Site icon Vistara News

ದಶಮುಖ ಅಂಕಣ | ಶಾಂತಿಯ ಸಾರುವ ಕಾಂತಿಯ ಕಿಡಿಗಳು

glow worm

ಈ ಅಂಕಣವನ್ನು ಇಲ್ಲಿ ಕೇಳಿ:

https://vistaranews.com/wp-content/uploads/2022/10/WhatsApp-Audio-2022-10-25-at-11.25.19-AM.mp3

ಪ್ರತಿಯೊಂದು ಕಾಲಕ್ಕೂ ನಿರ್ದಿಷ್ಟ ಋತುಗಳು ಇದ್ದ ದಿನಗಳ ಮಾತಿದು. ಅಂದರೆ, ಈಗಿನಂತೆ ಯಾವಾಗ ಬೇಕಾದರೂ ಮಳೆಗಾಲ ಸೃಷ್ಟಿಯಾಗದೆ, ಮಳೆ, ಬಿಸಿಲು, ಚಳಿಗಳೆಲ್ಲಾ ತಂತಮ್ಮ ಅವಧಿಯಲ್ಲಿ ಪ್ರವೃತ್ತವಾಗುತ್ತಿದ್ದ ದಿನಗಳ ಕಥೆಯಿದು. ಬೇಸಿಗೆಯ ರಾತ್ರಿಗಳಲ್ಲಿ ಅಂಗಳದ ಅಟ್ಟದಲ್ಲಿ ಅಂಗಾತ ಬಿದ್ದುಕೊಳ್ಳುವುದು ಅತ್ಯಂತ ಪ್ರಿಯವಾಗಿತ್ತು. ಚುಕ್ಕಿ ಎಣಿಸುವುದಕ್ಕಲ್ಲ, ರೆಕ್ಕೆ ತಳೆದ ಚುಕ್ಕಿಗಳಂತಿದ್ದ ಹಾರುವ ಮಿಂಚುಹುಳುಗಳನ್ನು ನೋಡಲು. ಎಂಥಾ ರಮಣೀಯ ದೃಶ್ಯವದು! ಬೇಸಿಗೆಯ ಆರಂಭದ ದಿನಗಳಲ್ಲಿ ಈ ಹುಳುಗಳು ಸಿಕ್ಕಾಪಟ್ಟೆಯೇನೂ ಕಾಣುತ್ತಿರಲಿಲ್ಲ. ನಡುಬೇಸಿಗೆಯ ಹೊತ್ತಿಗೆ, ಅನಂತ ಆಗಸದ ತುಂಬಾ ಹರಡಿಕೊಂಡಿದ್ದ ಚುಕ್ಕಿಗಳಿಗೆ ಪ್ರತಿಯಾಗಿ, ಎಲ್ಲಾ ಮರಗಳ ಎಲೆ-ಎಲೆಗಳೂ ಹಣತೆಗಳಾಗಿ ಬದಲಾಗುತ್ತಿದ್ದವು! ಎಣ್ಣೆ, ಬತ್ತಿ ಯಾವುದೂ ಬೇಡದ ಹಣತೆಗಳು; ಎಂಥಾ ಗಾಳಿಗೂ ನಂದದ ಸೊಡರುಗಳು. ನಮ್ಮ ಪಕ್ಕದ ಗುಡ್ಡದಲ್ಲಿ ತಲೆ ಎತ್ತಿ ನಿಂತಿದ್ದ ಮರಗಳಿಗೆಲ್ಲಾ ಪಿಳಿಗುಡುವ ಬೆಳಕಿನ ಸರಮಾಲೆಯನ್ನು ಸುತ್ತಿದಂತೆ, ಇಹ-ಪರವನ್ನು ಬೆಸೆಯುವ ಮಾಯಾಲೋಕವೇ ಸೃಷ್ಟಿಯಾಗುತ್ತಿತ್ತು. ಬೇಸಿಗೆ ಮುಗಿಯುತ್ತಾ ಬಂದಂತೆ, ಮರದ ಮೇಲಿನ ಈ ಸೊಡರುಗಳೆಲ್ಲಾ ಕೆಳಗಿಳಿಯುತ್ತಿದ್ದವು. ಮೇ ತಿಂಗಳಿನ ತುದಿಯ ದಿನಗಳಲ್ಲಿ ಮಿಂಚು ಹುಳುಗಳನ್ನು ನೋಡಲು ಅಟ್ಟ ಹತ್ತುವುದೇ ಬೇಡ, ಅವೆಲ್ಲ ಅಂಗಳದ ಅತಿಥಿಗಳು. ಅವುಗಳನ್ನು ಹಿಡಿಯುವುದಕ್ಕಾಗಿ ಕುಣಿದು, ಕುಪ್ಪಳಿಸಿ ಎಬ್ಬಿಸುತ್ತಿದ್ದ ಗದ್ದಲ ಇನ್ನೂ ಕಿವಿಯಲ್ಲಿ ಮೊರೆದರೆ ಅಚ್ಚರಿಯಿಲ್ಲ. ಋತುಮಾನದ ಕುರಿತಾಗಿ ನಿಖರ ಸೂಚನೆ ನೀಡುತ್ತಿದ್ದ ಈ ಕಿಡಿಯ ಕುಡಿಗಳು, ಅಂಗಳಕ್ಕಿಳಿದು ಮನೆಯೊಳಗೂ ಬಂದವೋ- ಮತ್ತೆ ಮಳೆ ಬಾರದಿದ್ದರೆ ಕೇಳಿ!

ಯಾವುದಾದರೂ ಹಳ್ಳಿಯಂಥ ಜಾಗಗಳಲ್ಲಿ, ಜನ-ಜಾತ್ರೆ-ಗದ್ದಲಗಳೆಲ್ಲ ಕಡಿಮೆ ಇರುವ ಸ್ಥಳಗಳಲ್ಲಿ ಪ್ರಕೃತಿಯ ಇಂಥ ರಮ್ಯತೆಗಳೆಲ್ಲ ನೋಡಲು ಸಿಗಬಹುದು. ಅಲ್ಲಿನ ಜನಗಳಿಗೆ ನೋಡುವ, ಸಂಭ್ರಮಿಸುವ ವ್ಯವಧಾನವೂ ಇರಬಹುದು. ನಮ್ಮ ಪೇಟೆ ಪಟ್ಟಣಗಳ ಕಂದಮ್ಮಗಳಿಗೆ ಅಲ್ಲೊಂದು- ಇಲ್ಲೊಂದು ಮಿಂಚುಹುಳು ಸಿಕ್ಕಿದರೆ ಧನ್ಯರು. ಅದನ್ನು ಮುಟ್ಟುವುದು, ಹಿಡಿಯುವುದು ಸ್ವಲ್ಪ ದೂರದ ಮಾತು. ಪ್ರಕೃತಿಯೊಂದಿಗೆ ಮಾನವ ಎಷ್ಟು ನಿಕಟವಾಗಿ ಅನುಸಂಧಾನ ನಡೆಸಬಹುದು, ಹತ್ತಿರವಾದಷ್ಟೂ ಹೇಗೆ ನಿಸರ್ಗ ತನ್ನ ರಹಸ್ಯಗಳ ಒಂದೊಂದೇ ಕಿಡಿಯನ್ನು ನಮ್ಮತ್ತ ಎಸೆಯುತ್ತಾ ಸೆಳೆಯುತ್ತದೆ, ಈ ರಹಸ್ಯಗಳ ಕಟ್ಟುವೊಡೆಯುವ ಹೆಬ್ಬಯಕೆಯೇ ಹೇಗೆ ಅನಾದಿ ಕಾಲದಿಂದಲೂ ಮಾನವನನ್ನು ಅನೂಹ್ಯ ಯಾನ-ಪಯಣಗಳನ್ನು ಕೈಗೊಳ್ಳಲು ಪ್ರೇರೇಪಿಸಿದೆ, ತನಗೆ ನಿಕಟವಾದವರನ್ನು ನಿಸರ್ಗ ಹೇಗೆ ಧ್ಯಾನಸ್ಥ ಸ್ಥಿತಿಯತ್ತ ತಳ್ಳುತ್ತದೆ…ಎನ್ನುವಂಥ ಹತ್ತು-ಹಲವು ಪ್ರಶ್ನೆಗಳಿಗೆ ಉತ್ತರವನ್ನು ನಮಗಾಗಿ ಇನ್ನೊಬ್ಬರು ಕೊಡಲಾಗುವುದಿಲ್ಲ. ನಾವು ಸತ್ತೇ ಸ್ವರ್ಗ ನೋಡಬೇಕು ಎಂಬಂಥ ಸನ್ನಿವೇಶವಿದು.

ಬೇಸಿಗೆಯ ರಾತ್ರಿಗಳಲ್ಲಿ ಮಿಂಚುಹುಳುಗಳನ್ನು ನೋಡಲೆಂದೇ ಕಾಡಿನಲ್ಲಿ ಬೀಡು ಬಿಡುವವರೂ ಇದ್ದಾರೆ. ಎಲ್ಲಾ ಕಾಡುಗಳಲ್ಲೂ ಇಂಥ ದೃಶ್ಯಗಳು ಸೃಷ್ಟಿಯಾಗುತ್ತವೆಯೋ, ಹಾಗೆ ಹೊಂಬೆಳಕಿನ ಮಾಯಾಲೋಕ ಬಿಚ್ಚಿಕೊಳ್ಳುವುದಕ್ಕೂ ಒಂದು ಪರ್ವ ದಿನವೆಂಬುದಿದೆಯೋ… ಇಂಥ ಹಲವು ಪ್ರಶ್ನೆಗಳಿಗೆ ವನ್ಯಜೀವಿ ತಜ್ಞರು ಅಥವಾ ಕಾಡಿನ ನಿಕಟ ಸಾಂಗತ್ಯವಿರುವವರು ಮಾತ್ರವೇ ಉತ್ತರ ಕೊಡಬಲ್ಲರು. ಸಹಸ್ರಾರು ಸಂಖ್ಯೆಯ ಬೆಳಕಿನ ಹುಳುಗಳು ಕೆಲವೊಮ್ಮೆ ಕಾರ್ಗತ್ತಲೆಯ ಕಾನನಗಳಲ್ಲಿ ದಾರಿದೀಪ ಆಗುವುದೂ ಇದೆ. ಕಳೆದ ಮೇ ತಿಂಗಳಲ್ಲಿ ತಮಿಳುನಾಡಿನ ಅಣ್ಣಾಮಲೆ ರಕ್ಷಿತಾರಣ್ಯದಲ್ಲಿ ತೆಗೆದಿದ್ದೆನ್ನಲಾದ ಹೊಂಬೆಳಕಿನ ನರ್ತನದ ಚಿತ್ರಗಳು ಇಂಟರ್‌ನೆಟ್‌ನಲ್ಲಿ ಸುದ್ದಿ ಮಾಡಿದ್ದವು. ಹಾಗೆ ವಿಶ್ವದ ಹಲವೆಡೆಯಲ್ಲಿ ಮಿಂಚು ಹುಳುಗಳ ಗುಹೆಗಳಿವೆ. ನ್ಯೂಜಿಲೆಂಡ್‌ನ ವೈಟೊಮೊ ಗುಹೆಗಳೊಳಗೆ ಮಿಂಚುಹುಳುಗಳು ಸೃಷ್ಟಿಸುವ ಬೆಳಕಿನ ಝಗಮಗ ಈ ಲೋಕದ್ದಲ್ಲ. ಗುಹೆಯ ಛಾವಣಿಗೆ ಕೋಟ್ಯಾನುಕೋಟಿ ಸಂಖ್ಯೆಯಲ್ಲಿ ಅಂಟಿಕೊಂಡು, ಗಾಢ ಕತ್ತಲೆಯಲ್ಲಿ ಹಸಿರು-ನೀಲಿ-ಹಳದಿ ಬೆಳಕು ಸೂಸುವ ಇವುಗಳ ವೀಕ್ಷಣೆಗಾಗಿಯೇ ಗ್ಲೋವರ್ಮ್‌ ಟೂರಿಸಂ ಇದ್ದರೂ ಅಚ್ಚರಿಯಿಲ್ಲ. ನ್ಯೂಜಿಲೆಂಡ್‌, ಆಸ್ಟ್ರೇಲಿಯಾಗಳಲ್ಲಿ ಇಂಥ ಹಲವಾರು ಗುಹೆಗಳಿವೆ. ಅಮೆರಿಕದ ಅಲಬಾಮಾದಲ್ಲೂ ಇಂಥದ್ದೊಂದು ಗುಹೆಯಿದೆ. ಜಗತ್ತಿನ ಬೇರೆ ಭಾಗಗಳಲ್ಲಿಯೂ ಇಂಥವು ಇರಬಹುದು. ಈ ಜಾಗಗಳಲ್ಲಿ ಮಿಂಚುಹುಳುಗಳು ಸೃಷ್ಟಿಸುವ ಬೆರಗನ್ನು ಕಣ್ತುಂಬಿಕೊಳ್ಳಲೆಂದೇ ಪ್ರವಾಸಿಗರು ಬರುತ್ತಾರೆ.

ತಮ್ಮ ಸಂಭಾವ್ಯ ಸಂಗಾತಿಯನ್ನು ಸೆಳೆಯುವುದಕ್ಕೆ, ಬೇಟೆಯನ್ನು ಹುಡುಕುವುದಕ್ಕಾಗಿ ಅಥವಾ ಒಂದಿಲ್ಲೊಂದು ಬಗೆಯ ಸಂವಹನಕ್ಕಾಗಿ ಹೀಗೆ ಲಾಟೀನು ಹಚ್ಚಿಕೊಳ್ಳುತ್ತವೆ ಈ ಹುಳುಗಳು. ಆದರೆ ಬಹಳ ಕಾಲದವರೆಗೆ ಈ ಪುಟ್ಟ ಹುಳುಗಳು ಸೂಸುವ ಜೈವಿಕ ಬೆಳಕು ಜೀವ ವಿಜ್ಞಾನಿಗಳ ಪಾಲಿಗೆ ಬೆರಗಾಗಿಯೇ ಇತ್ತು. ಶಾಖವೇ ಇಲ್ಲದಂತೆ ಬೆಳಕು ಉತ್ಪತ್ತಿ ಆಗುವುದು ಹೇಗೆ? ಹಾಗೇನಾದರೂ ಬೆಳಕಿನೊಂದಿಗೆ ಶಾಖವೂ ಹುಟ್ಟಿದ್ದರೆ, ಮೊದಲು ಈ ಹುಳುಗಳೇ ಕರಕಲಾಗುತ್ತಿದ್ದವೇನೋ. ಲ್ಯೂಸಿಫೆರಿನ್‌ ಎಂಬ ರಾಸಾಯನಿಕದ ನೆರವಿನಿಂದ ಈ ಜೈವಿಕ ಬೆಳಕನ್ನು ಹುಳುಗಳು ಉತ್ಪತ್ತಿ ಮಾಡುತ್ತವೆ. ಈ ಬೆಳಕು ಸೂಸುವ ಲಾಟೀನು, ಹುಳದ ಕಿಪ್ಪೊಟ್ಟೆಯ ಭಾಗದಲ್ಲಿದ್ದು, ದೇಹಕ್ಕೆ ಒದಗಿಬರುವ ಆಮ್ಲಜನಕವೇ ಈ ಬೆಳಕಿಗೆ ತಿದಿಯೊತ್ತುತ್ತದೆ; ಶಾಖವನ್ನು ನಿಯಂತ್ರಿಸಿಯೇ ಬೆಳಕು ಬೀರಲು ಸಾಧ್ಯವಾಗುತ್ತದೆ.

ಇದನ್ನೂ ಓದಿ | ದಶಮುಖ ಅಂಕಣ | ನೆಲದ ಮೇಲೆಯೇ ನಡೆವ ದೇವರುಗಳು

ಸಾಮಾನ್ಯರಿಂದ ಹಿಡಿದು ವಿಜ್ಞಾನಿಗಳವರೆಗೆ ಎಲ್ಲರನ್ನೂ ವಿಸ್ಮಯಕ್ಕೆ ದೂಡುವ ಈ ಮಿಣುಕು ಹುಳುಗಳು ನಮ್ಮ ಕವಿಗಳನ್ನು ಬಿಡುವುದಾದರೂ ಹೇಗೆ? “ಕತ್ತಲೆ ಕವಿದಿಹ ಬಯಲಲ್ಲಿ/ ಚುಕ್ಕಿಯು ಮಿನುಗುವ ತೆರದಲ್ಲಿ/ ಇರುಳಿನ ಬೆಳಕಿನ ಮಣಿಯಾಗಿ/ ಹೊಳೆಯುವುದೇನದು ಚೆಲುವಾಗಿ?” ಎಂದು ಚನ್ನವೀರ ಕಣವಿಯವರು ಕೇಳುತ್ತಾರೆ. ಇನ್ನು ಕುವೆಂಪು ಅವರಿಗಂತೂ ಅವರ “ಮಿಣುಕು ಹುಳುಗಳು” ಎಂಬ ಕವಿತೆಯಲ್ಲಿ ಇವು ಮಿಂಚಿನ ಹನಿಗಳ ಮಳೆಯಂತೆ ತೋರುತ್ತವೆ. “…ಹೊನ್ನೆಯ ಹುಳುಗಳು, ಕಾಂತಿಯ ಕಿಡಿಗಳು/ ಹೊಳೆದು, ಅಳಿದು, ಅಳಿದು, ಹೊಳೆದು/ ಚಿಮ್ಮುತ ಎಲೆಯಿಂದೆಲೆಯೆಡೆಗೆ/ ಚುಮುಕಿಸಿ ಮೋಹವನಡಿಗಡಿಗೆ/ ಕುಣಿಯುತ ಮಿಣುಕುತ ಮನಸನು ಸೆಳೆದು/ ಮೆರೆದವು ಬೆಳಕಿನ ಮಣಿಗಳು ಹೊಳೆದು…” ಎಂದೆಲ್ಲಾ ವರ್ಣಿಸುವ ಕವಿಗೆ, ಈ ಹೊನ್ನೆಯ ಹುಳುಗಳ ಸಂತೆ ಗಡೀಪಾರಾಗಿ ಬಂದ ಉಡುಗಣದಂತೆ ಕಾಣುತ್ತವೆ! ಎಲಾ ಕವಿ ಮನಸ್ಸೇ!

ಇದೀಗ ಸಹಜವಾಗಿ ಮೂಡಬಹುದಾದ ಮುಂದಿನ ಪ್ರಶ್ನೆ- ಈ ಬೆಳಕಿನ ಹುಳುಗಳು ಇಂದೇಕೆ ನೆನಪಾದವು? ಕೆಲವು ತತ್ವಗಳು ಇರುವುದೇ ಹಾಗೆ- ಕಾಲ, ದೇಶ, ಸ್ಥಿತಿ ಎಲ್ಲವನ್ನೂ ಮೀರಿದ ಹಾಗೆ. ಎಂಥಾ ಮಸಿ ಹಿಡಿದ ಕತ್ತಲನ್ನೂ ಛೇದಿಸುವುದಕ್ಕೆ ಘನ ಅಸ್ತಿತ್ವವೇನೂ ಬೇಕಿಲ್ಲ, ಸಣ್ಣ ಕಿಡಿಯೊಂದು ಸಾಕು ಎಂಬ ತತ್ವ ಸಾರ್ವಕಾಲಿಕವಲ್ಲವೇ? ಹೀಗೆ ಬೆಳಕು ಬೀರಿದರೆ ಮಾತ್ರ ಅದು ಮಿಣುಕು ಹುಳು; ಅಲ್ಲದಿದ್ದರೆ ಹುಳು, ಅಷ್ಟೆ! ಬೆಳಕಿನ ಹಬ್ಬದ ಈ ಸಂದರ್ಭದಲ್ಲಿ ತಮಸೋಮಾ ಜ್ಯೋತಿರ್ಗಮಯ ಎಂಬ ತತ್ವಕ್ಕೆ ಮಿಣುಕು ಹುಳುಗಳ ಬದುಕಿಗಿಂತ ಉತ್ತಮ ನಿದರ್ಶನ ಬೇಕೆ? ಶಾಖವಿಲ್ಲದೆ, ಘರ್ಷಣೆಯಿಲ್ಲದೆ, ಯಾರನ್ನೂ ಏನನ್ನೂ ಸುಡದೆ, ನೋಡುವ ಕಣ್ಣುಗಳಿಗೆ ಬೆರಗುಣಿಸುತ್ತಾ, ಕಗ್ಗತ್ತಲೆಯಲ್ಲಿ ದಾರಿದೀಪವಾಗುತ್ತಾ, ಬೆಳಕಿನ ಅಸ್ತಿತ್ವವನ್ನು ಪ್ರಶ್ನಿಸುವ ಕತ್ತಲೆಗೆ ಉತ್ತರವೇನೋ ಎಂಬಂತೆ- ಆರುತ್ತಾ ಬೆಳಗುತ್ತಾ, ಎಲ್ಲರೊಳಗೊಂದಾಗಿಯೂ ಹೊಳೆಯುತ್ತಾ ಬದುಕುವ ಈ ಜೀವಿಗಳು ಹೇಳುವ ಜೀವನಪಾಠ ಸಣ್ಣದಲ್ಲವಲ್ಲ.

ಕತ್ತಲೆಯಿಂದ ಬೆಳಕಿನೆಡೆಗಿನ ನಮ್ಮ ದಾರಿಗೆ ಈ ತತ್ವಗಳೇ ದೀಪವಾಗಲಿ. ಎಲ್ಲರಿಗೂ ಬೆಳಕಿನ ಹಬ್ಬದ ಶುಭಾಶಯಗಳು.

ಇದನ್ನೂ ಓದಿ | ದಶಮುಖ ಅಂಕಣ | ಮನೆಯೆಂಬ ಭಾವದೀಪ್ತಿ

Exit mobile version