ಹೃದಯಕ್ಕೆ ಪ್ರಿಯನಾಗಿರುವ ರೂಪ ಗುಣ ಸ್ವಭಾವಗಳ ಅನುರೂಪತೆಯೇ ಸ್ವಯಂವರ
ಕದಾಚನ ಸ್ತರೀರಸಿ ನೇಂದ್ರ ಸಶ್ಚಸಿ ದಾಶುಷೇ
ಉಪೋಪೇನ್ನು ಮಘವನ್ ಭೂಯsಇನ್ನು ತೇ ದೇವಸ್ಯ ಪೃಚ್ಛತs ಆದಿತ್ಯೇಭ್ಯಸ್ತ್ವಾ II ಯ 8-2
(ವಿವಾಹ ಕಾಮನೆಯಿಂದ ಕೂಡಿದ ಯುವತಿಯಾದ ಸ್ತ್ರೀಯು ಛಲ, ಕಪಟಗಳ ಆಚರಣೆಯಿಲ್ಲದವನೂ, ಸತ್ಯಭಾವ ಪ್ರಕಾಶನೂ ಏಕಸ್ತ್ರೀವ್ರತನೂ ಜಿತೇಂದ್ರಿಯನೂ ಉದ್ಯೋಗಶೀಲನೂ ಧಾರ್ಮಿಕನೂ ದಾನಶೀಲನೂ ವಿದ್ವಾಂಸನೂ ಆದ ಪುರುಷನನ್ನು ವಿವಾಹ ಮಾಡಿಕೊಂಡು ಸದಾ ಸಂತೋಷವನ್ನು ಹೊಂದಬೇಕು.)
ಭಾರತೀಯ ಸನಾತನ ಲೋಕವನ್ನು (Ancient India) ಪ್ರವೇಶಿಸಿದಾಗ ಸ್ತ್ರೀಯರ ಸ್ಥಾನಮಾನದ ಕುರಿತು ಅಚ್ಚರಿಯ ವಿಷಯಗಳು ಬೆಳಕಿಗೆ ಬರುತ್ತವೆ. ಲೋಪಾಮುದ್ರಾ, ಘೋಶಾ, ವಿಶ್ವವರಾದೇವಿ, ಗಾರ್ಗಿ, ಸುಲಭಾ ಹೀಗೆ ಹಲವು ಹೆಸರುಗಳನ್ನು ಇಲ್ಲಿ ಹೇಳಬಹುದಾಗಿದೆ. ಇವೆಲ್ಲಕ್ಕಿಂತ ಮುಖ್ಯವಾಗಿ ಈ ಸ್ತ್ರೀಯರು ಪ್ರತಿಪಾದಿಸುತ್ತಿದ್ದ ವಿಷಯಗಳು ಪುರುಷರಿಗಿಂತಲೂ ಕಡಿಮೆಯೇನೂ ಇರುತ್ತಿರಲಿಲ್ಲ. ಪ್ರಜೋತ್ಪತ್ತಿಯೇ ಮುಖ್ಯವಾಗಿದ್ದ ಆ ಕಾಲದಲ್ಲಿ ಸ್ತ್ರೀಗೆ ಮುಕ್ತವಾದ ಸ್ವಾತಂತ್ರ್ಯವೂ ಇತ್ತು. ಅದರಲ್ಲಿಯೂ ಮದುವೆಯ ವಿಷಯದಲ್ಲಿ ತನ್ನ ಸಂಗಾತಿಯನ್ನು ತಾನೇ ಆರಿಸಿಕೊಳ್ಳುವ ಸ್ವಾತಂತ್ರ್ಯ ಆಕೆಗಿತ್ತು.
ಸ್ವಯಂವರ ಎನ್ನುವ ವಿಷಯವನ್ನು ಕ್ಷತ್ರಿಯ ರಾಜಮನೆತನದಲ್ಲಿ ಅನೇಕ ಸಲ ಕೇಳಿದ್ದೇವೆ. ಕ್ಷತ್ರಿಯರಲ್ಲಿ ಸ್ವಯಂವರ ಪದ್ಧತಿ ಇದ್ದಿದ್ದು ನಿಜವಾದರೂ ಅದು ಹೆಚ್ಚಾಗಿ ರಾಜಕೀಯ ಕಾರಣಗಳಿಗಾಗಿರುತ್ತಿತ್ತು. ಈ ಪದ್ಧತಿಯಲ್ಲಿ ತನ್ನ ಅಳಿಯ ಹೇಗಿರಬೇಕೆನ್ನುವುದನ್ನು ವಧುವಿನ ತಂದೆ ನಿರ್ಧರಿಸುತ್ತಿದ್ದ. ಆದರೆ ಬ್ರಹ್ಮವಾದಿನಿಯ ಲೋಕದಲ್ಲಿ ಹಾಗಿರಲಿಲ್ಲ. ಆ ಕಾಲದಲ್ಲಿ ಬಾಲ್ಯವಿವಾಹಗಳಿರುತ್ತಿರಲಿಲ್ಲ. ಕನ್ಯೆ ಪ್ರಬುದ್ಧಾವಸ್ಥೆಗೆ ಬಂದ ಮೇಲೆ ಆಕೆಯ ನಿರ್ಣಯದ ಮೇಲೆ ಯೋಗ್ಯ ವರನನ್ನು ಹುಡುಕಲಾಗುತ್ತಿತ್ತು. ಬ್ರಾಹ್ಮ್ಯ ವಿವಾಹ ಪದ್ಧತಿಯಲ್ಲಿ ವಧುವನ್ನು ಪತಿ ತನ್ನ ಅಧೀನಳು ಎಂದು ತಿಳಿಯುವುದಿಲ್ಲ; ಆಕೆಯನ್ನು ಮಿತ್ರಳು ಎಂದು ಸ್ವೀಕರಿಸುತ್ತಾನೆ. ಇಂಥ ಒಂದು ಮದುವೆಯ ವಿಷಯ ಬಂದಾಗ ಸುವರ್ಚಲೆ ಎನ್ನುವ ಬ್ರಹ್ಮವಾದಿನಿಯ ಹೆಸರು ಬರುತ್ತದೆ.
ಈಕೆ ಅಸಿತ ದೇವಲ ಎನ್ನುವ ಋಷಿಯ ಮಗಳು. ಅಸಿತ ದೇವಲ ಓರ್ವ ಅಪ್ರತಿಮ ಸಾಧಕ. ನಾರದನೇ ಈತನಲ್ಲಿ ಪ್ರಪಂಚದಲ್ಲಿ ಜೀವಗಳ ಸೃಷ್ಟಿ ಹೇಗಾಯಿತೆಂದು ಕೇಳಿ ಅರಿತುಕೊಂಡಿದ್ದ. ಈತ ಸದಾಕಾಲವೂ ಹೊಸತನ್ನು ಅರಸುವತ್ತ ನಿರತನಾಗಿದ್ದ. ಅಧ್ಯಯನದಲ್ಲಿ ಮಗ್ನನಾಗಿದ್ದ ಈತ ಮದುವೆಯಾಗುವುದನ್ನೇ ಮರೆತುಬಿಟ್ಟಿದ್ದ. ಈತ ಒಮ್ಮೆ ಗಂಗಾ ನದಿಯಲ್ಲಿ ಸ್ನಾನ ಮಾಡುತ್ತಿರುವಾಗ ಮರದ ಕೊಂಬೆಯ ಮೇಲೆ ಪಿತೃಗಳು ತಲೆ ಕೆಳಗಾಗಿ ನೇತಾಡುತ್ತಿರುವುದನ್ನು ನೋಡಿದ. ಯಾಕೆ ಎಂದು ಕೇಳಿದಾಗ, ತಾವೆಲ್ಲ ಆತನ ಪಿತೃಗಳು, ದೇವಲ ಇನ್ನೂ ಮದುವೆಯಾಗದೇ ಇರುವುದರಿಂದ ತಮಗೆಲ್ಲರಿಗೂ ಈ ಸ್ಥಿತಿ ಬಂದಿದೆ. ಎಷ್ಟು ತಪಸ್ಸನ್ನಾಚರಿಸಿದರೂ ಪಿತೃಋಣ ತೀರಿದ ಹೊರತೂ ಅದು ಸಿದ್ಧಿಸುವುದಿಲ್ಲ ಎಂದು ಹೇಳಿದರು. ಆಗ ದೇವಲನಿಗೆ ತನ್ನ ತಪ್ಪಿನ ಅರಿವಾಯಿತು.
ಚಿರಂಜೀವಿತ್ವ ಎಂದರೆ ತಾನೇ ತನ್ನ ಹೆಂಡತಿಯನ್ನು ಸೇರಿ ಮಗನಾಗಿ ಹುಟ್ಟುವುದು, ಈ ಕಾರಣಕ್ಕಾಗಿ ಹಂಡತಿಯನ್ನು ಜಾಯಾ ಎಂದು ಕರೆಯುತ್ತಾರೆ. ಸರಿ, ಮದುವೆಯಾಗುತ್ತೇನೆ ಎಂದು ಆತ ಕೌಂಡಿನ್ಯ ಋಷಿಯ ಮಗಳನ್ನು ಲಗ್ನವಾಗಿ ಅವಳಿಂದ ಸುವರ್ಚಲೆ ಎನ್ನುವ ಮಗಳನ್ನು ಪಡೆದ. ಇಲ್ಲಿ ಗಮನಿಸಬೇಕಾದ ಸಂಗತಿಯೆಂದರೆ ಗಂಡು ಮಗುವಾದರೆ ಮಾತ್ರವೇ ಪಿತೃಗಳಿಗೆ ಸದ್ಗತಿ ದೊರೆಯುತ್ತವೆ ಎನ್ನುವುದನ್ನು ಉಪನಿಷತ್ತು ಒಪ್ಪುವುದಿಲ್ಲ. ಮೊದಲ ಮಗು ಅದು ಗಂಡಾಗಲೀ, ಹೆಣ್ಣಾಗಲಿ, ಅವರೆಲ್ಲರೂ ಧರ್ಮಜರು. ಹಾಗಾಗಿ ಸುವರ್ಚಲೆ ಜನಿಸಿದ ತಕ್ಷಣದಲ್ಲಿ ದೇವಲನಿಗೆ ಪಿತೃಋಣವನ್ನು ತೀರಿಸಿದಂತಾಯಿತು.
ಸುವರ್ಚಲೆಯಾದರೋ ಬಲು ಚೂಟಿ. ಆಕೆ ತನ್ನ ತಂದೆಯಲ್ಲಿಯೇ ವಿದ್ಯಾಭ್ಯಾಸವನ್ನು ಕಲಿತು ಸಂಪೂರ್ಣ ಜ್ಞಾನಿ ಎನಿಸಿಕೊಂಡಿದ್ದಳು. ಸುವರ್ಚಲೆ ಎಂದರೆ ಸೂರ್ಯನ ಕಿರಣದಂತೆ ವರ್ಚಸ್ಸುಳ್ಳವಳು ಎಂದು ಅರ್ಥ. ಅದಕ್ಕೆ ತಕ್ಕಂತೆ ಆಕೆ ವೇದ ವೇದಾಂಗ ಮತ್ತು ಸಕಲ ಶಾಸ್ತ್ರಗಳಲ್ಲಿಯೂ ಪಾರಂಗತಳಾಗಿದ್ದಳು. ಆಶ್ರಮದಲ್ಲಿ ದೇವಲರ ಶಿಷ್ಯರಿಗೆ ತಾನೇ ಪಾಠಪ್ರವಚನ ಮಾಡುವಷ್ಟು ಪರಿಣಿತಳಾಗಿದ್ದಳು. ಜಿಜ್ಞಾಸೆ ಮತ್ತು ಶಾಸ್ತ್ರಾರ್ಥಕ್ಕಾಗಿ ದೇವಲರನ್ನು ಹುಡುಕಿಕೊಂಡು ಬರುವ ಅನೇಕ ಋಷಿಮುನಿಗಳಲ್ಲಿ ಆಕೆ ಸಂವಾದವನ್ನು ನಡೆಸುತ್ತಿದ್ದಳು. ಸಣ್ಣಪ್ರಾಯದಲ್ಲಿಯೇ ಅನೂಚಾಮನಳಾಗಿದ್ದಾಳೆ (ವೇದಗಳನ್ನು ಸಂಪೂರ್ಣವಾಗಿ ತಿಳಿದಿದ್ದಾಳೆ) ಎಂದು ಎಲ್ಲಾ ಕಡೆಯೂ ಅವಳ ಕೀರ್ತಿ ಹಬ್ಬಿತ್ತು. ಎಲ್ಲ ತಂದೆತಾಯಿಯರಂತೆ ದೇವಲ ಋಷಿದಂಪತಿಗಳಿಗೂ ಆಕೆ ಪ್ರಾಯ ಪ್ರಬುದ್ಧಳಾದಾಗ ಮದುವೆ ಮಾಡಬೇಕೆನ್ನುವ ಸಹಜವಾದ ಬಯಕೆ ಉಂಟಾಯಿತು. ಈಕೆಗೆ ಯೋಗ್ಯನಾದ ವರ ಯಾರಾಗಬಹುದೆನ್ನುವ ಚಿಂತೆಯೂ ಕಾಡಿತು.
ಅವರು ತಮ್ಮ ಮಗಳನ್ನು ಕರೆದು “ಮಗಳೆ, ನಿನಗೆ ಮದುವೆ ಮಾಡಬೇಕೆಂದಿರುವೆ, ನಿನ್ನಿಷ್ಟದ ವರ ಯಾರು, ಆತ ಹೇಗಿರಬೇಕು?” ಎಂದು ಕೇಳಿದರು. ಆಗ ಸುವರ್ಚಲೆಯೊಂದು ವಿಚಿತ್ರವಾದ ಬೇಡಿಕೆಯನ್ನು ಇಟ್ಟಳು. “ನಾನು ವರಿಸುವ ವರ ಕಣ್ಣಿಲ್ಲದವನಾಗಬೇಕು, ಆದರೆ ಕುರುಡನಾಗಿರಬಾರದು. ಅಂತಹ ವರನನ್ನು ನೀನು ಹುಡುಕು”. ಇದು ದೇವಲರ ಚಿಂತೆಗೆ ಕಾರಣವಾಯಿತು. ಮಗಳ ಮದುವೆಯಾಗುವವ ಕಣ್ಣಿಲ್ಲದವನಾಗಿರಬೇಕು ಅದರೆ ಕುರುಡನಾಗಿರಬಾರದು ಎನ್ನುವುದರ ಹಿಂದಿನ ಮರ್ಮವೇನೋ ಇರಬೇಕು ಎಂದು ಅವರಿಗೆ ಅನಿಸಿತು. ಬಾಧಿಸುತ್ತಿದ್ದ ಚಿಂತೆ ಹೋಗಿ ಮಗಳ ಕುರಿತು ಹೆಮ್ಮೆಯೂ ಆಯಿತು. ಈಗ ಅವರಿಗೆ ಅಂತಹ ವರನನ್ನು ಹುಡುಕುವುದು ಎಲ್ಲಿಂದ ಎನ್ನುವ ಆಲೋಚನೆಗೆ ತೊಡಗಿದರು. ತಡಮಾಡಲಿಲ್ಲ. ತಕ್ಷಣವೇ ಒಂದು ಶುಭಮೂಹೂರ್ತವನ್ನು ಸುವರ್ಚಲೆಯ ಸ್ವಯಂವರಕ್ಕಾಗಿ ನಿಶ್ಚಯಿಸಿ ಆದಿನ ಆ ಕಾಲದ ಎಲ್ಲಾ ಋಷಿಕುಮಾರರನ್ನು ಸ್ವಯಂವರವನ್ನು ನಿಶ್ಚಯಿಸಿ ಆಹ್ವಾನಿಸಿದರು.
ಆ ದಿನವೂ ಬಂದೇ ಬಿಟ್ಟಿತು. ಆರ್ಯಾವರ್ತದ ಎಲ್ಲಾ ಸ್ನಾತಕರೂ ಆ ದಿನ ದೇವಲರ ಆಶ್ರಮದಲ್ಲಿ ಸೇರಿದರು. ಸೇರಿದ ಋಷಿಕುಮಾರರನ್ನು ವಿಧಿಪೂರ್ವಕವಗಿ ಪೂಜಿಸಿ “ನನ್ನ ಮಗಳು ಸುವರ್ಚಲೆ ಸಕಲ ಗುಣ ಸಂಪನ್ನೆಯೂ, ರೂಪವತಿಯೂ ಮತ್ತು ಸಕಲಶಾಸ್ತ್ರ ವಿಶಾರದಳೂ ಆಗಿದ್ದಾಳೆ. ಅವಳು ಈಗ ಮದುವೆಯ ವಯಸ್ಸಿಗೆ ಬಂದಿದ್ದಾಳೆ. ಅವಳನ್ನು ಯೋಗ್ಯ ವರನಿಗೆ ಕೊಟ್ಟು ಮದುವೆಯನ್ನು ಮಾಡುವುದಕ್ಕಾಗಿ ಇದೀಗ ನಿಮ್ಮನ್ನೆಲ್ಲರನ್ನೂ ಸೇರಿಸಿದ್ದೀನೆ. ನೀವು ಇದೀಗ ಆಕೆ ಕೇಳುವ ಪ್ರಶ್ನೆಗಳಿಗೆ ಉತ್ತರಿಸಬೇಕು” ಎಂದು ಉದ್ಘೋಷಿಸಿ ತಮ್ಮ ಮಗಳನ್ನು ಸ್ವಯಂವರಕ್ಕಾಗಿ ಸಭೆಗೆ ಕರೆದರು.
“ಮಗಳೆ, ಇವರೆಲ್ಲರೂ ವಿದ್ಯಾವಂತರೂ ಮತ್ತು ಸಕಲ ಶಾಸ್ತ್ರವನ್ನು ಅಧ್ಯಯನ ಮಾಡಿದವರೂ ಆಗಿದ್ದಾರೆ. ಇವರಲ್ಲಿ ಯಾರು ನಿನ್ನ ಮೆಚ್ಚಿನವರು ಎಂದು ಆರಿಸಿಕೊ, ನಿನಗೆ ಕನ್ಯಾದಾನವನ್ನು ಮಾಡಿದ ಪುಣ್ಯವನ್ನು ನಾನು ಗಳಿಸಿಕೊಳ್ಳುವೆ” ಎಂದು ಹೇಳಿದರು. ತನ್ನನ್ನು ಮದುವೆಯಾಗಲು ಬಂದ ಆ ಅತಿಥಿಗಳಿಗೆ ನಮಸ್ಕರಿಸಿ ಸುವರ್ಚಲೆ ಶಾಂತಮನಸ್ಕಳಾಗಿ ಎಲ್ಲರಿಗೂ ಕೇಳುವಂತೆ ಉಚ್ಚಕಂಠದಿಂದ “ನಿಮಗೆಲ್ಲ ಅಸಿತ ದೇವಲ ಮಹರ್ಷಿಯ ಆಶ್ರಮಕ್ಕೆ ಸ್ವಾಗತ. ನಿಮ್ಮಲ್ಲಿ ಯಾವನು ಕಣ್ಣಿಲ್ಲದವನಾಗಿಯೂ ಕುರುಡನಲ್ಲವೋ ಅಂತಹ ಋಷಿಕುಮಾರರು ಮುಂದೆ ಬರಬೇಕು, ಅವರನ್ನು ನಾನು ಮದುವೆಯಾಗುವೆ” ಈ ಮಾತುಗಳನ್ನು ಕೇಳಿದ ಋಷಿಕುಮಾರರೆಲ್ಲರೂ ಅವಾಕ್ಕಾದರು. ಕೆಲವರಿಗೆ ಕೋಪವೂ ಬಂತು. ಈಕೆಗೆ ಜಂಬ ಜಾಸ್ತಿ, ಸೊಕ್ಕಿನ ಹೆಣ್ಣು ಎನ್ನುತ್ತಾ ಅವಳನ್ನು ಮತ್ತು ದೇವಲ ಮಹರ್ಷಿಯನ್ನು ಜರೆಯುತ್ತಾ ಅವರೆಲ್ಲರೂ ಹೊರಟು ಹೋದರು.
ಈ ಸಂಗತಿ ದೂರದ ಊರಿಗೂ ಹಬ್ಬಿ ಆಕೆಯನ್ನು ಮದುವೆಯಾಗಲು ಕೆಲವರು ಬಂದು ಆಕೆಯ ಕರಾರನ್ನು ಕೇಳಿ ತಣ್ಣಗೆ ಹೋಗುತ್ತಿದ್ದರು. ರೂಪವತಿಯಾದ ತಮ್ಮ ಮಗಳಿಗೆ ಯೋಗ್ಯ ವರ ಸಿಕ್ಕದೇ ಇರುವದು ದೇವಲರ ಚಿಂತೆಯನ್ನು ಇನ್ನಷ್ಟು ಹೆಚ್ಚಿಸಿತು. ಹೀಗಿರುವಾಗ ಒಂದು ದಿನ ಅವರ ಆಶ್ರಮಕ್ಕೆ ತೇಜಸ್ಸಿನಿಂದ ಕೂಡಿದ ಋಷಿಕುಮಾರನೋರ್ವ ಬಂದು ತನ್ನ ಋಷಿಪರಂಪರೆಯ ಪರಿಚಯವನ್ನು ಹೇಳುತ್ತಾ ಅಭಿವಂದನೆ ಮಾಡಿದ. ಆತನ ವಂಶಾವಳಿಯನ್ನು ಕೇಳಿದ ದೇವಲರಿಗೆ ತುಂಬಾ ಸಂತೋಷವಾಯಿತು. ಆತ ಗೌತಮ ಗೋತ್ರದ ಉದ್ಧಾಲಕ ಋಷಿಯ ಹಿರಿಯ ಮಗ ಶ್ವೇತಕೇತು.
ಉಪನಿಷತ್ತಿನಲ್ಲಿ ಬರುವ ಋಷಿ ಪರಂಪರೆಯಲ್ಲಿ ಉದ್ಧಾಲಕ ಋಷಿ ತುಂಬಾ ಮಹತ್ವವನ್ನು ಪಡೆಯುತ್ತಾನೆ. ಈತ ಯಾಜ್ಞವಲ್ಕ್ಯ ಮತ್ತು ಗಾರ್ಗಿ ಇವರ ಸಮಕಾಲೀನ ಎನ್ನುವುದು ಬೃಹದಾರಣ್ಯಕೋಪನಿಷತ್ತಿನಲ್ಲಿ ಬರುತ್ತದೆ. ಛಾಂದೋಗ್ಯೋಪನಿಷತ್ತು ಈತನ ಕುರಿತು ಅನೇಕ ವಿವರಗಳಿವೆ. ಎಲ್ಲಕ್ಕಿಂತ ಮುಖ್ಯವಾಗಿ ನಾಲ್ಕು ಮಹಾವಾಕ್ಯಗಳಲ್ಲೊಂದಾದ “ತತ್ತ್ವಮಸಿ” ಎನ್ನುವುದನ್ನು ಈತನನ್ನೇ ಉದ್ದೇಶಿಸಿ ಉದ್ಧಾಲಕ ವಾಜಶ್ರವ ಲೋಕಕ್ಕೆ ತಿಳಿಸಿದ್ದ. ಗ್ರಹಸ್ಥಾಶ್ರಮದ ಸುಧಾರಣೆಯ ವಿಷಯದಲ್ಲಿ ಶ್ವೇತಕೇತು, ಪತ್ನಿ ತನ್ನ ಗಂಡನನ್ನು ಬಿಟ್ಟು ಅನ್ಯರನ್ನು ಹೊಂದಬಾರದೆನ್ನುವ ನಿಬಂಧನೆಯನ್ನು ಹಾಕಿದ ಮಾರ್ಗಪ್ರವರ್ತಕನಾಗಿದ್ದ. ಅದಾಗಲೇ ಈತನ ಹೆಸರು ಎಲ್ಲಾ ಕಡೆ ಹಬ್ಬಿತ್ತು. ಉದ್ಧಾಲಕ ಋಷಿಯ ಕಿರಿಯ ಮಗ ನಚಿಕೇತ ಸಾವಿನಾಚೆಯ ಲೋಕದ ರಹಸ್ಯವನ್ನು ತಿಳಿಸಿದರೆ, ಹಿರಿಯ ಮಗ ಶ್ವೇತಕೇತು ಬದುಕಿನಲ್ಲಿ ಪತಿ ಪತ್ನಿಯರ ದಾಂಪತ್ಯಬದುಕಿನ ಪವಿತ್ರತೆಯ ಮಹತ್ವವನ್ನು ಲೋಕಕ್ಕೆ ತಿಳಿಸಿದವ. ಈತನ ತಾಯಿ ವಿಶ್ವವರಾದೇವಿಯೂ ಬ್ರಹ್ಮವಾದಿನಿಯೇ. ಅಕ್ಕ ಸುಜಾತಾ ಪ್ರಸಿದ್ಧ ವಿದ್ವಾಂಸನಾದ ಕಹೋಳ ಮುನಿಯ ಪತ್ನಿ. ಆಕೆಯ ಮಗನೇ ಅಷ್ಟಾವಕ್ರನೆಂದು ಪ್ರಸಿದ್ಧನಾದವ. ಮಹಾ ಜ್ಞಾನಿ. ತನ್ನ ತಂದೆ ಕಹೋಳ ಜನಕನ ಅಸ್ಥಾನದ ವಿದ್ವಾಂಸನಾದ ಬಂಡಿಯಲ್ಲಿ ವಾದ ಮಾಡಿ ಸೋತು ವರುಣನ ಸೆರೆಯಲ್ಲಿದ್ದ. ಅಂತಹ ಬಂಡಿಯನ್ನೇ ವಾದದಲ್ಲಿ ಸೋಲಿಸಿ ತನ್ನ ತಂದೆಯನ್ನು ಬಿಡಿಸಿಕೊಂಡು ಬಂದವ.
ಇಂಥ ಕುಟುಂಬಕ್ಕೆ ಸೇರಿದ ಶ್ವೇತಕೇತುವನ್ನು ನೋಡಿದ ಕೂಡಲೇ ದೇವಲನಿಗೆ ಹೇಳಲಾರದಷ್ಟು ಸಂತಸವಾಯಿತು. ತಂದೆಯಾದವ ತನ್ನ ಅಳಿಯ ವಿದ್ಯಾವಂತನಾಗಿರಬೇಕೆಂದು ಬಯಸುತ್ತಾನೆ, ಹಾಗಾಗಿ ಶ್ರೇಷ್ಠವಾದ ಋಷಿಮನೆತನದ ಈತನಲ್ಲದೇ ಬೇರೆ ಯಾರೂ ತನ್ನ ಮಗಳಿಗೆ ಯೋಗ್ಯರಲ್ಲವೆಂದು ತಿಳಿದು ಹಿಂದೆಮುಂದೆ ಯೋಚಿಸದೇ “ಮಗಳೇ, ಈತ ಶ್ವೇತಕೇತು. ಮಹಾಪ್ರಾಜ್ಞ, ಈತನನ್ನು ನೀನು ವರಿಸಬಹುದು” ಎಂದು ಸುವರ್ಚಲೆಯನ್ನು ಕರೆದು ಹೇಳಿಯೂಬಿಟ್ಟ. ತನ್ನ ಪ್ರಶ್ನೆಗಳಿಗೆ ಉತ್ತರಿಸದೇ ತಾನು ಇವನನ್ನು ವರಿಸುವುದು ಹೇಗೆ ಎನ್ನುವುದು ಗೊತ್ತಿದ್ದೂ ಸಹ ತನ್ನ ತಂದೆ ತನ್ನನ್ನು ಕೇಳದೇ ಹೀಗೆ ಹೇಳಿದುದಕ್ಕೆ ತನ್ನ ತಂದೆಯ ಮೇಲೆ ಸುವರ್ಚಲೆಗೆ ಸಿಟ್ಟೂ ಬಂತು. ಇದನ್ನು ಗಮನಿಸಿದ ಶ್ವೇತಕೇತು ದೇವಲನಿಗೆ “ಬ್ರಹ್ಮನ್, ನೀವು ನಿಮ್ಮ ಮಗಳನ್ನು ವಿಚಾರಿಸದೇ ಏಕಾಏಕಿಯಾಗಿ ಮದುವೆಯ ಪ್ರಸ್ತಾಪ ಮಾಡಿರುವುದು ವೇದಕ್ಕೆ ವಿರುದ್ಧವೂ ಆಗಿದೆ. ವೇದವಾಕ್ಯಗಳನ್ನು ಶ್ರದ್ಧಾ ಭಕ್ತಿಯಿಂದ ಪಾಲಿಸುವ ನೀವು ಅದು ಹೇಗೆ ಅದನ್ನು ಮೀರಬಲ್ಲಿರಿ. ಹೆಣ್ಣು ಮಕ್ಕಳ ಮದುವೆಯನ್ನು ಮಾಡುವಾಗ ನಿಮ್ಮ ವಿಚಾರಗಳನ್ನು ಅವಳ ಮೇಲೆ ಹೇರಕೂಡದು. ಈ ವಿಚಾರದಲ್ಲಿ ವೇದಗಳು,
ಉಪಾಯಾಮಗೃಹೀತೋऽಸ್ಯಾದಿತ್ಯೇಭ್ಯಸ್ತ್ವಾ।
ವಿಷ್ಣೋऽಉರುಗಾಯೈಷ ತೆ ಸೋಮಸ್ತ ಗ್ಂ ರಕ್ಷಸ್ವ ಮಾ ತ್ವಾ ದಭನ್ ॥ಯ -8-1 ॥
(ಬ್ರಹ್ಮಚರ್ಯವನ್ನು ಪಾಲಿಸಿದ ಯೋಗ್ಯ ವಯಸ್ಸಿನ ಪುತ್ರಿಯು ಅವಳ ಆಯ್ಕೆಯಂತೆ ಅವಳಷ್ಟೇ ವಿದ್ಯಾವಂತನಾದವನನ್ನು ಮದುವೆಯಾಗಬೇಕು) ಎಂದ.
ಯಜುರ್ವೇದದ ಎಂಟನೆಯ ಅಧ್ಯಾಯದ ಮಂತ್ರಗಳ ಸಂಗ್ರಹ ತುಂಬಾ ಮಹತ್ವವಾದವು. ಇಲ್ಲಿ ಕನ್ಯೆಯನ್ನು ಯಾವನಿಗೋ ಕೊಟ್ಟು ಮದುವೆ ಮಾಡುವಂತೆ ಹೇಳಿಲ್ಲ. ಸಂಗಾತಿಯನ್ನು ಆಯ್ಕೆ ಮಾಡುವಾಗ ಆಕೆಯ ಅಭಿಪ್ರಾಯವನ್ನು ಸಂಪೂರ್ಣವಾಗಿ ಗೌರವಿಸಬೇಕು. ಬ್ರಹ್ಮಚರ್ಯವನ್ನು ಸೇವಿಸಿದ ಕನ್ಯೆಯರು ತಮತಮಗೆ ಸದೃಶವಾದ ರೂಪ, ಗುಣ, ಕರ್ಮ ಸ್ವಭಾವ ಮತ್ತು ವಿದ್ಯೆಗಳನ್ನುಳ್ಳವರನ್ನೂ, ತಮಗಿಂತ ಬಲಶಾಲಿಗಳಾದವರನ್ನೂ, ತಮಗೆ ಇಷ್ಟವಾದವರನ್ನೂ, ಹೃದಯಕ್ಕೆ ಪ್ರಿಯವಾದವರನ್ನೂ ಸ್ವಯಂವರ ವಿಧಿಯಿಂದ ಸ್ವೀಕರಿಸಿ ಸೇವಿಸಬೇಕೆಂದಿದೆ. ಅದೇ ವಿಧಾನವನ್ನು ಕುಮಾರ ಬ್ರಹ್ಮಚಾರಿಗಳಿಗೂ ಹೇಳಲ್ಪಟ್ಟಿದೆ. ಅದರ ಸಾರಾಂಶವನ್ನೇ ಶ್ವೇತಕೇತು ದೇವಲನಿಗೆ ಹೇಳಿಬಿಟ್ಟ. ಇಷ್ಟು ಹೇಳಿದವನೇ ಸುವರ್ಚಲೆಯನ್ನು ನೋಡಿ “ಸುಂದರಿ, ನನಗೆ ಕಣ್ಣುಗಳಿಲ್ಲ; ಆದರೆ ನಾನು ಕುರುಡನಲ್ಲ” ಎಂದುಬಿಟ್ಟ.
ಇದನ್ನೂ ಓದಿ: ಧವಳ ಧಾರಿಣಿ ಅಂಕಣ: ಸೃಷ್ಟಿಯ ಹಿಂದಿರುವ ಪೂರ್ಣತೆಯೇ ಅರ್ಧನಾರೀಶ್ವರತ್ವ
ಸುವರ್ಚಲೆಗೆ ಈ ಮಾತನ್ನು ಕೇಳಿ ಸಂತೋಷವಾಯಿತು, ಜೊತೆಗೆ ನಾಚಿಕೆಯೂ ಆಯಿತು. ತನಗೆ ಅನುರೂಪನಾದವ ಈತನೇ ಎನ್ನುವುದು ಅರಿವಿಗೆ ಬಂತು. ಆದರೂ ತನ್ನ ಭಾವನೆಗಳನ್ನು ತೋರ್ಪಡಿಸದೇ, “ಸುಂದರ ವಿಶಾಲನೇತ್ರನಾದ ನೀನು ನನ್ನನ್ನು ಸುಂದರಿ ಎಂದು ಕರೆಯುತ್ತಿದ್ದೀಯ. ಅದು ಹೇಗೆ ನೀನು ಕಣ್ಣಿಲ್ಲದವನು ಎಂದು ಹೇಳಿಬಿಟ್ಟೆ? ವಿವರವಾಗಿ ತಿಳಿಸುವೆಯಾ?” ಎಂದು ಕೇಳಿದಳು.
ಶ್ವೇತಕೇತು ನಗುತ್ತಾ ಕೊಡುವ ಉತ್ತರ ಹೀಗಿದೆ.
“ಶಬ್ದ, ಸ್ಪರ್ಶ, ರೂಪ, ರಸ, ಗಂಧವೆಂಬ ಪಂಚತನ್ಮಾತ್ರಗಳಿಂದ ಕೂಡಿದ ಜೀವಾತ್ಮವು ಆ ಪರಮಾತ್ಮನ ಕಾರಣದಿಂದಲೇ ಅಸ್ತಿತ್ವದಲ್ಲಿದೆ. ಪರಮಾತ್ಮನ ಕಾರಣದಿಂದಲೇ ನನಗೆ ಎಲ್ಲವೂ ಕಾಣಿಸುತ್ತದೆ, ಕೇಳಿಸುತ್ತದೆ. ಆದರೆ ನನ್ನ ಕಣ್ಣುಗಳು (ಚಕ್ಷು) ನನ್ನವಲ್ಲ. ವಸ್ತುತಃ ಎಲ್ಲವನ್ನೂ ಅವನೇ ನೋಡುತ್ತಾನೆ. ನಾನಲ್ಲ. ಹಾಗಾಗಿ ಈ ಕಣ್ಣುಗಳು ನನ್ನವಲ್ಲ. ಹೀಗಾಗಿಯೇ ನನಗೆ ಕಣ್ಣುಗಳಿಲ್ಲ” ಎಂದು ಉತ್ತರಿಸಿದ. ಸುವರ್ಚಲೆ ಮತ್ತು ದೇವಲ ಇಬ್ಬರೂ ಬೆರಗಾಗಿ ಈತನನ್ನೇ ನೋಡುತ್ತಿದ್ದರು. “ಹಾಗಾದರೆ ನೀನು ಕುರುಡ ಹೇಗಲ್ಲವೆಂದು ತಿಳಿಸು” ಎಂದು ಆಕೆ ಕೇಳಿದಳು. ಅದಕ್ಕೆ ನಗುತ್ತಲೇ,
ತಚ್ಚಕ್ಷುರ್ವಿದ್ಯತೇ ಮಹ್ಯಂ ಯೇನ ಪಶ್ಯತಿ ವೈ ಸ್ಪುಟಂI
ಸುಲೋಚನೋಹಂ ಭದ್ರೇ ವೈ ಪೃಚ್ಛ ವಾ ಕಿಂ ವದಾಮಿ ತೇ I
ಸರ್ವಮಸ್ಮಿನ್ನ ಮೇ ವಿದ್ಯಾ ವಿದ್ಯಾವಾನ್ಹಿ ಪರಮಾರ್ಥತಃ II 12-228-32 ಮ.ಭಾ.
“ಮಂಗಳಕರಳೇ! ನನ್ನೊಳಗೆ ಇರುವ ಪರಮಾತ್ಮನ ಕಾರಣದಿಂದಲೇ ನನ್ನ ಸುತ್ತಲಿನ ಜಗತ್ತಿನ ಅನುಭೂತಿಯನ್ನು ಪಡೆಯಲು ನನಗೆ ಸಾಧ್ಯವಾಗಿದೆ ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ. ಆ ಸುಜ್ಞಾನದಿಂದಲೇ ಸಕಲ ವಿಶ್ವವು ನನಗೆ ಸ್ಫುಟವಾಗಿ ಕಾಣಿಸುತ್ತದೆ. ಹಾಗಾಗಿ ನಾನು ಕುರುಡನಲ್ಲ.”
ಶ್ವೇತಕೇತುವಿನ ಉತ್ತರ ಸುವರ್ಚಲೆಯನ್ನು ಸಂತುಷ್ಟಗೊಳಿಸಿತು ಎನ್ನುವುದಕ್ಕೆ ಮುಂದೆ ವಿವರಿಸಬೇಕಿಲ್ಲ. ಹೀಗೆ ಸುವರ್ಚಲೆ ಎನ್ನುವ ಹೆಣ್ಣುಮಗಳ ಕತೆಯು ವೇದಕಾಲದಲ್ಲಿ ಹೆಣ್ಣು ತನ್ನ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುವ ಮುಕ್ತ ಸ್ವಾತಂತ್ರ್ಯವನ್ನು ಹೊಂದಿದ್ದಳು ಎನ್ನುವುದನ್ನು ತಿಳಿಸುತ್ತದೆ. ಸುವರ್ಚಲೆ ಸ್ವಾಭಿಮಾನದ ಪ್ರಬುದ್ಧ ಹೆಣ್ಣುಮಗಳು.
ಇದನ್ನೂ ಓದಿ: ಧವಳ ಧಾರಿಣಿ ಅಂಕಣ: ಧರ್ಮಪ್ರಜ್ಞೆ ಸದಾ ಜಾಗೃತವಾಗಿರುವ ಶೃಂಗಾರದ ಪ್ರತಿಮೆ