Site icon Vistara News

ದಶಮುಖ ಅಂಕಣ: ಏನು ಹೇಳುತ್ತಿವೆ ಈ ಪ್ರತಿಮೆಗಳು?

statues

ಈ ಅಂಕಣವನ್ನು ಇಲ್ಲಿ ಕೇಳಿ:

https://vistaranews.com/wp-content/uploads/2023/03/dasha-1.mp3

ಕೇಳಿದ ಕೂಡಲೆ ವಿಗ್ರಹದಂತೆ ನಿಲ್ಲುವಂಥ ಗಂಭೀರ ವಿಷಯವೇನಲ್ಲ ಇದು. ಆದರೂ ರಾಜ್ಯದೆಲ್ಲೆಡೆ ವಿಗ್ರಹಗಳು ಸದ್ದು ಮಾಡುತ್ತಿರುವುದು ಹೌದು. ಚುನಾವಣೆ ಹತ್ತಿರವಾಗುತ್ತಿದ್ದಂತೆ, ಎಷ್ಟೊಂದು ಸಮುದಾಯದವರಿಗೆ ತಂತಮ್ಮ ನೇತಾರರ ಮೇಲೆ ಪ್ರೀತಿ ಉಕ್ಕಿಹರಿದು, ಅವರನ್ನು ಮನದಲ್ಲಿ ಮೂರ್ತರೂಪವಾಗಿ ನಿಲ್ಲಿಸಿಕೊಳ್ಳದಿದ್ದರೇನು, ರಸ್ತೆ ಮೇಲಾದರೂ ಪ್ರತಿಷ್ಠಾಪನೆ ಮಾಡಿಬಿಡೋಣ ಎಂಬ ಉಮೇದು ಅರ್ಥವಾಗುವಂಥದ್ದೇ, ಪಾಪ! ಹೇಳುವುದಕ್ಕೆ ಹೋದರೆ ಒಂದೆರಡು ಮೂರ್ತಿಗಳೇ? ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿರುವ ನಾಡಪ್ರಭು ಕೆಂಪೇಗೌಡರ ಭವ್ಯ ಮೂರ್ತಿ, ಬೆಳಗಾವಿಯ ರಾಜಹಂಸಗಡ ಕೋಟೆಯಲ್ಲಿನ ಶಿವಾಜಿ ಪ್ರತಿಮೆ, ಅದೇ ಜಿಲ್ಲೆಯ ಪೀರನವಾಡಿಯಲ್ಲಿನ  ಸಂಗೊಳ್ಳಿ ರಾಯಣ್ಣನ ಪ್ರತಿಮೆ, ಕಾರ್ಕಳ ತಾಲೂಕಿನ ಉಮಿಕಲ್‌ ಬೆಟ್ಟದ ಮೇಲೆ ನಿಲ್ಲಿಸಿರುವ ಪರಶುರಾಮನ ಕಂಚಿನ ವಿಗ್ರಹ, ಚೆನ್ನೈನಲ್ಲಿ ಸರ್ವಜ್ಞನ ಪ್ರತಿಮೆ- ಹೀಗೆ ಬಹಳಷ್ಟಿವೆ. ಮಾತ್ರವಲ್ಲ, ಬೆಳವಡಿ ಮಲ್ಲಮ್ಮ, ಕೋಟಿ-ಚೆನ್ನಯ ಮುಂತಾದ ಇನ್ನಷ್ಟು ಪ್ರತಿಮೆಗಳಿಗೆ ಬೇಡಿಕೆಯೂ ಇದೆ.

ರಾಜಕೀಯ ಕಾರಣಗಳನ್ನು ಅದರಷ್ಟಕ್ಕೆ ಬಿಟ್ಹಾಕೋಣ ಈಗೊಂದು ಸಾರಿ. ಅದರ ಹೊರತಾಗಿ, ಯಾವುದಾದರೂ ಮೂರ್ತಿ ಅಥವಾ ವಿಗ್ರಹ ಇಲ್ಲವೇ ಪ್ರತಿಮೆ ಯಾ ಆ ಮಾದರಿಯ ಬಿಂಬಗಳು ನಮಗೇಕೆ ಮುಖ್ಯವಾಗುತ್ತವೆ? ಏನು ಕಾಣುತ್ತೇವೆ ನಾವದರಲ್ಲಿ? ನಮ್ಮ ಮನದಲ್ಲಿ ಸುಪ್ತವಾಗಿರುವ ಅಭಿಮಾನವನ್ನು ಈ ಮೂಲಕ ನಾವು ಮೆರೆಯುತ್ತೇವೆಯೇ? ಅದುಮಿಕೊಳ್ಳಲಾಗದ ಭಕ್ತಿಯನ್ನು ಪ್ರಕಟಿಸುವುದಕ್ಕೆ ಅವು ನಮಗೆ ಅಗತ್ಯವೇ? ನಮ್ಮ ಕಲಾಸ್ವಾದನೆ ಈ ಮೂಲಕ ಸಂಪನ್ನಗೊಳ್ಳುವುದೇ? ನಂನಮ್ಮ ಪಂಗಡ-ಜಾತಿ-ಧರ್ಮ ಮುಂತಾದ ಗೋತ್ರಪ್ರವರಗಳಿಗೆ ಈ ಪ್ರತಿಮೆಗಳೇ ದಿಕ್ಕೇ? ಸಮಾನತೆ, ಸಮನ್ವಯತೆ ಇತ್ಯಾದಿ ಸಂದೇಶಗಳನ್ನು ಸಾರುವಂಥ ಮುಕ್ತ ಪ್ರಕಟಣೆಯೇ ಇದು? ಎಂದೋ ಇದ್ದವರನ್ನು ಇಂದು ಸ್ಮರಿಸಿಕೊಳ್ಳುವುದಕ್ಕೆ ಇಂಥ ಬಿಂಬಗಳು ನಮಗೆ ಸಹಕಾರಿಗಳೇ? ಸಾರ್ವಜನಿಕ ಬದುಕಿನಲ್ಲಿ ಈ ಪ್ರತಿಮೆಗಳ ಔಚಿತ್ಯಗಳು ಏನೇ ಇದ್ದರೂ, ವೈಯಕ್ತಿಕವಾಗಿ ಈ ಪ್ರತಿಮೆಗಳು ನಮ್ಮ ಪಾಲಿಗೆ ಏನನ್ನು ಪ್ರತಿನಿಧಿಸುತ್ತವೆ?

ಅಸ್ತಿತ್ವದಲ್ಲಿ ಇರುವ ಅಥವಾ ಇಲ್ಲದಿರುವ ಯಾವುದನ್ನಾದರೂ ಆರಾಧಿಸುವುದಕ್ಕೆ, ಅದಕ್ಕೊಂದು ಭೌತಿಕ ರೂಪವನ್ನು ಕೊಡುವ ಪರಿಪಾಠ ಇಂದು-ನಿನ್ನೆಯದಲ್ಲ. ಮೂರ್ತಿ ಅಥವಾ ವಿಗ್ರಹಗಳ ಕಲ್ಪನೆ ಬಹಳ ಪ್ರಾಚೀನ ಕಾಲದ್ದು. ಆರಾಧನೆಯೇ ಪ್ರಧಾನವಾದಲ್ಲಿ, ಸುಂದರವಾದ ಭೌತಿಕ ರೂಪ, ಬಣ್ಣ, ಗುಣ ಇತ್ಯಾದಿಗಳ ಅಗತ್ಯವೂ ಪ್ರಧಾನವೆನಿಸಿದಂತಿಲ್ಲ; ಕಲ್ಲು, ಮರ, ನದಿ, ಬೆಟ್ಟ, ಪ್ರಾಣಿ ಹೀಗೆ ಯಾವುದನ್ನೂ ಆರಾಧಿಸುತ್ತಿದ್ದ ಉದಾಹರಣೆಗಳಿವೆ. ಅಂತೂ, ನಿವೇದನೆಗೊಂದು ಮೂರ್ತ ರೂಪ ಬೇಕು. ಹಾಗಾದರೆ ಮೂರ್ತಿ ಪ್ರತಿಷ್ಠಾಪನೆಯನ್ನು ಮಾನುಷ-ಸಹಜ ಪ್ರವೃತ್ತಿ ಎಂದು ತೀರ್ಮಾನಿಸೋಣವೇ? ಭಕ್ತಿ, ರಕ್ತಿಗಳಿಗೆ ಸಾಕಾರ ರೂಪವೊಂದು ಬೇಕು ಎನ್ನೋಣವೇ? ಅದೇ ಹೌದಾದರೆ, ನಿರಾಕಾರಕ್ಕೆ, ಅಮೂರ್ತಕ್ಕೆ ಎರಗುವ ಧರ್ಮ, ತತ್ವ, ಚಿಂತನೆಗಳಿಗೆ ಬರವಿಲ್ಲವಲ್ಲ. ಭಾವವಿದ್ದಲ್ಲಿ ಭಗವಂತ ಎಂದು ಭಾವಿಸುವವರೆಷ್ಟೊ ಇದ್ದಾರಲ್ಲ. ಇರಲಿ, ಅದನ್ನು ಅವರವರ ಭಾವಕ್ಕೆ ಬಿಡುವುದು ಕ್ಷೇಮ.

ಚಿತ್ರ-ತುರಗ ನ್ಯಾಯ ಈ ಹೊತ್ತಿನಲ್ಲಿ ನೆನಪಾಗುತ್ತಿದೆ. ಅಂದರೆ, ಕುದುರೆಯ ಚಿತ್ರವೊಂದು ಮುಂದಿದೆ. ಚಿತ್ರದಲ್ಲಿರುವುದೇನು ಎಂದು ಕೇಳಿದರೆ- ಕುದುರೆ. ಹಾಗಾದರೆ ಕುದುರೆಯೆಂದರೆ ಅದೇ ಹೌದೇ ಎಂದು ಕೇಳಿದರೆ- ಅಲ್ಲ, ಅದು ನಿಜವಾದ ಕುದರೆಯಲ್ಲ. ಆದರೂ ಅದು ಕುದುರೆಯಂತೂ ಹೌದು. ಹೌದೇ ಎಂದು ಕೇಳಿದರೆ ಅಲ್ಲ! ಇಂಥದ್ದೇ ತರ್ಕವನ್ನು ಬಹಳಷ್ಟು ಕಡೆಗಳಲ್ಲಿ ಅನ್ವಯಿಸಬಹುದು. ಕೈಯಲ್ಲಿ ಕೊಳಲು, ತಲೆಯಲ್ಲಿ ನವಿಲು ಗರಿ ಇಟ್ಟುಕೊಂಡು ರಂಗದ ಮೇಲಿರುವವ ಯಾರು ಎಂದು ಕೇಳಿದರೆ, ʻಕೃಷ್ಣʼ. ಅರೆ, ಕೃಷ್ಣನೆಂದರೆ ಅವನೇಯಾ ಎಂದು ಕೇಳಿದರೆ ಅಲ್ಲ. ಹಾಗಾದರೆ, ಅವನು ಕೃಷ್ಣನಲ್ಲವೇ ಎಂದು ಕೇಳಿದರೆ, ಹೌದು ಅವನೇ! ಇದನ್ನೇ ಸ್ವಲ್ಪ ವಿಸ್ತರಿಸಿದರೆ, ತಾನು ಕೃಷ್ಣ ಎಂದುಕೊಂಡ ಮಾತ್ರಕ್ಕೆ ಪಾತ್ರಧಾರಿಯೇನೂ ಕೃಷ್ಣನಾಗುವುದಿಲ್ಲ ಎನ್ನುವುದು ಎಷ್ಟು ಸತ್ಯವೋ, ತಾನು ಕೃಷ್ಣನಲ್ಲ ಎಂದು ಆ ಪಾತ್ರಧಾರಿ ತಿಳಿದುಕೊಂಡರೆ ಪಾತ್ರ ಮಾಡಲೇ ಆಗುವುದಿಲ್ಲ ಎಂಬುದೂ ಅಷ್ಟೇ ಸತ್ಯ. ಈಗ ಮತ್ತದೇ ಪ್ರಶ್ನೆ- ಹಾಗಾದರೆ ಅವನು ಕೃಷ್ಣನೇ? ನಾವು ಆರಾಧಿಸುವ ವಿಗ್ರಹಗಳಿಗೂ ಇದನ್ನು ಅನ್ವಯಿಸಬಹುದೇ? ಉತ್ತರ ನಂನಮ್ಮ ಭಾವಕ್ಕೆ ಬಿಟ್ಟಿದ್ದು.

ಮೂರ್ತಿ ಅಥವಾ ಶಿಲ್ಪಗಳ ಮೂಲಕ ಕಲೆಯನ್ನು ಕಾಣುತ್ತೇವೆಯೇ? ʻಹೌದುʼ ಎನ್ನುವ ಉತ್ತರ ಹಲವಾರು ದಿಕ್ಕುಗಳಿಂದ ಬಂದೀತು. ಬೇಲೂರು, ಹಳೇಬೀಡಿನ ಶಿಲಾದೇಗುಲಗಳು ಕುವೆಂಪು ಅವರ ಕಣ್ಣಿಗೆ ಕಂಡಿದ್ದು ಹೇಗೆ ಎಂದು ನೋಡಿದರೆ, “ಬಾಗಿಲೊಳು ಕೈ ಮುಗಿದು ಒಳಗೆ ಬಾ ಯಾತ್ರಿಕನೆ/ ಶಿಲೆಯಲ್ಲವೀ ಗುಡಿಯು ಕಲೆಯ ಬಲೆಯು” ಎನ್ನುತ್ತಾರೆ ಅವರು. ಮಾತ್ರವಲ್ಲ, ಅಲ್ಲಿನ ಶಿಲೆಗಳು ರಾಮಾಯಣ, ಭಾರತವನ್ನೆಲ್ಲಾ ಬೋಧಿಸಿದಂತೆ ಭಾಸವಾಗುವುದರ ಜೊತೆಜೊತೆಗೆ, “ಕುಶಲತೆಗೆ ಬೆರಗಾಗಿ ಮೂಕವಾಗಿದೆ ಕಾಲವಿಲ್ಲಿ” ಎಂದು ತಮಗಾದ ರಸಾವಿಷ್ಕಾರವನ್ನು ಹಂಚಿಕೊಳ್ಳುತ್ತಾರೆ. ನೂರು ದೇವರುಗಳನೆಲ್ಲಾ ಆಚೆ ನೂಕಿ, ಮನೆಯನೆಂದೂ ಕಟ್ಟದೆ, ಕೊನೆಯನೆಂದೂ ಮುಟ್ಟದೆ, ಸದಾ ಅನಂತವೇ ಆಗಿರಬೇಕೆಂದು ಬಯಸುವ ಕವಿಗೆ ಒಂದು ಹಂತದಲ್ಲಿ, “ಭಗವಂತನಾನಂದ ರೂಪುಗೊಂಡಿಹುದಿಲ್ಲಿ, ರಸಿಕತೆಯ ಕಡಲುಕ್ಕಿ ಹರಿಹುದಿಲ್ಲಿ” ಎನಿಸುತ್ತದೆ. ಬೇಲೂರಿನ ಶಿಲಾಬಾಲಿಕೆಯರನ್ನೇ ಕೇಂದ್ರವಾಗಿರಿಸಿಕೊಂಡು, ದಾರ್ಶನಿಕ ಕವಿ ಡಿ.ವಿ. ಗುಂಡಪ್ಪನವರು ರಚಿಸಿದ ʻಅಂತಃಪುರ ಗೀತೆಗಳʼನ್ನು ಮರೆಯುವುದಾದರೂ ಹೇಗೆ?

ವಿಜಯನಗರದ ಹೆಸರು ಕೇಳಿದೊಡನೆ ಹಂಪೆಯೂ ನೆನಪಾಗುತ್ತದೆ. ಈ ಬಗ್ಗೆ ಗೋಪಾಲಕೃಷ್ಣ ಅಡಿಗರ ಕವನವೊಂದು ಹೀಗೆ ಹೇಳುತ್ತದೆ-

“ಆರ್ನೂರು ವರ್ಷಗಳ ಜವನಿಕೆಯ ತೆರೆದು ನಮ್ಮಾ ರಾಜ್ಯದಾ ವಿಭವದುನ್ನತಿಯ ನೋಡು/
ಧೀರ ಗಂಭೀರತೆಯ ತತ್ವ ಸತ್ವೋನ್ನತಿಯ ವಾರಿಧಿಯಲಿ ಮಿಂದು ಬಳಿಕ ಮುಂದೋಡು”

ನೋಡಿ, ರಸಋಷಿಯ ರಸಾವಿಷ್ಕಾರಕ್ಕೆ, ದಾರ್ಶನಿಕರ ಕಲಾದರ್ಶನಕ್ಕೆ, ನವ್ಯ ಭಾವಗಳ ಹೆಮ್ಮೆಗೆ ಕಾರಣವಾಗುವ ವಿಭವದುನ್ನತಿಗೆ- ಅರೆ! ಕಣ್ತೆರೆದು ನೋಡಿದರೆ, ಎಷ್ಟೆಲ್ಲಾ ದರ್ಶನಗಳಿವೆಯಲ್ಲಾ ಪ್ರತಿಮೆ ಮತ್ತು ಶಿಲ್ಪಗಳಿಗೆ!  

ಸಮಾನತೆ, ಸಮನ್ವಯಗಳ ಅಭಿವ್ಯಕ್ತಿಗೆ ನಮಗೆ ಮೂರ್ತಿಗಳು ಅಗತ್ಯವೇ? ಸಾಮಾಜಿಕ ತಾರತಮ್ಯದ ವಿರುದ್ಧ ಸಿಡಿದೆದ್ದು, ಕಾಯಕದಲ್ಲೇ ಕೈಲಾಸವನ್ನು ಕಾಣಿಸಿದ, “ಎನ್ನ ಕಾಲೇ ಕಂಬ, ದೇಹವೇ ದೇಗುಲ, ಶಿರವೇ ಹೊನ್ನಕಳಶವಯ್ಯಾ” ಎನ್ನುತ್ತಾ ಸ್ಥಾವರಗಳೆಷ್ಟು ನಶ್ವರ ಎಂಬುದನ್ನು ತಿಳಿಸಿಕೊಟ್ಟ ಬಸವಣ್ಣನವರನ್ನು ಮೂರ್ತಿಯಾಗಿಸಿ ಕೂರಿಸಿದ್ದೇವೆ. ಅಂತೆಯೇ, ಬುದ್ಧ, ಮಹಾವೀರರನ್ನೂ ಭೌತಿಕ ಪ್ರತಿಷ್ಠಾಪನೆಗೆ ಸೀಮಿತಗೊಳಿಸಿದ್ದೇವೆ. ಹಾಗಾದರೆ ಸುಧಾರಣೆ, ಸಮಾನತೆ ಮುಂತಾದ ಮಾನವೀಯ ಆಶಯಗಳ ಪ್ರತಿಪಾದನೆಗೆ ಪ್ರತಿಮೆಗಳೆಂಬ ಸ್ಥವಿರ ಕುರುಹುಗಳು ಹೆಚ್ಚೇನನ್ನೂ ಮಾಡಲಾರವು ಎಂದರ್ಥವೇ? ಸಮನ್ವಯದ ಆಶಯಗಳು ಮನದಲ್ಲಿ ಮೊದಲು ಸ್ಥಿರಗೊಳ್ಳಬೇಡವೇ? ಎಂದೋ ಇದ್ದವರನ್ನು ಇವತ್ತು ಒಂದು ದಿನದ ಮಟ್ಟಿಗೆ ಸ್ಮರಿಸಿಕೊಳ್ಳುವ ಉದ್ದೇಶವಿದ್ದರೆ- ಹೌದು, ಅದೊಂದು ಫಲಕಾರಿಯಾದೀತು!

ಹಾಗಾದರೆ ವೈಯಕ್ತಿಕ ನೆಲೆಯಲ್ಲಿ ಈ ವಿಗ್ರಹಗಳು ನಮ್ಮ ಪಾಲಿಗೆ ಏನು? ಇಲ್ಲೀಗ ಸುಬ್ಬಣ್ಣ ರಂಗನಾಥ ಎಕ್ಕುಂಡಿಯವರ “ನನ್ನ ಹಾಗೆಯೇ” ಎಂಬ ಕವನ ನೆನಪಿಗೆ ಬರುತ್ತಿದೆ. ಶ್ರವಣಬೆಳಗೊಳದಲ್ಲಿ ಸ್ಥಿತನಾಗಿರುವ ವೈರಾಗ್ಯದ ಮಹಾಮೂರ್ತಿ ಗೊಮ್ಮಟನನ್ನು ಕಂಡು ಪುಟ್ಟ ಮಗು ಮತ್ತು ಅಜ್ಜನ ಸಂವಾದ ಹೀಗಿದೆ-

“ಮೊನ್ನೆ ಮೊನ್ನೆ ನಡೆಯಿತಲ್ಲ ಬಾಹುಬಲಿಯ ಮಜ್ಜನ

ಬೆಟ್ಟದಲ್ಲಿ ಕೇಳಿತೊಂದು ಪುಟ್ಟ ಮಗುವು ಅಜ್ಜನ

ʻಈತನಾರು ತಾತ! ಇಲ್ಲಿ ನಿಂತು ನೋಡುತಿರುವನು

ಇಂದ್ರಗಿರಿಯ ನೆತ್ತಿಯಲಿ ಏನು ಮಾಡುತಿರುವನು?ʼ

ಎಂಬ ಮಗುವಿನ ಪ್ರಶ್ನೆಗೆ ಬಾಹುಬಲಿಯ ಬಗ್ಗೆ, ಅವನ ಧೀರತನದ ಬಗ್ಗೆ ಅಜ್ಜ ವಿವರಿಸುತ್ತಾನೆ.

ʻಇಲ್ಲಿ ಏಕೆ ಬಂದು ನಿಂತ? ಇಷ್ಟು ದೂರ! ಎತ್ತರ!

ಭಯವಾಗದೆ ಇವನಿಗಿಲ್ಲಿ? ಯಾರು ಇಲ್ಲ ಹತ್ತಿರ!ʼ

ಇದನ್ನೂ ಓದಿ: ದಶಮುಖ ಅಂಕಣ: ವೈಜ್ಞಾನಿಕತೆ ಮತ್ತು ಭ್ರಮರ-ಕೀಟ ನ್ಯಾಯ!

ಎಂದು ಮಗು ಮತ್ತೆ ಕಾಳಜಿ ಮಾಡುತ್ತದೆ. ಆಗ ಆ ಅಭಯಮೂರ್ತಿಯ ಬಗ್ಗೆ ಅಜ್ಜ ತಿಳಿಸುತ್ತಾನೆ. ಹಾಗೆಯೇ ಬಾಹುಬಲಿಯ ವೃತ್ತಾಂತವನ್ನು ಅರುಹುತ್ತಾನೆ. ಇಷ್ಟೆಲ್ಲಾ ಜನ ಬಂದು ನೆರೆದು, ಅವನಿಗೆ ಹಾಲಿನಲ್ಲಿ ಸ್ನಾನ ಮಾಡಿಸುತ್ತಾರೆ ಎಂದೂ ತಿಳಿಸುತ್ತಾನೆ. ಆದರೆ ಹಾಲಿನಲ್ಲಿ ಮೀಯುತ್ತಾ ನಿಂತ ಬಾಹುಬಲಿಯನ್ನು ಕಂಡ ಮಗು-

ʻತಾತ, ಎರೆವ ಮುಂಚೆ ಎಣ್ಣೆ ಹಚ್ಚಿ ಅಮ್ಮ ನನಗೆ ಹೀಗೆಯೇ

ನಿಲ್ಲಿಸುವಳು. ಬಾಹುಬಲಿಯು ಕೂಡ ನನ್ನ ಹಾಗೆಯೇ

ನಿಂತು ಕಾಯುತಿರುವ ಕಣ್ಣು ತೆರೆದು ಮೊದಲ ಚೆಂಬಿಗೆ!ʼ ಎಂದು ನಿರ್ಮಲ ನಗುವಿನಿಂದ ನುಡಿಯುತ್ತದೆ!

ಕಳೆದುಕೊಳ್ಳುವುದಕ್ಕೆ ಮತ್ತು ಮುಚ್ಚಿಕೊಳ್ಳುವುದಕ್ಕೆ ಏನೂ ಇಲ್ಲದ ಮಗುವಿನ ಮುಗ್ಧ ನಂಬಿಗೆಯನ್ನು ಕಂಡು, ಎಲ್ಲವನ್ನೂ ಕಳೆದು-ತೆರೆದು ಮುಕ್ತಿಯನ್ನು ಸಾಧಿಸಿದ ಆ ʻಗೊಮ್ಮಟೇಶ ನಕ್ಕಬಿಟ್ಟʼ ಎನ್ನುತ್ತಾರೆ ಕವಿ. ವೈಯಕ್ತಿಕ ನೆಲೆಯಲ್ಲಿ ನಾವೆಷ್ಟು ಹಿರಿತನದ ಪರಿಧಿಗೆ ಸಾಗಬಹುದು ಎಂಬುದಕ್ಕೆ ಇಷ್ಟು ಸಾಲದೇ? 

ಅಂದಹಾಗೆ, “ಗೆದ್ದರೆ ಗೆಲ್ಲಬೇಕು ಬಾಹುಬಲಿಯಂತೆ- ಬಿಟ್ಟು ಕೊಡುವುದರಿಂದ” ಎಂಬ ಕವಿ ತಿರುಮಲೇಶರ ಸಾಲುಗಳೂ ಇಲ್ಲಿ ಸಲ್ಲುತ್ತವೆ. ಆದರೆ ಪ್ರತಿಮೆಗಳ ಮೂಲಕ ಚುನಾವಣೆಯಲ್ಲಿ ಗೆಲ್ಲುವ ಬಗ್ಗೆ ಅವರು ಖಂಡಿತಾ ಹೇಳಿರಲಿಕ್ಕಿಲ್ಲ!

ಇದನ್ನೂ ಓದಿ: ದಶಮುಖ ಅಂಕಣ: ನಾಕು ತಂತಿಯ ರಾಗ ಹೊಮ್ಮಿಸುವ ಅನುರಾಗ…

Exit mobile version