ಈ ಅಂಕಣವನ್ನು ಇಲ್ಲಿ ನೀವು ಕೇಳಬಹುದು:
ಈ ತಾಯಿಯನ್ನು ನೆನಪಿಸುತ್ತಲೇ ಇರಬೇಕೆನಿಸುತ್ತದೆ. ಈಕೆ ತನ್ನ ಹೆಸರಿನ ರಾಜ್ಯವಿರುವ ಮಹಾರಾಜ್ಯದ ಮಹಾರಾಣಿ, ಚಕ್ರವರ್ತಿಯ ಪಟ್ಟದರಸಿ, ಪರಮಾತ್ಮನನ್ನೇ ತನ್ನ ಮಗನಾಗಿ ಪಡೆದವಳು. ಆದರೆ ಎಲ್ಲ ಇದ್ದೂ ಸಹ ಯಾವ ಭಾಗ್ಯವನ್ನು ಪಡೆಯದ ನತೃದೃಷ್ಟೆ. ರಾಮಾಯಣದ ಕಥೆಯನ್ನು ಕೇಳುವಾಗಲೆಲ್ಲ ಈ ಸಾಧ್ವಿಯ ನೆನಪು ಬರುತ್ತದೆ. ಮನಸ್ಸು ಭಾರವಾಗುತ್ತದೆ. ಆಕೆಯೇ ಶ್ರೀರಾಮನ ಅಮ್ಮ ಕೌಸಲ್ಯೆ. ವಾಲ್ಮೀಕಿ ಕೌಸಲ್ಯೆಯ ಕುರಿತು ಹೇಳುವಾಗ ಕೈಕೇಯಿಯ ಸ್ವಭಾವವನ್ನು ವರ್ಣಿಸಿದಂತೆ ನೇರವಾಗಿ ಅವಳ ಗುಣಗಳ ಕುರಿತು ವರ್ಣಿಸುವದಿಲ್ಲ. ಕೈಕೇಯಿಯನ್ನು ವರ್ಣಿಸುವಾಗ,
ಆತ್ಮಕಾಮಾ ಸದಾಚಂಡೀ ಕ್ರೋಧನಾ ಪ್ರಾಜ್ಞಮಾನಿನೀ I
ಅರೋಗಾ ಚಾಪಿ ಮೇ ಮಾತಾ ಕೈಕೇಯಿ ಕಿಮುವಾಚ ಹ II
(ಸ್ವಾರ್ಥಿಯಾದ, ತಾನೇ ಎಲ್ಲರಿಗಿಂತಲೂ ಬುದ್ಧಿವಂತಳು ಎಂದು ಭಾವಿಸಿಕೊಂಡಿರುವ, ಹಠಮಾರಿಯಾದ ಕೋಪಿಷ್ಠೆಯೂ ಆಗಿರುವ ನನ್ನ ತಾಯಿಯಾದ ಕೈಕೇಯಿ ಸೌಖ್ಯವೇ, ಅವಳೇನಾದರೂ ಹೇಳಿ ಕಳುಹಿಸಿರುವಳೇ?)
ಎಂದು ಭರತನ ಬಾಯಿಯಿಂದಲೇ ಕೈಕೇಯಿಯ ಗುಣಗಳ ಕುರಿತು ಹೇಳಿಸುತ್ತಾರೆ. ಅದೇ ಭರತನೇ ತನ್ನ ದೊಡ್ಡಮ್ಮನ ಕುರಿತು ಕೇಳುವಾಗ,
ಆರ್ಯಾ ಚ ಧರ್ಮನಿರತಾ ಧರ್ಮಜ್ಞಾ ದರ್ಮದರ್ಶಿನೀ I
ಅರೋಗಾ ವಾಪಿ ಕೌಸಲ್ಯಾ ಮಾತಾ ರಾಮಸ್ಯ ಧೀಮತಃ II
(ಪೂಜ್ಯಳಾದ ಸದಾ ಧರ್ಮದಲ್ಲಿಯೇ ನಿರತಳಾದ, ಇತರರಲ್ಲಿ ಸದ್ಗುಣಗಳನ್ನೇ ಕಾಣುವ ಧೀಮಂತನಾದ ರಾಮನ ತಾಯಿಯಾದ ಕೌಸಲ್ಯಾಮಾತೆ ಆರೋಗ್ಯದಿಂದಿರುವಳೇ?)
ಈ ಎರಡು ಮಾತುಗಳಲ್ಲೇ ಕೌಸಲ್ಯೆ ಹೇಗಿರಬಹುದೆಂದರೆ ಆಕೆ ಕೈಕೇಯಿಗೆ ವಿರುದ್ಧ ಪ್ರಕೃತಿಯವಳು ಎನ್ನುವದನ್ನು ವಾಲ್ಮೀಕಿ ಹೇಳಿಬಿಡುತ್ತಾರೆ. ಆಕೆ ಕೇವಲ ರಾಮನ ಅಮ್ಮನಲ್ಲ;. ಗುಣವುಳ್ಳ ವ್ಯಕ್ತಿಗಳನ್ನು ಪರಿಚಯವನ್ನು ವಿವರಿಸುವಾಗ ಅವರ ಕುಲಗೋತ್ರಗಳ ಕುರಿತು ವಿವರಿಸಬೇಕಾಗಿಲ್ಲ. ಧೀಮಂತನಾದ ರಾಮನ ತಾಯಿ ಎನ್ನುವ ಒಂದು ಮಾತು ಸಾಕು. ಇತರರಲ್ಲಿ ಸದ್ಗುಣಗಳನ್ನೇ ಕಾಣುವ ಎನ್ನುವಲ್ಲಿ ಸದಾಚಂಡೀ ಎನ್ನುವದಕ್ಕೆ ವಿರುದ್ಧವಾದ ಸ್ವಭಾವವನ್ನು ಗಮನಿಸಬಹುದಾಗಿದೆ.
ಅಯೋಧ್ಯಾಕಾಂಡದಲ್ಲಿ ಈಕೆ ಕೋಸಲೇಂದ್ರನ ಸುತೆ ಎನ್ನುವ ಮಾತು ಬರುವದರಿಂದ ಈಕೆಯನ್ನು ರಾಜಕುಮಾರಿ ಎನ್ನುವನ್ನು ಗ್ರಹಿಸಬಹುದಾಗಿದೆ. ಈ ಕಾಂಡ ರಾಮನ ಪಟ್ಟಾಭಿಷೇಕ ಮತ್ತು ವನಗಮನದ ಕುರಿತು ಹೇಳುವದಾದರೂ ಕೌಸಲ್ಯೆಯ ಸದ್ಗುಣಗಳ ಕುರಿತು ವಿವರಿಸುವ ಅನೇಕ ಉದಾಹರಣೆಗಳನ್ನು ವಾಲ್ಮೀಕಿ ಕಟ್ಟಿಕೊಟ್ಟಿದ್ದಾರೆ. ದಶರಥ ರಾಮನಿಗೆ ಪಟ್ಟಾಭಿಷೇಕ ಮಾಡಬೇಕೆಂದು ನಿಶ್ಚಯಿಸಿ ರಾಮನನ್ನು ತನ್ನ ಅರಮನೆಗೆ ಕರೆಯಿಸಿ ಆಶೀರ್ವದಿಸುವ ಸಂದರ್ಭದಲ್ಲಿ “ಜ್ಯೇಷ್ಠಾಯಾಮಪಿ ಮೇ ಪತ್ನ್ಯಾಂ ಸದೃಶಾಂ ಸದೃಶ ಸುತಃ” ನನ್ನ ಹಿರಿಯ ಪತ್ನಿಗೆ ಸರಿಯಾದವನಾಗಿ ಅವಳಂತೆಯೇ ಗುಣನಿಧಿಯಾಗಿರುವ ಮಗನಾಗಿರುವೆ ಎನ್ನುತ್ತಾನೆ. ರಾಮನಂತಹ ಮಗ ಜನಿಸುವ ಕ್ಷೇತ್ರ ಕೌಸಲ್ಯೆಯದಾಗಬೇಕಾದರೆ ಆ ಕ್ಷೇತ್ರವೂ ಅಷ್ಟೇ ಗುಣಗಳಿಂದ ಕೂಡಿರಲೇ ಬೇಕು. ಕೌಸಲ್ಯೆಗೆ ರಾಮ ಅಯೋಧ್ಯೆಯ ಸಿಂಹಾಸನವನ್ನು ಏರುತ್ತಾನೆ ಎಂದು ತಿಳಿದಾಗ ಸಹಜವಾಗಿ ಆನಂದವಾಯಿತು. ಆಗ ಅವಳು ರಾಮನ ಶ್ರೇಯೋಭಿವೃದ್ಧಿಗಾಗಿ ದಾನಧರ್ಮ ಹೋಮ ಹವನಗಳಲ್ಲಿ ನಿರತಳಾಗಿದ್ದಳಂತೆ.
ಇದನ್ನೂ ಓದಿ | ಸವಿಸ್ತಾರ ಅಂಕಣ | ʼಸಪ್ತಬಂದಿʼಯಲ್ಲಿ ಬಂಧಿಯಾದ ಹಿಂದು ಸಮಾಜ ಮುಕ್ತವಾಗಬೇಕು ಎಂದವರು ಸಾವರ್ಕರ್
ಇದೇ ವೇಳೆಗೆ ಕೈಕೇಯಿ ಕೇಳಿದ ವರಗಳಿಂದಾಗಿ ರಾಮನಿಗೆ ಪಟ್ಟಾಭಿಷೇಕವಾಗುವದು ತಪ್ಪಿಹೋಗಿದೆ. ಅದು ಆಕೆಯ ಗಮನಕ್ಕೆ ಬಂದಿಲ್ಲ. ರಾಮ ತಾನು ವನವಾಸಕ್ಕೆ ಹೋಗುವದನ್ನು ತನ್ನ ಅಮ್ಮನಿಗೆ ತಿಳಿಸಲು ಅವಳ ಅರಮನೆಗೆ ಬಂದಿದ್ದಾನೆ. ಆಗ ಬರುವಾಗ ಮಧ್ಯಾನ್ಹವಾಗಿತ್ತು (ಬೆಳಗಾದ ಬಹಳ ಹೊತ್ತಿನ ಮೇಲೆ). ರಾಮ ಸ್ಥಿತಪ್ರಜ್ಞ; ರಾಜನಾಗುವದೂ ವನವಾಸಕ್ಕೆ ಹೋಗುವದೂ ಎರಡೂ ಅವನ ಪಾಲಿಗೆ ಒಂದೇ. ಅವನಿಗೆ ರಾಜ್ಯವೆನ್ನುವದು ಧರ್ಮಪಾಲನೆಯ ಹೊಣೆಯೇ ಹೊರತು ಭೋಗದ ಪ್ರತೀಕವಲ್ಲ. ದೂರದಿಂದ ಬರುತ್ತಿರುವ ಅವನನ್ನು ಕಂಡು ಇನ್ನೇನು ಕೆಲವೇ ಕ್ಷಣಗಳಲ್ಲಿ ತನ್ನ ಮಗ ಕೋಸಲ ಸಾಮ್ರಾಜ್ಯದ ಅಧಿಕಾರಿಯಾಗುವವ ಎನ್ನುವ ಸಂತೋಷ ಆಕೆಗೆ ಉಕ್ಕೇರಿತು. ಬಹುಶಃ ಆಕೆಯ ಮುಖದಲ್ಲಿ ಈ ರೀತಿಯ ಆನಂದವನ್ನು ಕಾಣದೇ ಎಷ್ಟು ಸಮಯವಾಗಿತ್ತೋ ಏನೋ. ತಕ್ಷಣವೇ ಅವಳು ರಾಮನ ಬಳಿಗೆ ಮರಿಯನ್ನು ಕಂಡ ತಾಯಿ ಕುದುರೆ ಓಡಿಬರುವ ರೀತಿಯಲ್ಲಿ ಬಂದಳು ಎಂದು ಕವಿ ವಿವರಿಸುತ್ತಾನೆ. ಸಾಮಾನ್ಯವಾಗಿ ಇಂತಹ ಸಂದರ್ಭಗಳಲ್ಲಿ ಆಕಳಿನ ಉಪಮೆಯನ್ನು ಕೊಡುವದು ಸಾಮಾನ್ಯ. ಇಲ್ಲಿ ವಾಲ್ಮೀಕಿ ಕುದುರೆಯ ಉಪಮೆಯನ್ನು ಬಳಸಿರುವದು ಗಮನಿಸಬೇಕಾದ ಸಂಗತಿ. ಕುದುರೆ ಚಕ್ರಾಧಿಪತ್ಯದ ಸಂಕೇತ. ದಶರಥ ಮಾಡಿದ ಅಶ್ವಮೇಧ ಯಾಗದಲ್ಲಿ ಅವಭೃತಳಾಗಿದ್ದವಳು ಪಟ್ಟಮಹಿಷಿಯಾಗಿದ್ದ ಕೌಸಲ್ಯೆ. ರಾಮನಿಗೆ ದಶರಥ ಪಟ್ಟಗಟ್ಟಬೇಕೆಂದು ಬಯಸಿದ್ದಾನೆ. ಇಲ್ಲಿ ಪಟ್ಟಮಹಿಷಿಯೇ ರಾಮನಲ್ಲಿ ಓಡೋಡಿ ಬರುತ್ತಿದ್ದಾಳೆ. ಪರ್ಯಾಯವಾಗಿ ರಾಮ ಅಧಿಕಾರಕ್ಕಾಗಿ ಹಪಹಪಿಸಿದವನಲ್ಲ; ಸಕಲ ಸಾಮ್ರಾಜ್ಯವೇ ರಾಮನನ್ನು ರಾಜನನ್ನಾಗಿ ನೊಡಬೇಕೆಂದು ಬಯಸಿದೆ ಎನ್ನುವದರ ಸಂಕೇತ ಇಲ್ಲಿದೆ.
ಯುವರಾಜ ಪದವಿಯನ್ನು ಏರಬೇಕಾದಾಗ ರಾಜಕುಮಾರ ಮತ್ತು ಆತನ ಪತ್ನಿ ಇಬ್ಬರೂ ವ್ರತಸ್ತರಾಗಿರಬೇಕಾಗುತ್ತದೆ. ಧಾರ್ಮಿಕ ಕ್ರಿಯೆ ಮುಗಿದ ಹೊರತೂ ಹೊಟ್ಟೆಗೆ ಏನನ್ನೂ ತಿನ್ನುವ ಹಾಗಿಲ್ಲ. ಅವೆಲ್ಲವೂ ಮುಗಿದು ಊಟ ಮಾಡಲು ತಂಬಾ ಹೊತ್ತಾಗಬಹುದು. ಮಗನಿಗೆ ಹಸಿವಾದರೆ ತಾಯಿಯ ಕರಳು ಚುರುಕ್ ಎನ್ನುತ್ತದೆ. ತಾಯಿಗೆ ಮಗ ರಾಜನಾಗುವದು ಎಷ್ಟು ಸಂತೋಷವೋ ಅಷ್ಟೇ ಕಾಳಜಿ ಆತ ಉಪವಾಸವಿರಬಾರದೆನ್ನುವದು. ಮಾತೃಸಹಜ ಪ್ರತಿಕ್ರಿಯೆ ಇದು. ರಾಮನನ್ನು ನೋಡಿ ಆಕೆ ಹೇಳುವ ಮಾತು ಗಮನಿಸಬೇಕು. “ದತ್ತಮಾಸನಮಾಲಭ್ಯ ಭೋಜನೇನ ನಿಮನ್ತ್ರಿತಃ- ಆಸನವನ್ನು ಸಿದ್ಧಪಡಿಸಿದ್ದೇನೆ ಮಗು, ಬಾ ಊಟ ಮಾಡಿಕೊಂಡು ಹೋಗು” ಎನ್ನುತ್ತಾಳೆ. ಎಷ್ಟೊಂದು ಸಹಜವಾಗಿ ಈ ಮಾತುಗಳನ್ನು ಕವಿ ಇಲ್ಲಿ ಕೌಸಲ್ಯೆಯಿಂದ ಆಡಿಸಿದ್ದಾನೆ. ನಮ್ಮೆದುರಿಗೇ ಕರುಣಾಮಯೀ ಮಾತೆಯ ಮೂರ್ತಿಯೊಂದು ಪ್ರತ್ಯಕ್ಷವಾಗಿಬಿಡುತ್ತದೆ. ಅಮ್ಮನ ಕಾಳಜಿಯ ತುರೀಯಾವಸ್ಥೆಯನ್ನು ಇದಕಿಂತ ಚೆನ್ನಾಗಿ ವಿವರಿಸುವ ಬಗೆ ಮತ್ತೊಂದಿಲ್ಲ.
ಇದನ್ನೂ ಓದಿ | ಧೀಮಹಿ ಅಂಕಣ | ಪ್ರಾಚೀನ ಭಾರತದ ಸಂಪತ್ತು ಲೂಟಿಯಾಗಿರಬಹುದು, ಜ್ಞಾನವನ್ನು ಕದಿಯಲಾಗಲಿಲ್ಲ!
ಬಹುಶಃ ದಶರಥ ಕೈಕೇಯಿಯನ್ನು ಮದುವೆಯಾದ ಮೇಲೆ ಕೌಸಲ್ಯೆ ಗಂಡನಿಂದ ಅಲಕ್ಷ್ಯಕ್ಕೆ ಒಳಗಾಗಿದ್ದಳು ಎಂದೆನಿಸುತ್ತದೆ. ಕೈಕೆ ಭರತನಿಗೆ ಪಟ್ಟಕಟ್ಟುವಂತೆ ಮತ್ತು ರಾಮನು ಕಾಡಿಗೆ ಹೋಗುವಂತೆ ನಿರ್ಬಂಧಿಸಿದಾಗ ದೊರೆಗೆ ಕೌಸಲ್ಯೆಯ ಒಳ್ಳೆಯ ಗುಣಗಳು ನೆನಪಾಗುತ್ತವೆ. ನಿನ್ನ ಸಲುವಾಗಿ ಕೌಸಲ್ಯಾದೇವಿಯನ್ನು ತಾನು ಒಂದು ದಿನವೂ ಸರಿಯಾಗಿ ಸಮಾದರಿಸಲಿಲ್ಲವಲ್ಲ ಎಂದು ಪಶ್ಚಾತ್ತಾಪ ಪಡುತ್ತಾನೆ. ಅನಾದರದ ನಡುವೆಯೂ ಅವಳು ಹೇಗೆ ತನ್ನನ್ನು ಉಪಚರಿಸುತ್ತಿದ್ದಳು ಎನ್ನುವದು ಆತನಿಗೆ ನೆನಪಾಗುತ್ತದೆ. ಅವಳಿಗೆ ಭೇದಭಾವ ತೋರಿದುದಕ್ಕೆ ಆತ ವಿಷಾದಿಸುತ್ತಾನೆ.
ಕೌಸಲ್ಯೆ ಎತ್ತರವಾಗುತ್ತಾ ಹೋಗುವದು ಮುಂದೆ ಭರತ ಅರಮನೆಗೆ ಬಂದಾಗ ಕಾಣಬಹುದಾಗಿದೆ. ಪುತ್ರಶೋಕ ಮತ್ತು ಪತಿವಿಯೋಗದೊಂದ ಕಂಗೆಟ್ಟಿದ್ದ ಕೌಸಲ್ಯೆ ಮಾನವ ಸಹಜವಾದ ಭಾವನೆಯಿಂದ ಭರತನನ್ನು ದೂಷಿಸುತ್ತಾಳೆ. ಆಗ ಭರತ ಹತಾಶನಾಗಿ ತನ್ನದೇನೂ ತಪ್ಪಿಲ್ಲವೆಂದು ನಾನಾ ವಿಧವಾದ ಶಪಥವನ್ನು ಮಾಡಿ ಆಳುತ್ತಾ ಕುಸಿದು ಬಿದ್ದು ಮೂರ್ಛೆಹೋಗುತ್ತಾನೆ. ಆಗ ಸಾವರಿಸಿಕೊಂಡ ಕೌಸಲ್ಯೆ ಭರತನನ್ನೇ ಸಮಾಧಾನಿಸುವ ದೃಶ್ಯ ಮನಕಲಕುವಂತಿದೆ. ರಾಮನನ್ನು ಸಮಾಧಾನಿಸಿದಂತೆ ಭರತನನ್ನೂ ಸಮಾಧಾನಿಸುತ್ತಾಳೆ. ಪುತ್ರ ನೀನು ದುಃಖಿಸುತ್ತಿದ್ದರೆ ತನ್ನ ದುಃಖ ಹೆಚ್ಚಾಗುತ್ತಾದೆ. ದಿಷ್ಟ್ಯಾ ನ ಚಲಿತೋ ಧರ್ಮಾದಾತ್ಮಾ ತೇ ಸಹ ಲಕ್ಷ್ಮಣಃ – “ನೀನು ಲಕ್ಷ್ಮಣನಂತೆಯೇ ಸತ್ಯಪ್ರತಿಜ್ಞನಾಗಿರುವೆ. ನಿನ್ನ ಮನಸ್ಸು ಧರ್ಮದಿಂದ ವಿಚಲಿತವಾಗಿರುವದಿಲ್ಲ” ಎಂದೆಲ್ಲ ಹೇಳಿ ಅವನನ್ನು ತನ್ನ ತೊಡೆಯ ಮೇಲೆ ಕುಳ್ಳಿರಿಸಿಕೊಂಡು ಆಲಂಗಿಸಿ ಸಮಾಧಾನಪಡಿಸುತ್ತಾಳೆ.
ಬಹುಶಃ ದಶರಥ ರಾಮನ ಪಟ್ಟಾಭಿಷೇಕಕ್ಕೆ ಮೊದಲು ಕೇಕೇಯಿಯ ರಾಜನಿಗೆ ಆಮಂತ್ರಣವಿತ್ತು ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡಿದ್ದರೆ ಈ ಸಮಸ್ಯೆ ಬರುತ್ತಿರಲಿಲ್ಲವೇನೋ. ಯಾವುದೋ ಅಳಕು ಅವನನ್ನು ಕಾಡುತ್ತಿತ್ತು. ಕೈಕೇಯಿಗೆ ತನ್ನನ್ನು ಅಲಕ್ಷಿಸಲು ಪ್ರಾರಂಭ ಮಾಡಿದ್ದಾರೆ; ಹೀಗಾದರೆ ರಾಮ ಪಟ್ಟವೇರಿದ ಮೇಲೆ ತನ್ನ ಪಾಡೇನು ಎನ್ನುವ ಸಂಶಯ ಮಂಥರೆಯಿಂದ ಬಿತ್ತಲ್ಪಟ್ಟಿತು. ಎರಡೂ ರಾಣಿಯರಿಗೂ ಪುತ್ರ ಮೋಹವಿದೆ. ಆದರೆ ಕೌಸಲ್ಯೆ ಮೋಹವನ್ನು ಮೀರಿ ಭರತನಲ್ಲಿಯೂ ರಾಮ ಲಕ್ಷ್ಮಣರನ್ನು ಕಾಣುವ ಕರುಣಾಮಯಿಯಾಗಿ ರಾಮಾಯಣದ ಅಯೋಧ್ಯಾ ಕಾಂಡದಲ್ಲಿ ಕಾಣಿಸಿಕೊಳ್ಳುತ್ತಾಳೆ.
“ಕು ಪುತ್ರೋ ಜಾಯತೇ ಕ್ವಚಿದಪಿ ಕುಮಾತಾ ನ ಭವತಿ” ಎನ್ನುವ ಮಾತು ಇದೆ. ಮಾತ್ರ ಹೃದಯವೆನ್ನುವದು ತುಂಬಾ ದೊಡ್ಡದು.
(ಲೇಖಕರು ಹಿರಿಯ ಅರ್ಥಧಾರಿ, ಅಂಕಣಕಾರ, ಸಾಹಿತ್ಯ ವಿಮರ್ಶಕ ಹಾಗೂ ನಿವೃತ್ತ ಬ್ಯಾಂಕ್ ಉದ್ಯೋಗಿ)