Site icon Vistara News

ಧವಳ ಧಾರಿಣಿ ಅಂಕಣ: ರೈತ ಹೋರಾಟಕ್ಕೆ ಸಂಘಟನೆಯ ರೂಪ ಕೊಟ್ಟ ಸಂನ್ಯಾಸಿ

farmer agitation freedom fighting

ಸ್ವಾತಂತ್ರ್ಯ ಚಳವಳಿಯಲ್ಲಿ ರೈತ ಹೋರಾಟದ ಬೇರುಗಳು, ಭಾಗ- 2

ಸರಿ ಸುಮಾರು ಇದೇ ಹೊತ್ತಿನಲ್ಲಿ ರೈತರೊಳಗೇ ಈ ಸಮಸ್ಯೆಗೆ ಪರಿಹಾರವನ್ನು ತಾವೇ ಪರಿಹರಿಸಬೇಕೆನ್ನುವ ಭಾವನೆ ಮೂಡುತ್ತದೆ. ಎಲ್ಲಿ ನೋವಿರುತ್ತದೆಯೋ ನಾಯಕತ್ವವೆನ್ನುವುದು ಅಲ್ಲಿಂದಲೇ ಮೂಡಿಬರುತ್ತದೆ. ಉತ್ತರ ಪ್ರದೇಶದ ಪ್ರತಾಪಘಡ ಜಿಲ್ಲೆಯ ರೂರೆ ಎನ್ನುವಲ್ಲಿ ಜಿಂಘೂರಿ ಸಿಂಗ್ ಮತ್ತು ಸಹದೇವ ಸಿಂಗ್ ಎನ್ನುವ ರಜಪೂತ ಸಮುದಾಯಕ್ಕೆ ಸೇರಿದ ರೈತರು ಕಿಸ್ಸಾನ ಸಭಾವೊಂದನ್ನು ಕಟ್ಟಿ ರೈತರ ಶೋಷಣೆಯ ವಿರುದ್ಧ ಹೋರಾಟ (farmer agitation) ಮಾಡಲು ಪ್ರಾರಂಭಿಸುತ್ತಾರೆ. ಸಿಂಘ್ ಜೋಡಿಗಳು ಸ್ಥಾಪಿಸಿದ ಕಿಸಾನ್ ಸಭಾ, ಯುಪಿ ಕಿಸಾನ್ ಸಭಾದಂತೆ ರಾಜಕೀಯ ಕಾರಣಗಳಿಗಾಗಿರಲಿಲ್ಲ. ರೈತರ ಸಮಸ್ಯೆಗಳನ್ನು ಪರಿಹರಿಸಿಕೊಳ್ಳುವಲ್ಲಿ ಲಭ್ಯವಿರುವ ಅಭಿವೃದ್ಧಿಪರ ಮಾಧ್ಯಮ ಯಾವುದು ಎನ್ನುವುದನ್ನು ಆಲೋಚಿಸುವುದಾಗಿತ್ತು. ಅವರ ಮುಖ್ಯ ಉದ್ದೇಶ ಬ್ರಿಟಿಷರ ವಿರುದ್ಧ ಹೋರಾಡುವುದಲ್ಲ; ತಾಲೂಕುದಾರಿಂದ ಶೋಷಣೆಗೊಳಗಾಗುತ್ತಿರುವ ರೈತರ ಧ್ವನಿಯಾಗಿ ಕಾರ್ಯನಿರ್ವಹಿಸುವುದಾಗಿತ್ತು.

ಮೊದಲ ಭಾಗ ಇಲ್ಲಿದೆ ಓದಿ: ಧವಳ ಧಾರಿಣಿ ಅಂಕಣ: ಸ್ವಾತಂತ್ರ್ಯ ಚಳವಳಿಯಲ್ಲಿ ರೈತ ಹೋರಾಟದ ಬೇರುಗಳು

ಇಂಥ ಒಂದು ಸಂಘಟನೆ ಇರುವ ಕುರಿತು 1920ರ ವರೆಗೂ ಯುಪಿ ಕಿಸಾನ ಸಭಾಕ್ಕಾಗಲಿ, ಯುಪಿ ಕಿಸಾನ ಸಭಾ ಇದೆಯೆನ್ನುವ ವಿಷಯ ಪ್ರತಾಪಘರದ ರೈತರಿಗಾಗಲೀ ತಿಳಿದಿರಲಿಲ್ಲ. ಇದಕ್ಕೆ ಕಾರಣ ಜಿಂಘು ಸಿಂಗ್ ಮತ್ತು ಸಹದೇವ ಸಿಂಗ್ ಅವರಲ್ಲಿನ ನಾಯಕತ್ವದ ಕೊರತೆಯಾಗಿತ್ತು. ಈ ಇಬ್ಬರು ರೈತ ನಾಯಕರ ಕುರಿತು ಹೆಚ್ಚಿನ ವಿವರಗಳು ಸಿಗುವುದಿಲ್ಲ. ಹೀಗೆ ಅಂಧಕಾರದಲ್ಲಿರುವಾಗ ಇವರಿಗೆ ಬೆಳಕಾಗಿ ಬಂದವ ಓರ್ವ “ಸಾಧು ಬಾಬಾ ರಾಮಚಂದ್ರ” (Sadhu Baba Ramachandra) ಎನ್ನುವಾತ. ಈತನ ಹಿನ್ನೆಲೆ ತುಂಬಾ ಕುತೂಹಲಕಾರಿಯಾಗಿದೆ. 1864ರಲ್ಲಿ ಗ್ವಾಲಿಯರ್‌ನಲ್ಲಿ ಜನಿಸಿದ ಈತ ಮಹಾರಾಷ್ಟ್ರ ಬ್ರಾಹ್ಮಣ ಸಮುದಾಯಕ್ಕೆ ಸೇರಿದವ. ಈತನ ಹೆಸರು ಶ್ರೀಧರ ಬಲವಂತ ಜೋಧಪುರಕರ್. ಫಿಜಿದ್ವೀಪದಲ್ಲಿ ಕಾರ್ಮಿಕರ ಸಲುವಾಗಿ ಹೋರಾಟ ಮಾಡಿ ಅಲ್ಲಿಂದ ತಪ್ಪಿಸಿಕೊಂಡು ಅಯೋಧ್ಯೆಗೆ ಬಂದು ಸಂತನಾಗಿ ಬಾಬಾ ರಾಮಚಂದ್ರ ಎನ್ನುವ ಹೆಸರಿನಲ್ಲಿ ಜೀವನವನ್ನು ಸಾಗಿಸುತ್ತಿದ್ದನು.

ಬಾಬಾ ರಾಮಚಂದ್ರ ರೈತರ ಹಕ್ಕುಗಳಿಗಾಗಿ ಅವಧ ಜಿಲ್ಲೆಯಲ್ಲಿ ಹೋರಾಟ ಮಾಡುತ್ತಿರುವುದನ್ನು ಗಮನಿಸಿದ ಜಿಂಘು ಸಿಂಗ್ ಮತ್ತು ಸಹದೇವ ಸಿಂಗ್ ಆತನನ್ನು ರೂರೆಗೆ ಆಹ್ವಾನಿಸಿ ಈ ಕಿಸಾನಸಭಾದ ನೇತೃತ್ವವನ್ನು ವಹಿಸಲು ಆತನ ಹತ್ತಿರ ಕೇಳಿಕೊಳ್ಳುತ್ತಾರೆ. ಶೋಷಣೆಯ ವಿರುದ್ಧ ತಿರುಗಿಬೀಳುವ ಸ್ವಭಾವದ ಬಾಬಾ ಪ್ರತಾಪಘಡ ಜಿಲ್ಲೆಯ ರೈತರ ನೇತೃತ್ವವನ್ನು ವಹಿಸಿಕೊಳ್ಳುತ್ತಾನೆ. ಯಾವಾಗ ಬಾಬಾ ಕಿಸಾನ್ ಸಭಾದ ಕರ್ಣಧಾರತ್ವವನ್ನು ವಹಿಸಿದರೋ ರೈತ ಹೋರಾಟದ ಸ್ವರೂಪವೇ ಬದಲಾಗಿಬಿಡುತ್ತದೆ. ಬಾಬಾ ರಾಮಚಂದ್ರ ಅಹಿಂಸೆಯಲ್ಲಿ ನಂಬಿಕೆಯನ್ನಿಟ್ಟಿದ್ದ. ರೈತರಲ್ಲಿ ಒಗ್ಗಟ್ಟನ್ನು ಮೂಡಿಸಲು ಹಳ್ಳಿಹಳ್ಳಿ ತಿರುಗಿ ಜನರನ್ನು ಸಂಘಟಿಸಲು ಪ್ರಯತ್ನಿಸಿದ. ಅವಧದ ಸುತ್ತ ಇರುವ ತಾಲೂಕದಾರರು ಮತ್ತು ರೈತರ ನಡುವೆ ವಿವಾದವನ್ನು ಸೌಹಾರ್ದಯುತವಾಗಿ ಬಗೆಹರಿಸಲು ಬಯಸಿದ.

ಅದರೆ ಇದು ಪ್ರಯೋಜನಕ್ಕೆ ಬಾರಲಿಲ್ಲ. ಕೊಬ್ಬಿದ ಜಮೀನುದಾರರು ಸರಕಾರದ ಬೆಂಬಲದೊಂದಿಗೆ ಈ ಸಂಘಟನೆಯನ್ನು ನಿರ್ಲಕ್ಷಿಸಿದರು; ಕಿಸಾನ್ ಸಭಾದ ಜೊತೆ ಗುರುತಿಸಿಕೊಂಡಿದ್ದ ರೈತರನ್ನು ಒಕ್ಕಲೆಬ್ಬಿಸತೊಡಗಿದರು. ರೈತರಲ್ಲಿ ಆತ್ಮವಿಶ್ವಾಸದ ಕೊರತೆಯಿತ್ತು. ಗೆಲ್ಲಬಹುದೆನ್ನುವ ಯಾವ ಭರವಸೆಯೂ ಇದ್ದಿರಲಿಲ್ಲ. ಆಗ ಬಾಬಾ ತಮ್ಮ ಹೋರಾಟದ ಸ್ವರೂಪವನ್ನು ಬದಲಾಯಿಸಿಕೊಂಡರು. ಜನರಲ್ಲಿ ರಾಮಚರಿತ ಮಾನಸದ ಕುರಿತು ಅಪಾರಶದ್ಧೆ ಇತ್ತು. ರಾಮಚಂದ್ರನ ಭಕ್ತರಾಗಿದ್ದ ಬಾಬಾ, ರಾಮಚರಿತಮಾನಸವನ್ನೇ ರೈತರನ್ನು ಸಂಘಟಿಸಲು ಬಳಸತೊಡಗಿದರು. ಮೊಟ್ಟಮೊದಲ ಬಾರಿಗೆ ರೈತರಲ್ಲಿ ಅಸಹಕಾರ ಚಳುವಳಿಯ ಕಲ್ಪನೆಯನ್ನು ಕೊಟ್ಟಾ ಬಾಬಾ ರಾಮಚಂದ್ರ. ಕೇವಲ ನಜರಾನ ಕರವಲ್ಲದೇ ಬಿಟ್ಟಿ ಸೇವೆಗಳನ್ನು ರೈತರು ಮಾಡದಂತೆ ಅವರಲ್ಲಿ ಜಾಗ್ರತಿ ಮೂಡಿಸಿದ. ಜಮೀನುದಾರರು ರೈತರ ಒಕ್ಕಲೆಬ್ಬಿಸಿದರೆ ಇನ್ನೊಬ್ಬ ರೈತ ಅಲ್ಲಿಗೆ ಹೋಗಿ ಒಕ್ಕಲೆಬ್ಬಿಸಿದ ಹೊಲವನ್ನು ಪಡೆಯದಂತೆ ರೈತರ ಮನವೊಲಿಸಿ ಅವರ ಪ್ರಯತ್ನ ಯಶಸ್ವಿಯಾಗದಂತೆ ನೋಡಿಕೊಂಡ.

ರೈತರ ಒಗ್ಗಟ್ಟು ಯಾವ ಮಟ್ಟದಲ್ಲಿ ಆಯಿತೆಂದರೆ ಪ್ರತಾಪಘಡ ಅಯೋಧ್ಯೆ ರಾಯ ಬರೇಲಿ ಸುಲ್ತಾನಪುರ ಇಲ್ಲೆಲ್ಲಾ ಜಮೀನುದಾರರ ಶೋಷಣೆಯ ವಿರುದ್ಧ ಅಸಹಕಾರ ಚಳುವಳಿ ಜೋರಾಯಿತು. ತೋರಿಕೆಗೆ ಇದು ತಾಲೂಕಾದಾರಿಕೆಯ ವಿರುದ್ಧ ಹೋರಾಟ ಎಂದು ಕಂಡರೂ ಇದರಲ್ಲಿ ರಾಮಚರಿತ ಮಾನಸದ ರಾಮ ರಾವಣರ ಯುದ್ಧ ಎಂದು ಹೇಳುವ ಮೂಲಕ ಸ್ವಾಂತಂತ್ರ್ಯದ ಕಿಚ್ಚನ್ನು ರೈತರಲ್ಲಿ ಮೂಡಿಸಿತ್ತಿರುವದು ಆಂಗ್ಲರ ಗಮನಕ್ಕೆ ಬಂತು. 1920 ರ ಜೂನ್ ತಿಂಗಳಲ್ಲಿ ಬಾಬಾ ರೈತ ಸಂಘಟನೆ ಇಡೀ ಅವಧ ಪ್ರಾಂತಕ್ಕೆ ಹಬ್ಬಿತ್ತು. ರೈತರು ಕರನಿರಾಕರಣೆಯ ಚಳುವಳಿಯನ್ನು ಪ್ರಾರಂಭಿಸಿದ್ದಷ್ಟೇ ಅಲ್ಲ, ಸಾಮೂಹಿಕವಾಗಿ ಸರಕಾರ ಮತ್ತು ತಾಲೂಕುದಾರರ ವಿರುದ್ಧ ಶಾಂತಿಯುತ ಪ್ರತಿಭಟನೆಯನ್ನು ಮಾಡಿದರು. ಬಾಬಾನಿಗೆ ಚಳುವಳಿಯ ನೇತಾರನಾಗುವದು ಮುಖ್ಯವಾಗಿರಲಿಲ್ಲ. ರೈತರ ಕಲ್ಯಾಣವಾಗುವದು ಆತನ ಗುರಿಯಾಗಿತ್ತು. ಹಾಗಾಗಿ ಆತ ಮಹಾತ್ಮಾ ಗಾಂಧೀಜಿ ಮತ್ತು ಕಾಂಗ್ರೇಸ್ ನಾಯಕರನ್ನು ಈ ಚಳುವಳಿಗೆ ಬೆಂಬಲ ನೀಡಲು ಕೇಳಿಕೊಂಡ.

ಆದರೆ ಮೋತಿಲಾಲ್ ನೆಹರೂ ಅಧ್ಯಕ್ಷರಾಗಿರುವಾಗ 1919 ರಲ್ಲಿ ಪ್ರತಿನಿಧಿಗಳಾಗಿ ಬಂದ ಸುಮಾರು 1800 ರೈತರಿಗೆ ನಿಶ್ಶ್ಯುಲ್ಕವಾಗಿ ಪ್ರವೇಶವನ್ನು ನಿರಾಕರಿಸಲಾಯಿತು. ಅವರನ್ನು ಖುರ್ಚಿಯಿಂದ ಎಬ್ಬಿಸಿ ಹಿಂದಕ್ಕೆ ಹೋಗುವಂತೆ ಹೇಳಲಾಯಿತು. 1920ರ ನಾಗಪುರ ಅಧಿವೇಶನದಲ್ಲಿಯೂ ಹೀಗೆ ಆಯಿತು. ಇದೇ ಹೊತ್ತಿಗೆ ಸರಕಾರ ಬಾಬಾ ರಾಮಚಂದ್ರ ಮತ್ತು ಅವರ ಮೂವತ್ತೆರಡು ಸಂಗಾತಿಗಳನ್ನು ಕಳ್ಳತನ ಮತ್ತು ಮೋಸದ ಆಪಾದನೆಯನ್ನು ಹೊರಿಸಿ 1920 ಆಗಸ್ಟ್‌ ತಿಂಗಳಿನಲ್ಲಿ ಬಂಧಿಸಿ ಜೈಲಿಗಟ್ಟಿದರು. ಈಗ ಮಾತ್ರ ರೈತರ ಸಹನೆಯ ಕಟ್ಟೆಯೊಡೆಯಿತು. ಸುಮಾರು ಐದು ಸಾವಿರದಷ್ಟಿರುವ ರೈತರು ಕೋರ್ಟ್ ಆವರಣಕ್ಕೆ ನುಗ್ಗಿ ಬಂಧಿತರನ್ನು ಬಿಡುಗಡೆ ಮಾಡದಿದ್ದರೆ ತಾವು ಕದಲುವುದಿಲ್ಲವೆಂದು ಮುತ್ತಿಗೆ ಹಾಕಿದರು. ಬೇರೆ ದಾರಿ ಕಾಣದೇ ಸರಕಾರ ಬಾಬಾ ರಾಮಚಂದ್ರ ಮತ್ತು ಅವರ ಸಹಚರರನ್ನು ಬಿಡುಗಡೆ ಮಾಡಬೇಕಾಯಿತು.

ಆದರೆ ಇದು ಗಾಂಧೀಜಿಯವರ (Mahatma Gandhi) ದೃಷ್ಟಿಯಲ್ಲಿ ಹಿಂಸೆಯಾಗಿ ಕಂಡಿತು. ಅವರ ದೃಷ್ಟಿಕೋನದಲ್ಲಿ ಜಮೀನುದಾರರೂ ಫರಂಗಿಗಳ ಗುಲಾಮರು. ಹಾಗಾಗಿ ಅವರ ವಿರುದ್ಧದ ಹೋರಾಟಕ್ಕೆ ಕಾಂಗ್ರೇಸ್ ಸಿದ್ಧವಿರಲಿಲ್ಲ. ಆ ವೇಳೆಗೆ ಹೆಚ್ಚಿನ ಜಮೀನುದಾರರು ಕಾಂಗ್ರೇಸಿಗೆ ಬೆಂಬಲ ಸೂಚಿಸಿದ್ದರು. ಅವರಲ್ಲಿ ಕೆಲವರು ಕಾಂಗ್ರೇಸಿನ ನಾಯಕರಾಗಿದ್ದರು. 1921 ರ ಫೆಬ್ರುವರಿ 10 ರಂದು ಫಯ್ಜಾಬಾದಿನಲ್ಲಿ ಗಾಂಧೀಜಿಯವರು ರೈತರನ್ನು ಉದ್ಧೇಶಿಸಿ ಮಾತನಾಡುತ್ತಾ, ರೈತರಿಂದಾದ ಹಿಂಸೆಯನ್ನೇ ತೀವ್ರವಾಗಿ ಖಂಡಿಸಿದರು. ರೈತರು ಕಾನೂನನ್ನು ಕೈಗೆ ತೆಗೆದುಕೊಂಡಿರುವುದು ದೇವರ ಮತ್ತು ಮನುಷ್ಯರ ದೃಷ್ಟಿಯಲ್ಲಿ ಎಸಗಿದ ಮಹಾಪಾಪವೆನ್ನುತ್ತಾರೆ. ಅವರ ದೃಷ್ಟಿಯಲ್ಲಿ ಜಮೀನುದಾರರೂ ಸಹ ಸರಕಾರದ ಗುಲಾಮರು. ಹಾಗಾಗಿ ಎಲ್ಲಕ್ಕಿಂತ ದೊಡ್ಡ ಜಮೀನುದಾರರಾದ ಬ್ರಿಟಿಷರ ವಿರುದ್ಧ ಹೋರಾಡಬೇಕೇ ಹೊರತು ನಮ್ಮವರ (ಜಮೀನುದಾರ) ವಿರುದ್ಧ ಅಲ್ಲವೆಂದು ಬಿಡುತ್ತಾರೆ. (Collected work of Gandhiji P.336 vol XX).

1917ರಿಂದ 1922ರವರೆಗಿನ ರೈತ ಹೋರಾಟದಲ್ಲಿ ಗಳಿಸಿದ್ದು ಏನು ಎನ್ನುವುದು ಮುಖ್ಯ ಪ್ರಶ್ನೆ ಹಾಗೇ ಉಳಿಯುತ್ತದೆ. ಬಾಬಾ ರಾಮಚಂದ್ರ ಮತ್ತು ಇತರ ರೈತ ನಾಯಕರಿಗೆ ಕಾಂಗ್ರೇಸು ತಮ್ಮ ನೆರವಿಗೆ ಬರಬಹುದೆನ್ನುವ ಆಸೆ ಇತ್ತು. ಆದರೆ ಗಾಂಧೀಜಿಯವರೇ ಜಮೀನುದಾರರೂ ಸಹ ಬ್ರಿಟಿಷರ ಗುಲಾಮರು ಎಂದು ಹೇಳಿದ ಮೇಲೆ ಅವರಿಗೆ ಬೇರೆ ಯಾವ ಹಾದಿಯೂ ಇರಲಿಲ್ಲ. ಆದರೆ ಬ್ರಿಟಿಷ ಆಡಳಿತಕ್ಕೆ ಮಾತ್ರ ಪರಿಸ್ಥಿತಿಯನ್ನು ತಿಳಿಗೊಳಿಸಲು ಏನನ್ನಾದರೂ ಮಾಡಬೇಕೆನ್ನುವುದು ಮನದಟ್ಟಾಯಿತು. ಆ ಸಂದರ್ಭದಲ್ಲಿ ಬ್ರಿಟಿಷ ಆಡಳಿತದ ಪರವಾಗಿರುವ ‘ಪಯೋನೀರ್ ಪತ್ರಿಕೆ’ ಸಹ ರೈತರ ಸಮಸ್ಯೆಯನ್ನು ಪ್ರಧಾನವಾಗಿ ಎತ್ತಿಕೊಂಡು ಅದಕ್ಕೆ ಪರಿಹಾವನ್ನು ಕೊಡಬೇಕಾದುದು ಸರಕಾರದ ಕರ್ತವ್ಯ ಎಂದು ಎಚರಿಸಿತು. ಆಗ ಪ್ರಚಲಿತವಿರುವ ಭೂಮಸೂದೆ ಮತ್ತು ಗೇಣಿ ಕಾಯ್ದೆಗಳು ತುಂಬಾ ಹಳೆಯದಾಗಿರುವವು; ಅವುಗಳನ್ನು ಕಾಲಕ್ಕೆ ತಕ್ಕಂತೆ ಬದಲಾಯಿಸಬೇಕು ಎಂದು ಎಚ್ಚರಿಸಿತು. ಇದೇ ಕಾಲಕ್ಕೆ ಅದು ಯಾವುದೇ ಸುಧಾರಣೆಗಳನ್ನು ತರುವಾಗ ಭೂಮಾಲಿಕರ ಹಿತಾಸಕ್ತಿಗಳನ್ನು ಕಾಪಾಡುವುದೂ ಪ್ರಧಾನ ಉದ್ದೇಶವಾಗಿರಲಿ (Interest of the land lords predominate) ಎಂದು ಸಲಹೆಯನ್ನು ನೀಡಿತು.

ಇವೆಲ್ಲದರ ಪರಿಣಾಮವಾಗಿ ಅವಧ ಗೇಣಿ ಕಾಯ್ದೆ 1921ನ್ನು ಆಂಗ್ಲರ ಸರಕಾರ ಜಾರಿಗೆ ತಂದಿತು. ಇದರ ಪ್ರಕಾರ ರೈತನಿಗೆ ಗೇಣಿಯ ಹಕ್ಕು ಆತನ ಜೀವಿತಾವಧಿಯ ವರೆಗೆ ರಕ್ಷಿಸಲ್ಪಟ್ಟಿತು. ಆತನ ನಂತರ ಮತ್ತೂ ಐದು ವರ್ಷಗಳವರೆಗೆ ಆತನ ವಾರಸುದಾರರಿಗೆ ಗೇಣಿ ಹಕ್ಕು ಲಭ್ಯವಾಗುವಂತೆ ಮಾಡಿತು. ಒಂದು ವೇಳೆ ಆತನ ವಾರಸುದಾರರು ಈ ಸದ್ರಿ ಜಮೀನನ್ನು ದುರುಪಯೋಗ ಮಾಡಿದ್ದಲ್ಲಿ ಅಂತವರ ಜಮೀನನ್ನು ಜಮೀನುದಾರರು ತಮ್ಮ ಸುಪರ್ದಿಗೆ ತೆಗೆದುಕೊಳ್ಳುವಂತೆ ಬದಲಾವಣೆ ತಂದಿತು. ಮೇಲಿಂದ ನೋಡುವಾಗ ಈ ಕಾಯ್ದೆ ರೈತರ ಪರವಾಗಿ ಎನಿಸಿದರೂ, ಈ ಕಾಯ್ದೆ ಜಮೀನುದಾರರ ‘ನಝರಾನಾ” ಕರದ ಕುರಿತು ಮೌನ ವಹಿಸಿತು, ಅದುತನಕ ಜಮೀನುದಾರರು ಗರಿಷ್ಟ 6.25% ಗೇಣಿಯನ್ನು ವಿಧಿಸಬಹುದಿತ್ತು. ಈ ಮಿತಿಯನ್ನು ತೆಗೆದು ಹಾಕಲಾಯಿತು. ಒಂದುವೇಳೆ ಗೇಣಿ ತುಂಬಿದ ಕುರಿತು ಜಮೀನುದಾರ ಲಿಖಿತ ರೂಪದಲ್ಲಿ ಕೊಡಬೇಕೆನುವುದನ್ನು ಆತನ ವಿವೇಚನೆಗೆ ಬಿಟ್ಟಿತು. ಒಟ್ಟಾರೆ ಹೇಳಬೇಕೆಂದರೆ ರೈತರ ಪರಿಸ್ಥಿತಿ ಬೆಂಕಿಯಿಂದ ಬಾಣಲೆಗೆ ಬಿದ್ದಂತಾಯಿತು.

ನಂತರ ಅವರ ಹೋರಾಟ ಅಲ್ಲಿಗೇ ನಿಲ್ಲುವುದಿಲ್ಲ. ಅದು ಮತ್ತೊಂದು ಮಗ್ಗಲಿಗೆ ಹೊರಳುತ್ತದೆ. ಬಾಬಾ ರಾಮಚಂದ್ರನಿಂದ ಪ್ರಭಾವಿತನಾದ ಮದಾರಿ ಪಾಸೀ, ಖವಾಜಾ ಅಹಮದ್ ತಮ್ಮ ಜೊತೆ ಮತ್ತಿತರ ಸಹಚರರನ್ನು ಸೇರಿಸಿಕೊಂಡು ಹರ್ದೋಯಿ ಜಿಲ್ಲೆಯಲ್ಲಿ ಏಕಾ ಆಂದೋಲನವನ್ನು ಪ್ರಾರಂಭಿಸುತ್ತಾರೆ. ಮದಾರಿ ಪಾಸೀ ದಲಿತ ಪಾಸೀ ಸಮುದಾಯಕ್ಕೆ ಸೇರಿದವನು. ಗುಡ್ಡಗಾಡುಗಳಲ್ಲಿ ನೆಲೆಸಿರುವ ಪಾಸೀ ಸಮುದಾಯವು ಬಿಲ್ಲಿ ವಿದ್ಯೆಯಲ್ಲಿ ಪ್ರವೀಣರು. ಅವರು ಸಿಪಾಯಿ ಹೋರಾಟದ ಕಾಲಕ್ಕೆ ಬ್ರಿಟಿಷರ ವಿರುದ್ಧ ಕೂಟಯುದ್ಧವನ್ನು ಮಾಡಿ ಅನೇಕ ಸಾವುನೋವುಗಳಿಗೆ ಕಾರಣರಾಗಿದ್ದರು. ಹಾಗಾಗಿ ಬ್ರಿಟಿಷರು ಪಾಸೀ ಸಮುದಾಯವನ್ನು ಕ್ರಿಮಿನಲ್_ಗಳು ಎಂದು ಪರಿಗಣಿಸಿತ್ತು. ಮದಾರೀ ಪಾಸಿ ಹಳ್ಳಿಗಳಿಗೆ ಹೋಗುವಾಗ ಒಂದು ಕೈಯಲ್ಲಿ ಗೀತೆಯನ್ನು ಇನ್ನೊಂದು ಕೈಯಲ್ಲಿ ಕುರಾನನ್ನು ಹಿಡಿದು ರೈತರಲ್ಲಿ ಜಾಗ್ರತಿಯನ್ನುಂಟುಮಾಡುತ್ತಿದ್ದ. ತಲೆಯ ಮೇಲೆ ಗಾಂಧಿ ಟೊಪ್ಪಿ ಧರಿಸಿ ಒಂದು ಕೈಯಲ್ಲಿ ಬಿಲ್ಲು ಬಾಣವನ್ನು ಹಿಡಿದು ಗುಡ್ಡಗಾಡುಗಳಲ್ಲಿ ಅವಿತು ಜಮೀನುದಾರರ ಮೇಲೆ ಆಕ್ರಮಣ ಮಾಡುತ್ತಿದ್ದ. ಈತನ ಉಪಟಳವನ್ನು ತಡೆದುಕೊಳ್ಳುವುದು ಸರಕಾರಕ್ಕೆ ಕಷ್ಟವಾಯಿತು. ಈತನ ಏಕಾಆಂದೋಲನವು ಪಕ್ಕದ ಉನ್ನಾವ್, ಕಾನ್ಪುರ, ಲಕ್ನೋಗಳಿಗೂ ಹಬ್ಬಿತು. ಆತ ಈ ನಡುವೆ “ಹಿಂದುಸ್ತಾನ ಸೋಷಿಯಲಿಷ್ಟಿಕ್ ರಿಪಬ್ಲಿಕ್ ಸಂಘಟನೆಯೊಟ್ಟಿಗೆ ಸೇರಿ ಸಶಸ್ತ್ರಹೋರಾಟವನ್ನು ಮಾಡಲು ಪ್ರಯತ್ನಿಸುತ್ತಾನೆ. ಈತನ ವಿರುದ್ಧ ಸೈನಿಕರು ಮತ್ತು ಜಮೀನುದಾರರು ಒಂದೇ ಸಮನೆ ಮುಗಿಬೀಳುತ್ತಾರೆ. ಆಗ ಆತ ಅವರಿಂದ ತಪ್ಪಿಸಿಕೊಳ್ಳುವ ಸಲುವಾಗಿ ಭೂಗತನಾಗುತ್ತಾನೆ. ಮತ್ತು ಈತನ ಸಾವು ಅದೇ ಹೊತ್ತಿಗೆ ಆಗುತ್ತದೆ. ಸುಮಾರು 1931 ರ ಮಾರ್ಚ ತಿಂಗಳ 27, ಅಥವಾ 28 ರಂದು ನಿಗೂಢವಾಗಿ ಸತ್ತಿರಬಹುದೆಂದು ಊಹಿಸುತ್ತಾರೆ. ಬಾಕಿ ವಿವರ ಈತನ ಕುರಿತು ಸಿಗುವುದಿಲ್ಲ.

ಇದನ್ನೂ ಓದಿ: ಧವಳ ಧಾರಿಣಿ ಅಂಕಣ: ʼನೇತಿ ನೇತಿ’- ವಾಸ್ತವ ಮತ್ತು ತೋರಿಕೆಯಲ್ಲಿ ಸತ್ಯದ ಹುಡುಕಾಟ

ನಿರಾಶೆಗೊಂಡ ಬಾಬಾ ಏಕಾಂಗಿಯಾಗಿಯೇ ತನ್ನ ಹೋರಾಟವನ್ನು ಮುಂದುವರಿಸುತ್ತಾನೆ. ಸರಕಾರ 1947 ರವರೆಗೆ ಆತನನ್ನು ಒಟ್ಟೂ ಆರು ಸಲ ಬಂಧಿಸುತ್ತದೆ. ರೈತರಲ್ಲಿ ಜಾಗ್ರತಿ ಮೂಡಿಸಿದ ಬಾಬಾ ನಮ್ಮವರ ಅಸಹಕಾರದಿಂದ ಮೂಲೆಗೆ ಸೇರಿ ಅನಾಮಧೇಯನಾಗಿಯೇ 1950 ರಲ್ಲಿ ಈ ಲೋಕವನ್ನು ಬಿಟ್ಟು ಹೋಗುತ್ತಾನೆ. ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಬಾಬಾ ರಾಮಚಂದ್ರ ರೈತರನ್ನು ಕೇವಲ ಜಮೀನುದಾರರ ವಿರುದ್ಧ ಮಾತ್ರ ಹೋರಾಟ ನಡೆಸಿರುವುದಲ್ಲ. ಅವರಲ್ಲಿ ಸ್ವಾವಲಂಬಿ ಬದುಕನ್ನು ರೂಢಿಸಲು ಅನೇಕ ಸುಧಾರಣೆಯನ್ನು ಮಾಡುತ್ತಾನೆ. ಸಹಕಾರ ಸಂಘದ ತತ್ತ್ವ, ತಮ್ಮದೇ ಆದ ಚಿಕ್ಕ ಚಿಕ್ಕ ಗುಂಪುಗಳ ರಚನೆ ಮಾಡಿ ಒಂದೊಂದು ಗುಂಪಿಗೆ ಬೇರೆ ಬೇರೆ ಕೃಷಿ ಸಂಬಂಧಿತ ಉದ್ಯೋಗಗಳನ್ನು ಕೈಗೊಳ್ಳಲು ಪ್ರೇರೇಪಿಸುತ್ತಾನೆ. ಹಳ್ಳಿಯಲ್ಲಿನ ಒಂದು ಗುಂಪು ಹೈನುಗಾರಿಕೆ ಮಾಡಿದರೆ, ಇನ್ನೊಂದು ಗುಂಪು ಕೋಳಿ ಕುರಿಗಳನ್ನು ಸಾಕುವುದು, ಇನ್ನೊಬ್ಬರು ರೈತರಿಗೆ ಬೇಕಾದ ಬೀಜಗಳನ್ನು ಸಿದ್ದಪಡಿಸುವುದು, ಹೀಗೆ ಮುಂತಾಗಿ. ಇಂದಿನ ಕಿರು ಹಣಕಾಸಿನ ವ್ಯವಸ್ಥೆ ಮತ್ತು ಸ್ವಸಹಾಯ ಸಂಘಗಳ ಕಲ್ಪನೆ ಅಲ್ಲಿತ್ತು. ಆದರೆ ಅಲ್ಲಿ ಆರ್ಥಿಕ ಸಾಕ್ಷರತೆಗಿಂತ ಸ್ವಾವಲಂಬಿ ಬದುಕಿಗೆ ಒತ್ತು ಕೊಡಲಾಗಿತ್ತು. ಬಾಬಾನ ಹೋರಾಟದ ವಿವರಗಳು ಇನ್ನೂ ಅನೇಕವಿದೆ. ಆತನ ಕುರಿತಾದ ವಿವರಗಳು ಲಕ್ನೋದ ಸಿಐಡಿ ಫೈಲಿನಲ್ಲಿ ಗುಪ್ತ ದಾಖಲೆಯಾಗಿ ಸ್ವಾತಂತ್ರ್ಯ ಬಂದ 76 ವರ್ಷಗಳಾದರೂ ಹೊರಬರದೇ ಭದ್ರವಾಗಿ ಮುಚ್ಚಿಕೊಂಡಿವೆ. ಅದನ್ನು ತೆರೆದರೆ ಮಹತ್ವದ ದಾಖಲೆಗಳು ಸಿಗಬಹುದು.

ರೈತ ಹೋರಾಟ ಈ ಎಲ್ಲಾ ಕಾರಣಕ್ಕೆ ತನ್ನ ಕಾವನ್ನು ಕಳೆದುಕೊಂಡಿತು. ಇದೇ ಕಾಲಕ್ಕೆ ಕಾಂಗ್ರೇಸ್ಸು ತನ್ನ ಆಸ್ತಿತ್ವವನ್ನು ಹಳ್ಳಿಗಳಲ್ಲಿಯೂ ಬೆಳೆಸಿಕೊಳ್ಳುತ್ತಾ ಮುನ್ನೆಡೆಯಿತು. ಸರ್ದಾರ ಪಟೇಲರು ಬಾರ್ಡೋಲಿ ಮತ್ತು ಖೇಡ ಜಿಲ್ಲೆಯಲ್ಲಿ ರೈತರ ಪರವಾಗಿ ಹೋರಾಟ ಮಾಡಿ ಅವರ ಸಮ಼ಸ್ಯೆಗೆ ನ್ಯಾಯಯುತ ಪರಿಹಾರವನ್ನು ಕೊಡಿಸುತ್ತಾರೆ. ಗಾಂಧೀಜಿಯ ಅಸಹಕಾರಿ ಚಳುವಳಿ ಮತ್ತು ಉಪ್ಪಿನ ಸತ್ಯಾಗ್ರಹಗಳೆಲ್ಲವೂ ಕ್ರಮೇಣ ರೈತರ ಚಳುವಳಿಯನ್ನು ಹಿನ್ನೆಲೆಗೆ ದೂಡುತ್ತವೆ.

ರೈತನ ಬವಣೆ ಪರಿಹಾರವಾಗಿ ಜಮೀನುದಾರ ಹಿಡಿತದಿಂದ ತಪ್ಪಲು ಸಾಧ್ಯವಾಗಿದ್ದು ಭಾರತ ಸರಕಾರ ಜಾರಿಗೆ ತಂದ 1961 ರ ಭೂ ಸುದಾರಣೆ ಕಾನೂನಿನಿಂದ. ಅಲ್ಲಿಯ ತನಕ ರೈತರು ಪಟ್ಟ ಬವಣೆ ಮತ್ತು ಕಷ್ಟ ಊಹಿಸಲೂ ಅಸಾಧ್ಯವಾಗಿದೆ.

ಇದನ್ನೂ ಓದಿ: ಧವಳ ಧಾರಿಣಿ ಅಂಕಣ: ಗುರುಶಿಷ್ಯ ಪರಂಪರೆ: ತತ್ತ್ವದರ್ಶನದ ಹಾದಿಯನ್ನು ತೋರಿಸುವ ಜ್ಞಾನದ ಬೆಳಕು

Exit mobile version