ಭವಬಂಧನದ ಬಿಡುಗಡೆಗೆ ಸರಳ ಹಾದಿಯನ್ನು ತೋರಿದ ಮಹಾಭಿಷಕ್
ಸುಪ್ಪಬುದ್ಧಂ ಪಬುಜ್ಝನ್ತಿ ಸದಾ ಗೋತಮಸಾವಕಾ I
ಯೇಸಂ ದಿವಾ ರತ್ತೋ ಚ ನಿಚ್ಚಂ ಬುದ್ಧಗತಾ ಸತಿ IIಧಮ್ಮಪದ 297 II
(ಗೌತಮನ ಶ್ರಾವಕರು ಯಾವಾಗಲೂ ಪೂರಾ ಎಚ್ಚರವಾಗಿಯೇ ಇರುವರು; ಅವರಿಗೆ ಹಗಲೂ ಇರುಳೂ ನಿತ್ಯವಾಗಿ ಬುದ್ಧನಲ್ಲಿಯೇ ಸ್ಮೃತಿ ಇರುವುದು.)
ಧಮ್ಮಪದದ ಪಕ್ಕಿಣಕವಗ್ಗದ (ಪ್ರಕೀರ್ಣಕವರ್ಗ) ಈ ಉಪದೇಶವನ್ನು ನೋಡುತ್ತಿರುವುವಂತೆ ಭಗವದ್ಗೀತೆಯಲ್ಲಿ “ಸ್ಥಿರಬುದ್ಧಿಯ ಪುರುಷನ ಲಕ್ಷಣಗಳನ್ನು (ಸ್ಥಿತಪ್ರಜ್ಞನೆಂದರೆ) ತಿಳಿಸು” ಎನ್ನುವ ಅರ್ಜುನನ ಪ್ರಶ್ನೆಗೆ ಎರಡನೆಯ ಅಧ್ಯಾಯದಲ್ಲಿ 55ರಿಂದ 72ನೆಯ ಶ್ಲೋಕದ ವರೆಗಿನ ಗೀತಾಚಾರ್ಯನ ಉತ್ತರ ನೆನಪಿಗೆ ಬರುತ್ತದೆ. ಧಮ್ಮಪದದಲ್ಲಿನ ಈ ಅಧ್ಯಾಯದ 296ರಿಂದ 305ರ ವರೆಗಿನ ಪದ್ಯಗಳಲ್ಲಿ ಶ್ರಮಣರು (ಯೋಗಿಗಳು) ಪಡೆಯುವ ಅಂತಿಮ ಹಂತದಲ್ಲಿ ಯಾವ ಸ್ಥಿತಿಯಲ್ಲಿ ಇರುತ್ತಾರೆ ಎನ್ನುವುದನ್ನು ತಿಳಿಸುತ್ತಿದೆ. ಧಮ್ಮಪದವನ್ನು ಬುದ್ಧಗೀತೆಯೆಂದೂ ಕರೆಯುತ್ತಾರೆ. ಗೀತೆಯ ಸಾಂಖ್ಯಯೋಗಕ್ಕೂ ಧಮ್ಮಪದದ 21ನೆಯ ಪ್ರಕ್ಕಿಣಕವಗ್ಗಕ್ಕೂ ಇರುವ ಸಾಮ್ಯತೆಗಳು ಅತ್ಯಂತ ನಿಕಟವಾಗಿವೆ. ಗೀತೆಯಲ್ಲಿ ಸ್ಥಿತಪ್ರಜ್ಞತೆಯ ಕುರಿತು ಹೇಳಿದರೆ ಧಮ್ಮಪದ ಬುದ್ಧಾನುಸ್ಮೃತಿ, ಧರ್ಮಾನುಸ್ಮೃತಿ, ಸಂಘಾನುಸ್ಮೃತಿ ಹೀಗೆ ಬಿಕ್ಕುವು ಕಡ್ಡಾಯವಾಗಿ ಅನುಸರಿಸಬೇಕಾದ ಹತ್ತು ಬಗೆಯ ಸಾಧನೆಯನ್ನು ಹೇಳುತ್ತದೆ. ಈ ಸಾಧನೆಗಳನ್ನು ಸಾಧಿಸಿದವನು ಮನಸ್ಸನ್ನು ನಿಗ್ರಹದಲ್ಲಿ ಇಟ್ಟುಕೊಳ್ಳಲು ಸಾಧ್ಯ.
ಗೌತಮ ಬುದ್ಧನೆಂದರೆ ಮನಸ್ಸಿಗೆ ಒಂದು ಅನಿರ್ವಚನೀಯ ಆನಂದ ಆಗುವುದು ಆತನ ವ್ಯಕ್ತಿತ್ವದ ಚಿತ್ರಣದಿಂದಾಗಿ. ಅರೆತೆರದ ಕಣ್ಣು, ಮುಖದಲ್ಲಿನ ಮಂದಸ್ಮಿತ ನಗು, ಗುಂಗುರು ಕೂದಲಿನ ಶಿಖೆ ಎರಡೂ ಕಡೆ ಉದ್ದವಾಗಿ ಜೋತು ಬಿದ್ದಿರುವ ಕಿವಿ, ಪ್ರಮಾಣಬದ್ಧವಾದ ದೇಹ, ಮೊಳಕಾಲ ಕೆಳಗೆ ಬರುವ ಕೈಗಳು ಹೀಗೆ ಪ್ರತಿಯೊಂದು ಅವಯವಗಳನ್ನು ವರ್ಣಿಸುವಾಗಲೂ ಸ್ನಿಗ್ಧ ಸೌಂದರ್ಯವೆನ್ನುವ ಶಬ್ಧಕ್ಕೆ ಪ್ರತಿರೂಪವಾಗಿ ಆತ ಎದುರು ಬರುತ್ತಾನೆ. ಹೊಸ್ತೋಟ ಮಂಜುನಾಥ ಭಾಗವತರ ಸೀತಾ ವಿಯೋಗ ಯಕ್ಷಗಾನ ಪ್ರಸಂಗ ಕೃತಿಯಲ್ಲಿ ರಾಮನ ರೂಪವನ್ನು ನೋಡಿದ ಲವಕುಶರು ಅಚ್ಚರಿ ಗೊಳ್ಳುತ್ತಾ “ಕಣ್ಣ ಪಾಪ ತೊಳೆವುದಿವನ ರೂಪು ನೋಡುತಾ” ಎಂದು ಹಾಡುತ್ತಾರೆ. ರಾಮನ ರೂಪವೆನ್ನುವುದು ಅಮೂರ್ತ; ಊಹಿಸಿಕೊಂಡೇ ಅದನ್ನು ಅರ್ಥ ಮಾಡಿಕೊಳ್ಳಬೇಕಾಗುವುದು. ಆದರೆ ಕಣ್ಣ ಮುಂದೆ ಬಂದು ನಿಲ್ಲುವ ಸಿದ್ಧಾರ್ಥ ಮಾತ್ರ ಹಾಗಲ್ಲ. ಹಾಗಂತ ವಿಶೇಷವೇನಿಲ್ಲ ಆ ರೂಪಿನಲ್ಲಿ, ಒಂದು ವಲ್ಕಲವನ್ನು ಹೊದೆದ ಮೂರ್ತಿಯಾದರೂ ಆ ಗಂಭೀರ ವದನ ಮನಸ್ಸಿನಾಳಕ್ಕೆ ಇಳಿದುಬಿಡುತ್ತಾನೆ.
ಇನ್ನು ಆತನ ಉಪದೇಶವನ್ನು ಕೇಳಿದಮೇಲೆ ಮನಸ್ಸು ನಿರಾಳವಾಗಿಬಿಡುತ್ತದೆ. ಭವದ ಬಂಧನವನ್ನೆಲ್ಲ ಬಿಟ್ಟು ಆ ತತ್ತ್ವಚಿಂತನೆಯನ್ನು ಕೇಳೋಣವೆಂದು ಅನಿಸುವುದು. ಭಾರತೀಯ ಧಾರ್ಮಿಕ ಇತಿಹಾಸದಲ್ಲಿ ಕ್ರಾಂತಿಕಾರಕ ಬದಲಾವಣೆಗಳನ್ನು ತಂದ ಮಹನೀಯರು ಬುದ್ಧ, ಶಂಕರಾಚಾರ್ಯರು ಮತ್ತು ಸ್ವಾಮಿ ವಿವೇಕಾನಂದ. ಹೆಪ್ಪುಗಟ್ಟಿದ್ದ ಭಾರತೀಯ ತತ್ತ್ವಶಾಸ್ತ್ರವನ್ನು ಸಾಮಾನ್ಯ ಜನರಿಗೂ ತಲುಪುವಂತೆ ಮಾಡಿದ ಮಹಾನ್ ಕ್ರಾಂತಿಕಾರಿಗಳು ಈ ಮೂವರು. ಬುದ್ಧ ತನ್ನ ಸಾಧನೆಯ ಹಾದಿಯಲ್ಲಿ ನಿರ್ವಾಣವನ್ನು ಸಾಧಿಸಿಕೊಂಡರೆ ಇನ್ನಿಬ್ಬರು ನಿರ್ವಿಕಲ್ಪ ಸಮಾಧಿಯಲ್ಲಿ ಬ್ರಹ್ಮಸಾಕ್ಷಾತ್ಕಾರದ ಅನುಭೂತಿಯನ್ನು ಗಳಿಸಿಕೊಂಡವರು.
ನೇಪಾಳದ ಕಪಿಲವಸ್ತುವಿನ ಶಾಕ್ಯವಂಶದ ಶುದ್ಧೋಧನನ ಮಗನಾಗಿ ಜನಿಸಿದ ಸಿದ್ಧಾರ್ಥ ಬುದ್ಧನಾಗಿ ಬದಲಾವಣೆಯಾಗಿರುವ ಘಟನೆಗಳ ಹಿಂದಿರುವುದು ಒಂದು ದೈವ ನಿಯಾಮಕವೇ ಆಗಿರಬೇಕು. ಬಾಲಕನ ಜಾತಕವನ್ನು ನೋಡಿದ ಜ್ಯೋತಿಷಿಗಳು ಮುಂದೆ ಈತ ಸನ್ಯಾಸಿಯಾಗಬಹುದೆನ್ನುವ ಭವಿಷ್ಯವನ್ನು ಹೇಳಿದರು. ಅದನ್ನು ನಂಬಿದ ತಂದೆ ಈತನಿಗೆ ಬದುಕಿನ ಕಷ್ಟಗಳ ಪರಿಚಯವೇ ಇರದಂತೆ ಸದಾ ಸುಖಬೋಗದಲ್ಲಿ ಬೆಳೆಸಿದ. ಭೋಗವೆನ್ನುವುದು ಸಹಜ ಜೀವನವಾದಾಗ ಅದರ ಮಹತ್ವದ ಅರಿವು ಮೂಡಿರುವುದಿಲ್ಲ. ಕತ್ತಲನ್ನು ನೋಡದೇ ಇರುವ ವ್ಯಕ್ತಿಗೆ ಒಮ್ಮೆಲೇ ಕತ್ತಲಿನ ಗುಹೆಯಲ್ಲಿ ಬಿಟ್ಟರೆ ಆತನಿಗೆ ಆಘಾತವಾಗುತ್ತದೆ. ಸಿದ್ಧಾರ್ಥನಿಗೂ ಆಗಿರುವುದು ಅಷ್ಟೇ. ಲೋಕದ ಸುಖ ದುಃಖಗಳನ್ನೆಲ್ಲ ನೋಡುತ್ತಾ ಬೆಳೆದಿದ್ದರೆ ಆತನಿಗೆ ಜರಾ, ಮುಪ್ಪು ಮರಣಗಳು ಬದುಕಿನ ಸಹಜಭಾಗಗಳು ಎಂದು ಅನಿಸುತ್ತಿತ್ತು. ಅಂಬರದಲ್ಲಿ ವಿಹರಿಸುತ್ತಿರುವವನಿಗೆ ಪಾತಾಳದ ಗುಂಡಿಯನ್ನು ಮೊದಲ ಬಾರಿ ಕಂಡಾಗ; ತನ್ನ ಬದುಕಿನ ಸುಖವೆಲ್ಲವೂ ಮರಿಚೀಕೆ ಎನ್ನುವ ಅನುಭವ ಸಹಜವಾಗಿ ಒಡಮೂಡಿತು. ಜ್ಯೋತಿಷ್ಯವನ್ನು ತಿರಸ್ಕರಿಸಿದ ವ್ಯಕ್ತಿಯ ಮುಂಗಾಣ್ಕೆಯನ್ನು ಜ್ಯೋತಿಷಿಯೇ ಹೇಳಿರುವ ಸಂಗತಿ ಸಿದ್ಧಾರ್ಥನ ಬದುಕಿನ ವಿಶೇಷವಾಗಿದೆ.
ಸಿದ್ಧಾರ್ಥನ ಬದುಕಿನಲ್ಲಿ ದುಃಖ ಬಹುಮುಖ್ಯ ಪಾತ್ರವನ್ನು ವಹಿಸಿದೆ. ರಾಜಕುಮಾರನಾಗಿ ವಿಹಾರಕ್ಕೆ ಹೋಗುವಾಗ ಹೊರ ಆವರಣದಲ್ಲಿ ಮನುಷ್ಯನ ವಿವಿಧ ಅವಸ್ಥೆಗಳನ್ನು ನೋಡಿದವನಿಗೆ ಬದುಕು ಎಂದರೆ ಇಷ್ಟೇನಾ ಎನ್ನುವ ಯೋಚನೆ ಬಂತು. ಕುಷ್ಠರೋಗಿಯನ್ನು ಕಂಡಾಗ ಸುಂದರನಾದ ಮನುಷ್ಯ ಹೀಗೂ ಬದಲಾವಣೆಯಾಗಲು ಸಾಧ್ಯವೇ ಎಂದು ಭೀತಗೊಂಡ. ವೃದ್ಧಾಪ್ಯದಿಂದ ಚರ್ಮವೆಲ್ಲ ಸಡಿಲವಾಗಿ ಕೋಲಿನ ಸಹಾಯದಿಂದ ನಡೆಯುತ್ತಿರುವ ವ್ಯಕ್ತಿಯನ್ನು ಕಂಡಾಗ ಇದು ಎಲ್ಲರಿಗೂ ಬರುವ ಅವಸ್ಥೆಗಳು, ಇದರಿಂದ ಬಿಡುಗಡೆ ಸಾಧ್ಯವಿಲ್ಲ ಎನ್ನುವ ಉತ್ತರ ಅವನ ಸಾರಥಿಯಿಂದ ಬಂತು. ಮುಂದಿನ ದೃಶ್ಯ ಮರಣ ಹೊಂದಿದವನ ಹಿಂದೆ ರೋದಿಸುತ್ತಾ ಸಾಗುವ ಬಾಂಧವರನ್ನು ನೋಡುತ್ತಾನೆ. ಅವನ ಸಾರಥಿಯಲ್ಲಿ ಇದೇನು ಎಂದು ಕೇಳಿದರೆ ಅದು ಮನುಷ್ಯ ಅಂತಿಮವಾಗಿ ಪಡೆಯಬೇಕಾದ ಅವಸ್ಥೆ; ಇದಕ್ಕೆ ಕಾಲ, ದೇಶಗಳ ನಿಬಂಧನೆಯಿಲ್ಲವೆನ್ನುವ ಉತ್ತರ ಬಂತು. ಅತಿಯಾಗಿ ಹೆಮ್ಮೆಪಡುತ್ತಿರುವ ಈ ದೇಹ ಒಂದಲ್ಲ ಒಂದು ದಿನ ಬೆಂಕಿಗೆ ಆಹುತಿಯಾಗುತ್ತದೆ ಎನ್ನುವುದನ್ನು ಸಾರಥಿಯಿಂದ ಕೇಳಿದಾಗ ಧಿಗ್ಮೂಡನಾದ. ತನ್ನನ್ನೂ ಹಿಡಿದು ತನ್ನ ಸುಂದರಿಯಾದ ಹೆಂಡತಿ, ತಾನು ಪ್ರೀತಿಸುವ ತನ್ನ ಮಗ ರಾಹುಲ, ತನ್ನ ತಂದೆ ಇವರೆಲ್ಲರೂ ಕೊನೆಗೆ ಇದುತನಕ ತಾನು ನೋಡಿದ ಅವಸ್ಥ್ಗೆಗಳಿಗೆ ಒಳಗಾಗುತ್ತೇವೆ ಎನ್ನುವುದು ಕಲ್ಪಿಸಲೂ ಅಸಾಧ್ಯವೆನಿಸಿತು. ಹಾಗಾದರೆ ಇದರಿಂದ ಬಿಡುಗಡೆ ಇಲ್ಲವೇ ಎಂದು ಕೇಳಿದರೆ “ಇಲ್ಲ, ಜೀವನಚಕ್ರವೇ ಹೀಗೆ, ಸುಖ ದುಃಖ ಈ ಎಲ್ಲವೂ ಅಂಟಿಕೊಂಡೇ ಇರುತ್ತದೆ” ಎನ್ನುವ ಉತ್ತರವ ಬಂತು. “ ಸಾವು ಎನ್ನುವುದು ಬದುಕಿರುವ ಎಲ್ಲರ ಪರಮಶತ್ರು; ಯಾರೂ ಸಾಯಲಿಚ್ಛಿಸುವುದಿಲ್ಲ, ಯಾರಿಗೂ ಈ ಸಾವಿನಿಂದ ಬಿಡುಗಡೆಯಿಲ್ಲದಿದ್ದರೂ ಎಲ್ಲರೂ ಅದರಿಂದ ತಪ್ಪಿಸಿಕೊಳ್ಳಲು ಯತ್ನಿಸುತ್ತಾರೆ” ಎಂದು ಸಾರಥಿ ಸಿದ್ಧಾರ್ಥನಿಗೆ ಲೋಕದ ಅಂತಿಮ ಸತ್ಯವನ್ನು ತೆರೆದು ತೋರಿಸಿದ ಕಾರಣೀಕರ್ತ.
ಸರಿ, ಸಾವು ಬರಬಹುದು, ಕೇವಲ ಸಾವಿನಿಂದ ಮಾತ್ರ ದುಃಖ ಬರುವುದಲ್ಲ. ರೋಗದಿಂದ ಮತ್ತು ಮುಪ್ಪಿನಿಂದಲೂ ದುಃಖ ಬರುತ್ತದೆ ಎಂದಾದರೆ ಅದು ಎಲ್ಲರಿಗೂ ಸಮನಾಗಿ ಬರಬೇಕಾಗಿತ್ತು. ಕೆಲವರಿಗೆ ಸುಖ, ಸಂಪತ್ತು, ಆಳುಕಾಳು ಹೀಗೆ ಸಕಲವೂ ಇದ್ದರೆ ಹಲವರಿಗೆ ಇದೇನೂ ಇಲ್ಲದೇ ನರಳುತ್ತಲೇ ಇರಬೇಕಾಗುತ್ತದೆ. ಇದಕ್ಕೆ ಕಾರಣವೇನು ಎನ್ನುವ ಪ್ರಶ್ನೆಗಳು ಅವನ ಮನಸ್ಸಿನಲ್ಲಿ ಪ್ರಶ್ನೆಗಳು ಎದ್ದವು. ಇದಕ್ಕೆ ಉತ್ತರವನ್ನು ಕಂಡುಕೊಳ್ಳಲು ಅನೇಕರನ್ನು ಪ್ರಶ್ನಿಸಿದ. ತನ್ನ ಕುಲಗುರು ಅಸಿತದೇವಲನಲ್ಲಿ ಈ ಪ್ರಶ್ನೆಯನ್ನು ಕೇಳಿದ. ಅವರು ವೇದಾಂತದ ಸಂಚಿತಕರ್ಮಗಳ ಕುರಿತು ಹೇಳಿದರು. ಯಾವುದೋ ಜನ್ಮದಲ್ಲಿ ಯಾವುದೋ ದೇಹದಲ್ಲಿ ಮಾಡಿದ ಕರ್ಮಗಳಿಗೆ ಈ ಜನ್ಮದಲ್ಲಿ ಅನುಭವಿಸಬೇಕಾಗುತ್ತದೆ ಎನ್ನುವುದನ್ನು ನಂಬಲಿಕ್ಕಾಗಲಿಲ್ಲ. ಹಳೆ ಬಟ್ಟೆಯನ್ನು ಬೀಸಾಡಿ ಹೊಸ ಬಟ್ಟೆಯನ್ನು ತೊಟ್ಟುಕೊಳ್ಳುವಾಗ ಹಳೆಯ ಬಟ್ಟೆಯ ಯಾವ ಅಂಶವೂ ಹೊಸ ಬಟ್ಟೆಯಲ್ಲಿ ಇರುವುದಿಲ್ಲ; ಹಾಗಾದರೆ ನಾವು ಮಾಡಿದ ಪಾಪಪುಣ್ಯಗಳು ಬರುವದೆಂತು ಎನ್ನುವ ಆತನ ಸಂದೇಹಗಳಿಗೆ ಉತ್ತರ ಸಿಗಲಿಲ್ಲ. ಅದೇ ಕಾಲಕ್ಕೆ ವೇದವನ್ನು ಪ್ರಶ್ನಿಸುವ ಹಾಗೂ ಬ್ರಾಹ್ಮಣಿಕೆಯ ಪ್ರಶ್ನಾತೀತ ಯಜಮಾನತ್ವವನ್ನು ಒಪ್ಪದಿರುವ ಪಂಗಡಗಳೂ ಸಾಕಷ್ಟಿದ್ದವು. ಸಿದ್ಧಾರ್ಥ ಈ ಕುರಿತು ಆಸಕ್ತಿವಹಿಸಿ ಅಧ್ಯಯನವನ್ನು ಮಾಡಿದ. ಪರಂಪರೆಯ ಎಲ್ಲವನ್ನು ಪ್ರಶ್ನಿಸತೊಡಗಿದ; ಸಮಾಧಾನಕರ ಉತ್ತರ ಸಿಗುತ್ತಿರಲಿಲ್ಲ. ಇರುವದೆಲ್ಲವ ಬಿಟ್ಟು ಇಲ್ಲದೆಡೆಗೇ ಸಾಗುವದು ಮನವೆನ್ನುವಂತೆ ಬಾಹ್ಯಸುಖ ಸಿದ್ಧಾರ್ಥನಿಗೆ ಸುಖವಾಗಿರಲಿಲ್ಲ; ತನ್ನೊಳಗೇ ಕಾಡುವ ಈ ಪ್ರಶ್ನೆಗಳಿಗೆ ಉತ್ತರವನ್ನು ಕಂಡುಕೊಳ್ಳುವ ಸಲುವಾಗಿಯೇ ಆತ ಮನೆಯನ್ನು ಬಿಟ್ಟ. ಇದಕ್ಕೆ ರಾಜಬೀದಿಯಲ್ಲಿ ಕಂಡ ಕಷ್ಟಕೋಟಳೆಗಳು ಒಂದು ನೆಪವಾಯಿತಷ್ಟೇ.
ಮೊದಲು ಆಲಾರ ಕಲಮ ನಂತರ ಉದ್ಧಕ ರಾಮಪುತ್ತ ಇವರಲ್ಲಿ ಚರ್ಚಿಸಿದ. ಆಲಾರಾ ಕಲಮನಲ್ಲಿ ದೇಹ ಮತ್ತು ಸಂವೇದನೆಯಗಳನ್ನು ನಿಯಂತ್ರಿಸುವ ಮತ್ತು ಧ್ಯಾನ, ಪ್ರಾಣಾಯಾಮಗಳ ಅಭ್ಯಾಸ ಮಾಡಿದ. ರಾಮಪುತ್ತ ಆತನಿಗೆ ಪ್ರಜ್ಞೆಯೆಂದರೆ ಗ್ರಹಿಕೆ ಮತ್ತು ಗ್ರಹಿಕೆಯಲ್ಲದ ಸ್ಥಿತಿ ಎನ್ನುವದನ್ನು ತಿಳಿಸಿ ಸಮಾಧಿ ಸ್ಥಿತಿಗೆ ಹೋಗುವದನ್ನು ತಿಳಿಸಿಕೊಟ್ಟ. ಇದು ಜನನ ಮತ್ತು ಮರಣಗಳ ವಿಮೋಚನೆಗೆ ಸಾಕಾಗುವ ಮಾರ್ಗವಲ್ಲ. ಈ ಸಾಧನೆಯೂ ಸಹ ಒಂದು ಮಿತಿಯಿಂದ ಕೂಡಿದೆ; ದೇಹವೆನ್ನುವದು ಒಂದು ಒದ್ದೆ ಮರದಕೊರಡಿನಂತೆ, ಅದರಲ್ಲಿ ಜ್ಞಾನವೆನ್ನುವ ಬೆಂಕಿ ಹತ್ತಲಾರದು ಇದುವರೆಗಿನ ಸಾಧನೆಗಳೆಲ್ಲ ಲೌಕಿಕ (ಅವಿದ್ಯೆ); ದೇಹದಂಡನೆಯೇ ಮುಖ್ಯ ಎಂದು ಸ್ಮಶಾನದಲ್ಲಿ ಧ್ಯಾನಮಾಡಲು ತೊಡಗಿದನು. ಇದೂ ಸಹ ವ್ಯರ್ಥವೆಂದು ತಿಳಿದು ಗಯಾಕ್ಕೆ ಬಂದು ಬೋಧಿವೃಕ್ಷದ ಕೆಳಗೆ ಧ್ಯಾನಮಾಡುವ ಸ್ಥಿತಿಯಲ್ಲಿ ಆತನಿಗೆ ಜ್ಞಾನೋದಯವಾಯಿತು.
ಹಾಗಾಗಿಯೇ ಬುದ್ಧನ ಬೋಧನೆಗಳ ಪ್ರಕಾರ ದುಃಖ ಮತ್ತು ಅದರ ನಿವಾರಣೆಗೆ ಪ್ರಾಶಸ್ತ್ಯವಿದೆ.. ದುಃಖದ ಕುರಿತು ಸಿದ್ಧಾರ್ಥ ಕಂಡುಕೊಂಡ ವಿಷಯವನ್ನು ಸಂಗ್ರಹಿಸಿ ಹೇಳುವುದಾದರೆ ಮೊದಲನೆಯದಾಗಿ ಈ ಮನಸ್ಸು ಮತ್ತು ದೇಹದ ವ್ಯವಸ್ಥೆಯೇ ದುಃಖಮಯ. ಎರಡನೆಯದಾಗಿ ಈ ದುಃಖಕ್ಕೆ ಕಾರಣವಿದೆ. ದುಃಖವೆಂದರೆ ನಿರೀಕ್ಷೆ ಮತ್ತು ಸಿಕ್ಕ ಫಲದ ನಡುವಿನ ಅಂತರ. ಜೀವನದ ವಿವಿಧ ಅವಸ್ಥೆಗಳಾದ ಹುಟ್ಟು, ಸಾವು, ರೋಗ ವೃದ್ಧಾಪ್ಯ, ವಿರಹ, ಬಯಸಿದ್ದು ಸಿಗದೇ ಇರುವುದು ಇವೆಲ್ಲ ದುಃಖಕ್ಕೆ ಕಾರಣಗಳು ಎಂದು ತೋರುತ್ತದೆ. ಆದರೆ ಇದು ನಿಜವಲ್ಲ; ಮನುಷ್ಯ ತನ್ನ ನಿಜಸ್ವರೂಪವನ್ನು ಅರಿತುಕೊಳ್ಳದೇ ಇರುವುದೇ ಕಾರಣ. ಅದೇ ಅಜ್ಞಾನ. ಇದರಿಂದ ಆತ ದೇಹ ಮತ್ತು ಮನಸ್ಸುಗಳಿಗೆ ಅಂಟಿಕೊಳ್ಳುತ್ತಾನೆ. ಈ ವಾಸನಾಯುಕ್ತ ಪ್ರಪಂಚದಲ್ಲಿ ಎಲ್ಲಿಯತನಕ ನಾವು ಆಸಕ್ತರಾಗಿರುತ್ತೇವೆಯೋ ಅಲ್ಲಿಯತನಕ ದುಃಖ ನಮ್ಮನ್ನು ಬಾಧಿಸುತ್ತದೆ, ಈ ಅಂಟಿನ ಕಾರ್ಯಕಾರಣ ಸಂಬಂಧದಿಂದ ಕರ್ಮವೆನ್ನುವುದು ಉಂಟಾಗುತ್ತದೆ. ಇದೇ ಪುನರ್ಜನ್ಮಕ್ಕೆ ಕಾರಣ. ಈ ಯಾತನಾಮಯ ಪರಿಸ್ಥಿತಿಗೆ ಆಯಾ ವ್ಯಕ್ತಿಯೇ ಕಾರಣನೇ ಹೊರತೂ ವಿಧಿ, ಆಕಸ್ಮಿಕ ಎನ್ನುವುದೆಲ್ಲವೂ ಸುಳ್ಳು.
ಇದನ್ನೂ ಓದಿ: ಧವಳ ಧಾರಿಣಿ ಅಂಕಣ: ಡಾ.ಬಿ. ಆರ್. ಅಂಬೇಡ್ಕರ್; ಬಹಿಷ್ಕೃತರ ಉತ್ಥಾನದ ಕಾರಣ ಪುರುಷ
ಮೂರನೆಯದಾಗಿ ಈ ದುಃಖವನ್ನು ಬಗೆಹರಿಸಿಕೊಳ್ಳುವದಕ್ಕೆ ದಾರಿಯಿದೆ. ಲೋಕದಲ್ಲಿ ನಡೆಯುವ ಎಲ್ಲಾ ಘಟನೆಗಳಿಗೂ ಯೂವುದೋ ಒಂದು ಕಾರಣವಿದೆ. ಭೂಮಿ ತಿರುಗಲಿಕ್ಕೆ ಕಾರಣ ಭೂಮಿ ಮತ್ತು ಸೂರ್ಯರ ಪರಸ್ಪರ ಆಕರ್ಷಣ ಶಕ್ತಿ, ಮಳೆಯಾಗಲು ಕಾರಣ ಸೂರ್ಯನ ಕಿರಣ ನೀರನ್ನು ಹೀರಿಕೊಂಡು ಮೇಲೆ ಹೋಗಿ ಮೋಡವಾಗುವುದು. ಒಮ್ಮೊಮ್ಮೆ ನಮಗೆ ಬೇಕಾದ ವಸ್ತುವನ್ನು ಮರೆವಿನಿಂದ ಎಲ್ಲಿಯೋ ಇಟ್ಟು ಆಮೇಲೆ ಮನೆಯನ್ನೆಲ್ಲಾ ಹುಡುಕುತ್ತೇವೆ. ಅದರ ಕುರಿತು ದುಃಖಪಡುತ್ತೇವೆ. ಯಾವಾಗ ಅದು ಗೋಚಿರಿಸಿತೋ, ಒಮ್ಮೆಲೇ ಸಂತೋಷ ಉಕ್ಕೇರುತ್ತದೆ. ಒಂದುವೇಳೆ ಹುಡುಕುವ ಮೊದಲೇ ಆ ವಸ್ತು ಕಾಣಿಸಿದ್ದರೆ ನಮಗೆ ದುಃಖವಾಗಲೀ, ಸಂತಸವಾಗಲೀ ಆಗುತ್ತಿರಲಿಲ್ಲ. ಈ ನಮ್ಮ ಭಾವತೀವ್ರತೆಗೆ ಕಾರಣ ನಾವು ಬಯಸಿದ ವಸ್ತು ಸಿಗಲಿಲ್ಲವೆಂದು ತಿಳಿದ ನಮ್ಮಲ್ಲಿನ ಅಜ್ಞಾನವೇ ಕಾರಣ. ಲೋಕದಲ್ಲಿ ನಡೆಯುವ ಎಲ್ಲಾ ಘಟನೆಗಳಿಗೂ ಕಾರಣವಿರುತ್ತದೆ, ಪರಸ್ಪರ ಸಂಬಂಧವಿರುತ್ತದೆ. ದುಃಖಕ್ಕೆ ಕಾರಣವಾದ ಸಂಬಂಧವನ್ನುತಿಳಿದುಕೊಂಡು ಅದನ್ನು ನಿರ್ಮೂಲನೆ ಮಾಡಿದರೆ ದುಃಖವೂ ನಿರ್ಮೂಲವಾಗುತ್ತದೆ. ಇದೇ ಬುದ್ಧನ ಪ್ರಸಿದ್ಧ ತತ್ತ್ವ “ಪ್ರತೀತ್ಯಸಮುತ್ಪಾದ”.
ನಾಲ್ಕನೆಯದೇ ಈ ದುಃಖವನ್ನು ಕಳೆದುಕೊಳ್ಳುವ ವಿಧಾನ. ದುಃಖಕ್ಕೆ ಕಾರಣವಾಗಿರುವುದರ ಕ್ರಿಯೆಯ ಅರಿವು ಅಥವಾ ಜ್ಞಾನ. ನಮಗೆ ಬೇಕು ಎನ್ನುವ ಆಸೆಯೇ ದುಃಖಕ್ಕೆ ಕಾರಣವೆಂದ ಮೇಲೆ ಆಸೆಯನ್ನು ಬಿಟ್ಟರೆ ದುಃಖವೂ ನಿವಾವರಣೆಯಾಗುತ್ತದೆ. ಅದನ್ನೇ ಆತ ಕಿಸಾ ಗೌತಮಿಯ ಹತ್ತಿರ ಹೇಳಿರುವುದು. ತನ್ನ ಓರ್ವನೇ ಮಗನನ್ನು ಕಳೆದುಕೊಂಡ ಗೌತಮಿ ಸತ್ತ ಮಗನನ್ನು ಮತ್ತೆ ಬದುಕಿಸಿಕೊಡು ಎಂದು ಕೇಳಿದಾಗ ಬುದ್ಧ “ಸಾವಿಲ್ಲದ ಮನೆಯ ಸಾಸಿವೆಯನ್ನು ತಗೆದುಕೊಂಡು ಬಾ” ಎಂದ. ಅಂತಹ ಮನೆಯನ್ನು ಹುಡುಕಾಡಿದ ಗೌತಮಿಗೆ ಸಾವು ಎನ್ನುವುದು ಬಿಡಲಾರದ ಅಂತಿಮ ಸತ್ಯವೆನ್ನುವುದರ ಅರಿವಾಯಿತು. ತನ್ನದೆನ್ನುವ ಬಂಧವನ್ನು ಹರಿದುಕೊಳ್ಳಲು ಅದರಿಂದ ಸಾಧ್ಯವಾಯಿತು. ಇದನ್ನೇ ‘ದುಃಖ ಸಮುದಾಯ’ ಎಂದು ಕರೆಯುತ್ತಾರೆ. ಇದರ ಅರ್ಥ ದುಃಖದ ಸಂ-ಉದಯ (ದುಃಖದ ಹುಟ್ಟು). ಜರಾ-ಮರಣ, ಜಾತಿ, ಭವ, ಉಪಾದಾನ, ತೃಷ್ಣಾ, ವೇದನಾ, ಸ್ಪರ್ಶ, ಷಡಾಯತನ, ನಾಮ- ರೂಪ, ವಿಜ್ಞಾನ, ಸಂಸ್ಕಾರ ಮತ್ತು ಅವಿದ್ಯಾಗಳೆನ್ನುವ ಹನ್ನೆರಡು ಬಗೆಯ ದುಃಖಗಳ ಉಗಮಸ್ಥಾನವನ್ನು ಬುದ್ಧ ವಿವರಿಸುತ್ತಾನೆ. ಈ ಅವಿದ್ಯೆಯಿಂದ ಕಾಯವಚನಚಿತ್ತ ಸಂಸ್ಕಾರವುಂಟಾಗುವುದು. ಈ ಸಂಸ್ಕಾದಿಂದ ಆರು ಬಗೆಯ ವಿಜ್ಞಾನ, ವಿಜ್ಞಾನದಿಂದ ನಾಮರೂಪ, ನಾಮರೂಪದಿಂದ ಆರು ಇಂದ್ರಿಯಗಳು(ಷಡಾಯನ), ಆದರಿಂದ ವಿಷಯೇಂದ್ರಿಯಗಳ ಸಂಯೋಗ, ಸ್ಪರ್ಶದಿಂದ ವೇದನೆಯುಂಟಾಗುವುದು, ವೇದನೆಯಿಂದ ತೃಷ್ಣೆ, ತೃಷ್ಣೆಯಿಂದ ಉಪಾದಾನ (ವಿಷಯಗ್ರಹಣ) ಅದರಿಂದ ಭವ (ಹುಟ್ಟುವ ಆಸೆ) ಭವದಿಂದ ಜಾತಿ (ಜನ್ಮ) ಉಂಟಾಗುವುದು, ಜನ್ಮದಿಂದ ಶೋಕ ಅಥವಾ ದುಃಖವುಂಟಾಗುವುದು. ಹೀಗೆ ಈ ದುಃಖಕ್ಕೆ ಕಾರಣವಾಗಿರುವ ಬಗೆಯನ್ನು ಯಾವಾತ ಅರಿತು ಕೊಳ್ಳುತ್ತಾನೋ ಅವನಿಗೆ ಸಮ್ಯಗ್ಧೃಷ್ಟಿಯುಂಟಾಗುತ್ತದೆ.
ಇದನ್ನೂ ಓದಿ: ಧವಳ ಧಾರಿಣಿ ಅಂಕಣ: ಕೃಷ್ಣ ಕುಹರದಿಂದ ಮೂಡಿದ ಬೆಳಕಿನ ಪುಂಜ
ಮೂಲವನ್ನು ಯಾವಾತ ತಿಳಿದುಕೊಳ್ಳುತ್ತಾನೋ, ಆಗ ಅದರ ಪರಿಮಾರ್ಜನೆಯೂ ಸುಲಭ. ಈ ಅಜ್ಞಾನವನ್ನು ಕಳೆದುಕೊಳ್ಳಲು ಇರುವ ಹಾದಿಯೇ ಮನುಷ್ಯ ನಿರ್ವಾಣವನ್ನು ಸಾಧಿಸುವುದು. ಅದನ್ನೇ ಬೋಧಿ ಎಂದು ಹೇಳುತ್ತಾರೆ. ಗೌತಮ ಬುದ್ಧನಾಗುವ ಹಾದಿಯಲ್ಲಿ ತನ್ನನ್ನು ಕಾಡಿದ ದುಃಖಕ್ಕಾಗಿ ಮರುಗಲಿಲ್ಲ. ಅತಿಯಾಗಿ ಪ್ರೀತಿಸುವ ಸುಂದರಿಯಾದ ಮಡದಿ ಮತ್ತು ಮಗ ರಾಹುಲನನ್ನು ತೊರೆಯುವಾಗ ಅವರಿಗೆ ಅಗಲುವಿಕೆಯ ನೋವು ಉಂಟಾಗಬಹುದೆನ್ನುವ ಕುರಿತು ಅವನಿಗೆ ಅರಿವಿತ್ತು. ಈ ಅಗಲುವಿಕೆಯ ಹಿಂದಿರುವ ಅಜ್ಞಾನವನ್ನು ಒಂದಲ್ಲ ಒಂದುದಿನ ಅವರು ತೊಡೆದುಕೊಂಡು ಅಂತಿಮ ಸತ್ಯವನ್ನು ಕಂಡುಕೊಳ್ಳುತ್ತಾರೆ ಎನ್ನುವ ವಿಶ್ವಾಸ ಅವನಲ್ಲಿತ್ತು. ಅಂತೆಯೇ ಪತ್ನಿ ಯಶೋಧರಾ ಮತ್ತು ಮಗ ರಾಹುಲ ಇಬ್ಬರೂ ಸಂಘವನ್ನು ಸೇರಿ ಬಿಕ್ಕುವಾದರು.
ಜೀವಿಗಳನ್ನು ಕಾಡುತ್ತಿರುವ ಈ ಅಜ್ಞಾನದ ಪರಿಹಾರಕ್ಕೆ ಆತ ದೊಡ್ದದಾದ ಯಾವುದೋ ಸಂಗತಿಗಳನ್ನು ಹೇಳಲಿಲ್ಲ. ಬುದ್ಧ ಭೋಗ ಮತ್ತು ತಪಸ್ಸು ಎರಡೂ ಅತಿರೇಕಕ್ಕೆ ಹೋಗುವುದು ಪರಿಹಾರವಲ್ಲವೆಂದ. ಹಾಗಾದರೆ ಕಠಿಣವಾದ ತಪಸ್ಸು ಪರಿಹಾರವಲ್ಲವಾದರೆ, ಭೋಗವೇ ಬದುಕಿನ ಪ್ರಧಾನ ಲಕ್ಷಣವೂ ಅಲ್ಲವೆಂತಾದರೆ ಯಾವುದು ಅದು ಎನ್ನುವ ಪ್ರಶ್ನೆಗೆ ಆತ ಅಷ್ಟಾಂಗಿಕ ಮಾರ್ಗವನ್ನು ಲೋಕಕ್ಕೆ ತೋರಿದ. ಅವುಗಳು ಸಮ್ಯಕ್ ದೃಷ್ಟಿ, ಸಮ್ಯಕ್ ಸಂಕಲ್ಪ, ಸಮ್ಯಕ್ ವಾಕ್ಕು, ಸಮ್ಯಕ್ ಕ್ರಿಯಾ ಸಮ್ಯಕ್ ಆಜೀವ, ಸಮ್ಯಕ್ ವ್ಯಾಯಾಮ, ಸಮ್ಯಕ್ ಸ್ಮೃತಿ ಮತ್ತು ಸಮ್ಯಕ ಸಮಾಧಿ. ಬುದ್ಧ ಹೇಳಿದ ಎಂಟು ಮಾರ್ಗಗಳಲ್ಲಿಯೂ ನೈತಿಕತೆಯಿಂದ ಬದುಕಿ ಸಾಕ್ಷಾತ್ಕಾರವನ್ನು ಮಾಡಿಕೊಳ್ಳುವ ಮಾರ್ಗವನ್ನು ತೋರಲಾಗಿದೆ. ಅನುಷ್ಠಾನದಲ್ಲಿ ಈ ಆರ್ಯ ಅಷ್ಟಾಂಗಿಕದ ಜೊತೆ ಪಾಪಾಕರಣ, ಪುಣ್ಯಸಂಚಯ ಮತ್ತು ಚಿತ್ತಪರಿಶುದ್ಧಿ ಇವನ್ನು ಅನುಸರಿಸುತ್ತನೋ ಅದೇ ಜೀವಿಗಳನ್ನು ಭವಚಕ್ರದಿಂದ ನಿಬ್ಬಾಣಕ್ಕೆ ಕೊಂಡೊಯ್ಯುತ್ತದೆ ಎಂದು ಹೇಳಿದ್ದಾನೆ.
ಮನುಕುಲವನ್ನು ಕಾಡುವ ಭವದ ದುಃಖಕ್ಕೆ ಸರಳ ಬದುಕಿನ ಪರಿಹಾರವನ್ನು ಸೂಚಿಸಿದ ಆತನನ್ನು ಬೌದ್ಧದರ್ಶನ ಆತನನ್ನು ಮಹಾವೈದ್ಯರಾಜ – ಮಹಾಭಿಷಕ್ ಎಂದು ಕರೆದಿದೆ.
ಇದನ್ನೂ ಓದಿ: ಧವಳ ಧಾರಿಣಿ ಅಂಕಣ: ರಾಮನೆನ್ನುವ ನಿತ್ಯ ಆದರ್ಶ