Site icon Vistara News

ದಶಮುಖ ಅಂಕಣ | ನೆಲದ ಮೇಲೆಯೇ ನಡೆವ ದೇವರುಗಳು

shiva parvathi

ಈ ಅಂಕಣವನ್ನು ಇಲ್ಲಿ ಕೇಳಿ:

https://vistaranews.com/wp-content/uploads/2022/09/dashamukha.mp3

ನವರಾತ್ರಿಗೆಂದು ಗೆಳತಿಯೊಬ್ಬಳು ಗೊಂಬೆ ಕೂರಿಸುವ ಸಿದ್ಧತೆಯಲ್ಲಿದ್ದಳು. ಯಾವುದೋ ದೇವಿ ಗೊಂಬೆಯ ಅಲಂಕಾರ ಸರಿ ಮಾಡುವಷ್ಟರಲ್ಲಿ ನಾಲ್ಕಾರು ತಾಸು ಬೇಕಾಯಿತು. ಮೊದಲಿನ ಹಾಗೆ ಗೊಂಬೆ ಅಲಂಕಾರಕ್ಕೆ ಸೀರೆ, ಒಡವೆ-ವಸ್ತುಗಳೇ ಸರಿಯಾಗಿ ಸಿಗುವುದಿಲ್ಲ ಎಂದು ಅಲವತ್ತುಕೊಳ್ಳುತ್ತಿದ್ದಳು. ʻಈ ಮುದ್ದು ಗೊಂಬೆಗಳಿಗೆ ನೀ ಮಾಡಿದ್ದೇ ಅಲಂಕಾರವಲ್ಲವೇನೇ? ಅದು ಹಾಗೆಯೇ ಇರಬೇಕೆಂದು ನಿಯಮವುಂಟೇʼ ಎಂದು ಕೇಳಿದ್ದಕ್ಕೆ ಒಂದಿಷ್ಟು ಪ್ರವರ ಹೇಳಿದಳು. ದೇವಿ ʻಹೀಗೆಯೇʼ ಇರಬೇಕೆಂದು ಹಠವೇಕೆ? ನಮ್ಮ ದೇವರು ನಮ್ಮ ಕಲ್ಪನೆಯಂತೇ ಇರುವುದಿಲ್ಲವೇ? ಯಥಾ ದೃಷ್ಟಿ ತಥಾ ಸೃಷ್ಟಿ… ಎಂಬ ಯಾವ ಮಾತುಗಳೂ ಅವಳಿಗೆ ಸಮಾಧಾನ ತರಲಿಲ್ಲ. ಇವೆಲ್ಲದರ ನಡುವೆ, ಅವಳೊಂದಿಗಿನ ಮಾತುಕತೆಗಳು ಬೇರೆಯೇ ಲಹರಿಗೆ ಚಿತ್ತವನ್ನು ದೂಡಿದ್ದು ಮಾತ್ರ ಸುಳ್ಳಲ್ಲ.

ದೇವರ ಕುರಿತಾಗಿ ಎಷ್ಟೊಂದು ಕಥೆ, ಕಾವ್ಯಗಳನ್ನು ಓದಿದ್ದೇವೆ, ಕೇಳಿದ್ದೇವೆ. ಎಷ್ಟೊಂದು ಮೂರ್ತಿಗಳು, ಕೆತ್ತನೆಗಳು, ಚಿತ್ರಗಳನ್ನು ನೋಡಿದ್ದೇವೆ. ಚೌತಿಯಲ್ಲಿ ಬರುವ ಗಣಪನಾಗಿರಲೀ ನವರಾತ್ರಿಯಲ್ಲಿ ಬರುವ ದುರ್ಗೆಯಾಗಿರಲಿ, ಈ ಎಲ್ಲಾ ಬಿಂಬಗಳೂ ಕಲಾಕಾರನ ಭಿತ್ತಿಯಲ್ಲಿ ಮೂಡಿದ್ದೇ ಅಲ್ಲವೇ? ʻಕೃಷ್ಣʼ ಎನ್ನುತ್ತಿದ್ದಂತೆ ಮನದಲ್ಲಿ ಮೂಡುವ ಬಿಂಬಕ್ಕೆ ಆಕರ ನಮ್ಮ ಕಲ್ಪನೆಯೇ ತಾನೆ? ಆ ಕಲ್ಪನೆಯ ಹುಟ್ಟಿಗೆ ನಾನಾ ರೀತಿಯ ಬೀಜಗಳು- ಸಾಂಸ್ಕೃತಿಕ, ಕಲಾತ್ಮಕ, ಧಾರ್ಮಿಕ ಇತ್ಯಾದಿ- ಕಾರಣವಾಗಿರಬಹುದು. ಇದೇ ನಿಟ್ಟಿನಲ್ಲಿ ಕವಿ ಮನಗಳಲ್ಲಿ ದೇವರುಗಳು ಮೂಡಿಬಂದ ರೀತಿ ಕುತೂಹಲಕ್ಕೆ ಕಾರಣವಾಗಿದ್ದುಂಟು.

ಅದರಲ್ಲೂ ಜನಪದ ಕಾವ್ಯಗಳಲ್ಲಿ ಇರುವಂಥ ವೈವಿಧ್ಯತೆಗಳು ದಂಗುಬಡಿಸುವಂಥವು. ಜನಪದರ ಬದುಕಿನಿಂದ ಹೊರತಾಗಿ ಜನಪದ ಕಾವ್ಯವಿಲ್ಲ. ಅವರು ಕಂಡುಂಡ ಸಂಗತಿಗಳೇ ಹಾಡಾಗಿ ಹೊರಬಂದಿವೆ. ಅವರ ಕಾವ್ಯಗಳ ದೇವರುಗಳು ಮನುಷ್ಯರಂತೆಯೇ ಮಾತಾಡುತ್ತಾರೆ, ಆಲೋಚಿಸುತ್ತಾರೆ, ನಡೆದುಕೊಳ್ಳುತ್ತಾರೆ, ಮಾತಿಗೆ ತಪ್ಪುತ್ತಾರೆ, ಸುಳ್ಳು ಹೇಳುತ್ತಾರೆ. ದಾಂಪತ್ಯ ಕಲಹಗಳಿಗೆ ತೆರೆದುಕೊಂಡವರು, ಬಾಯಿಗೆ ಬಂದಂತೆ ಬೈದು ಕೋಪ ತಣಿಸಿಕೊಳ್ಳುವವರು. ಅಂತೂ ಕಾಮ, ಮೋಹ, ಮದ, ಮತ್ಸರದಂಥ ಅರಿಷಡ್ವರ್ಗಗಳಿಂದ ಅವರಾರೂ ಹೊರತಾದವರಲ್ಲ. ಮಾನವ ಸಹಜ ಎಲ್ಲಾ ಗುಣದೋಷಗಳನ್ನೂ ಜನಪದರ ದೇವರುಗಳಲ್ಲಿ ಕಾಣಬಹುದು. ಕೆಲವೊಮ್ಮೆಯಂತೂ, ಕಾವ್ಯ ಕಟ್ಟುವವರ ಮನದ ನೋವು-ನಲಿವುಗಳು, ರಾಗ-ದ್ವೇಷಗಳು ನೇರವಾಗಿ ದೇವರಿಗೆ ಆರೋಪಿಸಲ್ಪಡುತ್ತವೆ, ಒಂದಿನಿತೂ ದಾಕ್ಷಿಣ್ಯವಿಲ್ಲದೆ.

ಮೈಸೂರಿನ ಅಧಿದೇವತೆ ಬೆಟ್ಟದ ಚಾಮುಂಡಿ ನಾಡರಸರ ಮನೋಮಂದಿರದಲ್ಲಿ ಸ್ಥಾಪಿತಳಾಗಿದ್ದು ಎಷ್ಟು ಸತ್ಯವೋ, ಸಾಮಾನ್ಯರಲ್ಲಿ ಸಾಮಾನ್ಯರ ʻತಾಯಿʼ ಎನಿಸಿರುವುದೂ ಅಷ್ಟೇ ನಿಜ. ಹಾಗಾಗಿಯೇ ಈ ಪರಿಸರದಲ್ಲಿ ರಚಿತವಾದ ಜನಪದ ಕಾವ್ಯಗಳಲ್ಲಿ ಬೆಟ್ಟದ ಚಾಮುಂಡಿಯ ಕಥೆ ಜನಪ್ರಿಯ. ಚಕ್ರಪುರವಾಸಿನಿ, ಶಿಷ್ಟ ಭಕ್ತರಿಗೆ ದರ್ಶನ ನೀಡುವ, ಪೌರಾಣಿಕ ಕಥಾನಕಗಳಿಂದ ನೇರವಾಗಿ ಮೈತಳೆದು ಬಂದ ಶಿವನರಸಿಯಲ್ಲ ಇಲ್ಲಿರುವುದು. ಬದಲಿಗೆ, ನಮ್ಮಷ್ಟೇ ರಕ್ತ-ಮಾಂಸ ತುಂಬಿಕೊಂಡ ಗ್ರಾಮ್ಯ ದೇವತೆ ಚಾಮುಂಡಿ, ಮಹಿಷಾಸುರನನ್ನು ಕೊಂದು ಮೈಸೂರಿನ ಬೆಟ್ಟದ ಮೇಲೆ ನೆಲೆಸಿರುವವಳು. ನಂಜನಗೂಡಿನ ನಂಜುಂಡನ ಮೋಹದ ಮಡದಿ ಈಕೆ. ಇದರಲ್ಲಿ ನಂಜುಂಡ-ದೇವೀರಿ-ಸೋಮಾಜಿ-ಚಾಮುಂಡಿ ಎಂಬ ಗ್ರಾಮ ದೇವತೆಗಳ ಪ್ರೇಮ- ದಾಂಪತ್ಯಗಳ ಕಥೆಯಿದೆ. ದೇವೀರಿ, ಸೋಮಾಜಿ ನಂಜುಂಡನ ಮೊದಲಿನ ಹೆಂಡತಿಯರು. ಅವರಿದ್ದೂ ನಂಜುಂಡನಿಗೆ ಚಾಮುಂಡಿಯ ಮೇಲೆ ಮನಸ್ಸಾಗಿ ಮದುವೆಯಾಗುತ್ತಾನೆ. ಇದರಿಂದ ಸವತಿಯರಲ್ಲಿ ಮತ್ಸರ ಆರಂಭವಾಗುತ್ತದೆ, ಥೇಟ್ ಮನುಷ್ಯರಂತೆ! ಮೊದಲಿನ ಮಡದಿಯರ ಮನೆಗೆ ಹೋಗಿ ಮೂರು ತಿಂಗಳಾದರೂ ತನ್ನ ಬಳಿ ನಂಜುಂಡ ಬರಲಿಲ್ಲ ಎಂದು ತನ್ನ ತಂಗಿ ಉತ್ತನಳ್ಳಿ ಮಾರಮ್ಮನ ಬಳಿ ದೂರಿಕೊಂಡು, ಗಂಡನನ್ನು ಶಪಿಸುವ ದೇವಿಯ ಹಾಡಂತೂ ಸಿಕ್ಕಾಪಟ್ಟೆ ಜನಪ್ರಿಯ.

ಹಾವಾದ್ರೂ ಕಚ್ಚಬಾರ್ದಾ, ಚೇಳಾದ್ರೂ ಚುಚ್ಚಬಾರ್ದಾ,
ನಾಗರ ಜ್ವರವೂ ಬಂದು ನರಳಾಡಿ ಸಾಯಬಾರ್ದಾ,
ಹೊಟ್ಟೆಯ ನೋವು ಬಂದು ಹಟ್ಟೀಯ ಹಿಡಿಯಬಾರ್ದಾ,
ಅವನ್ನ ಸಾಯ ಬಡಿಯಾ, ಬರಲಿಲ್ಲ ತಂಗ್ಯವ್ವ…

ಎಂದು ಗಂಡನನ್ನು ಕಂಠಬಿರಿಯ ಶಪಿಸಿಕೊಂಡು ತಂಗಿಯಲ್ಲಿ ಗೋಳಾಡುವ ಚಾಮುಂಡಿಯ ಚಿತ್ರಣ ಮೇಲ್ನೋಟಕ್ಕೆ ತೀರಾ ವಿಚಿತ್ರ, ವಿನೋದ ಎನಿಸುತ್ತದೆ. ಆದರೆ ಗಂಡಸರ ಇಂಥ ಚಾಳಿಗಳಿಂದ ನೊಂದ-ಬೆಂದ ಹೆಣ್ಣು ಜೀವಗಳು, ದೇವರಿಗೆ ಬೈಯುತ್ತಾ ಕಾವ್ಯ ಕಟ್ಟುವ ಮೂಲಕ ತಮ್ಮ ಸಂಕಟವನ್ನು ಹೊರಹಾಕಿರಬಹುದಾದ ಸಾಧ್ಯತೆಯನ್ನು ಅರ್ಥ ಮಾಡಿಕೊಂಡರೆ, ಆ ಮುಗ್ಧ ಜೀವಗಳ ಬವಣೆಗಳು ನೀರ್ಗಲ್ಲ ಶೂಲದಂತೆ ಕೊರೆಯುವುದಿಲ್ಲವೇ? ಹೋಗಿ ನಿನ್ನ ಭಾವನನ್ನು ಕರೆದು ಬಾ ಎಂಬ ಅಕ್ಕನ ಮಾತಿಗೆ ಪ್ರತಿಯಾಗಿ ನಂಜುಂಡನಲ್ಲಿ ಹೋಗುವ ಉತ್ತನಳ್ಳಿ ಮಾರಮ್ಮ, ಆತನನ್ನು ಕರೆಯುವ ಸಾಲುಗಳು ತನ್ನ ಒರಟುತನದ ನಡುವೆಯೂ ಎಷ್ಟೊಂದು ಮಾರ್ದವವಾಗಿವೆ ಎನಿಸದೆ ಇರದು.

ಇದನ್ನೂ ಓದಿ | ದಶಮುಖ ಅಂಕಣ | ಮನೆಯೆಂಬ ಭಾವದೀಪ್ತಿ

ʻಭಾವಾ ಮಾತನಾಡಯ್ಯ ಶಂಭೋ, ಮಾತನಾಡಯ್ಯ ಶಿವನೇ, ಚಂದ್ರಶೇಖರ ನಂಜುಂಡೇಶ, ಮನಸೇ ಇಲ್ವಯ್ಯೋ ನಿನ್ನ ಮಡದೀ ಮ್ಯಾಲೆ” ಎಂದು ತನ್ನಕ್ಕನ ಬಗ್ಗೆ ಆತನಲ್ಲಿದ್ದ ಪ್ರೀತಿಯನ್ನು ಬಡಿದೆಬ್ಬಿಸುತ್ತಾಳೆ. ಇವೆಲ್ಲಾ ರೀತಿ-ನೀತಿ, ಭಾವ-ಭಕ್ತಿಗಳು ಎಷ್ಟೊಂದು ಮಾನವಸಹಜವಲ್ಲವೇ? ದೇವರ ಕಥನಗಳ ಮೂಲಕ ನಮ್ಮನ್ನೇ ನಾವು ಕಂಡುಕೊಳ್ಳುವ ಈ ಪರಿ ನಿಜಕ್ಕೂ ವಿಶಿಷ್ಟ. ಕಡೆಗಂತೂ ಚಾಮುಂಡಿಯ ಅಣ್ಣ, ಶ್ರೀರಂಗಪಟ್ಟಣದ ರಂಗನಾಥ ಸ್ವಾಮಿಯ ಉಪಾಯದಿಂದ ನಂಜುಂಡ ಎಂಬ ಮೂವರ ಗಂಡ, ಮೈಸೂರು ಮತ್ತು ನಂಜನಗೂಡಿಗೆ ಆರಾರು ತಿಂಗಳು ಹಂಚಿಕೆಯಾಗುತ್ತಾನೆ!

ಶಿವ ಮತ್ತು ದೇವಿಯನ್ನು ನಾನಾ ರೂಪ, ರೀತಿಗಳ ಮೂಲಕ ಸಾಮಾನ್ಯರ ಬದುಕಿಗೆ ಆವಾಹಿಸಿಕೊಂಡು ಕಾವ್ಯ ಕಟ್ಟಿದ ಉದಾಹರಣೆಗಳು ಬಹಳಷ್ಟು ದೊರೆಯುತ್ತವೆ. ಶಿವನ ಯಾವ ಒರಟುತನಕ್ಕೂ ಜಗ್ಗದ ಸ್ವಾಭಿಮಾನಿ ಪಾರ್ವತಿಯ ಚಿತ್ರಣಗಳು ಕೆಲವು ಕಡೆಗಳಲ್ಲಿ ದೊರೆಯುತ್ತವೆ. ತಾನಿದ್ದಂತೆ, ತನಗೊಂದೂ ಮಾತು ಹೇಳದೆ, ಗಂಗೆಯನ್ನು ಜಟೆಯಲ್ಲಿ ಧರಿಸಿ ಬರುವ ಶಿವನ ಬಗ್ಗೆ ಮನನೊಂದ ಪಾರ್ವತಿ, ಊಟಕ್ಕಾಗಿ ಎರಡು ಮಣೆ ಇರಿಸುತ್ತಾಳೆ. ಆ ಇನ್ನೊಂದು ಮಣೆ ಯಾರಿಗೆ ಎಂದು ಮಾರ್ಮಿಕವಾಗಿ ಪ್ರಶ್ನಿಸುವ ಶಿವನಿಗೆ, ನನಗಲ್ಲ- ನಿನಗಿಬ್ಬರಿದ್ದಾರಲ್ಲ! ಇದು ಆ ಸುರನಾರಿಗೆ ಎಂದು ಚುಚ್ಚಿ ನುಡಿಯುತ್ತಾಳೆ. ಭೈರವ, ಬಿಳಿಗಿರಿರಂಗ, ಗಂಗಾಧರ, ಮೈಲಾರಲಿಂಗನೇ ಮುಂತಾದವರ ಕಾವ್ಯಗಳಲ್ಲೂ ಸತಿಯಿದ್ದಂತೆ ಉಪಪತ್ನಿಯರನ್ನು ತರುವ ಕಥೆಗಳಿವೆ. ಈ ಕಾವ್ಯಗಳು ರಚಿತವಾದ ಕಾಲಘಟ್ಟಗಳಲ್ಲಿ ಇದ್ದಿರಬಹುದಾದ ಸಾಮಾಜಿಕ ಸ್ಥಿತಿಯ ಚಿತ್ರಣ ಇದಾಗಿರಬಹುದು.

ಹತ್ತೊಂಬತ್ತನೇ ಶತಮಾನದ ಕವಯಿತ್ರಿ ಹರಪನಹಳ್ಳಿ ಭೀಮವ್ವ ಅವರ ಕಾವ್ಯಕ್ಕೂ ಶಿವ-ಸತಿಯರ ದಾಂಪತ್ಯ ವಸ್ತುವಾಗಿದೆ. ಮೊದಲಿಗೆ ಶಿವ-ಶಿವೆಯರ ಸರಸದ ಮಾತು ಎಂಬಂತೆ ಆರಂಭವಾಗುವ ಸಾಲುಗಳು, ನಿಧಾನಕ್ಕೆ ತನ್ನ ವ್ಯಾಪ್ತಿಯನ್ನು ಹಿಗ್ಗಿಸಿಕೊಂಡು ನೀಡುವ ಸಂದೇಶ ಮಹತ್ವದ್ದು. ತನ್ನಿಷ್ಟದ ಹೊತ್ತಿಗೆ ಬಂದು ʻಬಾಗಿಲು ತೆಗಿʼ ಎಂದು ಈಶ್ವರನು ಪಾರ್ವತಿಯನ್ನು ಕೇಳಿದಾಗ, ʻಬಂದರ‍್ಯಾರೀ ವ್ಯಾಳ್ಯಾದಿ ಬಾಗಿಲು ತೆರೆಯೋರು ಯಾರಿಲ್ಲʼ ಎನ್ನುವ ಮೂಲಕ ಗೃಹಸ್ಥರು ಬರುವ ಹೊತ್ತಲ್ಲವಿದು ಎಂದು ಸೂಚಿಸುತ್ತಾಳೆ. ಇದಕ್ಕೆ ತಲೆ ಕಡಿಸಿಕೊಳ್ಳದ ಶಿವ, ಬಂದವ ಪಶುಪತಿ, ಸರ್ಪಶರೀರಿ, ನೀಲಕಂಠ, ಭೂತನಾಥ ಎಂಬಂಥ ನಾನಾ ವಿಶೇಷಣಗಳಿಂದ ತನ್ನನ್ನು ತಾನು ವರ್ಣಿಸಿಕೊಳ್ಳುತ್ತಾನೆ. ಇವನ ಯಾವ ಬಿರುದು-ಬಡಿವಾರಗಳಿಗೆ ಬಗ್ಗದ ಪಾರ್ವತಿ, ತನ್ನಂತರಂಗದ ಕದ ತೆರೆಯಬೇಕಾದರೆ ನಿನ್ನೆಲ್ಲಾ ಪ್ರಭಾವಳಿಗಳನ್ನೂ ಕಳಚಿಟ್ಟು, ತನ್ನ ಪತಿಯಾಗಿ ಬಾ ಎಂಬ ಸ್ಪಷ್ಟ ಸಂದೇಶ ನೀಡುತ್ತಾಳೆ.

ಇದನ್ನೂ ಓದಿ | ದಶಮುಖ ಅಂಕಣ | ಕೋವಿದ ಗಿರಿಜೆಯ ವರಸುತನಾ

ಲೇಖಕಿ ವೈದೇಹಿಯವರ ʻಶಿವನ ಮೀಸುವ ಹಾಡುʼ ಕವನದಲ್ಲಿ ಬರುವ ಗೌರಿಯಂತೂ ತಲ್ಲಣಗಳನ್ನೆಲ್ಲಾ ತಡೆದುಕೊಳ್ಳುವ ʻಆರ್ದ್ರಗರ್ವದ ಹುಡುಗಿʼ. ಲೋಕ ಸಂಚಾರ ಮುಗಿಸಿ ಬರುವ ಶಿವನನ್ನು ಮಣೆಯ ಮೇಲೆ ಸ್ನಾನಕ್ಕೆ ಕುಳ್ಳಿರಿಸುತ್ತಾಳೆ ಗೌರಿ. “ಇದೋ ಈ ತಂಬಿಗೆ ನೀರು ಗಂಗೆಯವತಾರಕ್ಕೆ ಇದು ಇಗೋ ಆ ಮಣಿಕರ್ಣಿಕೆಗೆ…” ಎನ್ನುತ್ತಾ ತನ್ನ ಬಿಸಿ ಕಂಬನಿಯನ್ನೂ ಸೇರಿಸಿ ಎರೆಯುತ್ತಾಳೆ. ಆ ಬಿಸಿಗೆ ಬೆಚ್ಚುವ ಶಿವ, “ನನ್ನೇನೆಂದುಕೊಂಡೆ? ನಿನ್ನ ಬಿಟ್ಟರೆ ಶುದ್ಧ ಬೈರಾಗಿ” ಎಂದು ಸಮರ್ಥಿಸಿಕೊಳ್ಳುತ್ತಾನೆ. ಸ್ನಾನದ ನಂತರ ತಂಬಾಲು ಕುಡಿಸಿ, ಮಲಗುವುದಕ್ಕೆ ತನ್ನ ತೊಡೆಯನ್ನೇ ನೀಡಿ, “ಎಲ್ಲ ನದಿಗಳ ನೆನೆದು ಮಲಗು ದೇವ!” ಎಂದು ಚುಚ್ಚುತ್ತಾಳೆ. ಇಹದಲ್ಲೇ ಪರವನ್ನು ಕಾಣಿಸುವ ಇಂಥ ಇನ್ನೂ ಹಲವು ಮಾದರಿಗಳು ಕವಿಕಲ್ಪನೆಗಳಲ್ಲಿ ತೆರೆದುಕೊಂಡಿರಬಹುದು.

ಒಟ್ಟಿನಲ್ಲಿ, ʻಯದ್ಭಾವಂ ತದ್ಭವತಿʼ ಎಂಬ ಮಾತಿನಂತೆ, ನಮ್ಮ ಮನದಲ್ಲಿರುವುದೇ ಅಲ್ಲವೇ ನಮ್ಮ ಕ್ರಿಯೆಗಳಲ್ಲಿ ರೂಪುಗೊಳ್ಳುವುದು? ದೇವರ ಹೆಸರಿನಲ್ಲಿ ಮನುಷ್ಯತ್ವ ಮರೆಯುವ ಇಂದಿನ ದಿನಗಳಲ್ಲಿ, ದೇವರನ್ನೇ ಮನುಷ್ಯರನ್ನಾಗಿಸುತ್ತಿದ್ದ ಅಂದಿನ ಮನಸ್ಸುಗಳು ಅನನ್ಯ ಎನಿಸುವುದು ಸುಳ್ಳೇ? ನಮ್ಮ ಹುಸಿ ಪ್ರಭಾವಳಿಗಳನ್ನು ಕಿತ್ತೆಸೆದು, ಮನುಷ್ಯತ್ವದ ನೈಜ ಸಾಧ್ಯತೆಗಳನ್ನು ಕಂಡರಿಯುವ ಶಕ್ತಿಯನ್ನು ಆ ಶಕ್ತಿ ಸ್ವರೂಪಿಣಿ ನಮಗೆಲ್ಲ ನೀಡಲಿ. ನವರಾತ್ರಿಯ ಶುಭಹಾರೈಕೆಗಳು.

(ಅಂಕಣಕಾರರು ಲೇಖಕಿ, ಕತೆಗಾರ್ತಿ)

ಇದನ್ನೂ ಓದಿ | ಸವಿಸ್ತಾರ ಅಂಕಣ | ನೆಹರೂ, ಗಾಂಧಿ, ಸಾವರ್ಕರ್ ಇತ್ಯಾದಿ: ನಡೆಯಲಿ ʼಸೀಮೋಲ್ಲಂಘನೆʼ, ನಿಲ್ಲಲಿ ʼಮೂರ್ತಿ ಭಂಜನೆʼ

Exit mobile version