ಭಾಗ 2
ಸುಮಿತ್ರೆ ಎಂತಹ ಸಂದರ್ಭದಲ್ಲಿಯೂ ತನ್ನ ವಿವೇಕವನ್ನು ಕಳೆದುಕೊಳ್ಳಲಿಲ್ಲ ಎನ್ನುವುದನ್ನು ಹಿಂದಿನ ಅಂಕಣ ಬರಹದಲ್ಲಿ ನೋಡಿದೆವು.
ರಾಮ ಸಹ ಅಡವಿಗೆ ಹೋಗುವಾಗ ತಮ್ಮೆಲ್ಲರ ಕಷ್ಟಕ್ಕೆ ಕೈಕೇಯಿಯೇ ಕಾರಣಳೆಂದು ಅವಳನ್ನು ಆಗಾಗ ದೂಷಿಸುತ್ತಿರುತ್ತಾನೆ. ಆದರೆ ಸುಮಿತ್ರೆಯ ಸ್ಥಿತಪ್ರಜ್ಞತೆ ಮಾನಸಿಕ ಸಮತೋಲನ ಯಾರಿಗೂ ಇಲ್ಲ. ಆಕೆ ಕ್ಷತ್ರಿಯರ ಸನಾತನ ಧರ್ಮದ ಕುರಿತು ಹೇಳುತ್ತಾ ಹೇಗೆ ಯಜ್ಞಗಳಲ್ಲಿ ದೀಕ್ಷಿತನಾಗುವದು ಯುದ್ಧದಲ್ಲಿ ಪ್ರಾಣತ್ಯಾಗ ಮಾಡುವದು ಕ್ಷತ್ರಿಯರಿಗೆ ಕರ್ತವ್ಯವಾಗಿದೆಯೋ ಅದೇ ರೀತಿ ಜ್ಯೇಷ್ಠಾನುವರ್ತನವೆಂಬುದೂ ಕ್ಷತ್ರಿಯರ ಧರ್ಮವಾಗಿದೆ ಎಂದು ಲಕ್ಷ್ಮಣನಿಗೆ ಆತನ ಸ್ಥಾನವೇನೆಂಬುದನ್ನು ಸ್ಪಷ್ಟವಾಗಿ ತಿಳಿಸುತ್ತಾಳೆ. ಈ ರೀತಿಯ ದೃಢಬುದ್ಧಿಯನ್ನು ತೋರುವ ಮತ್ತೊಂದು ಪಾತ್ರ ರಾಮಾಯಣದಲ್ಲಿ ಸಿಗಲಾರದು.
ಆಕೆಯನ್ನು ವಾಲ್ಮೀಕಿ ಹಿತಕಾಮಾ- ಎಂದು ಬಣ್ಣಿಸುತ್ತಾರೆ. ಸುಮಿತ್ರೆಯ ಪರಿಸ್ಥಿತಿ ಅರಮನೆಯ ಊಳಿಗಕ್ಕಿದ್ದಂತಹ ರೀತಿಯದ್ದಲ್ಲ. ರಾಜನೀತಿಯಲ್ಲಿ ರಾಜಕುಟುಂಬದವರು ನಡೆದುಕೊಳ್ಳುವ ಕುರಿತು ಹೇಳುವಾಗ ರಾಜನಾದವನಿಗೆ ಹೇಗೆ ತಾನು ತನ್ನವರೆನ್ನುವ ಸ್ವಾರ್ಥಬಾವ ಇರಬಾರದೋ ಅದೇ ರೀತಿ ರಾಜನ ಭಾರ್ಯೆಯರಿಗೂ ತನ್ನ ಕುಟುಂಬವೆನ್ನುವ ಸಂಕುಚಿತ ಭಾವ ಇರಲೇಕೂಡದು. ಈ ಹಿನ್ನೆಲೆಯಲ್ಲಿ ನೋಡುವಾಗ ಆಕೆ ರಾಜನೀತಿಯಲ್ಲಿಯೂ ನಿಪುಣಳಾಗಿದ್ದಿರಬೇಕೆನಿಸುತ್ತದೆ. ಹೇಳಿಕೇಳಿ ಮಗಧ ದೇಶ ಪ್ರಾಚೀನ ಕಾಲದಿಂದಲೂ ಧೈರ್ಯ ಮತ್ತು ಧೀರತನಕ್ಕೆ ಹೆಸರಾದ ರಾಜವಂಶ. ಈ ವಂಶದ ರಾಜಕುಮಾರಿಯಾದ ಸುಮಿತ್ರೆಯಲ್ಲಿ ಈ ಅಂಶ ಸಹಜವಾಗಿ ಬಂದಿರಬೇಕು. ತಾಯಿಯ ಹತ್ತಿರ ಸೌಜನ್ಯಕ್ಕಾದರೂ ಹೋಗಲು ಅನುಮತಿಯನ್ನು ಕೇಳದ ಮಗ ಒಂದು ಕಡೆ, ಈ ನೋವನ್ನು ಸಹಿಸಿಕೊಂಡು ಆ ಮಗನಿಗೆ ಆತ ಮಾಡುತ್ತಿರುವ ಕಾರ್ಯ ಸರಿಯಿದೆ ಎಂದು ಹೇಳುವ ಅಮ್ಮ ಇನ್ನೊಂದು ಕಡೆ. ಈ ಸನ್ನಿವೇಶದಲ್ಲಿ ಅದನ್ನು ಓದುವ ನಮಗೂ ಕಲ್ಲೆದೆ ಬೇಕಾಗುತ್ತದೆ. ಇದಕ್ಕೂ ಮುಂದಿನ ಆಕೆಯ ಮಾತುಗಳನ್ನು ಗಮನಿಸಬೇಕು. ಅಡವಿಗೆ ಹೋಗುವ ಲಕ್ಷ್ಮಣನಿಗೆ ಆಕೆ,
ರಾಮಂ ದಶರಥಂ ವಿದ್ಧಿ ಮಾಂ ವಿದ್ಧಿ ಜನಕಾತ್ಮಜಮ್ I
ಅಯೋಧ್ಯಾಮಟವೀಂ ವಿದ್ಧಿ ಗಚ್ಛ ತಾತ ಯಥಾಸುಖಮ್ II ಅಯೋ. ಕಾಂ. 40 ಠಿ 9 II
(ಮಗು ಲಕ್ಷ್ಮಣ, ಶ್ರೀರಾಮನನ್ನೇ ತಂದೆಯಾದ ದಶರಥನೆಂದು ಭಾವಿಸು, ಸೀತೆಯನ್ನು ನಾನೆಂದು ಭಾವಿಸು. ಅರಣ್ಯವನ್ನೇ ಆಯೋಧ್ಯೆಯೆಂದು ತಿಳಿ. ಈ ಭಾವನೆಯನ್ನು ಮನಸ್ಸಿನಲ್ಲಿಟ್ಟುಕೊಂಡು ಸುಖವಾಗಿ ಹೋಗಿ ಬಾ)
ಬಹುಕಾಲ ಹಂಬಲಿಸಿ ಮಕ್ಕಳನ್ನು ಪಡೆದ ತಾಯಿ ವಿರಹದ ನೋವನ್ನು ಮನಸ್ಸಿನಲ್ಲಿಯೇ ನುಂಗಿಕೊಂಡಿದ್ದಾಳೆ. ಬಾಯಿಂದ ಈ ಮಾತುಗಳು ಬರುತ್ತವೆ. ಅಷ್ಟು ಗಟ್ಟಿಗಿತ್ತಿ ಈಕೆ. ಆಕೆ ರಾಮನ ಹತ್ತಿರ ನನ್ನ ಮಗನನ್ನು ನಿನ್ನ ಮಗನಂತೆ ನೋಡಿಕೋ ಎನ್ನುವುದಿಲ್ಲ. ರಾಮನಿಗೆ ತನ್ನ ಜವಾಬುದಾರಿಕೆಯ ಅರಿವು ಚೆನ್ನಾಗಿದೆ ಎನ್ನುವದನ್ನು ಆಕೆ ಬಲ್ಲಳು. ರಾಮನ ಮೇಲೆ ಆಕೆಗೆ ಅಪಾರವಾದ ಪ್ರೀತಿ ಮತ್ತು ಆದರವಿದೆ. ಯಕ್ಷಗಾನದಲ್ಲಿ ಶ್ರೀರಾಮ ಪಟ್ಟಾಭಿಷೇಕ ಒಂದು ಒಳ್ಳೆಯ ರಂಗಕೃತಿ. ಇಲ್ಲಿ ಸಣ್ಣದಿರಲಿ, ದೊಡ್ಡದಿರಲಿ ಪ್ರತಿಯೊಂದೂ ಪಾತ್ರಕ್ಕೂ ಜೀವಂತಿಕೆಯನ್ನು ತುಂಬಬಹುದಾದ ಪ್ರಸಂಗ ಇದು. ಈಗಿನ ಕಾಲಮಿತಿ, ಅತಿಯಾದ ಮಾತು ಮತ್ತು ಅತಿಯಾದ ಕುಣಿತಗಳಲ್ಲಿ ಕೌಸಲ್ಯೆ, ಸೀತೆ, ಸುಮಿತ್ರಾ, ಸುಧನ್ವ ಕಾಳಗದಲ್ಲಿನ ಸುಗರ್ಭೆ, ಸಂಧಾನದ ಭಾನುಮತಿ ಇವೆಲ್ಲಾವೂ ರಂಗಕ್ಕೇ ಬರದೇ ಅವರ ಮಾತುಗಳನ್ನು ಮುಖ್ಯಪಾತ್ರಗಳ ಬಾಯಿಂದಲೇ ಹೇಳಿಸಿಬಿಡುತ್ತಾರೆ. ಕಾವ್ಯಕೇಂದ್ರೀಕೃತವಾಗಬೇಕಾದ ಪ್ರಸಂಗ ಅತಿಯಾದ ನಟ ಕೇಂದ್ರೀಕೃತವಾಗಿಬಿಟ್ಟಿದೆ. ಈ ಪ್ರಸಂಗವನ್ನು ರಚಿಸಿದ ಪಾರ್ತಿಸುಬ್ಬನಿಗೆ ಸುಮಿತ್ರೆ ಕೇವಲ ಲಕ್ಷ್ಮಣನಲ್ಲಿ ರಾಮನನ್ನು ತಂದೆಯೆಂತೆ ನೋಡಿಕೋ ಎಂದರೆ ಸಮಾಧಾನವಿಲ್ಲ. ಆಕೆ ರಾಮನ ಹತ್ತಿರ ಬಂದು,
ಲಕ್ಷ್ಮಣ ನಿನ್ನ ಬಿಟ್ಟು ಒಂದೇಕ್ಷಣವೂ ನಿಲುವನಲ್ಲ I
ರಕ್ಷಿಸಿಕೊ ನೀ ಪೋದಲ್ಲಿ ಅಕ್ಷಯ ಆಯುಷ್ಯವಿರಲಿ II
ಎಂದು ರಾಮನ ಹತ್ತಿರ ಕೇಳಿಕೊಳ್ಳುತ್ತಾಳೆ. ಅಷ್ಟೇ ಅಲ್ಲ ಆಕೆ ತನ್ನ ಪುತ್ರನಾದ ಲಕ್ಷ್ಮಣನ ಹಸ್ತವನ್ನು ರಾಮನ ಹಸ್ತದೊಳಿಟ್ಟು ಅವನ ರಕ್ಷಣೆಯ ಹೊಣೆಯನ್ನು ರಾಮನಿಗೆ ವಹಿಸುತ್ತಾಳೆ. ಅಕ್ಷಯ ಆಯುಷ್ಯವಿರಲಿ ಎನ್ನುವ ಆಕೆಯ ಮಾತು ಮನಸ್ಸನ್ನು ಕರಗಿಸಿಬಿಡುತ್ತದೆ. ರಾವಣನೊಡನೆ ಯುದ್ಧದಲ್ಲಿ ಲಕ್ಷ್ಮಣ ಬಿದ್ದಾಗ ದುಃಖಿಸುವ ರಾಮ ಈ ಸನ್ನಿವೇಶವನ್ನು ನೆನಪಿಸಿಕೊಂಡು ಸುಮಿತ್ರೆಯ ಹರಕೆ ಹುಸಿಯಾಯಿತೇ ಎನ್ನುವ ಸಂಗತಿಯನ್ನು ಎತ್ತಿಕೊಳ್ಳಲು ಇದು ಸಹಕಾರಿ. ಆಗ ಕಥೆ ಮತ್ತಿಷ್ಟು ಪರಿಣಾಮಕಾರಿಯಾಗುತ್ತದೆ. ಸಾಹಿತ್ಯಿಕವಾಗಿ ಪಾರ್ತಿಸುಬ್ಬನ ಕೃತಿಯ ಕುರಿತು ಕನ್ನಡ ಸಾಹಿತ್ಯದಲ್ಲಿ ಚರ್ಚೆ ಆಗಬೇಕಾಗಿದೆ.
ಸುಮಿತ್ರೆಯ ದೃಢತೆ ಮತ್ತೆ ವ್ಯಕ್ತವಾಗುವದು ರಾಮ ಅರಣ್ಯಕ್ಕೆ ಹೋಗಿರುವದನ್ನು ತಿಳಿದ ಕೌಸಲ್ಯೆ ಅವನ ಅಗಲುವಿಕೆಯಿಂದ ನೋವನ್ನು ತಡೆದುಕೊಳ್ಳಲಾಗದೇ ದೊಡ್ಡದಾಗಿ ರೋದಿಸುತ್ತಿರುವಾಗ. ದಶರಥನೂ ರಾಮನನ್ನು ನೆನೆದು ಗೋಳಿಡುತ್ತಿದ್ದಾನೆ. ಕೌಸಲ್ಯೆ ಬಹುಶಃ ತಾನು ಹಿಂದಿನ ಜನ್ಮದಲ್ಲಿ ಕರುವೊಂದು ಹಾಲು ಕುಡಿಯುತ್ತಿರುವಾಗ ಆ ಕೆಚ್ಚಲನ್ನು ಕತ್ತರಿಸಿ ಹಾಕಿರಬೇಕು. ಆ ಕಾರಣದಿಂದ ತನಗೆ ಈ ಬಗೆಯ ಪುತ್ರವಿಯೋಗ ಬಂದಿದೆ ಎಂದು ಗೋಳಾಡುತ್ತಾಳೆ. ಈ ಹೊತ್ತಿನಲ್ಲಿ ವಾಲ್ಮೀಕಿ ಹೇಳುವಂತೆ ಸುಸ್ಥಿರಳಾಗಿದ್ದ ಸುಮಿತ್ರಾದೇವಿ ಧರ್ಮಕ್ಕನುಗುಣವಾದ ಮಾತುಗಳಿಂದ ಕೌಸಲ್ಯೆಯನ್ನು ಸಮಾಧಾನಿಸಿದಳಂತೆ. ರಾಮನೆಂದರೆ ಸಾಕ್ಷಾತ್ ಭಗವಂತನ ರೂಪ ಎನ್ನುವದನ್ನು ಸುಮಿತ್ರೆ ಮನಗಂಡಿದ್ದಾಳೆ. ದಶರಥಾದಿಗಳೆಲ್ಲ ಮೋಹದಿಂದ ರಾಮ ತನಗೆ ಮಗ, ಒಡೆಯ, ಭಾವ ನೆಂಟ ಹೀಗೆ ಹಲವು ಬಗೆಯಲ್ಲಿ ನೋಡುತ್ತಿದ್ದರೆ ಸುಮಿತ್ರೆಗೆ ರಾಮ ಯಾರೆಂದು ಗೊತ್ತು. ಅದನ್ನೇ ಅವಳು,
ಸೂರ್ಯಸ್ಯಾಪಿ ಭವೇತ್ಸೂರ್ಯೋ ಹ್ಯಗ್ನೇರಗ್ನಿಃ ಪ್ರಭೋಃ ಪ್ರಭುಃ I
ಶ್ರೀಯಃ ಶ್ರೀಶ್ಚ ಭವೇದಗ್ರ್ಯಾ ಕೀರ್ತಿಃ ಕೀರ್ತಾಃ ಕ್ಷಮಾಕ್ಷಮಾ II
ದೈವತಂ ದೈವತಾನಾಂ ಚ ಭೂತಾನಾಂ ಭೂತಸತ್ತಮಃ I
ತಸ್ಯ ಕೇ ಹ್ಯಗುಣಾ ದೇವಿ ರಾಷ್ಟ್ರೇ ವಾಪ್ಯಥ ವಾ ಪುರೇ II
“ರಾಮ ಸೂರ್ಯನಿಗೂ ಸೂರ್ಯನಾಗಿ ಅಗ್ನಿಗೂ ಅಗ್ನಿಯಾಗಿದ್ದಾನೆ. ಈಶ್ವರನಿಗೂ ಮಹೇಶ್ವರನು, ಶ್ರೀದೇವಿಗೆ ಶ್ರೀಕಾಂತ, ಎಲ್ಲರಿಗಿಂತಲೂ ಜ್ಯೇಷ್ಠನು. ಕೀರ್ತಿಗೂ ಕೀರ್ತಿಪ್ರದನು, ಕ್ಷಮೆಗೂ ಕ್ಷಮೆಯಾದವನು. ದೇವತೆಗಳಿಗೂ ದೇವ, ಪ್ರಾಣಿಗಳಲ್ಲಿಯೂ ಶ್ರೇಷ್ಠನಾದವನು. ಅಂತಹ ಆತನಲ್ಲಿ ಯಾವ ರೀತಿಯ ಅವಗುಣವನ್ನೂ ರಾಷ್ಟ್ರವಾಗಲೀ ನಗರವಾಗಲೀ ಕಾಣಲು ಸಾಧ್ಯವಿಲ್ಲ” ಎಂದು ಅವಳನ್ನು ಸಮಾಧಾನಿಸುತ್ತಾಳೆ.
ಇದನ್ನೂ ಓದಿ | ಧವಳ ಧಾರಿಣಿ ಅಂಕಣ | ಮಾತೃತ್ವ ಮತ್ತು ಮಿತ್ರೆಯಾಗಿ ಸ್ಥಿತಪ್ರಜ್ಞತೆಯನ್ನು ತೋರಿದ ಮಹಾರಾಣಿ ಸುಮಿತ್ರೆ
ಕಠೋಪನಿಷತ್ತಿನಲ್ಲಿ ಯಮ ನಚಿಕೇತನಿಗೆ ಹೇಳುವ “ಅಲ್ಲಿ ಸೂರ್ಯಚಂದ್ರರ ಬೆಳಕಿಲ್ಲʼʼ ಎನ್ನುತ್ತಾ ʼʼಯಾವೆಲ್ಲ ಬೆಳಕು ಯಾವನಿಂದ ಬರುತ್ತದೆಯೋ ಆ ಬೆಳಕು ಅಲ್ಲಿರುವುದು” ಎನ್ನುವ ಮಾತು ಇಲ್ಲಿ ನೆನಪಿಗೆ ಬರುತ್ತದೆ. ರಾಮನೆನ್ನುವವ ದೇವರೇ ಹೌದು ಎಂದು ವೇದಾಂತಿಗಳಿಗೆ, ಮಹರ್ಷಿಗಳಿಗೆ, ವಶಿಷ್ಠರಿಗೆ ವಿಶ್ವಾಮಿತ್ರರಿಗೆ ತಿಳಿದ ಸತ್ಯ ಸುಮಿತ್ರೆಗೂ ತಿಳಿದಿತ್ತು ಎನ್ನುವದನ್ನು ವಾಲ್ಮೀಕಿ ಇಲ್ಲಿ ತಿಳಿಸುತ್ತಾರೆ. ಲೌಕಿಕವಾಗಿ ನೋಡಿದರೆ ರಾಮ ಸಿದ್ಧಾಶ್ರಮಕ್ಕೆ ಹೋದಾಗ ಅಲ್ಲಿ ಮಾರೀಚ ಸುಬಾಹು ತಾಟಕೆಯರ ಉಪಟಳವನ್ನು ತೊಲಗಿಸಿದ, ಶಿವಧನುಸ್ಸನ್ನು ಮುರಿದ, ಪರಶುರಾಮರ ಗರ್ವಭಂಗ ಮಾಡಿದ ಮತ್ತು ದಂಡಕಾರಣ್ಯದಲ್ಲಿ ಲಕ್ಷ್ಮಣನೊಡಗೂಡಿ ತಿಮಿಧ್ವಜನ ಮಗನನ್ನು ಕೊಂದು ಬ್ರಹ್ಮನಿಂದಲೇ ಬಹುವಿಧವಾದ ಅಸ್ತ್ರಗಳನ್ನು ಪಡೆದುಕೊಂಡ ಅಮಾನುಷ ಪರಾಕ್ರಮ ಆಕೆಯಲ್ಲಿ ರಾಮನ ಮೇಲಿನ ವಿಶ್ವಾಸವನ್ನು ಇಮ್ಮಡಿಗೊಳಿಸಿತ್ತು ಎನ್ನಬಹುದು.
ಸುಮಿತ್ರೆಗೆ ಅಯೋಧ್ಯೆಯ ಈ ಎಲ್ಲ ಘಟನೆಗಳು ಬಾಧಿಸಿರಲಿಲ್ಲವೇ; ಅವಳು ಪರಿವ್ರಾಜಿಕೆಯಾಗಿದ್ದಳೇ ಎನ್ನುವ ಸಂಶಯ ಬರುತ್ತದೆ. ಆಕೆಯ ಮನಸ್ಸಿನಲ್ಲಿಯೂ ಶೋಕವಿತ್ತು. ಅದನ್ನು ತೋರಿಸಿಕೊಳ್ಳುತ್ತಿರಲ್ಲಿಲ್ಲ. ಅದನ್ನು ಅರಿತವ ಭರತ ಮಾತ್ರ, ಯಾವ ಭರತ ಕೇಕಯ ರಾಜ್ಯದಲ್ಲಿ ಸುಮಿತ್ರೆಯ ಕ್ಷೇಮವನ್ನು ಕೇಳುವಾಗ ಸುಮಿತ್ರೆಗೆ ಧರ್ಮಜ್ಞಳು ಎನ್ನುವ ಮಾತುಗಳನ್ನು ಹೇಳಿದ್ದನೋ ಅದೇ ಭರತನಿಗೆ ಆಕೆಯ ಎದೆಯೊಳಗಿನ ಶೋಕ ಅರ್ಥವಾಗಿತ್ತು. ಇದಕ್ಕೆಲ್ಲ ತಾನೇ ಕಾರಣನೆಂದು ಆತ ಈ ಕುರಿತು ಮೌನವಾಗಿ ರೋದಿಸುತ್ತಿದ್ದ. ಭರದ್ವಾಜರಿಗೆ ತನ್ನ ತಾಯಂದಿರನ್ನು ಪರಿಚಯ ಮಾಡಿಕೊಡುವಾಗ ಸುಮಿತ್ರೆಯ ಕುರಿತು
ಅಸ್ಯಾ ವಾಮಭುಜಂ ಶ್ಲಿಷ್ಟಾ ಯೈಷಾ ತಿಷ್ಠತಿ ದುರ್ಮನಾಃ I
ಕರ್ಣಿಕಾರಸ್ಯ ಶಾಖೇವ ಶೀರ್ಣಪುಷ್ಪಾ ವನಾನ್ತರೇ II ಅಯೋ. 92-22 II
ಕರ್ಣಿಕಾರ ವೃಕ್ಷ ಹೂವುಗಳಿಲ್ಲದೇ ಬೋಳಾಗಿರುವಾಗ ಹೇಗೆ ನಿಸ್ತೇಜವಾಗಿ ಕಾಣುತ್ತದೆಯೋ ಅದೇ ರೀತಿ ಆರ್ತಳಾಗಿ ತೋರುವ ಈಕೆಯೇ ದಶರಥ ರಾಜನ ಮೂವರು ಪತ್ನಿಯರಲ್ಲಿ ಎರಡನೆಯವಳಾದ ಸುಮಿತ್ರೆ ಎನ್ನುತ್ತಾನೆ. ಎಲ್ಲ ಕಷ್ಟಗಳನ್ನೂ, ನೋವುಗಳನ್ನೂ ಸಹಿಸಿಕೊಂಡು ತನ್ನ ಸ್ವಸ್ವರೂಪಜ್ಞಾನವನ್ನು ಅರಿತ ವ್ಯಕ್ತಿತ್ವ ರಾಮಾಯಣದಲ್ಲಿ ಇದ್ದರೆ ಅದು ಸುಮಿತ್ರೆ ಎನ್ನಬಹುದು.
ಇದನ್ನೂ ಓದಿ | ಧವಳ ಧಾರಿಣಿ ಅಂಕಣ | ವರ್ಷಕ್ಕೆ ಒಂದಲ್ಲ, ನಾಲ್ಕು ನವರಾತ್ರಿ ಹಬ್ಬಗಳು!
ರಾಮಾಯಣದಲ್ಲಿ ಸುಮಿತ್ರೆ ಈ ಭಾಗಗಳನ್ನು ಬಿಟ್ಟರೆ ಮತ್ತೆ ಕಾಣಿಸಿಕೊಳ್ಳುವದಿಲ್ಲ. ಆದರೆ ಅಯೋಧ್ಯಾ ಸರ್ಗದಲ್ಲಿ ಬರುವ ಸನ್ನಿವೇಶಗಳಲ್ಲಿ ಆಕೆಯ ವ್ಯಕ್ತಿತ್ವ ನಂತರ ಇಡೀ ರಾಮಾಯಣದ ಕೊನೆಯವರೆಗೂ ನಮ್ಮನ್ನು ಕಾಡುತ್ತಲೇ ಇರುತ್ತದೆ. ಕರ್ಮದಲ್ಲಿದ್ದೂ ಕರ್ಮರಹಿತಳು ಆಕೆ. ದಶರಥನಿಗೆ ಚಿನ್ನದಂತಹ ಮಡದಿಯರು ಸಿಕ್ಕಿದಾಗಲೂ ತನ್ನದೇ ಆದ ಲೆಕ್ಕಾಚಾರದಲ್ಲಿ ಮತ್ತು ಎಲ್ಲವನ್ನೂ ಗುಟ್ಟಾಗಿರಿಸಿಕೊಳ್ಳುವ ಪ್ರತಿಕ್ರಿಯೆಯಲ್ಲಿ ತಾನೇ ತನ್ನ ಹೆಂಡತಿಯರಲ್ಲಿ ಸಂಶಯದ ಅಗ್ನಿಯನ್ನು ಹುಟ್ಟುಹಾಕಿ ತಾನೇ ಅದಕ್ಕೆ ಆಹುತಿಯಾದ. ಆದರೆ ಆಟ ಮುಗಿದ ಮೇಲೂ ಆಟದ ಗುಂಗು ಇರುವಂತೆ ಸದಾಕಾಲ ತನ್ನದೇ ಆದ ಸ್ಥಿತಪ್ರಜ್ಞತೆಯಿಂದ ನಮ್ಮನ್ನು ಕಾಡುವ ಪಾತ್ರ ಸುಮಿತ್ರೆಯದು.
(ಲೇಖಕರು ವಿಮರ್ಶಕರು, ಯಕ್ಷಗಾನ ಅರ್ಥಧಾರಿ)