Site icon Vistara News

ದಶಮುಖ ಅಂಕಣ: ಕೆಡುಕು ಸುಟ್ಟ ಬೂದಿಯಿಂದ ಒಳಿತು ಎದ್ದು ಬರಲಿ

ravana burning

ಈ ಅಂಕಣವನ್ನು ಇಲ್ಲಿ ಆಲಿಸಿ:

https://vistaranews.com/wp-content/uploads/2023/10/WhatsApp-Audio-2023-10-24-at-10.41.16-AM.mp3

ಎಲ್ಲೆಡೆ ನವರಾತ್ರಿಯ ಘಮ, ಬೆಳಕು. ವಿಜಯದಶಮಿಯಂದು ಬಹಳಷ್ಟು ಕಡೆಗಳಲ್ಲಿ ರಾವಣ, ಕುಂಭಕರ್ಣರನ್ನು ಸುಟ್ಟು ಬೂದಿ ಮಾಡುವ ಪದ್ಧತಿಯಿದೆ. ರಾವಣನನ್ನು ಸುಡುವುದು, ಮಹಿಷನ ಸಂಹಾರ ಮುಂತಾದ ಕಥಾಕಥಿತ ಕಾರಣಗಳು ಏನೇ ಇದ್ದರೂ, ಕೆಡುಕು ಬೂದಿಯಾಗಿ ಒಳಿತು ಹೆಚ್ಚಲಿ ಎನ್ನುವುದೇ ಇವುಗಳ ಹಿಂದಿನ ಆಶಯ. ಇದನ್ನೇ ಮಥಿಸುತ್ತಿದ್ದಾಗ ಮೇಲೆ ಬಂದಿದ್ದು ʻಬೂದಿʼ ಎಂಬ ಯಾರಿಗೂ ಬೇಡದ ವಸ್ತು! ಅದರ ಬಗ್ಗೆಯೇ ತಡಕಾಡುತ್ತಿದ್ದಾಗ ಕಣ್ಣಿಗೆ ಬಿದ್ದಿದ್ದು ಜಿ.ಎಸ್.‌ ಶಿವರುದ್ರಪ್ಪನವರ ʻಹೌದೇನೇ ಉಮಾ ಹೌದೇನೇʼ ಕವನ. “… ಮಸಣದ ಬೂದಿಯ ಮೈಗೆ ಬಳಿದು ಶಿವ ಎಲ್ಲೆಲ್ಲೊ ತಿರುಗುವನಂತೆ… ನೀನು ಕೂಡ ಬಂಗಾರದ ಮೈಯಿಗೆ ಆ ಬೂದಿಯನೇ ಬಳಿಯುವೆಯಂತೆ” ಅಂತೆಲ್ಲ ಪಾರ್ವತಿಯ ತಾಯಿ ತನ್ನ ಮಗಳು ಉಮೆಯ ಬಳಿ ಆತಂಕ ತೋಡಿಕೊಳ್ಳುತ್ತಾಳೆ.

ಈಶ್ವರನ ಕುರಿತಾಗಿ ʻಬೂದಿಬಡುಕʼ ಎಂಬ ಮಾತು ಸಾಮಾನ್ಯ. ಆದರೆ ಭೂತನಾಥ ಬಳಿದುಕೊಳ್ಳುವುದು ಬೂದಿಯಲ್ಲ, ಅದು ಭಕ್ತರ ಚಿತಾಭಸ್ಮ ಎನ್ನುತ್ತಾರೆ ಆತನನ್ನು ನಂಬಿದವರು. ಅರ್ಧನಾರೀಶ್ವರನ ಭಾಗವಾದ ಉಮೆಯೂ ಆ ಬೂದಿಯನ್ನೇ ಬಳಿದುಕೊಳ್ಳಬೇಕೆ ಎಂದು ಸಂಕಟದಿಂದ ಆಕೆಯ ತಾಯಿ ಕೇಳಿದ್ದು ಕವಿಕಲ್ಪನೆಯಾದರೂ, ಬೂದಿಯ ಬಗ್ಗೆ ಸದಭಿಪ್ರಾಯವಿಲ್ಲ ಎಂಬುದಂತೂ ಸುಳ್ಳಲ್ಲವಲ್ಲ. ಹಾಗಾದರೆ ಸುಟ್ಟ ಮೇಲೆ ಉಳಿಯುವ ಬೂದಿಗೆ ಅಸ್ತಿತ್ವವಿಲ್ಲವೇ? ಭೌತಿಕ ಅಸ್ತಿತ್ವ ಅಳಿದ ಮೇಲೆ ಉಳಿಯುವ ಚಿತಾಭಸ್ಮವನ್ನು ಅಷ್ಟೊಂದು ಅರ್ತಿಯಿಂದ ನಂನಮ್ಮ ನಂಬಿಕೆಯ ಸ್ಥಳಗಳಲ್ಲಿ ವಿಸರ್ಜಿಸುತ್ತೇವಲ್ಲ… ಇದು ಏನನ್ನು ಸೂಚಿಸುತ್ತದೆ? ಬೂದಿಯೆಂಬುದು ನಮಗೇಕೆ ಬೇಡ? ಅದರ ಬಗ್ಗೆ ತಾತ್ಸಾರ ಮಾಡುವುದೇಕೆ?

ಬೂದಿ ಎಂಬುದರ ವೈಜ್ಞಾನಿಕ ವ್ಯಾಖ್ಯೆಯನ್ನು ನೋಡಿದರೆ ಬೆಂಕಿಯು ಏನನ್ನಾದರೂ ದಹಿಸಿದ ನಂತರದ ಘನ ಶೇಷ. ಕಟ್ಟಿಗೆಯಂಥ ವಸ್ತುಗಳ ಅಪೂರ್ಣ ದಹನದ ಅಂತಿಮ ಉತ್ಪನ್ನವಾಗಿ ಉಳಿಯುವ ಬೂದಿ ಖನಿಜಗಳಿಂದ ಸಾಂದ್ರವಾಗಿರುತ್ತದೆ… ಅಯ್ಯೋ! ಇದೇನು ವಿಜ್ಞಾನದ ತರಗತಿ ಪ್ರಾರಂಭವಾಯಿತಲ್ಲ ಎಂದು ಬೇಸರಿಸಬೇಡಿ. ಈ ವಿವರಣೆಗಳನ್ನೆಲ್ಲಾ ಎತ್ತಿ ಅತ್ಲಾಗೆ ಹಾಕಿದರೆ, ಬೂದಿಯೆಂಬುದು ನಂಬಿದವರಿಗೆ ಭಸ್ಮವಾಗಿ, ವಿಭೂತಿಯಾಗಿ ಹಣೆಯೇರುತ್ತದೆ; ಬೇಕಾದಾಗ ಪಾತ್ರೆ ಉಜ್ಜುವುದಕ್ಕೆ ಸಾಬೂನಿನ ಬದಲು ಬಳಕೆಗೆ ಬರುತ್ತದೆ; ಗಿಡಗಳಿಗೆ ಕೀಟ ಮತ್ತು ರೋಗಬಾಧೆ ದೂರ ಮಾಡುವ ಔಷಧಿಯಾಗಿ ಕಾಪಾಡುತ್ತದೆ; ಹಳೆಯ ಕಾಲದಲ್ಲಿ ಹಲ್ಲುಜ್ಜುವ ಪೇಸ್ಟ್‌ನಂತೆ ಉಪಯೋಗವಾಗುತ್ತಿತ್ತು. ಕೆಲವು ವಸ್ತುಗಳ ಬೂದಿಯನ್ನು ಆಯುರ್ವೇದದಲ್ಲಿ ಔಷಧಿಯಾಗಿ ಬಳಕೆ ಮಾಡಲಾಗುತ್ತದೆ- ನೋಡಿ! ಇಷ್ಟೊಂದು ಉಪಯುಕ್ತವಾದ ಬೂದಿಯನ್ನು ನಿಕೃಷ್ಟ ಮಾಡುವುದೆಂದರೆ!

ಬೂದಿಯನ್ನು ನಾವೆಲ್ಲ ಬಾಲ್ಯದಿಂದಲೂ ಬಲ್ಲವರು. ಮಕ್ಕಳಿದ್ದಾಗ ಎಷ್ಟು ಸಾರಿ ಊದುಬತ್ತಿಯ ಬಿಸಿಬೂದಿಯನ್ನು ಮುಟ್ಟಲುಹೋಗಿ ಕೈಸುಟ್ಟುಕೊಂಡಿಲ್ಲ ನಾವು? ಅದಕ್ಕಾಗಿಯೇ ʻಬೂದಿ ಮುಚ್ಚಿದ ಕೆಂಡʼ ಎಂಬಂಥ ಪ್ರಯೋಗಗಳು ಬಳಕೆಗೆ ಬಂದಿರಬಹುದು. ಒಳಗಿಂದ ನಿಗಿನಿಗಿ ಎನ್ನುವ ಕೆಂಡವನ್ನು ಆವರಿಸಿರುವ ತಂಪಾಗಿರುವಂತೆ ಕಾಣುವ ಬೂದಿಯನ್ನು ನೋಡಿ ಮೋಸ ಹೋಗುವ ಪರಿ ನಮಗೆ ಹೊಸದೇನಲ್ಲ. ಯಾವುದೋ ಊರಲ್ಲಿ ಗಲಾಟೆಯಾಗಿದೆ, ಒಂದಿಷ್ಟು ಗಲಭೆಯ ಬಳಿಕ ಪರಿಸ್ಥಿತಿ ಶಾಂತವಾದಂತೆ ಕಂಡರೂ ಉದ್ವಿಗ್ನವಾಗಿದೆ ಎಂದರೆ, ʻಬೂದಿ ಮುಚ್ಚಿದ ಕೆಂಡದಂತೆʼ ಕಾಣುತ್ತಿದೆ ಎಂಬ ವಿವರಣೆ ಮಾಧ್ಯಮಗಳಲ್ಲಿ ಸಾಮಾನ್ಯ. ಯಾರಿಗೋ ಯಾರೋ ಗೊತ್ತೇ ಆಗದಂತೆ ಮೋಸ ಮಾಡಿದರು ಎಂದಾದರೆ- ʻಮಂಕುಬೂದಿʼ ಎರಚಿದರು ಎಂದು ಬಣ್ಣಿಸುತ್ತೇವೆ.

ಬಾಲ್ಯಕ್ಕೆ ಮಾತ್ರವಲ್ಲ, ಬದುಕಿನ ಇನ್ನೊಂದು ಕೊನೆಗೂ ಬೂದಿಗೂ ಬಿಡದಂಥ ನಂಟು. ದೇಹ ಪಂಚಭೂತಗಳಲ್ಲಿ ಲೀನವಾದ ಮೇಲೆ ಉಳಿಯುವುದು ಬೂದಿಯಲ್ಲ, ಅದು ಚಿತಾಭಸ್ಮ. ಅದನ್ನು ಅತ್ಯಂತ ಗೌರವದಿಂದ ನಮ್ಮ ನಂಬಿಕೆಯ ಸ್ಥಳಗಳಲ್ಲಿ ವಿಸರ್ಜಿಸುತ್ತೇವೆ. ವಿದೇಶಗಳಲ್ಲಿರುವವರಿಗಾಗಿ ಅಸ್ತಿ ವಿಸರ್ಜನೆಗೆ ವಿಶೇಷ ವೆಬ್‌ಸೈಟ್‌ಗಳು, ಆಪ್‌ಗಳು ಲಭ್ಯವಿವೆ. ವ್ಯಕ್ತಿಯೊಬ್ಬ ಬದುಕಿದ್ದಾಗ ಹೇಗೇ ಇದ್ದರೂ ಬದುಕು ಮುಗಿಸಿದ ಮೇಲೆ ಉಳಿಯುವುದು ಚಿತಾಭಸ್ಮವಾಗಿ… ಅದೂ ಒಂದು ಕರಂಡಕದಲ್ಲಿ. ಮಾತ್ರವಲ್ಲ, ಬದುಕಿದ್ದಾಗ ಎಂಥಾ ಗತಿಯಲ್ಲಿದ್ದರು, ಅಳಿದ ಮೇಲಿನ ಸದ್ಗತಿಗಾಗಿ ಇನ್ನೊಬ್ಬರನ್ನು ಆಶ್ರಯಿಸಬೇಕು ಎನ್ನುವುದನ್ನು ಬದುಕಿನ ವ್ಯಂಗ್ಯವೇ ತಾನೆ. ಅದಕ್ಕೇ ಇರಬೇಕು ಕವಿ ದಿನಕರ ದೇಸಾಯಿಯವರು ಹೇಳಿದ್ದು- “ಎನ್ನ ದೇಹದ ಬೂದಿ ಗಾಳಿಯಲಿ ತೇಲಿ ಬಿಡಿ/ ಹೋಗಿ ಬೀಳಲಿ ಬತ್ತ ಬೆಳೆಯುವಲ್ಲಿ/ ಬೂದಿ ಗೊಬ್ಬರದಿಂದ ತೆನೆಯೊಂದು ನೆಗೆದು ಬರೆ/ ಧನ್ಯವಾಯಿತು ಹುಟ್ಟು ಸಾವಿನಲ್ಲಿ”.

shravana masa

ಬೂದಿಯ ಹಿಂದು-ಮುಂದಿನ ಬಹಳಷ್ಟು ಪೌರಾಣಿಕ ಕಥೆಗಳು ನೆನಪಿಗೆ ಬರುತ್ತಿವೆ. ಭಸ್ಮಾಸುರನಿಗೆ ಉರಿಗೈ ವರವನ್ನು ಕೊಟ್ಟು, ಕಡೆಗೆ ಅವನಿಂದ ಈಶ್ವರ ತಾನೇ ಆಪತ್ತಿಗೆ ಈಡಾಗಿದ್ದು, ಇದರ ಪರಿಹಾರಕ್ಕಾಗಿ ಮೋಹಿನಿಯ ರೂಪದಲ್ಲಿ ವಿಷ್ಣು ಬಂದಿದ್ದು, ತಾ ಪಡೆದ ವರಕ್ಕೆ ಆ ಅಸುರ ತಾನೇ ಭಸ್ಮವಾದ ಕಥೆಯನ್ನು ನಾವೆಲ್ಲ ಕೇಳಿಯೇ ಇದ್ದೇವೆ. ಇನ್ನೊಂದು ಕಥೆ ಮನ್ಮಥನದ್ದು. ತಾರಕಾಸುರನ ಸಂಹಾರಕ್ಕಾಗಿ ಶಿವ-ಪಾರ್ವತಿಯರ ಪುತ್ರನೇ ಬರಬೇಕೆನ್ನುವ ಕಾಲಕ್ಕೆ, ಪಾರ್ವತಿಯಲ್ಲಿ ವಿರಾಗಿ ಈಶ್ವರ ಆಸಕ್ತನಾಗುವಂತೆ ಬಾಣ ಪ್ರಯೋಗಿಸಿದನಂತೆ ಮನ್ಮಥ. ಇದರಿಂದ ತಫೋಭಂಗವಾದ ಶಿವ ಕೆರಳಿ, ತನ್ನ ಮೂರನೇ ಕಣ್ಣು ತೆರೆದು ಮನ್ಮಥನನ್ನು ಭಸ್ಮ ಮಾಡಿದ. ಆದರೆ ಲೋಕದಲ್ಲಿ ಕಾಮನಿಗೆ ಕೆಲಸ ಇದೆ ಎನ್ನುವ ಕಾರಣಕ್ಕಾಗಿ ಮನುಮಥನನ್ನು ಆ ಭಗವಂತ ಅನಂಗನನ್ನಾಗಿಸಿದ. ಹೀಗೆ ಕಾಮನೆಂಬಾತ ಒಮ್ಮೆ ಬೂದಿಯಾದರೂ ಎಲ್ಲರ ಮನದಲ್ಲಿ ಹುಟ್ಟುವ ಮೂಲಕ ಮನೋಜ, ಮನಸಿಜ ಎನಿಸಿಕೊಂಡ.

ಇನ್ನು ಗಂಗೆಯನ್ನು ಭಗೀರಥ ಭೂಮಿಗೆ ತಂದ ಕಥೆಯಲ್ಲೂ ಬೂದಿಗೊಂದು ಮಹತ್ವದ ಪಾತ್ರವಿದೆ. ಶಾಶ್ವತ ಪದವೆಂಬುದು ಎಲ್ಲರ ಮಹತ್ವಾಕಾಂಕ್ಷೆಯ ಸ್ಥಾನ. ಇಂಥದ್ದೇ ನಿರೀಕ್ಷೆಯಲ್ಲಿ ಇಕ್ಷ್ವಾಕು ವಂಶದ ಸಗರ ಮಹಾರಾಜ ಸಾಲು ಸಾಲು ಅಶ್ವಮೇಧಗಳನ್ನು ಮಾಡುತ್ತಿದ್ದಾಗ, ಆತನಿಂದ ತನ್ನ ಸ್ಥಾನಕ್ಕೆ ಸಂಚಕಾರ ಬರಬಹುದೆಂಬ ಭೀತಿಯಿಂದ ದೇವೇಂದ್ರ ಯಜ್ಞಾಶ್ವವನ್ನು ಗುಹೆಯೊಂದರಲ್ಲಿ ಬಚ್ಚಿಡುತ್ತಾನೆ. ಸಗರನಿಗೆ ಇಬ್ಬರು ಪತ್ನಿಯರು. ಒಬ್ಬಾಕೆಗೆ ೬೦ ಸಾವಿರ ಮಕ್ಕಳು. ಒನ್ನೊಬ್ಬಾಕೆಗೆ ಅಸಮಂಜಸನೆಂಬ ಒಬ್ಬನೇ ಮಗ. ಯಜ್ಞದ ಕುದುರೆಗಾಗಿ ಭೂಮಿಯನ್ನೆಲ್ಲಾ ಜಾಲಾಡುವ ಸಗರನ ಮಕ್ಕಳು, ಗುಹೆಯೊಂದರಲ್ಲಿ ಈ ಕುದರೆಯನ್ನು ಕಾಣುತ್ತಾರೆ. ಅದು ಕಪಿಲನೆಂಬ ಋಷಿಯ ಗುಹೆ. ಆತನೇ ಕುದುರೆಯನ್ನು ತಂದಿರಬೇಕೆಂದು ತಿಳಿದು, ಋಷಿಯ ತಪಸ್ಸಿಗೆ ಭಂಗ ತರುತ್ತಾರೆ. ಆಗ ಕೋಪಗೊಂಡ ಮುನಿ, ಕಣ್ತೆರೆದು ೬೦ ಸಾವಿರ ಜನರನ್ನು ಭಸ್ಮ ಮಾಡಿಬಿಡುತ್ತಾನೆ. ಅಲ್ಲೊಂದು ಬೂದಿ ಗುಡ್ಡೆಯೇ ಸೃಷ್ಟಿಯಾಗುತ್ತದೆ. ಉಳಿದೊಬ್ಬ ಮಗ ಅಸಮಂಜಸನಿಂದ ಆ ವಂಶ ಮುಂದುವರಿದು, ಭಗೀರಥ ಜನಿಸುತ್ತಾನೆ. ತನ್ನ ಪೂರ್ವೀಕರಿಗೆ ಸದ್ಗತಿ ದೊರಕಿಸಲು, ಮುಂದೆ ಆತನೇ ಅಘನಾಶಿನಿ ಗಂಗೆಯನ್ನು ಧರೆಗಿಳಿಸುತ್ತಾನೆ ಎನ್ನುತ್ತದೆ ಕಥೆ. ಅಂತೂ ಬೂದಿಯ ಮೇಲೆ ಹರಿಯುವ ಕಾರ್ಯಕ್ಕೇ ಆದರೂ ಗಂಗಾವರಣ ಆಯಿತಲ್ಲ – ಬೂದಿ ಯಾವುದಕ್ಕೆ ಕಡಿಮೆ!

ಕ್ರಿಕೆಟ್‌ ಪ್ರೇಮಿಗಳಿಗೆ ಬೂದಿಯ ಬಗ್ಗೆ ಸ್ವಲ್ಪ ಹೆಚ್ಚೇ ಪ್ರೀತಿ! ಎಲ್ಲಿಂದೆಲ್ಲಿಯ ಸಂಬಂಧ ಅಂದುಕೊಂಡರೆ- ಹೇಳುತ್ತಿರುವುದು ಆಷಸ್‌ ಕ್ರಿಕೆಟ್ ಸರಣಿಯ ಬಗ್ಗೆ. ಇಂಗ್ಲೆಂಡ್‌ ಮತ್ತು ಆಸ್ಟ್ರೇಲಿಯಾ ನಡುವಿನ ಈ ಪ್ರತಿಷ್ಠಿತ ಸರಣಿಯನ್ನು ʻಬೂದಿಜಗಳʼ ಎಂದರೆ ಪ್ರಸಂಗವೇ ಅಧಿಕ ಆದೀತೇನೊ! ಗ್ರೀಕ್‌ ಪುರಾಣಗಳಲ್ಲಿ ಫೀನಿಕ್ಸ್‌ ಎಂಬ ಹಕ್ಕಿಯ ಪ್ರಸ್ತಾಪವಿದೆ. ತನ್ನ ಬೂದಿಯಿಂದಲೇ ಮರುಹುಟ್ಟು ಪಡೆಯುವ ಈ ಹಕ್ಕಿಯನ್ನು ನಮ್ಮ ರಾಜಕಾರಣಿಗಳು ಚುನಾವಣೆಯ ಫಲಿತಾಂಶದ ನಂತರ ಪದೇಪದೆ ನೆನಪಿಸಿಕೊಳ್ಳುತ್ತಾರೆ. ʻಫೀನಿಕ್ಸ್‌ನಂತೆ ಮತ್ತೆ ಎದ್ದು ಬರುವʼ ಪ್ರತಿಜ್ಞೆ ಮಾಡುತ್ತಾರೆ. ತನ್ನ ವೈಫಲ್ಯ ಮೆಟ್ಟಿ ಮೇಲೆದ್ದು ಬರುವ ಅರ್ಥದಲ್ಲಿ ಇದು ಬಳಕೆಯಾದರೂ, ಫೀನಿಕ್ಸ್‌ಗೆ ಗೊತ್ತಾದರೆ ನೊಂದುಕೊಳ್ಳುತ್ತಿತ್ತೇನೊ.

ಇದನ್ನೂ ಓದಿ: ದಶಮುಖ ಅಂಕಣ: ಕೋಶ ಓದಲಾಗದಿದ್ದರೆ ದೇಶವನ್ನಾದರೂ ಸುತ್ತಿ!

ಭಾಷೆಯ ಜಾಯಮಾನದಲ್ಲೂ ಬೂದಿಯ ಬಗ್ಗೆ ಬಹಳಷ್ಟು ವಿವರಗಳನ್ನು ಕಾಣಬಹುದು. ಕಷ್ಟಪಟ್ಟು ಮಾಡಿದ್ದೆಲ್ಲ ಮಣ್ಣುಪಾಲಾಯ್ತು ಎಂಬಂತೆ ʻಎರ್ಕೊಂಡ್‌ ತಲೆಗೆ ಬೂದಿ ಸುರ್ಕೊಂಡಂಗೆʼ ಎನ್ನುತ್ತದೊಂದು ಗಾದೆ. ಬೂದಿಹಾಳ್‌ ಎನ್ನುವ ಅಡ್ಡನಾಮ, ಬೂದಿ ಬಸಪ್ಪ ಎನ್ನುವ ಕೆಳದಿ ಸಂಸ್ಥಾನದ ಸ್ವಾತಂತ್ರ್ಯ ವೀರ, ರಾಯಚೂರಿನ ಪ್ರಸಿದ್ಧ ಬೂದಿ ಬಸವೇಶ್ವರ ಜಾತ್ರೆ, ರುಚಿಯಾದ ಹಲ್ವಾ ಮಾಡಲು ಬೇಕಾಗುವ ಬೂದಿಕುಂಬಳ ಕಾಯಿ… ನೋಡಿ ಬೂದಿಯೊಂದಿಗೆ ನಂಟಿರುವ ಎಷ್ಟೊಂದು ಸಂಗತಿಗಳಿವೆ ನಮ್ಮ ಸುತ್ತಮುತ್ತ.

ಕವನಗಳಲ್ಲೂ ಬೂದಿ ಕಾಣಿಸಿಕೊಂಡಿದೆ. ಶಿವರುದ್ರಪ್ಪನವರಿಗೆ ಮಾತ್ರವಲ್ಲ, ಬಿ. ಆರ್‌. ಲಕ್ಷ್ಮಣರಾಯರಿಗೂ ಬೂದಿ ಪ್ರಿಯವಲ್ಲ. “ಆಗು ಗೆಳೆಯ ಆಗು ನೀನು ಭರವಸೆಯ ಪ್ರವಾದಿ/ ಹತಾಶೆಯಲ್ಲೇನಿದೆ? ಬರೀ ಶೂನ್ಯ, ಬರಿ ಬೂದಿ” ಎನ್ನುವುದು ಅವರ ಜನಪ್ರಿಯ ಭಾವಗೀತೆಗಳಲ್ಲಿ ಒಂದು. ಈಗಿನ ಕಾಲದಲ್ಲಷ್ಟೇ ಅಲ್ಲ, ಪುರಂದರದಾಸರೂ ಬೂದಿಯ ಬಗ್ಗೆ ಪ್ರಸ್ತಾಪಿಸಿದ್ದಾರೆ. “ಹಿರೇ ಬೀದಿಯಲಿ ಓಡುವಿರಿ/ ಕರೇ ಬೂದಿಯಲಿ ಹೊರಳುವಿರಿ” ಎಂದು ಡೊಂಕು ಬಾಲದ ನಾಯಕರ ಸ್ವಭಾವವನ್ನು ವರ್ಣಿಸುತ್ತಾ ಹೇಳುತ್ತಾರೆ.

ಸುಟ್ಟ ಮೇಲೆ ಏನೂ ಉಳಿಯದು ಎನ್ನುವುದು ಲೋಕ ರೂಢಿ. ಆದರೆ ಸುಟ್ಟ ಮೇಲಿನ ಶೇಷವೂ ನಗಣ್ಯವಲ್ಲ ಎನ್ನುವುದನ್ನು ಬೂದಿ ತೋರಿಸಿಕೊಟ್ಟಿದೆ. ನವರಾತ್ರಿಯ ರಾವಣ ದಹನದ ನೆವದಲ್ಲಿ ಬೂದಿಯ ಮೀಮಾಂಸೆಯನ್ನೇ ಮಾಡಿದ್ದಾಯ್ತು. ಕೆಡುಕೆಲ್ಲವನ್ನು ಸುಟ್ಟ ಬೂದಿಯಿಂದ ಒಳಿತೇ ಎದ್ದು ಬರಲಿ. ದಸರೆಯ ಶುಭಹಾರೈಕೆಗಳು.

ಇದನ್ನೂ ಓದಿ: Dashamukha Column: ದಶಮುಖ ಅಂಕಣ: ಅಗಲುವಿಕೆಯೆಂಬ ಅಳು-ನಗುವಿನ ರಸಪಾಕ

Exit mobile version