ಈ ಅಂಕಣವನ್ನು ಇಲ್ಲಿ ಕೇಳಬಹುದು:
ಮಳೆಗಾಲದ ಸುದ್ದಿಗಳು ಎಲ್ಲೆಡೆ ಬಿತ್ತರವಾಗುತ್ತಿದ್ದವು. ಮಳೆ ಎಲ್ಲಿ, ಎಷ್ಟು, ಹೇಗೆ, ಏನು ಎಂಬ ಇತ್ಯಾದಿಗಳಿಗಿಂತ ಎಲ್ಲೆಲ್ಲಿ ಎಷ್ಟೆಷ್ಟು ಮನೆಗಳು ಮುಳುಗಿವೆ, ಆ ಮನೆಗಳು ಎಂಥೆಂಥ ಜನರದ್ದಾಗಿದ್ದವು, ಯಾವ ಊರಿನ- ಯಾವ ಬೀದಿಯ ಮನೆಗಳಿಗೆ ಎಷ್ಟು ಕೋಟಿ ಬೆಲೆ, ಕೊಟ್ಟ ದುಡ್ಡೆಲ್ಲಾ ಹೀಗೆ ನೀರಲ್ಲಿ ಹೋಮ- ಇಂಥದ್ದೇ ಸುದ್ದಿಗಳು ಹೆಚ್ಚಿನ ಗಮನ ಸೆಳೆಯುತ್ತಿದ್ದವು. ರಸ್ತೆ, ಸೇತುವೆ, ಕರೆಂಟು ಕಂಬ ಮುಂತಾದ ಮೂಲ ಸೌಕರ‍್ಯಗಳು ಮುಳುಗಿದ ಸುದ್ದಿಗಳಿಗಿಂತ ಮನೆ-ಮಾರು ಮುಳುಗಿದ ಸುದ್ದಿಗಳೇ ಸುದ್ದಿಮನೆಗಳ ತಕ್ಕಡಿಯಲ್ಲಿ ಕೆಳಗಿದ್ದವೋ ಎನಿಸುವಂತಿತ್ತು.
ಇರಲಿ, ಆದರೆ ನಿರಂತರವಾಗಿ ದಿನಗಟ್ಟಲೆ ನೋಡುತ್ತಿದ್ದ ಈ ಸುದ್ದಿಗಳಿಂದಾಗಿ ಮನೆಯೆಂಬುದರ ಇಹ-ಪರದ ಬಗ್ಗೆ ಒಂದು ಲಘು ಜಿಜ್ಞಾಸೆಗೆ ಮೊದಲಾದ್ದು ಹೌದು. ಮನೆಯೆಂದರೆ ಏನು? ನಮಗೇಕೆ ಅಷ್ಟೊಂದು ಮುಖ್ಯ? ಅದಿಲ್ಲದಿದ್ದರೆ ಆಗುವುದಿಲ್ಲವೇ? ಅದೊಂದು ಲೌಕಿಕ ನೆಲೆಯೇ, ಭಾವನಾತ್ಮಕ ನಂಟೇ, ಸಾಂಸ್ಕೃತಿಕ ಅನುಬಂಧವೇ, ಸಂಪ್ರದಾಯದ ಜೊತೆಗಿನ ಸಂಬಂಧವೇ, ಸಾಮಾಜಿಕ ಘನತೆಯೇ, ಆರ್ಥಿಕ ಅನುಕೂಲವೇ ಅಥವಾ ಇವೆಲ್ಲವನ್ನೂ ಮೀರಿದ ಪರಮಾರ್ಥವೇ… ಏನದು? ಕೂಸು ಹುಟ್ಟುವ ಮುನ್ನವೇ ಕುಲಾವಿ ಹೊಲಿಸಿದಂತೆ ಮನೆ ಕಟ್ಟುವ/ಖರೀದಿಸುವ ಮುನ್ನವೇ ಅದಕ್ಕೊಂದು ಹೆಸರಿಡುವ ಸಂಭ್ರಮದಿಂದಲೇ ಮನೆಯೆಂಬುದು ನಮ್ಮ ಮನದಲ್ಲಿ ಭದ್ರವಾಗಿ ನೆಲೆಯಾಗುತ್ತದೆ. ಹುಟ್ಟಿದ ಮಕ್ಕಳಿಗೆ ಹೆಸರಿಡುವಂತೆಯೇ ಕಟ್ಟಿದ ಮನೆಗೆ ಹೆಸರಿಡಲೂ ಜಾತಕ-ವಾಸ್ತು ನೋಡಿಸುವ ಕ್ರಮವಿದೆ. ಅದಕ್ಕೆ ತಕ್ಕಂತೆ ಗಣೇಶ ಕೃಪ, ಈಶ್ವರ ನಿವಾಸ, ಪಾರ್ವತಿ ನಿಕೇತನ, ಕೃಷ್ಣ ಸದನ, ಲಕ್ಷ್ಮೀನಿಲಯ ಮುಂತಾದ ಹೆಸರುಗಳನ್ನಿಟ್ಟು ಕೈಮುಗಿಯುವವರಿದ್ದಾರೆ. ಇನ್ನು ಕೆಲವರು ಮನೆ ಮಂದಿಯ ಹೆಸರಿನಿಂದ ಒಂದೊಂದು ಅಕ್ಷರಗಳನ್ನು ತೆಗೆದು ಜೋಡಿಸಿ ಹೆಸರಿಡುವವರಿದ್ದಾರೆ.
ಇದರಲ್ಲಿ ಕೆಲವೊಮ್ಮೆ ʻಆಶಯ, ಪ್ರವರ, ಸುಜಾತʼ ಮುಂತಾದ ಅರ್ಥವತ್ತಾದ, ಹಲವು ಬಾರಿ ʻಕೃಶಾಂಗ ಧಾಮ, ಅಪರ ಕೃಪʼದಂಥ ಅನರ್ಥಕಾರಿಯಾದ ಹೆಸರುಗಳು ಹುಟ್ಟಬಹುದು. ಭವ್ಯವಾದ ಮಹಲುಗಳನ್ನು ಕಟ್ಟಿಕೊಂಡು ʻಲತಾಕುಂಜ, ಪರ್ಣಕುಟಿʼ ಎಂದು ಹೆಸರಿಟ್ಟರೆ, ಲೌಕಿಕದಲ್ಲಿ ಇದ್ದುಕೊಂಡೇ ನಿರ್ವಿಕಾರ ತತ್ವಜ್ಞಾನಿಯಂತೆ ʻಸೂರು, ಬಿಡಾರ, ಕುಟೀರʼ ಎಂದೂ ಇಡುತ್ತಾರೆ. ಇನ್ನು ಕಾವ್ಯಾತ್ಮಕವಾಗಿ ʻಇಂಚರ, ಬಾನ್ದನಿ, ನಂದಗೋಕುಲ, ಅನಿಕೇತನ(!)ʼ ಎಂಬಂಥವು ಒಂದೆಡೆಯಾದರೆ, ʻನೆಮ್ಮದಿ, ಅನಿವಾರ‍್ಯ, ಅನಿಶ್ಚಿತ, ಅನುಗ್ರಹ, ಆಶೀರ್ವಾದ, ನಮ್ಮನೆ, ಹೊಸಮನೆʼ ಎನ್ನುವ ಮೂಲಕ ತಮ್ಮ ಮನದ ಭಾವಗಳನ್ನು ತೋಡಿಕೊಳ್ಳುವವರಿದ್ದಾರೆ. ಮಾತ್ರವಲ್ಲ, ʻಪರಾಶರ ಕೃಪ, ಜಮದಗ್ನಿ ನಿಲಯʼ ಎಂದೆಲ್ಲಾ ತಮ್ಮ ಗೋತ್ರಪ್ರವರ ಮಾಡುವವರೂ ಇಲ್ಲದಿಲ್ಲ. ಹಾಗೆ ಕೆಲವೇ ಅಕ್ಷರಗಳಲ್ಲಿ ಆ ಮನೆಮಂದಿಯ ಬಗ್ಗೆ ಒಂದಿಷ್ಟು ಮಾಹಿತಿಯನ್ನು ತೆರೆದಿಡುವ ಈ ಮನೆಯ ಹೆಸರುಗಳನ್ನೂ ಚುಟುಕು ಸಾಹಿತ್ಯದ ಸಾಲಿಗೆ ಸೇರಿಸಬಹುದೇ ಎಂಬ ಕುತೂಹಲ ಉಂಟು. ಹಳೆಯ ಕಾಲದ ಗ್ರೀಟಿಂಗ್ ಕಾರ್ಡಿನ ಸಾಲುಗಳಿಂದ ಹಿಡಿದು ಆಟೋ ಹಿಂಬದಿ ಬರಹಗಳಿಂದ ಸಾಗಿ, ಈಗಿನ ಕಾಲದ ಸ್ಟೇಟಸ್ ಸಾಲುಗಳವರೆಗೆ ಏನೇನನ್ನೋ ನಾವೀಗ ಚುಟುಕಗಳ ಸಾಲಿಗೆ ಅನಧಿಕೃತವಾಗಿ ಸೇರಿಸಿಲ್ಲವೇ?
ಮನೆಯೆಂಬುದು ಕಾವ್ಯ-ಕವಿತೆಗಳಲ್ಲಿ ನಾನಾ ರೀತಿಯಲ್ಲಿ ಮೂಡಿಬಂದಿರುವುದಂತೂ ನಿಜ. ಕುವೆಂಪು ಅವರ ಪ್ರಖ್ಯಾತ ನನ್ನ ಮನೆ ಎನ್ನುವ ಕವನದಲ್ಲಿ ತಮ್ಮ ಬಾಲ್ಯದ ಮನೆಯನ್ನು ಅತೀವ ಅಕ್ಕರೆಯಿಂದ ನೆನಪಿಸಿಕೊಳ್ಳುತ್ತಾರೆ. “ನನ್ನ ತಾಯಿಯೊಲಿದ ಮನೆ/ ನನ್ನ ತಂದೆ ಬೆಳೆದ ಮನೆ/ ನನ್ನ ಗೆಳೆಯರೊಡನೆ ಕೂಡಿ/ ಮುದ್ದುಮಾತುಗಳನು ಆಡಿ/ ಮಕ್ಕಳಾಟಗಳನು ಹೂಡಿ/ ನಾನು ನಲಿದ ನನ್ನ ಮನೆ!…” ಎನ್ನುತ್ತಾ, ಕುಪ್ಪಳ್ಳಿಯ ತಮ್ಮ ಮನೆಯನ್ನು ಮಗುವಾಗಿ ವರ್ಣಿಸುತ್ತಾರೆ. ಹಿರಿಯ ಕವಿ ಕೆ.ಎಸ್. ನರಸಿಂಹಸ್ವಾಮಿ ಅವರ ʻಮನೆಯಿಂದ ಮನೆಗೆʼ ಅನ್ನುವ ಕವಿತೆ, ವರುಷ ವರುಷವೂ ಹೊಸ ಮನೆಗೆ ವರ್ಗಾಯಿಸುವ ಬಾಡಿಗೆದಾರರ ಬವಣೆ ಎಂಬಂತೆ ಆರಂಭಗೊಳ್ಳುತ್ತದೆ. ಹೋದ ಮನೆಗಳಲ್ಲೆಲ್ಲಾ ಕೆತ್ತಿದ ನೆಲ, ಮುರಿದ ನಲ್ಲಿ, ಕೆಟ್ಟ ದೀಪ, ಕಿತ್ತ ಹೂಗಿಡ… ಅಂತೂ ಯಾವ ಮನೆಗೆ ಹೋದರೂ ಇವೆಲ್ಲ ತಪ್ಪಿದ್ದಲ್ಲ. ಆದರೇನು? “ಹೊಕ್ಕ ಮನೆಯೆಲ್ಲ ಹೊಸ ಮನೆಯೆಂದೆ ಕರೆಯೋಣ; ಹಳೆಯ ಬಾಗಿಲಿಗೆ ಹೊಸ ತೋರಣ ಕಟ್ಟೋಣ; ಶಾಲೆ ಮಕ್ಕಳ ಹಾಗೆ ಹೊಸತನವ ಕಲಿಯುತ್ತ ಇನ್ನೊಂದು ವರುಷ ಕಳೆಯೋಣ…” ಎನ್ನುವ ಕವಿ, ಇದ್ದಿದ್ದನ್ನು ಒಪ್ಪಿಕೊಂಡು ಒಳ್ಳೆಯದರ ನಿರೀಕ್ಷೆಯಲ್ಲಿ ಕಳೆಯೋಣ ಎನ್ನುವ ಘನ ಸಂದೇಶ ನೀಡುತ್ತಾರೆ. ಕವನದ ಅಂತ್ಯದಲ್ಲಿ “ಕದವಿರದ, ಹೆಸರಿರದ ಇನ್ನೊಂದು ಮನೆಗೆ ಹೊಸತು ಹಳೆಯದು ಎಲ್ಲ ಯಾತ್ರೆಗೆ ಹೊರಟಿದ್ದೇವೆ… ಹೋದವರು ಹಿಂದಿರುಗಿ ಬರಲು ಹಾದಿಗಳಿಲ್ಲ; ಅದೇ ಕಡೆಯ ಮನೆ” ಎನ್ನುವ ಮೂಲಕ ಬದುಕಿನ ಆಧ್ಯಾತ್ಮವನ್ನೂ ಧ್ವನಿಸುತ್ತಾರೆ.
ಶ್ರೀನಿವಾಸ ಉಡುಪರ ಕವನವೊಂದರಲ್ಲಿ ಪುಟ್ಟ ಮಗುವೊಂದು ತನ್ನ ತಾಯಿಯಲ್ಲಿ ಕೇಳುತ್ತದೆ, ʻನಮ್ಮ ಮನೆ ಇದು ನಮ್ಮದೆ ಎಂದು ಅಮ್ಮಾ, ಹೇಳುವಿಯಲ್ಲ! ಯಾಕೊ ಏನೋ ನಿನ್ನ ಮಾತಲ್ಲಿ ನಂಬಿಕೆ ಬರೋದೆ ಇಲ್ಲ…” ನಮ್ಮೊಂದಿಗೆ ಹಲ್ಲಿ, ಜೇಡ, ಇರುವೆ, ಇಲಿಯಂಥ ಎಷ್ಟೊಂದು ಪ್ರಾಣಿಗಳಿಗೆ ಮನೆ ಎನಿಸಿಕೊಂಡಿದೆ ʻನಮ್ಮನೆʼ. ಹೀಗೆ ಎಲ್ಲರೊಂದಿಗೆ ಹಂಚಿಕೊಳ್ಳಬೇಕಾದ ʻಮನೆʼಯ ಬಗ್ಗೆ ಕೇವಲ ನಮ್ಮದೆಂಬ ಸ್ವಾರ್ಥ ಸರಿಯೇ ಎಂಬ ಪುಟ್ಟ ಮನದ ಮುಗ್ಧ ಪ್ರಶ್ನೆ ಎಂಥಾ ಸಾರ್ವಕಾಲಿಕ ಸತ್ಯವನ್ನು ಹೊಳೆಯಿಸುತ್ತದಲ್ಲ! ʻಅಲ್ಲಿದೆ ನಮ್ಮನೆ, ಇಲ್ಲಿ ಬಂದೆ ಸುಮ್ಮನೆʼ ಎಂಬಂಥ ದಾಸವಾಣಿಗಳು ಸಹ ʻಮನೆʼ ಎಂಬುದಕ್ಕೆ ಲೌಕಿಕ ಮತ್ತು ಪಾರಮಾರ್ಥಿಕ ಅರ್ಥಗಳನ್ನು ಧ್ವನಿಸುತ್ತವೆ.
ಭಾಷೆಯ ಜಾಯಮಾನವನ್ನು ಕೆದಕುತ್ತಾ ಹೋದಾಗಲೂ ʻಮನೆʼ ಎನ್ನುವುದರ ಸುತ್ತಮುತ್ತ ಇರುವಂಥ ನುಡಿಗಟ್ಟುಗಳ ಬಾಹುಳ್ಯ ಅಚ್ಚರಿ ಮೂಡಿಸುತ್ತದೆ. ಇತ್ತೀಚೆಗೆ ಮಳೆಯ ಅಬ್ಬರದ ವೀಡಿಯೊ ನೋಡಿದ್ದೆವಲ್ಲ, ಇಂಥ ʻಮನೆ ಹಾಳುʼ ಕೆಲಸ ಮಾಡಬಹುದೇ ಈ ಮಳೆ? ಈ ʻಮನೆ ಮುರಿದʼ ಚಿತ್ರಗಳನ್ನು ಕಂಡು ಎಷ್ಟೊಂದು ಮರುಗಿದ್ದೆವಲ್ಲ ನಾವು. ಮಳೆಯಿಂದಾಗಿ ʻಮನೆ ತೊಳೆದʼ ವಿದ್ಯಮಾನದಲ್ಲಿ ತಮ್ಮದೇನೂ ತಪ್ಪಿಲ್ಲ ಎಂದು ಬಡಾವಣೆಯ ಬಿಲ್ಡರ್‌ಗಳು ಹೇಳಿದ್ದರೂ, ʻನಮ್ಮನೆ ದೇವ್ರʼ ಗುಣ ನಮಗೆ ಗೊತ್ತಿಲ್ವಾ? ಊರು-ಕೇರಿ ಯಾವುದೇ ಇರಲಿ, ʻಮನೆ-ಮಾರುʼ ಮುಳುಗಿದವರ ಸಂಕಟ ಹೇಳಿ ಮುಗಿಯುವುದಕ್ಕಿಲ್ಲ. ʻಮನೆ ಮಗಳಂತೆʼ ಎಲ್ಲರಿಗೂ ಪ್ರಿಯವಾಗಿ ಹರಿಯುತ್ತಿದ್ದ ನದಿಗಳು ಇದ್ದಕ್ಕಿದ್ದಂತೆ ರೌದ್ರಾವತಾರ ತಾಳಿ ʻಮನೆ ಮುಳುಗಿಸುʼತ್ತವಲ್ಲ, ಇದಕ್ಕೇನು ಹೇಳುವುದು? ಎಲ್ಲೆಲ್ಲೋ ಇದ್ದ ʻಮನೆತನʼಗಳು ಪ್ರವಾಹದಲ್ಲಿ ಮುಳುಗಿ, ನಲುಗಿ ʻಮನೆ ಪಾಲಾದಂತೆʼ ಚದುರಿಹೋದಾಗ ಎರಗುವ ಸಂಕಟ ಒಂದೇ ಎರಡೇ? ʻಮನೆಯಾಕೆʼ ಇಲ್ಲದೆ ತಬ್ಬಲಿಯಾದ ಕಂದಮ್ಮಗಳು, ʻಮನೆಯಾಣ್ಮʼನಿಲ್ಲದೆ ಮರುಗುವ ಕುಟುಂಬಗಳು, ಹೀಗೆ ಖಾಲಿಯಾಗುವ ಮನ-ಮನೆಗಳನ್ನು ತುಂಬಿಸುವುದು ಹೇಗೆ? ಈ ʻಮನೆವಾಳ್ತೆʼಗಳು ನಡೆಯುವ ಬಗೆಯೆಂತು? ಹೀಗೆ ಹೇಳುತ್ತಾ ಹೋದರೆ ನುಡಿಗಟ್ಟುಗಳ ʻಮನೆಪಾಠʼವನ್ನು ಎಷ್ಟೂ ಮಾಡಬಹುದು.
ಎಲ್ಲಿಯೂ ನಿಲ್ಲದೆ, ಮನೆಯನೆಂದೂ ಕಟ್ಟದೆ, ಅನಿಕೇತನವಾಗಿ, ಅನಂತವಾಗಿ, ವಿಶ್ವಪಥಕ್ಕೆ ಸಲ್ಲಬೇಕೆಂದು ಕರೆ ನೀಡುವ ಕವಿಗೂ ತಮ್ಮ ಭೌತಿಕವಾದ ಮನೆಯ ಸೆಳೆತ ಮೀರಲಾಗದಿದ್ದಾಗ, ನಮ್ಮಂಥ ಹುಲುಮನುಜರ ಪಾಡೇನು ಎಂದರೆ ಯಾರೂ ಬೇಸರಿಸಲಿಕ್ಕಿಲ್ಲವಲ್ಲ. ಗೂಡು, ಗುಹೆ, ಬಿಲಗಳಿಂದ ಹಿಡಿದು ಅರಮನೆಯವರೆಗೂ, ಮನೆ ಮಾರುದ್ದವೇ ಇರಲಿ ಊರುದ್ದವೇ ಇರಲಿ, ನಮ್ಮನೆ ನಮಗಿಷ್ಟ.
(ಲೇಖಕರು ಹಿರಿಯ ಪತ್ರಕರ್ತರು, ಕತೆಗಾರ್ತಿ)