Site icon Vistara News

D ಕೋಡ್ ಅಂಕಣ: ಬಿಜೆಪಿ ಹಳಿ ತಪ್ಪುತ್ತಿರುವುದೆಲ್ಲಿ? ಅಳೆಯಲು ಒರೆಗಲ್ಲು ಯಾವುದು?

BJP Karnataka AI Image

ಬಹುಶಃ ಕರ್ನಾಟಕ ರಾಜಕಾರಣದಲ್ಲಿ ಸೋತ ಪಕ್ಷವನ್ನು ಈ ಬಾರಿ ಮಾಡಿದಷ್ಟು ವಿಶ್ಲೇಷಣೆಯನ್ನು ಯಾವಾಗಲೂ ಮಾಡಿಲ್ಲವೇನೊ. ಮೇ 13ರಂದು ಫಲಿತಾಂಶ ಬಂದ ನಂತರದಲ್ಲಿ ಎರಡು ತಿಂಗಳು ಕಳೆದರೂ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಸೋಲಿಗೆ ಕಾರಣವೇನು ಎಂದು ಇನ್ನೂ ಪಟ್ಟಿ ಮಾಡಲಾಗುತ್ತಲೇ ಇದೆ.
ಡಿ ಕೋಡ್ ಅಂಕಣವೂ ಸೇರಿ ನಾಡಿನ ಸುಪ್ರಸಿದ್ಧ ದಿನಪತ್ರಿಕೆಗಳು, ಸಂಪಾದಕರುಗಳು ತಮ್ಮ ಕಾಲಮ್‌ಗಳಲ್ಲಿ ವಿಶ್ಲೇಷಣಾತ್ಮಕ ವರದಿಗಳಲ್ಲಿ, ಟಿವಿ ಡಿಬೇಟ್‌ಗಳಲ್ಲಿ ಸಾಕಷ್ಟು ಚರ್ಚೆ ನಡೆಸಲಾಗಿದೆ. ಬಸನಗೌಡ ಪಾಟೀಲ್ ಯತ್ನಾಳ್, ಸಿ.ಟಿ. ರವಿ, ಎಂ.ಪಿ. ರೇಣುಕಾಚಾರ್ಯ ಸೇರಿ ಅನೇಕ ಬಿಜೆಪಿ ನಾಯಕರೇ ವಿಶ್ಲೇಷಣೆ ಮಾಡಿದ್ದಾರೆ. ಅಡ್ಜಸ್ಟ್‌‌ಮೆಂಟ್‌‌ ರಾಜಕಾರಣ, ಹಿಂದುತ್ವವನ್ನು ಮರೆತದ್ದು, ವೀರಶೈವ ಲಿಂಗಾಯತರನ್ನು ಕಡೆಗಣಿಸಿದ್ದು, ಕಾಂಗ್ರೆಸ್ನ ಗ್ಯಾರಂಟಿ ಸ್ಕೀಂಗಳು… ಹೀಗೆ ಅನೇಕ ಕಾರಣ ನೀಡಿದ್ದಾರೆ.

ಬಿಜೆಪಿ ಸೋಲಿಗೆ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರೇ ಕಾರಣ ಎನ್ನುವಂತೆ ನೇರವಾಗಿ ಹಾಗೂ ಪರೋಕ್ಷವಾಗಿಯೂ ʼದಾಳಿʼಗನ್ನು ನಡೆಸಲಾಗಿದೆ. ಟಿಕೆಟ್ ಘೋಷಣೆಯನ್ನು ತಡವಾಗಿ ಮಾಡಿದರು ಎನ್ನುವುದರಿಂದ ಬಿಜೆಪಿ ಸಂಘಟನಾ ಕಾರ್ಯದರ್ಶಿಯಾಗಿದ್ದವರು ಸಿಡುಕುತ್ತಿದ್ದರು ಎನ್ನುವವರೆಗೆ ವಿಶ್ಲೇಷಣೆ ಆಗಿದೆ. ಇದರಿಂದಲೇ ಬಿಜೆಪಿ ಸೋತಿದೆ, ಈ ಲೋಪಗಳನ್ನು ಸರಿಪಡಿಸಿಕೊಳ್ಳಬೇಕು ಎಂದು ಅನೇಕರು ಹೇಳಿದ್ದಾರೆ. ಸಾಮಾಜಿಕ ಜಾಲತಾಣಗಳೇನು ಹಿಂದೆ ಬಿದ್ದಿಲ್ಲ. ವೃತ್ತಿಪರ ಪತ್ರಕರ್ತರಿಗಿಂತಲೂ ಹೆಚ್ಚಿನ ಅಂಶಗಳನ್ನು ಸಾಮಾಜಿಕ ಜಾಲತಾಣ ಬಳಕೆದಾರರು ಪಟ್ಟಿ ಮಾಡಿ, ಬಿಜೆಪಿ ಗೆಲ್ಲಬೇಕು ಎಂದರೆ ಏನೇನು ಮಾಡಬೇಕು ಎಂಬ ರೆಸಿಪಿಯನ್ನೂ ಕೊಟ್ಟಿದ್ದಾರೆ. ಚುನಾವಣೆಯಲ್ಲಿ ಸೋತ ತಕ್ಷಣ ಫ್ರೀಜ್‌ ಆಗುವ ಬದಲಿಗೆ, ವಿಧಾನಸಭೆಯಲ್ಲಿ ಪ್ರತಿಪಕ್ಷ ನಾಯಕರನ್ನಾಗಲಿ, ರಾಜ್ಯ ಘಟಕದ ಅಧ್ಯಕ್ಷರನ್ನಾಗಲಿ ಬಿಜೆಪಿ ಆಯ್ಕೆ ಮಾಡಿದ್ದರೆ ಬಹುಶಃ ಜನರ ಗಮನ ಬೇರೆಡೆ ಹೊರಳುತ್ತಿತ್ತೇನೊ. ಹಾಗಾಗಿ ಇಷ್ಟೆಲ್ಲ ಸುದೀರ್ಘ ಚರ್ಚೆ ನಡೆಯಲು ಬಿಜೆಪಿಯೂ ಕಾರಣ ಎನ್ನಬಹುದು!

ಆದರೆ ಇಲ್ಲಿ ಒಂದು ಯೋಚನೆ ಮಾಡಬೇಕು. ಇದೆಲ್ಲವೂ ಆ ಪಕ್ಷದ ಆಯ್ಕೆಗಳು. ಯಾವಾಗ ಟಿಕೆಟ್ ಘೋಷಣೆ ಮಾಡಬೇಕು, ಯಾರಿಗೆ ಟಿಕೆಟ್ ಕೊಡಬೇಕು, ಟಿಕೆಟ್ ತಪ್ಪಿಸಿದ್ದಕ್ಕೆ ಕಾರಣವನ್ನು ಹೇಳಬೇಕೊ ಬೇಡವೊ, ಮೋದಿಯವರು ಪ್ರವಾಸವನ್ನು ಎಷ್ಟು ಸಾರಿ ಆಯೋಜಿಸಬೇಕು ಎನ್ನುವುದೆಲ್ಲ ಆ ಪಕ್ಷದ ನಿರ್ಧಾರ. ಚುನಾವಣೆ ಸಂದರ್ಭದಲ್ಲಿ ಯಾವ ನಿರ್ಧಾರ ಕೈಗೊಂಡರೆ ಒಳ್ಳೆಯದು ಅದನ್ನು ತೆಗೆದುಕೊಳ್ಳುವ ಅಧಿಕಾರ ಆ ಪಕ್ಷಕ್ಕಿದೆ. ನಾವು ಯಾರ ಮೇಲೆಯೂ ಸಿಡುಕುವುದಿಲ್ಲ, ಟಿಕೆಟ್ ಘೋಷಣೆಯನ್ನು ಚುನಾವಣೆಗೆ 45 ದಿನ ಮೊದಲು ಮಾಡುತ್ತೇವೆ, ಹಿರಿಯರಿಗೆ ಟಿಕೆಟ್ ತಪ್ಪಿಸುವಾಗ 30 ದಿನದ ನೋಟಿಸ್ ಕೊಡುತ್ತೇವೆ… ಹೀಗೆ ಎಲ್ಲಾದರೂ ಬರೆದಿದೆಯ? ಬಿಜೆಪಿ ತನ್ನ ಸಂವಿಧಾನದಲ್ಲಿ ಎಲ್ಲಾದರೂ ಇದನ್ನು ಘೋಷಿಸಿಕೊಂಡಿದೆಯ? ಇಲ್ಲ. ಒಂದು ರಾಜಕೀಯ ಪಕ್ಷವನ್ನು ಮೇಲಿನ ಎಲ್ಲ ಕಾರಣಕ್ಕೂ ಪ್ರಶ್ನಿಸಬಹುದು. ಆದರೆ ಅದಕ್ಕೂ ಮಿಗಿಲಾದ ಆಧಾರದದ ಜತೆಗೆ ಪ್ರಶ್ನಿಸಬೇಕಾಗಿದೆ. ನಿಜಕ್ಕೂ ಬಿಜೆಪಿ ಹಳಿತಪ್ಪುತ್ತಿರುವುದೆಲ್ಲಿ? ಅದನ್ನು ಪ್ರಶ್ನಿಸಲು ಅಡಿಪಾಯ ಯಾವುದು? ತಾನೇ ಒಪ್ಪಿಕೊಂಡು, ಅಪ್ಪಿಕೊಂಡಿರುವ ಸೈದ್ಧಾಂತಿಕ ನೆಲೆಯ ಒರೆಗಲ್ಲಿಗೆ ಈಗಿನ ನಡವಳಿಕೆಯನ್ನು ಉಜ್ಜಿ ನೋಡುವ ಒಂದು ಸಣ್ಣ ಪ್ರಯತ್ನ ಇಲ್ಲಿ ಮಾಡಬಹುದು.

ಸೈದ್ಧಾಂತಿಕ ಬದ್ಧತೆ ಎಲ್ಲಿ?
ನಿಜಕ್ಕೂ ಬಿಜೆಪಿ ಗಂಭೀರವಾಗಿ ಆಲೋಚನೆ ಮಾಡಬೇಕಾದ ಸಮಯ ಇದು. ಅದು ಸೋತಿದೆ ಎಂಬ ಕಾರಣಕ್ಕೆ ಅಲ್ಲ. ಅದು ಸೋತಿರುವುದರಿಂದ ಈಗ ಆಲೋಚನೆ ಮಾಡಲು ಸಾಕಷ್ಟು ಸಮಯ ಸಿಕ್ಕಿದೆ ಎಂಬ ಕಾರಣಕ್ಕೆ. ಬಿಜೆಪಿಯು ಈಗಾಗಲೆ ಲಿಖಿತವಾಗಿ, ತನ್ನ ಸೈದ್ಧಾಂತಿಕ ಮೂಲವಾದ ಆರ್‌ಎಸ್‌ಎಸ್‌‌ ಚಿಂತನೆಗಳಿಗೆ ಅನುಗುಣವಾಗಿ ಅಥವಾ ಅದರ ಉನ್ನತ ನಾಯಕರ ನಡೆ ನುಡಿಗೆ ಅನುಗುಣವಾಗಿ ನಡೆಯುತ್ತಿದೆಯೇ ಇಲ್ಲವೇ ಎನ್ನುವುದು ಮುಖ್ಯ.
ಬಿಜೆಪಿಯ ಸಂವಿಧಾನದ ಮೊದಲ ಪುಟದಲ್ಲೇ ಉದ್ದೇಶವನ್ನು ತಿಳಿಸಲಾಗಿದೆ. ಅದರಲ್ಲಿ ಕೊನೆಯ ಸಾಲು, “ದೇಶದ ಸಾರ್ವಭೌಮತೆ, ಏಕತೆ ಹಾಗೂ ಸಮಗ್ರತೆಯನ್ನು ಎತ್ತಿಹಿಡಿಯುತ್ತೇನೆ” ಎಂದಿದೆ. ಬಿಜೆಪಿಯು ಎಂದಿಗೂ ದೇಶವನ್ನು ಒಂದೇ ರೀತಿಯಾಗಿ ನೋಡುತ್ತದೆ. ಉತ್ತರ ಭಾರತ, ದಕ್ಷಿಣ ಭಾರತ ಎಂಬ ಭೇದ ಬಿಜೆಪಿಯಲ್ಲಿ ಇರುವುದಿಲ್ಲ. ರಾಜ್ಯ ರಾಜ್ಯಗಳ ನಡುವಿನ ಭಿನ್ನಾಭಿಪ್ರಾಯವೂ ಬಿಜೆಪಿ ಪ್ರತಿಪಾದಿಸುವ ಸಾಂಸ್ಕೃತಿಕ ರಾಷ್ಟ್ರೀಯತೆಗೆ ಸೈದ್ಧಾಂತಿಕವಾಗಿ ಅಪಥ್ಯ. ಆದರೆ ಮಂಗಳವಾರ ವಿಧಾನ ಪರಿಷತ್ ಕಲಾಪ ವೀಕ್ಷಿಸುತ್ತಿರುವಾಗ ಅಚ್ಚರಿಯಾಯಿತು. ಜಿಎಸ್‌‌ಟಿ ತಿದ್ದುಪಡಿ ಕಾಯ್ದೆಯ ಕುರಿತು ಬಿಜೆಪಿಯ ಸದಸ್ಯ ಪಿ.ಎಂ. ಮುನಿರಾಜುಗೌಡ (ತುಳಸಿ) ಮಾತನಾಡುತ್ತಿದ್ದರು. “ಜಿಎಸ್‌ಟಿ ಸಂಗ್ರಹಕ್ಕೆ ಅಧಿಕಾರಿಗಳು ಬರುವವರು ಉತ್ತರ ಭಾರತದವರು. ಬಿಹಾರ, ಒಡಿಶಾ ಕೇಡರ್‌‌‌ನವರು. ಅವರಿಗೆ ಇಲ್ಲಿನ ಸ್ಥಳೀಯ ಸಮಸ್ಯೆಗಳು ಗೊತ್ತಿಲ್ಲ. ನಮ್ಮನ್ನು ಕಳ್ಳರು ಎನ್ನುವಂತೆ ನೋಡುತ್ತಾರೆ. ಎಲ್ಲ ರೀತಿಯಲ್ಲೂ ನಾವು ಸರಿಯಾಗಿದ್ದರೂ ಏನಾದರೂ ಒಂದು ಹೇಳಿ ತೆರಿಗೆ ಕಟ್ಟಬೇಕು ಎನ್ನುತ್ತಾರೆ”. ಆ ನಂತರ ಮುನಿರಾಜುಗೌಡ ಅವರು ಅನೇಕ ಮೌಲಿಕ ಅಂಶಗಳನ್ನು ಪ್ರಸ್ತಾಪಿಸಿದರು. ಜಿಎಸ್‌‌ಟಿ ತೆರಿಗೆ ಸೋರಿಕೆ ಆಗದಂತೆ ತಡೆಯಲು ಏನೇನು ಮಾಡಬೇಕು ಎಂದು ಹೇಳಿದರು, ಅದು ಬೇರೆ ವಿಷಯ. ಆದರೆ ಉತ್ತರ ಭಾರತ-ದಕ್ಷಿಣ ಭಾರತ ಎಂದು ನೋಡುವುದು ಬಿಜೆಪಿಯ ಸೈದ್ಧಾಂತಿಕ ನೆಲೆಯೇ?

ಜನಸಂಘದ ಸಂಸ್ಥಾಪಕರಲ್ಲೊಬ್ಬರಾದ ಪಂಡಿತ್ ದೀನದಯಾಳ್ ಉಪಾಧ್ಯಾಯರ ಮಾತು ಇಲ್ಲಿ ಉಲ್ಲೇಖಾರ್ಹ. ರಾಜ್ಯಗಳ ಪುನರ್ವಿಂಗಡಣೆ ಕುರಿತು ಅವರು ಮಾತನಾಡುವಾಗ, “ಒಂದು ಆಡಳಿತ ಘಟಕವನ್ನು ನಿರ್ಮಿಸುವುದರಲ್ಲಿ ಭಾಷೆಯೂ ಒಂದು ಪ್ರಮುಖ ಅಂಶ. ಆದರೆ ಅದೇ ಏಕೈಕ ಒರೆಗಲ್ಲು ಅಲ್ಲ. ಆಡಳಿತದಲ್ಲಿ ಭಾಷೆಗೂ ಮಹತ್ವದ ಸ್ಥಾನವಿದೆ. ಆದರೆ ಭಾಷೆಯ ಗಡಿಗಳೇ ಸಾಮಾನ್ಯವಾಗಿ ಪ್ರದೇಶದ ಗಡಿಗಳಾಗಿಬಿಟ್ಟಿವೆ. ಆದರೆ ಕೆಲವರು ಭಾಷೆಯನ್ನು ಕುರಿತು ಎಷ್ಟು ಅತಿರೇಕದ ಹಾಗೂ ಏಕೀಕೃತ ಸ್ವರೂಪದ ಆಲೋಚನೆಯನ್ನು ಹೊಂದಿರುತ್ತಾರೆ ಎಂದರೆ ಅದರಿಂದ ʼಉಪರಾಷ್ಟ್ರವಾದʼದ ದುರ್ಗಂಧ ಬರತೊಡಗುತ್ತದೆ” ಎಂದಿದ್ದಾರೆ. ಇಡೀ ರಾಷ್ಟ್ರವನ್ನು ಒಂದೇ ಘಟಕದಂತೆ ನೋಡುವುದು ಬಿಜೆಪಿ ಪಕ್ಷದ ಸೈದ್ಧಾಂತಿಕ ನೆಲೆ. ಆದರೆ ಬೇರೆ ಬೇರೆ ಪಕ್ಷಗಳ ಪ್ರಭಾವಕ್ಕೆ ಒಳಗಾಗಿರುವ ಬಿಜೆಪಿಯ ಅನೇಕರು ತಮ್ಮ ಮೂಲ ನೆಲೆಯನ್ನು ಮರೆತು ಉಪರಾಷ್ಟ್ರವಾದದ ಮಾತನ್ನು ತಮಗೆ ಅರಿವಿಲ್ಲದೆಯೇ ಮಾತನಾಡುತ್ತಿರುವುದಕ್ಕೆ ಪರಿಷತ್ನ ಮಾತು ಒಂದು ಉದಾಹರಣೆ ಅಷ್ಟೆ.

ದ್ರಾವಿಡ ವಾದದ ತೊಟ್ಟಿಲು ಎಂದಾಗಿದ್ದ ತಮಿಳುನಾಡಿನಲ್ಲಿ ಬಿಜೆಪಿಗೆ ಅಣ್ಣಾಮಲೈ ಅವರನ್ನು ಅಧ್ಯಕ್ಷರಾಗಿ ನೇಮಿಸಲಾಗಿದೆ. ಶೇ.18 ಜನರು ದೇಶದ ಉಳಿದ ಶೇ.82 ಜನರನ್ನು ಸಾಕುತ್ತಿದ್ದಾರೆ, ತಮಿಳುನಾಡಿನ ತೆರಿಗೆ ಹಣವನ್ನು ಉತ್ತರ ಪ್ರದೇಶ, ಬಿಹಾರದಲ್ಲಿ ವೆಚ್ಚ ಮಾಡಲಾಗುತ್ತಿದೆ, ಸಂಸ್ಕೃತ ವರ್ಸಸ್‌ ತಮಿಳು ಎಂಬಂತಹ ವಾದಗಳು ಕನಿಷ್ಠ ತಿಂಗಳಿಗೆ ಒಂದು ಆ ರಾಜ್ಯದಲ್ಲಿ ಚರ್ಚೆ ಆಗುತ್ತದೆ. ಐಪಿಎಸ್‌‌‌ ಅಧಿಕಾರಿಯಾಗಿ ನಿವೃತ್ತರಾಗಿ ಇತ್ತೀಚೆಗಷ್ಟೆ ಬಿಜೆಪಿ ಸೇರಿರುವ ಅಣ್ಣಾಮಲೈ ಈ ವಿಚಾರಗಳಿಗೆ ಉತ್ತರ ನೀಡುವಾಗ ಬಿಜೆಪಿಯ ಸೈದ್ಧಾಂತಿಕ ನೆಲೆಯಿಂದ ಒಂದಿಂಚೂ ಆಚೀಚೆ ಹೋಗುವುದಿಲ್ಲ. ಕೆಲವೊಮ್ಮೆ ನಾಯಕರ ನಿರ್ಧಾರಗಳಿಗೆ ಮುಜುಗರ ಆಗುತ್ತದೆ ಎನ್ನುವಂತಹ ಮಾತುಗಳನ್ನು ಆಡಿದ್ದಾರಾದರೂ, ಅದು ಒಟ್ಟಾರೆ ಬಿಜೆಪಿಯ ಸಿದ್ಧಾಂತಕ್ಕೆ ಅನುಗುಣವಾಗಿಯೇ ಇರುತ್ತದೆ. ಆದರೆ ಕರ್ನಾಟಕದಲ್ಲಿ ಇಷ್ಟು ಸುದೀರ್ಘ ಸಂಘಟನಾತ್ಮಕ ಅನುಭವವಿರುವ ಕರ್ನಾಟಕ ಬಿಜೆಪಿಯಲ್ಲಿ ಅದರ ಕೊರತೆ ಢಾಳಾಗಿ ಕಾಣುತ್ತದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜುಲೈ 7ರಂದು ಬಜೆಟ್ ಮಂಡಿಸಿದರು. ತಮ್ಮ 14 ನೇ ದಾಖಲೆಯ ಬಜೆಟ್‌‌ನಲ್ಲಿ  ಮುಂಬರುವ ಲೋಕಸಭೆ ಚುನಾವಣೆಗೂ ಮುನ್ನ ಪ್ರಮುಖ ಬಜೆಟ್‌ ಎಂಬ ಸಂದೇಶವನ್ನೂ ನೀಡಿದರು. ರಾಜ್ಯದಲ್ಲಿ ಹಿಂದೆ ಇದ್ದ ಬಿಜೆಪಿ ಸರ್ಕಾರದ ಅವಧಿಯನ್ನು ʼಅಂಧಕಾರʼ ಎಂದು ಹೇಳಿದರು. ಈಗ (ಕಾಂಗ್ರೆಸ್ ಗೆದ್ದ ನಂತರ) ರಾಜ್ಯವು ಕತ್ತಲಿನಿಂದ ಹೊರಬಂದಿದೆ ಎಂದರು.

ದೇಶದಲ್ಲಿ ಇನ್ನೂ ಅಂಧಕಾರ ಇದೆ, ಅದನ್ನು ಹೋಗಲಾಡಿಸಬೇಕಿದೆ. ಅಂಧಕಾರದಲ್ಲಿರುವ ಇಂದಿನ ಭಾರತದಲ್ಲಿ ಲಕ್ಷಾಂತರ ಭಾರತೀಯರ ಕನಸುಗಳಿಗೆ ರೆಕ್ಕೆ ಮೂಡಿಸಲು ಕರ್ನಾಟಕ ಸರ್ಕಾರ ಶ್ರಮಿಸಲಿದೆ. ಎಲ್ಲರನ್ನೂ ಒಳಗೊಳ್ಳುವಿಕೆಯಲ್ಲಿ ವಿಶ್ವಾಸವಿದೆಯೇ ಹೊರತು ಸರ್ವಾಧಿಕಾರದಲ್ಲಲ್ಲ. ಭೇದಭಾವ ತೋರುವುದು, ಧ್ರುವೀಕರಣ ಮಾಡುವುದು, ಸಮಾಜವನ್ನು ಒಡೆಯುವುದು ನ್ಯಾಯವಲ್ಲ ಎಂದರು.

ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡುತ್ತಿರುವುದನ್ನು ಟೀಕಿಸುತ್ತಿರುವವರಿಗೆ ಸಿದ್ದರಾಮಯ್ಯ ತಿರುಗೇಟು ನೀಡಿದರು. ಕೇಂದ್ರ ಸರ್ಕಾರದ ಕೆಟ್ಟ ನೀತಿಗಳ ಕಾರಣಕ್ಕೆ ಬೆಲೆಯೇರಿಗೆ, ನಿರುದ್ಯೋಗ ಹೆಚ್ಚಾಗಿರುವುದರಿಂದಲೇ ಈ ಯೋಜನೆಗಳ ಮೂಲಕ ಜನರಿಗೆ ಅನುಕೂಲ ಮಾಡಿಕೊಡಲಾಗುತ್ತಿದೆ ಎಂದರು. ಒಟ್ಟಿನಲ್ಲಿ ರಾಜಕೀಯವಾಗಿ ಬಿಜೆಪಿಯನ್ನು, ಅದರಲ್ಲೂ ಕೇಂದ್ರ ಸರ್ಕಾರವನ್ನು ಟೀಕಿಸುವ ಯಾವ ಅವಕಾಶವನ್ನೂ ಸಿದ್ದರಾಮಯ್ಯ ಬಿಡಲಿಲ್ಲ.
ಬಜೆಟ್ ದಾಖಲೆ ಎಂದರೆ ಒಂದು ಆರ್ಥಿಕ ಲೆಕ್ಕಾಚಾರ. ಸಮಾಜವನ್ನು ಅದು ಅಡ್ರೆಸ್ ಮಾಡಬೇಕಿರುವುದರಿಂದ ಸಾಮಾಜಿಕ ಆಯಾಮವೂ ಇರುತ್ತದೆ. ಬಜೆಟ್ ಮಂಡನೆ ಎನ್ನುವುದು ಒಂದು ಸಂವಿಧಾನದ ಅವಶ್ಯಕತೆಯೂ ಹೌದು. ಆದರೆ ಬಜೆಟ್ ಮಂಡನೆ ವೇಳೆ ಒಕ್ಕೂಟ ವ್ಯವಸ್ಥೆಯ ಕೇಂದ್ರವಾದ ಕೇಂದ್ರ ಸರ್ಕಾರವನ್ನು ಹಿಗ್ಗಾಮುಗ್ಗಾ ಟೀಕಿಸುವುದು ವಾಡಿಕೆಯಲ್ಲಿಲ್ಲ. ಗ್ಯಾರಂಟಿ ಯೋಜನೆಗಳಿಂದಾಗಿ ಕೈ ಸಾಕಷ್ಟು ಖಾಲಿಯಾಗಿದೆ. ಮುಂಬರುವ ಲೋಕಸಭೆ ಚುನಾವಣೆಗೂ ಒಂದು ಸ್ಟೇಜ್ ಸೆಟ್ ಮಾಡುವ ಸಲುವಾಗಿ ಸಿಎಂ ಈ ಮಾತುಗಳನ್ನು ಪ್ರಸ್ತಾಪಿಸಿದ್ದಾರೆ, ಅವರ ದೃಷ್ಟಿಯಲ್ಲಿ ಅದು ಸರಿಯಾಗಿದೆ. ಆದರೆ ಬಿಜೆಪಿಯು ರಾಷ್ಟ್ರೀಯತೆ ಮಾತನಾಡುವ ಪಕ್ಷ. ಕೇಂದ್ರದ ಸರ್ಕಾರವನ್ನು ರಾಜ್ಯ ಸರ್ಕಾರದ ಬಜೆಟ್‌‌ನಲ್ಲಿ ಟೀಕಿಸುವುದು ರಾಷ್ಟ್ರೀಯತೆಗೆ ವಿರುದ್ಧ, ಉಪರಾಷ್ಟ್ರವಾದದ ಪ್ರತಿಪಾದನೆ ಎಂದು ವಿಧಾನಸಭೆಯಲ್ಲಿ ಕುಳಿತಿದ್ದ ಬಿಜೆಪಿಗರಿಗೆ ಅನ್ನಿಸಬೇಕಿತ್ತಲ್ಲವೇ? ರಾಜ್ಯ ಹಾಗೂ ಕೇಂದ್ರದ ನಡುವೆ ಉತ್ತಮ ಬಾಂಧವ್ಯ ಇದ್ದರೆ ಸಾರ್ವಭೌಮತೆ ಉಳಿಯುತ್ತದೆ. ಆದರೆ ತನ್ನ ಅಧಿಕೃತ ದಾಖಲೆಯಲ್ಲಿ ರಾಜ್ಯ ಸರ್ಕಾರವು ಕೇಂದ್ರ ಸರ್ಕಾರವನ್ನು ಟೀಕಿಸುವುದನ್ನು ಬಿಜೆಪಿ ಪ್ರತಿಭಟಿಸಬೇಕಿತ್ತಲ್ಲ? ಎಲ್ಲ ಸದಸ್ಯರೂ ಹೆಡ್‌ಫೋನ್‌ ಅಳವಡಿಸಿಕೊಂಡು ಭಾಷಣ ಕೇಳುತ್ತಿದ್ದರು. ಹೋಗಲಿ ಭಾಷಣ ಮುಗಿದ ನಂತರವಾದರೂ ಅದನ್ನು ಪ್ರಸ್ತಾಪಿಸಿದ್ದು ಕೇವಲ ಒಬ್ಬ ವಿಧಾನ ಪರಿಷತ್ ಸದಸ್ಯರು(ರವಿಕುಮಾರ್). ಇದು ಜನಸಾಮಾನ್ಯರ ವಿರೋಧಿ ಬಜೆಟ್, ಅಭಿವೃದ್ಧಿ ವಿರೋಧಿ ಬಜೆಟ್ ಎಂಬ ರೆಕಾರ್ಡೆಡ್ ಕ್ಯಾಸೆಟ್‌ಗಳನ್ನು ಬಿಜೆಪಿ ಸದಸ್ಯರು ಪ್ಲೇ ಮಾಡಿದರೇ ಹೊರತಾಗಿ ತಮ್ಮ ಪಕ್ಷ ಇಷ್ಟು ವರ್ಷ ಪ್ರತಿಪಾದಿಸಿಕೊಂಡು ಬಂದ ಸಿದ್ಧಾಂತಕ್ಕೇ ಧಕ್ಕೆಯಾಗುತ್ತಿದೆ ಎನ್ನುವುದು ಅನುಭವಕ್ಕೇ ಬರಲಿಲ್ಲ.

ರಾಜ್ಯದಲ್ಲಷ್ಟೆ ಅಲ್ಲ, ಕೇಂದ್ರದಲ್ಲೂ ಬಿಜೆಪಿ ನಾಯಕರು ಹೀಗೆ ನಡೆದುಕೊಳ್ಳುತ್ತಾರೆ. ಬುಡಕಟ್ಟು ಸಮುದಾಯದವರಿಗೆ “ಆದಿವಾಸಿ” ಎಂಬ ಪದಪ್ರಯೋಗ ಮಾಡುತ್ತಾರೆ. ನಿಜವಾಗಿ ಈ ಆದಿವಾಸಿ ಎಂಬ ಶಬ್ದದ ಅರ್ಥ ಏನು? ಈ ನೆಲದ ಮೂಲ ನಿವಾಸಿಗಳು ಎಂದಲ್ಲವೇ? ಬುಡಕಟ್ಟು ಸಮುದಾಯದವರು ಆದಿವಾಸಿಗಳು ಎಂದಾದರೆ ಉಳಿದವರೆಲ್ಲರೂ ಹೊರಗಿನಿಂದ ಬಂದವರು, ಆಕ್ರಮಣಕಾರರು ಎಂದಾಗುವುದಿಲ್ಲವೇ? ಈ ವಿಚಾರ ನೇರವಾಗಿ ಆರ್ಯ-ದ್ರಾವಿಡ ಸಿದ್ಧಾಂತಕ್ಕೆ ಕರೆದೊಯ್ಯುತ್ತದೆ. ಆದಿವಾಸಿ ಎಂಬ ಶಬ್ದವನ್ನು ಬಳಸಿದೊಡನೆಯೇ ನೇರವಾಗಿ ಆರ್ಯ-ದ್ರಾವಿಡ ಸಿದ್ಧಾಂತಕ್ಕೆ ಸಹಮತಿ ವ್ಯಕ್ತಪಡಿಸಿದಂತಾಗುತ್ತದೆ. ಆದರೆ ಸೈದ್ಧಾಂತಿಕವಾಗಿ ಬಿಜೆಪಿಯು ಆರ್ಯ-ದ್ರಾವಿಡ ವಾದದ ವಿರೋಧಿ. 2022ರ ಗುಜರಾತ್ ವಿಧಾನಸಭೆ ಚುನಾವಣೆ ಸಮಯದಲ್ಲೂ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ಈ ವಿಚಾರಕ್ಕೆ ವಾಗ್ವಾದ ನಡೆದಿತ್ತು. ಬಿಜೆಪಿಯವರು ವನವಾಸಿ ಎಂದೇ ಏಕೆ ಬಳಸುತ್ತಾರೆ ಎಂದರೆ ಅವರು ನಿಮ್ಮನ್ನು ಕಾಡಿನಲ್ಲಿಯೇ ಇರಿಸಲು ಬಯಸುತ್ತಾರೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಹೇಳಿದ್ದರು. ಇದಕ್ಕೆ ಬಿಜೆಪಿಯೂ ತಿರುಗೇಟು ನೀಡಿ, ವನವಾಸಿ ಪದವೇ ಸರಿಯಾದದ್ದು ಎಂದಿತ್ತು.
ಆರ್ಯ ದ್ರಾವಿಡ ಸಿದ್ಧಾಂತವನ್ನು ಒಪ್ಪದವರು ಆದಿವಾಸಿ ಎಂಬ ಪದಬಳಕೆಯನ್ನು ಮಾಡಲು ಸಾಧ್ಯವಿಲ್ಲ ಎಂದಷ್ಟೆ ಹೇಳಬಹುದು. ಬಿಜೆಪಿಯ ಸೈದ್ಧಾಂತಿಕ ಮಾತೃ ಸಂಸ್ಥೆ ಆರ್‌ಎಸ್‌‌ಎಸ್‌‌ ಸಹ ವನವಾಸಿ ಶಬ್ದವನ್ನೇ ಬಳಸುತ್ತದೆ. ಅದಕ್ಕಾಗಿಯೇ, ಆರ್‌ಎಸ್‌ಎಸ್‌‌‌ ಪರಿವಾರ ಸಂಸ್ಥೆಗೆ ʼವನವಾಸಿ ಕಲ್ಯಾಣʼ ಎಂಬ ಹೆಸರಿಡಲಾಗಿದೆ, ಆದರೆ ಇಂದಿಗೂ ಅನೇಕ ಬಿಜೆಪಿ ನಾಯಕರು ಆದಿವಾಸಿ ಎಂಬ ಶಬ್ದವನ್ನೇ ಬಳಸುತ್ತಾರೆ.

ಇವು ಬಿಜೆಪಿಯನ್ನು ಕಾಡುತ್ತಿರುವ ನಿಜವಾದ ಸಮಸ್ಯೆಗಳು. ತನ್ನ ಘೋಷಿತ, ಪ್ರಕಟಿತ ಸೈದ್ಧಾಂತಿಕ ಹಿನ್ನೆಲೆಯನ್ನೂ ಆ ಪಕ್ಷದ ಸದಸ್ಯರು ಸ್ಪಷ್ಟ ಧ್ವನಿಯಲ್ಲಿ ತಿಳಿಸಲಾಗದಷ್ಟು ಅಸ್ಪಷ್ಟತೆ ಆವರಿಸಿದೆ. ಈ ಸಮಯದಲ್ಲಿ ಬಿಜೆಪಿ ನಾಯಕರಾದ ಎಲ್.ಕೆ. ಆಡ್ವಾಣಿಯವರ ಒಂದು ಮಾತು ಉಲ್ಲೇಖಿಸಬಹುದು.

ಎಲ್.ಕೆ. ಆಡ್ವಾಣಿಯವರು 2005ರಲ್ಲಿ ಚೆನ್ನೈಯಲ್ಲಿ ನಡೆದ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಆಡಿದ ಮಾತು ಇಲ್ಲಿ ಸೂಕ್ತ. “… ಬಿಜೆಪಿಯು ಜನರಿಗೆ ಉತ್ತರದಾಯಿಯಾಗಿದ್ದು, ಕಾಲಕಾಲಕ್ಕೆ ಚುನಾವಣೆಗಳನ್ನು ಎದುರಿಸುವ ಮೂಲಕ ತನ್ನನ್ನು ಪರೀಕ್ಷೆಗೆ ಒಡ್ಡಿಕೊಳ್ಳುತ್ತದೆ. ಪ್ರಜಾಪ್ರಭುತ್ವದಲ್ಲಿ, ಬಹುಪಕ್ಷೀಯ ವ್ಯವಸ್ಥೆಯಲ್ಲಿ ಬಿಜೆಪಿಯಂತಹ ಸೈದ್ಧಾಂತಿಕ ಪಕ್ಷವೊಂದು ತನ್ನ ಮೂಲಭೂತ ನಿಲುವುಗಳನ್ನು ಉಳಿಸಿಕೊಂಡು ಮತ್ತು ಅದೇ ಸಮಯದಲ್ಲಿ ತನ್ನನ್ನು ಎಲ್ಲ ಸೈದ್ಧಾಂತಿಕ ಪದರಗಳಿಂದ ಹೊರಗೊಯ್ದು ಹೆಚ್ಚಿನ ವರ್ಗಗಳ ಜನರನ್ನು ತಲುಪುವ ರೀತಿಯಲ್ಲಿ ಕಾರ್ಯನಿರ್ವಹಿಸಬೇಕಾಗಿದೆ” ಎಂದು ಹೇಳಿದ್ದರು.

ಅಂದರೆ ಬಿಜೆಪಿಯು ಸಮಾಜದಲ್ಲಿ ಎಲ್ಲ ವರ್ಗಗಳನ್ನೂ ತಲುಪಲು ಪ್ರಯತ್ನಿಸಬೇಕು. ಆಗಮಾತ್ರ ಚುನಾವಣಾ ರಾಜಕೀಯದಲ್ಲಿ ಸಕ್ಸೆಸ್ ಆಗಲು ಸಾಧ್ಯ. ಇದಕ್ಕಾಗಿ ವಿಭಿನ್ನ ವರ್ಗಗಳ, ಹಿನ್ನೆಲೆಯ ನಾಯಕರು, ಮತದಾರರನ್ನು ತನ್ನೆಡೆಗೆ ಸೆಳೆಯಬೇಕು. ಆದರೆ ಹೆಚ್ಚು ಜನರನ್ನು ತಲುಪಬೇಕು ಎನ್ನುವ ಭರದಲ್ಲಿ ತನ್ನ ಮೂಲ ತತ್ವಗಳನ್ನೇ ಮರೆತರೆ ಬೇರೆ ಪಕ್ಷಗಳೊಂದಿಗಿನ ಭಿನ್ನತೆಯೇ ಉಳಿಯುವುದಿಲ್ಲ. ಬಿಜೆಪಿಗೆ ಈಗ ಸಾಕಷ್ಟು ಸಮಯವಿದೆ. ತನ್ನದೇ ಮೂಲ ಪಠ್ಯ, ನಾಯಕರ ಭಾಷಣಗಳು, ಸಂವಿಧಾನ, ಘೋಷಿತ ಪ್ರಸ್ತಾವನೆಗಳನ್ನು ಒಮ್ಮೆ ಮೆಲುಕು ಹಾಕಲು ಸದವಕಾಶ. ಅಥವಾ ಈಗಿನ ಸದಸ್ಯರು ವರ್ತನೆ ಮಾಡುತ್ತಿರುವ ರೀತಿಯೇ ಸರಿ ಎನ್ನುವುದಾದರೆ ತನ್ನ ಘೋಷಿತ ಪಠ್ಯಗಳಲ್ಲಿಯೇ ಬದಲಾವಣೆ ಮಾಡಿಕೊಳ್ಳಲೂ ಅವಕಾಶವಿದೆ. ಒಟ್ಟಿನಲ್ಲಿ ತನ್ನ ಲಿಖಿತ, ಘೋಷಿತ, ಪ್ರಕಟಿತ ಸೈದ್ಧಾಂತಿಕ ನಿಲುವಿಗೆ ಆದಷ್ಟೂ ಹತ್ತಿರದಲ್ಲಿ ಇರುವಂತೆ ಪ್ರಯತ್ನಿಸುವುದೇ ಬಿಜೆಪಿಯ ಪುನರುಜ್ಜೀವನದ ಆರಂಭ ಎನ್ನಬಹುದು. ಈ ಚುನಾವಣೆಯಲ್ಲಿ ಸೋತ ಬಿಜೆಪಿ, ಮುಂದೆ ಗೆಲ್ಲಬಹುದು. ಆದರೆ ಸೈದ್ಧಾಂತಿಕ ಸ್ಪಷ್ಟತೆಯ ವಿಚಾರವು ಕೇವಲ ಒಂದು ಚುನಾವಣೆಯ ಸೋಲು ಅಥವಾ ಗೆಲುವಿಗಿಂತಲೂ ದೊಡ್ಡದು ಎನ್ನುವುದಂತೂ ಸ್ಪಷ್ಟ.

Exit mobile version