Site icon Vistara News

ದಶಮುಖ ಅಂಕಣ: ನೆಂಟರೊಂದಿಗಿನ ನಂಟೆಂಬ ಅಂಟು

dashamukha

ಈ ಅಂಕಣವನ್ನು ಇಲ್ಲಿ ಕೇಳಿ:

http://vistaranews.com/wp-content/uploads/2023/04/WhatsApp-Audio-2023-04-11-at-840.mp3

ʻಚಳಿಗಾಲ ಎಂದರೆ ವಿಂಟರು, ಬೇಸಿಗೆ ಬಂದರೆ ನೆಂಟರು!ʼ ಎಂಬ ಕವಿ ದುಂಡಿರಾಜರ ಚುಟುಕು ಕವನ ನೆನಪಾಗುತ್ತಿದೆ. ಅದರಲ್ಲೂ ನಮ್ಮಗಳ ಬಾಲ್ಯದ ದಿನಗಳ ಬಗ್ಗೆ ಹೇಳುವುದಾದರೆ ಈ ಕವಿವಾಣಿ ಅಕ್ಷರಶಃ ಸತ್ಯ. ಈಗಿನಂತೆ ಹಾಲಿಡೇ, ರೆಸಾರ್ಟು, ಪ್ಯಾಕೇಜು ಎಂಬುದೆಲ್ಲಾ ಕೇಳಿಯೂ ಗೊತ್ತಿಲ್ಲದ ದಿನಗಳವು. ಬೇಸಿಗೆ (summer holidays) ಬಂತೆಂದರೆ ಅಜ್ಜಿ, ಚಿಕ್ಕಮ್ಮ, ದೊಡ್ಡಮ್ಮ, ಅತ್ತೆ ಎನ್ನುತ್ತಾ ಯಾವ್ಯಾವ ಊರಿನಲ್ಲಿ ಯಾವ್ಯಾವ ನೆಂಟರ ಮನೆಗಳಿವೆ ಎಂಬುದೆಲ್ಲಾ ನೆನಪಾಗುತ್ತಿತ್ತು. ಈ ನೆನಪಿನಷ್ಟೇ ಸರಳ, ಸಹಜವಾಗಿತ್ತು ನೆಂಟರು (relatives) ನಮ್ಮನೆಗೆ ಬರುವುದು ಮತ್ತು ನಾವು ನೆಂಟರ ಮನೆಗೆ ಹೋಗುವುದು. ನೆಂಟರ ಮನೆಗೆ ಹೋಗುವುದು ಎನ್ನುವುದಕ್ಕೆ ಊರಿಗೆ ಹೋಗುವುದು ಎನ್ನುವುದು ಪರ್ಯಾಯವೆಂಬಂತೆ ಬಳಕೆಯಲ್ಲಿತ್ತು. ಯಾವೂರು, ಏನು, ಎತ್ತ ಎಂಬುದೆಲ್ಲ ನಂತರದ್ದು. ಬೇಸಿಗೆಯ ನೆವದಲ್ಲಿ ಹಾಗೆಯೇ ನೆಂಟರ ನಂಟನ್ನೊಮ್ಮೆ ನೆನಪಿಸುವ ಯತ್ನವಿದು.

ನೆಂಟರೆಂದರೆ ಯಾರು? ನಮ್ಮೊಂದಿಗೆ ನಂಟು, ಬಾಂಧವ್ಯ, ಸಂಬಂಧ ಇರುವವರು ಎನ್ನಬಹುದು. ಬಂಧು, ಸಂಬಂಧಿ, ಬಳಗ, ಪರಿವಾರ ಎಂಬ ಪದಗಳೂ ಬಳಕೆಯಲ್ಲಿವೆ. ಇವುಗಳಲ್ಲಿ ಬಳಗ ಮತ್ತು ಪರಿವಾರವನ್ನು ಸ್ವಲ್ಪ ದೂರದ ನೆಂಟರು ಎನ್ನಬಹುದು. ನಮ್ಮೊಂದಿಗೆ ನಂಟಿರುವವರು ನೆಂಟರು ಎಂದಾದರೆ, ಈ ಸಾಲಿನಲ್ಲಿ ಮೊದಲು ನೆನಪಾಗುವುದು ಯಾರು? ಅಣ್ಣ, ತಮ್ಮ, ಅಕ್ಕ, ತಂಗಿಯರನ್ನು ನೆಂಟರು ಎನ್ನಬಹುದೇ? ʻಹುಟ್ಟುತ್ತಾ ಅಣ್ಣ ತಮ್ಮಂದಿರು, ಬೆಳೆಯುತ್ತಾ ದಾಯಾದಿಗಳುʼ ಎಂಬ ಜನಪ್ರಿಯ ಗಾದೆಯೇ ಇದೆ. ಹಾಗಾಗಿ ಅವರು ದಾಯಾದಿಗಳಾದಾರೇ ಹೊರತು ನೆಂಟರಾಗುವುದು ಸಾಧ್ಯವಿಲ್ಲ. ಸಹೋದರತೆಯಲ್ಲೂ ನಮಗೆ ಅನಾದಿ ಕಾಲದಿಂದ ಸಿದ್ಧ ಮಾದರಿಗಳು ಲಭ್ಯವಿವೆ. ಅಣ್ಣ ತಮ್ಮಂದಿರು ʻರಾಮ-ಲಕ್ಷ್ಮಣರಂತಿದ್ದಾರೆʼ ಎನ್ನುವುದಕ್ಕೂ, ʻಕೌರವರು-ಪಾಂಡವರಂತಿದ್ದಾರೆʼ ಎನ್ನುವುದಕ್ಕೂ ಇರುವ ವ್ಯತ್ಯಾಸ ಗಮನಾರ್ಹ.

ನಮ್ಮ ಸೋದರ-ಸೋದರಿಯರು ನೆಂಟರಲ್ಲ ಎಂದಾದರೆ, ನಮ್ಮ ತಂದೆ-ತಾಯಿಯ ಸೋದರ ಸಾಲಿನಲ್ಲಿರುವವರು ನಮಗೆ ನೆಂಟರೇ? ಆಗಬಹುದು. ನಮ್ಮ ಸೋದರತ್ತೆ/ ಸೋದರಮಾವ, ಚಿಕ್ಕಮ್ಮ/ಚಿಕ್ಕಪ್ಪ , ದೊಡ್ಡಮ್ಮ/ದೊಡ್ಡಪ್ಪಗಳ ಸಾಲಿನವರಿವರು. ಈಗಿನ ಕಾಲದ ಸಂಬಂಧ ಸೂಚಕಗಳ ಪ್ರಕಾರ, ಇವರೆಲ್ಲರೂ ʻಆಂಟಿ, ಅಂಕಲ್‌ʼಗಳು! ಇನ್ನೂ ಹೆಚ್ಚು ಹೇಳಬೇಕೆಂದರೆ ʻಮೆಟರ್ನಲ್‌ ಮತ್ತು ಪೆಟರ್ನಲ್‌ʼ ಪದಗಳನ್ನು ಸೇರಿಸಿಬಿಟ್ಟರೆ ಸಂಬಂಧಗಳು ಮುಗಿದಂತೆ. ಹಾಗೆಯೇ ಖಾಸಾ ಅಲ್ಲದ (ಒಡಹುಟ್ಟಿದವರಲ್ಲದ), ಬೀಸಾ ಅಣ್ಣ-ತಮ್ಮ, ಅಕ್ಕ-ತಂಗಿಯರು (ದೊಡ್ಡಪ್ಪ/ಚಿಕ್ಕಪ್ಪನ ಮಕ್ಕಳು), ಸೋದರತ್ತಿಗೆ, ಸೋದರ ಭಾವಂದಿರು- ಈ ಎಲ್ಲರನ್ನೂ ʻಕಸಿನ್‌ʼ ಎಂದು ಒಂದೇ ಮಾತಿನಲ್ಲಿ ಸಾರಿಸಿಬಿಡುತ್ತೇವೆ. ಆದರೆ ಕನ್ನಡದ ಸಂಬಂಧಸೂಚಕಗಳಲ್ಲಿ ಇರುವ ವೈವಿಧ್ಯತೆಗಳು ಬೆರಗು ಮೂಡಿಸುವಂಥವು. ಉದಾ, ಅಜ್ಜನು ತಾತ, ಮುತ್ಯಾ ಎನಿಸಿದರೆ, ಅಜ್ಜಿಯು ಅಮ್ಮಮ್ಮ ಅಥವಾ ದೊಡ್ಡ ಆಗಿಬಿಡುತ್ತಾಳೆ. ದೊಡ್ಡಪ್ಪನು ಬೊಪ್ಪ, ಅಪ್ಪಪ್ಪ, ಹಿರಿಯಪ್ಪನಾಗುತ್ತಾನೆ. ದೊಡ್ಡಮ್ಮಳು ಬೊಬ್ಬೆ, ದೊಡ್ಡಬ್ಬೆ, ಹಿರಿಯಮ್ಮ, ದೊಡ್ಡಾಯಿ ಆಗುತ್ತಾಳೆ. ಚಿಕ್ಕಪ್ಪನಂತೂ ಕಾಕ, ಚಿಕ್ಕಯ್ಯ ಅಥವಾ ಅಪ್ಪಚ್ಚಿಯಾಗುತ್ತಾನೆ. ಆದರೆ ಚಿಕ್ಕಮ್ಮನನ್ನು ಅಪ್ಪಚ್ಚಿ ಮಾಡಲಾರದೆ ಚಿಕ್ಕಿ, ಸಣ್ಣಾಯಿ, ಕಾಕಿ ಅಥವಾ ಕವ್ವನನ್ನಾಗಿ ಮಾಡುತ್ತೇವೆ. ಅತ್ತೆ ಮಾಮಿಯಾದರೆ, ಮಾವ ಮಾತ್ರ ಮಾವನೇ, ಮತ್ತಿನ್ನೇನೂ ಆಗಲಾರ.

ಮಾವ ಎನ್ನುತ್ತಿದ್ದಂತೆ ಕರುಳುಬಳ್ಳಿ ಹಲವು ರೀತಿಯಲ್ಲಿ ಕಾಲಿಗೆ ತಾಕುತ್ತದೆ. ಸೋದರಮಾವನೊಂದಿಗಿನ ಬಾಂಧವ್ಯ ಅಷ್ಟಕ್ಕಷ್ಟೇ ಇದ್ದರೆ ʻಮಾವ ಕಂಸ, ಮಾವ ಶಕುನಿʼ ಎನ್ನುವ ಮಾತು ಕೇಳಿಬರಬಹುದು. ಆದರೆ ಜನಪದರಲ್ಲಿ ಹೆಚ್ಚಾಗಿ ಕಾಣುವುದು ಲಾಲಿಸುವ, ಪಾಲಿಸುವ ಮಾವಂದಿರು. ʻಸೋದರ ಮಾವ ತಂದೆಗೆ ಸಮʼ ಎನ್ನುವ ಸಂಸ್ಕೃತಿಗಳು ಇರುವಂತೆಯೇ, ʻಅಕ್ಕನ ಮಗಳು ಹಕ್ಕಿನ ಹೆಂಡ್ತಿʼ ಎನ್ನುವ ಸಂಸ್ಕೃತಿಗಳೂ ಉಂಟು. ನಮ್ಮದು ವೈವಿಧ್ಯಮಯ ಭಾರತವಲ್ಲವೇ?

ನಮ್ಮ ಸೋದರ ಸಂಬಂಧವನ್ನೇ ನೆಂಟರು ಎನ್ನಲಾಗದ ಮೇಲೆ ತಂದೆ-ತಾಯಿಯನ್ನು ನೆಂಟರು ಎನ್ನುವ ಪ್ರಶ್ನೆಯೇ ಏಳುವುದಿಲ್ಲ. ಅವರಿರುವುದರಿಂದ ನಾವು. ಇದೇ ತತ್ವ ನಮ್ಮ ಮಕ್ಕಳಿಗೂ ಅನ್ವಯ ಆಗಬಹುದು. ಹಾಗಾದರೆ ಗಂಡ ಅಥವಾ ಹೆಂಡತಿಯನ್ನು ನೆಂಟರು ಎನ್ನಬಹುದೇ? ಎಷ್ಟೆಂದರೂ ʻನೆಂಟಸ್ತಿಕೆ ಕೂಡಿ ಬಂದಿದ್ದರಿಂದʼ ಅವರೀಗ ನಮ್ಮ ಗಂಡ/ಹೆಂಡತಿಯಲ್ಲವೇ? ಶಿವ ಶಿವಾ! ಏಳೇಳು ಜನ್ಮದ ನಂಟನ್ನು, ಅಂದರೆ… ಋಣಾನುಬಂಧವನ್ನು ಹೀಗೆಂದುಬಿಡಬಹುದೇ? ಒಂದೊಮ್ಮೆ ಅಂದರೆ ಉಳಿಗಾಲ ಉಂಟೇ? ಹಾಗಾಗಿ ಅಪಾಯಕಾರಿ ವಿಷಯದಿಂದ ದೂರ ಉಳಿಯುವುದು ಲೇಸು.

ಇದನ್ನೂ ಓದಿ: ದಶಮುಖ ಅಂಕಣ: ʻತಿರುತಿರುಗಿಯು ಹೊಸತಾಗಿರಿ ಎನುತಿದೆ ಋತುಗಾನ…ʼ

ನೆಂಟರು ಎನ್ನುವ ಬಗ್ಗೆ ಬಾಲ್ಯದಿಂದಲೇ ಕಲ್ಪನೆಗಳಿಗೆ ನೀರೆರೆಯಲಾಗುತ್ತದೆ. ʻಗಂಟೆಯ ನೆಂಟನೆ ಓ ಗಡಿಯಾರ/ ಬಣ್ಣದ ಬಣ್ಣದ ಗೋಳಾಕಾರ…ʼ ಪದ್ಯದಿಂದಲೇ ನೆಂಟರೆಂದರೆ ಅವಿನಾಭಾವ ಸಂಬಂಧದವರು ಎಂಬ ಬೀಜ ಬಿತ್ತಲಾಗುತ್ತದೆ. ಹಾಗೆಂದೇ ಇರಬೇಕು, ಬಾಲ್ಯದಲ್ಲಿ ನೆಂಟರು ಮನೆಗೆ ಬಂದರೆಂದರೆ ಮಕ್ಕಳ ಸಂಭ್ರಮ ಮೇರೆ ಮೀರುತ್ತದೆ. ʻನೆಂಟರ ನೆವದಲ್ಲಿ ಊಟ, ಮಕ್ಕಳ ನೆವದಲ್ಲಿ ನಿದ್ದೆʼ ಎಂಬ ಗಾದೆಯಂತೆ, ಬಂದ ಅತಿಥಿಗಳಿಗಾಗಿ ರಸಕವಳ ಸಿದ್ಧವಾಗುತ್ತದಲ್ಲ ಎಂಬ ಸಡಗರ; ಅವರಿದ್ದಷ್ಟೂ ದಿನ ಮನೆಯಲ್ಲಿ ಬೈಗುಳದಿಂದ ವಿನಾಯಿತಿ ಎಂಬ ಸಮಾಧಾನ; ಓದು, ಹೋಂವರ್ಕ್‌ಗಳ ಒತ್ತಾಯವಿಲ್ಲ ಎಂಬ ಖುಷಿ- ಮಕ್ಕಳ ಸಂತಸಕ್ಕೆ ಕಾರಣಗಳು ಒಂದೆರಡೇ ಅಲ್ಲ. ಆದರೆ ನೆಂಟರೊಂದಿಗೆ ಬಂದ ತುಂಟರು ತಮ್ಮ ಆಟಿಕೆಗಳನ್ನೆಲ್ಲಾ ಎಲ್ಲಿ ಹತಾಹತಿ ಮಾಡಿಬಿಡುವರೋ ಎಂಬ ಭಯವೂ ಕಾಡುತ್ತಿರುತ್ತದೆ.

ಹಿಂದೆಲ್ಲಾ ಮೈಸೂರಿನ ದಸರಾ ನೋಡಲು ಬರುವ ನೆಂಟರ ಟ್ರಾಫಿಕ್ಕು ಪ್ರತಿವರ್ಷವೂ ಸಾಮಾನ್ಯವಾಗಿ ಇರುತ್ತಿತ್ತು. ಈಗಿನಂತೆ ಹೊಟೆಲ್‌, ಲಾಡ್ಜ್‌, ರೆಸಾರ್ಟ್‌ಗಳು ಅಪರಿಚಿತವಾಗಿದ್ದವು ಮತ್ತು ದುಬಾರಿಯೂ ಆಗಿರುತ್ತಿದ್ದವು. ಇವೆಲ್ಲಕ್ಕಿಂತ ಮುಖ್ಯವಾಗಿದ್ದು, ʻಹೊಟೆಲ್‌ನಲ್ಲಿ ಉಳಿಯುವುದಕ್ಕೆ ನಮಗೇನು ನೆಂಟರ ಮನೆಯೂ ಗತಿಯಿಲ್ಲವೇ?ʼ ಎಂಬ ಅಂದಿನ ದಿನಗಳ ಮನೋಸ್ಥಿತಿ. ಬಂದವರನ್ನು ಸುಧಾರಿಸುವಲ್ಲಿ ದೊಡ್ಡವರು ಒದ್ದಾಡಿದರೆ, ಮಕ್ಕಳಾಗಿದ್ದ ನಮ್ಮ ಖುಷಿಗೆ ತುದಿ-ಮೊದಲಿರಲಿಲ್ಲ. ಆ ದಿನಗಳಲ್ಲಿ ಅಜ್ಜಿಯೊಬ್ಬಳು ನಮಗೆ ವರ್ತನೆಯ ಹಾಲು ನೀಡುತ್ತಿದ್ದಳು. ಮನೆಯೊಳಗೆ ಹೆಚ್ಚಿನ ಗೌಜಿ ಕೇಳಿತೋ, ʻವಾ! ಯಾರೋ ನಂಟ್ರು!ʼ ಎನ್ನುತ್ತಾ ಇಣುಕಿ ನೋಡುತ್ತಿದ್ದಳು. ಮಾರನೇ ದಿನದ ಹಾಲಿಗೆ ಆಕೆ ಇನ್ನೊಂದು ಸೇರು ನೀರು ಸೇರಿಸುವುದು ಖಾತ್ರಿ. ʻಹೀಗೇಕೆ ಮಾಡುತ್ತೀ?ʼ ಎಂದು ಅಮ್ಮ ಗದರಿದರೆ, ʻನಂಟ್ರು ಬಂದವ್ರೆ, ಹಾಲು ಜಾಸ್ತಿ ಬ್ಯಾಡವಾ?ʼ ಎಂಬ ಉತ್ತರ. ʻಹಾಲಿಗೆ ನೀರು ನಾನೇ ಹಾಕಿಕೊಳ್ಳುತ್ತೇನೆʼ ಎಂದು ಅಮ್ಮ ಮುನಿದು ಹೇಳಿದರೆ, ʻನಂಟ್ರೆದುರು ಹಾಲಿಗೆ ನೀರಾಕದೆಂಗೆ? ಅದ್ಕೆ ನಾನೇ ಆಕ್ಕೊಡ್ತೀನಿ ಬುಡಿʼ ಎಂದು ನಿರ್ಭಿಡೆಯಿಂದ ಹೇಳುತ್ತಿದ್ದಳು.

ಇದನ್ನೂ ಓದಿ: ದಶಮುಖ ಅಂಕಣ: ಏನು ಹೇಳುತ್ತಿವೆ ಈ ಪ್ರತಿಮೆಗಳು?

ಅದೇಕೋ ಏನೋ, ʻನೆಂಟರುʼ ಎನ್ನುವವರ ಬಗ್ಗೆ ಭಾಷೆಯ ಜಾಯಮಾನದಲ್ಲಿ ಅಷ್ಟೊಂದು ಒಳ್ಳೆಯ ಮಾತುಗಳು ಕೇಳಿಬರುವುದಿಲ್ಲ. ʻನೆಂಟ ನೆರವಲ್ಲ, ಶುಂಠ ಜೊತೆಯಲ್ಲʼ, ʻನೆಂಟರ ಬಾಯಿ ಹಾಳು, ತುಂಟರ ಸಂಗ ಗೋಳುʼ ಎಂದು ಎಚ್ಚರಿಕೆ ನೀಡುವಂಥ ಗಾದೆಗಳು; ʻಸಮುದ್ರದ ನೆಂಟತನ, ಉಪ್ಪಿಗೆ ಬಡತನʼ, ʻಅಕ್ಕಿ ಮೇಲೆ ಆಸೆ, ನೆಂಟರ ಮೇಲೆ ಪ್ರೀತಿʼ ಎನ್ನುವ ಮೂಲಕ ನೆಂಟರ ನಂಟಿನ ಬಗ್ಗೆ ಧ್ವನಿಪೂರ್ಣವಾಗಿರುವ ನಾಣ್ಣುಡಿಗಳು; ʻಸರಿ ಸರಿ ಇದ್ದರೆ ಪರಿಪರಿ ನೆಂಟರುʼ, ʻಕೆಟ್ಟು ನೆಂಟರ ಸೇರಬೇಡ, ಧರ್ಮಕ್ಕೆ ಕೊಟ್ಟಿದ್ದು ಮತ್ತೆ ಕೇಳಬೇಡʼ, ʻಉಂಬಾಗ ಉಡುವಾಗ ಊರೆಲ್ಲಾ ನೆಂಟರುʼ, ʻಮುಂದೊಲೆಲ್ಲಿ ಅನ್ನ ಹಿಂದೊಲೆಲ್ಲಿ ಹಾಲಿದ್ರೆ ನೆಂಟರು-ಇಷ್ಟರುʼ, ʻಸುಖದಲ್ಲಿದ್ದಾಗ ಎಲ್ಲರೂ ನೆಂಟರು, ಕಷ್ಟದಲ್ಲಿ ಗಂಟು ಕಟ್ಕೊಂಡ್‌ ಹೊಂಟರುʼ- ಇಂಥ ಎಲ್ಲಾ ಗಾದೆಗಳು ನೆಂಟರೆಂದರೆ ಅವಕಾಶವಾದಿಗಳು, ಸ್ವಾರ್ಥಿಗಳು, ಕಷ್ಟಕ್ಕಾಗದೆ ಸುಖಕ್ಕೆ ಮಾತ್ರ ಬರುವವರು ಎನ್ನುವ ಭಾವವನ್ನೇ ಢಾಳಾಗಿ ಮೂಡಿಸುವಂತಿವೆ. ಇದೇ ಭಾವವನ್ನು ಇಂದಿನ ಆಂಗ್ಲಗನ್ನಡದಲ್ಲಿ ʻಕಿತ್‌ ಎಂಡ್‌ ಕಿನ್‌, ಕಿತ್ಕೊಂಡ್‌ ತಿನ್‌ʼ ಎಂಬಂತೆ ಮೊನಚಾಗಿ ಹೇಳುತ್ತಾರಲ್ಲ. ಹಾಗೆಂದು ʻಅನುಕೂಲಕ್ಕೆ ಒದಗಿದವನೇ ನೆಂಟʼ, ʻಆಪತ್‌ಕಾಲಕ್ಕೆ ಆದವನೇ ನೆಂಟʼ ಎಂಬಂಥ ಅಲ್ಲೊಂದಿಲ್ಲೊಂದು ಮಾತುಗಳು ಅತಿಥಿಗಳೆಲ್ಲಾ ಬೇಡದವರೇ ಎಂಬ ಭಾವಕ್ಕೆ ವಿರುದ್ಧವಾಗಿ ದೊರೆಯಬಹುದು.

ಅತಿಥಿಗಳು ಬೇಕಾಗಿಯೇ ಬರಲಿ, ಬೇಡದೆಯೇ ಬರಲಿ- ಒಂದಿಷ್ಟು ನೆನಪುಗಳನ್ನಂತೂ ಧಾರಾಳವಾಗಿ ಕೊಟ್ಟು ಹೋಗುತ್ತಿದ್ದರು. ʻಇದೋ ಹೊರಟೆʼ ಎನ್ನುತ್ತಾ ವಾರಗಟ್ಟಲೆ ಉಳಿಯುವವರು, ಪಥ್ಯದ ಹೆಸರಿನಲ್ಲಿ ಪುಷ್ಕಳವಾಗಿ ಭುಂಜಿಸುವವರು, ತಮ್ಮ ಸದ್ಗುಣಗಳಿಂದ ಆತಿಥೇಯರಿಗೆ ಮೆಚ್ಚಾಗುವವರು, ಇಂದಿನ ಧಾರಾವಾಹಿಗಳಲ್ಲಿ ಇರುವಂತೆ ಮನೆ ಒಡೆಯುವವರು, ಅವರು, ಇವರು, ಎಲ್ಲರೂ ಸೇರಿ ಬದುಕಿಗಿಷ್ಟು ರಂಗು ತುಂಬುತ್ತಿದ್ದರು. ಇಂದಿನ ಮ್ಯಾನೇಜ್‌ಮೆಂಟ್‌ ತರಗತಿಗಳಲ್ಲಿ ದುಡ್ಡು ಕೊಟ್ಟು ಕುಳಿತು, ಪಠ್ಯಗಳ ಮುಖೇನ ಕಲಿಯುವ ಒಂದಿಷ್ಟು ಪಾಠಗಳನ್ನು, ಅತಿಥಿಗಳನ್ನು ಸುಧಾರಿಸುತ್ತಲೇ ನಮ್ಮ ಹಿರಿಯರು ಕಲಿತಿದ್ದರು ಎಂದರೆ ಅತಿಶಯವಲ್ಲ. ಇಂಥ ಬಾಂಧವ್ಯಗಳ ಅನುಭವಗಳು ಮತ್ತು ಜೀವನ ಪಾಠಗಳು ಬೇಕಿದ್ದರೆ, ಸಂಚಿ ತುಂಬಿ ಹೊರಡಿ ನೆಂಟರ ಮನೆಗೆ- ಅವರು ಬರುವ ಮುನ್ನ ನಿಮ್ಮನೆಗೆ!

ಇದನ್ನೂ ಓದಿ: ದಶಮುಖ ಅಂಕಣ: ವೈಜ್ಞಾನಿಕತೆ ಮತ್ತು ಭ್ರಮರ-ಕೀಟ ನ್ಯಾಯ!

Exit mobile version