ಶತಮಾನಗಳ ಶೋಷಣೆಯ ಕರಾಳ ಅಧ್ಯಾಯ
ಭಾರತದ ಸ್ವಾತಂತ್ರ್ಯ ಹೋರಾಟದ (India freedom struggle) ಮೂಲವನ್ನು ಕೆದಕುತ್ತಾ ಹೋದಾಗ ಮಹತ್ವದ ಪಾತ್ರವನ್ನು ವಹಿಸಿದ ರೈತ ಚಳವಳಿಯ (farmers in freedom fight) ಪ್ರಾಮುಖ್ಯತೆಗೆ ಮಹತ್ವ ನೀಡಿರುವುದು ಕಂಡುಬರುವುದಿಲ್ಲ. ಇದಕ್ಕೆ ಕಾರಣ ರೈತರ ಚಳವಳಿಯನ್ನು (farmers fight) ತಮಗೆ ಬೇಕಾದ ರೀತಿಯಲ್ಲಿ ಬಳಸಿಕೊಂಡು ನಂತರ ಅವರನ್ನು ಮರೆತಿರುವುದು ಆಗಿದೆ ಎನ್ನಬಹುದು. ಭಾರತದ ಸ್ವಾತಂತ್ರ್ಯ ಹೋರಾಟದ ಹಾದಿಯಲ್ಲಿ ರೈತರ ಹೋರಾಟವೆನ್ನುವದಕ್ಕೆ ಬಹುಮುಖ್ಯವಾದ ಸ್ಥಾನವಿದೆ. 1857ರ ಮೊದಲ ಸ್ವಾತಂತ್ರ್ಯ ಹೋರಾಟವನ್ನು (first freedom struggle) ಸೈನಿಕರ ಬಂಡಾಯವೆಂದು ಬ್ರಿಟಿಷರು ದಾಖಲಿಸಿ ಕುಳಿತರು. 1857ರ ಕ್ರಾಂತಿಯನ್ನು ಸ್ವಾಂತಂತ್ರ್ಯ ಹೋರಾಟವೆಂದು ಕರೆದವರು ವಿನಾಯಕ ದಾಮೋದರ ಸಾವರ್ಕರ್. ಈ ಸ್ವಾತಂತ್ರ್ಯ ಹೋರಾಟದ ಹಿನ್ನೆಲೆಯಲ್ಲಿ ಕೆಲ ಘಟನೆಗಳನ್ನು ಗಮನಿಸಿದರೆ ಅದರ ಹಿನ್ನೆಲೆಯಲ್ಲಿ ಬ್ರಿಟಿಷರಿಂದ ಮತ್ತು ದೇಶೀಯ ಜಮೀನುದಾರರಿಂದ ರೈತರ ಶೋಷಣೆ ಕಾಣುತ್ತದೆ. ಉತ್ತರ ಪ್ರದೇಶದ ಅವಧದಲ್ಲಿ ಬ್ರಿಟೀಷ ಅಧಿಕಾರಿಯಾಗಿದ್ದ H. C. Irwin ರೈತರ ಬವಣೆಯ ಕುರಿತು The Garden of INDIA or Chapters on Oudh History and Affairs ಎನ್ನುವ ಕೃತಿಯಲ್ಲಿ ಶೋಷಣೆಗಳ ವಿವಿಧ ಮುಖಗಳನ್ನು ಕೃತಿಯಲ್ಲಿ ವಿವರವಾಗಿ ಚರ್ಚಿಸಿದ್ದಾನೆ.
1800-1856 ನಡುವಿನ ನವಾಬರ ಆಡಳಿತ, ಈಸ್ಟ್ ಇಂಡಿಯಾ ಕಂಪನಿ ಮತ್ತು ನಂತರದ ಬ್ರಿಟಿಷರ ನೇರ ಆಡಳಿತದಲ್ಲಿ ರೈತಾಪಿ ವರ್ಗದ ಅಸಹಾಯಕ ಪರಿಸ್ಥಿತಿಯನ್ನು ಆತ ದಾಖಲಿಸಿದ್ದಾನೆ. ರೈತರ ಕರುಣಾಜನಕ ಸ್ಥಿತಿ ಅವನ ಮನಸ್ಸನ್ನು ಕಲಕಿದೆ. ಹಾಗಾಗಿ ಆತ “ಬೆಳೆಗಾರರಿಗೆ ಕನಿಷ್ಠ ಭದ್ರತೆಯನ್ನಾದರೂ ಒದಗಿಸುವುದು ಅವಧವನ್ನು ಆಳುವವರ ಕರ್ತವ್ಯ” ಎಂದಿದ್ದಾನೆ. ಆ ಕಾಲದಲ್ಲಿ ಅವಧದಲ್ಲಿ (ಅಯೋಧ್ಯೆಯನ್ನೊಳಗೊಂಡ ಇಂದಿನ ಉತ್ತರಪ್ರದೇಶದ ಬಹುಭಾಗ) ತಾಲೂಕುದಾರರು ಪ್ರಬಲರಾಗಿದ್ದರು. ಅವಧವನ್ನು ಆಳುತ್ತಿದ್ದ ನವಾಬರು ಬ್ರಿಟಿಷರಲ್ಲಿ ಸೋತು ಮಾಡಿಕೊಂಡ ಒಪ್ಪಂದದಿಂದಾಗಿ ರಕ್ಷಣೆಗೆ ಸರಿಯಾದ ಸೈನ್ಯವಿಲ್ಲದೇ ದುರ್ಬಲರಾಗಿದ್ದರು. ಪ್ರತೀ ತಾಲೂಕುದಾರನ ಹತ್ತಿರವೂ ಸೈನ್ಯದ ತುಕಡಿ ಇತ್ತು. ಹಾಗಾಗಿ ಅವರು ಹೇಳಿದ್ದೇ ಕಾನೂನಾಗಿತ್ತು. ತಮ್ಮ ಆಡಳಿತದಲ್ಲಿ ಬರುವ ಪ್ರದೇಶದಲ್ಲಿ ರೈತರನ್ನು ನಾನಾ ವಿಧವಾಗಿ ಶೋಷಿಸುತ್ತಿದ್ದರು.
ಮೊದಲು ಈ ಕುರಿತು ಗಮನ ಹರಿಸಿದವನು 1848ರಲ್ಲಿ ಗವರ್ನರ್ ಜನರಲ್ ಆಗಿ ಬಂದಂತಹ ಲಾರ್ಡ್ ಡಾಲಹೌಸಿ. ಭೂಕಂದಾಯ ಬ್ರಿಟಿಷರಿಗೆ ಪ್ರಧಾನ ಆರ್ಥಿಕ ಮೂಲವಾಗಿತ್ತು. ಯಾರಿಂದ ಹೇಗೆ ಬರುತ್ತಿದೆ ಎನ್ನುವುದು ಮುಖ್ಯವಲ್ಲ. ತಾಲೂಕುದಾರರು ಕಂದಾಯವನ್ನು ವಸೂಲಿಮಾಡುವ ಮಧ್ಯವರ್ತಿಗಳಾಗಿದ್ದರು. ಕಂಪನಿ ಅವರಿಗೆ ಈ ಕಾರ್ಯಕ್ಕೆ ಅಗತ್ಯವಿರುವ ಸೈನ್ಯದ ತುಕಡಿಯನ್ನು ಹೊಂದಲು ಅನುಮತಿ ನೀಡಿತ್ತು. ತಾಲೂಕುದಾರರು ತಮ್ಮ ಸುಪರ್ದಿಯಲ್ಲಿರುವ ಜಮೀನಿನ ಒಡೆಯರಾಗಿರುವದರಿಂದ ಅವರು ರೈತರನ್ನು ನಾನಾ ವಿಧವಾಗಿ ಶೋಷಿಸುತ್ತಿದ್ದರು. ಡಾಲಹೌಸಿಯು ʼThomason Schoolʼನ ಆರ್ಥಿಕ ವಿಚಾರಗಳ ಪ್ರತಿಪಾದಕನಾಗಿದ್ದ. ಅದರ ಪ್ರಕಾರ ಆರ್ಥಿಕ ಚಟುವಟಿಕೆಗಳಲ್ಲಿ ವಿಪರೀತ ಮಧ್ಯವರ್ತಿಗಳ ಹಾವಳಿಯನ್ನು ತಪ್ಪಿಸಬೇಕೆನ್ನುವುದು. ಹಾಗಾಗಿ ಆತ ಕಂಪನಿಯ ಧೋರಣೆಯನ್ನು ವಿರೋಧಿಸದಿದ್ದರೂ, ವೈಯಕ್ತಿಕವಾಗಿ ಆತ ಜಮೀನುದಾರರ ಶೋಷಣೆಯನ್ನು ಇಷ್ಟಪಡುತ್ತಿರಲಿಲ್ಲ. ತಾಲೂಕುದಾರರೆಲ್ಲರೂ ತಮ್ಮ ತಮ್ಮ ಶಸ್ತ್ರಾಸ್ತವನ್ನು ಸರಕಾರಕ್ಕೊಪ್ಪಿಸುವಂತೆ ಮತ್ತು ಸೈನ್ಯವನ್ನು ಹೊಂದದಂತೆ ಒತ್ತಡ ಹೇರಿದ.
ಇದರಿಂದ ತಾಲೂಕುದಾರರು ಮತ್ತು ಜಮೀನುದಾರರಿಗೆ ತೊಂದರೆಯಾಗಿ ಅವರು ಒಳಗಿನೊಳಗಿಂದಲೇ ಬ್ರಿಟಿಷ್ ಸರ್ಕಾರದ ವಿರುದ್ಧ ಸಿಟ್ಟಿನಿಂದ ಕುದಿಯುತ್ತಿದ್ದರು. ತಾವು ಸಂಗ್ರಹಿಸಿದ ಕರವನ್ನು ಸರಕಾರಕ್ಕೆ ಸರಿಯಾಗಿ ಸಲ್ಲಿಸದೇ ಕುಳಿತರು. ಇದೇ ಕಾಲದಲ್ಲಿ ಮೊದಲ ಸ್ವಾತಂತ್ರ್ಯ ಹೋರಾಟ ಪ್ರಾರಂಭವಾಯಿತು. ಸ್ವಾತಂತ್ರ್ಯ ಹೋರಾಟದಲ್ಲಿ ಭಾರತೀಯರ ದೌರ್ಬಲ್ಯದ ಕಾರಣದಿಂದಲೇ ನಮಗೆ ಸೋಲಾಯಿತು. ಇದು ಬ್ರಿಟಿಷರಿಗೆ ಒಂದು ಪಾಠವಾಯಿತು. ಕಂಪನಿಯಿಂದ ನೇರವಾಗಿ ರಾಣಿಯ ಆಧಿಪತ್ಯಕ್ಕೆ ಈ ವಿಶಾಲದೇಶ ಒಳಪಟ್ಟಿತು. ಇಲ್ಲಿನ ಭೌಗೋಳಿಕ ವೈವಿಧ್ಯತೆಯನ್ನು ಗಮನಿಸಿದ ಅವರಿಗೆ ಈ ದೇಶವನ್ನು ಆಳಲು ಬಿಳಿಯರ ಸೈನ್ಯಬಲವನ್ನು ನಂಬಿಕೊಂಡು ಆಡಳಿತ ಮಾಡಲು ಸಾಧ್ಯವಿಲ್ಲವೆನ್ನುವುದು ನಿಚ್ಚಳವಾಯಿತು. ದೇಶಿಯ ರಾಜರು ಸ್ವಾತಂತ್ರ್ಯ ಹೋರಾಟಗಾರರ ಪರವಾಗಿದ್ದರು. ಹಾಗಾಗಿ ಅವರಿಗೆ ನಂಬುಗೆಗೆ ಸಿಕ್ಕವರು ಇಲ್ಲಿನ ಜಮೀನುದಾರರು ಮತ್ತು ತಾಲೂಕುದಾರರು.
ಬ್ರಿಟಿಷರ ನೇರ ಆಳ್ವಿಕೆ ಇಲ್ಲಿ ಭದ್ರವಾಗಿ ನೆಲೆಯೂರಬೇಕಾದರೆ ಜಮೀನುದಾರರಿಗೆ ಅಧಿಕಾರವನ್ನು ಕೊಟ್ಟರೆ ಅವರ ವಿಲಾಸಿಜೀವನದ ಅನುಕೂಲಕ್ಕಾಗಿ ಬ್ರಿಟಿಷ್ ಸರಕಾರಕ್ಕೆ ವಿಧೇಯರಾಗಿ ಇರುತ್ತಾರೆ ಎನ್ನುವುದನ್ನು 1857ರಲ್ಲಿ ಲಕ್ನೋದ ಕಮಿಷನರ್ ಆಗಿದ್ದ ಜೇಮ್ಸ್ ಒಟ್ರಿಮ್ ವರದಿ ಸಲ್ಲಿಸಿದ್ದ. ಹಾಗಾಗಿ ಜಮೀನುದಾರರು ಮತ್ತು ತಾಲೂಕುದಾರರಿಗೆ ಮೊದಲಿಗಿಂತ ಹೆಚ್ಚಿನ ಮಹತ್ವ ಬಂತು. ಈ ಜಮೀನುದಾರರು ರೈತರನ್ನು ಶೋಷಿಸುವ ರೀತಿ ಅತ್ಯಂತ ಕ್ರೂರವಾಗಿತ್ತು. ಉದಾಹರಣೆಗೆ ರೈತ ತಾನು ಉಳುವ ಭೂಮಿಗೆ ಗೇಣಿ ಮಾತ್ರವಲ್ಲ, ಜಮೀನುದಾರನ ವೈಯಕ್ತಿಕ ತೆವಲುಗಳಿಗೂ, ಅವರ ಹಬ್ಬ ಹರಿದಿನಗಳನ್ನು ಆಚರಿಸಲೂ, ಬ್ರಿಟಿಷ್ ಅಧಿಕಾರಿಗಳ ಮೋಜುಮಸ್ತಿಗಳಿಗೂ, ಕೊನೆಗೆ ಮೊದಲ ಮಹಾಯುದ್ಧದ ಖರ್ಚಿಗಾಗಿಯೂ ಅಪಾರವಾದ ಕರವನ್ನು ಗೇಣಿದಾರರ ಮೇಲೆ ಹೇರುತ್ತಿದ್ದರು. ಇಷ್ಟಾಗಿಯೂ ರೈತರ ಜಮೀನನ್ನು ಯಾವ ಕಾರಣವನ್ನೂ ನೀಡದೇ ಗೇಣಿಯನ್ನು ರದ್ದು ಮಾಡಿ ಜಮೀನುದಾರರು ತಾವು ವಶಪಡಿಸಿಕೊಂಡುಬಿಡುತ್ತಿದ್ದರು. ಗೇಣಿದಾರರಿಗೆ ತಮ್ಮ ಜಮೀನಿನಲ್ಲಿ ಯಾವ ಬೆಳೆಯನ್ನು ಬೆಳೆಯಬೇಕೆನ್ನುವ ಅಧಿಕಾರವೂ ಭೂಮಾಲಿಕರ ಕೈಯಲ್ಲಿತ್ತು. ದಿನಬೆಳಗಾದರೆ ರೈತ ಗೇಣಿಯ ಜೊತೆಗೆ ಒಡೆಯರು ಹೇಳುವ ಕರವನ್ನೂ ಕೊಡಬೇಕಾಗುತ್ತಿತ್ತು. ರೈತರಿಗೆ ಏನಾದರೂ ತೊಂದರೆಯಾದರೆ ಕೊರ್ಟಿಗೆ ಹೋಗಬಹುದೆನ್ನುವ ಕಾನೂನು ಇದ್ದರೂ ನ್ಯಾಯಮಂಡಳಿಯಲ್ಲಿ ಜಮೀನುದಾರರೇ ಇರುತ್ತಿದ್ದದ್ದರಿಂದ ಅಲ್ಲಿಯೂ ಅವರಿಗೆ ನ್ಯಾಯವೆನ್ನುವುದು ಮರೀಚಿಕೆಯಾಗಿತ್ತು. ಈ ತೀರ್ವೆಯ ಪದ್ಧತಿಯೂ ವಿಚಿತ್ರವಾಗಿತ್ತು. ಜಮೀನುದಾರನಿಗೆ ಕುದುರೆ ಬೇಕೆನಿಸಿದರೆ ಆತ ರೈತರ ಮೇಲೆ ಕುದುರೆ ಕರ (ಗೋರವಾನ್) ಹೇರುತ್ತಿದ್ದ. ಅದೇ ರೀತಿ ಆನೆಗಾದರೆ ʼಹಾಥಿಯಾನಾʼ, ಕಾರು ಖರೀದಿಗೆ ʼಮೋಟಾರವಾನ್ʼ ಹೀಗೆ ವಿಚಿತ್ರಬಗೆಯಲ್ಲಿ ವಾರ್ಷಿಕವಾಗಿ ಕೊಡಬೇಕಾದ ಕಂದಾಯವಲ್ಲದೇ ಇತರ ಕಂದಾಯಗಳನ್ನು ಕೊಡಬೇಕಾಗಿತ್ತು. ಒಮ್ಮೆಯಂತೂ ಓರ್ವ ತಾಲೂಕುದಾರನ ಮಗನಿಗೆ ಗ್ರಾಮೋಫೋನ್ ತೆಗೆದುಕೊಳ್ಳಬೇಕೆನ್ನುವ ಮನಸ್ಸಾಯಿತು. ಆ ಕಾರಣಕ್ಕಾಗಿ ಆತ ಗ್ರಾಮೋಫೋನ್ ಕಂದಾಯವನ್ನು ತನ್ನ ಹಳ್ಳಿಗಳಲ್ಲಿ ಹೇರಿದ! (Harsh Dev Malaviya- Land Reforms in India, 1954 p.104).
ಅವಧ್ ಪ್ರದೇಶದಲ್ಲಿ ನಜರಾನಾ ಎನ್ನುವ ವಿಶಿಷ್ಟ ಪದ್ಧತಿಯ ತೆರಿಗೆಯನ್ನು ರೈತರು ಜಮೀನುದಾರರಿಗೆ ಕೊಡಬೇಕಾಗಿತ್ತು. ಈ ನಜರಾನಾ ಎಷ್ಟೊಂದು ಅಮಾನವೀಯವಾಗಿತ್ತೆಂದರೆ ಅದಕ್ಕೆ ಹಣ ಹೊಂದಿಸಲು ರೈತರು ʼಕನ್ಯಾವಿಕ್ರಯʼ ಮೂಲಕ ತಮ್ಮ ಮನೆಯ ಹೆಣ್ಣುಮಕ್ಕಳನ್ನೇ ಮಾರಿ ಹಣ ಹೊಂದಿಸಬೇಕಾಗಿತ್ತು. ಇದು 1920ರ ತನಕವೂ ಇತ್ತು. V. N. ಮೆಹ್ತಾ ಎನ್ನುವ ಅವಧದ ಜಿಲ್ಲಾಧಿಕಾರಿ ʼಕನ್ಯಾವಿಕ್ರಯʼ ಘಟನೆಯೊಂದನ್ನು ಹೀಗೆ ಉಲ್ಲೇಖಿಸಿದ್ದಾನೆ. “ಗಯಾದಿನ್ ದುಬೆ ಎನ್ನುವ ಕೃಶಕಾಯದ ಓರ್ವ ಬ್ರಾಹ್ಮಣ ತನ್ನ ಹೇಳಿಕೆಯನ್ನು ದಾಖಲಿಸುವಾಗ ಆತನ ದುಃಖದ ಕಟ್ಟೆಯೊಡೆಯಿತು. ಎರಡು ವರ್ಷಗಳ ಹಿಂದೆ ಲೋಭಿ ಜಮೀನುದಾರ ಕಂದಾಯಬಾಕಿಗಾಗಿ ಈ ಬಡಪಾಯಿಯ ವಿರುದ್ಧ ಕಟ್ಳೆಯಲ್ಲಿ ಗೆದ್ದಿದ್ದ. ಆ ಹಣವನ್ನು ಪಾವತಿ ಮಾಡಲು ಆತ ತನ್ನ ರಾಸುಗಳನ್ನು ಮಾರಬೇಕಾಯಿತು. ಆದರೂ ಸಂತುಷ್ಟನಾಗದ ಆ ಲೋಭಿ ಐದು ನೂರು ರೂಪಾಯಿ ಹೆಚ್ಚಿಗೆ ಕೊಡಬೇಕೆಂದೂ, ಇಲ್ಲದಿದ್ದರೆ ಅವನ ಜಮೀನನ್ನು ಕಿತ್ತುಕೊಳ್ಳುವೆನೆಂದು ಬೆದರಿಕೆ ಹಾಕಿದ. ಬರಿಗೈದಾಸನಾಗಿದ್ದ ಆ ಬಡಪಾಯಿ ತನ್ನ ಹತ್ತು ವರ್ಷದ ಮಗಳನ್ನೇ ನಲುವತ್ತು ವರ್ಷದ ಗೃಹಸ್ಥನಿಗೆ ಮಾರಿ ಹಣ ಹೊಂದಿಸಬೇಕಾಯಿತು”. ಇಂತಹ ಅನೇಕ ಶೋಷಣೆಗಳು ರೈತರ ಮೇಲೆ ನಿರಂತರವಾಗಿ ನಡೆದರೂ ತಮ್ಮ ಆಡಳಿತ ಭದ್ರವಾಗಿರುವ ಕಾರಣ ಬ್ರಿಟಿಷರು ಇದಕ್ಕೆ ಗಮನ ನೀಡುತ್ತಿರಲಿಲ್ಲ. ಜಮೀನುದಾರರ ಶೋಷಣೆ ಇಷ್ಟಕ್ಕೇ ನಿಲ್ಲುತ್ತಿರಲಿಲ್ಲ; ರೈತರು ಗೇಣಿಯ ಜೊತೆಗೆ ಒಂದಿಷ್ಟು ದಿನ ಸಂಬಳರಹಿತವಾಗಿ ಜಮೀನುದಾರ ಹೊಲಗಳಲ್ಲಿ ದುಡಿಯಲು ಹೋಗಬೇಕಾಗಿತ್ತು. ಅದನ್ನು ಬೇಕಾರ್ (ಸಂಬಳ ರಹಿತ ಕೆಲಸ) ಎನ್ನುತ್ತಿದ್ದರು. ಯಾವುದೇ ಗೇಣಿಯ ಪಾವತಿಗೂ ಭೂಮಾಲಿಕರು ರಸೀದಿಯನ್ನು ಕೊಡುತ್ತಿರಲಿಲ್ಲ. ಮನಸ್ಸಿಗೆ ಬಂದಾಗ ಗೇಣಿದಾರನನ್ನು ಒಕ್ಕಲೆಬ್ಬಿಸಿ ತಮಗೆ ಬೇಕಾದವರಿಗೆ ಕೊಡುತ್ತಿದ್ದರು.
ಮೊದಲನೆಯ ಮಹಾಯುದ್ಧದಲ್ಲಿ ಇದು ಮತ್ತಿಷ್ಟು ತೀವ್ರ ಸ್ವರೂಪವನ್ನು ಪಡೆಯಿತು. ಯುದ್ಧಕ್ಕೆ ಅಗತ್ಯವಿರುವ ಕರವನ್ನು ಬ್ರಿಟಿಷರು ತಾಲೂಕುದಾರ ಮೇಲೆ ಹೇರಿದರು. ಅವರೂ ಸಹ ಉತ್ಸಾಹದಿಂದ ಕೇಳಿದಷ್ಟು ಕೊಟ್ಟರು. ಆದರೆ ಇದ್ಯಾವುದೂ ಅವರ ಕಿಸೆಯಿಂದ ಕೊಟ್ಟಿದ್ದಾಗಿರಲಿಲ್ಲ. ಮತ್ತೆ ʼಲಡಾಯಿಚಂದಾʼ ಎನ್ನುವ ಹೆಸರಿನಲ್ಲಿ ಗೇಣಿದಾರರ ತಲೆಯ ಮೇಲೆಯೇ ಬಿತ್ತು. ಬ್ರಿಟಿಷರಿಗೆ ಯುದ್ಧಕ್ಕಾಗಿ ಸೈನಿಕರು ಅಗ್ಗದ ದರದಲ್ಲಿ ಬೇಕಾಗಿತ್ತು. ಅದಕ್ಕಾಗಿ ಯುದ್ಧದಲ್ಲಿ ಭಾಗವಹಿಸುವಂತೆ ರೈತರ ಮೇಲೆ ಒತ್ತಾಯ ಹೇರಲಾಯಿತು. ಯುದ್ಧದಲ್ಲಿ ಭಾಗವಹಿಸುವ ರೈತರ ಬೇಬಾಕಿಯಾದ ಕರವನ್ನು ಮನ್ನಾ ಮಾಡಲಾಗುವುದೆಂದು ಆಮಿಷ ಒಡ್ಡಿ ಜನರನ್ನು ಸೈನ್ಯಕ್ಕೆ ಸೇರಿಸಿಕೊಳ್ಳಲಾಯಿತು. ಈ ಸಂದರ್ಭದಲ್ಲಿ ಕಾಂಗ್ರೆಸ್ಸು ಮತ್ತು ಮಹಾತ್ಮಾ ಗಾಂಧಿ ಬ್ರಿಟಿಷರಿಗೆ ಬೆಂಬಲ ನೀಡಿದ್ದರು. ಹಾಗಾಗಿ ಇವರನ್ನು ಕೇಳುವವರೇ ಇರಲಿಲ್ಲ.
ಒಂದು ಕಡೆ ಯುದ್ಧದ ಕಾರಣದಿಂದ ಬೆಲೆಯೇರಿಕೆ, ಇನ್ನೊಂದು ಕಡೆ ರೋಗರುಜಿನ ಮತ್ತು ಬರಗಳಿಂದ ಪ್ರಾಣಹಾನಿ ಇವೆರಡರಿಂದಾಗಿ ಜನ ಕಂಗೆಟ್ಟರು. ಗಮನಿಸಬೇಕಾದ ಸಂಗತಿಯೆಂದರೆ ಮರಣದ ಪ್ರಮಾಣ ಜನನದ ಪ್ರಮಾಣಕ್ಕಿಂತಲೂ ಜಾಸ್ತಿಯಾಗಿತ್ತು. ರಾಯಬರೆಲಿ ಜಿಲ್ಲೆಯ 1926 ಗೆಜೆಟಿಯರ್ ಪ್ರಕಾರ 1918 ಜನನದ ಪ್ರಮಾಣ 27.99 ಇದ್ದರೆ ಮರಣದ ಪ್ರಮಾಣ 41.99 ರಷ್ಟಾಗಿತ್ತು. Census of India Oudh and Agra ಅಂಕಿ ಅಂಶಗಳ ಪ್ರಕಾರ ರಾಯಬರೇಲಿಯಲ್ಲೊಂದರಲ್ಲಿಯೇ 1972ರಲ್ಲಿ ಒಟ್ಟೂ 9,89,008 ಇದ್ದ ಜನಸಂಖ್ಯೆ 1921ರಲ್ಲಿ 9,36,408ಕ್ಕೆ ಇಳಿಯಿತು. ಅಂದರೆ 52,605ರಷ್ಟು ಕಡಿಮೆ. ಅದರಲ್ಲಿಯೂ 1911ರಿಂದ 1921ರ ಅವಧಿಯಲ್ಲಿ ಈ ಇಳಿಕೆಯ ಪ್ರಮಾಣ 80,461ರಷ್ಟು. ಇಂದಿನ ಉತ್ತರ ಪ್ರದೇಶ ಮತ್ತು ಉತ್ತರಾಖಂಡದ ಬಹುತೇಕ ಭಾಗವನ್ನು ಆಗ United provinces ಎಂದು ಕರೆಯುತ್ತಿದ್ದರು. ಇಲ್ಲಿನ ಜನಸಂಖ್ಯೆಯ ಇಳಿತ 1911ರಿಂದ 1921ರ ಅವಧಿಯಲ್ಲಿ 14,86,696 !! ಅತೀಹೆಚ್ಚು ಜನಸಂಖ್ಯೆಯ ಇಳಿಕೆ ಅವಧ ಜಿಲ್ಲೆಯಲ್ಲಿ 3,91,362, ಪ್ರತಾಪಘರ ಜಿಲ್ಲೆಯಲ್ಲಿ ಇಳಿಕೆ 44,843. ಈ ಕುರಿತು ಯಾರೂ ತಲೆಕೆಡಿಸಿಕೊಳ್ಳಲೇ ಇಲ್ಲ.
ಆದರೆ ಅವಧ ಮತ್ತು ಭಾರತಾದ್ಯಂತ ಜ್ವಲಂತಸಮಸ್ಯೆಯಾಗಿರುವ ಈ ವಿಷಯ ಮೊದಲು ಗಮನ ಸೆಳೆದಿದ್ದು Home Rule League ಚಳವಳಿಯ ನಾಯಕಿ ಆನಿಬೆಸೆಂಟ್ ಅವರದು. ಆಗ ಆನ್ನಿಬೆಸೆಂಟ್ ಮತ್ತು ಬಾಲಗಂಗಾಧರ ಟಿಳಕರು ಜೊತೆಯಾಗಿ ಸ್ಥಾಪಿಸಿದ Home Rule Leauge ಕಾಂಗ್ರೇಸ್ಸಿನಲ್ಲಿಯೇ ಇತ್ತು. 1917ರಲ್ಲಿ ಭಾರತೀಯ ಕಾಂಗ್ರೆಸ್ಸಿನ ಅಧ್ಯಕ್ಷರು ಆನ್ನಿಬೆಸೆಂಟರಾಗಿದ್ದರು. ಅವರು ಮತ್ತು ಅವರ ನಂತರ ಕಾಂಗ್ರೆಸ್ಸಿನ ಅಧ್ಯಕ್ಷರಾಗಿದ್ದ ಪಂ. ಮದನ ಮೋಹನ ಮಾಳವೀಯ ಅವರಿಗೆ ರೈತರನ್ನು ಶತಮಾನದಿಂದ ಬಾಧಿಸುತ್ತಿರುವ ಜ್ವಲಂತ ಸಮಸ್ಯೆಗಳ ಅರಿವಾಯಿತು. 1885ರಲ್ಲಿ A. O ಹ್ಯೂಮ್ ಎನ್ನುವ ಬ್ರಿಟಿಷನಿಂದ ಸ್ಥಾಪಿಸಲ್ಪಟ್ಟ ಕಾಂಗ್ರೆಸ್ 1985ರಲ್ಲಿ ಮಹಾತ್ಮಾ ಗಾಂಧೀಜಿಯ ಆಗಮನವಾಗುವವರೆಗೂ ಜನಸಾಮಾನ್ಯರ ಪಕ್ಷವೆಂದು ಗುರುತಿಸಿಕೊಂಡಿರಲಿಲ್ಲ. ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿರುವ ಕಾಂಗ್ರೆಸ್‌ನಲ್ಲಿ ಮಂದಗಾಮಿಗಳು ಮತ್ತು ತೀವ್ರಗಾಮಿಗಳ ನಡುವ ಅಂತರ್ಯುದ್ಧ ನಡೆಯುತ್ತಿತ್ತು. ಈ ಪಕ್ಷ ಮೇಲ್ವರ್ಗದ ಮತ್ತು ಮದ್ಯಮ ವರ್ಗದವರ ಮತ್ತು ನಗರ ಕೇಂದ್ರಿತ ಪಕ್ಷವಾಗಿತ್ತು. 1920ರ ವರೆಗೆ ಕಾಂಗ್ರೆಸಿಗೆ ಉತ್ತರ ಪ್ರದೇಶದ ರೈತರ ಸಮಸ್ಯೆ ಒಂದು ಪ್ರಾದೇಶಿಕ ಸಮಸ್ಯೆಯಾಗಿ ಮಾತ್ರವೇ ಕಂಡಿತು. ಸಮಗ್ರ ದೇಶದ ಚಿಂತನೆಯಲ್ಲಿ ಈ ಕಡೆ ಗಮನವನ್ನು ಹರಿಸಲೇ ಇಲ್ಲ.
ಇದನ್ನೂ ಓದಿ: ಧವಳ ಧಾರಿಣಿ ಅಂಕಣ: ಗುರುಶಿಷ್ಯ ಪರಂಪರೆ: ತತ್ತ್ವದರ್ಶನದ ಹಾದಿಯನ್ನು ತೋರಿಸುವ ಜ್ಞಾನದ ಬೆಳಕು
ಇದನ್ನು ಪಂ. ಜವಾಹರಲಾಲ್ ನೆಹರು ಒಪ್ಪಿಕೊಳ್ಳುತ್ತಾ “From an all India point of view it (the Oudh Peasant’s movement) was a local affair and very little attention was paid to it” ಎಂದಿದ್ದಾರೆ. ರೈತರನ್ನು ಬಹುವಾಗಿ ಕಾಡುತ್ತಿರುವ ನಝರಾನ ಕರದ ಭೀಕರತೆ ಗಮನ ಸೆಳೆದಿದ್ದು ಪಂ. ಮದನ ಮೋಹನ ಮಾಳವೀಯರನ್ನು. ಕಾಂಗ್ರೆಸಿನ ಎರಡು ಗುಂಪುಗಳಾದ ಗೋಪಾಲಕೃಷ್ಣ ಗೋಖಲೆ ಮತ್ತು ಟಿಳಕರ ನಡುವಿನ ಗುಂಪುಗಾರಿಕೆಯಲ್ಲಿ ಇವರು ತಟಸ್ಥ ನಿಲುವನ್ನು ಹೊಂದಿದ್ದರು ಮತ್ತು ಅವೆರಡೂ ಗುಂಪುಗಳ ನಡುವೆ ಸಮನ್ವಯಕಾರರಾಗಿ ಕೆಲಸ ಮಾಡುತ್ತಿದ್ದರು. ಸ್ವಾತಂತ್ರ್ಯವೆಂದರೆ ಅದು ಆರ್ಥಿಕ ಸ್ವಾತಂತ್ರ್ಯ ಮತ್ತು ವ್ಯಕ್ತಿತ್ವದ ಘನತೆಯನ್ನು ಎತ್ತಿಹಿಡಿಯುವುದು ಎನ್ನುವುದು ಅವರ ನಿಲುವಾಗಿತ್ತು. ಹಾಗಾಗಿ ಅವರು ಗೇಣಿದಾರರಿಗಾಗುತ್ತಿರುವ ಶೋಷಣೆಯ ವಿರುದ್ಧ ಹೋರಾಟ ಮಾಡುವ ಕಾರಣಕ್ಕಾಗಿ ಆನ್ನಿಬೆಸೆಂಟರ ಲೀಗಿನೊಟ್ಟಿಗೆ ಸಮಾಲೋಚಿಸಿ ರೈತರನ್ನು ಸಂಘಟಿಸುವ ಕುರಿತು ಕ್ರಿಯಾಯೋಜನೆಯ ಕುರಿತು ಆಲೋಚಿಸಿದರು. ಅವರ ಸೂಚನೆಯಂತೆ ಗೌರಿ ಶಂಕರ ಮಿಶ್ರಾ ಮತ್ತು ಇಂದ್ರನಾರಾಯಣ ದ್ವಿವೇದಿ ಅವರು 1917ರಲ್ಲಿ ಅಲಹಾಬಾದನಲ್ಲಿ ಮೊದಲ ಬಾರಿಗೆ ರೈತರನ್ನು ಒಳಗೊಂಡ ಯುಪಿ ಕಿಸಾನ ಸಭಾವನ್ನು ಹುಟ್ಟುಹಾಕಿದರು. ಈ ಕಾರ್ಯಕ್ಕೆ Home Rule League ರೂ. 4000 ನೆರವು ನೀಡಿತು. ಯುಪಿ ಕಿಸಾನ್ ಸಭಾದ ಉದ್ದೇಶ ಹೋಮ್ ರೂಲ್ ಲೀಗಿನ ಚಳವಳಿಗೆ ಸಂಬಂಧಿಸಿದಂತೆ ಕೃಷಿಕರ ಸಹಕಾರವನ್ನು ಪಡೆಯುವುದಾಗಿತ್ತು. 1918ರಲ್ಲಿ ನಡೆದ ದೆಹಲಿಯ ಕಾಂಗ್ರೆಸಿನ ಅಧಿವೇಶನಕ್ಕೆ ರೈತರನ್ನು ಮಾಳವೀಯರು ಆಹ್ವಾನಿಸಿದರು. ಅವರ ಪ್ರತಿನಿಧಿ ಶುಲ್ಕವನ್ನು ಮನ್ನಾ ಮಾಡಿ ಅವರಿಗೆ ಉಳಿದುಕೊಳ್ಳುವ ಮತ್ತು ಆಹಾರದ ವ್ಯವಸ್ಥೆ ಮಾಡಿದರು.
ಈ ಮೂಲಕ ಕಾಂಗ್ರೆಸ್ಸು ತನ್ನ ಮೇಲಿರುವ ನಗರ ಕೇಂದ್ರಿತ ಪಕ್ಷವೆನ್ನುವ ಅಪವಾದದಿಂದ ತಪ್ಪಿಸಿಕೊಂಡು ಎಲ್ಲರನ್ನು ಒಳಗೊಂಡ ಪಕ್ಷವೆಂದು ಗುರುತಿಸಿಕೊಳ್ಳಬಹುದಿತ್ತು. ಮಹಾತ್ಮಾ ಗಾಂಧೀಜಿಯವರೂ ರೈತರನ್ನು ಒಳಗೊಳ್ಳುವ ಕುರಿತು ಒತ್ತಾಸೆ ಮಾಡಿದರು. ಇಷ್ಟೆಲ್ಲಾ ಆದರೂ, ರೈತರ ದಯನೀಯ ಸ್ಥಿತಿಗೆ ಪರಿಹಾರವೇನೂ ಸಿಕ್ಕಿರಲಿಲ್ಲ. ಆದರೆ ಮಾರನೆಯ ವರ್ಷ ಮೋತಿಲಾಲ ನೆಹರೂ ಅಧ್ಯಕ್ಷರಾಗಿದ್ದ 1919ರ ಅಮೃತಸರ ಅಧಿವೇಶನದಲ್ಲಿ ಸುಮಾರು 1800ರಷ್ಟಿದ್ದ ರೈತ ಪ್ರತಿನಿಧಿಗಳಿಗೆ ಮೊದಲ ವರ್ಷ ನೀಡಿದ ಯಾವ ಸೌಲಭ್ಯವನ್ನೂ ಕೊಡಲಿಲ್ಲ. ಅವರಿಗೆ ಕುಳಿತುಕೊಳ್ಳಲು ಆಸನವೂ ಇಲ್ಲದೇ ಒದ್ದಾಡಬೇಕಾಯಿತು. ಹಾಗಾಗಿ ರೈತ ಪ್ರತಿನಿಧಿಗಳು ಗಲಾಟೆ ಮಾಡಿದಾಗ ಅವರನ್ನು ಅವಮಾನಿಸಲಾಯಿತು. ಈ ಅಶಿಸ್ತನ್ನು ಮೋತಿಲಾಲ್ ನೆಹರೂ ಅವರು ಬಲವಾಗಿ ಖಂಡಿಸಿದರು. ನಾಗಪುರ ಅಧಿವೇಶನದಲ್ಲಿಯೂ ಹೀಗೇ ಆಗಿ ರೈತರ ಮತ್ತು ಕಾಂಗ್ರೇಸಿನ ನಡುವೆ ಸಮನ್ವಯ ಅಷ್ಟಾಗಿ ಆಗಲೇ ಇಲ್ಲ.
ಮುಂದಿನ ಭಾಗದಲ್ಲಿ ಯುಪಿ ರೈತ ಸಂಘಟನೆಯ ಏಳುಬೀಳುಗಳನ್ನು ಮತ್ತು ಸ್ವಾತಂತ್ರ್ಯ ಹೋರಾಟದಲ್ಲಿನ ಅದರ ಪಾತ್ರಗಳ ಕುರಿತು ವಿವೇಚಿಸೋಣ.
ಇದನ್ನೂ ಓದಿ: ಧವಳ ಧಾರಿಣಿ ಅಂಕಣ: ʼನೇತಿ ನೇತಿ’- ವಾಸ್ತವ ಮತ್ತು ತೋರಿಕೆಯಲ್ಲಿ ಸತ್ಯದ ಹುಡುಕಾಟ