ಈ ಅಂಕಣವನ್ನು ಇಲ್ಲಿ ಕೇಳಿ:
ಪ್ರಕೃತಿಯ ವರ್ಣನೆಯನ್ನು ಮಾಡುವಂತೆ ಯಾರನ್ನಾದರೂ ಕೇಳಿ ನೋಡಿ. ಹಸಿರು ಕಾನನ, ಬೆಟ್ಟ-ಗುಡ್ಡಗಳು, ಝುಳುಝುಳು ಹರಿಯುವ ನದಿ-ತೊರೆ-ಜಲಪಾತಗಳು, ಹಕ್ಕಿ ಹಾರುತ್ತಿರುವ ಹಸಿರು ಹೊಲ-ಗದ್ದೆಗಳು, ನಲಿಯುತ್ತಿರುವ ಹೂ-ಚಿಗುರುಗಳು, ಝೇಂಕರಿಸುತ್ತಿರುವ ದುಂಬಿಗಳು- ಹೀಗೆ ನಾನಾ ರೀತಿಯಲ್ಲಿ ವರ್ಣನೆಗಳು ಬರಬಹುದು. ಒಮ್ಮೆ ಯೋಚಿಸಿ- ಎಲ್ಲೆಡೆ ಒಣಗಿ ನಿಂತ ಗಿಡ-ಬಳ್ಳಿಗಳು, ಎಲೆ ಉದುರಿಸಿ ಬೋಳಾದ ಮರ-ಮಟ್ಟುಗಳು, ಹೂ ಚಿಗುರುಗಳು ದೂರದ ಮಾತಾದ್ದರಿಂದ ವಿಳಾಸವೇ ಇಲ್ಲದ ದುಂಬಿಗಳು, ಹೆಪ್ಪುಗಟ್ಟಿದಂತೆ ಕೊರೆಯುವ ನದಿ-ತೊರೆಗಳು- ಅಂತೂ ಸದಾ ಚಲನಶೀಲವಾಗಿರುವ ಪ್ರಕೃತಿಯಲ್ಲಿ ನೀರವ ಮೌನ. ಥೋ! ಯಾವುದೋ ರುದ್ರನಾಟಕ ನೋಡಿದಂತಾಯ್ತು ಎಂದುಕೊಂಡರೆ, ಚಳಿಗಾಲಕ್ಕೆ ಮುನ್ನುಡಿ ಬರೆಯಲೆಂದು ಬಾಗಿಲು ತಟ್ಟುತ್ತಿರುವ ಹೇಮಂತ ಋತುವಿನ ವರ್ಣನೆಯಿದು.
ಹೇಮಂತ ಬಂದ ಹಿಮ ತಂದ ಎಂಬ ಮಾತಿನಂತೆ ಚಳಿಗಾಲ ಆರಂಭವಾಗುವ ಮಾರ್ಗಶಿರ ಮತ್ತು ಪುಷ್ಯ ಮಾಸಗಳಿವು. ಬೆಳಗೆದ್ದು ಹೊರಗೆ ದಿಟ್ಟಿಸಿದರೆ, ಚಳಿನಡುಕ ತಡೆಯಲಾರದೆ ಪ್ರಕೃತಿ ಸುರಿಸುತ್ತಿರುವ ಕಣ್ಣೀರೋ ಎಂಬಂತೆ ಭ್ರಮೆ ಹುಟ್ಟಿಸುವ ಇಬ್ಬನಿಯ ಸೋನೆ. ಎಲ್ಲೆಡೆ ಆವರಿಸುವ ದಟ್ಟ ಕಾವಳ, ಅದರಾಚೆಗೆ ಇಣುಕುವ, ಆಡುವ, ಓಡುವ, ಕೊನೆಗಂತೂ ಮೂಡುವ ಬೆಳಕು. ಇಷ್ಟು ತಡವಾಗಿ ಬೆಳಕು ಮೂಡಿದರೂ, ಆ ಕ್ಷಣ ನಮಗಾದರೂ ಹಾಸಿಗೆ ಬಿಟ್ಟೇಳಲು ಸಾಧ್ಯವೇ? ಎಲ್ಲೆಲ್ಲೋ ಇದ್ದ ಸ್ವೆಟರು, ಟೋಪಿಗಳೆಲ್ಲ ಹೊರಗೆ ಬರಬೇಕು. ಬೇಕೋಬೇಡವೋ ಎಂಬಂತೆ ತಣ್ಣನೆಯ ನೆಲದ ಮೇಲೆ ಹೆಜ್ಜೆ ಊರಿಯೂ ಊರದಂತೆ ನಡೆಯಬೇಕು. ಒಡೆದ ತುಟಿಗಳಿಂದ ʻಉಫ್ʼ ಎನ್ನುತ್ತಾ ಬಿಸಿಯಾದ ನೀರೋ ಕಾಫಿಯೋ ಕಷಾಯಗಳೋ ನಮ್ಮ ಪಾಲಿಗೆ ಚೈತನ್ಯದಾಯಿನಿಯಾಗಬೇಕು. ಇಷ್ಟಾದ ಮೇಲೆ ದಿನ ಪ್ರಾರಂಭ.
ಇಂಥದ್ದೇ ದಿನಗಳಲ್ಲಿ ಮಲೆನಾಡಿನತ್ತ ರಾತ್ರಿ ಬಸ್ಸಿನಲ್ಲಿ ಪ್ರಯಾಣ ಮಾಡುವ ದಿನಗಳಿದ್ದವು. ಆಗೆಲ್ಲಾ ಈಗಿನಂತೆ ಸುವ್ಯವಸ್ಥಿತ ಬಸ್ಸುಗಳೇ ಇರಲಿಲ್ಲ, ಬಸ್ಸೆಂದರೆ ಕೆಂಪು ಬಸ್ಸು ಮಾತ್ರ. ನರಕದಲ್ಲಿ ಮೂಳೆ ಕೊರೆಯುವ ಅನುಭವ ಹೇಗಿರಬಹುದು ಎಂಬುದನ್ನು ರಾತ್ರಿಯ ಆ ಬಸ್ಸಿನ ಚಳಿ ನಮಗೆ ಪ್ರಾತ್ಯಕ್ಷಿಕೆ ನೀಡುತ್ತಿತ್ತು. ಎಷ್ಟೇ ಸ್ವೆಟರು, ಶಾಲು, ಟೋಪಿ ಎಂದು ಬಿಗಿದುಕೊಂಡರೂ ನಾಭಿಯಿಂದ ಮೇಲೇಳುತ್ತಿದ್ದ ಚಳಿಯ ನಡುಕವನ್ನು ನಿಯಂತ್ರಿಸುವುದು ಅಸಾಧ್ಯವಾಗುತ್ತಿತ್ತು. ಈ ಹಾಳು ಚಳಿಗಾಲದಲ್ಲಿ ಯಾಕಾದರೂ ಪ್ರಯಾಣ ಮಾಡಬೇಕೋ ಎಂದೆಲ್ಲಾ ಗೊಣಗಿಕೊಂಡು ಹಲ್ಲು ಕಚ್ಚಿಕೊಂಡು ರಾತ್ರಿ ಕಳೆಯಬೇಕಿತ್ತು. ಆದರೆ ರಾತ್ರಿಡೀ ಚಳಿಯಲ್ಲಿ ಹೆಪ್ಪುಗಟ್ಟಿದ್ದ ಕೋಪವನ್ನೆಲ್ಲಾ ಕರಗಿಸಿ ಇಬ್ಬನಿಯಂತೆ ಹರಿಸುತ್ತಿದ್ದುದು ಕಿಟಕಿಯಾಚೆ ಕಾಣುತ್ತಿದ್ದ ಮುಂಬೆಳಗು.
ಮಂಜಿನ ಗರ್ಭದಿಂದ ಹೊರಬರಲು ಒದ್ದಾಡುತ್ತಾ, ದಿನ ಹುಟ್ಟುವುದು ಎಂದರೆ ಮಗು ಹುಟ್ಟಿದಷ್ಟೇ ಕಷ್ಟದ್ದು ಎಂಬ ಭ್ರಮೆ ಬರಿಸುತ್ತಿದ್ದ ಸೂರ್ಯ; ನೀರವ ಎನಿಸಿ, ಹೆಪ್ಪುಗಟ್ಟಿಸುವ ಋತುವಿನಲ್ಲೂ ಮೈಕೊಡವಿ ಏಳುವ ಹಕ್ಕಿಪಕ್ಷಿಗಳು; ರಾತ್ರಿ ಕಷ್ಟಪಟ್ಟು ಜೇಡ ಕಟ್ಟಿದ್ದ ಬಲೆಗಳ ಮೇಲೆಲ್ಲಾ ಬಿದ್ದ ಇಬ್ಬನಿಯಿಂದ ಮರಗಳ ನಡುವೆ ನೇತಾಡುತ್ತಿದ್ದ ಸ್ಪಂಜಿನಂಥ ಸಣ್ಣ-ದೊಡ್ಡ ಹಿಮದ ಚಾದರಗಳು; ಹಿಮದಲ್ಲೇ ಮುಳುಗೆದ್ದಿದ್ದ ದಾರಿಯನ್ನು ಸೀಳಿ ಹೋಗುತ್ತಿದ್ದ ಬಸ್ಸು; ರಸ್ತೆಯ ಆಚೀಚೆಗೆ ದಿನದ ದುಡಿಮೆಗಾಗಿ ನಡುಗುತ್ತಲೇ ನಡೆಯುತ್ತಿದ್ದ ಶ್ರಮಜೀವಿಗಳು- ರಾತ್ರಿಡೀ ನಮ್ಮನ್ನು ಗೋಳುಗುಟ್ಟಿಸಿದ್ದ ಚಳಿಗಾಲಕ್ಕೆ ಬೆಳಗಾಗುವ ಹೊತ್ತಿಗೆ ಬೇರೆಯದೇ ಭೂಮಿಕೆಯೊಂದು ದೊರೆಯುತ್ತಿತ್ತಲ್ಲ! “ಸಾಲಾಗಿ ಬೀದಿಯಲಿ ನಡೆವ ಪಯಣಿಗರು/ ಸಾಲು ದೀವಟಿಕೆಗಳ ಹಿಡಿದ ಕನಸಿಗರು/ ಸುಂಯ್‌ಗುಡುತ ನಂದುತಿರೆ ಮಂಜಿನಲಿ ಪಂಜುಗಳು/ ಅರ್ಧ ನಯನವ ಮುಚ್ಚಿ ನಡೆವ ಹಾದಿಗರು/” ಎನ್ನುವ ಕವಿವರ್ಣನೆಯಂತೂ ಅದೆಷ್ಟೋ ಬಾರಿ ನೆನಪಾಗಿ, ಪುಳಕ ಎಬ್ಬಿಸಿದ್ದಿದೆ.
ಇದನ್ನೂ ಓದಿ | ದಶಮುಖ ಅಂಕಣ | ಚಂದ್ರಲೋಕದಲ್ಲಿ ಒಂದು ಯಾನ
ನಮಗೆ ದಕ್ಷಿಣ ಭಾರತದಲ್ಲಿ ಎಲೆ ಉದುರುವ ಕಾಡುಗಳು ಇಲ್ಲದಿರುವುದರಿಂದ ಪಶ್ಚಿಮ ದೇಶಗಳಲ್ಲಿ ಕಾಣುವ “ಫಾಲ್” ಎನ್ನುವ ಸೌಂದರ್ಯದ ಕಲ್ಪನೆ ಕಡಿಮೆ. ಅದೆಷ್ಟೋ ವಿಸ್ತಾರವಾದ ಕಾಡುಗಳೆಲ್ಲ ಒಟ್ಟಿಗೆ ಹೇರ್ ಡೈ ಮಾಡಿಸಿದಂತೆ ಬಣ್ಣ ಬದಲಿಸಿ ನಿಲ್ಲುತ್ತವೆ. ನಸುಕೆಂಪು, ಕಡುಗೆಂಪು, ಗಾಢಹಳದಿ, ತಿಳಿಹಳದಿ, ಅರಿಶಿನ, ಬಂಗಾರ ಬಣ್ಣಗಳನ್ನು ಈ ಕಾಡುಗಳ ಮೇಲೆ ನಿಸರ್ಗವೆಂಬ ಚಿತ್ರಕಾರ ಕಲಾತ್ಮಕವಾಗಿ ಸೋಕಿದಂತೆ, ಸಿಂಪಡಿಸಿದಂತೆ ಕಾಣುತ್ತದೆ. ಕೆಲವೇ ವಾರಗಳ ಹಿಂದೆ ಹಸಿರಾಗಿದ್ದ ಈ ಮರಗಳು, ಒಂದೆಲೆಯೂ ಬಿಡದಂತೆ ಬಣ್ಣ ಬದಲಿಸುತ್ತವೆ. ತುಂಬಿ ತುಳುಕುತ್ತಿದ್ದ ಬಸ್ಸೊಂದು ತುರಾತುರಿಯಿಂದ ತನ್ನ ಪ್ರಯಾಣಿಕರನ್ನು ಕೆಳಗಿಳಿಸಿ ನಿರಾಳವಾಗುವಂತೆ, ಎಲೆಗಳನ್ನೆಲ್ಲಾ ತ್ವರಿತವಾಗಿ ಹಣ್ಣಾಗಿಸುವ ಮರಗಳು ಭೂಮಿಗಿಳಿಸಿ ನಿರಾಳವಾಗುತ್ತವೆ. ಡಿಸೆಂಬರ್‌ನಲ್ಲಿ ಸುರಿಯುವ ಹಿಮಕ್ಕಾಗಿ ತನ್ನ ರಂಬೆ-ಕೊಂಬೆಗಳನ್ನು ಸಂಪೂರ್ಣ ಬೋಳಾಗಿಸಿ ನಿಂತು ಕಾಯುತ್ತವೆ.
ಪ್ರಾಣಿ ಪ್ರಪಂಚವೂ ಸಿದ್ಧತೆಗಳಿಂದ ಹೊರತಲ್ಲ. ದಿನದ ಬೆಳಕು ಕಡಿಮೆಯಾಗಿ, ಚಳಿ ಮತ್ತು ಒಣ ಹವೆ ಹೆಚ್ಚಾಗಿ, ಆಹಾರದ ಲಭ್ಯತೆಯೂ ಕಡಿಮೆಯಾಗುವ ದಿನಗಳನ್ನು ಎದುರಿಸಲು ಅವುಗಳಂತೂ ಎಲ್ಲರಿಗಿಂತ ಹೆಚ್ಚು ಮಂಜಾಗ್ರತೆ ವಹಿಸುತ್ತವೆ. ಕೆಲವು ಪಕ್ಷಿಗಳು ದೂರ ದೇಶಗಳಿಗೆ ವಲಸೆ ಹೋದರೆ, ಕೆಲವು ತಮ್ಮ ಆಹಾರಗಳನ್ನು ದಾಸ್ತಾನು ಮಾಡಿಕೊಳ್ಳುತ್ತವೆ. ಇನ್ನು ಕೆಲವು ಪ್ರಾಣಿಗಳಿಗೆ ಈ ಋತುವಿನಲ್ಲಿ ತಿನ್ನುವುದೊಂದೇ ಕೆಲಸ! ಸಾಧ್ಯವಾದಷ್ಟೂ ತಿಂದು, ದೇಹದೆಲ್ಲೆಡೆ ಕೊಬ್ಬು ತುಂಬಿಸಿಕೊಳ್ಳುತ್ತವೆ, ದೇಹದ ಉಷ್ಣತೆಯನ್ನು ತಗ್ಗಿಸಿಕೊಳ್ಳುತ್ತವೆ, ಚಳಿಗಾಲ ಮುಗಿಯುವವರೆಗೆ ಜಡವಾಗಿರುತ್ತವೆ ಅಥವಾ ನಿದ್ದೆ ಮಾಡುತ್ತವೆ. ಸರೀಸೃಪಗಳಂಥ ಕೆಲವು ಪ್ರಾಣಿಗಳು ತಮ್ಮ ಆವಾಸ ಸ್ಥಾನಗಳಲ್ಲಿ ತಪಸ್ಸಿಗೆ ಕೂತಂತೆ ಸ್ಥಿರವಾಗಿ ಬಿಡುತ್ತವೆ. ಕೆಲವು ಕೀಟಗಳಂತೂ ಈ ಸಂದರ್ಭದಲ್ಲಿ ಮೊಟ್ಟೆಯಿಡುವ ಮೂಲಕ ತಮ್ಮ ಮುಂದಿನ ಪೀಳಿಗೆಗೆ ವೇದಿಕೆ ತೆರವು ಮಾಡಿ, ತಾವು ನಿರ್ಗಮಿಸಿಯೇ ಬಿಡುತ್ತವೆ. ಹೇಳುವುದಕ್ಕೆ ಒಂದೇಒಂದು ಋತು, ಆದರೆ ಆಗುವ ಬದಲಾವಣೆಗಳನ್ನು ಗಮನಿಸಿ. ವಸಂತದಲ್ಲಿ ಚಿಗುರಿ ಹಸಿರಾಗಿದ್ದ ಪ್ರಕೃತಿ, ಹಣ್ಣಾಗಿ ಉದುರುವವರೆಗಿನ ಪ್ರಕ್ರಿಯೆಯಿದು. ಹೂ-ಚಿಗುರೇ ಇಲ್ಲದಂತೆ ಎಲ್ಲೆಡೆ ಕಾಣುವ ಬರಡು, ಕೊರೆಯುವ ಚಳಿ, ಮಂಜು, ನಡುಕ, ಬೆಳಕಿಲ್ಲದ ನೀರವತೆ, ದೀರ್ಘ ಕತ್ತಲಿನ ಶೂನ್ಯ- ಹೀಗೆ ಏನೇನೆಲ್ಲಾ ಎದುರಿಸಬೇಕಲ್ಲಾ ಪ್ರಾಣಿ ಜಗತ್ತು. ಇವೆಲ್ಲವಕ್ಕೂ ಅವರಲ್ಲಿ ಉತ್ತರವಿದೆ, ಹಾಗೆಂದೇ ಕೋಟ್ಯಂತರ ವರ್ಷಗಳಿಂದ ಅವರ ತಲೆಮಾರುಗಳೆಲ್ಲಾ ಇಂದಿಗೂ ಉಳಿದು ಬಂದಿವೆ.
ಇದನ್ನೂ ಓದಿ | ದಶಮುಖ ಅಂಕಣ | ಶಾಂತಿಯ ಸಾರುವ ಕಾಂತಿಯ ಕಿಡಿಗಳು
ಕವಿಗಳೆಂದರೆ ವಸಂತವನ್ನು ವರ್ಣಿಸುವವರು ಎಂದೇ ಹಿಂದೊಮ್ಮೆ ತಿಳಿದಿದ್ದೆ. ಆದರೆ ಎಷ್ಟೊಂದು ಕವಿಗಳನ್ನು ಹೇಮಂತವೂ ಸೆಳೆದಿದೆಯಲ್ಲ! “ಭೂಮಿನ್ ತಬ್ಬಿದ್ ಮೋಡಿದ್ದಂಗೆ/ ಬೆಳ್ಳಿ ಬಳ್ದಿದ್ ರೋಡ್ ಇದ್ದಂಗೆ/ ಸಾಫಾಗ್ ಅಳ್ಳ ತಿಟ್ಟಿಲ್ದಂಗೆ/ ಮಡಿಕೇರಿ ಮೇಲ್ ಮಂಜು/” ಎಂದು ಮಡಿಕೇರಿಯನ್ನು ವರ್ಣಿಸುವ ಜಿ.ಪಿ. ರಾಜರತ್ನಂ ಅವರ ಸಾಲುಗಳು ಬಹು ಜನಪ್ರಿಯ. “ಹೇಮಂತದ ಚಳಿಗಾಳಿಗಳೇ/ ಜೀವಕೆ ನಡುಕವ ತಾರದಿರಿ/ ಹಗೆಯೊಲು ಕೆಂಗಣ್ ತೆರೆಯದಿರು/ ಸಮರೋತ್ಸಾಹವ ತಳೆಯದಿರಿ/” ಎಂದು ಕೆ.ಎಸ್. ನರಸಿಂಹಸ್ವಾಮಿ ಅವರು ಹೇಮಂತವನ್ನು ವಿನಂತಿಸಿಕೊಳ್ಳುತ್ತಾರೆ. ಆದರೆ ಹೇಮಂತ ಋತುವಿನ ಕುರಿತಾದ ತುಂಬ ಮನಸೆಳೆಯುವ ಕವಿತೆ ಎಸ್. ವಿ. ಪರಮೇಶ್ವರ ಭಟ್ಟರದ್ದು. “ಮಂಜು ಮುಸುಕನು ಹೊದ್ದು ಹೊಲಗದ್ದೆಗಳು ಮಲಗಿ/ ಸುಯ್ಯೆಲರ ಸೂಸುತಿವೆ ನಿನ್ನ ಹಳಿದು/ ಮೆಲ್ಲಮೆಲ್ಲನೆ ಸರಿದು ಮೊಗದ ಜವನಿಕೆಯೆಳೆದು/ ತುಂಗೆ ತೊರೆ ಹರಿಯುತಿದೆ ನಡುಗಿ ಮೈನೆನೆದು/” ನೀರಿಗೂ ನಡುಕ ಹುಟ್ಟಿಸುವಂಥ ಚಳಿಯ ವರ್ಣನೆಯೇ ಮೈನವಿರೇಳಿಸುವಂಥದ್ದು. ಸಂಸ್ಕೃತದ ಸುಭಾಷಿತವೊಂದು ಇನ್ನೊಂದು ಹೆಜ್ಜೆ ಮುಂದೆ ಹೋಗಿ, “ಹೇಮಂತೆ ಯೇ ನಸೇವಂತೆ/ ತೇ ನರಾಃ ದೈವ ವಂಚಿತಾಃ” (ಹೇಮಂತ ಋತುವನ್ನು ಯಾರು ಅನುಭವಿಸುವುದಿಲ್ಲವೋ ಆ ಮನುಷ್ಯರು ದೈವ ಸುಖದಿಂದ ವಂಚಿತರು) ಎಂದು ಬಣ್ಣಿಸುತ್ತದೆ.
ಇಷ್ಟಾಗಿ ಜೀವಜಗತ್ತಿನ ಮೇಲೆ ಕಠಿಣನೆಂದೇ ಕಾಣುವ ಹೇಮಂತ ಹೇಳುವುದೇನು? ಚಿಗುರೆಲೆಗಾಗಿ ಹಣ್ಣೆಲೆ ಉದುರಲೇ ಬೇಕು; ಹಾಗೆಂದು ಉದುರಿ ಬೋಳಾದ ತಕ್ಷಣ ಯಾವುದೂ ಮುಗಿಯುವುದಿಲ್ಲ. ಹಳೆಯದನ್ನು ಬಿಟ್ಟುಕೊಡುವುದರಿಂದ ಹೊಸದಕ್ಕೆ ಜಾಗ ಮಾಡಬೇಕು. ಅಂದರೆ, ಈಗ ಹೇಮಂತವಿದ್ದರೆ ಮುಂದೆ ವಸಂತ! ಜೀವನಚಕ್ರದ ಅಳಿವು-ಉಳಿವಿನ ಕ್ಲಿಷ್ಟ ಪಾಠವನ್ನು ಇಷ್ಟು ಸರಳವಾಗಿ ನಮಗೆ ತಿಳಿಸುವ ಹೇಮಂತ ನಿಜವಾಗಿಯೂ ಧೀಮಂತ ಋತುವಲ್ಲವೇ? “ಒಂದೊಂದು ಋತುವಿನಲಿ ಒಂದೊಂದು ರೀತಿಯಲಿ/ ಸಂಸ್ಕಾರ ಪಡೆಯುವುದೆ ಜೀವಗಳ ಧರ್ಮ” ಎಂಬ ಕವಿವಾಣಿ ನಮ್ಮ ಸ್ಮರಣೆಯಲ್ಲಿ ಸದಾ ಇರಲಿ.