Site icon Vistara News

ಸಮರಾಂಕಣ | ಗೇಮ್ ಆಫ್ ಡ್ರೋನ್ಸ್: ಚೀನಾದ ಯುಎವಿ ಸಾಮರ್ಥ್ಯದ ಎದುರು ಭಾರತದ ಪವರ್‌ ಏನು?

swarm

ಅನ್‍ಮ್ಯಾನ್ಡ್ ಏರಿಯಲ್ ವೆಹಿಕಲ್ (ಯುಎವಿ) ಎಂಬ ಸಾಧನ ಸಾಮಾನ್ಯವಾಗಿ ಆಡುಭಾಷೆಯಲ್ಲಿ ಡ್ರೋನ್ ಎಂದು ಕರೆಯಲಾಗುವ, ಮಾನವ ಪೈಲಟ್, ಸಿಬ್ಬಂದಿ, ಅಥವಾ ಪ್ರಯಾಣಿಕರನ್ನು ಹೊಂದಿರದೆ ಹಾರಾಟ ನಡೆಸುವ ಏರ್ ಕ್ರಾಫ್ಟ್ ಆಗಿದೆ. ಈ ಡ್ರೋನ್‍ಗಳು ಒಬ್ಬ ಮಾನವ ನಿಯಂತ್ರಕ ಸಾಕಷ್ಟು ದೂರದಿಂದ ನಿಯಂತ್ರಿಸಬಲ್ಲ, ರಿಮೋಟ್ಲಿ– ಪೈಲಟೆಡ್ ಏರ್‌ಕ್ರಾಫ್ಟ್ (ಆರ್‌ಪಿಎ) ವೈಮಾನಿಕ ವಾಹನದಿಂದ ಆರಂಭಗೊಂಡು, ಸ್ವಯಂಚಾಲಿತ ಹಾರಾಟದ ಬೇರೆ ಬೇರೆ ಹಂತಗಳಾದ ಆಟೋ ಪೈಲಟ್ ಅಸಿಸ್ಟೆನ್ಸ್‌ನಿಂದ ಸ್ವಲ್ಪವೂ ಮಾನವ ಹಸ್ತಕ್ಷೇಪದ ಅಗತ್ಯವಿಲ್ಲದ ಸಂಪೂರ್ಣ ಸ್ವಯಂಚಾಲಿತ ವಾಹನಗಳ ಹಂತದ ತನಕ ನಿರ್ಮಾಣವಾಗುತ್ತವೆ.

ಯುಎವಿಗಳು ಅನ್‍ಮ್ಯಾನ್ಡ್ ಏರಿಯಲ್ ಸಿಸ್ಟಂನ (ಯುಎಎಸ್) ಒಂದು ಭಾಗವಾಗಿದೆ. ಇದರಲ್ಲಿ ನೆಲದಿಂದ ನಿಯಂತ್ರಣ ಸಾಧಿಸಬಲ್ಲ ವ್ಯವಸ್ಥೆ ಹಾಗೂ ಎಲ್ಐಡಿಏಆರ್‌ನಂತಹ (ಲೈಟ್ ಡಿಟೆಕ್ಷನ್ ಆಂಡ್ ರೇಂಜಿಂಗ್) ಸಂವಹನ ವ್ಯವಸ್ಥೆಗಳಿದ್ದು, ಅವು ವಾಹನದ ಚಲನೆಯನ್ನು ಲೆಕ್ಕಾಚಾರ ಮಾಡಲು ಸಹಾಯಕವಾಗಿವೆ.

ಯುಎವಿಗಳು ಎಲ್ಲಿ ಬಳಕೆಯಾಗುತ್ತವೆ?

ಯುಎವಿಗಳನ್ನು ಮೂಲತಃ ಇಪ್ಪತ್ತನೆಯ ಶತಮಾನದಲ್ಲಿ ಮಿಲಿಟರಿ ಕಾರ್ಯಾಚರಣೆಗಳ ಉದ್ದೇಶಕ್ಕಾಗಿ ನಿರ್ಮಾಣಗೊಳಿಸಲಾಯಿತು. ಆದರೆ ಬಳಿಕ ತಂತ್ರಜ್ಞಾನದ ಅಭಿವೃದ್ಧಿ ಹಾಗೂ ನಿಯಂತ್ರಣ ತಂತ್ರಜ್ಞಾನದಲ್ಲಿನ ವೃದ್ಧಿಯಿಂದಾಗಿ ಯುಎವಿ ನಿರ್ಮಾಣದ ವೆಚ್ಚದಲ್ಲಿ ಇಳಿಕೆ ಕಂಡುಬಂತು. ಇದರಿಂದಾಗಿ ಅವುಗಳನ್ನು ಮಿಲಿಟರಿಗೆ ಸಂಬಂಧಪಡದ ಕಾರ್ಯಗಳಲ್ಲೂ ಬಳಸಿಕೊಳ್ಳಲು ಆರಂಭವಾಯಿತು. ಪ್ರಸ್ತುತ ದಿನಗಳಲ್ಲಿ ಯುಎವಿಗಳನ್ನು ಕಾಳ್ಗಿಚ್ಚು ವಿಚಕ್ಷಣೆ, ಎತ್ತರದಿಂದ ಛಾಯಾಗ್ರಹಣ ನಡೆಸಲು, ವಸ್ತುಗಳನ್ನು ತಲುಪಿಸಲು, ಕೃಷಿ, ಪೊಲೀಸಿಂಗ್ ಮತ್ತು ಕಣ್ಗಾವಲು, ಮೂಲಭೂತ ಅಭಿವೃದ್ಧಿಯ ಪರೀಕ್ಷೆ, ವಿಜ್ಞಾನ, ಕಳ್ಳ ಸಾಗಾಣಿಕೆ, ಡ್ರೋನ್ ರೇಸಿಂಗ್ ಸೇರಿದಂತೆ ಹತ್ತು ಹಲವು ಕಾರ್ಯಗಳಲ್ಲಿ ಬಳಸಲಾಗುತ್ತಿದೆ.

ಹೆರಾನ್‌ ಡ್ರೋನ್‌

ಭಾರತದಲ್ಲಿ ಡ್ರೋನ್‍ಗಳ ಇತಿಹಾಸ

ಭಾರತ ಮೊದಲ ಬಾರಿಗೆ ಸೇನಾ ಕಾರ್ಯಾಚರಣೆಗಳಲ್ಲಿ ಡ್ರೋನ್ ಬಳಕೆ ಮಾಡಿದ ದಾಖಲೆ 1999ರಲ್ಲಿ ಪಾಕಿಸ್ತಾನದ ವಿರುದ್ಧ ನಡೆದ ಕಾರ್ಗಿಲ್ ಯುದ್ಧದಲ್ಲಿ ಲಭ್ಯವಾಯಿತು. ಆ ಸಮಯದಲ್ಲಿ ಲೈನ್ ಆಫ್ ಕಂಟ್ರೋಲ್ (ಎಲ್ಓಸಿ) ಉದ್ದಕ್ಕೂ ಫೋಟೋ ವಿಚಕ್ಷಣೆಗೆ ಡ್ರೋನ್‍ಗಳನ್ನು ಬಳಸಿಕೊಳ್ಳಲಾಗಿತ್ತು.

ಇಸ್ರೇಲ್ ಮೊದಲಿನಿಂದಲೂ ಭಾರತದ ಮಿತ್ರರಾಷ್ಟ್ರವಾಗಿದ್ದು, ಭಾರತೀಯ ವಾಯುಪಡೆಗೆ ವಿವೇಚನೆಯಿಂದ ಹುಡುಕಾಟದ ಡ್ರೋನ್‍ಗಳನ್ನು ಒದಗಿಸುತ್ತಾ ಬಂದಿದೆ. ಈ ಡ್ರೋನ್‍ಗಳ ಸಹಾಯದಿಂದ ಭಾರತ ಲೈನ್ ಆಫ್ ಕಂಟ್ರೋಲ್‌ನಲ್ಲಿ ತನಗೆ ಬೇಕಾದ ಸೂಕ್ತ ಮಾಹಿತಿಗಳನ್ನು ಸುಲಭವಾಗಿ ಕಲೆಹಾಕಲು ಸಾಧ್ಯವಾಯಿತು. ಬಳಿಕ ಸರ್ಕಾರಿ ಸ್ವಾಮ್ಯದ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಓ) ಹಾಗೂ ಹತ್ತು ಹಲವು ಖಾಸಗಿ ಭಾರತೀಯ ಸಂಸ್ಥೆಗಳು ಡ್ರೋನ್‍ಗಳ ನಿರ್ಮಾಣ ಕಾರ್ಯದಲ್ಲಿ ತೊಡಗಿ, ದೇಶೀಯವಾಗಿ ಯುಎವಿ ತಂತ್ರಜ್ಞಾನವನ್ನು ಅಭಿವೃದ್ಧಿ ಪಡಿಸತೊಡಗಿದವು.

ಜಗತ್ತಿನ ನಾಲ್ಕನೇ ರಾಷ್ಟ್ರವಾಗಿ ಭಾರತದ ಸಾಧನೆ

2021ರ ಜನವರಿ 15ರಂದು 73ನೇ ಸೇನಾ ದಿನಾಚರಣೆಯ ಸಂದರ್ಭದಲ್ಲಿ ಭಾರತೀಯ ಸೇನೆ ತನ್ನ ಡ್ರೋನ್ ಸಾಮರ್ಥ್ಯವನ್ನು ಪ್ರದರ್ಶಿಸಿತು. ಇದರಲ್ಲಿ ‘ಕಾಮಿಕೇಜ಼್’ ದಾಳಿ ಹಾಗೂ ‘ಮದರ್ ಶಿಪ್’ ಮೂಲಕ ನಡೆಸುವ ದಾಳಿಗಳೂ ಸೇರಿದ್ದವು.

ಡಿಆರ್‌ಡಿಒ ಘಾತಕ್‌ ಡ್ರೋನ್‌

ಮುಂದೆ 2022ರ ಜನವರಿ 29ರಂದು ನವದೆಹಲಿಯಲ್ಲಿ ನಡೆದ ಬೀಟಿಂಗ್ ರಿಟ್ರೀಟ್ ಸಮಾರಂಭದಲ್ಲಿ ಭಾರತೀಯ ಸೇನಾಪಡೆಗಳ 1,000 ಸ್ವಾರ್ಮ್ ಡ್ರೋನ್‍ಗಳು ಆಕಾಶದಲ್ಲಿ ಬೆಳಕು ಮೂಡಿಸಿ, ಒಂದು ಅದ್ಭುತ, ರೋಮಾಂಚಕ ಪ್ರದರ್ಶನ ನಡೆಸುವ ಮೂಲಕ ರಾಷ್ಟ್ರವನ್ನೇ ಸ್ತಂಭೀಭೂತಗೊಳಿಸಿದ್ದವು. ಈ ಪ್ರದರ್ಶನವನ್ನು ಮೇಕ್ ಇನ್ ಇಂಡಿಯಾ ಯೋಜನೆಯಡಿ ಬಾಟ್‍ಲ್ಯಾಬ್ ಡೈನಾಮಿಕ್ಸ್ ಸಂಸ್ಥೆ ರೂಪಿಸಿತ್ತು. ಆ ಪ್ರದರ್ಶನದ ಮೂಲಕ ಇಂಥಾ ಸಾಧನೆ ಕೈಗೊಂಡ ಜಗತ್ತಿನ ಕೇವಲ ನಾಲ್ಕನೇ ರಾಷ್ಟ್ರವಾಗಿ ಭಾರತ ಹೊರಹೊಮ್ಮಿತು. ಈ ಪ್ರದರ್ಶನ ಡ್ರೋನ್ ತಂತ್ರಜ್ಞಾನದ ಕ್ಷೇತ್ರದಲ್ಲಿ ಭಾರತ ತನ್ನ ಬಲವಾದ ಹೆಜ್ಜೆ ಗುರುತು ಮೂಡಿಸಲು ಕಾರಣವಾಯಿತು.

ಸ್ವಾರ್ಮ್ ಡ್ರೋನ್ ಎಂದು ಕರೆಯಲ್ಪಡುವ ಕಾರ್ಯಾಚರಣೆ ಎಂದರೆ, ಯುಎವಿಗಳ ಒಂದು ಬೃಹತ್ ಗುಂಪು (ಅಥವಾ ಹಲವಾರು ಸಣ್ಣ ಸಣ್ಣ ಗುಂಪುಗಳು) ಒಟ್ಟಾಗಿ ಸಮರ ನಡೆಯುವ ಅಥವಾ ಶತ್ರುವಿನ ವಾಯುಪ್ರದೇಶದಲ್ಲಿ ಹಾರಾಟ ನಡೆಸುವುದು. ಹೀಗೆ ಗುಂಪಾಗಿ ಡ್ರೋನ್‍ಗಳು ಹಾರಾಟ ನಡೆಸುವಾಗ ಶತ್ರು ರೇಡಾರ್‌ಗಳು ಅವುಗಳನ್ನು ಬಹುದೊಡ್ಡ ವಿಮಾನವೇ ಇರಬಹುದೇನೊ ಎಂದು ಭಾವಿಸುವ ಮೂಲಕ ಗೊಂದಲಕ್ಕೊಳಗಾಗುತ್ತವೆ. ಆ ಮೂಲಕ ಸ್ವಾರ್ಮ್ ಡ್ರೋನ್‍ಗಳು ಅವುಗಳ ಉದ್ದೇಶಿತ ಕಾರ್ಯಗಳಾದ ಗುರಿಯ ಮೇಲಿನ ಕರಾರುವಕ್ಕಾದ ದಾಳಿ ಅಥವಾ ಕಾರ್ಯಾಚರಣೆಗಳಿಗೆ ಬೆಂಬಲ ನೀಡುವ ಕಾರ್ಯವನ್ನು ಪೂರೈಸುತ್ತವೆ. ಸ್ವಾರ್ಮ್ ಅಥವಾ ಗುಂಪಿನಲ್ಲಿರುವ ಈ ಡ್ರೋನ್‍ಗಳು ವಿವಿಧ ಬಗೆಯ ಕಾರ್ಯಗಳನ್ನು ಕೈಗೊಳ್ಳಲು ಸಮರ್ಥವಾಗಿರುತ್ತವೆ. ಅವುಗಳು ಟ್ಯಾಂಕ್‍ಗಳ ಮೇಲೆ, ಇನ್‍ಫ್ಯಾಂಟ್ರಿ ಯುದ್ಧ ವಾಹನಗಳು, ಶಸ್ತ್ರ ಸಂಗ್ರಹಾಗಾರಗಳು, ತೈಲ ಸಂಗ್ರಹಾಗಾರ, ಉಗ್ರಗಾಮಿಗಳ ನೆಲೆಗಳ ಮೇಲೆ ದಾಳಿ ನಡೆಸಬಲ್ಲವು.

ಚೀನಾದ ಕಾಯ್‌ ಹಾಂಗ್‌ ಡ್ರೋನ್

ಯುಎವಿಗಳನ್ನು ಭವಿಷ್ಯದ ಯುದ್ಧದ ಆಯುಧಗಳೆಂದು ಪರಿಗಣಿಸಲಾಗುತ್ತಿದೆ. ಆದ್ದರಿಂದ ಭಾರತೀಯ ಸೇನೆ, ಭಾರತೀಯ ಸ್ಟಾರ್ಟಪ್ ಸಂಸ್ಥೆಗಳಿಗೆ 200 ಕೋಟಿ ರೂಪಾಯಿ ಮೌಲ್ಯದ ಕಣ್ಗಾವಲು, ಇಲೆಕ್ಟ್ರಾನಿಕ್ ವಾರ್‌ಫೇರ್ ಮತ್ತು ಕೈನೆಟಿಕ್ ಅಟ್ಯಾಕ್ ಸಾಮರ್ಥ್ಯ ಹೊಂದಿರುವ ಯುಎವಿಗಳನ್ನು ಪೂರೈಸಲು ಆದೇಶಿಸಿದೆ. ಬೆಂಗಳೂರು ಮೂಲದ ಸ್ಟಾರ್ಟಪ್ ಸಂಸ್ಥೆಯಾದ ನ್ಯೂಸ್ಪೇಸ್ ರಿಸರ್ಚ್ ಆಂಡ್ ಟೆಕ್ ಈ ಗುತ್ತಿಗೆಯನ್ನು ತನ್ನದಾಗಿಸಿಕೊಂಡಿದೆ.

ಭಾರತದಲ್ಲಿ ಎಲ್ಲಾ ರೀತಿಯ (ಮಾನವಸಹಿತ ಅಥವಾ ಸ್ವಯಂಚಾಲಿತ) ವೈಮಾನಿಕ ವಾಹನಗಳ ಬಳಕೆಯನ್ನು ಸಂಪೂರ್ಣವಾಗಿ ಡೈರೆಕ್ಟರೇಟ್ ಜನರಲ್ ಆಫ್ ಸಿವಿಲ್ ಏವಿಯೇಷನ್ (ಡಿಜಿಸಿಎ) ನಿಯಂತ್ರಿಸುತ್ತದೆ.

“ಭಾರತದ ನೂತನ ಡ್ರೋನ್ ನಿಯಮಗಳು ಯುಎವಿ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಭಾರತೀಯ ಯುವಜನತೆ ಮತ್ತು ಸ್ಟಾರ್ಟಪ್ ಸಂಸ್ಥೆಗಳಿಗೆ ಅಪಾರ ಸಹಾಯ, ಸಹಕಾರ ಒದಗಿಸಲಿದೆ. ಇದು ಈ ಕ್ಷೇತ್ರದಲ್ಲಿ ಆವಿಷ್ಕಾರ ಮತ್ತು ವ್ಯವಹಾರದಲ್ಲಿನ ಹೊಸ ಸಾಧ್ಯತೆಗಳನ್ನು ತೆರೆಯಲಿದೆ. ಈ ನೀತಿ ಭಾರತದ ಆವಿಷ್ಕಾರ, ತಂತ್ರಜ್ಞಾನ ಮತ್ತು ಇಂಜಿನಿಯರಿಂಗ್ ಕ್ಷೇತ್ರಗಳ ಶಕ್ತಿಯನ್ನು ಹೆಚ್ಚಿಸಿ, ಭಾರತವನ್ನು ಭವಿಷ್ಯದ ಡ್ರೋನ್ ಕೇಂದ್ರವನ್ನಾಗಿ ರೂಪಿಸಲಿದೆ” ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ತನ್ನ ಟ್ವೀಟ್‍ನಲ್ಲಿ ಉಲ್ಲೇಖಿಸಿದ್ದಾರೆ.

ಸೆಪ್ಟೆಂಬರ್ 2021ರಲ್ಲಿ ಕೇಂದ್ರ ಸಚಿವ ಸಂಪುಟ ಪ್ರೊಡಕ್ಷನ್– ಲಿಂಕ್ಡ್ ಇನ್ಸೆಂಟಿವ್ (ಪಿಎಲ್ಐ) ಯೋಜನೆಗೆ ಅನುಮೋದನೆ ನೀಡಿತು. ಈ ಯೋಜನೆ ಡ್ರೋನ್ ಉತ್ಪಾದಕರಿಗೆ ಮತ್ತು ಡ್ರೋನ್ ಉಪಕರಣಗಳ ತಯಾರಕರಿಗೆ 20%ದಷ್ಟು ಪ್ರೋತ್ಸಾಹಧನವನ್ನು ಅವುಗಳ ಮೌಲ್ಯವರ್ಧನೆಯ ಆಧಾರದ ಮೇಲೆ ಒದಗಿಸುತ್ತದೆ.

ಚೀನಾದ ಡ್ರೋನ್‍ಗಳು ಎಷ್ಟು ಸಮರ್ಥ?

ಚೀನಾ ಈಗಾಗಲೇ ಸ್ವಾರ್ಮ್ ಡ್ರೋನ್ ತಂತ್ರಜ್ಞಾನದಲ್ಲಿ ಅಪಾರ ಮುನ್ನಡೆ ಸಾಧಿಸಿದೆ. 2020ರಲ್ಲಿ ಚೀನಾ ಒಂದು ವೀಡಿಯೋ ಚಿತ್ರಣವನ್ನು ಬಿಡುಗಡೆಗೊಳಿಸಿತ್ತು. ಅದರಲ್ಲಿ ಒಂದು ಟ್ರಕ್ ಮೇಲೆ ಸ್ಥಾಪಿಸಿದ್ದ ವ್ಯವಸ್ಥೆಯ ಮೂಲಕ ಸ್ವಾರ್ಮ್ ಡ್ರೋನ್‍ಗಳ ಹಿಂಡನ್ನೇ ಉಡಾಯಿಸಲಾಗಿತ್ತು. ಇಂತಹ ಆಧುನಿಕ ತಂತ್ರಜ್ಞಾನವನ್ನು ಅಷ್ಟು ದೊಡ್ಡ ಪ್ರಮಾಣದ ಡ್ರೋನ್‍ಗಳ ಉಡಾವಣೆಗೆ ಪ್ರಪಂಚದಲ್ಲೇ ಇದೇ ಮೊದಲ ಬಾರಿಗೆ ಬಳಸಿಕೊಳ್ಳಲಾಗಿತ್ತು.

ಇದನ್ನೂ ಓದಿ: ಸಮರಾಂಕಣ | ಏನನ್ನೂ ಧ್ವಂಸಗೊಳಿಸದೆ ಶತ್ರುವಿಗೆ ಸಾವು ತಂದೊಡ್ಡುವ ಅಸ್ತ್ರ Hellfire R9X

ವರದಿಗಳ ಪ್ರಕಾರ, ಚೀನಾ ಈಗಾಗಲೇ ತನ್ನ ಇಂಟಲಿಜೆನ್ಸ್, ಸರ್ವಯಲೆನ್ಸ್ ಆಂಡ್ ರಿಕನಯಸೆನ್ಸ್ (ಐಎಸ್ಆರ್) ಕಾರ್ಯಾಚರಣೆಗಳಿಗಾಗಿ ದಾಳಿ ನಡೆಸುವ ಸಾಮರ್ಥ್ಯ ಹೊಂದಿರುವ ಮತ್ತು ಆಯುಧಗಳನ್ನು ಒಯ್ಯದ ಯುಎವಿ ವ್ಯವಸ್ಥೆಗಳನ್ನು ಯಶಸ್ವಿಯಾಗಿ ಉತ್ಪಾದಿಸುತ್ತಿದೆ. 2018ರಲ್ಲಿ ಬಂದ ವರದಿಯೊಂದರ ಪ್ರಕಾರ, ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿ ಏರ್ ಫೋರ್ಸ್ ಯುಎವಿ ಕ್ಷೇತ್ರದಲ್ಲಿ ಅಪಾರವಾಗಿ ಬೆಳವಣಿಗೆ ಹೊಂದುತ್ತಿದೆ. ಈ ಮೊದಲು ಅಮೆರಿಕಾರ ವಾಯುಪಡೆಗೆ ಹೋಲಿಸಿದರೆ ಅದರ ಸಾಮರ್ಥ್ಯ ಸಾಕಷ್ಟು ಕಡಿಮೆಯಾಗಿತ್ತು. ಆದರೆ ಈಗ ಚೀನಾ ಸಾಮರ್ಥ್ಯದಲ್ಲಿ ಅಮೆರಿಕಾದ ವಾಯುಪಡೆಯ ಜೊತೆಗಿನ ತನ್ನ ಹೋಲಿಕೆಯಲ್ಲಿ ಇದ್ದ ಬೃಹತ್ ಅಂತರವನ್ನು ತಗ್ಗಿಸುತ್ತಾ ಬಂದಿದೆ. ಇದು ತಾಂತ್ರಿಕವಾಗಿ ಅಮೆರಿಕಾಗೆ ಚೀನಾ ಮೇಲಿದ್ದ ಮೇಲುಗೈಯನ್ನು ಕಡಿಮೆಗೊಳಿಸುತ್ತಿದೆ.

ಚೀನಾ ಅತ್ಯಂತ ಕ್ಷಿಪ್ರವಾಗಿ ಜಾಗತಿಕ ಮಟ್ಟದಲ್ಲಿ ಬಹು ಪಾತ್ರಗಳ ದಾಳಿ ನಡೆಸುವ ಸಾಮರ್ಥ್ಯ ಹೊಂದಿರುವ ಯುಎವಿಗಳ ಪ್ರಮುಖ ರಫ್ತುದಾರ ರಾಷ್ಟ್ರವಾಗಿ ಹೊರಹೊಮ್ಮಿದೆ. 2008 ಮತ್ತು 2018ರ ಮಧ್ಯದಲ್ಲಿ ಚೀನಾ ವಿವಿಧ ರಾಷ್ಟ್ರಗಳಿಗೆ ಒಟ್ಟು 181 ಡ್ರೋನ್‍ಗಳನ್ನು ಮಾರಾಟ ಮಾಡಿದೆ. ಇವುಗಳಲ್ಲಿ ಬಹುತೇಕ ಮುಕ್ಕಾಲು ಪಾಲು ಡ್ರೋನ್‍ಗಳು ದಾಳಿ ನಡೆಸುವ ಸಾಮರ್ಥ್ಯ ಹೊಂದಿರುವ ವ್ಯವಸ್ಥೆಗಳಾಗಿವೆ. ಈ ಯುಎವಿಗಳ ಪಟ್ಟಿಯಲ್ಲಿ ಅತ್ಯಂತ ಜನಪ್ರಿಯ ಮಾದರಿಗಳಾದ ಕಾಯ್‍ಹಾಂಗ್ (ಮಾರಾಟವಾದ ಡ್ರೋನ್‍ಗಳ 35.4%) ಹಾಗೂ ವಿಂಗ್ ಲೂಂಗ್ (53.6%) ಸರಣಿಗಳೂ ಸೇರಿವೆ. ಈ ಯಶಸ್ಸಿನ ಆಧಾರದ ಮೇಲೆ ಅತ್ಯಾಧುನಿಕ ಕಾಯ್ ಹಾಂಗ್ ಮಾದರಿಯಾದ ಸಿಎಚ್ – 5 ಸಹ ನಿರ್ಮಾಣಗೊಳ್ಳಲಿದೆ ಎನ್ನಲಾಗುತ್ತದೆ.

ಚೀನಾದ ವಿಂಗ್‌ ಲೂಂಗ್‌ ಡ್ರೋನ್

ಬೀಜಿಂಗ್ ಜಗತ್ತಿನಾದ್ಯಂತ ಇರುವ ತನ್ನ ಸಹಯೋಗಿ ರಾಷ್ಟ್ರಗಳೊಡನೆ ಸೇರಿ ತನ್ನ ಹೆಚ್ಚಿನ ಯುಎವಿಗಳನ್ನು ಮಾರಾಟ ಮಾಡಲು ಆಲೋಚಿಸುತ್ತಿದೆ. 2017ರಲ್ಲಿ ಸೌದಿ ಅರೇಬಿಯಾ ಚೀನಾದೊಡನೆ ಒಪ್ಪಂದವೊಂದಕ್ಕೆ ಸಹಿ ಹಾಕಿದ್ದು, ಅದು 300 ಚೀನಾ ನಿರ್ಮಿತ ಯುಎವಿಗಳನ್ನು ಖರೀದಿಸಲಿದೆ. ಅದರೊಡನೆ ಸಿಎಚ್ ಸರಣಿಯ ಡ್ರೋನ್‍ಗಳನ್ನು ಉತ್ಪಾದಿಸಲು ಉತ್ಪಾದನಾ ಮತ್ತು ನಿರ್ವಹಣಾ ಘಟಕವನ್ನು ಆರಂಭಿಸಲು ನಿರ್ಧರಿಸಿದೆ. 2018ರಲ್ಲಿ ಚೀನಾ ಮತ್ತು ಪಾಕಿಸ್ತಾನಗಳು ಒಂದು ಒಪ್ಪಂದವನ್ನು ಕೈಗೊಂಡಿದ್ದು, ಅದರಂತೆ ಎರಡೂ ರಾಷ್ಟ್ರಗಳೂ ಒಂದಾಗಿ 48 ವಿಂಗ್ ಲೂಂಗ್ || ಲಾಂಗ್ ಎಂಡ್ಯುರೆನ್ಸ್ ಡ್ರೋನ್‍ಗಳನ್ನು ನಿರ್ಮಿಸುವ ನಿರ್ಧಾರ ತೆಗೆದುಕೊಂಡಿವೆ.

ಡ್ರೋನ್‍ಗಳನ್ನು ರಫ್ತು ಮಾಡುವ ರಾಷ್ಟ್ರಗಳ ಮಧ್ಯದ ಸ್ಪರ್ಧೆಯಲ್ಲಿ ಚೀನಾ ಈಗಾಗಲೇ ಉನ್ನತ ಸ್ಥಾನದಲ್ಲಿ ಸ್ಥಾಪಿತವಾಗಿದೆ. ಮಿಲಿಟರಿ ಯುಎವಿಗಳ ರಫ್ತಿನ ವಿಚಾರದಲ್ಲಿ ಚೀನಾ ಇತರ ಪ್ರತಿಸ್ಪರ್ಧಿ ರಫ್ತುದಾರರನ್ನು ಅಂತಾರಾಷ್ಟ್ರೀಯ ಡ್ರೋನ್ ಮಾರುಕಟ್ಟೆಯಲ್ಲಿ ಮೂಲೆಗುಂಪು ಮಾಡಿದೆ. ಚೀನಾದ ಡ್ರೋನ್ ಕಂಪನಿಗಳು ಜಾಗತಿಕ ಡ್ರೋನ್ ಮಾರುಕಟ್ಟೆಯ 80% ವ್ಯವಹಾರವನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡಿವೆ.

ವರದಿಗಳ ಪ್ರಕಾರ, ಚೀನಾ 2030ರ ವೇಳೆಗೆ ಕೃತಕ ಬುದ್ಧಿಮತ್ತೆಯ ವಿಚಾರದಲ್ಲಿ ಜಾಗತಿಕ ನಾಯಕನಾಗುವ ಉದ್ದೇಶ ಹೊಂದಿದೆ. ಆ ಕಾರಣಕ್ಕಾಗೇ ಯುಎವಿ ನಿರ್ಮಾಣವನ್ನು ಆದ್ಯತೆಯ ಕ್ಷೇತ್ರವನ್ನಾಗಿಸಿದ ಚೀನಾದ ಸ್ಟೇಟ್ ಕೌನ್ಸಿಲ್, 2017ರಲ್ಲಿ “ನ್ಯೂ ಜನರೇಷನ್ ಆರ್ಟಿಫಿಷಿಯಲ್ ಇಂಟಲಿಜೆನ್ಸ್ (ಏಐ) ಡೆವಲಪ್ಮೆಂಟ್ ಪ್ಲಾನ್” ಮೂಲಕ ಯುಎವಿ ನಿರ್ಮಾಣದ ಯೋಜನೆಯನ್ನು ರಾಷ್ಟ್ರೀಯ ಕಾರ್ಯತಂತ್ರದ ಭಾಗವನ್ನಾಗಿಸಿದೆ.

ಇದನ್ನೂ ಓದಿ: ಸಮರಾಂಕಣ ಅಂಕಣ | ರಣಭಯಂಕರ Rafale Jet ಅಪಾರ ಸಾಮರ್ಥ್ಯದ ಗುಟ್ಟೇನು?

Exit mobile version