ಭಾರತ ಭೂಮಿಯಿಂದ ಭೂಮಿಗೆ ದಾಳಿ ನಡೆಸುವ ಅಗ್ನಿ- 5 ಕ್ಷಿಪಣಿಯ ಯಶಸ್ವಿ ಪರೀಕ್ಷಾ ಪ್ರಯೋಗ ನಡೆಸಿದೆ. ಅಗ್ನಿ 5 ಕ್ಷಿಪಣಿ, ಭಾರತದ ಅಣ್ವಸ್ತ್ರ ಸಾಮರ್ಥ್ಯ ಹೊಂದಿರುವ, ದೂರದ ವ್ಯಾಪ್ತಿ ಹೊಂದಿರುವ ಬ್ಯಾಲಿಸ್ಟಿಕ್ ಕ್ಷಿಪಣಿಯಾಗಿದ್ದು, 5,000 ಕಿಲೋಮೀಟರ್ ದೂರದಲ್ಲಿರುವ ಗುರಿಯ ಮೇಲೆ ದಾಳಿ ನಡೆಸಬಲ್ಲದು.
ಇದು ಮೂರು ಹಂತಗಳ ಘನ ಇಂಧನ ಇಂಜಿನನ್ನು ಬಳಸುತ್ತದೆ. ನ್ಯೂಕ್ಲಿಯರ್ ಸಾಮರ್ಥ್ಯ ಹೊಂದಿರುವ ಈ ಕ್ಷಿಪಣಿ 1,500 ಕೆಜಿಯಷ್ಟು ಸಿಡಿತಲೆಗಳನ್ನು ಒಯ್ಯಬಲ್ಲದು. ಇದರ ಉಡಾವಣಾ ತೂಕ 50,000 ಕೆಜಿ. ಭಾರತದಲ್ಲಿರುವ ಅತ್ಯಂತ ಪ್ರಬಲ ಕ್ಷಿಪಣಿಗಳಲ್ಲಿ ಒಂದಾಗಿದೆ.
ಅಗ್ನಿ-5 ಕ್ಷಿಪಣಿ ಬಹುತೇಕ ಇಂಟರ್ ಕಾಂಟಿನೆಂಟಲ್ ಬ್ಯಾಲಿಸ್ಟಿಕ್ ಮಿಸೈಲ್ (ಐಸಿಬಿಎಂ) ವರ್ಗದಲ್ಲಿ ಬರುತ್ತದೆ. ಅಧಿಕೃತವಾಗಿ ಒಂದು ಕ್ಷಿಪಣಿ ಐಸಿಬಿಎಂ ಎನಿಸಿಕೊಳ್ಳಬೇಕಾದರೆ ಅದರ ಕನಿಷ್ಠ ವ್ಯಾಪ್ತಿ 5,500 ಕಿಲೋಮೀಟರ್ ಆಗಿರಬೇಕಾದರೂ, ಐಸಿಬಿಎಂ ವರ್ಗಕ್ಕೆ ಸೇರಲು ಸ್ಪರ್ಧಿಸುತ್ತಿರುವ ಭಾರತದ ಅತ್ಯಂತ ಮಹತ್ವದ ಕ್ಷಿಪಣಿ ಅಗ್ನಿ 5 ಆಗಿದೆ.
ಅಗ್ನಿ 5 ಕ್ಷಿಪಣಿಯ ಪ್ರಥಮ ಪರೀಕ್ಷೆಗಳು 2012ರಲ್ಲಿ ಆರಂಭಗೊಂಡವು. ಅಗ್ನಿ ಸರಣಿಯ ಮೊದಲ ಕ್ಷಿಪಣಿ, ಅಗ್ನಿ-1 ಇಂಟಿಗ್ರೇಟೆಡ್ ಗೈಡೆಡ್ ಮಿಸೈಲ್ ಡೆವಲಪ್‌ಮೆಂಟ್ ಪ್ರೋಗ್ರಾಮ್ (ಐಜಿಎಂಡಿಪಿ) ಯೋಜನೆಯಡಿ ನಿರ್ಮಾಣಗೊಂಡು, 1989ರಲ್ಲಿ ಪರೀಕ್ಷೆಗೊಳಪಟ್ಟಿತು. ಅಗ್ನಿ- 1ರಿಂದ ಅಗ್ನಿ-5ರ ತನಕ ಎಲ್ಲಾ ಕ್ಷಿಪಣಿಗಳನ್ನೂ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಓ) ವಿನ್ಯಾಸಗೊಳಿಸಿ, ಅಭಿವೃದ್ಧಿ ಪಡಿಸಿತು.
ಅಗ್ನಿ-5 ಕ್ಷಿಪಣಿಯ ವೈಶಿಷ್ಟ್ಯಗಳು
ಅಗ್ನಿ-5 “ಕ್ಯಾನಿಸ್ಟರೈಸ್ಡ್” ಕ್ಷಿಪಣಿಯಾಗಿದೆ. ಅಂದರೆ, ಈ ಕ್ಷಿಪಣಿಯನ್ನು ರಸ್ತೆ ಮತ್ತು ರೈಲ್ವೇ ಪ್ಲಾಟ್‌ಫಾರಂ ಮೂಲಕವೂ ಉಡಾಯಿಸಬಹುದು. ಈ ವೈಶಿಷ್ಟ್ಯದಿಂದಾಗಿ ಈ ಕ್ಷಿಪಣಿಯನ್ನು ಅತ್ಯಂತ ಕ್ಷಿಪ್ರವಾಗಿ ಉಡಾಯಿಸಬಹುದು. ಕ್ಯಾನಿಸ್ಟರೈಸೇಷನ್ ಎಂಬ ಪ್ರಕ್ರಿಯೆಯಲ್ಲಿ, ಕ್ಷಿಪಣಿಯನ್ನು ಒಂದು ಸುತ್ತುವರಿದ ವ್ಯವಸ್ಥೆಯೊಂದರಲ್ಲಿ ಸಂಗ್ರಹಿಸಿ ಇಡಲಾಗುತ್ತದೆ. ಅದರ ಮೂಲಕವೇ ಕ್ಷಿಪಣಿಯ ಉಡಾವಣೆಯೂ ನಡೆಯುತ್ತದೆ. ಈ ಪ್ರಕ್ರಿಯೆ ಕ್ಷಿಪಣಿಯನ್ನು ಕಠಿಣ ವಾತಾವರಣದ ಪರಿಸ್ಥಿತಿಯಲ್ಲೂ ಸಂರಕ್ಷಿಸಿ, ಆ ಮೂಲಕ ಕ್ಷಿಪಣಿ ಹೆಚ್ಚು ಕಾಲ ಬಾಳಿಕೆ ಬರುವಂತೆ ಮಾಡುತ್ತದೆ.
ಚೀನಾದ ಹೈಪರ್‌ಸಾನಿಕ್ ಗ್ಲೈಡ್ ವೆಹಿಕಲ್
ಚೀನಾ ಆಗಸ್ಟ್ ತಿಂಗಳಲ್ಲಿ ನ್ಯೂಕ್ಲಿಯರ್ ಸಾಮರ್ಥ್ಯ ಹೊಂದಿರುವ ಒಂದು ಹೈಪರ್‌ಸಾನಿಕ್ ಕ್ಷಿಪಣಿಯ ಪರೀಕ್ಷಾ ಪ್ರಯೋಗ ನಡೆಸಿತು. ಆದರೆ ಆ ವರದಿಯನ್ನು ಚೀನಾ ಅಲ್ಲಗಳೆದು, ತಾನು ಪ್ರಯೋಗ ನಡೆಸಿದ್ದು ವೈಮಾನಿಕ ವಾಹನವೇ ಹೊರತು ಕ್ಷಿಪಣಿಯಲ್ಲ ಎಂದಿತು. ಅದು ತಾನು ಹೈಪರ್‌ಸಾನಿಕ್ ಗ್ಲೈಡ್ ವೆಹಿಕಲ್‌ನ ಪರೀಕ್ಷೆ ನಡೆಸಿರುವುದಾಗಿ ಹೇಳಿತು.
ಹೈಪರ್‌ಸಾನಿಕ್ ಗ್ಲೈಡ್ ವೆಹಿಕಲ್ ಅನ್ನು ಭೂಮಿಯ ಕೆಳ ಕಕ್ಷೆಗೆ ಚಲಿಸುವ ರಾಕೆಟ್ ಮೂಲಕ ಉಡಾಯಿಸಲಾಗುತ್ತದೆ. ಈ ಉಡಾವಣಾ ವೇಗ ಶಬ್ದದ ವೇಗಕ್ಕಿಂತ ಐದರಿಂದ ಇಪ್ಪತ್ತೈದು ಪಟ್ಟು ಹೆಚ್ಚಿರುತ್ತದೆ.
ಐಸಿಬಿಎಂ ಮತ್ತು ಹೈಪರ್‌ಸಾನಿಕ್ ಕ್ಷಿಪಣಿಯ ವ್ಯತ್ಯಾಸ
ಐಸಿಬಿಎಂ ಒಂದು ಪ್ಯಾರಾಬೋಲಿಕ್ ಪಥದಲ್ಲಿ ಚಲಿಸುತ್ತದೆ. ಅಂದರೆ, ಅದು ಮೇಲಕ್ಕೇರಿ, ಕೆಳಕ್ಕೆ ಇಳಿದು ಬರುತ್ತದೆ. ಉದಾಹರಣೆಗೆ, ಒಂದು ಚೆಂಡನ್ನು ಮೇಲಕ್ಕೆ ಎಸೆಯುವಂತೆ, ಐಸಿಬಿಎಂ ಇನ್ನಷ್ಟು ಎತ್ತರಕ್ಕೆ, ಅತ್ಯಂತ ವೇಗವಾಗಿ ಚಲಿಸುತ್ತದೆ.
ಇದನ್ನೂ ಓದಿ | ಸಮರಾಂಕಣ | ಭಾರತದ ನೌಕಾಸೇನೆಯಲ್ಲಿ ಸದ್ದಿಲ್ಲದ ಕ್ರಾಂತಿ- INS ವಿಕ್ರಾಂತ್
ಹೈಪರ್‌ಸಾನಿಕ್ ಗ್ಲೈಡ್ ವೆಹಿಕಲ್ ಭೂಮಿಯನ್ನು ಕಡಿಮೆ ಎತ್ತರದ ಪಥದಲ್ಲಿ ಸುತ್ತುವರಿಯುತ್ತದೆ. ಇದನ್ನು ಸುಲಭವಾಗಿ ಬೇಕಾದ ರೀತಿ ಚಲಿಸುವಂತೆ ಮಾಡಬಹುದು. ಮಧ್ಯ ಪಥದಲ್ಲಿ ಅದು ಚಲಿಸುವ ಹಾದಿ, ಗುರಿ, ವೇಗವನ್ನು ಬದಲಾಯಿಸಲು ಸಾಧ್ಯ. ಇದು ಹೈಪರ್‌ಸಾನಿಕ್ ಗ್ಲೈಡ್ ವೆಹಿಕಲ್ ಅನ್ನು ಗುರುತಿಸಲು ಮತ್ತು ಅದರ ವಿರುದ್ಧ ರಕ್ಷಣೆ ಪಡೆಯಲು ಕಷ್ಟವಾಗುವಂತೆ ಮಾಡುತ್ತದೆ.
ಹೈಪರ್‌ಸಾನಿಕ್ ಕ್ಷಿಪಣಿಗಳು ಸಾಮಾನ್ಯವಾಗಿ ಗಂಟೆಗೆ 5,000ದಿಂದ 25,000 ಕಿಲೋಮೀಟರ್ ವೇಗವಾಗಿ ಚಲಿಸಬಲ್ಲವು. ಈ ಮೂಲಕ ಹೈಪರ್‌ಸಾನಿಕ್ ಗ್ಲೈಡ್ ವೆಹಿಕಲ್ ಆಧುನಿಕ ವಾಣಿಜ್ಯ ವಿಮಾನಗಳಿಂದ 6ರಿಂದ 25 ಪಟ್ಟು ಹೆಚ್ಚು ವೇಗವಾಗಿ ಚಲಿಸುತ್ತದೆ. ಅವುಗಳು ಹತ್ತು ಕಿಲೋಮೀಟರ್‌ನಿಂದ ನೂರು ಕಿಲೋಮೀಟರ್‌ಗಳ ತನಕದ ಎತ್ತರದಲ್ಲಿ ಹಾರಾಟ ನಡೆಸಬಲ್ಲವು.
ಈ ಹೈಪರ್‌ಸಾನಿಕ್ ಗ್ಲೈಡ್ ವೆಹಿಕಲ್‌ಗಳ ಅತ್ಯಂತ ಎತ್ತರದಲ್ಲಿ ಹಾರಾಡುವ ಸಾಮರ್ಥ್ಯ, ಅಪಾರ ವೇಗ, ಹಾಗೂ ಸುಲಭವಾಗಿ ಪಥ ಬದಲಾಯಿಸುವ ಸಾಮರ್ಥ್ಯ ಅವುಗಳನ್ನು ಇಂದಿನ ಅತ್ಯಾಧುನಿಕ ಕ್ಷಿಪಣಿ ನಿರೋಧಕ ವ್ಯವಸ್ಥೆಗಳಿಗೂ ಕೊನೆಯ ಕ್ಷಣದ ತನಕ ಗುರುತಿಸಲು ಅತ್ಯಂತ ಕಷ್ಟಕರವಾಗುವಂತೆ ಮಾಡುತ್ತವೆ. ಅವುಗಳ ಗುರಿಗೂ ಸಹ ಕೊನೆಯ ಕ್ಷಣದ ತನಕ ಬರುವಿಕೆಯ ಬಗ್ಗೆ ಅರಿವೇ ಇರುವುದಿಲ್ಲ.
ಹೈಪರ್‌ಸಾನಿಕ್ ಕ್ಷಿಪಣಿಗಳ ಸಾಮರ್ಥ್ಯ ಅವುಗಳಿಗೆ ರಕ್ಷಣೆ ಮತ್ತು ದಾಳಿ ಎರಡರಲ್ಲೂ ಅಪಾರ ಮೇಲುಗೈ ನೀಡುತ್ತವೆ. ಹೈಪರ್‌ಸಾನಿಕ್ ತಂತ್ರಜ್ಞಾನವನ್ನು ಎರಡು ರೀತಿಯಲ್ಲಿ ಬಳಸಿಕೊಳ್ಳಬಹುದಾಗಿದ್ದು, ಅದನ್ನು ಉಪಗ್ರಹ ಉಡಾವಣೆ ಮತ್ತು ಮರಳಿ ಪಡೆಯಲು ಬಳಸಿಕೊಳ್ಳಬಹುದು. ಪ್ರಸ್ತುತ ಚೀನಾವನ್ನು ಹೊರತುಪಡಿಸಿ, ಅಮೆರಿಕಾ, ರಷ್ಯಾ, ಆಸ್ಟ್ರೇಲಿಯಾ, ಜಪಾನ್ ಹಾಗೂ ಯುರೋಪಿಯನ್ ರಾಷ್ಟ್ರಗಳು ಹೈಪರ್‌ಸಾನಿಕ್ ತಂತ್ರಜ್ಞಾನವನ್ನು ಪಡೆಯಲು ಕಾರ್ಯಾಚರಿಸುತ್ತಿವೆ.
ಇದನ್ನೂ ಓದಿ | ಸಮರಾಂಕಣ | ಗೇಮ್ ಆಫ್ ಡ್ರೋನ್ಸ್: ಚೀನಾದ ಯುಎವಿ ಸಾಮರ್ಥ್ಯದ ಎದುರು ಭಾರತದ ಪವರ್ ಏನು?