ಈ ಅಂಕಣವನ್ನು ಇಲ್ಲಿ ಓದಿ:
ಬಹು ದಿನಗಳಾಗಿದ್ದವು ಅಂಥದ್ದೊಂದು ಪಯಣ ಮಾಡಿ. ಅಂದಮಾತ್ರಕ್ಕೆ ಅದೇನು ಹಡಗಿನಲ್ಲಿ ಮಾಡಿದ ವಿಶ್ವಪರ್ಯಟನೆಯೋ, ಬೈಕನ್ನೇರಿ ನಡೆಸಿದ ಹಿಮಾಲಯದ ಸಾಹಸಯಾತ್ರೆಯೋ ಅಲ್ಲ; ಒಂದು ಸಾಮಾನ್ಯ ಬಸ್ ಪಯಣ. ಹೊಸ ವರ್ಷದ ಹುಚ್ಚು ಟ್ರಾಫಿಕ್‌ನಲ್ಲಿ ಕಾರೋಡಿಸುವ ಕಿರಿಕಿರಿಯಿಂದ ತಪ್ಪಿಸಿಕೊಳ್ಳುವುದಕ್ಕೆ, ಸಿಕ್ಕಿದ್ದೊಂದು ಬಸ್ (bus travel) ಹತ್ತಿದ್ದಾಗಿತ್ತು. ಕುಡಿದ ನೀರೂ ಅಲುಗಿಸದಂಥ ಬೃಹದಾಕಾರದ ಬಸ್‌ಗಳಲ್ಲಿ ಕೂತು, ಒರಗಿ, ಮಲಗಿ ಕಡೆಗೆ ಹೊರಳಾಡಿ ಪ್ರಯಾಣ ಮಾಡುವ ಈ ಕಾಲದಲ್ಲಿ, ಅವ್ಯಾವುದಕ್ಕೂ ಸರಿಗಟ್ಟದ ಕೆಲವು ಸಾಮಾನ್ಯ ಬಸ್ ಪಯಣಗಳು ನೆನಪಿನಲ್ಲಿ ಉಳಿದುಬಿಡುತ್ತವೆ. ಇತ್ತೀಚಿನ ಅಂಥದ್ದೇ ಬಸ್ ಪ್ರಯಾಣವೊಂದು ಬದುಕನ್ನು ಹಲವು ವರ್ಷಗಳ ಹಿಂದೋಡಿಸಿ, ಹಿಂದಿನ ಅನಿವಾರ್ಯ ಸಂಕಟವನ್ನು ಇಂದಿಗೆ ನೆನಪಿಸಿ ಕಚುಗುಳಿ ಇರಿಸಿದ್ದು ಹೌದು. ಅದೇ ನೆಪದಲ್ಲಿ ಹಳೆಯ ಬಸ್‌ಗಳಲ್ಲಿ ಹೀಗೊಂದು ಪಯಣ.
ʻಬಸ್ ಬಂತು ಬಸ್ಸು/ ಗೌರ್ಮೆಂಟ್ ಬಸ್ಸು/ ಕೆಂಪು ಬಿಳಿ ಬಣ್ಣ/ ನೋಡು ಬಾರಣ್ಣ…ʼ ಎಂಬ ಶಿಶು ಗೀತೆಯನ್ನು ನಮ್ಮ ಆಚೀಚಿನ ಅದೆಷ್ಟೋ ತಲೆಮಾರಿನ ಮಕ್ಕಳು ಹಾಡಿಯೇ ದೊಡ್ಡವರಾದವರು. ಇಂದಿನ ಮಕ್ಕಳಿಗೆ ಅಂಥ ಬಸ್ಸುಗಳು ಕಾಣುವುದಕ್ಕೆ ಸಿಗುವುದಿಲ್ಲ, ಅಂಥ ಶಿಶುಗೀತೆಗಳನ್ನು ಅವರು ಹಾಡುವುದೂ ಅಷ್ಟರಲ್ಲೇ ಇದೆ, ಇರಲಿ. ಎಷ್ಟು ದೂರ ಪ್ರಯಾಣಕ್ಕೂ ನಮಗೆಲ್ಲ ಆಗ ಇರುತ್ತಿದ್ದುದೇ ಈ ಕೆಂಪು-ಬಿಳಿ ಬಸ್ಸುಗಳು. ಬಸ್ಸಿನ ಶಿಶುಗೀತೆಯನ್ನು ಹಾಡುತ್ತಿದ್ದ ಕಾಲದಲ್ಲಿ ಬಸ್ ಪ್ರಯಾಣದ ಬಗ್ಗೆ ಹೆಚ್ಚಿನ ಕಲ್ಪನೆಗಳೇನು ಇರಲಿಲ್ಲ. ಜನರನ್ನು ಕರೆದೊಯ್ಯುವ ಕೆಂಪು-ಬಿಳಿ ಮೋಟಾರು, ನಾವು ಕಾದರೆ ಬಾರದಿರುವ ಮತ್ತು ನಾವು ಕೊಂಚ ತಡವಾಗಿ ಹೋದರೂ ನಮ್ಮನ್ನು ಬಿಟ್ಟು ಹೋಗುವ ಮೋಟಾರು ಎಂಬುದಷ್ಟೇ ತಿಳಿದಿತ್ತು. ಈ ಕಲ್ಪನೆ ಕ್ರಮೇಣ ವಿಸ್ತಾರಗೊಂಡು, ನಾವು ಹತ್ತುವ ನಿಲ್ದಾಣಕ್ಕೆ ಬರುವಾಗೆಲ್ಲ ತುಂಬಿರುವ ಬಸ್ಸು, ನಿಲ್ದಾಣ ಬಿಟ್ಟು ನಾಲ್ಕಾರು ಮಾರು ದೂರದಲ್ಲಿ ನಿಲ್ಲುವ ಬಸ್ಸು, ನಾವು ಮದುವೆಗೋ ಮುಂಜಿಗೋ ಸಿಂಗರಿಸಿಕೊಂಡು ಹೋಗುವಾಗ ಬಾರದೆ ಕೈಕೊಟ್ಟು, ನೆಂಟರು ನಮ್ಮನೆಗೆ ಬರುವಾಗ ತಪ್ಪದೆ ಕರೆತರುವ ಬಸ್ಸು… ಹೀಗೆಲ್ಲ ಅರಿವಿನ ಪರಿಧಿ ಹಿಗ್ಗತೊಡಗಿತು.
ಹೆತ್ತವರ ಮಡಿಲಲ್ಲಿ ಕೂತು ಪ್ರಯಾಣಿಸುವ ಕಾಲಕ್ಕೆ ರಾತ್ರಿ ಹೊರಟು ಬೆಳಗ್ಗೆ ಸೇರುವ ಊರುಗಳು ನಮಗೆ ಅರ್ಧ ತಾಸಿನ ಹಾದಿಯಲ್ಲೇ ಮುಗಿದಂತೆ ಅನಿಸುತ್ತಿತ್ತು. ಎಚ್ಚರವಿದ್ದರೆ ತಾನೆ ಏನಾದರೂ ತಿಳಿಯುತ್ತಿದ್ದುದು! ಆದರೆ ಹೈಸ್ಕೂಲಿಗೆ ಬರುವಷ್ಟರಲ್ಲಿ ಪಯಣವೆಂಬುದು ಹಲವು ರೀತಿಯಲ್ಲಿ ಅನುಭವಕ್ಕೆ ಬರತೊಡಗಿತು. ಅದರಲ್ಲೂ ವರ್ಷಕ್ಕೆ ನಾಲ್ಕಾರು ಬಾರಿ ಮೈಸೂರು-ಶಿರಸಿಯ ನಡುವಿನ ಪ್ರಯಾಣ ತಪ್ಪದೆ ಇರುತ್ತಿದ್ದುದರಿಂದ, ಈ ಬಲವಂತದ ಮಾಘ ಸ್ನಾನಕ್ಕೆ ಖುಷಿ ಪಡದಿದ್ದರೆ ದಾರಿ ಸಾಗುತ್ತಿರಲಿಲ್ಲ. ಹಗಲು ಬಸ್ ಪ್ರಯಾಣಗಳು ಲೋಕ ತೋರಿಸುತ್ತಿದುದು ಹೌದಾದರೂ ಒಂದಿಷ್ಟು ಪ್ರಯಾಸಗಳೂ ಗಂಟು ಬೀಳುತ್ತಿದ್ದವು. ಹಸಿವು, ನೀರಡಿಕೆ, ಬಾತ್ರೂಂ ಸಂಕಷ್ಟಗಳನ್ನು ನಿವಾರಿಸುವುದು ಸುಲಭವಿರಲಿಲ್ಲ. ಇನ್ನು ಪ್ರಯಾಣದ ದಾರಿಯಲ್ಲಿ ಘಟ್ಟಗಳೇನಾದರೂ ಇದ್ದರೆ, ಘಟ್ಟದ ಇನ್ನೊಂದು ತುದಿ ತಲುಪುವಷ್ಟರಲ್ಲಿ ಬಸ್ಸಿನ ಹೊರಭಾಗದ ಬಣ್ಣ ಮತ್ತು ಸ್ವರೂಪಗಳೇ ಬದಲಾಗುವ ಮಟ್ಟಿಗೆ, ಅಂದಿನದ್ದು ನಿಸ್ಸಂಶಯವಾಗಿ ವಾಂತಿ-ವಿಹಾರ್ ಯಾತ್ರೆ! ಅಲ್ಲಿಯವರೆಗಿನ ಪ್ರಯಾಣದಲ್ಲಿ ಸುಸೂತ್ರ ಇರುತ್ತಿದ್ದ ಜನರ ಜಠರಗಳು, ತಿರ್ಕಿಮುರ್ಕಿ ರಸ್ತೆಗಳು ಪ್ರಾರಂಭವಾಗುತ್ತಿದ್ದಂತೆ, ಲಾವಾ ಕಾರುವ ಅಗ್ನಿ ಪರ್ವತವನ್ನು ನೆನಪಿಸುತ್ತಿದ್ದವು. ನದಿಯಾಳದ ಸುಳಿಗಳಂತೆ ತಿರುಗುತ್ತ, ಒಂದೆರಡು ದಿನಗಳ ಹಿಂದೆ ತಿಂದಿದ್ದನ್ನೂ ಹೊರಹಾಕಿ ಬಿಡುತ್ತಿದ್ದವು. ಕಿಟಕಿ ತೆಗೆದರೂ ಕಷ್ಟ, ಬಿಟ್ಟರೂ ಕಷ್ಟ ಎಂಬಂತಾಗಿ, ಹಗಲು ಪ್ರಯಾಣದ ಸಹವಾಸವೇ ಸಾಕು ಎನಿಸಿಬಿಡುತ್ತಿತ್ತು.
ಇದಕ್ಕೆಲ್ಲ ಹೋಲಿಸಿದರೆ ರಾತ್ರಿ ಪ್ರಯಾಣಗಳು ಕೆಲವು ಹೆಚ್ಚುವರಿ ಅನುಕೂಲಗಳನ್ನು ಕಲ್ಪಿಸುತ್ತಿದ್ದವು. ಈಗಿನಂತೆ ಸ್ಲೀಪರ್ಗಳ ಕಲ್ಪನೆಯೂ ಇಲ್ಲದ ಕಾಲವದು. ಆದರೂ ನಿದ್ದೆ ಮಾಡುವುದಕ್ಕೆ ಮುಂದಿನ ಸೀಟಿನ ಕಂಬಿ, ಕಿಟಕಿಯ ಗಾಜು, ಪಕ್ಕದವರ ಭುಜ- ಹೀಗೆ ಯಾವುದಾದರೊಂದು ಸಿಕ್ಕೇ ಸಿಗುತ್ತಿತ್ತು. ಈಗಿನಂತೆ ಮೆತ್ತೆಯಲ್ಲಿ ಮಲಗಿದರೂ ನಿದ್ದೆಯಿಲ್ಲದೆ ಹೊರಳಾಡುವವರ ಕಾಲವೇ ಅದಾಗಿರಲಿಲ್ಲ. ಜೊತೆಗೆ ನಿದ್ದೆಗೆಡಿಸುವುದಕ್ಕೆ ಮೊಬೈಲು, ಕಂಪ್ಯೂಟರಿನಂಥ ಹಾಳುಮೂಳುಗಳು ಇರಲೂ ಇಲ್ಲವಲ್ಲ.
ಇದಕ್ಕಿಂತ ಆಸಕ್ತಿಕರ ಸಂಗತಿಯೆಂದರೆ ನಿದ್ದೆ ಹಾಳು ಮಾಡುವಂಥ ಎಲ್ಲಾ ಸಂಗತಿಗಳಿಗೂ ಅತೀತರಾಗಿ ಕೆಲವರು ನಿದ್ರಿಸುತ್ತಿದ್ದ ಪರಿ. ಕಾರಣ, ರಾತ್ರಿಯ ಪ್ರಯಾಣವಾದರೂ, ದಾರಿಯಲ್ಲಿ ಸಿಗುತ್ತಿದ್ದ ಪ್ರತಿಯೊಂದು ಊರಿನ ಬಸ್ ನಿಲ್ದಾಣದೊಳಗೂ ಬಸ್ಸುಗಳಿಗೆ ಒಂದೆರಡು ನಿಮಿಷಗಳ ಸ್ಟಾಪು ಇದ್ದೇ ಇರುತ್ತಿತ್ತು. ಬಸ್ಸು ಬಂದು ನಿಲ್ಲುತ್ತಿದ್ದಂತೆ ಆ ರಾತ್ರಿಯಲ್ಲೂ ʻಎಳ್ನೀರ್ ಎಳ್ನೀರ್ʼ ಎಂಬ ಕೂಗು, ʻಗರ್ಮಾಗರಂ ಕಳ್ಳೇಕಾಯಿʼ ಎಂಬ ರಾಗಗಳೆಲ್ಲಾ ತಾರಸ್ಥಾಯಿಯಲ್ಲೇ ಇರುತ್ತಿದ್ದವು. ಇದಿಷ್ಟರ ನಡುವೆ ನಿದ್ದೆಯಲ್ಲೇ ಕಿಟಾರನೆ ಕಿರುಚುವ ಯಾವುದೋ ಕಂದಮ್ಮ, ಬಸ್ಸಿನಲ್ಲಿದ್ದ ಉಳಿದ ಕೂಸುಗಳಿಗೂ ಅಳಲು ಸ್ಫೂರ್ತಿ ತುಂಬುತ್ತಿತ್ತು. ಅಲ್ಲೊಂದಿಲ್ಲೊಂದು ಕಂಪೊಗೆವ ಎಣ್ಣೆಪಾರ್ಟಿಗಳು, ಎಲೆ ಅಡಿಕೆಯ ಪಿಚಕಾರಿಗಳು, ಹೃದಯವಿದ್ರಾವಕವಾಗಿ ಶಬ್ದ ಮಾಡುತ್ತಿದ್ದ ಬಸ್ಸಿನ ಬ್ರೇಕು, ಕಿಟಕಿಯ ಗಾಜು ಹಾಕಬೇಕೇ ಅಥವಾ ತೆಗೆಯಬೇಕೇ ಎಂಬುದಕ್ಕಾಗಿ ನಡೆಯುತ್ತಿದ್ದ ವಾಗ್ವಾದಗಳು- ಇಂಥ ಯಾವುದೇ ಆಗುಹೋಗುಗಳನ್ನು ಮೀರಿ ಕೆಲವರು ಸಿಂಹನಾದವನ್ನೂ ನಾಚಿಸುವಂತೆ ಗೊರೆಯುತ್ತಿದ್ದರು. ಇನ್ನು ಘಟ್ಟದ ದಾರಿಯಾದರಂತೂ, ಯಾರೊಬ್ಬರೂ ಅವರ ಸೀಟಿನಲ್ಲಿ ಕೂರುವ ಸಾಧ್ಯತೆಯೇ ಇರಲಿಲ್ಲ. ಇಷ್ಟಾದರೂ ಆ ಕೆಲವರ ನಿದ್ರೆಗೆ ಭಂಗವಾಗುತ್ತಿರಲಿಲ್ಲ. ನಿಜಕ್ಕೂ, ಎಂಥಾ ಸಂತೆಯಲ್ಲೂ ಸುಖ ನಿದ್ದೆ ಮಾಡಬಲ್ಲವರೇ ಹೆಚ್ಚಿದ್ದ ಸುಭಿಕ್ಷೆಯ ದಿನಗಳವು.
ಊರೂರುಗಳ ನಡುವಿನ ಇಂಥಾ ಹತ್ತಾರು ಛೋಟಾ ಸ್ಟಾಪುಗಳ ನಡುವೆ ಹತ್ತಿಪ್ಪತ್ತು ನಿಮಿಷಗಳ ದೊಡ್ಡದೊಂದು ಸ್ಟಾಪೂ ಇರುತ್ತಿತ್ತು. ಒಂದೋ ಅರ್ಧ ಹಾದಿ ಕಳೆಯುವ ಸಮೀಪದಲ್ಲಿದ್ದ ದೊಡ್ಡ ಊರಿನಲ್ಲಿ ಅಥವಾ ಘಟ್ಟ ಹತ್ತುವ ಮೊದಲಿನ ಇಲ್ಲವೇ ಇಳಿದ ನಂತರ ದೊರೆಯುವ ಸಣ್ಣ ಊರುಗಳಾದರೂ ಸರಿ, ಅಲ್ಲೊಂದು ಸರಿಯಾದ ಸ್ಟಾಪು ಇರಲೇಬೇಕು. ಇಂಥ ಸ್ಟಾಪುಗಳಲ್ಲಿನ ಲೋಕಗಳ ರಂಗು ರಾತ್ರಿಯ ಕತ್ತಲೆಯನ್ನೂ ಮೀರಿಸುವಂಥದ್ದು. ಹಗಲಿಗೆ ಗುರುತೇ ಇಲ್ಲದಂತೆ ಮಲಗುವ ರಸ್ತೆಯಂಚಿನ ಸಣ್ಣ ಊರಿನಲ್ಲಿ ರಾತ್ರಿಡೀ ಎಚ್ಚರವಿರುವ ಬೆಳ್ಳನೆಯ ಬೆಳಕಿನ ಒಂದೆರಡು ಸಣ್ಣ ಹೊಟೆಲ್ಗಳು, ಬಸ್ ಇಳಿದವರನ್ನು ನಿದ್ದೆಯಿಂದ ಎಬ್ಬಿಸುತ್ತಿದ್ದ ಯಾವ್ಯಾವುದೋ ಹಿಂದಿ ಹಾಡುಗಳು, ದಾರಿಹೋಕರ ಹಸಿವೆ ತಣಿಸಲು ಸುಟ್ಟುಕೊಂಡು ಸಿದ್ಧವಾಗುವ ಬಿಸಿಬಿಸಿ ನೀರು ದೋಸೆಗಳು, ಕೊಟಕೊಟ ಶಬ್ದದೊಂದಿಗೆ ಕಾವಲಿಯಲ್ಲಿ ಚುಂಯ್ಗುಡುವ ಆಮ್ಲೆಟ್ಗಳು, ಪಕ್ಕದಲ್ಲೇ ಹೊಗೆಯಾಡುವ ಕರಿಕಾಪಿ ಅಥವಾ ಸಿಹಿ ಚಹಾ, ಎಷ್ಟೊ ವರ್ಷಗಳಿಂದ ನಿರಂತರವಾಗಿ ಕರಿಯುತ್ತಾ ಗ್ರೀಸಿನಂತಾದ ಎಣ್ಣೆಯ ಕಮಟಿನ ಬಜ್ಜಿಯ ಗುಡ್ಡೆ, ಹೊರಗೆ ಬೆಳ್ಳನೆಯ ಬೆಳಕಿದ್ದರೂ, ಒಳಗಿರುವ ನಾಲ್ಕಾರು ಟೇಬಲ್ಲು-ಕುರ್ಚಿಗಳ ಸಣ್ಣ ಆವಾರದಲ್ಲಿ ಮಾತ್ರ ಮಂದ ಬೆಳಕು. ಇದಿಷ್ಟರ ಜೊತೆಗೆ ಆಗೀಗ ಬಂದು ನಿಲ್ಲುವ ಬಸ್ಸಿನ ಹೊಗೆ ವಾಸನೆ, ಗಡಸು ಧ್ವನಿಗಳು, ಬಳೆ/ ಗೆಜ್ಜೆ ಶಬ್ದ, ಪಿಸು ಮಾತು…!
ಇದನ್ನೂ ಓದಿ: ದಶಮುಖ ಅಂಕಣ: ಕಾಲನೆಂಬ ಮಾಯ್ಕಾರ…!
ಇಂಥ ಹೊತ್ತಿನಲ್ಲಿ ಮಾತ್ರ ಲೋಕದ ಗಂಡಸರ ಮೇಲೆಲ್ಲ ಅಸೂಯೆ ಮೂಡುತ್ತಿದ್ದುದು ಸುಳ್ಳಲ್ಲ. ಕಾರಣ, ಅವರ ಪಾಲಿಗೆ ಇಡೀ ಜಗತ್ತೇ ಮೂತ್ರಾಲಯವಾಗುತ್ತದಲ್ಲ! ಜಗತ್ತು ಎಷ್ಟೇ ಬದಲಾದರೂ ನಮ್ಮ ಇಂಥ ಕೆಲವು ಶೀಲಗಳು ಮಾತ್ರ ಬದಲಾಗುವುದೇ ಇಲ್ಲ. ಬಾತ್ ರೂಂ ವಿಷಯದಲ್ಲಿ ಹಿಂದಿನ ಮತ್ತು ಇಂದಿನ ಅನುಭವಗಳಲ್ಲಿ ಹೆಚ್ಚು ವ್ಯತ್ಯಾಸವಿಲ್ಲ. ಅಂದರೆ, ವಾಸನೆಯಿಂದಲೇ ತಮ್ಮಿರವನ್ನು ಸೂಚಿಸುವ ಅಂದಿನ ಸೌಲಭ್ಯವನ್ನು ಇಂದಿನ ಬಾತ್ ರೂಂಗಳು ಸಹ ನಿಸ್ಸಂದೇಹವಾಗಿ ನೀಡುತ್ತವೆ. ಇಂಥ ಬಹಳಷ್ಟು ಹಳೆಯ ಅನುಭವಗಳನ್ನು ಇತ್ತೀಚಿನ ಬಸ್ ಪ್ರಯಾಣ ಹಸಿರಾಗಿಸಿತ್ತು. ಜೊತೆಗೆ, ಅಳುವುದಕ್ಕೆ ನೂರು ಕಾರಣಗಳಿದ್ದರೆ ನಗುವುದಕ್ಕೆ ನೂರೊಂದನೆಯದು ಇದ್ದೇ ಇರುತ್ತದೆಂಬ ಮಾತು ಈ ಹೊತ್ತಲ್ಲಿ ನೆನಪಾಗಿದ್ದು ಸತ್ಯ. ಅಪರಿಚಿತ ಊರಿನಲ್ಲಿ ನಮಗಿದ್ದ ಒಂದು ಸಣ್ಣ ವಾಷ್‌ರೂಂ ಎದುರಿಗೆ ಮಾರುದ್ದದ ಸರದಿಯಲ್ಲಿ ಕಾಯುತ್ತಾ ನಿಂತಿದ್ದಾಗ, ಬದಿಯಲ್ಲಿನ ಮಣ್ಣು ಗುಡ್ಡೆ ಕೆದರಿದ ಬೆಕ್ಕೊಂದು ತನ್ನ ಶೌಚವನ್ನು ಸುಳಿವಿಲ್ಲದಂತೆ ಸ್ವಚ್ಛ ಮಾಡುತ್ತಿತ್ತು. ಬಣ್ಣ ಮಾಸಿದ ಆ ಬೆಕ್ಕು ನಿಜಕ್ಕೂ ಮುದ್ದಿಸುವಷ್ಟು ಸುಂದರವಾಗಿ ಕಾಣುತ್ತಿತ್ತು ಆ ಹೊತ್ತಲ್ಲಿ.
ಹಳೆಯ ಕಾಲದ ಆ ಕೆಂಪು ಬಸ್ ಈಗಿಲ್ಲದಿದ್ದರೂ, ಅವುಗಳ ಪಯಣದ ನೆನಪು ಮಾಸುವಂಥದ್ದಲ್ಲ. ಸಾಗರದಾಚೆಯ ಪಯಣವನ್ನು ಕಂಡ ಮೇಲೂ ನಮ್ಮ ವಿನಮ್ರ ಕೆಂಪು ಬಸ್ಸುಗಳು ಹಲವು ಬಗೆಯಲ್ಲಿ ಕಾಡಿದ್ದಿವೆ. ಇಬ್ಬರ ಸೀಟಿನಲ್ಲಿ ನಾಲ್ವರನ್ನು ಕೂರಿಸಿಕೊಳ್ಳಬಹುದಾದ ಹೃದಯ ವೈಶಾಲ್ಯತೆ, ಎಲ್ಲಿಂದಲೋ ಕಳಿಸುತ್ತಿದ್ದ ಸಣ್ಣ ಔಷಧಿ ಡಬ್ಬಿಯನ್ನು ಜೋಪಾನವಾಗಿ ಸಂಬಂಧಿಸಿದವರ ಕೈಗಿಡುತ್ತಿದ್ದ ಚಾಲಕ, ಯಾರದ್ದೋ ಮಗುವನ್ನು ಯಾರೋ ಕೂರಿಸಿಕೊಂಡು, ಇಳಿಯುವಾಗ ಮಗುವನ್ನು ಸುರಕ್ಷಿತವಾಗಿ ಹಿಂದಿರುಗಿಸುತ್ತಿದ್ದ ಕಕ್ಕುಲಾತಿ- ಇಂಥ ಹತ್ತಾರು ಸನ್ನಿವೇಶಗಳು, ನಮ್ಮ ಪಯಣ ಕಷ್ಟವಾಗದಂತೆ ಮಾಡುತ್ತಿದ್ದವು; ಹಾದಿ ಸಾಗುವಂತೆ ನೋಡಿಕೊಳ್ಳುತ್ತಿದ್ದವು. “ಮುಂದೆ ಕಾದಿಹ ನೂರು ಹರುಷಗಳ ಕಣ್ ತೆರೆದು/ ಪಯಣವೋ ನಿಲುಗಡೆಯೊ ನೀನರಿಯದಂತಿರಲಿ” ಎಂಬ ಕವಿವಾಣಿಯಂತೆ, ಪಯಣ ಹೊಸದೊ, ಹಳೆಯದೊ, ಯಾವುದೋ- ಅಂತೂ ನಿಲ್ಲದೆ ಸಾಗುತ್ತಿರಲಿ.
ಇದನ್ನೂ ಓದಿ: ದಶಮುಖ ಅಂಕಣ: ಬೆಳಗೆಂಬ ಬೆರಗು!