Site icon Vistara News

ಧವಳ ಧಾರಿಣಿ ಅಂಕಣ: ರಾಮವಿಲಾಪಕ್ಕೆ ಲಕ್ಷ್ಮಣೋಪಶಮನ

rama laxmana ಧವಳ ಧಾರಿಣಿ ಅಂಕಣ

ವಿಯೋಗದಿಂದ ಕದಡಿದ ಮನಸ್ಸಿಗೆ ಪೂರ್ವಸ್ಮೃತಿಯನ್ನು ತಂದುಕೊಡುವ ಸನ್ನಿವೇಶ

:: ನಾರಾಯಣ ಯಾಜಿ

ತ್ಯಜತ್ವಾಂ ಕಾಮವೃತ್ತತ್ತ್ವಂ ಶೋಕಂ ಸಂನ್ಯಸ್ಯ ಪೃಷತಃ I
ಮಹಾತ್ಮನಂ ಕೃತಾತ್ಮಾನಮಾತ್ಮಾನಂ ನಾವಬಿಧ್ಯಸೇ II ಕಿ. 1.123 II

ಸೀತಾವಿಯೋಗದಿಂದುಂಟಾಗಿರುವ ಶೋಕವನ್ನು ಬಿಡು. ಮನ್ಮಥವಿಕಾರವನ್ನು ತ್ಯಜಸು! ನೀನು ಮಹಾತ್ಮನೆಂಬುದನ್ನೂ , ಕೃತಾತ್ಮನೆನ್ನುವುದನ್ನೂ ಮರೆತುಬಿಟ್ಟಿರುವೆ.

ರಾಮಾಯಣದಲ್ಲಿ ಕಿಷ್ಕಿಂಧಾ ಕಾಂಡದ ಬಹುಮುಖ್ಯವಾದ ಘಟನೆಯೇ ಪತ್ನಿಯ ವಿರಹದಿಂದ ಅಪಾರ ದುಃಖಕ್ಕೆ ಒಳಗಾದ ರಾಮನನ್ನು ಲಕ್ಷ್ಮಣ ಸಮಾಧಾನಪಡಿಸುವುದು. ಕಿಷ್ಕಿಂಧಾ ಕಾಂಡದ ನಾಲ್ಕನೆಯ ಸರ್ಗದಲ್ಲಿ ಲಕ್ಷ್ಮಣ ಎಂಟು ಶ್ಲೋಕದಲ್ಲಿ ರಾಮನು ಸುಗ್ರೀವನಲ್ಲಿಗೆ ಶರಣು ಹೊಂದಲು ಬಂದಿದ್ದಾನೆ ಎನ್ನುವ ಮಾತುಗಳನ್ನು ಹೇಳಿದ್ದಾನೆ ಎನ್ನುವುದನ್ನು ನೋಡಿದ್ದೇವೆ. ಆರು ಬಗೆಯಲ್ಲಿ ಎಂಟು ಶ್ಲೋಕಗಳಲ್ಲಿ (ರಾಮಶ್ಚ ಸುಗ್ರೀವಂ ಶರಣಂ ಗತೌ ಮುಂತಾಗಿ) ಲಕ್ಷ್ಮಣನು ಹನುಮಂತನ ಹತ್ತಿರ ಕೇಳಿಕೊಳ್ಳುವ ಭಾಗ ರಾಮನ ವ್ಯಕ್ತಿತ್ವಕ್ಕೆ ಒಂದು ಕಪ್ಪುಚುಕ್ಕೆ ಎಂದು ಕೆಲ ಟೀಕಾಕಾರರು ಹೇಳಿರುವುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ಲಕ್ಷ್ಮಣ ಹಾಗೆ ಹೇಳಲಿಕ್ಕೆ ಕಾರಣವಾಗಿರುವ ಸಂಗತಿಯನ್ನು ಕಿಷ್ಕಿಂಧಾ ಕಾಂಡದ ಮೊದಲ ಭಾಗದಲ್ಲಿ ವಿವರವಾಗಿ ವಿವೇಚಿಸಲಾಗಿದೆ. ಸಮಗ್ರ ಭೂಮಂಡಲದ ಚಕ್ರವರ್ತಿಗಳಾದ ರಘುವಂಶೀಯ ರಾಮ ತನ್ನ ಸಿಂಹಾಸನದ ಘನತೆ ಗೌರವವನ್ನೆಲ್ಲಾ ಬಿಟ್ಟು ಸುಗ್ರೀವನಲ್ಲಿ ಆಶ್ರಯ ಕೋರಿ ಬಂದಿದ್ದಾನೆ. ಸೀತೆಯನ್ನು ಕಳೆದುಕೊಂಡ ರಾಮನಿಗೆ ಬುದ್ಧಿ ವಿಸ್ಮೃತಿಯಾಗಿತ್ತು. ವಿರಹದಿಂದಲಾಗಿ ರಾಮ ಗೋದಾವರಿ ನದಿಯನ್ನು ಬತ್ತಿಸಿಬಿಡುವೆ, ವಿಂದ್ಯಪರ್ವತವನ್ನೇ ಕೆಡಹಿಬಿಡುವೆ ಎಂದು ಕೂಗಾಡುವುದು ನಂತರ ಪಂಪಾಸರೋವರದಲ್ಲಿದ್ದ ಕಮಲವನ್ನೇ ತಿಂಗಳ ಬೆಳಕಿನಲ್ಲಿ ಕಮಲಮುಖಿ ಸೀತೆ ಎಂದು ಭ್ರಮಿಸಿ ಸರೋವರಕ್ಕೆ ಧುಮುಕಲು ಹೋಗುವುದು, ಹೀಗೆ ಹಲವು ವಿಧಗಳಲ್ಲಿ ಸೀತೆಗಾಗಿ ವಿಲಪಿಸುತ್ತಾನೆ. ರಾಮನ ದುಃಖವನ್ನು ಶಮನ ಮಾಡುವ ಲಕ್ಷ್ಮಣನ ಸಂಯಮ ಅದ್ಭುತವಾದದ್ದು. ಲಕ್ಷ್ಮಣ ರಾಮನಿಗೆ ತನ್ನ ಕರ್ತವ್ಯವನ್ನು ನಿಭಾಯಿಸುವಂತೆ ಆತನನ್ನು ಎಚ್ಚರಿಸುವ ಅಪೂರ್ವ ಮಾತುಗಳು ಕಿಷ್ಕಿಂಧಾಕಾಂಡದ ಮೊದಲನೆಯ ಸರ್ಗದಲ್ಲಿ ಬರುತ್ತದೆ. ರಾಮ ತನ್ನ ತಂದೆ ತಾಯಿಯರಿಗೆ, ಸುಮಂತ್ರನಿಗೆ, ಗುಹನಿಗೆ ವಶಿಷ್ಠರು, ಜಾಬಾಲಿ ಮತ್ತು ಭರತನಿಗೆ ತನ್ನ ವನವಾಸ ದೀಕ್ಷೆಯ ಕುರಿತು ತಿಳಿಹೇಳುವ ಮಾತುಗಳು ಬಲು ಪ್ರಸಿದ್ಧ. ಪ್ರಸ್ತುತ ಸಂದರ್ಭದಲ್ಲಿ ಸೀತಾಪಹರಣವೆನ್ನುವುದು ಆತನ ಬುದ್ಧಿಯನ್ನು ವಿಭ್ರಣೆಗೊಳಿಸಿಬಿಟ್ಟಿದೆ. ಆತನಿಗೆ ಆ ದಟ್ಟ ಅರಣ್ಯದಲ್ಲಿ ಬುದ್ಧಿ ಹೇಳುವವರು ಯಾರೂ ಇಲ್ಲ. ಆ ಕೆಲಸವನ್ನು ಇಲ್ಲಿ ಲಕ್ಷ್ಮಣ ಮಾಡಬೇಕಾದ ಅನಿವಾರ್ಯತೆ ಬರುತ್ತದೆ. ಹಾಗೇ ವಿವೇಕವನ್ನು ಹೇಳುವಾಗ ಲಕ್ಷ್ಮಣನಿಗೆ ತನ್ನ ಮಿತಿಯ ಅರಿವಿದೆ. ಆಜ್ಞಾಪೂರ್ವಕವಾಗಿ ಹೇಳುವಂತಿಲ್ಲ. ಉಪದೇಶವೂ ಆಗಕೂಡದು, ಹೇಳುವ ವಿಧಾನದಲ್ಲಿ ಹಿರಿಯನ ಗೌರವವಕ್ಕೆ ಚ್ಯುತಿಬರಬಾರದು.

ವಾಲ್ಮೀಕಿ ಇಲ್ಲಿ ಲಕ್ಷ್ಮಣನಿಂದ ಅಣ್ಣನಿಗೆ ವಿವೇಕವನ್ನು ಹೇಳುವ ವಿವರ ಬಲು ಆಸಕ್ತಿದಾಯಕವಾಗಿದೆ. ಮಹಾಕಾವ್ಯವನ್ನು ಬರೆಯಲು ವಾಲ್ಮೀಕಿಯಲ್ಲಿ ಅದೆಷ್ಟು ಲೋಕಾನುಭವ ಮತ್ತು ಶಾಸ್ತ್ರದ ಅಧ್ಯಯನ ಇರಬಹುದೆನ್ನುವುದಕ್ಕೆ ಇದೊಂದು ನಿದರ್ಶನ. ಆತ ರಾಮನಿಗೆ ಹೀಗೆ ಮಾಡಿ ಎಂದು ಹೇಳುವುದಿಲ್ಲ. ಚಿಕ್ಕವ ಹಿರಿಯರ ಹತ್ತಿರ ತನಗೆ ತಿಳಿಯದ ವಿಷಯವನ್ನು ಕಲಿಸಿಕೊಡು ಎನ್ನುವ ರೀತಿಯಲ್ಲಿ ಇದೇಕೆ ಹೀಗೆ ಎನ್ನುವ ಅನೇಕ ಪ್ರಶ್ನೆಗಳ ಮೂಲಕ ರಾಮನಲ್ಲಿ ಪ್ರಶ್ನೆ ಮಾಡುತ್ತಾನೆ. ರಾವಣನು ಪಾತಾಳಕ್ಕೆ ಹೊಕ್ಕರೂ. ಅಲ್ಲಿಂದ ಮುಂದೆ ಇನ್ನೋ ಗಹನವಾದ ಸ್ಥಳ ಹೊಕ್ಕರೂ ಆತ ಉಳಿಯಲಾರನು. ದಿತಿಯ ಗರ್ಭವನ್ನು ಹೊಕ್ಕರೂ ಮೈಥಿಲಿಯನ್ನು ತಂದೊಪ್ಪಿಸದಿದ್ದಲ್ಲಿ ಗರ್ಭವನ್ನು ಪ್ರವೇಶಿಸಿಯಾದರೂ ನಾನು ಅವನನ್ನು ಸಂಹರಿಸುತ್ತೇನೆ. ನೀನು ಉತ್ಸಾಹವನ್ನು ಕಳೆದುಕೊಂಡು ಹೀಗೆ ಯಾಕೆ ಇರುವೆ ಎನ್ನುವ ಮಾತುಗಳಲ್ಲಿ ನೀನು ಭ್ರಮಿತನಾಗಿದ್ದೀಯಾ ಎಂದು ನೇರವಾಗಿ ಹೇಳುವುದಿಲ್ಲ; ನೀನು ಉತ್ಸಾಹವನ್ನು ಕಳೆದುಕೊಳ್ಳಬೇಡ, ನೀನು ಹೀಗೆಲ್ಲಾ ಇರುವವಂತವನಲ್ಲ ವ್ಯಕ್ತಿಯಲ್ಲ ಎನ್ನುವ ಭಾವ ಪ್ರತೀ ಮಾತಿನಲ್ಲಿಯೂ ವ್ಯಕ್ತವಾಗುತ್ತದೆ.

ಪ್ರಾರಂಭದಲ್ಲಿ ಹೇಳಿದ ತ್ಯಜತ್ವಾಂ… ಎನ್ನುವ ಶ್ಲೋಕವನ್ನು ಗಮನಿಸಿ. ಅದರಲ್ಲಿ ಎರಡನೆಯ ಸಾಲಿನಲ್ಲಿ ಬರುವ “ಮಹಾತ್ಮನಂ ಕೃತಾತ್ಮಾನಮಾತ್ಮಾನಂ ನಾವಬಿಧ್ಯಸೇ” ಎನ್ನುವದರಲ್ಲಿ ಪ್ರಯೋಗಿಸಿದ “ಮಹಾತ್ಮ ಮತ್ತು ಕೃತಾತ್ಮಾ” ಎನ್ನುವುದು ರಾಮನ ಪೂರ್ವದ ಮೂಲಸ್ವರೂಪವಾದ ಮಹಾವಿಷ್ಣುವನ್ನು ಹೇಳುತ್ತದೆ. ಮಹಾತ್ಮಾ ಎಂದರೆ ಶ್ರೇಷ್ಠ, ಯಾರ ಶರೀರವು ಇತರರಿಗೆ ಶ್ರೇಷ್ಠವಾಗಿ ಕಾಣುವುದೋ; ಯಾವಾತನಿಗೆ ರಜಸ್ತಮಗಳೆನ್ನುವ ಮಲಿನತೆ ಇರುವುದಿಲ್ಲವೋ ಆತ ಮಹಾತ್ಮನು, ಸತ್ತ್ವಸ್ವರೂಪನು ಎಂದು ಆರ್ಥವಾಗುತ್ತದೆ. ಮತ್ತೊಂದು ಕೃತಾತ್ಮಾ-ಶುದ್ಧವಾದ ಆತ್ಮವುಳ್ಳವನು. ಶಾಶ್ತ್ರಗಳಿಂದ ಪರಿಶುದ್ಧವಾದ ಹೃದಯವುಳ್ಳವನು. ಶ್ರುತಿ ಸ್ಮೃತಿಗಳಲ್ಲಿ ಸ್ಮರಿಸಲ್ಪಟ್ಟವ ಎಂದಾಗುತ್ತದೆ. ಈ ಕಾರಣದಿಂದ ನೀನು “ತ್ಯಜತಾಂ ಕಾಮವೃತ್ತತ್ತ್ವಂ- ಕಾಮವಿಕಾರವೆನ್ನುವುದು ನಿನಗಲ್ಲ ಎನ್ನುತ್ತಾನೆ. ರಾಮನ ಮೂಲ ಯಾವುದು ಎನ್ನುವುದನ್ನು ಇಲ್ಲಿ ಲಕ್ಷ್ಮಣ ಈ ರೀತಿಯಲ್ಲಿ ಸೂಚಿಸುತ್ತಾನೆ. ಆತನ ಅವತಾರದ ಉದ್ಧೇಶವು ರಾವಣನನ್ನು ಸಂಹರಿಸುವ ಸಲುವಾಗಿಯೇ ಆಗಿದೆ. ಎಲ್ಲ ಕಡೆಯೂ ಮಾನವರಂತೆ ವ್ಯವಹರಿಸುವ ರಾಮ ಜಟಾಯುವಿನ ಪ್ರಕರಣದಲ್ಲಿ ಪರೋಕ್ಷವಾಗಿ, ಶಬರಿಯ ವಿಷಯದಲ್ಲಿ ಸ್ವ-ಸ್ವರೂಪದ ಪ್ರಜ್ಞೆಯಲ್ಲಿಯೇ ಅವರವರಿಗೆ ಮೋಕ್ಷವನ್ನು ಅನುಗ್ರಹಿಸಿದ್ದಾನೆ. ರಾಮಾಯಣದಲ್ಲಿ ರಾಮ ತನ್ನ ಮೂಲ ಸ್ವರೂಪವನ್ನು ಪ್ರಕಟಮಾಡುವ ಅಪರೂಪದ ಸಂದರ್ಭಗಳು ಇವು.

ಅಣ್ಣನಿಗೆ “ನೀನು ಪುರುಷೋತ್ತಮ” ಎನ್ನುತ್ತಾ ರಾಮನೆನ್ನುವ ದಶರಥನ ಮಗ ಯತಾರ್ಥದಲ್ಲಿ ವಿರಜಾಸ್ವರೂಪನಾದವ (ಪರತತ್ತ್ವ ಸ್ವರೂಪನಾದವ) ಇದೀಗ ಕಾರ್ಯಕಾರಣ ಸಂಬಂಧದಿಂದಾಗಿ ಸಂಸಾರಿಮಂಡಲಕ್ಕೆ ಅಭಿಮುಖನಾಗಿದ್ದಾನೆ. ಅದಕ್ಕೆ ಕಾರಣವಾದ ಅಂಶವನ್ನು ಸ್ಮರಣೆಗೆ ತಂದುಕೊಳ್ಳಬೇಕು. ರಾಮನ ಈ ದುಃಖವೆಲ್ಲವೂ ಅಭಿನಯವೇ ಹೊರತು ಅನುಭವಿಸಿ ಅದರಲ್ಲಿಯೇ ಮುಳುಗಿಹೋಗುವುದಲ್ಲ ಎನ್ನುವ ಅನೇಕ ಅರ್ಥವನ್ನು ಇಲ್ಲಿ ಕೊಡುತ್ತದೆ. ಕಿರಿಯರು ಹಿರಿಯರಿಗೆ ವಿವೇಕವನ್ನು ಹೇಳುವುದಲ್ಲ; ಅದರ ಕುರಿತಾದ ಅರಿವನ್ನು ಅವರ ಸ್ಮರಣೆಗೆ ತಂದುಕೊಡುವುದು ಎನ್ನುವುದು ಇಲ್ಲಿ ಲಕ್ಷ್ಮಣನ ವಿನಂತಿಯಲ್ಲಿ ಸ್ಪಷ್ಟವಾಗುತ್ತದೆ. ಹಿರಿಯರು ಉಪದೇಶವನ್ನು ನೀಡುತ್ತಾರೆ, ಸಮವಯಸ್ಕರು ಸಲಹೆಯನ್ನು ನೀಡುತ್ತಾರೆ (ಮಿತ್ರವಾಕ್ಯ), ಕಿರಿಯರು ತಮಗೆ ಗೊತ್ತಿದೆ ಎಂದು ಹಿರಿಯರನ್ನು ಯಾವ ಸಂದರ್ಭದಲ್ಲಿಯೂ ಅತಿಕ್ರಮಿಸಬಾರದು. ಇದೇಕೆ ಹೀಗೆ ಎನ್ನುತ್ತಲೇ ಹೇಳಬೇಕಾದುದನ್ನು ಹೇಳಬೇಕೆನ್ನುವುದಕ್ಕೆ ಇಲ್ಲಿ ಲಕ್ಷ್ಮಣನ ಮಾತುಗಳು ಸಾಕ್ಷಿ. ಈ ಭಾಗದಲ್ಲಿ ಲಕ್ಷ್ಮಣನನ್ನು ಮದಿಸಿದ ಮದ್ದಾನೆಗೆ ಕವಿ ಹೋಲಿಸಿದ್ದಾನೆ.

ತಂ ಮತ್ತಮಾತಙ್ಗವಿಲಾಸಗಾಮೀ ಗಚ್ಛನ್ತಮವ್ಯಗ್ರಮನಾ ಮಹಾತ್ಮಾ.
ಸ ಲಕ್ಷ್ಮಣೋ ರಾಘವಮಪ್ರಮತ್ತೋ ರರಕ್ಷ ಧರ್ಮೇಣ ಬಲೇನ ಚೈವ৷৷ಕಿ.1.127৷৷

ಮದಿಸಿದ ಆನೆಯಂತೆ ಒಯ್ಯಾರದಿಂದ ಹೆಜ್ಜೆಯಿಡುತ್ತಿದ್ದ ಅಣ್ಣನ ಸೇವೆಯಲ್ಲಿಯೇ ಏಕಾಗ್ರವಾದ ಮನಸ್ಸಿನಿಂದ ಕೂಡಿದ ಮಹಾತ್ಮನಾದ ಲಕ್ಷ್ಮಣನಾದರೋ, “ರರಕ್ಷ ಧರ್ಮೇಣ ಬಲೇನ ಚೈವ- ಧರ್ಮದಿಂದಲೂ ಬಲದಿಂದಲೂ ರಾಘವನ ದುಃಖವು ಕಡಿಮೆಯಾಗುವಂತೆ ಮಾಡಿದನು”. ರರಕ್ಷ- ಎನ್ನುವುದಕ್ಕೆ ದುಃಖರಹಿತನನ್ನಾಗಿ ಮಾಡಿದನು ಎನ್ನುವ ಅರ್ಥಬರುತ್ತದೆ(ನಿರ್ಧುಃಖಮಕರೋತ್). ರಾಮನಿಗೆ ಆತನ ಪೂರ್ವಸ್ಮರಣೆಯನ್ನು ತಂದುಕೊಡುವ ಸನ್ನಿವೇಶ ಇದು. ರಾಮನಿಗೆ ಅವನ ಮೂಲವನ್ನು ನೆನಪಿಸಿ ಆತ ಪರಂಧಾಮಕ್ಕೆ ಮರಳುವಂತೆ ಮಾಡುವವನು ಕಾಲಪುರುಷ. ಅದೂ ರಾಮಾಯಣದ ಅವತಾರದ ಉದ್ಧೇಶವಎಲ್ಲವೂ ಸಫಲವಾದ ಮೇಲೆ. ಇಲ್ಲಿ ಲಕ್ಷ್ಮಣನಿಗೆ ರಾಮನಿಗುಂಟಾದ ಬುದ್ಧಿವಿಸ್ಮೃತಿಯಿಂದ ಹೊರತರಬೇಕಾಗಿದೆ. ಇಲ್ಲಿ ಬರುವ “ಧರ್ಮೇಣ” ಅಂದರೆ ಸದಾಕಾಲವೂ ರಾಮನಿಗೆ ವಿಧೇಯನಾಗಿರುವ ಆತ ಆತನಿಗೆ ವಿವೇಕವನ್ನು ಹೇಳುವ ಸಂಧರ್ಭದಲ್ಲಿಯೂ ರಾಮಸೇವಕರೂಪದ ತನ್ನ ಸ್ವಭಾವಕ್ಕೆ ಕಿಂಚಿತ್ ಭಂಗ ಬಾರದಿರುವ ರೀತಿಯಲ್ಲಿ ವಿಷಯವನ್ನು ತಿಳಿಸುತ್ತಿದ್ದಾನೆ. ಇನ್ನು “ಬಲೇನಚೈವ” ಎನ್ನುವುದಕ್ಕೆ ಲಕ್ಷ್ಮಣ ಸೀತೆಯನ್ನು ರಾವಣ ಕದ್ದೊಯ್ದಿದ್ದಾನೆ ಎನ್ನುವುದು ಅವರಿಗೆ ತಿಳಿದಿದೆ. ಆದರೆ ರಾವಣ ಎಲ್ಲಿರಬಹುದು ಎನ್ನುವುದರ ಸುಳಿವು ಸಿಕ್ಕಿಲ್ಲ. ಇಲ್ಲಿ ದುಃಖಿಸುತ್ತಾ ಕುಳಿತರೆ ಕಾರ್ಯಸಾಧಿಸುವುದಿಲ್ಲ. ರಾವಣ ಎಲ್ಲಿದ್ದಾನೆ ಎನ್ನುವುದನ್ನು ಮೊದಲು ತಿಳಿಯಬೇಕು. ಆತ ಪಾತಾಳದಲ್ಲಿ ಇದ್ದರೂ, ಅಲ್ಲಿಂದ ಮುಂದೆ ಇನೂ ಗಹನವಾದ ಸ್ಥಳವನ್ನು ಹೊಕ್ಕರೂ ಪಾಪಿಷ್ಟನಾದ ಆತನನ್ನು ಹುಡುಕೋಣ ಎಂದು ಸಮಾಧಾನ ಹೇಳುತ್ತಾನೆ.

rama laxmana ಧವಳ ಧಾರಿಣಿ ಅಂಕಣ

ಅಯೋಧ್ಯಾ ಕಾಂಡದಲ್ಲಿ ಮುಂಗೋಪಿಯಾಗಿ ಲಕ್ಷ್ಮಣ ಕಾಣಿಸಿಕೊಳ್ಳುತ್ತಾನೆ. ತಂದೆಯಾದ ದಶರಥನನ್ನು ಬಂಧಿಸಿ ಸೆರೆಯಲ್ಲಿಟ್ಟು ರಾಜ್ಯವನ್ನು ಗೆದ್ದು ಅಣ್ಣನಾದ ರಾಮನಿಗೆ ಕೊಡುವೆ ಎಂದು ಅಬ್ಬರಿಸುತ್ತಾನೆ. ರಾಮನ ವಿವೇಕದ ಮಾತಿಗೆ ಅನಿವಾರ್ಯತೆಯಿಂದ ಸುಮ್ಮನಾಗುತ್ತಾನೆ. ಮುಂದೆ ಭರತ ರಾಮನನ್ನು ಕರೆತರಲು ಚಿತ್ರಕೂಟಕ್ಕೆ ಬರುವಾಗ ಆತನನ್ನು ನೋಡಿ, ತಮ್ಮಮೇಲೆ ಆಕ್ರಮಣಮಾಡಲು ಬಂದಿರಬಹುದೆನ್ನುವ ಸಂಶಯದಿಂದ ಭರತನನ್ನು ಎದುರಿಸುವೆ ಎನ್ನುವ ವೀರಾವೇಶದ ಮಾತುಗಳನ್ನು ಆಡುತ್ತಿದ್ದ ಲಕ್ಷ್ಮಣನ ಮೂಲ ಸ್ವಭಾವ ದುಡುಕಿನದ್ದಲ್ಲ. ರಾಮ ಗುಹನ ಆತಿಥ್ಯದಲ್ಲಿ ಗಂಗಾ ನದಿಯ ದಡದ ಮೇಲೆ ಮಲಗಿರುವಾಗ ಆತನ ಸ್ಥಿತಿಯನ್ನು ನೋಡಿ ಗುಹನ ಹತ್ತಿರ ಲಕ್ಷ್ಮಣ ಮರುಗುವುದು ಕರಳು ಚುರುಕ್ಕೆನ್ನುತ್ತದೆ. ಸದಾ ಹಂಸತೂಲಿಕಾತಲ್ಪದಲ್ಲಿ ಮಲಗುವ ತನ್ನ ಅಣ್ಣ ಇಂದು ಹೀಗೆ ಕೈಯನ್ನೇ ತಲೆದಿಂಬನ್ನಾಗಿಸಿಕೊಂಡು ಮಲಗಿರುವುದನ್ನು ನೋಡಲು ಆತನಿಗೆ ಸಾಧ್ಯವಾಗುವುದಿಲ್ಲ. ಲಕ್ಷ್ಮಣನದ್ದು ಹೆಂಗರಳು. ರಾಮನ ವಿಷಯದಲ್ಲಿ ಮಾತ್ರ ಕರುಣೆ ತೋರುವುದಲ್ಲ.

ಜನಸ್ಥಾನದಲ್ಲಿ ಅವರು ವಾಸಮಾಡುವಾಗ ನಡೆದ ಘಟನೆ. ವನವಾಸದ ಹದಿಮೂರನೆಯ ವರ್ಷದಲ್ಲಿ ಅವರು ಇದ್ದಾರೆ. ಆ ವರ್ಷದ ಹೇಮಂತ ಋತುವಿನಲ್ಲಿ ಅಸಾಧ್ಯವಾದ ಚಳಿಯಿದೆ. ಕಾಡಾನೆಗಳ ಹಿಂಡು ಬಾಯಾರಿಕೆಯಿಂದ ನೀರುಕುಡಿಯಲು ನದಿಗೆ ಬರುತ್ತಿದ್ದವಂತೆ ಆದರೆ ಹೇಮಂತದ ಚಳಿಯನ್ನು ತಾಳಲಾರದೇ ಸೊಂಡಿಲನ್ನು ನೀರಿಗೆ ಚಾಚಿ ನೀರು ಕುಡಿಯಲು ಯತ್ನಿಸಿದರೆ ಅವುಗಳಿಗೆ ತಣ್ಣನೆಯ ನೀರಿನ ಛಳಿಯನ್ನು ತಾಳಿಕೊಳ್ಳಲಾಗುವುದಿಲ್ಲ, ಮೈಕೊರೆವ ಚಳಿಗೆ ಅಂಜಿ ನೀರನ್ನು ಕುಡಿಯದೇ ಬಾಯಾರಿಕೆಯನ್ನು ಸಹಿಸಿಕೊಂಡು ಕಾಡಿಗೆ ಮರಳುತ್ತಿದ್ದವು. ಸದಾ ನೀರಿನಲ್ಲಿಯೇ ಇರುವ ಹಂಸಪಕ್ಷಿಗಳು ಸಹ ಚಳಿಗೆ ಹೆದರಿ ನೀರಿಗಿಳಿಯದೇ ದಡದಲ್ಲಿಯೇ ಸಾಲಾಗಿ ಕುಳಿತುಕೊಂಡಿದ್ದವು. ಅದನ್ನು ನೋಡಿದ ಲಕ್ಷ್ಮಣನಿಗೆ ನಂದಿಗ್ರಾಮದಲ್ಲಿ ಭರತನೂ ತಮ್ಮಂತೆ ವೃತಧಾರಿಯಾಗಿ ಗಡ್ಡೆ ಗಣಸು ತಿನ್ನುತ್ತಾ, ಜಟಾಧಾರಿಯಾಗಿ ನೆಲದಮೇಲೆ ಮಲಗುತ್ತಿದ್ದಾನೆ ಎನ್ನುವುದು ನೆನಪಾಯಿತು. ಸ್ವತಃ ತಾವು ಅಂತಹ ಚಳಿಯಲ್ಲಿ ನಡುಗುತ್ತಿದ್ದರೂ ಲಕ್ಷ್ಮಣನ ಮನಸ್ಸು ಇಲ್ಲಿ ಭರತನಿಗಾಗಿ ಮರುಗುತ್ತದೆ.

ಅತ್ಯನ್ತಸುಖಸಂವೃದ್ಧಸ್ಸುಕುಮಾರಸ್ಸುಖೋಚಿತಃ.
ಕಥಂ ನ್ವಪರರಾತ್ರೇಷು ಸರಯೂಮವಗಾಹತೇ৷৷ಅ.16.30৷৷

ಸುಖದಲ್ಲಿ ಬೆಳೆದ ಭರತ ಚಳಿಯಿಂದ ಕೂಡಿದ ಈ ಅಪರಾತ್ರಿಯಲ್ಲಿ ಸರಯೂ ನದಿಯಲ್ಲಿ ಹೇಗೆ ಸ್ನಾನ ಮಾಡಿಯಾನು ಎಂದು ಭರತನ ಕುರಿತು ಕಳವಳವನ್ನು ವ್ಯಕ್ತಪಡುತ್ತಾನೆ. ಅಪರಾತ್ರಿಯೆಂದರೆ ಮುಂಜಾನೆ ಬ್ರಾಹ್ಮೀ ಮುಹೂರ್ತಕ್ಕೆ ಮುನ್ನವೇ ಎದ್ದು ಸ್ನಾನಗಳನ್ನು ಪೂರೈಸಿ ನಿತ್ಯಕರ್ಮಾನುಷ್ಠಾನಗಳನ್ನು ಮಾಡಿ ಪ್ರಜೆಗಳ ಯೋಗಕ್ಷೇಮಗಳನ್ನು ನೋಡಲು ಪ್ರಾತಃಕಾಲದಲ್ಲಿ ಸಿದ್ಧನಾಗುತ್ತಿದ್ದ. ತಮಗಾದರೋ ವನವಾಸದ ದೀಕ್ಷೆಯಿದೆ. ಆದರೆ ಭರತ ಸುಖವಾಗಿ ಇರಬಹುದಾಗಿದ್ದರೂ ತಮ್ಮಂತೆ ವನವಾಸೀ ದೀಕ್ಷೆಯನ್ನು ಕೈಗೊಂಡು ರಾಜ್ಯವನ್ನು ನಡೆಸುತ್ತಿದ್ದಾನೆ. ರಾಜ್ಯವನ್ನು ರಾಮನ ಪ್ರತಿನಿಧಿಯಾಗಿ ನಿರ್ವಹಿಸುವ ಆತ ಅದಕ್ಕೆ ಚ್ಯುತಿಬಾರದ ರೀತಿಯಲ್ಲಿ ಚಳಿಗಾಲವನ್ನು ಲೆಕ್ಕಿಸದೇ ಕರ್ತವ್ಯಪರಾಯಣನಾಗಿದ್ದಾನೆ. ಚಳಿಗಾಲದ ವರ್ಣನೆ ಮತ್ತು ಭರತನ ಕುರಿತು ಲಕ್ಷ್ಮಣನ ಕಾಳಜಿ ಎರಡನ್ನೂ ಅನೇಕ ಉಪಮೆಗಳೊಂದಿಗೆ ವಾಲ್ಮೀಕಿ ಕಟ್ಟಿಕೊಟ್ಟಿದ್ದಾರೆ. ಧರ್ಮದ ಮೂಲಕವಾಗಿ ರಾಮನನ್ನು ಸಮಾಧಾನ ಮಾಡಿದ ಜೊತೆಗೆ ಬಲದ ಪ್ರದರ್ಶನದ ಮೂಲಕವೂ ರಾಮನನ್ನು ಸಮಾಧಾನಿಸಿದ ಎನ್ನುವುದಕ್ಕೆ ಲಕ್ಷ್ಮಣ ರಾಮನಲ್ಲಿ ”ಮೊದಲು ರಾವಣನನ್ನು ಹುಡುಕೋಣ. ಆತನಲ್ಲಿ ತಮ್ಮ ಪರಾಕ್ರಮವೆಷ್ಟು ಎನ್ನುವುದನ್ನು ತೋರಿಸಿ ಆತ ಸೀತೆಯನ್ನು ಬಿಟ್ಟುಕೊಡುವಂತೆ ಎಚ್ಚರಿಸೋಣ. ಅದಕ್ಕೂ ಆತ ಬಗ್ಗದಿದ್ದರೆ ಆತ ದಿತಿಯ ಗರ್ಭದಲ್ಲಿದ್ದರೂ ಆತನನ್ನು ಸಂಹರಿಸುವೆ” ಎನ್ನುವ ಮೂಲಕ ಬಲದಿಂದಲೂ ರಾಮನನ್ನು ಸಮಾಧಾನಿಸುತ್ತಾನೆ.

rama laxmana ಧವಳ ಧಾರಿಣಿ ಅಂಕಣ

ಕಾವ್ಯದಲ್ಲಿ ನಾಟಕೀಯತೆಯ ಸನ್ನಿವೇಶ ಹೇಗೆ ಬರಬೇಕೆನ್ನುವುದಕ್ಕೆ ಇಲ್ಲಿನ ವರ್ಣನೆ ಸಾಕ್ಷಿ. ಲಕ್ಷ್ಮಣ ಪರಾಕ್ರಮದಲ್ಲಿ ಯಾರಿಗೂ ಕಡಿಮೆ ಇಲ್ಲದವನು. ಆನೆಯಷ್ಟು ಬಲ ಆತನಲ್ಲಿದೆ. ಮದಿಸಿದ ಆನೆ ತನ್ನ ಮಾವುತನ ಮೇಲೆ ಅಪಾರಪ್ರೀತಿಯನ್ನು ತೋರುತ್ತದೆ. ತನ್ನ ಮಾವುತ ವ್ಯಾಕುಲತೆಯಿಂದ ಕುಳಿತರೆ ಆತನನ್ನು ರಮಿಸಿ ತನ್ನೊಂದಿಗೆ ಕರೆದೊಯ್ಯುವ ಸ್ವಭಾವ ಅದಕ್ಕಿರುತ್ತದೆ ಇಂತಹ ದೃಶ್ಯವನ್ನು ಅನೇಕ ಕಡೆ ನೋಡಬಹುದಾಗಿದೆ. ಸುಮಾರು 70ರ ಉತ್ತರಾರ್ಧದಶಕದಲ್ಲಿ ರಾಜೇಶ ಖನ್ನಾ ಅಭಿನಯಿಸಿದ “ಹಾಥಿ ಮೇರಾ ಸಾಥಿ” ಸಿನೇಮಾವನ್ನು ನೋಡಿದ್ದರೆ ಅದು ಅರ್ಥವಾದೀತು. ರಾಮನೆನ್ನುವ ಸೋದರತ್ವದ ಒಲವಿನಲ್ಲಿ ಬಂಧಿತನಾದ ಲಕ್ಷ್ಮಣ ಅಥವಾ ತನ್ನ ತಾಯಿಯಾದ ಸುಮಿತ್ರೆಯ ಹತ್ತಿರ ಲಕ್ಷ್ಮಣ ಕಾಡಿಗೆ ಅಣ್ಣನನ್ನು ಅನುಸರಿಸಿಕೊಂಡು ಹೋಗುತ್ತೇನೆ ಎಂದು ಆಶೀರ್ವಾದವನ್ನು ಕೇಳಿದಾಗ ಆಕೆ ಮಗನಿಗೆ “ರಾಮಂ ದಶರಥಂ ವಿದ್ಧಿ ಮಾಂ ವಿದ್ಧಿ ಜನಕಾತ್ಮಜಾಮ್..” ರಾಮನನ್ನು ದಶರಥನೆಂದೆ ತಿಳಿದು ಗೌರವಿಸು, ನನ್ನನ್ನು ಹೇಗೆ ಗೌರವಿಸುತ್ತೀಯೋ ಅದೇ ರೀತಿ ಸೀತೆಗೆ ಗೌರವವನ್ನು ನೀಡು , ಅಡವಿಯನ್ನೇ ಅಯೋಧ್ಯೆಯೆಂದು ಭಾವಿಸು” ಎಂದು ಹರಸಿಕಳುಹಿಸಿದ್ದಳು. ಸಹಜವಾಗಿಯೂ ರಾಮನಲ್ಲಿ ಭಯಭಕ್ತಿಯುಳ್ಳ ಮತ್ತು ಅತನೇ ತನ್ನ ರಾಜನೆಂದು ತಿಳಿದು ತ್ರಿಕರಣಪೂರ್ವಕವಾಗಿ ಅನುಸರಿಸಿಕೊಂಡು ಬಂದವ ಲಕ್ಷ್ಮಣ. ಹಾಗಾಗಿ ಇಲ್ಲಿ ರಾಮನೆನ್ನುವ ಮಾವುತನನ್ನು ಮದಿಸಿದ ಆನೆಯಂತಿರುವ ಲಕ್ಷ್ಮಣ ಒಯ್ಯಾರದಿಂದ ಕರೆದುಕೊಂಡು ಬಂದ ಎನ್ನುವ ಉಪಮೆ ಸುಂದರವಾಗಿ ಮೂಡಿಬಂದಿದೆ.

ರಾಮನಿಗೆ ಸೀತೆಯನ್ನು ಕಳೆದುಕೊಂಡ ದುಃಖ ತಡೆಯಲಾರದೇ ವಿಸ್ಮೃತಿಗೊಳಗಾದ ವಿಷಯವನ್ನು ವಾಲ್ಮೀಕಿ ರಾಮಾಯಣದಲ್ಲಿ ವಿವರವಾಗಿ ಬಂದರೂ ಸ್ಕಾಂದಪುರಾಣದಲ್ಲಿ ಇನ್ನಷ್ಟು ವಿವರವಾಗಿ ವರ್ಣಿಸಲಾಗಿದೆ. ರಾಮನಿಗೆ ಅರಣ್ಯದಲ್ಲಿ ಸೀತೆಯ ವಿರಹದಿಂದ ಕಾಮೋದ್ದೀಪಕವಾಯಿತು. ಕಾಡಿನಲ್ಲಿರುವ ಭ್ರಮರವೇ ಮೊದಲಾದವುಗಳು ಸ್ವಂಚ್ಛಂದದಿಂದ ಹಾರಾಡುತ್ತಾ ಸಂಪಿಗೆಯ ಹೂವಿನ ಮಕರಂದವನ್ನು ಹೀರುತ್ತಿದ್ದವು. ಮಂದಮಾರುತ ಬೀಸುತ್ತಿತ್ತು. ಚಕ್ರವಾಕ ಪಕ್ಷಿಜೋಡಿಗಳು ಹಗಲಿನಲ್ಲಿ ಪರಸ್ಪರ ಮುದ್ದಾಡುತ್ತಿದ್ದವು. ವಿರಹಿಯಾದ ರಾಮ ಅದನ್ನು ನೋಡಿ ಕೋಪಗೊಂಡನಂತೆ. ತನ್ನ ವಿರಹದುಃಖವನ್ನು ನೋಡಿಯೂ ಕರುಣೆತೋರದೇ ಸಂತಸದಿಂದ ಇರುವ ಅವುಗಳನ್ನು ನೋಡಿ

ವೈಮುಖ್ಯಂ ಗಂಧಫಲ್ಯಾಸ್ತು ಭ್ರಮರಾಶಪತ್ಪ್ರಭುಃ I
ಕೋಕಾನ್ನಿಶಿಧೇ ವಿಶ್ಲೇಷಂ ಪಿಕಮನ್ಯವಿವರ್ಧನಮ್I
ಚಂದನಂ ಸರ್ಪ ನಿಲಯಂ ವಾಯುಂ ಸರ್ಪಾಶನಂ ತಥಾ I
ಜ್ಯೋತ್ಸ್ನಾಂ ಕಳಂಕಸಛನ್ನಾಂ ಶಶಾಪ ರಘುನಂದನಃ II II

ಸಂಪಗೆಯನ್ನು ಮುಟ್ಟದಂತೆ ಭ್ರಮರಗಳಿಗೂ, ರಾತ್ರಿಯಲ್ಲಿ ವಿಯೋಗವನ್ನು ಹೊಂದುವಂತೆ ಚಕ್ರವಾಕ ಜೋಡಿಗಳಿಗೂ, ಇತರಪಕ್ಷಿಗಳ ಪೋಷಣೆಗೊಳಗಾಗುವಂತೆ ಕೋಗಿಲೆಗಳಿಗೂ (ಪರಪುಟ್ಟ), ಕ್ರೂರಸರ್ಪಗಳಿಗೆ ಆಶ್ರಯತಾಣವಾಗುವಂತೆ ಚಂದನವೃಕ್ಷಕ್ಕೂ, ಹಾವುಗಳಿಗೆ ಆಹಾರವಾಗುವಂತೆ ಗಾಳಿಗೂ, ಕಳಂಕವಿಶಿಷ್ಟ (ಕಲೆಗಳಿಂದ ಕೂಡಿರುವಂತೆ) ಚಂದ್ರಕಾಂತಿಗೂ ಶಾಪಕೊಟ್ಟ ಎನ್ನುವ ವರ್ಣನೆ ಬರುತ್ತದೆ.

ಸೀತೆಯ ವಿಯೋಗ ರಾಮನಿಗೆ ಎರಡು ರೀತಿಯಿಂದ ಕಾಡುತ್ತಿತ್ತು. ಮೊದಲನೆಯದು ತನ್ನ ಪ್ರಿಯ ಮಡದಿಯನ್ನು ಕಳೆದುಕೊಂಡಿರುವುದು. ಎರಡನೆಯದು ರಾವಣ ಸೀತೆಯನ್ನು ಕದ್ದೊಯ್ಯುವ ಮೂಲಕ ರಾಮನ ಪುರುಷತ್ವಕ್ಕೆ ಸವಾಲನ್ನು ಎಸೆದಿದ್ದ. ಇದು ಸ್ಕಂಧಪುರಾಣದ ಮೇಲಿನ ಶ್ಲೋಕದಿಂದ ಸ್ಪಷ್ಟವಾಗುತ್ತದೆ. ಈ ಕಾರಣದಿಂದ ನೊಂದಿದ್ದ ರಾಮನನ್ನು ಲಕ್ಷ್ಮಣ ಸಮಾಧಾನ ಪಡಿಸಿ ಆತನ ಸ್ಮೃತಿಯನ್ನು ವಾಸ್ತವಕ್ಕೆ ಕರೆತರುತ್ತಾನೆ. ಆತನ ದುಃಖವನ್ನು ಶಮನಮಡುತ್ತಾನೆ. ಈಗ ಆತನಿಗೆ ಸೀತೆಯನ್ನು ಹುಡುಕುವ ಸಲುವಾಗಿ ಕಬಂಧ ಹೇಳಿದಂತೆ ಸುಗ್ರೀವನ ಸಖ್ಯ ಅನಿವಾರ್ಯವೆನ್ನುವುದು ನೆನಪಾಗುತ್ತದೆ. ಆ ಕಾರಣದಿಂದ ಹನುಮಂತನ ಹತ್ತಿರ ಲಕ್ಷ್ಮಣ ರಘುಕುಲದ ಶ್ರೇಷ್ಠನಾದ ರಾಮನೇ ಸುಗ್ರೀವನಲ್ಲಿ ಆಶ್ರಯವನ್ನು ಕೋರಿ ಬಂದಿದ್ದಾನೆ. ಆತನಲ್ಲಿ ಶರಣಾಗಲು ಬಂದಿದ್ದಾನೆ. ಎನ್ನುವ ಮಾತುಗಳನ್ನು ಲಕ್ಷ್ಮಣ ಆಡುವುದು.

ಸುಗ್ರೀವನ ಸ್ಥಿತಿ ಮತ್ತು ಇನ್ನಷ್ಟು ರೋಚಕ ವಿಚಾರಗಳನ್ನು ಮುಂದಿನ ಸಂಚಿಕೆಯಲ್ಲಿ ಗಮನಿಸೋಣ.

ಇದನ್ನೂ ಓದಿ: ಧವಳ ಧಾರಿಣಿ ಅಂಕಣ: ಕಿಷ್ಕಿಂಧಾ ಕಾಂಡ ಭಾಗ 2: ದೀಪದ ಬುಡದಲ್ಲಿ ಕತ್ತಲೆ

Exit mobile version