| ಮಲ್ಲಿಕಾರ್ಜುನ ತಿಪ್ಪಾರ ಬೆಂಗಳೂರು
ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ (Justice D Y Chandrachud) ಅವರು ಸುಪ್ರೀಂ ಕೋರ್ಟ್‌ನ 50ನೇ ಮುಖ್ಯ ನ್ಯಾಯಮೂರ್ತಿ ಆಗಲಿದ್ದಾರೆಂಬ ಸುದ್ದಿ ಹೊರ ಬೀಳುತ್ತಿದ್ದಂತೆ, ‘ಭಾರತೀಯ ನ್ಯಾಯಾಂಗವು ವ್ಯವಸ್ಥೆ ಸುರಕ್ಷಿತ ಕೈಗಳಲ್ಲಿದೆ’ ಎಂಬ ಮೆಚ್ಚುಗೆ ಎಲ್ಲೆಡೆಯಿಂದ ಕೇಳಿ ಬಂತು! ನ್ಯಾಯವಾದಿಯಾಗಿ, ಹೆಚ್ಚುವರಿ ಸಾಲಿಸಿಟರ್ ಜನರಲ್ ಆಗಿ, ಹೈಕೋರ್ಟ್ ನ್ಯಾಯಮೂರ್ತಿ- ಮುಖ್ಯ ನ್ಯಾಯಮೂರ್ತಿ ಹಾಗೂ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯಾಗಿ ಡಿ ವೈ ಚಂದ್ರಚೂಡ್ ಅವರು ತೋರಿದ ಧೈರ್ಯ, ದೃಢತೆ, ನ್ಯಾಯಪರತೆಯೇ ಈ ಮೆಚ್ಚುಗೆಯ ಹಿಂದಿನ ಕಾರಣ.
ನ್ಯಾ. ಚಂದ್ರಚೂಡ್ ಅವರನ್ನು ಹತ್ತಿರದಿಂದ ಬಲ್ಲ ಮುಂಬೈ ನ್ಯಾಯವಾದಿಗಳು ಅವರನ್ನು ಮೂರು ಸಿ(C)ಗಳಲ್ಲಿ ಬಣ್ಣಿಸುತ್ತಾರೆ. compassion, courage and conscientiousness. ಅಂದರೆ, ಸಹಾನುಭೂತಿ, ಧೈರ್ಯ ಮತ್ತು ಆತ್ಮಸಾಕ್ಷಿಗೆ ಅನುಗುಣವಾಗಿ ನಡೆಯುವ ವ್ಯಕ್ತಿ ಎಂದರ್ಥ. ಅವರು ನೀಡಿದ ಎಲ್ಲ ತೀರ್ಪುಗಳಲ್ಲಿ ನ್ಯಾಯಪರತೆಯೊಂದಿಗೆ ಈ ಮೂರು ಮೌಲ್ಯಗಳು ಪ್ರತಿಫಲನಗೊಂಡಿರುವುದನ್ನು ಸುಲಭವಾಗಿ ಗುರುತಿಸಬಹುದು. ಹಾಗಾಗಿಯೇ ಭಾರತೀಯ ನ್ಯಾಯಾಂಗ ವ್ಯವಸ್ಥೆಯಲ್ಲಿ ಡಿ. ವೈ.ಚಂದ್ರಚೂಡ ಅವರಿಗೆ ವಿಶೇಷವಾದ ಗೌರವವಿದೆ. ಅವರೀಗ ಸುಪ್ರೀಂ ಕೋರ್ಟ್‌ನ ನಿಯೋಜಿತ ಮುಖ್ಯ ನ್ಯಾಯಮೂರ್ತಿ. ಸುಮಾರು ಎರಡು ವರ್ಷಗಳ ಕಾಲ ಈ ಹುದ್ದೆಯಲ್ಲಿ ಇರಲಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಇಷ್ಟೊಂದು ದೀರ್ಘ ಅವಧಿಗೆ ಸಿಜೆಐ ಆಗುತ್ತಿರುವುದು ಇವರೇ ಮೊದಲಿಗರು. ಇನ್‌ಫ್ಯಾಕ್ಟ್ ಡಿ ವೈ ಚಂದ್ರಚೂಡ್ ಅವರ ತಂದೆ ಯಶವಂತರಾವ್ ವಿ ಚಂದ್ರಚೂಡ್ ಅವರೂ 7 ವರ್ಷಗಳ ಕಾಲ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳಾಗಿದ್ದರು. ಇದು ಈ ವರೆಗಿನ ಗರಿಷ್ಠ ದಾಖಲೆಯಾಗಿದೆ. ಈಗ ಅವರ ಪುತ್ರ ದೀರ್ಘಾವಧಿಗೆ ಅದೇ ಹುದ್ದೆಯಲ್ಲಿ ಇರಲಿರುವುದು ಕಾಕತಾಳೀಯವಷ್ಟೇ. ಬಹುಶಃ ಭಾರತೀಯ ನ್ಯಾಯಾಂಗ ಇತಿಹಾಸದಲ್ಲಿ ತಂದೆ-ಮಗ ಇಬ್ಬರು ದೀರ್ಘಾವಧಿಗೆ ಸಿಜೆಐ ಆಗಿರುವುದು ವಿಶಿಷ್ಟ ದಾಖಲೆಯಾಗಲಿದೆ.
1959ರಲ್ಲಿ ಜನನ
ಡಿ ವೈ ಚಂದ್ರಚೂಡ್ ಅವರ ಪೂರ್ತಿ ಹೆಸರು ಧನಂಜಯ್ ಯಶವಂತರಾವ್ ಚಂದ್ರಚೂಡ್. 1959 ನವೆಂಬರ್ 11ರಂದು ಮುಂಬೈನಲ್ಲಿ ಜನಿಸಿದರು. ತಂದೆ ಯಶವಂತರಾವ್ ಚಂದ್ರಚೂಡ್. ಅವರೂ ಸಿಜೆಐ ಆಗಿದ್ದವರು. ತಾಯಿ ಪ್ರಭಾ. ಶಾಸ್ತ್ರೀಯ ಸಂಗೀತಗಾರ್ತಿ. ಧನಂಜಯ್ ಅವರು ದಿಲ್ಲಿಯ ಸೇಂಟ್ ಸ್ಟೀಫನ್ಸ್ ಕಾಲೇಜಿನಲ್ಲಿ ಅರ್ಥಶಾಸ್ತ್ರದಲ್ಲಿ ಪದವಿ ಪಡೆದರು. ದೆಹಲಿ ವಿಶ್ವವಿದ್ಯಾಲಯದ ಫ್ಯಾಕಲ್ಟಿ ಆಫ್ ಲಾ ಕಾಲೇಜಿನಿಂದ ಕಾನೂನು ಪದವಿ ಗಳಿಸಿದರು. ಹಾಗೆಯೇ, ಹಾರ್ವರ್ಡ್ ಲಾ ಸ್ಕೂಲ್‌ನಿಂದ ಮಾಸ್ಟರ್ ಆಫ್ ಲಾ ಮತ್ತು ಜುರಿಡಿಕಲ್ ಸೈನ್ಸ್‌ನಲ್ಲಿ ಪಿಎಚ್‌ಡಿ ಸಂಪಾದಿಸಿದರು. ಆ ಬಳಿಕ ಅವರು ಬಾಂಬೆ ಹಾಗೂ ಸುಪ್ರೀಂ ಕೋರ್ಟ್‌ನಲ್ಲಿ ವಕೀಲಿಕಿ ಆರಂಭಿಸಿದರು. ಈ ಮಧ್ಯೆ ಅವರು ಭಾರತ ಸರ್ಕಾರದ ಹೆಚ್ಚುವರಿ ಸಾಲಿಸಿಟರ್ ಜನರಲ್ ಆಗಿಯೂ ಕೆಲಸ ಮಾಡಿದರು. 2000ರಲ್ಲಿ ಅವರನ್ನು ಬಾಂಬೆ ಹೈಕೋರ್ಟ್‌ಗೆ ಹೆಚ್ಚುವರಿ ನ್ಯಾಯಮೂರ್ತಿಯಾಗಿ ನೇಮಕ ಮಾಡಲಾಯಿತು. 2013 ಅಕ್ಟೋಬರ್ 31ರಂದು ಅವರು ಅಲಹಾಬಾದ್ ಹೈಕೋರ್ಟ್ ಮುಖ್ಯನ್ಯಾಯಮೂರ್ತಿಯಾಗಿ ಅಧಿಕಾರ ಸ್ವೀಕರಿಸಿದರು. 2016 ಮಾರ್ಚ್ 13ರಂದು ಅವರಿಗೆ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯಾಗಿ ಬಡ್ತಿ ನೀಡಲಾಯಿತು.
ಬಹುಮುಖ ವ್ಯಕ್ತಿತ್ವ
ನಿಯೋಜಿತ ಸಿಜೆಐ ಡಿ ವೈ ಚಂದ್ರಚೂಡ್ ಅವರು ರಾಷ್ಟ್ರೀಯ ಕಾನೂನು ಸೇವಾ ಪ್ರಾಧಿಕಾರ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ. ನ್ಯಾಯಮೂರ್ತಿ ಚಂದ್ರಚೂಡ್ ಅವರ ಪೀಠದಲ್ಲಿ ಸ್ವಾಭಾವಿಕ ನಾಯಕನಂತಿರುತ್ತಾರೆ. ಅವರ ಸಮಚಿತ್ತತೆ, ಸಭ್ಯತೆ ಮತ್ತು ದೃಢವಾದ ನಡವಳಿಕೆ, ಅವರ ಪಾಂಡಿತ್ಯ ಮತ್ತು ನ್ಯಾಯದಾನ ಮಾಡುವ ಅವರ ಉತ್ಸಾಹವು ಹೆಚ್ಚು ವಿಶ್ವಾಸಾರ್ಹವಾಗಿದೆ. ಹಾಗಾಗಿ, ಅವರು ಭಾರತದ ಮುಖ್ಯ ನ್ಯಾಯಮೂರ್ತಿಯಾಗಿ ಕೆಲಸ ಮಾಡುವ ಬಗ್ಗೆ ಇಡೀ ಜಗತ್ತೇ ನಿರೀಕ್ಷೆಯನ್ನು ಇಟ್ಟುಕೊಂಡಿದೆ ಎಂದರೆ ಅತಿಶಯೋಕ್ತಿಯೇನೂ ಆಗಲಾರದು.
ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಯಾಗಿ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿರುವ ಚಂದ್ರಚೂಡ್ ಅವರು ಮುಂಬೈ ವಿಶ್ವವಿದ್ಯಾಲಯದ ಕಂಪ್ಯಾರಟಿವ್ ಕಾನ್‌ಸ್ಟಿಟ್ಯೂಷನಲ್ ಲಾ ಕಾಲೇಜು ಹಾಗೂ ಅಮೆರಿಕದ ಓಕ್ಲಹೋಮ್ ಯುನಿವರ್ಸಿಟಿಯ ಸ್ಕೂಲ್ ಆಫ್ ಲಾ ಕಾಲೇಜಿನ ಸಂದರ್ಶಕ ಪ್ರಾಧ್ಯಾಪಕರೂ ಹೌದು. ಚಂದ್ರಚೂಡ ಅವರು ನಿಸರ್ಗ ಪ್ರೇಮಿ. ನಡೆಯುವುದೆಂದರೆ ತುಂಬ ಖುಷಿ ಅವರಿಗೆ. ಆಧ್ಯಾತ್ಮಿಕ ಹಾಗೂ ತತ್ವಜ್ಞಾನ ವಿಷಯಗಳು ಇಷ್ಟ. ಇಬ್ಬರು ಮಕ್ಕಳಿದ್ದಾರೆ. ಮೊದಲನೆಯ ಮಗ ಅಭಿನವ್ ಬಾಂಬೆ ಹೈಕೋರ್ಟ್‍ನಲ್ಲಿ ವಕೀಲಿಕೆ ಮಾಡುತ್ತಿದ್ದಾರೆ. ಎರಡನೇಯ ಮಗ ಚಿಂತನ್ ಅವರು ಲಂಡನ್‌ನ ಬ್ರಿಕ್ ಕೋರ್ಟ್ ಚೇಂಬರ್ಸ್‌ನಲ್ಲಿ ನ್ಯಾಯವಾದಿಯಾಗಿದ್ದಾರೆ.
ತಂದೆ ತೀರ್ಪುಗಳನ್ನೇ ಬದಲಿಸಿದ ಮಗ
ಡಿ ವೈ ಚಂದ್ರಚೂಡ್ ಅವರ ತಂದೆ ಯಶವಂತ ವಿ ಚಂದ್ರಚೂಡ್ ಅವರು ಸುಪ್ರೀಂ ಕೋರ್ಟ್‌ನ 16ನೇ ಮುಖ್ಯ ನ್ಯಾಯಮೂರ್ತಿಯಾಗಿ ಏಳು ವರ್ಷ ನಾಲ್ಕು ತಿಂಗಳು ಕಾರ್ಯ ನಿರ್ವಹಿಸಿದ್ದರು. ಆ ಸಮಯದಲ್ಲಿ ಸಿಜೆಐ ಆಗಿ ಯಶವಂತ ಚಂದ್ರಚೂಡ್ ಅವರು ಖಾಸಗಿ ಹಕ್ಕು (right to privacy) ಮತ್ತು ವಿವಾಹೇತರ ಸಂಬಂಧ (Adultery) ಕುರಿತು ತೀರ್ಪು ನೀಡಿದ್ದರು. ಸೀನಿಯರ್ ಚಂದ್ರಚೂಡ್ ಅವರು ಅಡಲ್ಟರಿ ಕಾನೂನಿನ 497 ವಿಧಿಯ ಸಿಂಧುತ್ವವನ್ನು ಎತ್ತಿ ಹಿಡಿದ್ದರು. ಇದಾದ 35 ವರ್ಷದ ಬಳಿಕ ಅವರ ಪುತ್ರ ಡಿ ವೈ ಚಂದ್ರಚೂಡ್ ಅವರು, ನಮ್ಮ ತೀರ್ಪುಗಳು ವರ್ತಮಾನಕ್ಕೆ ಹೆಚ್ಚು ಹೊಂದಾಣಿಕೆಯಾಗುವಂತೆ ನೋಡಿಕೊಳ್ಳಬೇಕು ಎಂದು ಹೇಳಿದ್ದರು. ಅಲ್ಲದೇ, ವಿವಾಹೇತರ ಸಂಬಂಧ ಅಪರಾಧಿಕರಣವನ್ನು ತೆಗೆದು ಹಾಕಿದ್ದರು. ಅದೇ ರೀತಿ, ಖಾಸಗಿ ಹಕ್ಕಿಗೆ ಸಂಬಂಧಿಸಿದಂತೆ ಸಿಜೆಐ ಯಶವಂತ್ ಚಂದ್ರಚೂಡ್ ಅವರು ವಿವಾದಿತ ಎಡಿಎಂ ಜಬಲ್ಪುರ್ ಪ್ರಕರಣದಲ್ಲಿ ನೀಡಿದ್ದ ತೀರ್ಪನ್ನು ಬದಲಿಸಿದ್ದರು.
ಡಿ ವೈ ಚಂದ್ರಚೂಡ್ ನೀಡಿದ ಪ್ರಮುಖ ತೀರ್ಪುಗಳು
| ಅಯೋಧ್ಯೆ ವಿವಾದ: ಅಯೋಧ್ಯೆ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ನ ಐವರು ನ್ಯಾಯಮೂರ್ತಿಗಳಿದ್ದ ಸಾಂವಿಧಾನಿಕ ಪೀಠವು 2019 ನವೆಂಬರ್ 9ರಂದು ಐತಿಹಾಸಿಕ ತೀರ್ಪು ಪ್ರಕಟಿಸಿತು. ವಿವಾದಿತ ಅಯೋಧ್ಯೆಯ ಜಾಗವು ಹಿಂದೂಗಳಿಗೆ ಸೇರಿದ್ದು, ಮುಸ್ಲಿಮರಿಗೆ ಪರ್ಯಾಯ ಭೂಮಿ ಒದಗಿಸುವಂತೆ ಆದೇಶ ಮಾಡಲಾಯಿತು. ಈ ಸಾಂವಿಧಾನಿಕ ಪೀಠದ ನೇತೃತ್ವವನ್ನು ಅಂದಿನ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ವಹಿಸಿದ್ದರು. ನ್ಯಾಯಮೂರ್ತಿಗಳಾದ ಡಿ ವೈ ಚಂದ್ರಚೂಡ್, ಎಸ್ ಅಬ್ದುಲ್ ನಜೀರ್, ಅಶೋಕ್ ಭೂಷಣ್ ಮತ್ತು ಎಸ್ ಎ ಬೋಬ್ಡೆ ಅವರು ಪೀಠದಲ್ಲಿದ್ದ ಇತರರು. ದಶಕಗಳಿಂದ ನಡೆದುಕೊಂಡಿದ್ದ ಬಂದಿದ್ದ ಪ್ರಕರಣಕ್ಕೆ ಈ ತೀರ್ಪು ಅಂತ್ಯ ಹಾಡಿತು.
| ಖಾಸಗಿ ಹಕ್ಕು: 2007 ಆಗಸ್ಟ್‌ನಲ್ಲಿ ಸುಪ್ರೀಂ ಕೋರ್ಟ್‌ನ 9 ನ್ಯಾಯಮೂರ್ತಿಗಳನ್ನು ಒಳಗೊಂಡಿದ್ದ ಪೀಠವು ಖಾಸಗಿ ಹಕ್ಕಿನ ಸಂಬಂಧ ಐತಿಹಾಸಿಕ ತೀರ್ಪು ಪ್ರಕಟಿಸಿತು. ಖಾಸಗಿ ಹಕ್ಕು ಕೂಡ ಮೂಲಭೂತ ಹಕ್ಕು ಎಂಬುದನ್ನು ಸಂವಿಧಾನ ಖಾತರಿಪಡಿಸುತ್ತದೆ ಎಂಬ ತೀರ್ಪನ್ನು ಬರೆದಿದ್ದೇ ನ್ಯಾ. ಡಿ ವೈ ಚಂದ್ರಚೂಡ್ ಅವರು. ಖಾಸಗಿ ಹಕ್ಕು ಮತ್ತು ಘನತೆಯ ಹಕ್ಕು ಬದುಕಿನ ಆಂತರಿಕ ಹಕ್ಕುಗಳಾಗಿವೆ ಎಂದು ತಮ್ಮ ತೀರ್ಪಿನಲ್ಲಿ ಅವರು ಅಭಿಪ್ರಾಯಪಟ್ಟಿದ್ದಾರೆ.
| ಗರ್ಭಪಾತ ಹಕ್ಕು: ಕಳೆದ ತಿಂಗಳು ಸುಪ್ರೀಂ ಕೋರ್ಟ್ ಗರ್ಭಪಾತಕ್ಕೆ ಸಂಬಂಧಿಸಿದಂತೆ ಮಹತ್ವದ ತೀರ್ಪು ನೀಡಿತು. ಅವಿವಾಹಿತ ಮತ್ತು ವಿವಾಹಿತ ಮಹಿಳೆಯರು ಸುರಕ್ಷಿತ ಮತ್ತು ಕಾನೂನುಬದ್ಧ ಗರ್ಭಪಾತದ ಹಕ್ಕನ್ನು ಹೊಂದಿದ್ದಾರೆಂದು ಸುಪ್ರೀಂ ಕೋರ್ಟ್ ತನ್ನ ತೀರ್ಪಿನಲ್ಲಿ ತಿಳಿಸಿತ್ತು. ಈ ತೀರ್ಪು ನೀಡಿದ ಡಿ ವೈ ಚಂದ್ರಚೂಡ ನೇತೃತ್ವದ ಪೀಠದಲ್ಲಿ ಎ ಎಸ್ ಬೋಪಣ್ಣ, ಬಿ ವಿ ನಾಗರತ್ನ ನ್ಯಾಯಮೂರ್ತಿಗಳಿದ್ದರು.
| ಶಬರಿಮಲೆ ದೇಗುಲಕ್ಕೆ ಮಹಿಳೆಯರಿಗೆ ಪ್ರವೇಶ: ಶಬರಿಮಲೆ ದೇಗುಲಕ್ಕೆ ಎಲ್ಲ ವಯೋಮಾನದವರ ಪ್ರವೇಶಕ್ಕೆ ಒಪ್ಪಿಗೆ ನೀಡಬೇಕೆಂದು ಸುಪ್ರೀಂ ಕೋರ್ಟ್ ಐತಿಹಾಸಿಕ ತೀರ್ಪು ನೀಡಿತ್ತು. ಈ ತೀರ್ಪು ಪ್ರಕಟಿಸಿದ ಸುಪ್ರೀಂ ಕೋರ್ಟ್‌ನ ಪೀಠದಲ್ಲೂ ನ್ಯಾ. ಡಿ ವೈ ಚಂದ್ರಚೂಡ್ ಅವರಿದ್ದರು. ಮಹಿಳೆಯರಿಗೆ ದೇಗುಲ ಪ್ರವೇಶ ನಿರಾಕರಿಸುವುದು ಸಾಂವಿಧಾನಿಕ ತತ್ವದ ವಿರುದ್ಧವಾಗಿದೆ ಎಂದು 9 ನ್ಯಾಯಮೂರ್ತಿಗಳಿದ್ದ ಪೀಠವು ಅಭಿಪ್ರಾಯಪಟ್ಟಿತ್ತು.
| ಕ್ರಿಯೇಟಿವ್ ಪ್ರೈವೇಟ್ ಲಿ. ವರ್ಸಸ್ ಪಶ್ಚಿಮ ಬಂಗಾಳ ಪ್ರಕರಣದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ, ರಿಪಬ್ಲಿಕ್ ಟಿವಿ ಪ್ರಧಾನ ಸಂಪಾದಕ ಅರ್ನಬ್ ಗೋಸ್ವಾಮಿ ಪ್ರಕರಣದಲ್ಲಿ ವೈಯಕ್ತಿಕ ಸ್ವಾತಂತ್ರ್ಯ, ರಕ್ಷಣಾ ಸಚಿವಾಲಯ ವರ್ಸಸ್ ಬಬಿತಾ ಪುನಿಯಾ ಪ್ರಕರಣದಲ್ಲಿ ಲಿಂಗ ಸಮಾನ ನ್ಯಾಯ ಹಾಗೂ ಕೆಲಸದ ಸ್ಥಳಗಳಲ್ಲಿ ಲೈಂಗಿಕ ದೌರ್ಜನ್ಯ, ಪರಿಸರ ರಕ್ಷಣೆ, ಕಾರ್ಮಿಕರ ಹಿತರಕ್ಷಣೆ ಸಂಬಂಧ ಪ್ರಮುಖ ತೀರ್ಪುಗಳನ್ನು ಪ್ರಕಟಿಸಿದ್ದಾರೆ. ಅದೇ ರೀತಿ, ಸಾಂವಿಧಾನಿಕ ಬಿಕ್ಕಟ್ಟು ಉಂಟಾದ ಸಂದರ್ಭದಲ್ಲೂ ಸಂವಿಧಾನವನ್ನು ಎತ್ತಿ ಹಿಡಿಯುವ ಕೆಲಸವನ್ನು ಮಾಡಿದ್ದಾರೆ. ನಾನಾ ವಿಷಯಗಳಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನೀಡಿದ ಪ್ರಮುಖ ತೀರ್ಪುಗಳಲ್ಲಿ ನ್ಯಾ. ಡಿ ವೈ ಚಂದ್ರಚೂಡ್ ಅವರ ನ್ಯಾಯಪರತೆ ಕೆಲಸ ಮಾಡಿದೆ.
ಸುಪ್ರೀಂ ಕೋರ್ಟ್‌ನ 50ನೇ ಮುಖ್ಯ ನ್ಯಾಯಮೂರ್ತಿಯಾಗಿ ನಿಯೋಜಿತವಾಗಿರುವ ಡಿ ವೈ ಚಂದ್ರಚೂಡ್ ಅವರ ನ್ಯಾಯಪರತೆಯಿಂದಾಗಿ ಈಗಾಗಲೇ ಹೆಸರುವಾಸಿಯಾಗಿದ್ದಾರೆ. ಹಾಗಾಗಿ, ಅವರ ಮೇಲೆ ನಿರೀಕ್ಷೆಗಳ ಬೆಟ್ಟ ದೊಡ್ಡದಿದೆ. ಮುಖ್ಯ ನ್ಯಾಯಮೂರ್ತಿಯಾಗಿ ಅವರ ಮುಂದೆ ಸಾಕಷ್ಟು ಸವಾಲಗಳೂ ಇವೆ. ಆದರೆ, ಈವರೆಗಿನ ಅವರ ಕಾರ್ಯವೈಖರಿಯನ್ನು ಪರಿಗಣಿಸಿದರೆ, ಎಲ್ಲ ಸವಾಲು, ಸಂಕಟಗಳನ್ನು ಅವರು ಮೆಟ್ಟಿ ನಿಲ್ಲುತ್ತಾರೆಂಬುದರಲ್ಲಿ ಅನುಮಾನಗಳಿಲ್ಲ.
ಇದನ್ನೂ ಓದಿ | Legal Abortion | ವಿವಾಹಿತರಿಗೂ ಸುರಕ್ಷಿತ ಗರ್ಭಪಾತಕ್ಕೆ ಅವಕಾಶ: ಸುಪ್ರೀಂ ಕೋರ್ಟ್ ಐತಿಹಾಸಿಕ ಆದೇಶ