Site icon Vistara News

ಧವಳ ಧಾರಿಣಿ ಅಂಕಣ: ಸರಯೂತೀರದ ಅಪರಿ; ಅಯೋಧ್ಯೆಯೆನ್ನುವ ಪ್ರಾಚೀನ ನಗರಿ

ayodhya nagari

ಸಮೃದ್ಧ ವಸತಿಯ ಸಿರಿವಂತ ಪಟ್ಟಣ

ಅಯೋಧ್ಯಾ ನಾಮ ನಗರೀ ತತ್ರಾಸೀಲ್ಲೋಕವಿಶ್ರುತಾ
ಮನುನಾ ಮಾನವೇನ್ದ್ರೇಣ ಯಾ ಪುರೀ ನಿರ್ಮಿತಾ ಸ್ವಯಮ್ ৷৷ರಾ. 1.5.6৷৷

ಕೋಸಲನಾಡಿನಲ್ಲಿ ತ್ರಿಲೋಕಪ್ರಸಿದ್ಧವಾದ ಅಯೋಧ್ಯಾ ಎನ್ನುವ ನಗರಿಯುಂಟು. ಅದು ಮಾನವೇಂದ್ರನಾದ ಮನು ಚಕ್ರವರ್ತಿಯಿಂದಲೇ ಸ್ವಯಂ ನಿರ್ಮಿತವಾದ ಪಟ್ಟಣ.

ಭಾರತೀಯ ಪರಂಪರೆಯಲ್ಲಿ ಅಯೋಧ್ಯಾ ಮತ್ತು ಕಾಶೀ ಈ ಎರಡು ನಗರಗಳು ಹೊಂದಿರುವ ಇತಿಹಾಸ ಮನು ಕುಲದ ಉಗಮದೊಂದಿಗೆ ತಳಕು ಹಾಕಿಕೊಂಡಿದೆ. ಕಾಶೀ ಪಟ್ಟಣದ ಮಹಾತ್ಮೆಯನ್ನು ಮಹಾಭಾರತ ಮತ್ತು ಪುರಾಣಗಳಲ್ಲಿ ನೋಡಬಹುದು. ಅಯೋಧ್ಯೆಯೂ ಸಹ ಅದೇ ರೀತಿ ಇದೆ. ಬಹು ಪ್ರಾಚೀನಕಾಲದಿಂದ ಇಲ್ಲಿಯತನಕ ನಿರಂತರವಾಗಿ ಸರಯೂ ನದಿ, ಕೋಸಲದ ಜನಪದ ಮುಂತಾದವುಗಳನ್ನೆಲ್ಲ ಜೀವಂತವಾಗಿ ಇಟ್ಟುಕೊಂಡ ಪ್ರದೇಶ ಇದಾಗಿದೆ. ಈ ಪಟ್ಟಣದ ಕುರಿತು ಶತಪಥ ಬ್ರಾಹ್ಮಣದಲ್ಲಿಯೂ ಸಹ ಉಲ್ಲೇಖವಿದೆ. ಗಣತಂತ್ರವ್ಯವಸ್ಥೆಯ ಮೂಲವನ್ನು ಹುಡುಕುವಾಗಲೂ ಕೋಸಲ ಮತ್ತು ಅಯೋಧ್ಯೆಯನ್ನು ಪ್ರಮುಖವಾಗಿ ಉಲ್ಲೇಖಿಸುತ್ತಾರೆ. ಇದೀಗ ಪ್ರಭು ಶ್ರೀರಾಮನ ಭವ್ಯ ಮಂದಿರದ (Ayodhya Ram Mandir) ಲೋಕಾರ್ಪಣೆಯೊಂದಿಗೆ ಇಡೀ ಜಗತ್ತಿನ ಗಮನವನ್ನು ಮತ್ತೊಮ್ಮೆ ಅಯೋಧ್ಯೆ ಸೆಳೆಯುತ್ತಿದೆ. ಭಾರತದ ನವಮನ್ವಂತರದ ತೀರ್ಥಕ್ಷೇತ್ರಾಧರಿತ ಪ್ರಮುಖ ಪ್ರವಾಸೀ ಧಾಮವಾಗಿ ಅಯೋಧ್ಯೆ ಗುರುತಿಸಲ್ಪಡುತ್ತಿದೆ. ಈ ನಗರ ನಿಜವಾಗಿಯೂ ಅಸ್ತಿತ್ವದಲ್ಲಿ ಇದ್ದಿದ್ದು ನಿಜವಾ, ಇದ್ದರೆ ಅದರ ವೈಭವ ಹೇಗಿದ್ದಿರಬಹುದೆನ್ನುವ ಕುತೂಹಲ ಈ ಹೊತ್ತಿನಲ್ಲಿ ಬಂದರೆ ಅದು ಸಹಜವೂ ಹೌದು. ಹಾಗೇ ಹುಡುಕ ಹೊರಟಾಗ ಅಯೋಧ್ಯೆ ಎನ್ನುವ ನಗರದ ವಾಸ್ತುರಚನೆ ಮತ್ತು ಅಲ್ಲಿನ ಜನಜೀವನದ ವಿಧಾನವನ್ನು ವಾಲ್ಮೀಕಿ ಮಹರ್ಷಿಗಳು (Maharshi Valmiki) ರಾಮಾಯಣದಲ್ಲಿ (ayodhya in ramayana) ವಿಶ್ಲೇಷಣಾತ್ಮವಾಗಿ ವರ್ಣಿಸಿದ್ದಾರೆ.

ವೇದದ ಕಾಲಕ್ಕೆ ಹೋಗುವುದಾದರೆ ಮಾಂಧಾತ ಚಕ್ರವರ್ತಿಯ ಮಗ ಪುರುಕುತ್ಸ ಮತ್ತು ಅವನ ಹೆಂಡತಿ ಪುರುಕುತ್ಸಾನಿಯ ಹೆಸರು ಬರುವಾಗ ಅಯೋಧ್ಯೆಯ ಉಲ್ಲೇಖ ಬರುತ್ತದೆ. ಶತಪಥ ಬ್ರಾಹ್ಮಣದಲ್ಲಿ ಈ ನಗರದ ಉಲ್ಲೇಖವಿರುವುದಾದರೂ ಅದು ಆಧ್ಯಾತ್ಮಿಕ ಸಾಧನೆಗಳಿಗಾಗಿ ಸೀಮಿತವಾಗಿದೆಯೇ ಹೊರತೂ, ನಗರವೊಂದರ ವಾಸ್ತುರಚನೆಯ ಹಿನ್ನೆಲೆಯಲ್ಲಿ ಅಲ್ಲ. ಗೀತ ರಾಮಾಯಣದಲ್ಲಿ ಈ ನಗರವನ್ನು “ಸರಯೂತೀರೋ ಅಪರಿ ಅಯೋಧ್ಯಾ ಮನು ನಿರ್ಮಿತ ನಗರಿ” ಎಂದು ವರ್ಣಿಸಲಾಗಿದೆ. ರಾಮಾಯಣದ ಬಾಲಕಾಂಡದಲ್ಲಿ ಅಯೋಧ್ಯೆಯ ವರ್ಣನೆಯನ್ನು ಕುಶ ಲವರು ಹಾಡುವ ವಿಷಯ ಬರುತ್ತದೆ. ಹಾಗೇ ಹಾಡುವಾಗ ಅಯೋಧ್ಯಾ ನಗರಿಯ ವೈಭವವನ್ನು ವಿವರವಾಗಿ ವರ್ಣಿಸುತ್ತಾರೆ. ಇಂದಿನ ಹೊಸ ನಗರ ನಿರ್ಮಾತೃಗಳು ಅವಶ್ಯವಾಗಿ ಅಧ್ಯಯನ ಮಾಡಬೇಕಾಗಿರುವಂತಹ ಪ್ರಾಚೀನ ನಗರಿ ಅಯೋಧ್ಯಾ. ಶತ್ರುಗಳಿಂದ ಸದಾ ಕಾಲಕ್ಕೂ ಅಬೇಧ್ಯವಾಗಿರುವುದರೀಂದ ಅದರ ಹೆಸರು ಅಯೋಧ್ಯಾ ಎಂದಾಯಿತು ಎಂದು ಪುರಾಣಗಳು ವರ್ಣಿಸುತ್ತವೆ. ರಾಮಾಯಣ ಮತ್ತು ಮಹಾಭಾರತಗಳು ಕೇವಲ ಕಥಾಕಾಲಕ್ಷೇಪಗಳಿಗಾಗಿ ಬರೆದ ಕಥೆಗಳಲ್ಲ; ಅವು ಭಾರತೀಯ ಜೀವನ ಪದ್ಧತಿಯನ್ನು ಅಭಿವ್ಯಕ್ತಿಸುವ ಇತಿಹಾಸಗಳಾಗಿವೆ. ವಾಲ್ಮೀಕಿಯ ಕಾವ್ಯಕಿಂಡಿಯೊಳಗಿಣಿಕಿ ಅಯೋಧ್ಯೆ ಎನ್ನುವ ನಗರವನ್ನು ಗಮನಿಸಿದಾಗ ಮೊದಲು ಬರುವ ಶ್ಲೋಕವೇ ಈ ನಗರದ ವಿಸ್ತೀರ್ಣ:-

ಆಯತಾ ದಶ ಚ ದ್ವೇ ಚ ಯೋಜನಾನಿ ಮಹಾಪುರೀ
ಶ್ರೀಮತೀ ತ್ರೀಣಿ ವಿಸ್ತೀರ್ಣಾ ಸುವಿಭಕ್ತಮಹಾಪಥಾ ৷৷1.5.7৷৷

ಈ ಪಟ್ಟಣದ ವೈಶಿಷ್ಟ್ಯವನ್ನು ಗಮನಿಸಿ. ಇದು ಚಚ್ಚೌಕಾರವಾಗಿಯೋ ಅಥವಾ ಒಂದಿಷ್ಟು ಲಬ್ಯವಿರುವ ಭೂಪ್ರದೇಶದಲ್ಲಿ ವಾಸಿಸುವ ಜನರು ಸಹಜವಾಗಿ ಕಟ್ಟಿಸಿಕೊಂಡು ನಂತರ ಬೆಳೆದಂತೆ ಪಟ್ಟಣವೋ ರಾಜಧಾನಿಯೋ ಆದ ಪ್ರದೇಶವಲ್ಲವೆನ್ನುವುದು ಮೇಲಿನ ಶ್ಲೋಕ ತಿಳಿಸುತ್ತದೆ. ಅಯೋಧ್ಯೆಯ ನಗರವನ್ನು ಕಟ್ಟಿದ ವಾಸ್ತು ತಜ್ಞ ಈ ನಗರವನ್ನು ಹೇಗೆ ನಿರ್ಮಿಸಿದ ಎನ್ನುವುದು ಮಹತ್ವದ್ದು. ಹನ್ನೆರಡು ಯೋಜನ ಉದ್ದ ಮತ್ತು ಮೂರು ಯೋಜನ ಅಗಲವಾಗಿತ್ತು ಎನ್ನುವುದನ್ನು ಮೇಲಿನ ಶ್ಲೋಕ ವಿವರಿಸುತ್ತದೆ. ಅಂದರೆ ಅದು ಆಯತಾಕಾರದಲ್ಲಿದ್ದಿರಬಹುದೇನೋ ಎನ್ನುವ ಊಹೆಗೆ ನಾವು ಬಂದರೆ ಇದೇ ಅಧ್ಯಾಯದ ಮತ್ತೊಂದು ಶ್ಲೋಕ ಈ ನಗರದ ಅಪರೂಪದ ರಚನಾ ಕೌಶಲವನ್ನು ಹೀಗೆ ವಿವರಿಸುತ್ತದೆ.

ಚಿತ್ರಾಮಷ್ಟಾಪದಾಕಾರಾಂ ನರನಾರೀಗಣೈರ್ಯುತಾಮ್
ಸರ್ವರತ್ನಸಮಾಕೀರ್ಣಾಂ ವಿಮಾನಗೃಹಶೋಭಿತಾಮ್ ৷৷1.5.16৷৷

ಇಲ್ಲಿ ಬರುವ “ಚಿತ್ರಾಮಷ್ಟಾಪದಾಕಾರಾಂ” ಅಯೋಧ್ಯೆಯ ನಗರದ ವಾಸ್ತು ರಚನೆಯ ಕುರಿತು ಕುತೂಹಲಲಾರಿ ವಿಷಯವನ್ನು ತಿಳಿಸುತ್ತದೆ. ಪಂಡಿತ ದೇವಶಿಖಾಮಣಿ ಅಳಸಿಂಗಾಚಾರ್ಯರು ಅನುವಾದಿಸಿದ “ಶ್ರೀಮದ್ರಾಮಾಯಣವು- ಬಾಲಕಾಂಡವು (1962)” ಕೃತಿಯಲ್ಲಿ ಅಯೋಧ್ಯೆಯಲ್ಲಿ ಬೀದಿಗಳು ನೆತ್ತದ (ಪಗಡೆಯಾಟದ) ಹಲಗೆಯಂತೆ ಸಮನಾದ ಪರಸ್ಪರ ಹಾಸುಹೊಕ್ಕಾಗಿತ್ತು ಎಂದಿದ್ದಾರೆ. ಪ. ಪೂ. ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ತಮ್ಮ ಭಾವರಾಮಾಯಣದಲ್ಲಿಯೂ ಅಯೋಧ್ಯೆಯ ವಾಸ್ತು ರಚನೆ ಪಗಡೆಯ ಹಾಸಿನಂತೆ ಇತ್ತು ಎಂದು ವಿವರಿಸಿದ್ದಾರೆ. (ಧರ್ಮ ಭಾರತೀ ಮಾರ್ಚ್‌ 2023ರ ಸಂಚಿಕೆ). ಇನ್ನು ಭಾರತದರ್ಶನ ಪ್ರಕಾಶನದ “ಬಾಲಕಾಂಡದಲ್ಲಿ ಆ ಪಟ್ಟಣವು ಅಷ್ಟಾಪದ ಫಲದಂತೆ ಎಂಟು ಭಾಗಗಳಿಂದ ಕಟ್ಟಲ್ಪಟ್ಟಿತ್ತು ಎಂದು ವಿವರಿಸುತ್ತಾರೆ. IIT Kanpur ದವರು ವಾಲ್ಮೀಕಿ ರಾಮಾಯಣವನ್ನು ಕನ್ನಡ ಸಹಿತವಾಗಿ ಅನೇಕ ಭಾರತೀಯ ಭಾಷೆಗಳಲ್ಲಿ ಅನುವಾದಿಸಿ ಅದನ್ನು ಅಂತರ್ಜಾಲದಲ್ಲಿ ಹರಿಯ ಬಿಟ್ಟಿದ್ದಾರೆ. ಸುಮಧುರವಾಗಿ ರಾಮಾಯಣದ ಹಾಡನ್ನೂ ಕೇಳಬಹುದಾಗಿದೆ. ವಿವರಗಳಿಗಾಗಿ https://www.valmiki.iitk.ac.in ಗಮನಿಸಿ. ಅದರಲ್ಲಿ “ With groups of men and women and adorned with seven-storied palaces, it looked wonderful like a board where the game of ashtapada, is played. It was rich in all kinds of gems” ಎನ್ನುವ ವಿವರಣೆಯಿದೆ. ಸಮಗ್ರ ನಗರಿಯೇ ಅಷ್ಟಪದದ ಆಟದ ಹಲಗೆಯಂತೆ ಅಚ್ಚರಿ ಹುಟ್ಟಿಸುವಂತೆ ಕಟ್ಟಲಾಗಿತ್ತು ಎನ್ನುವ ವಿವರಣೆಯನ್ನು ನೀಡಲಾಗಿದೆ.

ayodhya ram

ಹೀಗೆ ಹುಡುಕುತ್ತಿರುವ ಸಂದರ್ಭದಲ್ಲಿ ಛಂದಸ್ಸು ಎನ್ನುವುದು ವಾಸ್ತುಶಾಸ್ತ್ರದಲ್ಲಿಯೂ ಬರುತ್ತದೆ ಎನ್ನುವ ವಿವರ ಗಮನವನ್ನು ಸೆಳೆಯಿತು. ಮೈಸೂರಿನಲ್ಲಿರುವ ಸೋಮನಾಥಪುರದ ದೇವಾಲಯವನ್ನು ʼಜಗತೀ ಛಂದಸ್ಸಿನʼ ಆಕಾರದಲ್ಲಿ ಕಟ್ಟಲಾಗಿದೆ. ಈ ಛಂದಸ್ಸಿನ ಕಟ್ಟಡಗಳು ʼಮಹಾಪದ್ಮʼದ ಆಕಾರದಲ್ಲಿ ಕಟ್ಟಲ್ಪಡುತ್ತವೆ (“In case of jagati in the shape of mahāpadmas, big lotus petals are scalloped very neatly with double curved and up-curled, pointed tips and edges”- https://www.wisdomlib.org/definition/jagati)

ಈ ಎಲ್ಲದರ ಆಧಾರದ ಮೇಲೆ ಇಡೀ ನಗರವೇ ಅಷ್ಟಕೋನ ಆಕೃತಿಯಲ್ಲಿ ಕಟ್ಟಲ್ಪಟ್ಟು ಪಗಡೆಯ ಆಟದ ಹಲಗೆಯಂತೆ ಬೀದಿಗಳು ನಗರದ ಎಂಟು ದಿಕ್ಕುಗಳಿಗೂ ಮೂರು ಯೋಜನ ಅಗಲ, ಹನ್ನೆರಡು ಯೋಜನ ಉದ್ದವಾಗಿ ಹಬ್ಬಿತ್ತು ಎನ್ನಬಹುದಾಗಿದೆ. ಮಹಾವಿಷ್ಣುವೇ ರಾಮನಾಗಿ ಅವತರಿಸುವುದರಿಂದ ಅಷ್ಟದಳದ ಕಮಲದ ಹೂವಿನಾಕಾರದಲ್ಲಿ ನಗರ ಇತ್ತು ಎನ್ನುವ ಹೋಲಿಕೆ ಸರಿಯಾಗಬಹುದೆನ್ನಿಸುತ್ತದೆ. ಒಟ್ಟಿನಲ್ಲಿ ಅಯೋಧ್ಯಾ ಆ ಕಾಲದಲ್ಲಿ ತನ್ನ ವಾಸ್ತುವಿನಿಂದಾಗಿ ಜಗತ್ತಿನ ಗಮನವನ್ನು ಸೆಳೆದಿತ್ತು.

ನಗರದ ವಾಸ್ತು ಸೌಂದರ್ಯವು ಇಂದ್ರನ ಅಮರಾವತಿಯಂತೆ ಶೋಭಿಸುತ್ತಿತ್ತು. ಏಳು ಅಂತಸ್ತಿನ ಉಪ್ಪರಿಗೆಗಳಿಂದ ಶೋಭಿಸುತ್ತಿರುವ ಈ ನಗರದ ಕಟ್ಟಡಗಳು ಪದ್ಮರಾಗ ಗೋಮೇಧಿಕ ಇಂದ್ರನೀಲಾದಿ ರತ್ನಗಳಿಂದಲೂ ಶೋಭಿಸುತ್ತಿತ್ತು. ಹೀಗೆ ಈ ಎಲ್ಲಾ ಎಂಟು ಮೂಲೆಗಳಲ್ಲಿ ಸುಗಂಧ ಪೂಸಿಕೊಂಡ ಪುರುಷರು ಮತ್ತು ಲೋಕಸುಂದರಿಯಾದ ಸ್ತ್ರೀಯರು ಆಭರಣಗಳನ್ನು ಧರಿಸಿ ಸಡಗರದಿಂದ ತಿರುಗಾಡುತ್ತಿದ್ದರು. ಬೆಳಕಿನ ಕಿರಣಗಳು ಅಭರಣಗಳಿಂದ ಪ್ರತಿಫಲಿಸಿ ನಕ್ಷತ್ರಲೋಕವೇ ಧರೆಗೆ ಇಳಿದು ಬಂದಂತೆ ಕಾಣುತ್ತಿತ್ತು. ಮನೆಗಳೆಲ್ಲ ಸಮತಟ್ಟಾದ ನೆಲದಲ್ಲಿ ಸುಂದರವಾಗಿ ಕಟ್ಟಲ್ಪಟ್ಟಿತ್ತು. ಕೆಲವು ಕಟ್ಟಡಗಳು ನೂರು ಮಹಡಿಗಳನ್ನು ಹೊಂದಿದ್ದವು. ಮೇಲಿನ ಎರಡು ಶ್ಲೋಕದಲ್ಲಿನ ವಿವರಣೆಯನ್ನು ಗಮನಿಸುವಾಗ ಬಹುಮಹಡಿ ಕಟ್ಟದಗಳು ಮತ್ತು ಅವುಗಳ ಮೇಲೆ ಹಾರಾಡುತ್ತಿರುವ ಧ್ವಜ-ಪತಾಕೆಗಳು ಸಾಕೇತದ ಕೀರ್ತಿಯನ್ನು ಬಾನೆತ್ತರೆಕ್ಕೆ ಹಾರಿಸುತ್ತಿರುವಂತೆ ತೋರುತ್ತಿತ್ತು.

ನಗರದ ಭೂಪ್ರದೇಶ ಆಯತಾಕಾರದಲ್ಲಿ ಇದ್ದರೂ ನಗರದ ವಾಸ್ತು ಅಷ್ಟಕೋನಾಕಾರದಲ್ಲಿ ಇದ್ದಿತು ಎನ್ನಬಹುದಾಗಿದೆ. ವಾಸ್ತುಪ್ರಕಾರವಾಗಿ ಕಟ್ಟಿದ ಕಟ್ಟಡಗಳ ಸಮೂಹ ಎಂಟು ದಿಕ್ಕಿನಲ್ಲಿ ಹರಡಿತ್ತು. ಬಹುಮೂಲ್ಯವಾದ ಮತ್ತು ಸುಂದರವಾಗಿ ಕೆತ್ತಲ್ಪಟ್ಟ ಆಭರಣಗಳನ್ನು ಧರಿಸಿದ ಲೋಕಸುಂದರಿಯಾದ ಸ್ತ್ರೀಯರು ಹೀಗೆ ಎಂಟು ದಿಕ್ಕಿನಲ್ಲಿ ಸಡಗರದಿಂದ ಸದಾಕಾಲವೂ ಓಡಾಡುತ್ತಿದ್ದರು. ಎಂಟು ದಿಕ್ಕುಗಳ ಸುತ್ತಲೂ ಸಡಗರದಿಂದ ಓಡಾಡುವ ಸ್ವರ್ಣಭೂಷಿತ ಸುಂದರಿಯರನ್ನು ಕಂಡಾಗ ಪಗಡೆಯಾಡುವ ಪಟದ ಮೇಲೆ ಓಡಾಡುವ ಜೀವಂತ ಬೊಂಬೆಯೇನೋ ಎಂದು ಅನಿಸುತ್ತಿತ್ತು. ಪಗಡೆಯಾಟದ ಪಟದಂತೆ ಎನ್ನುವುದನ್ನು ಗಮನಿಸಿದಾಗ ನಗರ ಹನ್ನೆರಡು ಯೋಜನ ಉದ್ದ ಮತ್ತು ಮೂರು ಯೋಜನ ಅಗಲದ ವಿಸ್ತೀರ್ಣದಲ್ಲಿ ಅಷ್ಟದಳದಾಕಾರದಲ್ಲಿ ರಾಜಬೀದಿಗಳು ಹರಡಿದ್ದವು. ನಗರದ ಮೂಲೆಮೂಲೆಯನ್ನೂ ಸುಲಭದಲ್ಲಿ ತಲುಪುವಂತೆ ಆ ಬೀದಿಗಳಿದ್ದವು ಎನ್ನಬಹುದು.

ayodhya ram

ಅಲ್ಲಿನ ಬೀದಿಗಳು ಸುಲಭಕ್ಕೆ ಗಮ್ಯವನ್ನು ತಲುಪುವಂತೆ ಇದ್ದವು. ರಾಜಮಾರ್ಗವು ಸುವ್ಯವಸ್ಥಿತವಾಗಿ ಓರೆಕೋರೆಗಳಿಲ್ಲದೇ ನೇರವಾಗಿರುವಂತೆ ಮತ್ತು ಸಾಕಷ್ಟು ಅಗಲವಾಗಿಯೂ ನಿರ್ಮಿಸಲ್ಪಟ್ಟಿದ್ದವು. ಪ್ರತಿಯೊಂದೂ ಮಾರ್ಗವೂ ರಾಜಧಾನಿಯ ಎಲ್ಲಾ ಪ್ರದೇಶಗಳಿಗೆ ಸುಲಭವಾಗಿ ಹೋಗಿ ಬರುವಂತೆ ನಿರ್ಮಿಸಲಾಗಿತ್ತು. ಮುಖ್ಯ ವೀದಿಗೆ ಹೊಂದಿಕೊಂಡಂತೆ ಇರುವ ಕಿರು ಮಾರ್ಗಗಳು ಅಯೋಧ್ಯೆಯಲ್ಲಿ ವಾಸಿಸುವ ಜನಪದರುಗಳಿಗೂ ಉಪಯೋಗವಾಗುವಂತೆ ಸರ್ವಋತು ಬಳಕೆಗೆ ಯೋಗ್ಯವಾಗಿದ್ದವು. ಮಾರ್ಗದ ಸುತ್ತಲೂ ಬೆಳೆದ ಸಾಲುಮರಗಳು ಬೀದಿಯುದ್ದಕ್ಕೂ ನೆರಳನ್ನು ನೀಡುತ್ತಿದ್ದವು, ಮರದಿಂದ ಉದುರಿದ ಹೂಗಳ ಸುಗಂಧ ತಿರುಗಾಡುವವರನ್ನು ಆಹ್ಲಾದಕರವನ್ನಾಗಿಸಿ ಇರಿಸುತ್ತಿತ್ತು. ಮಾರ್ಗವನ್ನು ನಿಯಮಿತವಾಗಿ ನಗರ ರಕ್ಷಕರು ಸ್ವಚ್ಛವಾಗಿ ಇರಿಸುತ್ತಿದ್ದರು. ರಥ, ಆನೆ, ಕುದುರೆಗಳೆಲ್ಲ ತಿರುಗಾಡುವಾಗ ಧೂಳು ಹಾರಬಾರದೆನ್ನುವ ಕಾರಣಕ್ಕೆ ಆಗಾಗ ನೀರನ್ನು ಚಿಮ್ಮಿಸುವ ವಿಶೇಷವಾದ ಯಂತ್ರಗಳಿದ್ದವು.

ಅಯೋಧ್ಯೆ ಶಿಲ್ಪಕಲೆಗಳಿಗೆ ಪ್ರಸಿದ್ಧವಾಗಿತ್ತು. ಚತುರರಾದ ಶಿಲ್ಪಿಗಳು ಅಲ್ಲಿ ಅನೇಕರಿದ್ದರು. ಬಾಗಿಲು ಯಾವುದೇ ಕಟ್ಟಡದ ಮೊದಲ ಆಕರ್ಷಣೆಗಳಾಗಿರುವುದರಿಂದ ಆ ರಾಜ್ಯದಲ್ಲಿ ಬಾಗಿಲುಗಳ ಸೊಭಗಿಗೆ ವಿಶೇಷ ಗಮನ ನೀಡುತ್ತಿದ್ದರು. ದಶರಥನ ಅರಮನೆಯ ರಾಜಗ್ರಹದ ಪಶ್ಚಿಮ ದಿಕ್ಕಿನಲ್ಲಿರುವ ಪ್ರಧಾನ ದ್ವಾರಕ್ಕೆ “ವೈಜಯಂತ”ವೆನ್ನುವ ಹೆಸರಿತ್ತು. ದಿಗ್ವಿಜಯವನ್ನು ಮಾಡಿ ನಗರವನ್ನು ಪ್ರವೇಶಿಸುವ ರಾಜರುಗಳು ʼವೈಜಯಂತʼದ ಮೂಲಕ ಪ್ರವೇಶ ಮಾಡುತ್ತಿದ್ದರು. ಪ್ರತಿಯೊಂದೂ ಕಟ್ಟಡಕ್ಕೂ ಹೊರಬಾಗಿಲು ಮತ್ತು ಒಳಬಾಗಿಲುಗಳಿದ್ದು ಅವು ಸರ್ವದಾ ಅಲಂಕಾರಯುತವಾಗಿಯೂ ಗಟ್ಟಿಯಾಗಿಯೂ ಇರುತ್ತಿದ್ದವು. ನಗರದ ವಾಸ್ತು ಬಹು ವ್ಯವಸ್ಥಿತವಾಗಿತ್ತು. ಸಾಮಾನ್ಯ ಜನರು ವಾಸಿಸುವ ಮನೆಗಳು ಪ್ರಮಾಣ ಬದ್ಧವಾಗಿ ಉಪ್ಪರಿಗೆಯನ್ನು ಹೊಂದಿದವುಗಳಾಗಿದ್ದವು. ರಾಜರು ಮತ್ತು ಮಂತ್ರಿಗಳಿಗೆ ಸಂಬಂಧಿಸಿದಂತೆ ಕಟ್ಟಡಗಳಲ್ಲಿ ವಿಶೇಷವಾಗಿ ನಿರ್ಮಿಸಿದ ವಿಮಾನಗ್ರಹಗಳಿದ್ದವು. (ವಿಶಿಷ್ಟರೀತಿಯಲ್ಲಿ ನಿರ್ಮಿಸಿದ ರಾಜಗ್ರಹಗಳಿಗೆ ವಿಮಾನವೆಂದು ಹೆಸರು – ವಿಮಾನೋSಸ್ತ್ರೀ ದೇವಯಾನೇ ಸಾರ್ವಭೌಮಕಮಿದಂ). ಭತ್ತ ಮತ್ತು ಕಬ್ಬು ಅಯೋಧ್ಯೆಯ ಪ್ರಮುಖ ಬೆಳೆಗಳಾಗಿದ್ದವು. ಎಲ್ಲಿ ನೋಡಿದರೂ ಬತದ ಪೈರು ಮತ್ತು ಕಬ್ಬಿನ ಗದ್ದೆಗಳೂ ಕಾಣುತ್ತಿದ್ದವು. ನೀರು ಸಹ ಕಬ್ಬಿನ ಹಾಲಿನಂತೆ ಸಿಹಿಯಾಗಿ ಸದಾ ಸಮೃದ್ಧವಾಗಿತ್ತು. ರಾಜಧಾನಿಯಲ್ಲಿ ಯಾವ ವಸ್ತುವಿಗೂ ಕೊರತೆ ಎನ್ನುವುದೇ ಇರಲಿಲ್ಲ. ಧವಸ ಧಾನ್ಯಗಳೆಲ್ಲವೂ ಯಥೇಚ್ಛವಾಗಿ ಬೆಳೆಯುವುದರಿಂದಾಗಿ ಆಹಾರಕ್ಕೆ ಕೊರತೆಯೇ ಇರಲಿಲ್ಲ. ಸಿರಿಸಂಪತ್ತು ಕೋಸಲದ ಸೀಮೆಯುದ್ದಕ್ಕೂ ಹಾಸಿ ಹರಡಿತ್ತು. ಈ ಕಾರಣಕ್ಕೆ ಅಯೋಧ್ಯೆಯನ್ನು ಶ್ರೀಮತಿ ಪಟ್ಟಣ ಎಂದು ವಾಲ್ಮೀಕಿ ಕರೆದಿದ್ದಾನೆ. ಲಕ್ಷ್ಮಿಯಾದ ಸೀತೆ ಬರುವ ಮೊದಲೇ ಇದು ಅವಳ ಆವಾಸಸ್ಥಾನವಾಗಿತ್ತು ಎನ್ನುವುದನ್ನು ಆತ ವಿವರಿಸುತ್ತಾನೆ.

ಅಯೋಧ್ಯಾ ನಗರದ ಪ್ರಜೆಗಳು ರಸಿಕರಾಗಿದ್ದರು. ಸಂಗೀತ, ನಾಟ್ಯಗಳನ್ನು ಬಲ್ಲವರಾಗಿದ್ದರು. ಯಾವಾಗಲೂ ಆನಂದದಿಂದ ಇರುತ್ತಿದ್ದರು. ಅದಕ್ಕೆ ಹಿನ್ನೆಲೆಯಾಗಿ ನುಡಿಸುವ ಪಕ್ಕವಾದ್ಯಗಳಾದ ತಾಳ, ಮೃದಂಗ ಮದ್ದಲೆ ಮತ್ತು ವೀಣಾವಾದನದ ಸುಶ್ರಾವ್ಯ ಸಂಗೀತ ಶಾಸ್ತ್ರಬದ್ಧವಾಗಿ ಕೇಳಿಬರುತ್ತಿತ್ತು. ನರ್ತಕಿಯರು ಸಂಘಗಳನ್ನು ಕಟ್ಟಿಕೊಂದು ನಾಟ್ಯಶಾಲೆಯನ್ನು ನಡೆಸುತ್ತಿದ್ದರು. ಮಾವು ಹಲಸು, ಫಲ ಪುಷ್ಪಗಳಿಂದ ಕೂಡಿದ ಉದ್ಯಾನಗಳಿಂದ ತುಂಬಿದ್ದ ಪ್ರದೇಶದಿಂದ ಕೋಗಿಲೆಗಳು ಸಂಗೀತಗಾರರ ಹಾಡಿಗೆ ಸಂವಾದಿಯಾಗಿ ತಮ್ಮ ಸ್ವರಗಳನ್ನು ಮೇಳೈಸುತ್ತಿದ್ದವು. ಪ್ರಜೆಗಳ ಉಡುಗೆತೊಡುಗೆಗಳು ಆಕರ್ಷಣೀಯವಾಗಿತ್ತು. ಭಾರತದ ಶಿಲಾಮೂರ್ತಿಗಳನ್ನು ಗಮನಿಸಿದಾಗ ಸ್ತ್ರೀ ಪುರುಷರೆಲ್ಲರೂ ಅಲಂಕಾರಪ್ರಿಯರು ಎನ್ನುವುದಕ್ಕೆ ವಿಪುಲವಾದ ಸಾಕ್ಷಿ ಸಿಗುತ್ತದೆ. ಐಹೊಳೆಯ ದೇವಾಲಯ, ಬೇಲೂರು ಹಳೆಬೀಡು ಇಲ್ಲೆಲ್ಲ ಅದನ್ನು ಗಮನಿಸಬಹುದಾಗಿದೆ. ಅಯೋಧ್ಯೆಯಲ್ಲಿಯೂ ಸ್ತ್ರೀಪುರುಷರಾದಿಯಾಗಿ ಎಲ್ಲರೂ ಕರ್ಣಾಭರಣ, ರತ್ನಮಾಲೆಗಳನ್ನು ಧರಿಸುತ್ತಿದ್ದರು. ಕಾಲಕಾಲಕ್ಕೆ ಅಭ್ಯಂಗಸ್ನಾನವನ್ನು ಮಾಡಿ ಸುಗಂಧದ್ರವ್ಯವನ್ನು ಲೇಪಿಸಿಕೊಳುತ್ತಿದ್ದರು. ತೋಳಿಗೆ ಬಳೆಗಳು, ಶಿರಸ್ತ್ರಾಣ, ಉರೋಭೂಷಣವಾದ ಪದಕ, ಹಸ್ತಾಭರಣ ಇವೆಲ್ಲವೂ ಇಲ್ಲದ ವ್ಯಕ್ತಿಗಳೇ ಇರಲಿಲ್ಲ.

ಆತಿಥ್ಯಕ್ಕೆ ಮತ್ತೊಂದು ಹೆಸರು ಅಯೋಧ್ಯೆ. ವಾಲ್ಮೀಕಿ ಅಯೋಧ್ಯೆಯನ್ನು ಕುಟುಂಬಕರಿಂದ ಸದಾ ಸಮೃದ್ಧಗೊಂಡ ನಗರ ಎಂದು ವರ್ಣಿಸುತ್ತಾನೆ. ಕುಟುಂಬ ಎಂದರೆ ಹಿರಿಯರಾದ ತಂದೆ ತಾಯಿ, ಯಜಮಾನ ಮತ್ತು ಆತನ ಹೆಂಡತಿ, ಇಬ್ಬರು ಗಂಡು ಮಕ್ಕಳು ಮತ್ತು ಅವರ ಹೆಂಡತಿಯಂದಿರು, ಮಗಳು ಮತ್ತು ಅತಿಥಿ ಇವಿಷ್ಟು ಜನರಿರುವ ಮನೆಯನ್ನು ಕುಟುಂಬ ಎನ್ನುತ್ತಾರೆ. ಭಾರತೀಯ ಸಂಸ್ಕೃತಿಯಲ್ಲಿ ಅತಿಥಿಗಳಿಲ್ಲದೇ ಊಟಮಾಡಕೂಡದು. ಅತಿಥಿಗಳನ್ನು ಅರಸುತ್ತಾ ಅವರನ್ನು ಕರೆದುತಂದು ಮೃಷ್ಟಾನ್ನ ಭೋಜನ ಮಾಡದ ಮನೆಯೇ ಅಯೋಧ್ಯೆಯಲ್ಲಿ ಇರಲಿಲ್ಲ. ಹೀಗೆ ಸಿರಿ ಸಂಪತ್ತಿದ್ದರೂ ಜನರು ಜಿತೇಂದ್ರಿಯರಾಗಿದ್ದರು. ಇನ್ನೊಬ್ಬರ ವಸ್ತುವಿಗೆ ಯಾವತ್ತಿಗೂ ಆಸೆ ಪಡುತ್ತಿರಲಿಲ್ಲ. ವಿಹಿತವಾದ ಸುಖಭೋಗಗಳನ್ನಷ್ಟೇ ಅವರು ಆಚರಿಸುತ್ತಿದ್ದರು ಹೊರತು ಲೋಭಿಗಳಾಗಿರಲಿಲ್ಲ. ಕಳ್ಳಕಾಕರ, ಅಸೂಯಾಪರತೆಯುಳ್ಳವರ, ಅಲ್ಪವಿದ್ಯೆಯುಳ್ಳವ ಆ ರಾಜ್ಯದಲ್ಲಿ ಇದ್ದಿರಲಿಲ್ಲ. ಅಧ್ಯಯನ ಮತ್ತು ದಾನನಿರತರಾಗಿದ್ದ ಋಷಿಗಳು ಮತ್ತು ಬ್ರಾಹ್ಮಣರು ದೇಶದ ಅಭ್ಯುದಯಕ್ಕಾಗಿ ನಿರಂತರವಾಗಿ ಸೋಮಯಾಗ, ಆಹಿತಾಗ್ನಿಗಳನ್ನು ನಡೆಸಿಕೊಂಡು ಹೋಗುತ್ತಿದ್ದರು. ರಾಜರುಗಳಲ್ಲಿ ವಿಶೇಷವಾದ ಭಕ್ತಿ ಗೌರವವುಳ್ಳವರಾಗಿದ್ದರು. ಸತ್ಯ-ಧರ್ಮಗಳನ್ನು ಚಾಚೂ ತಪ್ಪದೇ ಅನುಸರಿಸುತ್ತಿದ್ದರು.

ayodhya ram

ವಣಿಜನಗರಿಯ ಸಿರಿಸಂಪತ್ತು

ಅಯೋಧ್ಯೆ ಪ್ರಮುಖವಾದ ವಾಣಿಜ್ಯ ಕೇಂದ್ರವಾಗಿತ್ತು. ಅಂಗಡಿಗಳು ಜನರಿಗೆ ಅನುಕೂಲವಾಗಿರುವಂತೆ ಒಂದೇ ಸಮನಾಗಿ ಆದರೆ ಬಿಡಿಬಿಡಿಯಾಗಿ ಕಟ್ಟಲ್ಪಟ್ಟಿದ್ದವು. ಪ್ರತಿಯೊಂದೂ ಕಟ್ಟಡದ ನಡುವ ಸಾಕಷ್ಟು ಗಾಳಿ ಬೆಳಕು ನೀರಿನ ಸೌಲಭ್ಯವಿರುವಂತೆ ನೋಡಿಕೊಳ್ಳಲಾಗುತ್ತಿತ್ತು. ಬೀದಿಗಳಲ್ಲಿ ಪ್ರಪಂಚದ ಎಲ್ಲಾ ದೇಶಗಳಿಂದ ದೊರೆಯುವ ಮೌಲ್ಯಯುತವಾದ ವಸ್ತುಗಳನ್ನು ಮಾರಾಟಮಾಡುತ್ತಿದ್ದರು. ಎಲ್ಲಿಯೂ ಅಡೆತಡೆಗಳಾಗಲೀ, ಮೋಸವಾಗಲೀ, ಇರಲಿಲ್ಲ. ನಾನಾ ದೇಶಗಳಿಂದ ವ್ಯಾಪಾರಿಗಳು ತಾವು ತಂದ ಪದಾರ್ಥದ ವಿಕ್ರಯಕ್ಕಾಗಿ ಅಲ್ಲಿ ಸೇರುತ್ತಿದ್ದರು. ಹಾಗೆ ವಿಕ್ರಯಿಸಲು ತಂದ ಎಲ್ಲವನ್ನೂ ನಯನಮನೋಹವಾಗಿರುವಂತೆ ಜೋಡಿಸಿಡುತ್ತಿದ್ದರು. ಮುತ್ತು ಮಾಣಿಕ್ಯ, ಗೋಮೇಧಕಗಳ ಜೊತೆಗೆ ಪ್ರಪಂಚದಲ್ಲಿ ಸಿಗಬಹುದಾದ ಶ್ರೇಷ್ಟವಾದ ಕುದುರೆ ಮತ್ತು ಆನೆಗಳ ತಳಿಯೂ ಅಲ್ಲಿ ಮಾರಾಟಕ್ಕಿರುತ್ತಿತ್ತು. ಅಲ್ಲಿ ಸಿಗದ ವಸ್ತುಗಳೇ ಇರಲಿಲ್ಲ. ಹೀಗೆ ವ್ಯಾಪಾರಕ್ಕಾಗಿ ಬಂದವರಿಗಾಗಿ ಉಳಿದುಕೊಳ್ಳುವ ವ್ಯವಸ್ಥೆ ಅಲ್ಲಿ ಯಥಾಯೋಗ್ಯವಾಗಿತ್ತು.

ಇದನ್ನೂ ಓದಿ: ಧವಳ ಧಾರಿಣಿ ಅಂಕಣ: ರಾವಣ ವಧೆಗೆ ನಾಂದಿಯಾದ ಸೀತಾಪಹರಣ

ಅಭೇಧ್ಯ ಅಯೋಧ್ಯೆ

ಅಯೋಧ್ಯೆಯ ಪ್ರಜೆಗಳು ರಸಿಕರಾಗಿದ್ದಷ್ಟೇ ಅಲ್ಲದೇ ದೇಶಪ್ರೇಮಿಗಳೂ ಆಗಿದ್ದರು. ಆ ನಗರದ ಪ್ರತಿಯೋರ್ವನೂ ನಿಪುಣ ಸೈನಿಕನಾಗಿದ್ದನು. ಬಾಣಪ್ರಯೋಗದಲ್ಲಿ ಅತಿಶಯವಾದ ಕೈಚಳಕವನ್ನು ಸಾಧಿಸಿದ್ದರು. ಶತ್ರುಗಳಿಗೆ ಸಿಂಹಸೃದಶ್ಯರಾಗಿದ್ದರು. ಹಾಗಂತೆ ಅಸಹಾಯಕರನ್ನಾಗಲೀ, ವಂಶದ ಅಭ್ಯುದಯಕ್ಕೆ ಏಕಮಾತ್ರ ಪುತ್ರನಾಗಿರುವನನ್ನೂ, ಪಲಾಯನಮಾಡುತ್ತಿರುವುವನನ್ನೂ, ಅಡಗಿ ಕುಳಿತವನನ್ನಾಗಲೀ ಕೊಲ್ಲುತ್ತಿರಲಿಲ್ಲ. ಅವರಲ್ಲಿ ಮನೋಬಲ ಮತ್ತು ಬಾಹುಬಲ ಎರಡೂ ಸಮನಾಗಿ ಇರುವದರಿಂದ ಸಂಯಮಿಗಳಾಗಿದ್ದರು. ಕೋಸಲದ ಸೈನ್ಯವೆಂದರೆ ಧೀರತ್ವದ ಪ್ರತೀಕ. ಅಶ್ವ ಮತ್ತು ಗಜಪಡೆ ಮಹಾ ಬಲಿಷ್ಟವಾಗಿತ್ತು. ಅಶ್ವಪಡೆಗಳಲ್ಲಿ ಪ್ರಪಂಚದಲ್ಲಿಯೇ ಶ್ರೇಷ್ಠವಾದ ತಳಿಗಳಾದ ಕಾಂಬೋಜ, ವನಾಯು, ಬಾಹ್ಲೀಕ ಮತ್ತು ಸಿಂಧುದೇಶದ ಕುದುರೆಗಳಿಂದ ಸೈನ್ಯ ಮಹಾ ಬಲಿಷ್ಠವಾಗಿತ್ತು. ಎಲ್ಲ ಅಶ್ವಗಳೂ ಇಂದ್ರನ ಉಚ್ಚ್ಯೆಃಶ್ರವಸ್ಸೆನ್ನುವ ಕುದುರೆಯಂತೆ ಲಕ್ಷಣಯುಕ್ತವಾಗಿತ್ತು. ಗಜಸೈನ್ಯದಲ್ಲಿ ವಿಂದ್ಯಪರ್ವತದ ಮಂದ್ರಜಾತಿಯ, ಹಿಮಾಲಯದ ಭದ್ರಜಾತಿಯ, ಸಹ್ಯಪರ್ವತಗಳಲ್ಲಿ ಹುಟ್ಟಿದ ಮೃಗ ಜಾತಿಯ ತಳಿಗಳಲ್ಲದೇ ಅವುಗಳ ಅನ್ಯೋನ್ಯ ಸಂಪರ್ಕದಿಂದ ಜನಿಸಿದ ಭದ್ರಮಂದ್ರ, ಭದ್ರಮೃಗ, ಮೃಗಮಂದ್ರಗಳೆಂಬ ಉಪಜಾತಿಯ ಆನೆಗಳ ದಂಡೇ ಇತ್ತು. ಅಯೋಧ್ಯೆಯನ್ನು ಆಳುವ ಪ್ರತೀ ರಾಜನೂ ಶತ್ರುಗಳನ್ನು ಧ್ವಂಸಮಾಡಿ ನಕ್ಷತ್ರಗಳನ್ನು ಚಂದ್ರನು ಆಳುವಂತೆ ಕೋಸಲರಾಜ್ಯವನ್ನು ಆಳುತ್ತಿದ್ದರು.

ಶತ್ರುವಿನಾಶಕ ಮತ್ತು ಜನಸ್ನೇಹಿ ಯಂತ್ರಗಳು

ಅಯೋಧ್ಯೆಯ ವಿವರಣೆಯಲ್ಲಿ ಗಮನ ಸೆಳೆಯುವುದು ಅಲ್ಲಿ ಉಪಯೋಗಕ್ಕಿರುವ ಯಂತ್ರಗಳ ಕುರಿತಾಗಿ. ನಗರದ ಬೀದಿಗಳಲ್ಲಿ ಧೂಳು ಹಾರಬಾರದೆನ್ನುವುದಕ್ಕೆ ಸದಾನೀರನ್ನು ಚಿಮ್ಮಿಸುವ ಯಂತ್ರಗಳಿದ್ದವು ಎನ್ನುವುದನ್ನು ಗಮನಿಸಿದ್ದೇವೆ. ಅದೇರೀತಿ ನಗರದ ರಕ್ಷಣೆಗೆ ಕೋಟೆಯ ಮೇಲೆ ಸ್ಥಾಪಿಸಿದ “ಶತಘ್ನಿ” ಎನ್ನುವ ಅನೇಕ ಯಂತ್ರಗಳಿದ್ದವು. ನಗರವನ್ನು ಭದ್ರವಾದ ಕೋಟೆ ಸುತ್ತುವರಿದಿತ್ತು. ಈ ಕೋಟೆ ಅಬೇಧ್ಯವಾಗಿತ್ತು ಇದಕ್ಕೆ ಕಾರಣ ಕೋಟೆಯ ಮೇಲ್ಬಾಗದಲ್ಲಿ ತುಂಬೆಲ್ಲ ಇರುವ “ಶತಘ್ನಿ” ಎನ್ನುವ ಶತ್ರುವಿನಾಶದ ಯಂತ್ರಗಳನ್ನು ಸದಾಸನ್ನದ್ಧವಾಗಿ ಇರಿಸಿದ್ದರು. ಇದೊಂದು ಅತ್ಯುಗ್ರವಾದ ಯಂತ್ರವಾಗಿದ್ದು, ಯುದ್ಧಕಾಂಡದಲ್ಲಿ ರಾವಣನೂ ಉಪಯೋಗಿಸಿದ್ದ ಎನ್ನುವ ವಿವರಣೆ ರಾಮಾಯಣದಲ್ಲಿದೆ. ಅವುಗಳ ಲಕ್ಷಣಗಳನ್ನು ಗಮನಿಸಿದರೆ ಇಂದಿನ ತೋಪುಗಳಂತೆ ಇತ್ತೆನ್ನುವುದು ತಿಳಿಯುತ್ತದೆ. ಏಕಕಾಲಕ್ಕೆ ಇದರಿಂದ ನೂರು ಅಗ್ನಿಗೋಲಗಳನ್ನು ಸಿಡಿಸಬಹುದಾಗಿತ್ತು. ಇದೊಂದು ಅಸ್ತ್ರಗಳಿಂದಾಗಿ ಶತ್ರುಗಳು ಅಯೋಧ್ಯಾ ನಗರದ ಸೀಮೆಯ ಎರಡು ಯೋಜನಗಳವರೆಗೂ ಸುಳಿಯುತ್ತಿರಲಿಲ್ಲ. ಶತ್ರುಗಳಿಗೆ ಪಟ್ಟಣದೊಳಗೆ ನುಗ್ಗಿ ಯುದ್ಧಮಾಡಲು ಅಸಾಧ್ಯವಾದ ನಗರ ಅದಾಗಿತ್ತು. ಈ ಕಾರಣದಿಂದಾಗಿ ಈ ನಗರವನ್ನು ಅಯೋಧ್ಯಾ ಎಂದು ಕರೆಯುತ್ತಿದ್ದರು.

ವಾಸ್ತುರಚನಾ ಕೌಶಲದಿಂದ ಮಾನವ ನಿರ್ಮಿತ ಪಟ್ಟಣವೆ ಅಯೋಧ್ಯೆಯಾಗಿತ್ತು.

ಇದನ್ನೂ ಓದಿ: ಧವಳ ಧಾರಿಣಿ ಅಂಕಣ: ಅಗಸ್ತ್ಯರ ಆಶ್ರಮದಲ್ಲಿ ರಾವಣ ವಧೆಗೆ ಸಿದ್ಧವಾದ ವೇದಿಕೆ

Exit mobile version