ಭಾರತದ ಪ್ರಥಮ ಸ್ವದೇಶಿ ನಿರ್ಮಿತ ವಿಮಾನವಾಹಕ ನೌಕೆಯನ್ನು (ಐಎಸಿ-1) ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಸೆಪ್ಟೆಂಬರ್ 2ರಂದು ನೌಕಾಪಡೆಯ ಸೇವೆಗೆ ಅಧಿಕೃತವಾಗಿ ನಿಯೋಜಿಸಲಿದ್ದಾರೆ. ಈ ಮೂಲಕ ವಿಮಾನವಾಹಕ ಯುದ್ಧನೌಕೆ ಅಧಿಕೃತವಾಗಿ ಕೊಚ್ಚಿನ್ ಶಿಪ್‌ಯಾರ್ಡ್‌ನಲ್ಲಿ ಭಾರತೀಯ ನೌಕಾಪಡೆಗೆ ಸೇರ್ಪಡೆಗೊಳ್ಳಲಿದೆ.
1980ರ ದಶಕದಲ್ಲಿ ಭಾರತೀಯ ನೌಕಾಪಡೆಯ ವಿಮಾನವಾಹಕ ನೌಕೆ ಐಎನ್ಎಸ್ ವಿಕ್ರಾಂತ್ ಹಳೆಯದಾಗುತ್ತಿದ್ದರಿಂದ, ಅದರ ಬದಲಿಗೆ ದೇಶೀಯವಾದ ಹೊಸ ವಿಮಾನವಾಹಕ ಯುದ್ಧನೌಕೆಯನ್ನು ನಿರ್ಮಾಣಗೊಳಿಸಬೇಕು ಎಂಬ ನಿರ್ಧಾರ ಕೈಗೊಳ್ಳಲಾಯಿತು. ಮಧ್ಯಂತರವಾಗಿ ಅದರ ಬದಲಿಗೆ ಐಎನ್ಎಸ್ ವಿರಾಟ್ ನೌಕೆಯನ್ನು ಬಳಸಿಕೊಳ್ಳಲಾಯಿತು. ಆದರೆ ನೂತನ ದೇಶೀಯ ವಿಮಾನವಾಹಕ ನೌಕೆಯ ನಿರ್ಮಾಣಕ್ಕೆ ಕೇಂದ್ರ ಸರ್ಕಾರದ ಅನುಮತಿ 1999ರಲ್ಲಷ್ಟೇ ಲಭಿಸಿತು. ಕೊಚ್ಚಿನ್ ಶಿಪ್ ಯಾರ್ಡ್ ಲಿಮಿಟೆಡ್‌ನಲ್ಲಿ ನೂತನ ನೌಕೆಯ ನಿರ್ಮಾಣಕ್ಕೆ ರಕ್ಷಣಾ ಸಂಸದೀಯ ಸ್ಥಾಯಿ ಸಮಿತಿ (ಸಿಸಿಎಸ್) 2002ರಲ್ಲಿ ಅನುಮೋದನೆ ನೀಡಿತು.
ಕೊಚ್ಚಿನ್ ಶಿಪ್ ಯಾರ್ಡ್‌ನಲ್ಲಿ 2005ರಲ್ಲಿ ಆರಂಭಗೊಂಡ, ನೌಕೆಗಾಗಿ ಲೋಹ ಕತ್ತರಿಸುವ ಕಾರ್ಯ ಒಂದು ಐತಿಹಾಸಿಕ ಮಹತ್ವದ್ದಾಗಿತ್ತು. ಯಾಕೆಂದರೆ ರಕ್ಷಣಾ ತಂತ್ರಜ್ಞಾನ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಓ) ದೇಶೀಯವಾಗಿ ವಿನ್ಯಾಸಗೊಳಿಸಿದ ಈ ನೌಕೆಯ ನಿರ್ಮಾಣಕ್ಕೆ ಭಾರತದ್ದೇ ಸ್ಟೀಲ್ ಬಳಕೆಯಾಗಿತ್ತು. ನೌಕೆಗೆ ಬೇಕಾದ ಸ್ಟೀಲನ್ನು ಸ್ಟೀಲ್ ಅಥಾರಿಟಿ ಆಫ್ ಇಂಡಿಯಾ (ಎಸ್ಎಐಎಲ್) ತನ್ನ ರೂರ್‌ಕೆಲಾ, ಭಿಲಾಯಿ ಮತ್ತು ದುರ್ಗಾಪುರದ ಕಾರ್ಖಾನೆಗಳಿಂದ ಪೂರೈಸಿತ್ತು. ಎಚ್ಎಎಲ್, ಬಿಇಎಲ್, ಬಿಎಚ್ಇಎಲ್, ಕೆಲ್ಟ್ರೋನ್, ಲಾರ್ಸನ್ ಆ್ಯಂಡ್ ಟರ್ಬೋ ಹಾಗೂ ಟಾಟಾ ಪವರ್ ಸೇರಿದಂತೆ ಭಾರತದ ಹಲವು ಸರ್ಕಾರಿ ಸ್ವಾಮ್ಯದ ಮತ್ತು ಖಾಸಗಿ ಸಂಸ್ಥೆಗಳು ಈ ನೂತನ ವಿಕ್ರಾಂತ್ ನಿರ್ಮಾಣ ಕಾರ್ಯದಲ್ಲಿ ಭಾಗಿಯಾಗಿದ್ದವು. ಹಡಗಿನ ತಳವನ್ನು ಆಗಸ್ಟ್ 12, 2013ರಲ್ಲಿ ಪೂರ್ಣಗೊಳಿಸಲಾಯಿತು. ಈ ನೌಕೆಗೂ ಅದರ ಪೂರ್ವಜ ವಿಮಾನವಾಹಕ ನೌಕೆಯಾದ `ವಿಕ್ರಾಂತ್’ ಹೆಸರನ್ನೇ ಇಡಲಾಯಿತು.
ಹಲವು ವರ್ಷಗಳ ಕಠಿಣ ಪರಿಶ್ರಮದ ಫಲವಾಗಿ, ಐಎನ್ಎಸ್ ವಿಕ್ರಾಂತ್ ಐಎಸಿ-1 ಆಗಸ್ಟ್ 4, 2021ರಂದು ಕೊಚ್ಚಿ ಬಂದರಿನಿಂದ ಸಮುದ್ರದಲ್ಲಿ ತನ್ನ ಪರೀಕ್ಷಾ ಓಡಾಟಕ್ಕೆಂದು ನೀರಿಗಿಳಿಯಿತು. ವಿಕ್ರಾಂತ್ ಭಾರತೀಯವಾಗಿ ನಿರ್ಮಿತವಾದ ಅತಿದೊಡ್ಡ ಯುದ್ಧನೌಕೆಯಾಗಿದ್ದರಿಂದ ಅದೊಂದು ಸ್ಮರಣೀಯ ಕ್ಷಣವಾಗಿತ್ತು. ಈ ಪರೀಕ್ಷೆಯನ್ನು ಕೋಟ್ಯಂತರ ಭಾರತೀಯರು ಮತ್ತು ವಿದೇಶೀಯರೂ ಕುತೂಹಲದ ಕಂಗಳಿಂದ ನೋಡಿದ್ದರು. ಹೊಸ ಯುದ್ಧನೌಕೆ ಸಮುದ್ರದಲ್ಲಿ ಸುಲಲಿತವಾಗಿ ಸಾಗಿತ್ತು. ತನ್ನ ಮೊದಲ ಸಮುದ್ರ ಯಾನದಲ್ಲೇ ಅದು ಪೂರ್ಣ ಸಾಮರ್ಥ್ಯವನ್ನು ತೋರಿಸಿದ್ದು, ಅದನ್ನು ವಿನ್ಯಾಸ ಮತ್ತು ನಿರ್ಮಾಣದ ಪ್ರತಿಯೊಂದು ಹಂತದಲ್ಲೂ ಎಷ್ಟು ಕೂಲಂಕಷವಾಗಿ ಪರಿಶೀಲಿಸಲಾಗಿತ್ತು ಎಂದು ಸಾಬೀತುಪಡಿಸಿತ್ತು. ಅದರ ಯಶಸ್ವಿ ನಿರ್ಮಾಣದ ಪರಿಣಾಮವಾಗಿ ವಿಕ್ರಾಂತ್‌ನ ಪ್ರಥಮ ಸಾರ್ಟಿಯಲ್ಲೇ ಭಾರತೀಯ ನೌಕಾಪಡೆಯ ಬತ್ತಳಿಕೆಯಲ್ಲಿದ್ದ ಎಲ್ಲ ಬಗೆಯ ಹೆಲಿಕಾಪ್ಟರ್‌ಗಳೂ ಯಶಸ್ವಿಯಾಗಿ ನೌಕೆಯ ಮೇಲಿಳಿದು, ಅಲ್ಲಿಂದ ಹಾರಾಟ ನಡೆಸಿದ್ದವು. ಇದರ ಬಳಿಕ ವಿಕ್ರಾಂತ್ ಹಲವು ಪರೀಕ್ಷಾ ಸಂಚಾರ ನಡೆಸಿದ್ದು, ಪ್ರಸ್ತುತ ಸೇನಾ ಸೇರ್ಪಡೆಯ ಮೊದಲಿನ ತಯಾರಿಯ ಹಂತಗಳಲ್ಲಿದೆ. ವಿಕ್ರಾಂತ್ ಸೇನಾ ಸೇರ್ಪಡೆಗೊಂಡ ಬಳಿಕ ಅದರ ಫಿಕ್ಸ್ಡ್- ವಿಂಗ್ ವಿಮಾನಗಳ ಪರೀಕ್ಷಾ ಹಾರಾಟವೂ ನಡೆಯಲಿದ್ದು, ಅದಾದ ಬಳಿಕ ನೌಕೆಯನ್ನು ಸಂಪೂರ್ಣವಾಗಿ ಕಾರ್ಯಾಚರಿಸುವ ವಿಮಾನವಾಹಕ ನೌಕೆಯಾಗಿಸಲಾಗುತ್ತದೆ.
ಇದನ್ನೂ ಓದಿ | ಸಮರಾಂಕಣ | ಗೇಮ್ ಆಫ್ ಡ್ರೋನ್ಸ್: ಚೀನಾದ ಯುಎವಿ ಸಾಮರ್ಥ್ಯದ ಎದುರು ಭಾರತದ ಪವರ್ ಏನು?
ದೇಶೀಯ ನಿರ್ಮಾಣ ಕಾರ್ಯಕ್ಕೆ ಭದ್ರ ಅಡಿಪಾಯ
ಹೆಲಿಕಾಪ್ಟರ್‌ಗಳು, ನೌಕೆಗಳು, ಕ್ಷಿಪಣಿಗಳು ಸೇರಿದಂತೆ ಬೃಹತ್ ಪ್ರಮಾಣದ ಉಪಕರಣಗಳನ್ನು ದೇಶೀಯವಾಗಿ ನಿರ್ಮಿಸಲು ಅದಕ್ಕೆ ಪೂರಕವಾದ ಕಚ್ಚಾ ವಸ್ತುಗಳು ಮತ್ತು ನಿರ್ಮಾಣ ವ್ಯವಸ್ಥೆಗಳ ಅಗತ್ಯವಿದೆ. ಆದರೆ ಈ ವ್ಯವಸ್ಥೆಗಳಿಲ್ಲದೆ ದೇಶೀಯವಾಗಿ ಅವುಗಳ ನಿರ್ಮಾಣ ಅತ್ಯಂತ ಕಷ್ಟಸಾಧ್ಯ. ಇಂತಹ ಸಂಕೀರ್ಣ ಪರಿಸ್ಥಿತಿಯಲ್ಲೂ ಭಾರತ ತನ್ನ ಪ್ರಥಮ ದೇಶೀಯ ನಿರ್ಮಿತ ವಿಮಾನವಾಹಕ ನೌಕೆಯ ಕನಸನ್ನು ನನಸಾಗಿಸಿರುವುದು ಆತ್ಮನಿರ್ಭರ ಭಾರತ ಎಂಬ ಪರಿಕಲ್ಪನೆಗೆ ಮತ್ತು ಅದರ ಯಶಸ್ಸಿಗೆ ಹಿಡಿದ ಕೈಗನ್ನಡಿ. ಐಎನ್ಎಸ್ ವಿಕ್ರಾಂತ್ ಐಎಸಿ-1 ನೌಕೆಯ ನಿರ್ಮಾಣ ಭಾರತೀಯ ನೌಕಾಪಡೆ ವಿಮಾನವಾಹಕ ನೌಕೆಯನ್ನು ವಿನ್ಯಾಸಗೊಳಿಸಲು ಮಾತ್ರವಲ್ಲದೆ, ಇಂತಹ ಸಂಕೀರ್ಣ ಯುದ್ಧನೌಕೆಯ ನಿರ್ಮಾಣದಲ್ಲೂ ಸಮರ್ಥವಾಗಿದೆ ಎಂಬುದನ್ನು ಸಾಬೀತುಪಡಿಸಿದೆ. ಅದರೊಡನೆ ಭಾರತೀಯ ಹಡಗು ನಿರ್ಮಾಣಗಾರರ ಕೌಶಲ್ಯವನ್ನು ಮತ್ತು ಇಂತಹ ಬೃಹತ್ ಹಡಗಿನ ನಿರ್ಮಾಣ ಯೋಜನೆಯನ್ನು ಕಾರ್ಯರೂಪಕ್ಕೆ ತರುವಲ್ಲಿ ಭಾರತೀಯ ಕೈಗಾರಿಕೆಗಳ ಸಾಮರ್ಥ್ಯವನ್ನೂ ತೋರುತ್ತದೆ. ವಿಕ್ರಾಂತ್ ನೌಕೆಯ ನಿರ್ಮಾಣದಲ್ಲಿ ಹಲವು ಸರ್ಕಾರಿ ಸ್ವಾಮ್ಯದ ಮತ್ತು ಖಾಸಗಿ ಸಂಸ್ಥೆಗಳ ಯಶಸ್ವಿ ಪಾಲ್ಗೊಳ್ಳುವಿಕೆಯ ಪರಿಣಾಮವಾಗಿ ನೌಕೆ 76% ದೇಶೀಯ ನಿರ್ಮಾಣದ ಗುರಿಯನ್ನು ಸಾಧಿಸಿದೆ. ಇದರ ಯಶಸ್ಸಿನಿಂದಾಗಿ ಮುಂದಿನ ಯೋಜನೆಗಳಲ್ಲಿ ಇನ್ನೂ ಹೆಚ್ಚಿನ ದೇಶೀಯ ನಿರ್ಮಾಣದ ಗುರಿ ಸಾಧಿಸಲು ಸಾಧ್ಯವಾಗಲಿದೆ. ವಿಕ್ರಾಂತ್ ನಿರ್ಮಾಣದ ಮೂಲಕ ದೇಶೀಯವಾಗಿ ವಿಮಾನವಾಹಕ ನೌಕೆಗಳನ್ನು ವಿನ್ಯಾಸಗೊಳಿಸುವ ಮತ್ತು ನಿರ್ಮಾಣಗೊಳಿಸುವ ಸಾಮರ್ಥ್ಯ ಹೊಂದಿರುವ ಕೆಲವೇ ರಾಷ್ಟ್ರಗಳ ಗುಂಪಿಗೆ ಈಗ ಭಾರತವೂ ಸೇರ್ಪಡೆಯಾಗಿರುವುದು ಹೆಮ್ಮೆ ಪಡುವ ವಿಚಾರವಾಗಿದೆ. ಈ ವಿಮಾನವಾಹಕ ನೌಕೆ ʻನವಭಾರತದ’ ಹುಮ್ಮಸ್ಸನ್ನು ಪ್ರತಿನಿಧಿಸುತ್ತದೆ. ಕಾರ್ಯತಂತ್ರದ ವಿಚಾರದಲ್ಲಿ ಭಾರತ ಜಾಗತಿಕ ನೌಕಾಪಡೆಗಳ ಮುಂದೆ ಆತ್ಮನಿರ್ಭರವಾಗಿ ನಿಲ್ಲಲು ಇದು ಸಹಕಾರಿ. 21ನೇ ಶತಮಾನದಲ್ಲಿ ವಿಕ್ರಾಂತ್ ಭಾರತೀಯ ನೌಕಾಪಡೆಗೆ ಅತ್ಯಂತ ಉಪಯುಕ್ತ ಹಾಗೂ ಪ್ರಬಲ ಸಾಗರ ಉಪಕರಣವಾಗಿದ್ದು, ನಮ್ಮ ನೌಕಾಪಡೆಯ ಇತಿಹಾಸದಲ್ಲಿ ವೈಭವದ ಪುಟವನ್ನು ಬರೆದಿದೆ.
ಅಚ್ಚರಿ ಮೂಡಿಸಬಲ್ಲ ಅಂಕಿಅಂಶಗಳು
ಐಎನ್ಎಸ್ ವಿಕ್ರಾಂತ್ ಐಎಸಿ-1 ವಿಮಾನವಾಹಕ ಯುದ್ಧನೌಕೆಯ ನಿರ್ಮಾಣ ಕಾರ್ಯದಲ್ಲಿ 2,400 ಕಿಲೋಮೀಟರ್ ಉದ್ದದ ಕೇಬಲ್‌ಗಳನ್ನು ಬಳಸಿಕೊಳ್ಳಲಾಗಿದೆ. ಇವುಗಳನ್ನು 2,300 ವಿಭಾಗಗಳ ನಿರ್ಮಾಣಕ್ಕೆ ಉಪಯೋಗಿಸಲಾಗಿದೆ. ಇದರಲ್ಲಿ 8 ಬೃಹತ್ ಪವರ್ ಜನರೇಟರ್‌ಗಳನ್ನು ಅಳವಡಿಸಲಾಗಿದ್ದು, ಅವುಗಳು ದಿನವೊಂದಕ್ಕೆ 4 ಲಕ್ಷ ಲೀಟರ್ ತನಕ ನೀರಿನ ಉತ್ಪಾದನೆ ಮಾಡಬಲ್ಲವು. ನೌಕೆಯಲ್ಲಿರುವ ಅಡುಗೆಮನೆ ಹಡಗಿನ ಎಲ್ಲ ಪ್ರಯಾಣಿಕರಿಗೆ ಸಾಕಷ್ಟು ಆಹಾರ ತಯಾರಿಕೆಗೆ ಸೂಕ್ತವಾಗಿದೆ.
ಇದನ್ನೂ ಓದಿ | ಸಮರಾಂಕಣ | ಏನನ್ನೂ ಧ್ವಂಸಗೊಳಿಸದೆ ಶತ್ರುವಿಗೆ ಸಾವು ತಂದೊಡ್ಡುವ ಅಸ್ತ್ರ Hellfire R9X
ವಿಮಾನವಾಹಕ ಯುದ್ಧನೌಕೆಯ ಡೆಕ್ ಒಂದು ಸ್ಟೋಬಾರ್ (ಶಾರ್ಟ್ ಟೇಕ್-ಆಫ್ ಬಟ್ ಅರೆಸ್ಟೆಡ್ ರಿಕವರಿ) ವಿನ್ಯಾಸವನ್ನು ಹೊಂದಿದ್ದು, ಸ್ಕೈ ಜಂಪ್ ವ್ಯವಸ್ಥೆಯನ್ನೂ ಹೊಂದಿದೆ. ಇದು ಟೇಕ್-ಆಫ್ ಸಂದರ್ಭದಲ್ಲಿ ವಿಮಾನಕ್ಕೆ ಹೆಚ್ಚಿನ ಮೇಲೊತ್ತುವಿಕೆಯನ್ನು ಒದಗಿಸುತ್ತದೆ. ನೌಕೆಗೆ ಶಕ್ತಿ ತುಂಬಲು 4 ಗ್ಯಾಸ್ ಟರ್ಬೈನ್‌ಗಳಿದ್ದು, ಇವು 88 ಮೆಗಾವ್ಯಾಟ್ ಶಕ್ತಿ ಉತ್ಪಾದಿಸುತ್ತವೆ. ಇವುಗಳು ಅರ್ಧ ಶತಮಾನ ಕಾಲ ಬಾಳಿಕೆ ಬರಬಲ್ಲವು. ವಿಕ್ರಾಂತ್ ತನ್ನ ಚೊಚ್ಚಲ ಸಾರ್ಟೀಯಲ್ಲೇ ಪೂರ್ಣ ಸಾಮರ್ಥ್ಯದಲ್ಲಿ ಸಂಚರಿಸಿದ್ದು, ಇದು ಭಾರತೀಯ ಯುದ್ಧನೌಕೆಗಳಲ್ಲಿ ಮೊದಲ ಬಾರಿಗಾಗಿದೆ.
ಐಎನ್ಎಸ್ ವಿಕ್ರಾಂತ್ ಐಎಸಿ-1ರ ಇನ್ನೊಂದು ವೈಶಿಷ್ಟ್ಯವೆಂದರೆ ಅದರಲ್ಲಿರುವ 16 ಹಾಸಿಗೆಗಳ ಮಿನಿ ಆಸ್ಪತ್ರೆ. ಇದು 2 ಆಪರೇಷನ್ ಥಿಯೇಟರ್‌ಗಳು ಹಾಗೂ ಸಿಟಿ ಸ್ಕ್ಯಾನ್ ಯಂತ್ರವನ್ನೂ ಹೊಂದಿದೆ. ಈ ಆಸ್ಪತ್ರೆ ಯುದ್ಧನೌಕೆಯಲ್ಲಿ ಯಾವುದೇ ರೀತಿಯ ಆರೋಗ್ಯ ಸಂಬಂಧಿ ತುರ್ತುಸ್ಥಿತಿ ಎದುರಾದರೂ ಅದನ್ನು ಎದುರಿಸಲು ಸಹಕಾರಿಯಾಗಿದೆ. ಇದರೊಡನೆ, ಮಿನಿ ಆಸ್ಪತ್ರೆಯಲ್ಲಿ ಪ್ರಯೋಗಾಲಯ, ಕ್ಷಕಿರಣ, ರಕ್ತ ಮರುಪೂರೈಕೆ ಹಾಗೂ ದಂತ ವೈದ್ಯಕೀಯ ವ್ಯವಸ್ಥೆಗಳೂ ಇವೆ. ಎಲ್ಲ ಸಿಬ್ಬಂದಿಗಳಿಗೂ ವೈದ್ಯಕೀಯ ಸೇವೆ ಒದಗಿಸಲು ವಿಕ್ರಾಂತ್ ನೌಕೆಯಲ್ಲಿ ಐವರು ಅಧಿಕಾರಿಗಳು ಹಾಗೂ 16 ಅರೆವೈದ್ಯಕೀಯ ಸಿಬ್ಬಂದಿಗಳು ಉಪಸ್ಥಿತರಿರುತ್ತಾರೆ.
ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಐಎನ್ಎಸ್ ವಿಕ್ರಾಂತ್ ಐಎಸಿ-1ನ್ನು ಸೆಪ್ಟೆಂಬರ್ 2ರಂದು ನೌಕಾಸೇನಾ ಸೇವೆಗೆ ಅಧಿಕೃತವಾಗಿ ನಿಯೋಜಿಸಲಿದ್ದಾರೆ ಎನ್ನಲಾಗಿದೆ. ಆ ಬಳಿಕ ನೌಕೆಯನ್ನು ಪಶ್ಚಿಮ ಸಮುದ್ರದಲ್ಲಿ ಸೇವೆಗೆ ಚಾಲನೆ ನೀಡಲಾಗುವುದು. ಇದರ ಬಳಿಕ, ನೌಕೆಯಲ್ಲಿ ಎಲ್ಲ ವಿಮಾನಗಳು ಹಾಗೂ ಇತರ ಉಪಕರಣಗಳೊಡನೆ 4-5 ತಿಂಗಳುಗಳ ಕಾಲ ಪರೀಕ್ಷಾ ಚಾಲನೆ ನಡೆಸಲಾಗುವುದು. ಇದು ಭಾರತೀಯ ನೌಕಾಪಡೆಯ ಪ್ರಮುಖ ಯುದ್ಧನೌಕೆಯಾಗಿ ಸೇವೆ ಸಲ್ಲಿಸುವ ಮೊದಲು ಕಡ್ಡಾಯವಾಗಿ ಕೈಗೊಳ್ಳಬೇಕಾದ ಕ್ರಮವಾಗಿದೆ.