗೆ ಕೊಡುತ್ತಾರೊ, ಏನು ಬರೆ ಎಳೆಯುತ್ತಾರೊ… ಇತ್ಯಾದಿ ಇತ್ಯಾದಿ. ಆದರೆ ಅತ್ತ ಕಡೆ ಬಜೆಟ್‌ ಮಂಡಿಸುತ್ತಿರುವವರಿಗೂ ಇದು ಒಂದು ಆಸಕ್ತಿಕರ ವಿಚಾರವೇ? ರಾಜ್ಯಗಳ ಬಜೆಟ್‌ ಮಂಡಿಸುವಿಕೆ ಎನ್ನುವುದು ಬರಬರುತ್ತ ಯಾಂತ್ರಿಕವಾಗುತ್ತಿದೆ. ಅನೇಕ ಯೋಜನೆಗಳನ್ನು ಕೈಬಿಡಲಾಗದಂತಹ ಸ್ಥಿತಿ ಇದೆ, ಏಕೆಂದರೆ ಈ ಯೋಜನೆಗಳಿಗೆ ಜನಪ್ರಿಯತೆ, ಬಡವರ ಭಾವನಾತ್ಮಕತೆ, ಮಹಿಳೆಯರ ಭಾವನೆ ಅಂಟಿಕೊಂಡಿದೆ. ಹಾಗೂ ಈ ಯೋಜನೆಗಳ ಅನುಷ್ಠಾನಕ್ಕೆಂದೇ ಗುತ್ತಿಗೆದಾರರು, ಪೂರೈಕೆದಾರರ ಜೀವನವೂ ಬೆಸೆದುಕೊಂಡಿರುವುದರಿಂದ ಅವುಗಳಿಗೆ ಪ್ರತಿ ಸರ್ಕಾರವೂ ಹಣ ಹೊಂದಿಸುತ್ತದೆ. ಉದಾಹರಣೆಗೆ, ಬೆಂಗಳೂರು ಮೆಟ್ರೊ ಎನ್ನುವುದು ಮೊದಲಿನ ಯೋಜನೆಯಂತೆ ಪೂರ್ಣವಾಗುವ ಯಾವುದೇ ಲಕ್ಷಣ ಇಲ್ಲ. ಎರಡನೇ ಹಂತ, ಮೂರನೇ ಹಂತದ ನಂತರ ಮತ್ತಷ್ಟು ವಿಸ್ತರಣೆ, ಮತ್ತಷ್ಟು ಅಂತರ್‌ಸಂಪರ್ಕ ಎನ್ನುತ್ತ ನಿರಂತರ ನಡೆಯುತ್ತಲೇ ಇರುತ್ತದೆ. ನಗರದ ಸಂಚಾರ ದಟ್ಟಣೆಗೆ ಮುಕ್ತಿ ದೊರಕಿಸಿಕೊಡುತ್ತದೆ ಎಂಬ ಘೋಷಣೆಯೊಂದಿಗೆ ಸುಲಭವಾಗಿ 25-30 ವರ್ಷ ನಿರ್ಮಾಣ ಕಾಂಪನಿಗೆ ಕೆಲಸ ಕೊಟ್ಟುಬಿಡುತ್ತದೆ. ಸರ್ಕಾರಿ ನೌಕರರ ವೇತನ, ಪಿಂಚಣಿ, ಬಡ್ಡಿ ಪಾವತಿಗಳಿಗೆ (ಬದ್ಧತಾ ವೆಚ್ಚ) ಕರ್ನಾಟಕ ಬಜೆಟ್‌ನ ಶೇ.50 ಹಣ ಹೋಗುತ್ತದೆ. ಇನ್ನು, ನಿರಂತರವಾಗಿ ಮುಂದುವರಿಯುತ್ತಿರುವ ಯೋಜನೆಗಳಿಗೆ ಅಂದಾಜು ಶೇ. 5-10 ಇರುತ್ತದೆ. ಇದರ ಜತೆಗೆ ಕೇಂದ್ರ ಸರ್ಕಾರದೊಂದಿಗೆ ಪಾಲುದಾರಿಗೆ ಯೋಜನೆಗಳಿಗೆ ಅಂದಾಜು ಶೇ.3-4 ಹಣ ನೀಡಬೇಕಾಗುತ್ತದೆ. ಇವೆಲ್ಲವನ್ನೂ ಸೇರಿಸಿದರೆ ಮುಖ್ಯಮಂತ್ರಿ ಆದವರಿಗೆ ಹೊಸ ಯೋಜನೆ, ಆಲೋಚನೆ, ಅಭಿವೃದ್ಧಿ, ನಿರ್ಮಾಣ ಮಾಡಲು ಉಳಿಯುವುದೇ ಶೇ.25-30 ಹಣ ಮಾತ್ರ.

ಹಾಗಾಗಿ ಬಜೆಟ್‌ನಲ್ಲಿ ಘೋಷಿಸುವ ಯೋಜನೆಗಳಲ್ಲಿ ಹೆಚ್ಚಿನ ವ್ಯತ್ಯಾಸ ಕಾಣುತ್ತಿಲ್ಲ. ಐಸೆಕ್‌ ಸಂಸ್ಥೆ ನಡೆಸಿದ ಒಂದು ವರ್ಕಿಂಗ್‌ ಪೇಪರ್‌ ಇಲ್ಲಿ ಇಂಟರೆಸ್ಟಿಂಗ್‌ ಆಗಿದೆ. 2000-2001ರಿಂದ 2004-05ರವರೆಗೆ ಅಧಿಕಾರದಲ್ಲಿದ್ದ ಕಾಂಗ್ರೆಸ್‌ ಸರ್ಕಾರದ (ಎಸ್‌.ಎಂ. ಕೃಷ್ಣ) 5 ಬಜೆಟ್‌ಗಳಲ್ಲಿ ಪ್ರತಿ ಬಾರಿಯೂ ಕನಿಷ್ಠ 7 ಬಾರಿ ಹಾಗೂ ಗರಿಷ್ಠ 13 ಬಾರಿ ʼಪ್ರಾದೇಶಿಕ ಅಭಿವೃದ್ಧಿʼ ಎಂಬ ಶಬ್ದವನ್ನು ಬಳಸಲಾಗಿತ್ತು. ಅಂದರೆ ಬೆಂಗಳೂರು ಕೇಂದ್ರಿತವಾಗಿರುವ ಕರ್ನಾಟಕವನ್ನು ಪ್ರದೇಶವಾರು ಅಭಿವೃದ್ಧಿ ಮಾಡುತ್ತೇವೆ ಎನ್ನುವುದಕ್ಕೆ ಈ ಬಜೆಟ್‌ಗಳಲ್ಲಿ ನೀಡಿರುವ ಒತ್ತು ಇದು. ಮುಂದೆ 2008-09ರಿಂದ 2013-14ರವರೆಗೆ ಇದ್ದ ಬಿಜೆಪಿ ಸರ್ಕಾರದ ಮುಖ್ಯಮಂತ್ರಿಗಳು (ಬಿ.ಎಸ್‌. ಯಡಿಯೂರಪ್ಪ, ಡಿ.ವಿ. ಸದಾನಂದಗೌಡ, ಜಗದೀಶ ಶೆಟ್ಟರ್‌) 6 ಬಜೆಟ್‌ ಮಂಡಿಸಿದ್ದರು. ಅದರಲ್ಲಿ 11ರಿಂದ 27 ಬಾರಿ ʼಪ್ರಾದೇಶಿಕ ಅಭಿವೃದ್ಧಿʼ ಶಬ್ದ ಬಳಸಿದ್ದರು. ಅಂದರೆ ಕಾಂಗ್ರೆಸ್‌ಗಿಂತ ಸ್ವಲ್ಪ ಹೆಚ್ಚು ʼಪ್ರಾದೇಶಿಕ ಅಭಿವೃದ್ಧಿʼ ಆಗಿತ್ತು.! 2013-14ರಿಂದ 2017-18ರವರೆಗೆ ಇದ್ದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ 28-34 ಬಾರಿ ಪ್ರಾದೇಶಿಕ ಅಭಿವೃದ್ಧಿ ಎಂಬ ಶಬ್ದ ಬಳಸಿತ್ತು.

ಅದೇ ರೀತಿ, ಸಾಮಾಜಿಕ ಅಭಿವೃದ್ಧಿ ಎನ್ನುವ ಶಬ್ದ. ಬಿಜೆಪಿ ಸರ್ಕಾರದ ಮುಖ್ಯಮಂತ್ರಿಗಳು 36-87 ಬಾರಿ ಈ ಶಬ್ದ ಬಳಸಿದ್ದರೆ, 2013-14ರಿಂದ ಮಂಡಿಸಿದ ಬಜೆಟ್‌ನಲ್ಲಿ ಸಿದ್ದರಾಮಯ್ಯ ಅವರು ತಮ್ಮ ಬಜೆಟ್‌ ಭಾಷಣದಲ್ಲಿ ಕನಿಷ್ಠ 115ರಿಂದ ಗರಿಷ್ಠ 225 ಬಾರಿ ಸಾಮಾಜಿಕ ಅಭಿವೃದ್ಧಿ ಶಬ್ದ ಬಳಸಿದರು. ಯಾರು ಎಷ್ಟೇ ಶಬ್ದ ಬಳಸಿದರೂ ಬಜೆಟ್‌ನಲ್ಲಿ ಹಣ ಕೊಡುವಾಗ ಯಾವ ಗಣನೀಯ ವ್ಯತ್ಯಾಸವೂ ಇಲ್ಲ. ಪ್ರಾದೇಶಿಕ ಅಭಿವೃದ್ಧಿ, ಸಾಮಾಜಿಕ ಅಭಿವೃದ್ಧಿ ಹೆಸರಿನಲ್ಲಿ ರಾಜಕೀಯ ಮಾಡಲಾಯಿತೇ ವಿನಃ ಬಹುತೇಕ ಹಿಂದಿನ ಬಜೆಟ್‌ಗಳ ಮುಂದುವರಿಕೆಯೇ ಆದವು.

ಪ್ರತಿಪಕ್ಷಗಳೂ ಅಷ್ಟೆ. ಇದು ಬಡವರ ವಿರೋಧಿ ಬಜೆಟ್‌, ಜನ ವಿರೋಧಿ ಬಜೆಟ್‌, ಅಭಿವೃದ್ಧಿ ವಿರೋಧಿ ಬಜೆಟ್‌ ಎಂದು ಹೇಳಿಕೆ ಕೊಟ್ಟು ಬಜೆಟ್‌ ಪ್ರತಿಯನ್ನು ಕಂಕುಳಿಗೆ ಸಿಕ್ಕಿಸಿಕೊಂಡು ಕಾರು ಹತ್ತುವುದು. ಅವರದ್ದೂ ರೆಕಾರ್ಡ್‌ಗಾಗಿ(ದಾಖಲೆ) ಮಾತನಾಡುವ ಕಾಯಕ. ಇತ್ತ ಜನರೂ ಅದನ್ನು ಟಿವಿಯಲ್ಲಿ ನೋಡಿ, ಮಾರನೆಯ ದಿನ ಪೇಪರ್‌ನಲ್ಲಿ ಓದಿ ಮರೆತುಬಿಡುತ್ತಾರೆ. ಈಗ ಮತ್ತೆ ಬಜೆಟ್‌ ಬಂದಿದೆ. ಸಿಎಂ ಸಿದ್ದರಾಮಯ್ಯ ಜುಲೈ 7ರಂದು ತಮ್ಮ 14ನೇ ಬಜೆಟ್‌ ಮಂಡಿಸುತ್ತಿದ್ದಾರೆ. ಹಾಗಾದರೆ ಕಳೆದ 10 ವರ್ಷಗಳಲ್ಲಿ ವಿವಿಧ ಪಕ್ಷಗಳ ಮುಖ್ಯಮಂತ್ರಿಗಳು ಯಾವ್ಯಾವ ಕ್ಷೇತ್ರಕ್ಕೆ ಎಷ್ಟು ಅನುದಾನ ನೀಡಿದ್ದಾರೆ ನೋಡಿದರೆ, ಬಜೆಟ್‌ನ ಆದ್ಯತೆ ತಿಳಿಯುತ್ತದೆ.

ಯಾವುದೇ ಪಕ್ಷದ ಮುಖ್ಯಮಂತ್ರಿ ತಮ್ಮ ಆದ್ಯತೆಗಳನ್ನು ವಿಭಿನ್ನ ಎಂದೇ ಹೇಳಿಕೊಳ್ಳುತ್ತಾರೆ. ತಮ್ಮದು ರೈತ ಪರ, ಮಹಿಳೆಯರ ಪರ, ಹಳ್ಳಿಗಳ ಪರ ಎಂದೇ ಹೇಳುತ್ತಾರೆ. ಆದರೆ ಪ್ರತಿ ವರ್ಷವೂ ಆಯಾ ಕ್ಷೇತ್ರಗಳಿಗೆ ನೀಡುವ ಅನುದಾನದಲ್ಲಿ ಹೆಚ್ಚಿನ ವ್ಯತ್ಯಾಸವೇನೂ ಕಾಣುವುದಿಲ್ಲ ಎನ್ನುವುದು ಕಳೆದ 10 ವರ್ಷದ ಬಜೆಟ್‌ ಅನುದಾನ ಹಂಚಿಕೆ ನೋಡಿದರೆ ತಿಳಿಯುತ್ತದೆ. ಇದು ಆಗಲೇ ಹೇಳಿದಂತೆ, ವಿವಿಧ ಸರ್ಕಾರಗಳು ಅಭಿವೃದ್ಧಿ ಕೇಂದ್ರಿತವಾಗಲ್ಲದೆ ಜನರನ್ನು ಮೆಚ್ಚಿಸುವ ಸಲುವಾಗಿ ಘೋಷಿಸುವ ಯೋಜನೆಗಳ ಹೊರೆಯ ಕಾರಣಕ್ಕೆ ಎನ್ನಬಹುದು. ಈ ಬಾರಿ ಸಿದ್ದರಾಮಯ್ಯ ಮಂಡಿಸುವ 14ನೇ ಬಜೆಟ್‌ ಹೇಗಿರಲಿದೆ ಕಾದುನೋಡಬೇಕಿದೆ.

ಇದನ್ನೂ ಓದಿ: D ಕೋಡ್‌ ಅಂಕಣ: ಬಿಜೆಪಿ ಮೇ ಇತನಾ ಸನ್ನಾಟಾ ಕ್ಯೂ ಹೈ ಭಾಯ್‌?

Exit mobile version